ʼಭಾರತʼದಲ್ಲಿರುವ ಗಾಂಭೀರ್ಯ ‘ಇಂಡಿಯಾʼದಲ್ಲಿ ಏಕಿಲ್ಲ? : ವಿಸ್ತಾರ ಅಂಕಣ

ಇಂಡಿಯಾ ಎನ್ನುವುದು ಸಿಂಧು ನದಿಯ ಹೆಸರಿನಿಂದ ಮೂಡಿಬಂದಿದೆ. ಹಾಗಾಗಿ ಇಂಡಿಯಾ ಎಂಬ ಶಬ್ದ ನಮಗೆ ಕೀಳಲ್ಲ. ಆದರೆ ಭಾರತ ಎಂದ ಕೂಡಲೆ ಅದಕ್ಕಿರುವ ಇತಿಹಾಸ, ಆಳ, ಅಗಲ ಇಂಡಿಯಾ ಪದಕ್ಕೆ ಇಲ್ಲ ಎನ್ನುವುದು ಸತ್ಯ.
…………….,……
ಇಂಡಿಯಾ ಬದಲಿಗೆ ಭಾರತ ಎಂದು ಬರೆಯಬೇಕು ಎಂದು ಎನ್ ಸಿ ಇ ಆರ್ ಟಿಯ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಇದು ಇನ್ನೂ ಆದೇಶವಾಗಿಲ್ಲ, ಕೇವಲ ಶಿಫಾರಸು ಅಷ್ಟೆ. ಶಾಲೆಯ ಎಲ್ಲ ಹಂತದ ಪಠ್ಯದಲ್ಲೂ ಈ ಬದಲಾವಣೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಇಷ್ಟಕ್ಕೆ ಅದಾಗಲೆ ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಇಂಡಿಯಾ ಎಂದೇ ಇದ್ದರೆ ಏನಾಗುತ್ತದೆ? ಇದು ಕೇಸರೀಕರಣ ಎಂದು ಅನೇಕರು ಹೇಳುತ್ತಿದ್ದಾರೆ. ಇಂಡಿಯಾ ಎನ್ನುವುದು ಸಹಜವಾಗಿ ಮಾತನಾಡುವಾಗ ಬಳಸುತ್ತೇವೆ. ಆದರೆ ಉದ್ದೇಶಪೂರ್ವಕವಾಗಿ ಭಾರತ ಎನ್ನುವುದನ್ನು ಹೇರುವುದು ಬೇಡ ಎಂದು ಕೆಲವರು ಹೇಳಿದ್ದಾರೆ.
ಚಿಂತಿಸಲು, ಚರ್ಚಿಸಲು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ನೂರಾರು ಸಮಸ್ಯೆಗಳಿವೆ, ಅದನ್ನು ಮೊದಲು ಸರಿಪಡಿಸುವುದನ್ನು ಬಿಟ್ಟು ಸರ್ಕಾರ ಇಂತಹ ಕೆಲಸದಲ್ಲಿ ತೊಡಗಿರುವುದು ಸರಿಯಲ್ಲ ಎಂದೂ ಅನೇಕರು ʼಬುದ್ಧಿವಾದʼ ಹೇಳಿದ್ದಾರೆ. ಈ ಮಾತಿಗೆ ಅನೇಕರು ತಲೆದೂಗುತ್ತಿದ್ದಾರೆ. ಕೇವಲ ಕಮ್ಯುನಿಸ್ಟರು, ಬಿಜೆಪಿ ವಿರೋಧಿಗಳು ಮಾತ್ರವಲ್ಲ. ತಮ್ಮನ್ನು ತಾವು ಸನಾತನ ಧರ್ಮದ ಅನುಯಾಯಿಗಳು, ಹಿಂದೂಗಳು ಎನ್ನಿಸಿಕೊಂಡವರಲ್ಲೂ, ವಿಶೇಷವಾಗಿ ಯುವಸಮೂಹದಲ್ಲಿ ಈ ಅಭಿಪ್ರಾಯವೂ ಬಲವಾಗಿದೆ. ಯಾಕೆ ಹೆಸರಿನ ವಿಚಾರದಲ್ಲಿ ಕಿತ್ತಾಡುವುದು? ಇದೆಲ್ಲ ಅಭಿವೃದ್ಧಿಗೆ ಮಾರಕವಾಗಿದೆ ಎಂದೂ ಹೇಳುತ್ತಾರೆ. ಹಾಗಾದರೆ ನಿಜವಾಗಲೂ ಭಾರತ ಎಂದು ಏಕೆ ಹೇಳಬೇಕು?
ಭಾರತ ಎಂದಷ್ಟೇ ಬಳಸಬೇಕು ಎಂದು ಪಟ್ಟು ಹಿಡಿದಿರುವವರ ಒಂದು ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ. ಇಂಡಿಯಾ ಎನ್ನುವುದು ಕೀಳು ಪದ ಎಂದು ಕೆಲವರು ಹೇಳುತ್ತಿರುವುದು ಸರಿಯಲ್ಲ. ಇಂಡಿಯಾ ಎನ್ನುವುದು ಸಿಂಧು ನದಿಯ ಹೆಸರಿನಿಂದ ಮೂಡಿಬಂದಿದೆ. ಅದೇ ರೀತಿ ಹಿಂದೂ ಎಂಬ ಶಬ್ದವೂ ಸಿಂಧು ನದಿ ಹೆಸರಿನಿಂದಲೇ ಉದ್ಭವವಾಗಿದೆ. ಹಾಗಾಗಿ ಇಂಡಿಯಾ ಎಂಬ ಶಬ್ದ ನಮಗೆ ಕೀಳಲ್ಲ. ಆದರೆ ಭಾರತ ಎಂದ ಕೂಡಲೆ ಅದಕ್ಕಿರುವ ಇತಿಹಾಸ, ಆಳ, ಅಗಲ ಇಂಡಿಯಾ ಪದಕ್ಕೆ ಇಲ್ಲ ಎನ್ನುವುದು ಸತ್ಯ.
ಉದಾಹರಣೆಗೆ, ಆದಿ ಶಂಕರಾಚಾರ್ಯರು ಶಾಸ್ತ್ರಾಸ್ತ್ರಕ್ಕಾಗಿ ಈಗಿನ ಬಿಹಾರದಲ್ಲಿದ್ದ ಮಂಡನ ಮಿಶ್ರಾ ಅವರ ಪ್ರದೇಶಕ್ಕೆ ತೆರಳಿದರು. ಮಂಡನ ಮಿಶ್ರರೂ ಮಹಾನ್ ಮೇಧಾವಿಗಳು. ಅನೇಕ ದಿನಗಳು ಶಾಸ್ತ್ರಾಸ್ತ್ರ ನಡೆಯಿತು. ಕೊನೆಗೆ ಮಂಡನ ಮಿಶ್ರ ಸೋಲುವ ಹಂತವೂ ಬಂತು. ಆಗ ಮಿಶ್ರಾ ಅವರ ಪತ್ನಿ ಉಭಯ ಭಾರತಿ ಆಗಮಿಸಿದರು. ನಾನು ಮಂಡನ ಮಿಶ್ರಾರ ಅರ್ಧಾಂಗಿ. ಅವರ ಸೋಲಿನಲ್ಲೂ ನನ್ನ ಪಾಲಿದೆ. ನನ್ನನ್ನೂ ಸೋಲಿಸುವವರೆಗೆ ನಿಮ್ಮ ವಾದವನ್ನು ಒಪ್ಪುವುದಿಲ್ಲ ಎಂದರು. ಆಗ ಶಾಸ್ತ್ರಾಸ್ತ್ರವು ಉಭಯ ಭಾರತಿ ಜತೆಗೆ ಆರಂಭವಾಯಿತು. ಅದೂ ಸಾಕಷ್ಟು ಸಮಯ ಸಾಗಿತು. ಕೊನೆಗೆ ವೈವಾಹಿಕ ಜೀವನದ ಕುರಿತು ಉಭಯ ಭಾರತಿ ಪ್ರಶ್ನೆ ಕೇಳಿದರು. ಅದರ ಅನುಭವವಿರದಿದ್ದ ಶಂಕರಾಚಾರ್ಯರು ಸಮಯ ತೆಗೆದುಕೊಂಡು ಹೊರಟು, ರಾಜನೊಬ್ಬನ ದೇಹ ಪ್ರವೇಶಿಸಿ ಆ ಮಾಹಿತಿಯನ್ನೂ ಪಡೆದರು. ಮತ್ತೆ ಆಗಮಿಸಿ ಉಭಯ ಭಾರತಿಗೆ ಉತ್ತರಿಸಿ ಶಾಸ್ತ್ರಾಸ್ತ್ರದಲ್ಲಿ ಜಯಿಸಿದರು.
ಭಾರತದಲ್ಲಿ ಸ್ರೀಯರಿಗೆ ಶಿಕ್ಷಣವಿರಲಿಲ್ಲ ಎಂದು ಕಮ್ಯುನಿಸ್ಟರು ಮಾತ್ರ ಹೇಳುತ್ತಿಲ್ಲ. ಯಾರು ತಮ್ಮನ್ನು ಸನಾತನಿಗಳು, ಹಿಂದುಗಳು ಎನ್ನುತ್ತಾರೆಯೋ ಅವರಲ್ಲೂ ಅನೇಕರು ಇದನ್ನೇ ಹೇಳುತ್ತಾರೆ. ʼಭಾರತದಲ್ಲಿʼ ಸ್ತ್ರೀಯರಿಗೆ ಸಮಾನತೆ ಇತ್ತು. ಆದರೆ ʼಇಂಡಿಯಾದಲ್ಲಿʼ ಅದು ಮಾಯವಾಯಿತು. ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇರಲಿಲ್ಲ ಎನ್ನುತ್ತಾರೆ. ಅಂಥವರಿಗೆ ಉಭಯ ಭಾರತಿಯಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.
ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಆಚರಣೆ ಅನಾದಿಕಾಲದಿಂದಲೂ ಇದೆ ಎಂದೂ ಹಿಂದುಗಳೇ ನಂಬುತ್ತಾರೆ. ಕೆಲವರಂತೂ ಈಗಿನ ಜನ್ಮ ಆಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನೇ ದೇವರು ಸೃಷ್ಟಿಸಿದ್ದು ಎಂದೂ ವಾದಿಸುತ್ತಾರೆ. ಗುಣ-ಕರ್ಮಗಳಿಗೆ ಅನುಗುಣವಾಗಿದ್ದ ವರ್ಣ ವ್ಯವಸ್ಥೆಯನ್ನು ಶಾಶ್ವತಗೊಳಿಸಿದ್ದು ಸ್ವಾರ್ಥಿಗಳೇ ಹೊರತು ಅದಕ್ಕೆ ಶಾಸ್ತ್ರದಲ್ಲಿ ಸಮ್ಮತಿ ಇಲ್ಲ. ಇದನ್ನು ಉಡುಪಿ ಧರ್ಮ ಸಂಸತ್ತಿನಲ್ಲಿ ನಾಡಿನ ಸಾಧು ಸಂತರೇ ಘೋಷಿಸಿದ್ದಾರೆ.
ಇದನ್ನೆಲ್ಲ ಹೇಳಿದ ಉದ್ದೇಶವೇನೆಂದರೆ ನಮ್ಮ ಪರಂಪರೆ ಏನೆಂಬುದನ್ನು ಮೊದಲು ನಾವು ತಿಳಿಯಬೇಕು. ಸಾವಿರಾರು ವರ್ಷದಿಂದ ಅಲ್ಲ, ಕೇವಲ ಬ್ರಿಟಿಷರು ಭಾರತಕ್ಕೆ ಆಗಮಿಸುವ ಮಂಚಿನವರೆಗೂ ಭಾರತದಲ್ಲಿ ಎಲ್ಲ ಜಾತಿ-ಸಮುದಾಯಗಳಿಗೆ ಮುಕ್ತ ಶಿಕ್ಷಣ ಸಿಗುತ್ತಿತ್ತು. ಇದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ?
ನಾವು ಸಾಮಾನ್ಯವಾಗಿ ಕೇಳುವ ಒಂದು ವಿಚಾರವೆಂದರೆ ಭಾರತದಲ್ಲಿ ಶಿಕ್ಷಣವನ್ನು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿದ್ದರು. ಕೆಳವರ್ಗದವರಿಗೆ, ಅದರಲ್ಲೂ ಶೂದ್ರರಿಗೆ ಶಿಕ್ಷಣವೇ ಲಭಿಸುತ್ತಿರಲಿಲ್ಲ ಎನ್ನುವುದು. ಪ್ರಸಿದ್ಧ ಗಾಂಧಿವಾದಿ ಧರ್ಮಪಾಲ್ ಅವರು ರಚಿಸಿರುವ ಚೆಲುವ ತರು (ದಿ ಬ್ಯೂಟಿಫುಲ್ ಟ್ರೀ) ಪುಸ್ತಕದಲ್ಲಿರುವ ದಾಖಲೆಯ ಪ್ರಕಾರ, 18ನೇ ಶತಮಾನದಲ್ಲಿ ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ನಲ್ಲಿ, ಭಾರತದ ಶಿಕ್ಷಣ ವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಇವುಗಳ ಅಧ್ಯಯನಕ್ಕಾಗಿ ಭಾರತದಿಂದ ತಮ್ಮ ಅಧಿಕಾರಿಗಳು ಮೂಲಕ ವರದಿಯನ್ನು ತರಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಮಾತ್ರವೇ ಶಿಕ್ಷಣ ಲಭಿಸುತ್ತಿತ್ತು, ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು ಎನ್ನುವುದಕ್ಕೆ ವ್ಯತಿರಿಕ್ತವಾದ ಬ್ರಿಟಿಷ್ ದಾಖಲೆಗಳನ್ನು ಧರ್ಮಪಾಲ್ ಮುಂದಿಟ್ಟಿದ್ದಾರೆ. ಪ್ರತಿ ಗ್ರಾಮದಲ್ಲಿ ಇದ್ದ ಶಾಲೆಗಳು, ಅದರಲ್ಲಿದ್ದ ಬಾಲಕಿಯರು, ವಿವಿಧ ಜಾತಿ-ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ, ಇತ್ಯಾದಿ ವಿವರಗಳನ್ನು ಒದಗಿಸಿದ್ದಾರೆ.
ಭಾರತದ ಸಂಸ್ಕೃತಿ ಎಂದ ಕೂಡಲೆ ಅನೇಕರು ರಾಜಮಹಾರಾಜರ ಕಥೆ ಎಂದು ಅನೇಕರು ಭಾವಿಸುತ್ತಾರೆ. ನಮ್ಮ ಸಂಸ್ಕೃತಿಯು ರಾಜಮಹಾರಾಜರ ಮೇಲೆ ಅವಲಂಬಿತವಾಗಿಲ್ಲ. ರಾಜರು ಆಳಿದರು, ಸಂಸ್ಕೃತಿಗೆ ಅವರ ಸೇವೆ ಸಲ್ಲಿಸಿದರು, ಕಡೆಗೆ ಅಳಿದರು. ಆದರೆ ಇಲ್ಲಿನ ಸಾಮಾನ್ಯ ಜನರು, ಸಾಧು ಸಂತರು, ಮಹಿಳೆಯರು ಸಂಸ್ಕೃತಿಯನ್ನು ಪಾಲನೆ, ಪೋಷಣೆ ಮಾಡಿದರು.
ಈ ದಿಕ್ಕಿನಲ್ಲಿ ನಾವು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಮೂಲಭೂತವಾದಿತನ ಮಾಯವಾಗುತ್ತದೆ. ಇಲ್ಲದಿದ್ದರೆ, ಈಗಿರುವ ವ್ಯವಸ್ಥೆಯನ್ನೇ ಶ್ರೇಷ್ಠ ಎಂದುಕೊಳ್ಳುವ ಅಪಾಯ ಇರುತ್ತದೆ. ಈಗಿರುವ ಜಾತಿ ಭೇದ, ಲಿಂಗಭೇದ, ಒಂದು ನಂಬಿಕೆಯಿಂದ ಇನ್ನೊಂದರ ಮೇಲಿರುವ ದ್ವೇಷ ಭಾವನೆಗೆ ವೇದಕಾಲೀನ ಯುಗದಲ್ಲಿ ಅವಕಾಶ ಇರಲಿಲ್ಲ. ಅಂತಹ ಉದಾತ್ತ ಸಮಾಜವನ್ನು ನಿರ್ಮಾಣ ಮಾಡುವ ಅವಕಾಶವೂ ನಮ್ಮ ಮುಂದಿದೆ.
ಇದೆಲ್ಲ ವಿವರಗಳು ನಮಗೆ ʼಭಾರತʼ ಮೂಲದಿಂದ ಸಿಗುತ್ತವೆ. ಇಂಡಿಯಾ ಎಂದು ಹೇಳಿದರೆ ಅದು ಕೇವಲ 300 -400 ವರ್ಷದ ಇತಿಹಾಸವನ್ನಷ್ಟೆ ಪರಿಚಯಿಸುತ್ತದೆ. ಆದರೆ ಆ ಸಮಯಕ್ಕೆ ಹಿಂದೂ ಧರ್ಮದ ಆಚರಣೆಯಲ್ಲೂ ಅನೇಕ ಲೋಪಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಭಾರತ ಎಂದ ಕೂಡಲೆ ಸಾವಿರಾರು ವರ್ಷದ ವೈಭವಯುತ ಪ್ರಭಾವಳಿಯನ್ನು ನಮಗೆ ನೀಡುತ್ತದೆ. ಈ ನಿಟ್ಟಿನಲ್ಲಿ ಎನ್ ಸಿ ಇ ಆರ್ ಟಿ ಪ್ರಸ್ತಾವನೆಯನ್ನು ನೋಡಬೇಕು. ಭಾರತೀಯ ಜ್ಞಾನ ಪರಂಪರೆಯು ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ಮುಂದಿನ ವಾರದ ಲೇಖನದಲ್ಲಿ ವಿಸ್ತೃತವಾಗಿ ಚರ್ಚೆ ನಡೆಸೋಣ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top