ಸಿಎಎ ಏಕೆ ಬೇಕು ಎನ್ನುತ್ತಿರುವವರು ʼರಜಾಕಾರ್ʼ ಸಿನಿಮಾ ನೋಡಿ

ನೊಂದ ಸಮುದಾಯಕ್ಕೆ ಪೌರತ್ವ ನೀಡುವ ಪ್ರಯತ್ನವೇ ಹೊರತು, ಸಿಎಎ ಮೂಲಕ ದೇಶದ ಯಾವುದೇ ನಾಗರಿಕರ ಪೌರತ್ವ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕೆಲವು ಮುಸ್ಲಿಮರ ಮತ ಲಭಿಸುತ್ತದೆ ಎಂದು ಕಾಂಗ್ರೆಸ್ ಇದನ್ನು ವಿರೋಧಿಸುತ್ತಿರುವುದು ದುಷ್ಟತನ.
**************************
ಭಾರತದ ಮೇಲೆ ದಾಳಿ ಮಾಡಿದವರು ಅನೇಕರು. ಬಹುಶಃ ದಾಳಿ ಮಾಡದೇ, ಇಲ್ಲಿನ ಆಸ್ತಿ ಅಂತಸ್ತನ್ನು ಕೊಳ್ಳೆ ಹೊಡೆಯದವರು ಯಾರು ಎಂದು ಹುಡುಕಬೇಕೆನ್ನುವಷ್ಟು, ಇಂತಹ ಸಂಪದ್ಭರಿತ ದೇಶವನ್ನು ಲೂಟಿ ಮಾಡಿ ಹೊರಟು ಹೋದವರೂ ಇದ್ದಾರೆ. ಆದರೆ ಇಸ್ಲಾಮಿಕ್ ಆಕ್ರಮಣ (Islamic invasion) ಎನ್ನುವುದು ಈ ದಾಳಿಕೋರರ ಪೈಕಿ ವಿಶೇಷವಾದದ್ದು. ಈ ದಾಳಿಕೋರರಿಗೆ ಹಣದ ಆಸೆ ಮಾತ್ರ ಇರಲಿಲ್ಲ. ಹಣಕ್ಕಿಂತಲೂ ಹೆಚ್ಚಾಗಿ ಅವರಲ್ಲಿದ್ದದ್ದು ಮತಾಂಧತೆ (fanaticism) . ತಮ್ಮ ಮತವನ್ನು ವಿಸ್ತಾರ ಮಾಡುತ್ತಲೇ ಹೋಗಬೇಕು ಎನ್ನುವ ತುಡಿತವೇ, ಭಾರತದ ಮೇಲಿನ ದಾಳಿಗೆ ಪ್ರಮುಖ ಕಾರಣ.
ಸುಮಾರು 700ಕ್ಕೂ ಹೆಚ್ಚು ವರ್ಷ ಕಾಲ ಇಸ್ಲಾಮಿಕ್ ಆಕ್ರಮಣಕಾರರು ಈ ದೇಶದಲ್ಲಿ ಆಳ್ವಿಕೆ ನಡೆಸಿದ್ದಾರೆ. ದೇಶದ ಮೇಲೆ ಎಂದರೆ ಇಡೀ ಭೂಭಾಗದ ಮೇಲಲ್ಲ. ಕೆಲವೊಮ್ಮೆ ದಕ್ಷಿಣದಲ್ಲಿ, ಕೆಲವೊಮ್ಮೆ ಉತ್ತರದಲ್ಲಿ, ಕೆಲವು ಸಂಸ್ಥಾನಗಳ ಪ್ರದೇಶದಲ್ಲಿ… ಹೀಗೆ ವಿವಿಭ ಭೂಭಾಗಗಳಲ್ಲಿ ಆಳ್ವಿಕೆ ನಡೆಸುತ್ತಲೇ ಬಂದರು. ಆದರೆ ಭಾರತದ ರಾಜಮಹಾರಾಜರುಗಳು ಎಂದಿಗೂ ಇಸ್ಲಾಮಿಕ್ ಆಕ್ರಮಣಕಾರರು ನಿರಾಳವಾಗಿ ಆಳ್ವಿಕೆ ನಡೆಸಲು ಬಿಡಲಿಲ್ಲ. ಸಣ್ಣಪುಟ್ಟ ಬಂಡಾಯಗಳಿಂದ ಹಿಡಿದು ಯುದ್ಧಗಳವರೆಗೆ ಇಸ್ಲಾಮಿಕ್ ದಾಳಿಕೋರರು ಪ್ರತಿದಿನವೂ ಜಾಗೃತರಾಗಿಯೇ ಇರುವಂತೆ ನೋಡಿಕೊಂಡರು. ಆದರೆ ಸ್ವಾತಂತ್ರ್ಯ ಲಭಿಸುವ ಹೊಸ್ತಿಲಲ್ಲಿ ಈ ದೇಶದಲ್ಲಿದ್ದ ಮುಸ್ಲಿಂ ನಾಯಕರಲ್ಲಿ, ಪ್ರತ್ಯೇಕತೆಯ ಬೀಜ ಮೊಳಕೆಯೊಡೆಯಿತು. ತಾವು ಯಾವಾಗಲೂ ಆಳ್ವಿಕೆ ನಡೆಸುತ್ತಿದ್ದೆವು, ಇನ್ನು ಭಾರತದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪನೆಗೆ ಅವಲಕಾಶವಿಲ್ಲ. ಹಾಗಾಗಿ ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುವ ಆಲೋಚನೆಯೊಂದಿಗೆ ಪಾಕಿಸ್ತಾನ ನಿರ್ಮಿಸಿಕೊಂಡರು.
ಈ ಲೇಖನ ಪ್ರಕಟವಾಗುತ್ತಿರುವ ದಿನಕ್ಕೊಂದು (ಮಾರ್ಚ್ 17) ವಿಶೇಷವಿದೆ. ಒಂದೆಡೆ ದೇಶವಿಭಜನೆಯ (India Partition) ನಂತರ ಪಾಕಿಸ್ತಾನ ಸೃಜನೆಯಾದರೆ, ದೇಶದ ಹೃದಯ ಭಾಗದಲ್ಲಿದ್ದ ಹೈದರಾಬಾದ್‌ನಲ್ಲಿ ಆಳ್ವಿಕೆ ಮಾಡುತ್ತಿದ್ದ ನಿಜಾಮನಿಗೂ (Hyderabad Nizam) ಪ್ರತ್ಯೇಕ ಇಸ್ಲಾಮಿಕ್ ದೇಶದ ಕನಸು ಬಿತ್ತು. ತಾನೇ ಹೈದರಾಬಾದನ್ನು ಆಳುತ್ತೇನೆ, ಭಾರತದ ಜತೆಗೆ ವಿಲೀನ ಮಾಡುವುದಿಲ್ಲ ಎಂದು ಹಠ ಹಿಡಿದ. ಅಷ್ಟೆ ಅಲ್ಲ, ಭಾರತದ ಜತೆಗೆ ವಿಲೀನ ಮಾಡಬಾರದೆಂದರೆ ಮೊದಲನೆಯದಾಗಿ ತನ್ನ ಸೈನ್ಯ ಗಟ್ಟಿಯಾಗಬೇಕು ಹಾಗೂ ಇಲ್ಲಿ ವಾಸಿಸುವ ಜನರು ತನ್ನನ್ನು ಬೆಂಬಲಿಸುವವರಾಗಿರಬೇಕು ಎನ್ನುವುದನ್ನು ಅರಿತ.
ಈ ದೇಶದ ಮೇಲೆ ಇಸ್ಲಾಮಿಕ್ ಆಕ್ರಮಣಕಾರರು ಎಷ್ಟೇ ಶತಮಾನ ಆಳ್ವಿಕೆ ನಡೆಸಿದರೂ ಭಾರತದ ಸಾಮಾನ್ಯ ಹಿಂದೂಗಳೂ ಅವರನ್ನು ಎಂದಿಗೂ ತಮ್ಮನ್ನು ಆಳುವವರು ಎಂದು ಮನಸಾ ಪರಿಗಣಿಸಲೇ ಇಲ್ಲ. ಹೈದರಾಬಾದ್ ನಿಜಾಮನ ಪ್ರದೇಶದಲ್ಲೂ ಹೀಗೇ ಆಯಿತು. ಹಿಂದೂಗಳು ಭಾರತಕ್ಕೆ ಸೇರುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಗೊತ್ತಾಗಿ ಅಲ್ಲಿನ ಹಿಂದೂಗಳಿಗೆ ಚಿತ್ರಹಿಂಸೆ ನೀಡಲಾರಂಭಿಸಿದ. ತನ್ನ ಅರೆಸೇನಾ ಪಡೆಯಾದ ರಜಾಕಾರರಿಗೆ (Razakar) ಈ ಕಾರ್ಯವನ್ನು ಒಪ್ಪಿಸಿ ತಾನು ಅರಮನೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದೆ. ಹಿಂದೂಗಳು ಇಸ್ಲಾಂ ಮತವನ್ನು ಸ್ವೀಕರಿಸುವಂತೆ ನೀಡಿದ ಚಿತ್ರಹಿಂಸೆಯನ್ನು ಈಗಿನ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಜನರು ಅನುಭವಿಸಿದರು. ಕಲ್ಯಾಣ ಕರ್ನಾಟಕ ಭಾಗದ ಜನರ ನೆನಪಿನಲ್ಲಿ ಈ ಕಹಿ ಘಟನೆಗಳು ಇನ್ನೂ ಮಾಸಿಲ್ಲ. ಇದೀಗ ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿಯ (ಎಐಸಿಸಿ) ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸ್ವತಃ ಈ ರಜಾಕಾರರು ಆಕ್ರಮಣದಿಂದ ಕೂದಲೆಳೆ ಅಂತರದಲ್ಲಿ ಬಹುಕುಳಿದವರು.
ಅವರ ಗ್ರಾಮದ ಮೇಳೆ ರಜಾಕಾರರು ದಾಳಿ ನಡೆಸಿದ ಸಂದರ್ಭದಲ್ಲಿ ಖರ್ಗೆ ಅವರಿಗಿನ್ನೂ 7 ವರ್ಷ. ಅವರ ಗುಡಿಸಿಲಿಗೆ ರಜಾಕಾರರು ಬೆಂಕಿ ಹೆಚ್ಚಿದ್ದರಿಂದ ಅವರ ತಾಯಿ ಹಾಗೂ ತಂಗಿ ಇಬ್ಬರೂ ನಿಧನರಾದರು. ದೂರದಲ್ಲಿ ಆಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ತಂದೆ ಮಾಪಣ್ಣ ಇಬ್ಬರೂ ಬದುಕುಳಿದರು. ನಿಜಾಮನನ್ನು ಸೋಲಿಸಿ ಭಾರತದೊಂದಿಗೆ ವಿಲೀನವಾಗುವಂತೆ ಮಾಡಿದ ದಿನವೇ ಮಾರ್ಚ್ 17. ಸರ್ದಾರ್ ವಲ್ಲಭಭಾಯಿ ಪಟೇಲರ ದೂರದೃಷ್ಟಿಯ ಕಾರಣದಿಂದಾಗಿ, ಭಾರತದೊಳಗೇ ಇಸ್ಲಾಮಿಕ್ ರಾಷ್ಟ್ರವಾಗುವ ಅಪಾಯ ತಪ್ಪಿತ್ತು. ಇದೇ ದಿನವನ್ನು ಅನೇಕ ವರ್ಷಗಳಿಂದ ಹೈದರಾಬಾದ್ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷದಿಂದ ಮಾರ್ಚ್ 17ನ್ನು ದೇಶಾದ್ಯಂತ ʼಹೈದರಾಬಾದ್ ಮುಕ್ತಿ ದಿನʼವನ್ನಾಗಿ ಆಚರಿಸಲು ಕೇಂದ್ರದ ನರೇಂದ್ರ ಮೋದಿಯವರ (PM Narendra Modi) ನೇತೃತ್ವದ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ.
ಇಸ್ಲಾಮಿಕ್ ದೇಶವೊಂದು (Islamic country) ರಚನೆಯಾದರೆ ಅಲ್ಲಿನ ಇತರೆ ನಂಬಿಕೆಗಳ ಜನರ ಮೇಲೆ ಯಾವ ರೀತಿ ದೌರ್ಜನ್ಯ ಆಗುತ್ತದ ಎನ್ನುವುದಕ್ಕೆ ನಾವು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫಘಾನಿಸ್ತಾನಕ್ಕೆ ಹೋಗಲೇಬೇಕಿಲ್ಲ. ನಮ್ಮದೇ ರಾಜ್ಯದ ಕೆಲವು ಭಾಗಗಳು ಸೇರಿ ನಿಜಾಮನ ಆಡಳಿತದಲ್ಲಿದ್ದ ಪ್ರದೇಶಗಳಲ್ಲಿ ರಜಾಕಾರರು ನಡೆಸಿದ ದೌರ್ಜನ್ಯವನ್ನು ನೋಡಿದರೂ ಸಾಕು. ಇದೀಗ ದೇಶದಲ್ಲಿ ನಾಗರಿಕ (ತಿದ್ದುಪಡಿ) ಕಾಯಿದೆಯನ್ನು (citizenship amendment act – CAA) ಜಾರಿ ಮಾಡಲಾಗಿದೆ. ಈ ಕಾಯ್ದೆಯನ್ನು ಏಕೆ ಜಾರಿ ಮಾಡಬೇಕು ಎಂದು ಪ್ರಶ್ನೆ ಮಾಡುವವರು ಮಾರ್ಚ್ 16ರಂದಷ್ಟೇ ಬಿಡುಗಡೆಯಾಗಿರುವ ʼರಜಾಕಾರ್ʼ ಸಿನಿಮಾ ನೋಡಿದರೂ ಸಾಕು, ಅದರ ಅನಿವಾರ್ಯತೆ ತಿಳಿಯುತ್ತದೆ.
ದೇಶ ವಿಭಜನೆಯ ನಂತರ ತಮ್ಮ ಪಾಲಿಗೆ ಬಂದ ಪ್ರದೇಶದಲ್ಲಿದ್ದ ಹಿಂದೂಗಳನ್ನು ಅತ್ಯಂತ ಹಿಂಸಾತ್ಮಕವಾಗಿ ನಡೆಸಿಕೊಳ್ಳಲಾಯಿತು. ಸಾವಿರಾರು ಮಂದಿರಗಳು, ಗುರುದ್ವಾರಗಳು ನೆಲಸಮವಾದವು. 27 ಲಕ್ಷ ಜನರ ಮಾರಣಹೋಮ ನಡೆದು ಕೋಟ್ಯಂತರ ಜನರು ಗಡಿ ದಾಟಿ ಭಾರತಕ್ಕೆ ಓಡಿ ಬಂದರು. ಪಾಕಿಸ್ತಾನದ ಜತೆಗೆ, ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ) ಅಫಘಾನಿಸ್ತಾನಗಳಲ್ಲೂ ನಿರಂತರವಾಗಿ ಇತರೆ ಮತಗಳವರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಹೋದವು. ಇಂತಹ ದೇಶಗಳಲ್ಲಿ ದಾಳಿ ನಡೆಯುತ್ತಿರುವುದು ಮತೀಯ ಆಧಾರದಲ್ಲಿ ಎನ್ನುವುದು ಸ್ಪಷ್ಟವಾಗಿದೆ. ʻಕಾಫೀರʼರನ್ನು ಕೊಲ್ಲಬೇಕು ಅಥವಾ ಓಡಿಸಬೇಕು ಎಂಬ ತೀರ್ಮಾನದಿಂದ ನಡೆಯುತ್ತಿರುವ ಈ ಗಲಭೆಗಳಲ್ಲಿ ನೊಂದವರಿಗೆ ರಕ್ಷಣೆ ನೀಡಬೇಕು ಎಂದು ಭಾರತ ಮುಂದಾಗಿದೆ. ನೆರೆಯ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಬೌದ್ಧ, ಜೈನ, ಸಿಖ್, ಪಾರ್ಸಿ ಮತ್ತು ಕ್ರೈಸ್ತ ಮತೀಯರಿಗೆ ಭಾರತದಲ್ಲಿ ನಾಗರಿಕತೆಯನ್ನು ಕೊಡುವುದಾಗಿ ಘೋಷಿಸಿದೆ. 2014ರ ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಬಂದಿರುವ ಮೇಲ್ಕಂಡ ಎಲ್ಲಾ ಮತದವರಿಗೆ ಭಾರತದ ನಾಗರಿಕತೆ ಸಿಗಲಿದೆ. ಆದರೆ ಈ ದೇಶಗಳಿಂದ ಅಕ್ರಮವಾಗಿ ನುಸುಳಿ ಬಂದಿರುವ ಮುಸ್ಲಿಮರಿಗೆ ಈ ಅವಕಾಶ ಇಲ್ಲ. ಇದನ್ನೇ ನಮ್ಮ ದೇಶದ ಅನೇಕರು ವಿವಾದವಾಗಿಸಿದ್ದಾರೆ. ಮುಸ್ಲಿಮರಿಗೂ ನಾಗರಿಕತ್ವ ಕೊಡಿ ಎನ್ನುತ್ತಿದ್ದಾರೆ. ಈಗಾಗಲೆ ಹೇಳಿದಂತೆ, ಈ ಕಾಯ್ದೆ ಜಾರಿ ಮಾಡಿರುವುದೇ ಮತೀಯ ಆಧಾರದಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ. ಈ ಮೂರು ದೇಶಗಳಲ್ಲಿ ದೌರ್ಜನ್ಯ ನಡೆಸುತ್ತಿರುವ ಬಹುಸಂಖ್ಯಾತರೇ ಮುಸ್ಲಿಮರು. ಮತ್ತೆ ಅವರಿಗೆ ಭಾರತದ ನಾಗರಿಕತ್ವವನ್ನು ಯಾವ ಕಾರಣಕ್ಕೆ ನೀಡಬೇಕು?
ಒಂದು ನೊಂದ ಸಮುದಾಯಕ್ಕೆ ನಾಗರಿಕತ್ವ ನೀಡುವ ಪ್ರಯತ್ನವೇ ಹೊರತು, ಸಿಎಎ ಮೂಲಕ ಯಾವುದೇ ದೇಶದ ಅಥವಾ ನಮ್ಮದೇ ದೇಶದ ಯಾವುದೇ ನಾಗರಿಕರ ನಾಗರಿಕತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೌದು. ಅಕ್ರಮವಾಗಿ ಭಾರತದಲ್ಲಿ ನುಸುಳಿರುವ ರೋಹಿಂಗ್ಯಾಗಳು ಸೇರಿ ಲಕ್ಷಾಂತರ ನುಸುಳುಕೋರರನ್ನು ದೇಶದಿಂದ ಹೊರಗಟ್ಟಲಾಗುತ್ತದೆ. ಹಾಗಾದರೆ ಇದು ಸರಿಯೋ ತಪ್ಪೊ? ಈ ಕ್ರಮ ತಪ್ಪು ಎಂದಾದರೆ ಕಾಂಗ್ರೆಸಿಗರು ಅಕ್ರಮ ನುಸುಳುವಿಕೆಯನ್ನು ಸಮರ್ಥಿಸುತ್ತಿದ್ದಾರೆ ಎಂದೇ ಅರ್ಥ. ಕೆಲವು ಮುಸ್ಲಿಮರ ಮತಗಳು ಲಭಿಸುತ್ತವೆ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸಿಎಎಯನ್ನು ವಿರೋಧಿಸುತ್ತಿರುವುದು ಸರಿಯಲ್ಲ. ದೇಶದ ವಿಚಾರ ಬಂದಾಗ ಕ್ಷುಲ್ಲಕ ರಾಜಕೀಯದಿಂದ ಮೇಲೆದ್ದು ಯೋಚಿಸುವುದನ್ನು ಕಾಂಗ್ರೆಸ್ ಪಕ್ಷ ಈಗಲಾದರೂ ಕಲಿತುಕೊಳ್ಳಬೇಕು.
– ಹರಿಪ್ರಕಾಶ ಕೋಣೆಮನೆ
ವಕ್ತಾರ, ಬಿಜೆಪಿ ಕರ್ನಾಟಕ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top