ಸೋಷಿಯಲ್ ಇಂಜಿನಿಯರಿಂಗ್ ಎಂಬ ರಾಜಕೀಯ ಲೆಕ್ಕಾಚಾರ (3. 06. 2017)

ಸಿದ್ಧಾಂತಗಳನ್ನು ತೇಲಿಬಿಡುವುದು ಸುಲಭ. ಆದರೆ ಅದರ ಉದ್ದೇಶ, ಆಶಯವನ್ನು ಕಾರ್ಯರೂಪಕ್ಕೆ ತರುವಾಗಲೇ ಅಸಲಿಯತ್ತು ಬಹಿರಂಗವಾಗುವುದು. ಆಡಳಿತದ ಸ್ಥಾನಗಳನ್ನು ನಿರ್ಧರಿಸುವಾಗ ಈವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಮೀರಿ ಹೊಸ ಹೆಜ್ಜೆಯಿಡುವ ಧೈರ್ಯ ಮಾಡಿದರೆ ಬದಲಾವಣೆಯನ್ನು ನಿರೀಕ್ಷಿಸಬಹುದು.

ಸೋಷಿಯಲ್ ಇಂಜಿನಿಯರಿಂಗ್ ಎನ್ನುವ ಪದ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವುದನ್ನು ಎಲ್ಲರೂ ಗಮನಿಸಿಯೇ ಇರುತ್ತೀರಿ. ಅದರ ಅರ್ಥ ಬಹಳ ವಿಶಾಲ. ವ್ಯಾಪ್ತಿಯ ಹರವು ಬಹಳ ದೊಡ್ಡದು. ಆದರೆ ಅದರ ಬಳಕೆ ಮಾತ್ರ ರಾಜಕೀಯ ವಲಯದಲ್ಲಿ ಮತ್ತು ಅದಕ್ಕೆ ಪೂರಕವಾದ ಸಾಮಾಜಿಕ ವಲಯದಲ್ಲಿ ಹೆಚ್ಚು. ಮೊದಮೊದಲು ಬುದ್ಧಿಜೀವಿಗಳು ಅದರಲ್ಲೂ ದಲಿತಪರ ಬುದ್ಧಿಜೀವಿಗಳು ಎಂಬ ಹಣೆಪಟ್ಟಿ ಹೊತ್ತವರು ಮಾತ್ರ ಬಳಸುತ್ತಿದ್ದ ಆ ಪದವನ್ನು ನಂತರ ರಾಜಕೀಯ ಪಕ್ಷಗಳು, ನಾಯಕರು ಹೆಚ್ಚು ಹೆಚ್ಚಾಗಿ ಬಳಸತೊಡಗಿದರು.

ಹಾಗಾದರೆ ಈ ಸೋಷಿಯಲ್ ಇಂಜಿನಿಯರಿಂಗ್ ಕಲ್ಪನೆಯ ಅರ್ಥವ್ಯಾಖ್ಯಾನವೇನು? ಅದರ ಹಿಂದಿನ ಲೆಕ್ಕಾಚಾರ ಏನು? ಪರಿಣಾಮವೇನು? ಈ ಮೂರ್ನಾಲ್ಕು ಮುಖಗಳಲ್ಲಿ ನಾವು ತುಸು ಆಳಕ್ಕೆ ಹೋಗಿ ಆಲೋಚನೆ ಮಾಡುವುದು ಉತ್ತಮ.

ಅದರ ಅರ್ಥ ಇಷ್ಟು….

ಈಗಾಗಲೇ ಬಳಕೆಯಲ್ಲಿರುವ ಮೀಸಲು ಅಥವಾ ಮೀಸಲಾತಿ ಎಂಬ ವ್ಯವಸ್ಥೆಯನ್ನು ಅದರ ಹಿಂದಿರುವ ಭಾವನಾತ್ಮಕ ಅಂಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವುದು ಅಥವಾ ಅದರ ಲಾಭ ಮಾಡಿಕೊಳ್ಳುವುದನ್ನು ಕೆಲ ಜಾಣ/ವಿದ್ಯಾವಂತ/ಪದವೀಧರ ವ್ಯಕ್ತಿಗಳು ಸೋಷಿಯಲ್ ಇಂಜಿನಿಯರಿಂಗ್ ಎಂದು ಕರೆದರು.

ಲೆಕ್ಕಾಚಾರ ಏನು?

ಲೆಕ್ಕಾಚಾರ ಸ್ಪಷ್ಟ. ಪಕ್ಕಾ ವ್ಯಾಪಾರದ ಲೆಕ್ಕಾಚಾರ. ಯಾರ ಮೂಗಿಗೆ ಎಷ್ಟು ತುಪ್ಪ ಹಚ್ಚಿದರೆ ಪ್ರತಿಫಲ ಎಷ್ಟು ಮತ್ತು ಹೇಗೆ ಸಿಗುತ್ತದೆ ಎಂಬುದು. ಇದೊಂದು ರೀತಿಯ ಆಧುನಿಕ ಮಾರ್ಕೆಟಿಂಗ್ ತಂತ್ರಗಾರಿಕೆ ಎಂದರೆ ತಪ್ಪಾಗಲಿಕ್ಕಿಲ್ಲ. ನಯನಾಜೂಕಿನ ಈ ವ್ಯಾಖ್ಯಾನದ ಕುರಿತು ನೇರವಾಗಿ ಹೇಳುವುದಾದರೆ ಯಾವ ಜಾತಿ ಅಥವಾ ಸಮುದಾಯವನ್ನು ರಾಜಕೀಯವಾಗಿ ಹೇಗೆ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಎಂಬುದನ್ನು ಪರೋಕ್ಷವಾಗಿ ವಿವರಿಸಲು ಸೋಷಿಯಲ್ ಇಂಜಿನಿಯರಿಂಗ್ ಎಂಬ ಕವಚವನ್ನು ತೊಡಿಸಿದರು.

ಪರಿಣಾಮವೇನು?

ಬಹಳ ಸ್ಪಷ್ಟ. ಈ ಲೆಕ್ಕಾಚಾರ ರಾಜಕೀಯದಲ್ಲಿ ಮಾತ್ರ ಬಳಕೆ ಆಯಿತು. ಪರಿಣಾಮವಾಗಿ ಕೆಲ ಪಕ್ಷಗಳು ಮತ್ತು ವೈಯಕ್ತಿಕವಾಗಿ ಕೆಲವು ರಾಜಕೀಯ ನಾಯಕರು ಯಥೇಚ್ಛ ಅಧಿಕಾರ ಅನುಭವಿಸಿದರು. ಅದಕ್ಕಿಂತ ಹೆಚ್ಚೇನೂ ಇಲ್ಲ.

ಅದಕ್ಕೆ ಪೂರಕವಾಗಿ ಈ ಕೆಳಗಿನ ಒಂದೆರಡು ಪ್ರಕರಣಗಳನ್ನು ಉದಾಹರಣೆ ರೂಪದಲ್ಲಿ ನಾವು ನೋಡಬಹುದು.

ಮುಂದಿನ ತಿಂಗಳು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ವಿಪಕ್ಷಗಳು ಲೋಕಸಭೆಯ ಮಾಜಿ ಸ್ಪೀಕರ್ ಮೀರಾಕುಮಾರ್ ಹೆಸರನ್ನು ತೇಲಿಬಿಡುತ್ತಿವೆ. ಹಾಗೆ ನೋಡಿದರೆ ಅವರಿಗೆ ಆ ಸ್ಥಾನ ಅಲಂಕರಿಸುವ ಅರ್ಹತೆ ಇದೆ. ಆದರೆ ಅವರ ಹೆಸರನ್ನು ಮುಂದಿಡುತ್ತಿರುವವರು ಅವರ ಅರ್ಹತೆಯನ್ನು ಪರಿಗಣಿಸುತ್ತಿಲ್ಲ. ಮೀರಾ ಕುಮಾರ್ ದಲಿತ ಸಮುದಾಯಕ್ಕೆ ಸೇರಿದ ಹಿರಿಯ ನಾಯಕ ದಿವಂಗತ ಬಾಬು ಜಗಜೀವನರಾಂ ಪುತ್ರಿ ಎಂಬುದನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೀರಾಕುಮಾರರು ರಾಷ್ಟ್ರಪತಿ ಆಗಲು ಅವರ ಅರ್ಹತೆ ಮಾನದಂಡವಾಗಬೇಕೇ ಹೊರತು ಅವರ ಜಾತಿಯ ಹಿನ್ನೆಲೆ ಅಲ್ಲವೇ ಅಲ್ಲ. ಕಾರಣ ಇಷ್ಟೆ, ಅವರು ಜಾತಿಯಿಂದ ಹಿಂದುಳಿದವರಾದರೂ ಅನುಕೂಲಗಳಿಂದ, ಅನೇಕ ವರ್ಷಗಳ ಕಾಲ ಅನುಭವಿಸಿದ ಅಧಿಕಾರದ ಕಾರಣದಿಂದ ಮುಂದುವರಿದವರು ಅಂತಲೇ ಪರಿಗಣಿಸಬೇಕಾಗುತ್ತದೆ.

ದೂರದ ಮಾತು ಯಾತಕ್ಕೆ, ನಮ್ಮದೇ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಮುಂತಾದವರೂ ಕೂಡ ಲೋಕಸಭೆ/ವಿಧಾನಸಭೆ ಪ್ರವೇಶ ಮಾಡಲು ಮೀಸಲು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆ ಆಗಬಾರದಲ್ಲವೇ? ಎರಡು ಕಾರಣಕ್ಕೆ ಈ ಮಾತನ್ನು ಇಲ್ಲಿ ಹೇಳಬೇಕಿದೆ. ಮೊದಲನೆಯದು ಖರ್ಗೆ, ಮೀರಾಕುಮಾರ್ ಮುಂತಾದವರೆಲ್ಲ ಈಗಾಗಲೇ ಸಾಕಷ್ಟು ಅಧಿಕಾರ, ಅನುಕೂಲಗಳನ್ನು ಅನುಭವಿಸಿದವರು; ರಾಜಕೀಯವಾಗಿ ಸಾಕಷ್ಟು ಪ್ರಭಾವವನ್ನೂ ಗಳಿಸಿಕೊಂಡಿದ್ದಾರೆ. ಅದಕ್ಕೋಸ್ಕರ ಮೀರಾಕುಮಾರ್, ಖರ್ಗೆ, ಪರಮೇಶ್ವರ್, ರಮೇಶ ಜಿಗಜಿಣಗಿ ಅಥವಾ ಇಂಥ ಹತ್ತಾರು ನಾಯಕರು ಸ್ಪರ್ಧೆಗೆ ತಾವು ಸಾಮಾನ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮೀಸಲು ಕ್ಷೇತ್ರವನ್ನು ಹೊಸಬರಿಗೆ/ಅವಕಾಶ ವಂಚಿತರಿಗೆ/ಯುವಕರಿಗೆ/ದಲಿತ ಹಿಂದುಳಿದ ಮಹಿಳೆಯರಿಗೆ ಬಿಟ್ಟುಕೊಟ್ಟರೆ ಈ ಮೀಸಲು ಪದಕ್ಕೆ ನಿಜವಾಗಲೂ ಒಂದು ಅರ್ಥ ಬರುತ್ತದೆ. ಅದಕ್ಕಿಂತ ಮುಖ್ಯವಾಗಿ ಹಿಂದುಳಿದ ವರ್ಗದ ನಾಯಕರು ಅರ್ಹತೆಯ ಮೇಲೆ ಸಾಮಾನ್ಯ ಕ್ಷೇತ್ರಗಳಿಂದ ಯಾವುದೇ ಪಕ್ಷದಿಂದ ಗೆಲ್ಲುವಂತಾದರೆ ಶಾಸನಸಭೆಗಳಲ್ಲಿ ಆ ವರ್ಗದವರ ಪ್ರಾತಿನಿಧ್ಯವೂ ಹೆಚ್ಚಾದಂತಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಮೀಸಲು ಕ್ಷೇತ್ರದಲ್ಲಿ ಹೊಸಬರು ಸ್ಪರ್ಧೆ ಮಾಡಿ, ಸಾಮಾನ್ಯ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಪ್ರಸಿದ್ಧ ನಾಯಕರು ಸ್ಪರ್ಧಿಸುವಂತಾದರೆ ಸಾಮಾಜಿಕ ಸಾಮರಸ್ಯಕ್ಕೂ ಅನುಕೂಲ ಆಗುತ್ತದೆ. ಸೋಷಿಯಲ್ ಇಂಜಿನಿಯರಿಂಗ್ ಪದದ ಆಶಯ ನಿಜಾರ್ಥದಲ್ಲಿ ಆಚರಣೆಗೆ ಬಂದಂತೆಯೂ ಆಗುತ್ತದೆ.

ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ ಎಂದಾದರೆ ಅಲ್ಲಿ ಪಕ್ಷಗಳ ನಾಯಕರನ್ನು ಅಥವಾ ನೇತೃತ್ವವನ್ನು ನಿರ್ಣಯ ಮಾಡಲು ಜಾತಿಯ ಹಿನ್ನೆಲೆಯೇ ಪ್ರಮುಖ ಮಾನದಂಡ ಆಗುವುದನ್ನು ನಾವು ಇದುವರೆಗೂ ನೋಡುತ್ತ ಬಂದಿದ್ದೇವೆ. ಒಂದು ವೇಳೆ ಸಮರ್ಥ ನೇತೃತ್ವ ನೀಡುವ ಸಾಮರ್ಥ್ಯ ಇದ್ದರೂ ಅದು ಗೌಣವಾಗಿ ಅಂಥ ನಾಯಕರ ಜಾತಿ/ಸಮುದಾಯದ ಹಿನ್ನೆಲೆಯೇ ಪ್ರಮುಖ ಮಾನದಂಡ ಆಗುತ್ತಿರುವುದನ್ನೂ ಕಾಣುತ್ತಿದ್ದೇವೆ. ಈ ಮಾತಿಗೆ ಪೂರಕವಾದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಇತ್ತೀಚೆಗೆ ಮೈಸೂರಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಅಲ್ಲಿ ವಿಧಾನಪರಿಷತ್ ಸದಸ್ಯ, ಹಿರಿಯ ನಾಯಕ ಕೆ.ಬಿ. ಶಾಣಪ್ಪ ಉಪಸ್ಥಿತರಿದ್ದರು. ಅವರನ್ನು ಪರಿಚಯಿಸುವಾಗಲೋ, ಸ್ವಾಗತಿಸುವಾಗಲೋ ಪಕ್ಷದ ನಾಯಕಿ ಶೋಭಾ ಕರಂದ್ಲಾಜೆ ಅವರು ದಲಿತ ನಾಯಕ ಎಂದು ಹೇಳಿದ್ದಕ್ಕೆ ಶಾಣಪ್ಪ ಕೆಂಡಾಮಂಡಲರಾದರಂತೆ. ‘ನನ್ನ ಜೀವನದ ಬಹಪಾಲು ಸಮಯವನ್ನು ರಾಜಕೀಯದಲ್ಲಿ ಕಳೆದಿದ್ದೇನೆ. ಮಂತ್ರಿಯಾಗಿ, ಸಂಸದನಾಗಿ ಕೆಲಸ ಮಾಡಿದ್ದೇನೆ. ಇದೀಗ ವಿಧಾನಪರಿಷತ್ತಿನಲ್ಲಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಆದರೂ ನನ್ನನ್ನು ಕೇವಲ ದಲಿತ ನಾಯಕ ಎಂದೇಕೆ ಸೀಮಿತಗೊಳಿಸುತ್ತಿದ್ದೀರಿ? ಹಿರಿಯ ನಾಯಕ ಎಂದೇಕೆ ಹೇಳುತ್ತಿಲ್ಲ?’ ಎಂದು ಪ್ರಶ್ನೆ ಮಾಡಿದರಂತೆ. ಶಾಣಪ್ಪನವರ ಈ ಮಾತುಗಳ ಹಿಂದಿನ ಭಾವನೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ?

ಕೇವಲ ಅಪವಾದವನ್ನೇ ಹೇಳಿದರೆ ಹೇಗೆ. ಆಗುತ್ತಿರುವ ಬದಲಾವಣೆಯನ್ನೂ ಗುರುತಿಸಬೇಕು ತಾನೆ? ಅದಕ್ಕೆ ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಉದಾಹರಿಸಬಹುದು. ಎರಡು ವರ್ಷದ ಹಿಂದೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದು ಬಿಜೆಪಿ ಸರಳ ಬಹುಮತದ ಸಮೀಪಕ್ಕೆ ಬಂತು. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಸಹಜ ಆಯ್ಕೆ ಮತ್ತು ಇದುವರೆಗಿನ ಸಂಪ್ರದಾಯ ಏನೆಂದರೆ ಆತ ಬಹುಸಂಖ್ಯಾತ ಮರಾಠ ಸಮುದಾಯಕ್ಕೆ ಸೇರಿದವರಾಗಿರಬೇಕು. ಆದರೆ ಈ ಬಾರಿ ಹಾಗಾಗಲಿಲ್ಲ. ಅತಿಚಿಕ್ಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಗಾದಿಯೇರಿದರು. ಬಹುಮತ ಬಂದ ಬಳಿಕ ಮುಖ್ಯಮಂತ್ರಿ ಮಾಡಿದ್ದಲ್ಲ, ಚುನಾವಣೆಪೂರ್ವದಲ್ಲಿಯೇ ಫಡ್ನವೀಸ್​ರನ್ನು ಪಕ್ಷದ ಮಹಾರಾಷ್ಟ್ರ ಘಟಕ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅಮಿತ್ ಷಾ ಮತ್ತು ನರೇಂದ್ರ ಮೋದಿ ದೊಡ್ಡ ರಿಸ್ಕನ್ನು ತೆಗೆದುಕೊಂಡಿದ್ದರು. ಕೇವಲ ಅದೊಂದೇ ಉದಾಹರಣೆಯಲ್ಲ, ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಜಾತಿಯ ಹಿನ್ನೆಲೆಯಿಂದ ನೋಡಿದರೆ ಯಾವುದಾದರೂ ಜಾಟ ಸಮುದಾಯದ ನಾಯಕನನ್ನು ಮುಖ್ಯಮಂತ್ರಿಯಾಗಿಸಬೇಕು. ಆದರೆ ಹಾಗಾಗಲಿಲ್ಲ. ಅನೇಕ ವರ್ಷಗಳ ಕಾಲ ಎಲೆಮರೆಯ ಕಾಯಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಅಲ್ಪಸಂಖ್ಯಾತ ಪಂಜಾಬಿ ಸಮುದಾಯಕ್ಕೆ ಸೇರಿದ ಮನೋಹರಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದರು. ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಪಡೆಯಿತು. ಆ ರಾಜ್ಯದಲ್ಲಿ ಬುಡಕಟ್ಟು ಸಮುದಾಯದವರೇ ಬಹುಸಂಖ್ಯಾತರು. ಚುನಾವಣಾ ರಾಜಕೀಯದಲ್ಲಿ ನಿರ್ಣಾಯಕರೂ ಇವರೇ. ಹೀಗಾಗಿ ಇದುವರೆಗೆ ಆ ರಾಜ್ಯದಲ್ಲಿ ಬುಡಕಟ್ಟು ಸಮುದಾಯದವನಲ್ಲದ ಬೇರೆ ನಾಯಕ ಮುಖ್ಯಮಂತ್ರಿಯಾದ ಉದಾಹರಣೆಯಿಲ್ಲ. ಆದರೆ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯಕ್ಕೆ ಸೇರದ ರಘುವರ ದಾಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲಾಯಿತು. ಅವರೀಗ ಆ ರಾಜ್ಯದಲ್ಲಿ ಸುಗಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ.

ಇವು ಕೆಲವು ಅಧಿಕಾರ ಹಿಡಿದ ಕಡೆಗಳಲ್ಲಿನ ವಿದ್ಯಮಾನ. ಅದರ ಬೆನ್ನಲ್ಲೇ ಉತ್ತರಪ್ರದೇಶ ಚುನಾವಣೆ ಎದುರಾಯಿತು. ‘ಇಷ್ಟು ದೊಡ್ಡ ರಾಜ್ಯದ ಚುನಾವಣೆಗೆ ಅಣಿಯಾಗುತ್ತಿದ್ದೀರಿ. ಇನ್ನೂ ಏಕೆ ಮುಖ್ಯಮಂತ್ರಿ ಅಭ್ಯರ್ಥಿ ಘೊಷಣೆ ಮಾಡಲಿಲ್ಲ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಪತ್ರಕರ್ತರು ಕೇಳಿದರು. ಆಗ ಅವರು, ‘ನಮ್ಮಲ್ಲಿ ಅನೇಕ ನಾಯಕರಿದ್ದಾರೆ. ಅವರಲ್ಲೊಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಿಂತ ಮುಖ್ಯವಾಗಿ ನಾವು ಯಾರನ್ನು ಅಧಿಕಾರ ಸ್ಥಾನದಲ್ಲಿ ಸ್ಥಾಪನೆ ಮಾಡುತ್ತೇವೋ ಅವರು ನಾಯಕರಾಗಿ ಹೊರಹೊಮ್ಮುತ್ತಾರೆ. ನಾವು ಅನೇಕ ನಾಯಕರನ್ನು ಬೆಳೆಸುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು. ಒಂದು ರೀತಿಯಲ್ಲಿ ಇದು ಅಹಮಿಕೆಯ ರೀತಿಯಲ್ಲಿ ಕಂಡರೂ ಸಹ ತಮ್ಮ ಸಹವರ್ತಿಗಳ ಮೇಲಿರುವ ಭರವಸೆಯನ್ನೂ ಧ್ವನಿಸುತ್ತದೆ ಎಂಬುದು ಸಹ ಅಷ್ಟೇ ಸತ್ಯ.

ಮುಂದೆ ಏನಾಯಿತು ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಶೇ.85ರಷ್ಟು ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರ ಹಿಡಿಯಿತು. ಅದೂ ಸಾಮೂಹಿಕ ನಾಯಕತ್ವದ ಅಡಿಯಲ್ಲಿ. ಚುನಾವಣೆ ಮುಗಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರನ್ನು ಹುಡುಕಲು ತಡಕಾಡಬೇಕಾದ ಸ್ಥಿತಿಯೇನೂ ಇರಲಿಲ್ಲ. ಹಲವು ಆಯ್ಕೆಗಳಲ್ಲಿ ಯಾರನ್ನು ಮಾಡುವುದು ಎಂಬುದೇ ಸವಾಲಿನ ಕೆಲಸ ಆಯಿತು. ಕೊನೆಗೂ ಹೊರಹೊಮ್ಮಿದ್ದು ಅಚ್ಚರಿ ಆಯ್ಕೆ. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದರು. ಐದು ಬಾರಿ ಗೋರಖ್​ಪುರದ ಸಂಸದರಾಗಿದ್ದು ಬಿಟ್ಟರೆ ಅವರಿಗೆ ಬೇರೆ ಆಡಳಿತದ ಅನುಭವ ಇರಲಿಲ್ಲ. ಆದರೂ ಯೋಗಿ ಉತ್ತಮ ಆರಂಭ ಮಾಡಿದ್ದಾರೆ. ಹೊಸ ಭರವಸೆಯಾಗಿ ಹೊರಹೊಮ್ಮಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ 150 ಗಂಟೆಗಳಲ್ಲಿ 50 ಪ್ರಮುಖ ನಿರ್ಧಾರಗಳನ್ನು ಘೊಷಿಸಿದ್ದಾರೆ. ಎಲ್ಲವೂ ಐವತ್ತು ವರ್ಷಗಳ ಹಿಂದೆಯೇ ಆಗಬೇಕಿದ್ದ ಕೆಲಸಗಳು.

ಹೆಗಲಿಗೆ ಜೋಳಿಗೆ ಹಾಕಿದ್ದ ಸನ್ಯಾಸಿಯಲ್ಲೂ ಉತ್ತಮ ಆಡಳಿತಗಾರ ಅವಿತುಕೊಂಡು ಕುಳಿತುಕೊಂಡಿದ್ದ ಎಂಬುದು ಯಾರಿಗೆ ಗೊತ್ತಿತ್ತು ಹೇಳಿ?

ಆಡಳಿತದ ವಿಷಯದಲ್ಲಿ ಜಾತಿಗಿಂತ ನೀತಿ ಮತ್ತು ರೀತಿಗಳು ಮಿಗಿಲಾದರೆ ಅದಕ್ಕಿಂತ ದೊಡ್ಡ ಕ್ರಾಂತಿ ಯಾವುದಿದ್ದೀತು?

(ಲೇಖಕರು ‘ವಿಜಯವಾಣಿ’ ಸಂಪಾದಕರು)

(ಈ ಹಿಂದಿನ ಬರಹಗಳು www.konemane.com ನಲ್ಲಿ ಲಭ್ಯ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top