ಸಮಾಜವಾಗಿ ಭಾರತ ಸೋಲುತ್ತಿರುವುದೇತಕ್ಕೆ? : ವಿಸ್ತಾರ ಅಂಕಣ

ಭಾರತ ದೇಶದ ನೇತೃತ್ವ ವಹಿಸಿರುವವರು ಒಂದು ವಿಚಾರದಲ್ಲಿ ನಿಲುವನ್ನು ವ್ಯಕ್ತಪಡಿಸದೇ ಇದ್ದರೆ ಅದರ ಬಗ್ಗೆ ಚರ್ಚಿಸುವ, ಪ್ರತಿಭಟಿಸುವ, ವಿರೋಧಿಸುವ, ಬೆಂಬಲಿಸುವ ಅವಕಾಶ ಇದ್ದೇ ಇರುತ್ತದೆ. ಆದರೆ ನಿಲುವು ಸ್ಪಷ್ಟವಾದ ನಂತರ ಅದರ ವಿರುದ್ಧ ಮಾತನಾಡುವುದು, ಒಂದರ್ಥದಲ್ಲಿ ಸಂವಿಧಾನ ವಿರೋಧಿ ನಡೆಯೇ ಆಗುತ್ತದೆ.
ಸರಕಾರ ಮುನ್ನಡೆಸುವ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪಕ್ಷವಾಗಿ ವಿರೋಧಿಸೋಣ, ಅದರೊಂದಿಗೆ ತಕರಾರು ಹೊಂದಿರೋಣ. ಆಂತರಿಕವಾಗಿ ಜಗಳವನ್ನೇ ಅಡೋಣ. ಆದರೆ, ದೇಶವನ್ನು‌, ರಾಜ್ಯವನ್ನು ಮುನ್ನಡೆಸುವ ನಾಯಕ, ಅವರ ಪಕ್ಷಕ್ಕೆ ಮಾತ್ರ ನಾಯಕನಾಗಲಾರ. ಇಡೀ ದೇಶಕ್ಕೆ, ರಾಜ್ಯಕ್ಕೆ ನಾಯಕನಾಗಿರುತ್ತಾನೆ. ಹಾಗಾಗಿ, ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ಆತ ತೆಗೆದುಕೊಳ್ಳುವ ಯಾವುದೇ ನೀತಿ ನಿರ್ಧಾರವನ್ನು ದೇಶ ಬೆಂಬಲಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳು ಕೂಡ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕಾಗುತ್ತದೆ. ಕಾವೇರಿ ವಿಷಯದಲ್ಲಿ ಕರ್ನಾಟಕದ ಇಲ್ಲವೇ ತಮಿಳುನಾಡಿನ ರಾಜಕೀಯ ಪಕ್ಷಗಳು ಒಂದಾಗುವುದಿಲ್ಲವೇ, ಅದೇ ರೀತಿ!
ಆದರೆ, ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಏನು ನಡೆಯುತ್ತಿದೆ ಗಮನಿಸಿ. ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಯುದ್ಧ. ಇದರಲ್ಲಿ ಭಾರತದ ಬೆಂಬಲ ಸ್ಪಷ್ಟವಾಗಿ ಇಸ್ರೇಲ್‌ ಕಡೆಗಿದೆ ಮತ್ತು ಹಮಾಸ್ ಎಂಬ ಭಯೋತ್ಪಾದಕ ಸಂಘಟನೆಯ ವಿರುದ್ಧವಾಗಿದೆ.
ಇದನ್ನು ಪ್ರಧಾನಮಂತ್ರಿಯಾದಿಯಾಗಿ ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವರು ಹಮಾಸ್‌ ಬೆಂಬಲಿಸಿ ರಸ್ತೆಗಿಳಿದಿದ್ದಾರೆ. ಈ ಮಾನಸಿಕತೆ ಇದ್ದರೆ ದೇಶ ಹೇಗೆ ಮುಂದುವರಿಯುವುದು? ಹಾಗಾದರೆ ಒಂದು ದೇಶವಾಗಿ ನಾವು ಹೇಗೆ ವರ್ತಿಸಬೇಕು? ಕಾಂಗ್ರೆಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ಯಾಲೆಸ್ತೀನ್ ಪರವಾಗಿ ನಿರ್ಣಯವನ್ನೇ ಅಂಗೀಕರಿಸಿದೆ. ಆದರೆ. ಅದು ಹಮಾಸ್ ವಿರುದ್ಧ ಆ ನಿರ್ಣಯದಲ್ಲಿ ಸೊಲ್ಲು ಎತ್ತಿಲ್ಲ ! ಈ ಸಂಗತಿ ಡಾ. ಪು. ಗ. ಸಹಸ್ರಬುದ್ಧೆ ಅವರನ್ನು ನೆನಪಿಸಿತು.
ಮಹಾರಾಷ್ಟ್ರದ ಓರ್ವ ಪ್ರಮುಖ ಸಮಾಜ ಚಿಂತಕರಾಗಿದ್ದ ಡಾ. ಪು. ಗ. ಸಹಸ್ರಬುದ್ಧೆ ಅವರು ಲೇಖನವೊಂದು ಅತ್ಯಂತ ಹೊಸ ಆಲೋಚನೆಯನ್ನು ನೀಡಿತು. ಹಿಂದೆಂದೋ ಓದಿದ ಈ ಲೇಖನದ ಅಂಶಗಳು ಇಂದಿಗೆ ಬಹಳ ಪ್ರಸ್ತುತವಾಗಿವೆ. ಅದರ ಸಾರಾಂಶ ಈ ರೀತಿ ಇದೆ.‌
ಭಾರತದ ಮೇಲೆ 16ನೇ ಶತಮಾನದಿಂದಲೇ ಅನೇಕರು ದಾಳಿ ಮಾಡಲಾರಂಭಿಸಿದರು. ಪೋರ್ಚುಗೀಸರಿಂದ ಆರಂಭವಾದ ದಾಳಿಯ ಸರಣಿಯಲ್ಲಿ ಡಚ್ಚರು, ಫ್ರೆಂಚರು, ಮುಸ್ಲಿಮರ ನಂತರ ಕ್ರೈಸ್ತ ದಾಳಿಕೋರರು ಬೇರೆ ಬೇರೆ ರೂಪದಲ್ಲಿ ಬಂದರು. ಪ್ರತಿ ಆಕ್ರಮಣಕಾರರೆದುರೂ ಭಾರತವು ಸೆಣೆಸಾಡಿತು, ಕೆಲವೊಮ್ಮೆ ಸೋತಿತು, ಕೆಲವೊಮ್ಮೆ ಜಯಿಸಿತು. ಆಕ್ರಮಣಕಾರರ ನಡುವೆಯೂ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು, ಆದರೆ ಅದಕ್ಕೂ ಭಾರತೀಯ ಒಟ್ಟು ಸಮಾಜಕ್ಕೂ ಸಂಬಂಧ ಇರಲಿಲ್ಲ. ನಮ್ಮೊಂದಿಗೆ‌ ನಡೆಸಿದ ಯುದ್ಧಗಳಲ್ಲೆಲ್ಲ ಲೂಟಿ, ಬೆಂಕಿ, ಅತ್ಯಾಚಾರ, ಬಲಾತ್ಕಾರ, ಕೊಲೆಯೇ ಎಲ್ಲ ದಾಳಿಕೋರರ ವಿಧಾನವಾಗಿತ್ತು. ಪಾಪ-ಪುಣ್ಯಗಳ ಯಾವ ನಿಷೇಧಗಳನ್ನೂ ಅವರು ಪಾಲಿಸಲಿಲ್ಲ. ಪೈಶಾಚಿಕ ಕೃತ್ಯಗಳಿಂದಲೇ ರಾಜ್ಯಗಳನ್ನು ಗೆದ್ದು, ಅದೇ ದಾರಿಯಲ್ಲೇ ಅಂಕಿತದಲ್ಲಿ ಇಟ್ಟುಕೊಂಡರು. ಸತ್ಯ, ನ್ಯಾಯ, ಅಹಿಂಸೆ, ನೀತಿ, ಧರ್ಮಗಳ ನೆರಳೂ ಅವರ ಬಳಿ ಸುಳಿಯಲಿಲ್ಲ. ಆದರೂ ಅವರುಗಳು ವಿಜಯಿಯಾದರು. ಇದು ಹೇಗೆ ಸಾಧ್ಯವಾಯಿತು?
ಸತ್ಯ, ನ್ಯಾಯ ಗೆಲ್ಲುತ್ತದೆ ಎನ್ನುವುದು ನಮ್ಮ ನಿಲುವಲ್ಲವೇ? ಹಾಗಾದರೆ ಮುಖ್ಯವಾಗಿ ಕ್ರೈಸ್ತರು ಅಂದರೆ ಬ್ರಿಟಿಷರ ಎದುರು ಇಷ್ಟು ಸುದೀರ್ಘ ಅವಧಿಗೆ ಭಾರತೀಯರು ಏಕೆ ಸೋಲುತ್ತಿದ್ದರು? ಹಾಗಾದರೆ ಇವರೆಲ್ಲರ ಎದುರು ಸೋಲುವಂತಹ ಯಾವ ಪಾಪಕೃತ್ಯಗಳನ್ನು ಭಾರತೀಯರು ಮಾಡಿದ್ದರು? ಆ ಸಮಯದಲ್ಲಿ ಅನೇಕ ನಂಬಿಕೆಗಳು, ಪಂಥಗಳು ಹುಟ್ಟಿಕೊಂಡಿದ್ದವು. ಎಲ್ಲೆಲ್ಲೂ ಸಂತ ಮಹಂತರು ಹುಟ್ಟಿಕೊಂಡರು, ಅವರೆಲ್ಲರೂ ಜನರಿಗೆ ಭಕ್ತಿ ಮಾರ್ಗವನ್ನು ಬೋಧಿಸುತ್ತಿದ್ದರು. ಪೂಜೆ, ಭಜನೆ, ಕೀರ್ತನೆ, ನಾಮ ಪ್ರಸಾರ ಮಾಡುತ್ತಿದ್ದರು. ಸತ್ಯ, ನ್ಯಾಯ, ಪರೋಪಕಾರ ಮುಂತಾದ ಮಹೋನ್ನತ ಉಪದೇಶ ಮಾಡುತ್ತಿದ್ದರು. ಈ ಸಂತ ಪಂಥದ ವಿಶೇಷವೆಂದರೆ ಹೆಚ್ಚಿನವರು ತಳ ಸಮುದಾಯಗಳಿಗೇ ಸೇರಿದವರಾಗಿದ್ದರು. ಹಾಗಾಗಿ ಅವರು ಹೆಚ್ಚೆಚ್ಚು ಜನರಿಗೂ ಸಮ್ಮತವಾಗಿದ್ದರು, ಅವರ ಪ್ರಭಾವವೂ ಅಗಾಧವಾಗಿತ್ತು. ಮನೆಮನೆಯಲ್ಲೂ ಭಗವನ್‌ ಸ್ಮರಣೆ ನಿತ್ಯ ನಿರಂತರವಾಗಿತ್ತು. ಆದರೂ ಏಕೆ ಭಾರತಕ್ಕೆ ವಿಪತ್ತು ತಪ್ಪಲಿಲ್ಲ? ಇಂಗ್ಲಿಷರು ಯಾವ ಪುಣ್ಯದ ಕೆಲಸ ಮಾಡುತ್ತಿದ್ದರು?
ಪು. ಗ. ಸಹಸ್ರಬುದ್ಧೆಯವವರು ಹೇಳುವಂತೆ, ಹಿಂದುಸ್ಥಾನದಲ್ಲಿ ಸಾಮ್ರಾಜ್ಯ ವಿಸ್ತರಣೆ ಮಾಡುವ ಸಮಯದಲ್ಲಿ ಬ್ರಿಟಿಷರೂ ಎಲ್ಲ ರೀತಿಯ ಪಾಪಕೃತ್ಯಗಳನ್ನು ಮಾಡಿದರು. ನಮ್ಮ ಪ್ರಕಾರ ಅವರು ಹಿಡಿದಿದ್ದು ಪೂರಾ ಅಧರ್ಮದ ಹಾದಿ. ಆದರೆ ಅವರೂ ಒಂದು ಧರ್ಮದ ಮಾರ್ಗವನ್ನು ಅನುಸರಿಸಿದರು. ಆ ಆಧಾರಕ್ಕೆ ಅವರು ದೃಢವಾಗಿ ನಿಂತಿದ್ದರು. ನಾವು ನಿಷ್ಠೆಯಿಂದ ಭಾಗವತ ಧರ್ಮವನ್ನು ಪಾಲಿಸುವಂತೆ ಅವರೂ ಧರ್ಮ ಪಾಲನೆಯಲ್ಲಿ ನಿರತರಾಗಿದ್ದರು. ಅದು ಯಾವ ಧರ್ಮ ಎಂದರೆ ದೇಶಕ್ಕೆ ಬದ್ಧತೆಯ ಧರ್ಮ. ಇನ್ನೂರು-ಮುನ್ನೂರು ವರ್ಷಗಳ ದೀರ್ಘ ಅವಧಿಯಲ್ಲಿ ಒಬ್ಬ ಆಂಗ್ಲನೂ ಸ್ವಕೀಯರಿಗೆ, ಸ್ವದೇಶಕ್ಕೆ ದ್ರೋಹ ಬಗೆಯಲಿಲ್ಲ. ಅವನು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ತನ್ನ ಭೂಮಿಯಾದ ಇಂಗ್ಲೆಂಡ್‌ ಮಾತ್ರವೇ ಸದಾ ಅವನ ಕಣ್ಣಮುಂದೆ ಬರುತ್ತಿತ್ತು. ಜಗತ್ತಿನ ಅನೇಕ ದೇಶಗಳನ್ನು ಬ್ರಿಟಿಷರು ಆಳಿದರಾದರೂ ಅವರಲ್ಲಿ ಒಬ್ಬನೂ ತನ್ನ ದೇಶಕ್ಕೆ ದ್ರೋಹ ಮಾಡಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿಕೊಳ್ಳಲಿಲ್ಲ.
ಇಲ್ಲಿಗೆ ದಾಳಿ ಮಾಡಿದ ಮುಸಲ್ಮಾನ ರಾಜರುಗಳಲ್ಲಿ ನಂತರ ಆನೇಕ ಒಡಕುಗಳು ಉಂಟಾದವು. 1346ರಲ್ಲಿ ಮಹಾರಾಷ್ಟ್ರದ ಮುಸಲ್ಮಾನ ಸರದಾರರು ದಿಲ್ಲಿಯ ಅಧಿಪತ್ಯವನ್ನು ಧಿಕ್ಕರಿಸಿ ಸ್ವತಂತ್ರ ಬಹಮನಿ ಸಾಮ್ರಾಜ್ಯ ಸ್ಥಾಪಿಸಿದರು. ಮುಂದೆ ಅವರೂ ಹೋಳಾದರು. ಆನಂತರದಲ್ಲಿ ದಕ್ಷಿಣದ ನಿಜಾಮ, ಬಂಗಾಳದ ಸುಭೇದಾರ, ಅಯೋಧ್ಯೆಯ ನವಾಬ ಎನ್ನುತ್ತ ಒಡೆದುಹೋದರು. ಮುಸ್ಲಿಂ ಸಾಮಂತ ರಾಜರು ಸ್ವಲ್ಪ ಬಲಶಾಲಿಗಳಾದರೆ ಸಾಕು ಸ್ವತಂತ್ರ ರಾಜ್ಯ ಸ್ಥಾಪಿಸಲು ಹವಣಿಸುತ್ತಿದ್ದರು. ಆದರೆ ಈ ಮುಸ್ಲಿಂ ಸರದಾರರಿಗಿಂತಲೂ ಅನೇಕ ಪಟ್ಟು ಹೆಚ್ಚು ಬುದ್ಧಿಶಾಲಿ, ತಂತ್ರಗಾರರು, ಧೈರ್ಯವಂತರಾಗಿದ್ದ ಬ್ರಿಟಿಷ್‌ ಸರದಾರರು ಒಬ್ಬರೂ ದಂಗೆ ಏಳಲಿಲ್ಲ. ತಮ್ಮ ಕೇಂದ್ರ ಶಾಸನದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ರಾಬರ್ಟ್‌ ಕ್ಲೈವ್‌, ವಾರನ್‌ ಹೇಸ್ಟಿಂಗ್‌ನಂಥವರು ಸ್ವತಂತ್ರ ರಾಜ್ಯ ಸ್ಥಾಪಿಸುವುದನ್ನು ಕನಸುಮನಸಿನಲ್ಲೂ ಎಣಿಸಲಿಲ್ಲ. ಇದೇನು ಧರ್ಮಕಾರ್ಯವಲ್ಲವೇ? ಇದೂ ಮನೋನಿಗ್ರಹವಲ್ಲವೇ? ಇದೂ ಸ್ವಾರ್ಥತ್ಯಾಗವಲ್ಲವೇ? ಎಂದು ಸಹಸ್ರಬುದ್ಧೆಯವರು ಪ್ರಶ್ನಿಸಿದ್ದಾರೆ.
ಇಂತಹ ಕಾರಣಗಳಿಂದಾಗಿಯೇ ಬ್ರಿಟಿಷ್‌ ಸಾಮ್ರಾಜ್ಯ ಸೂರ್ಯ ಮುಳುಗದ ಸಾಮ್ರಾಜ್ಯವಾಯಿತು. ಇದರರ್ಥ ಬ್ರಿಟಿಷರನ್ನು ಹೊಗಳಬೇಕು ಎಂದಲ್ಲ. ನಮ್ಮಲ್ಲಿರುವ ಕೊರತೆ ಏನು ಎಂದು ತಿಳಿಯುವ ಪ್ರಯತ್ನವಷ್ಟೆ. ಭಾರತೀಯರಲ್ಲಿಯೂ ಧರ್ಮ ಭಾವನೆ ಇದ್ದೇ ಇತ್ತು. ಆದರೆ ನಮ್ಮಲ್ಲಿ ವ್ಯಕ್ತಿ ಧರ್ಮಕ್ಕೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಸಮಾಜಧರ್ಮಕ್ಕೆ ನೀಡುವುದಿಲ್ಲ. ಬಡವರಿಗೆ ದಾನ ಮಾಡು, ಧರ್ಮಶಾಲೆ-ಬಾವಿ ಕಟ್ಟಿಸು, ಪರಸ್ತ್ರೀಯನ್ನು ಕಣ್ಣೆತ್ತಿ ನೋಡದಿರು, ಪಾತಿವ್ರತ್ಯ ಬಿಡದಿರು ಎಂಬ ಇತ್ಯಾದಿ ಬೋಧನೆ ಮಾಡಲಾಗುತ್ತದೆ. ಆದರೆ ಒಂದು ಸಮಾಜವಾಗಿ ಯಾವ ಧರ್ಮ ಪಾಲನೆ ಮಾಡಬೇಕು ಎಂಬುದರ ಆಗ್ರಹ ಕಡಿಮೆ. ಅನೇಕ ವರ್ಷಗಳಿಂದ ಬೇರೂರಿರುವ ಜಾತಿಯ ಭೇದಭಾವವೂ ಇದಕ್ಕೆ ಕಾರಣ. ಇಂದಿಗೂ, ಜಾತಿಯ ಕಾರಣಕ್ಕೆ ಜಾಗೃತಗೊಳ್ಳುವಷ್ಟು ಸಮಾಜದ ವಿಷಯಕ್ಕೆ ಜಾಗೃತಿ ಆಗುವುದಿಲ್ಲ.
ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ||
ಈ ರೀತಿ ಹಿತೋಪದೇಶದಲ್ಲಿ ತಿಳಿಸಲಾಗಿದೆ. ಅಂದರೆ, ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಾಗ ಮಾಡಬೇಕು, ಗ್ರಾಮವೊಂದರ ಹಿತಕ್ಕಾಗಿ ತನ್ನ ಕುಲವನ್ನು ಬಿಡಬೇಕು, ತನ್ನ ದೇಶದ ಹಿತಕ್ಕಾಗಿ ಗ್ರಾಮವನ್ನು ಬಿಡಬೇಕು, ಆತ್ಮನ ಹಿತಕ್ಕಾಗಿ ಪೃಥ್ವಿಯನ್ನೂ ತ್ಯಾಗ ಮಾಡಬೇಕು ಎಂದು ಇದರರ್ಥ.
ಅನೇಕ ದೇಶಗಳನ್ನು ಸುತ್ತಿ ಬಂದ ಸ್ವಾಮಿ ವಿವೇಕಾನಂದರೂ ಇದೇ ಮಾತನ್ನು ಹೇಳುತ್ತಿದ್ದರು. ಭಾರತೀಯ ಸಮಾಜದಲ್ಲಿ ವೇದ, ಉಪನಿಷತ್ತುಗಳಿವೆ ನಿಜ. ಆದರೆ ಸಂಘಟನಾತ್ಮಕತೆ ಎಂಬ ವಿಷಯದಲ್ಲಿ ಕೊರತೆ ಇದೆ. ಒಂದು ಸಮಾನ ಉದ್ದೇಶಕ್ಕಾಗಿ ಒಂದಾಗಿ ಕೆಲಸ ಮಾಡುವುದರ ಕೊರತೆ ನಮ್ಮಲ್ಲಿದೆ ಎನ್ನುತ್ತಿದ್ದರು.
ಭಾರತಕ್ಕೆ ಉನ್ನತ ಪರಂಪರೆಯಿದೆ, ಇತಿಹಾಸವಿದೆ. ಆದರೆ ಮೊದಲಿಗೆ ಅವುಗಳ ಅರಿವು ನಮ್ಮಲ್ಲಿರಬೇಕು. ಆನಂತರ, ಆ ಉದ್ದೇಶದ ಈಡೇರಿಕೆಗಾಗಿ ಒಂದು ಸಮಾಜವಾಗಿ ಕೆಲಸ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಜಾತಿ ಜಾತಿಗಳ ಹೆಸರಿನಲ್ಲಿ ನಮ್ಮನ್ನು ನಾವೇ ಪ್ರತ್ಯೇಕವಾಗಿಸಿಕೊಂಡು ಗುಂಪುಗಳಾಗಿ ವಿಂಗಡಣೆ ಆಗುತ್ತಿದ್ದೇವೆ. ಹಮಾಸ್-ಇಸ್ರೇಲ್ ವಿಚಾರದಲ್ಲಾಗಲಿ ಇದನ್ನೇ ಅನ್ವಯಿಸಬೇಕು. ಆಗ ಮಾತ್ರವೇ ನಮ್ಮ ಕಲೆ, ಸಂಸ್ಕೃತಿ, ಪ್ರಾಚೀನ ಇತಿಹಾಸಕ್ಕೂ ಒಂದು ಗೌರವ ಇರುತ್ತದೆ ಅಲ್ಲವೇ?
ಹಾಗೆ ನೋಡಿದರೆ, ಇಸ್ರೇಲ್-ಪ್ಯಾಲೆಸ್ತೇನ್ ಜತೆಗಿನ ಭಾರತದ ಸಂಬಂಧ ಸೌಹಾರ್ದತೆಯನ್ನೇ ನೋಡುವುದಾದರೆ, ಗಾಂಧಿ-ನೆಹರು ಕಾಲದಿಂದಲೂ ಭಾರತ ಪ್ಯಾಲೆಸ್ತೇನರ ಪರವಾಗಿಯೂ, ಇಸ್ರೇಲ್ ವಿರುದ್ಧವೇ ಇತ್ತು. ಇಸ್ರೇಲ್ ಜತೆಗಿನ ಸಂಬಂಧ ಕುದುರಿದ್ದ ಕಾಂಗ್ರೆಸ್ಸಿನ ಪಿವಿಎನ್ ಕಾಲದಲ್ಲಿ. ಅಲ್ಲಿಂದ ಮುಂದಕ್ಕೆ ಅದು ಇನ್ನಷ್ಟು ಗಟ್ಟಿಯಾಗುತ್ತಾ ಬಂತು. ಈಗ ಅದು ಮುಂದುವರಿದಿದೆ. ಆದರೆ, ಕಾಂಗ್ರೆಸ್ ಮಾತ್ರ ಬದಲಾಗಿದೆ !
ಕಡೆಯದಾಗಿ, ರಾಮಾಯಣದಲ್ಲಿ ಕುಂಭಕರ್ಣ ನೀತಿ ಎಂಬುದೊಂದಿದೆ. ಈ ಕ್ಷಣಕ್ಕೆ ಬಲವಾಗಿ ನೆನಪಾಗುತ್ತಿದೆ. ಇದು ನಾವೆಲ್ಲರೂ ಕೇಳಿರುವ ಕಥೆಯೇ ಆದರೂ, ನೀತಿಯನ್ನು ಗ್ರಹಿಸಿರುವುದಿಲ್ಲ. ರಾಮನ ವಿರುದ್ಧದ ಯುದ್ಧದಲ್ಲಿ ಲಂಕಾಪಡೆ ಒಬ್ಬೊಬ್ಬ ಸೇನಾಧಿಪತಿಗಳನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಆಗ ಸೇನೆಯನ್ನು ಮುನ್ನಡೆಸಲು ರಾವಣನ ತಮ್ಮ ಕುಂಭಕರ್ಣನನ್ನು ಎಚ್ಚರಿಸುವ ಅನಿವಾರ್ಯತೆ ಎದುರಾಗುತ್ತದೆ.
ಸುದೀರ್ಘ ನಿದ್ರೆಯಲ್ಲಿದ್ದ ಕುಂಭಕರ್ಣನನ್ನು ಸೋದರನನ್ನು ವಿಭೀಷಣ ಎಚ್ಚರಿಸಿ, ಲಂಕೆಗೆ ಬಂದೊದಗಿರುವ ಅನಿವಾರ್ಯತೆಯನ್ನು ವಿವರಿಸುತ್ತಾನೆ. ಎಲ್ಲವನ್ನೂ ಕೇಳಿದ ಕುಂಭಕರ್ಣ, ರಾವಣನಿಗೆ ನೀವೇಕೆ ಬುದ್ಧಿ ಹೇಳಲಿಲ್ಲ ? ಪರಸ್ತ್ರೀಯನ್ನು ಕರೆತಂದಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸುತ್ತಾನೆ. ವಿಭೀಷಣ ನಿರುತ್ತರನಾದಾಗ, ಇದೇ ಪ್ರಶ್ನೆಯನ್ನು ಕುಂಭಕರ್ಣ ತನ್ನ ಸೋದರನೂ ಆಗಿರುವ, ಲಂಕೆಯ ಅಧಿಪತಿ ರಾವಣನ ಮುಂದಿಡುತ್ತಾನೆ. ಕೆಂಡವಾದ ರಾವಣ, “ಅದೆಲ್ಲಾ ವಾದ-ವಿವಾದ ಮಾಡುವ ಹೊತ್ತು ಇದಲ್ಲ. ಯುದ್ಧ ಶುರುವಾಗಿದೆ. ಸೇನೆಯನ್ನು ಮುನ್ನಡೆಸುವೆಯೋ ? ಇಲ್ಲವೋ ?” ಎಂದು ಪ್ರಶ್ನಿಸುತ್ತಾನೆ.
ಆಗ ಕುಂಭಕರ್ಣ ಹೇಳುತ್ತಾನೆ, “ನೀನು ಲಂಕೆಯ ಚಕ್ರಾಧಿಪತಿ. ನೀನು ಒಮ್ಮೆ ನಿರ್ಧಾರ ಕೈಗೊಂಡ ಬಳಿಕ, ಲಂಕೆಯ ನಾವೆಲ್ಲರೂ ಮಾಡುತ್ತೇವೆ. ಅದು ರಾಜಧರ್ಮ. ನಿರ್ಧಾರ ಕೈಗೊಂಡ ಬಳಿಕ ಒಳಿತು-ತಪ್ಪಿನ ಪ್ರಶ್ನೆ ಇರದು. ಆದರೆ, ಅದಕ್ಕೆ ಪೂರ್ವದಲ್ಲಿ, ಲಂಕೆಯ ಒಳಗೆ ಆ ಚರ್ಚೆಯೇ ಬೇಡ ಎಂಬ ನಿನ್ನ ಮಾತನ್ನು ಒಪ್ಪಲಾರೆ…,” ಎನ್ನುತ್ತಾನೆ!
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top