‘ಬಿಟ್ಟುಕೊಡುವೆʼ ಎನ್ನುವವರು ʼನನಗೂ ಬೇಕುʼ ಎನ್ನುವಂತೆ ಮಾಡಿದ್ದು ರಾಜಕಾರಣಿಗಳು : ವಿಸ್ತಾರ ಅಂಕಣ

“ನಾನು ದೇಶಕ್ಕೆ ಈ ವಿಶ್ವಾಸ ನೀಡಲು ಬಯಸುತ್ತೇನೆ, ಮೂರನೇ ಅವಧಿಯಲ್ಲಿ ವಿಶ್ವದ ಪ್ರಥಮ ಮೂರು ಆರ್ಥಿಕತೆಯಲ್ಲಿ ಭಾರತ ಇರಲಿದೆ. ಹೆಮ್ಮೆಯಿಂದ ನಾವು ಮೂರರಲ್ಲಿ ಸ್ಥಾನ ಪಡೆಯುತ್ತೇವೆ ಎನ್ನುವುದು ನಾನು ನೀಡುವ ಗ್ಯಾರಂಟಿ. 2024ರ ನಂತರ ಅಂದರೆ ನಮ್ಮ ಮೂರನೇ ಅವಧಿಯಲ್ಲಿ ದೇಶದ ವಿಕಾಸ ಯಾತ್ರೆ ಮತ್ತಷ್ಟು ವೇಗದಲ್ಲಿ ಸಾಗಲಿದೆ”.
ನವದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾಗಿರುವ, ದೇಶದ ಅತಿ ದೊಡ್ಡ ವಸ್ತು ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ʼಭಾರತ ಮಂಟಪಂʼ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಜುಲೈ 26ರಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಪ್ರಮುಖ ಅಂಶ ಇದು.
ಇದು ಒಂದು ಚುನಾವಣೆ ಭಾಷಣದ ರೀತಿ ಕಾಣುತ್ತದೆ ಅಲ್ಲವೇ? ಇನ್ನೇನು 2024ರಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ನಿಸ್ಸಂದೇಹವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಬಿಜೆಪಿ ಪಕ್ಷದ ಹಾಗೂ ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ. ಮೂರನೇ ಬಾರಿಗೆ ಮತ್ತೆ ತಮ್ಮದೇ ಸರ್ಕಾರ ರಚಿಸುವುದಾಗಿ ಪ್ರಧಾನಿ ಮೋದಿ ಅಷ್ಟೇ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ರಾಜಕೀಯ ಪಕ್ಷವಾಗಿ ಅವರು ಹಾಗೆಯೇ ಹೇಳಬೇಕು. ಆದರೆ ಚುನಾವಣೆಯಲ್ಲಿ ಜನರು ಫಲಿತಾಂಶವನ್ನು ನಿರ್ಧಾರ ಮಾಡುತ್ತಾರೆ. ಮೋದಿಯವರ ಮಾತಿನಲ್ಲಿ ರಾಜಕೀಯವನ್ನು ಮೀರಿದ ಅಂಶವಿದೆ.
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರ ಮೇಲೆ ದೇಶದ ಜನರಿಗೆ ಎಷ್ಟೊಂದು ನಿರೀಕ್ಷೆಗಳಿದ್ದವು. ಹಿಂದಿನ ಯುಪಿಎ ಸರ್ಕಾರದ ಆಡಳಿತದಲ್ಲಿ ಸಾಲು ಸಾಲು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದವು ಎಂದು ಯಶಸ್ವಿಯಾಗಿ ಪ್ರಚಾರ ನಡೆಸಿತ್ತು ಬಿಜೆಪಿ. ಸರ್ಕಾರದ ಅನೇಕ ಅನುಮಾನಾಸ್ಪದ ನಡೆಗಳಿಂದಾಗಿ ಬಿಜೆಪಿ ಹೇಳಿದ ಬಹುತೇಕ ಅಂಶಗಳು ಜನರಿಗೆ ಮನವರಿಕೆಯಾದವು. ಅದಾಗಲೆ ಗುಜರಾತ್ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ಹರಿಕಾರ ಎಂದು ಹೆಸರು ಪಡೆದಿದ್ದ ನರೇಂದ್ರ ಮೋದಿಯವರನ್ನು ಮುಂದಿನ ನಾಯಕನನ್ನಾಗಿ ಸ್ವೀಕರಿಸಲು ಜನ ಬಯಸಿದ್ದರು.
ಮೋದಿ ಬಂದರೆ ಭ್ರಷ್ಟಾಚಾರ ತೊಲಗುತ್ತದೆ, ಮೋದಿ ಬಂದರೆ ದೇಶ ಅಭಿವೃದ್ಧಿ ಆಗುತ್ತದೆ, ಮೋದಿ ಬಂದರೆ ಶತ್ರು ರಾಷ್ಟ್ರಗಳಿಗೆ ಮಣ್ಣು ಮುಕ್ಕಿಸುತ್ತಾರೆ, ಮೋದಿ ಬಂದರೆ ಆರ್ಥಿಕತೆ ಚೇತರಿಕೆ ಕಾಣುತ್ತದೆ, ಮೋದಿ ಬಂದರೆ ಮಹಿಳೆಯರಿಗೆ ಸುರಕ್ಷತೆ ಸಿಗುತ್ತದೆ… ಹೀಗೆ ಸಾಲು ಸಾಲು ನಿರೀಕ್ಷೆಗಳಿದ್ದವು. ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ, ತಮ್ಮನ್ನು ತಾವು ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕ ಎಂದು ಮೋದಿ ಕರೆದುಕೊಂಡರು. ಸ್ವತಃ ತಾವೇ ರಸ್ತೆಯಲ್ಲಿ ನಿಂತು ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ ಆಂದೋಲನಕ್ಕೆ ಚಾಲನೆ ನೀಡಿದರು. ಸರ್ಕಾರ ರಚನೆಯಾಗಿ ಸರಿಸುಮಾರು ಒಂದು ವರ್ಷದ ನಂತರ, ಇತ್ತೀಚಿನ ದಶಕಗಳಲ್ಲಿ ಭಾರತದ ಕಂಡು ಕೇಳರಿಯದ ಯೋಜನೆಯೊಂದನ್ನು ಮೋದಿ ಘೋಷಿಸಿದರು. ಅದು ಹತ್ತಾರು ಸಾವಿರ ಕೋಟಿ ರೂ.ಹಣವನ್ನು ಜನರಿಗೆ ನೀಡುವ, ಟೆಂಡರ್ ಕರೆಯುವ ಯೋಜನೆಯಲ್ಲ. ಬದಲಿಗೆ ಜನರೇ ಸರ್ಕಾರಕ್ಕೆ ಹಣ ನೀಡುವ ಯೋಜನೆ.
ಎಲ್ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡುವುದು ಈಗ ಅತ್ಯಂತ ಸಾಮಾನ್ಯ ಸಂಗತಿಯಂತೆ ಕಾಣುತ್ತದೆ. ಆದರೆ ದೇಶದ ಎಲ್ಲ ಮನೆಗಳಿಗೂ, ಮಹಿಳೆಯರಿಗೂ ಈ ʼಭಾಗ್ಯʼ ಸಿಕ್ಕಿರಲಿಲ್ಲ. ನಗರ ಪ್ರದೇಶದ ಶೇ.35 ಮನೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಶೇ.92 ಮನೆಗಳಲ್ಲಿ ಎಲ್ಪಿಜಿ ಸಂಪರ್ಕ ಇರಲಿಲ್ಲ. ಎಲ್ಪಿಜಿ ಸಿಲಿಂಡರ್ ಒಂದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾಗರಿಕರು ಭರಿಸುವುದಿಲ್ಲ. ಸರ್ಕಾರವು ಪ್ರತಿ ಸಿಲಿಂಡರ್ ದರದಲ್ಲಿ ತನ್ನ ಪಾಲನ್ನು ಕಳೆದು ಉಳಿದದ್ದನ್ನು ಮಾತ್ರ ಜನರಿಂದ ಪಡೆಯುತ್ತದೆ. ಇದನ್ನು ಎಲ್ಪಿಜಿ ಸಬ್ಸಿಡಿ ಎನ್ನಲಾಗುತ್ತದೆ. ಈಗಾಗಲೆ ಎಲ್ಪಿಜಿ ಹೊಂದಿದ್ದವರಿಗೆ ಮೋದಿ ಹೊಸ ಯೋಜನೆ ಘೋಷಣೆ ಮಾಡಿದರು. ಯಾರು ಆರ್ಥಿಕವಾಗಿ ಸಬಲರಾಗಿದ್ದಾರೆಯೋ, ಯಾರಿಗೆ ಸರ್ಕಾರದ ಸಬ್ಸಿಡಿ ಹಣದ ಅವಶ್ಯಕತೆ ಇಲ್ಲವೊ ಅವರು ಸಬ್ಸಿಡಿಯನ್ನು ‘ಬಿಟ್ಟುಕೊಡುವʼ (Give it Up) ಅವಕಾಶ ನೀಡಿದರು. ಸರ್ಕಾರ ಒಂದು ಬಜೆಟ್ ಘೋಷಣೆ ಮಾಡಿದರೆ ಅದರಲ್ಲಿ ನನಗೇನು ಸಿಗುತ್ತದೆ ಎಂದು ನೋಡುವ ಅಭ್ಯಾಸವನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೆಳೆಸಿಕೊಂಡಿದ್ದೇವೆ. ವೈಯಕ್ತಿಕವಾಗಿ ನನಗೆ ಏನಾದರೂ ಲಾಭವಾದರೆ ಮಾತ್ರ ಅದು ಒಳ್ಳೆಯ ಬಜೆಟ್. ಒಟ್ಟಾರೆ ಸಮಾಜಕ್ಕೆ, ಬಡವರಿಗೆ, ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದರೆ ಅದು ನೀರಸ ಬಜೆಟ್ ಎನ್ನುವ ಅಭ್ಯಾಸ ಆಗಿಹೋಗಿದೆ. ಹಾಗಾಗಿ ಮೋದಿಯವರು ಘೋಷಿಸಿದ ಈ ಯೋಜನೆಗೆ ಯಾರು ಸ್ಪಂದಿಸುತ್ತಾರೆ ಎಂಬ ಅನುಮಾನ ಇತ್ತು.
ದೇಶದಲ್ಲಿ ಅನೇಕ ಶ್ರೀಮಂತರ ಮನೆಗಳಲ್ಲಿ ವರ್ಷಕ್ಕೆ 12 ಸಿಲಿಂಡರ್ ಸಾಲದು ಎಂದು ಮನೆಮಂದಿಯ ಹೆಸರಿನಲ್ಲಿ ಬೇರೆ ಬೇರೆ ಸಂಪರ್ಕ ಪಡೆಯುತ್ತಿದ್ದ ಅನೇಕ ಸುದ್ದಿಗಳು ಹರಿದಾಡಿದ್ದವು. ತಮ್ಮ ಹೋಟೆಲ್ ಉದ್ಯಮಕ್ಕೆ ಗೃಹೋಪಯೋಗಿ ಸಿಲಿಂಡರನ್ನೇ ಬಳಸುವವರ ಸಂಖ್ಯೆ ಲೆಕ್ಕವಿರಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಆಗುತ್ತಿದೆ, ನಿಜವಾದ ಸಬ್ಸಿಡಿ ಯಾರಿಗೆ ಸಿಗಬೇಕೊ ಅವರ ಜತೆಗೆ ಅನರ್ಹರಿಗೂ ಸಿಗುತ್ತಿದೆ ಎಂದು ಸರ್ಕಾರಕ್ಕೆ ಗೊತ್ತಿತ್ತು. ಇದಕ್ಕಾಗಿ ವರ್ಷಕ್ಕೆ ಸಿಲಿಂಡರ್ ಲೆಕ್ಕವನ್ನು 6ಕ್ಕೆ ಯುಪಿಎ ಸರ್ಕಾರ ಇಳಿಸಿತ್ತು. ಆದರೆ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ್ಧರಿಂದ ಈ ಸಂಖ್ಯೆಯನ್ನು 9ಕ್ಕೆ ಏರಿಸಿತು. 2013ರ ವೇಳೆಗೆ ಕೆಲವು ರಾಜ್ಯಗಳಲ್ಲಿ ಕಾಂಗ್ರಸ್ ಪಕ್ಷ ಹೀನಾಯ ಸೋಲು ಕಂಡಿತು. ಈ ಸೋಲಿಗೆ ಮುಖ್ಯವಾಗಿ ಬೆಲೆ ಏರಿಕೆಯೇ ಕಾರಣ. ಎಲ್ಪಿಜಿ ಸಿಲಿಂಡರ್ ಮಿತಿ ಹೇರಿದ್ದಕ್ಕೆ ಜನರಲ್ಲಿದ್ದ ಸಿಟ್ಟೂ ಬೆಲೆಯೇರಿಕೆಯೊಂದಿಗೆ ಸೇರಿಕೊಂಡು ಸೋತೆವು ಎಂದು ಸೋನಿಯಾ ಗಾಂಧಿಯವರು ಗುರುತಿಸಿದರು. ಹಾಗಾಗಿ 2014ರ ಲೋಕಸಭೆ ಚುನಾವಣೆ ವೇಳೆಗೆ ಈ ಮಿತಿಯನ್ನು 12ಕ್ಕೆ ಹೆಚ್ಚಿಸುವ ನಿರ್ಧಾರ ಮಾಡಲಾಯಿತು. ದೇಶದಲ್ಲಿ 65 ಲಕ್ಷ ನಕಲಿ ಎಲ್ಪಿಜಿ ಸಂಪರ್ಕಗಳನ್ನು ಸರ್ಕಾರ ಹುಡುಕಿ ರದ್ದುಪಡಿಸಿತ್ತು.
ಆದರೆ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಭಾರತದ ಮೂಲ ಮಾನಸಿಕತೆ 2015ರಲ್ಲಿ ಮತ್ತೆ ಜಾಗೃತವಾಯಿತು. ತಾವು ಬಿಟ್ಟುಕೊಟ್ಟ ಸಬ್ಸಿಡಿ ಹಣದಿಂದ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ, ಇದರಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದೆಯೇ ಜಾರಿ ಮಾಡಲು ನರೇಂದ್ರ ಮೋದಿ ಇದ್ದಾರೆ ಎಂಬ ನಂಬಿಕೆ ಜನರಲ್ಲಿ ಮೂಡಿತು. 2016ರ ವೇಳೆಗಾಗಲೇ ದೇಶದ ಒಂದು ಕೋಟಿ ನಾಗರಿಕರು ತಮ್ಮ ಸಬ್ಸಿಡಿ ಹಣವನ್ನು ಬಿಟ್ಟುಕೊಡುವುದಾಗಿ ಘೋಷಿಸಿಕೊಂಡರು. 2023ರ ವೇಳೆಗೆ 1.13 ಕೋಟಿ ಜನರು ಈ ಸಬ್ಸಿಡಿಯಿಂದ ಹೊರಗುಳಿದಿದ್ದಾರೆ. ಕದ್ದುಕದ್ದು ಸಿಲಿಂಡರ್ ಬಳಸುತ್ತಿದ್ದ ಅನೇಕರು ಬಿಟ್ಟುಕೊಡುವ ಮಾನಸಿಕತೆಗೆ ಹೊರಳುವಂತೆ ಮಾಡಿದ್ದು ನರೇಂದ್ರ ಮೋದಿಯವರ ಮೊದಲ ಸಾಧನೆ ಎಂದೇ ಹೇಳಬೇಕು.
ಹಾಗೆ ನೋಡಿದರೆ, ದೇಶಕ್ಕಾಗಿ ‘ಬಿಟ್ಟುಕೊಡಬೇಕುʼ ಎಂದು ಪ್ರಧಾನಿಯೊಬ್ಬರು ಕರೆ ನೀಡಿದ್ದಾಗಲಿ, ದೇಶದ ಜನರು ಸ್ಪಂದಿಸಿದ್ದಾಗಲಿ ಇದು ಮೊದಲನೆಯದ್ದಲ್ಲ. 1965ರ ಚೀನಾದೊಂದಿಗಿನ ಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ಎದುರಾಗಿತ್ತು. ಆಹಾರವನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಒಂದು ಹೊತ್ತಿನ ಊಟವನ್ನು ತ್ಯಾಗ ಮಾಡಿ ಎಂದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕರೆ ನೀಡಿದ್ದಕೂ ಜನ ಸ್ಪಂದಿಸಿದ್ದರು. 1998ರಲ್ಲಿ ಭಾರತದ ಪೋಖ್ರಾಣ್ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಸಿಟ್ಟಾದ ಅಮೆರಿಕ, ಭಾರತದ ಮೇಲೆ ಅನೇಕ ಆರ್ಥಿಕ ನಿರ್ಬಂಧಗಳನ್ನು ಹೇರಿತು. ಭಾರತದ ಏಳಿಗೆಗಾಗಿ ಹಣ ಹೂಡಲು ಇಂಡಿಯಾ ರಿಸರ್ಜೆನ್ಸ್ ಬಾಂಡ್ನಲ್ಲಿ ಹೂಡಿಕೆ ಮಾಡಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರೆ ನೀಡಿದರು. 8,700 ಕೋಟಿ ರೂ. ಸಂಗ್ರಹದ ಗುರಿಗೆ ಸಿಕ್ಕಿದ್ದು 13,500 ಕೋಟಿ ರೂ. ಆದರೆ ಸರ್ಕಾರ ಎಂದರೆ ತಮಗೆ ಏನಾದರೂ ಕೊಡುವುದಕ್ಕೇ ಇರುವುದು ಎಂಬ ಭಾವನೆಯನ್ನು ದೇಶದಲ್ಲಿ ಬಲವಾಗಿ ಬಿತ್ತಲಾಗಿದೆ.
ದೇಶಕ್ಕೆ ಏನಾದರೂ ಕೊಡಬೇಕು ಎಂದರೆ ಮುಖ್ಯವಾಗಿ ಎರಡು ಅಂಶಗಳಿರಬೇಕು. ಮೊದಲನೆಯದು, ದಾನ ಮಾಡುವ ಪರಂಪರೆ, ಮನಃಸ್ಥಿತಿ ಇರಬೇಕು. ಎರಡನೆಯದು, ತಾನು ನೀಡಿದ ಹಣವೋ ಅಥವಾ ಬಿಟ್ಟುಕೊಟ್ಟ ಸೌಲಭ್ಯವೋ ಯಾವುದೇ ಮೋಸವಿಲ್ಲದೆ ಜನರನ್ನು ತಲುಪುತ್ತದೆ ಎಂಬ ನಂಬಿಕೆ ಇರಬೇಕು. ಇದನ್ನು ಜಾರಿ ಮಾಡುವ ನಾಯಕನ ಮೇಲೆ ನಂಬಿಕೆ ಇರಬೇಕು. ಆದರೆ ದೇಶದ ರಾಜಕಾರಣದಲ್ಲಿ ನಾಯಕರ ಮೇಲಿನ ಅಪನಂಬಿಕೆಯೇ ಹೆಚ್ಚುತ್ತಿರುವಾಗ, ಜನರು ಬಿಟ್ಟುಕೊಡುವ ಬದಲಿಗೆ ಮತ್ತಷ್ಟು ಪಡೆಯುವ ಆಲೋಚನೆಯಲ್ಲಿದ್ದಾರೆ.
ಕರ್ನಾಟಕದ ಉದಾಹರಣೆಯನ್ನೇ ನೋಡಿದರೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಬಡವರಿಗೆ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಇದರಲ್ಲೊಂದು. ಎನ್ಎಸ್ಎಸ್ಒ ಸಮೀಕ್ಷೆಯ ಪ್ರಕಾರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವ್ಯಕ್ತಿ ಮಾಸಿಕ ಸರಾಸರಿ 5.622 ಕೆ.ಜಿ. ಅಕ್ಕಿ ಬಳಸುತ್ತಾರೆ. ನಗರ ಪ್ರದೇಶದಲ್ಲಿ ಮಾಸಿಕ 2.213 ಕೆ.ಜಿ. ಅಕ್ಕಿ ಬಳಸುತ್ತಾರೆ. ಹಾಗಾದರೆ 10 ಕೆ.ಜಿ. ಅಕ್ಕಿಯನ್ನು ನೀಡುತ್ತೇವೆ ಎಂದು ಘೋಷಿಸಲು ಕಾಂಗ್ರೆಸ್ಗೆ ಇದ್ದ ಮಾನದಂಡ ಏನು? ಈಗಾಗಲೆ ಕೇಂದ್ರ ಸರ್ಕಾರ ಮಾಸಿಕ 5 ಕೆ.ಜಿ. ಅಕ್ಕಿಯನ್ನು ನೀಡುತ್ತಿರುವಾಗ ಮತ್ತೆ 5 ಕೆ.ಜಿ. ಅಕ್ಕಿ ಏಕೆ ಕೊಡಬೇಕು? ಎಂದು ಕೇಳಿದರೆ ಉತ್ತರವಿಲ್ಲ. ಬಡವರಿಗೆ ಅನ್ನ ನೀಡಿದರೆ ಪ್ರಶ್ನಿಸುತ್ತೀರ? ಶ್ರೀಮಂತರಿಗೆ ಲಕ್ಷ ಕೋಟಿ ರೂ. ಮನ್ನ ಮಾಡುತ್ತೀರ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸಿಗರು ವಿತಂಡ ವಾದ ಮಾಡುತ್ತಾರೆ. ಹೀಗೆ ಪ್ರಶ್ನೆ ಮಾಡುವುದು ಬಡವರ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಇನ್ನು, ನಿರುದ್ಯೋಗ ಭತ್ಯೆಯ ಗ್ಯಾರಂಟಿ. ಇವರು ಕೊಡುವ ನಿರುದ್ಯೋಗ ಭತ್ಯೆಯಲ್ಲಿ ಯಾರಾದರೂ ನಿರುದ್ಯೋಗಿ, ಕೆಲಸ ಸಿಗುವವರೆಗೂ ಜೀವನ ಮಾಡಲು ಆಗುತ್ತದೆಯೇ? ಅಷ್ಟಕ್ಕೂ ಸರ್ಕಾರ ನೀಡಬೇಕಾಗಿರುವುದು ಉದ್ಯೋಗವೇ ಹೊರತು ನಿರುದ್ಯೋಗ ಭತ್ಯೆಯಲ್ಲ. ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದರೆ, ನಿರುದ್ಯೋಗವನ್ನು ಸಂಪೂರ್ಣ ತೊಲಗಿಸುವುದಿಲ್ಲ ಎಂದು ತಾನೇ ಒಪ್ಪಿಕೊಂಡಂತಲ್ಲವೇ?
ಮೂರನೆಯ ಗ್ಯಾರಂಟಿ, ಮನೆಯ ಮುಖ್ಯಸ್ಥೆಗೆ ಮಾಸಿಕ 2 ಸಾವಿರ ರೂ. ನೀಡುವುದು. ಈ ಯೋಜನೆಯಲ್ಲಿ ಮಾಸಿಕ 2 ಸಾವಿರ ರೂ. ಏಕೆ ನೀಡಬೇಕು? ಏಕೆ 1 ಸಾವಿರ ರೂ. ನೀಡಬಾರದಿತ್ತು? ಏಕೆ ನಾಲ್ಕು ಸಾವಿರ ರೂ. ನೀಡಬಾರದಿತ್ತು? 2 ಸಾವಿರ ರೂ. ಎಂದು ನಿರ್ಧಾರಕ್ಕೆ ಬರಲು ಯಾವುದಾದರೂ ಮಾನದಂಡ ಇದೆಯೇ? ಯಾವುದಾದರೂ ಸಮೀಕ್ಷೆ, ವರದಿಯ ಆಧಾರದಲ್ಲಿ ನಿರ್ಧಾರಕ್ಕೆ ಬರಲಾಗಿದೆಯೇ? ಇನ್ನೂಎರಡು ಗ್ಯಾರಂಟಿಗಳಿವೆ, ಅವುಗಳ ಕುರಿತೂ ಹೀಗೆ ಪ್ರಶ್ನೆಗಳನ್ನು ಎತ್ತಲು ಅಡ್ಡಿಯಿಲ್ಲ.
ಮನೆಯ ಒಡತಿಗೆ ಹಣ ನೀಡುತ್ತೇವೆ ಎಂದ ಕೂಡಲೆ ಯಾರು ಪಡೆಯಬೇಕು ಎಂಬ ಪ್ರಶ್ನೆ ಉದ್ಭವವಾಯಿತು. ಅತ್ತೆ ಸೊಸೆ ಒಟ್ಟಿಗಿರುವ ಮನೆಯಲ್ಲಿ ತನಗೂ ಕೊಡಿ ಸೊಸೆಗೂ ಕೊಡಿ ಎಂದು ಮಾಧ್ಯಮಗಳ ಎದುರು ಜನರು ಮುಕ್ತವಾಗಿಯೇ ಡಿಮ್ಯಾಂಡ್ ಮಾಡಿದರು. ಸರ್ಕಾರ ಕೊಡಲಿ ಬಿಡ್ರಿ, ಅವರೇನು ತಮ್ಮ ಮನೆಯಿಂದ ಕೊಡುತ್ತಾರ? ನಮ್ಮ ತೆರಿಗೆ ಹಣವನ್ನೇ ಇಟ್ಟುಕೊಂಡಿರುತ್ತಾರೆ. ಅವರ ಮಕ್ಕಳು, ಮೊಮ್ಮಕ್ಕಳಿಗೆ ಆಗುವಷ್ಟು ಕೊಳ್ಳೆ ಹೊಡೆದುಕೊಳ್ಳುತ್ತಾರೆ ರಾಜಕಾರಣಿಗಳು. ನಮಗೆ ಒಂದಿಷ್ಟು ಕೊಟ್ಟರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಜನರು ಹೇಳುತ್ತಿದ್ದರು.
ಈಗಲೂ ಜನರಲ್ಲಿ ದಾನ ಮಾಡುವ, ತ್ಯಾಗ ಮಾಡುವ ಮನಸ್ಥಿತಿ ಸುಪ್ತವಾಗಿ ಇದೆ. ಆದರೆ ಹಾಗೆ ತ್ಯಾಗ ಮಾಡಿದರೆ ಅದು ನಿಜವಾಗಿ ಸದುಪಯೋಗವಾಗುತ್ತದೆ ಎಂಬ ನಂಬಿಕೆ ಇಲ್ಲ. ಅದಕ್ಕೆ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರವೂ ಬಹುಮಟ್ಟಿಗೆ ಕಾರಣ. ಆ ಸಮಯದಲ್ಲಿ ಜನರು ದಿನ ಬೆಳಗಾದರೆ ಕೇಳುತ್ತಿದ್ದ ಭ್ರಷ್ಟಾಚಾರ ವಿಚಾರಗಳು, 40% ಕಮಿಷನ್ ಸುದ್ದಿಗಳು ಜನರನ್ನು ಬೇಸರಕ್ಕೆ ದೂಡಿದ್ದವು. ಇವರು ಇಷ್ಟೆಲ್ಲ ಕೊಳ್ಳೆ ಹೊಡೆಯುತ್ತಿದ್ದಾರೆ, ನಮಗೆ ಏನೂ ಕೊಡುತ್ತಿಲ್ಲ ಎಂಬ ಭಾವನೆ ಮೂಡಿತು. ಹಾಗಾಗಿ, ಕಾಂಗ್ರೆಸ್ನಿಂದ ಗ್ಯಾರಂಟಿ ಘೋಷಿಸಿದ್ದಕ್ಕೆ ಸಾಕಷ್ಟು ಬೆಂಬಲ ಸಿಕ್ಕಿತು. ಗ್ಯಾರಂಟಿಗಳಿಂದಲೇ ಕಾಂಗ್ರೆಸ್ ಗೆದ್ದಿತು ಎಂದು ಹೇಳಲಾಗದು, ಆದರೆ ಅದರ ಗೆಲುವಿನಲ್ಲಿ ಗ್ಯಾರಂಟಿಗಳ ಪಾತ್ರವೂ ಪ್ರಮುಖವಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು.
ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ವಿಶ್ವಾಸ, ನಿರೀಕ್ಷೆ ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶ ಮೂರನೇ ದೊಡ್ಡ ಆರ್ಥಿಕತೆ ಆಗುತ್ತದೆ. ನಮ್ಮ ದೇಶದಲ್ಲೂ ಮತ್ತಷ್ಟು ಬೃಹತ್ ಕೈಗಾರಿಕೆಗಳು, ಉತ್ತಮ ಶಿಕ್ಷಣ ಸಂಸ್ಥೆಗಳು ಬರುತ್ತವೆ. ಮುಂದಿನ ಪೀಳಿಗೆಯ ನೆಮ್ಮದಿಯ ಜೀವನಕ್ಕೆ ಇದು ಕಾರಣವಾಗುತ್ತದೆ. ಅದಕ್ಕಾಗಿ ನಾವು ಹೆಚ್ಚೆಚ್ಚು ದುಡಿಯಬೇಕು, ಹೆಚ್ಚೆಚ್ಚು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ. ಆದರೆ ರಾಜ್ಯದ ಮಟ್ಟಿಗೆ ಇನ್ನೂ ಅದೇ ಕೊಳಚೆ ರಾಜಕೀಯ ನಡೆಯುತ್ತಿದೆ. ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲದೆ ಜನರನ್ನು ಮತ್ತಷ್ಟು ಅವಲಂಬಿತರಾಗಿಸುವ, ಜನರಲ್ಲಿ ನಾಯಕತ್ವದ ಮೇಲೆ ಅಪನಂಬಿಕೆ ಮೂಡಿಸುವ ಕೆಲಸವೇ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ, ಸ್ವಾತಂತ್ರ್ಯಕ್ಕೆ 100 ವರ್ಷವಾಗುವವರೆಗಿನ 25 ವರ್ಷಗಳ ಅಮೃತ ಕಾಲದಲ್ಲಿ ದೇಶದ ಎಲ್ಲ ಜನರೂ ಸ್ವಾವಲಂಬಿಗಳಾಗಬೇಕು. ಸರ್ಕಾರಿ ಸವಲತ್ತುಗಳು, ಸಬ್ಸಿಡಿಗಳು ನೇರವಾಗಿ ಅರ್ಹರಿಗೇ ದೊರಕಿ ಅವರೆಲ್ಲರೂ ಮುಖ್ಯವಾಹಿನಿಗೆ ಆದಷ್ಟೂ ಬೇಗನೆ ಸೇರಿಕೊಳ್ಳಬೇಕು. ಈಗಾಗಲೆ ಆರ್ಥಿಕವಾಗಿ ಪ್ರಬಲರಾದವರು, ಒಮ್ಮೆ ಸರ್ಕಾರದ ಸವಲತ್ತು ಪಡೆದು ಸುಸ್ಥಿತಿಗೆ ಬಂದವರು, ಒಮ್ಮೆ ಮೀಸಲಾತಿ ಪಡೆದು ತಮ್ಮ ಕುಟುಂಬವನ್ನು ಶೈಕ್ಷಣಿಕವಾಗಿ-ಆರ್ಥಿಕವಾಗಿ ಎತ್ತರಕ್ಕೆ ಕೊಂಡೊಯ್ದವರು, ಒಮ್ಮೆ ಸರ್ಕಾರದ ಯೋಜನೆಯ ಲಾಭ ಪಡೆದು ಉದ್ಯಮಿಯಾದವರು ನಿರ್ಧಾರ ಮಾಡುವ ಕಾಲ ಇದು. ತಮ್ಮ ಸಹ ದೇಶವಾಸಿಗಳಿಗೂ ಇಂತಹ ಸೌಲಭ್ಯಗಳು ದೊರಕಿದರೆ ಮಾತ್ರವೇ ಭಾರತ ಅಭಿವೃದ್ಧಿ ಆಗುತ್ತದೆ. ಅದಕ್ಕಾಗಿ ತಾವು ʼಹೆಚ್ಚುವರಿʼ ಸೌಲಭ್ಯಗಳನ್ನು ಬಿಟ್ಟುಕೊಡಲು ಮುಂದಾಗಬೇಕು. ಇದಕ್ಕಾಗಿ ಕರ್ನಾಟಕದ ರಾಜಕಾರಣಿಗಳೂ ತಮ್ಮನ್ನು ತಾವು ಮರುವಿಮರ್ಶೆ ಮಾಡಿಕೊಳ್ಳಬೇಕು.
ಕಡೆಮಾತು: ಜನ ಸಮುದಾಯ ಎಂಥಾ ನಾಯಕರನ್ನು ನಂಬುತ್ತದೆ ಹಾಗೂ ನಾಯಕನಾದವ ತನ್ನ ಜನರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ಗಾಂಧೀಜಿ ನೆನಪಾಗುತ್ತಿದ್ದಾರೆ. 1934ರಲ್ಲಿ ಹರಿಜನ ಉದ್ಧಾರಕ್ಕಾಗಿ ಗಾಂಧಿ ಭಾರತ ಯಾತ್ರೆ ಕೈಗೊಳ್ಳುತ್ತಾರೆ. ಆಗ ಅವರು, ಹರಿಜನ ಕಲ್ಯಾಣಕ್ಕಾಗಿ ಹಳ್ಳಿ ಹಳ್ಳಿಯಲ್ಲೂ ಜನರ ದೇಣಿಗೆ ನೀಡಿ ಎಂದು ಮನವಿ ಮಾಡಿದಾಗ, ಬಡವ-ಬಲ್ಲಿದ ಎಂಬ ಭೇದ ಭಾವವಿಲ್ಲದೇ, ಸಮಸ್ತರು ಅವರಿಗೆ ಹಣ ನೀಡುತ್ತಾರೆ. ಹರಿಜನರಿಗೆ ಪ್ರವೇಶ ನೀಡುವ ದೇವಾಲಯಗಳಿಗೆ ಮಾತ್ರ ನನ್ನ ಭೇಟಿ ಎಂದಾಗ, ಕಡು ಸಾಂಪ್ರದಾಯಿಕ ದೇಗುಲಗಳ ಅರ್ಚಕರೂ ಬದಲಾಗುತ್ತಾರೆ !
ನಾಯಕನಾದವನ ಮಾತಿನ ಶಕ್ತಿ ಇದೆ. ಬ್ರಿಟಿಷ್ ಆಳ್ವಿಕೆಯ ಬಡ ಭಾರತದಲ್ಲಿ ಬಡವರೇಕೆ ಒಳ್ಳೆಯ ಕಾರ್ಯಕ್ಕೆ ದೇಣಿಗೆ ನೀಡಬೇಕು ಎಂದು ಯಾರೂ ಅಂದು ಪ್ರಶ್ನಿಸುವುದಿಲ್ಲ. ಬಡವರ ಸಂಖ್ಯೆ ಇಂದಿಗಿಂತಲೂ ಆಗ ಹತ್ತಾರು ಪಟ್ಟು ಹೆಚ್ಚಿತ್ತು. ಆದರೂ,ಬಡವರು ದಾನ ನೀಡಿದರು. ಆದರೆ, ಇಂದಿನ ರಾಜಕಾರಣಿಗಳು ಬಡವರು ಎಂದರೆ, ಅವರು ಬೇಡಲಷ್ಟೇ ಇದ್ದಾರೆ ಎಂದೇ ಭಾವಿಸಿದ್ದಾರೆ. ಇದು ಬಡವರ ಆತ್ಮಗೌರವಕ್ಕೆ ಮಾಡುವ ಅವಮಾನ ಎಂದೂ ಯಾರು ಭಾವಿಸುವುದಿಲ್ಲ. ಬಡತನಕ್ಕೂ ದಾರಿದ್ರ್ಯಕ್ಕೂ ವ್ಯತ್ಯಾಸವಿದೆ. ಎಲ್ಲರನ್ನೂ ದರಿದ್ರರು ಎಂದು ಭಾವಿಸುವುದು, ಎಲ್ಲರೂ ಅಂದುಕೊಳ್ಳುವಂತೆ ಪರಿಸರ ನಿರ್ಮಿಸುವುದು ಮನುಷ್ಯತ್ವವನ್ನು ಕುಗ್ಗಿಸಿದಂತೆ !
ಬಡತನ ಹಾಗೂ ಬಡವರ ಕುರಿತು ಗಾಂಧಿ ಈ ರೀತಿ ಯೋಚಿಸಿದ್ದರೆ ? ಗೊತ್ತಿಲ್ಲ. ಆದರೆ, ಅವರ ಮಾತಿಗೆ ಬಡವರೂ ಕೊಡುಗೈ ದಾನಿಗಳಾದರು ಎಂಬುದು ಸತ್ಯ !
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top