ಸಮಾಜಭಂಜಕರನ್ನು ಗುರುತಿಸಿ, ದೂರವಿಡೋಣ : ವಿಸ್ತಾರ ಅಂಕಣ

ಸುಮಾರು ಒಂದು ದಶಕಕ್ಕೂ ಮೊದಲು. ಅಂದರೆ 2012ರಲ್ಲಿ ಒಂದು ಇಂಗ್ಲಿಷ್‌ ಪುಸ್ತಕ ಪ್ರಕಟವಾಯಿತು. ಅದನ್ನು ಬರೆದವರು ದೇಶದ ಖ್ಯಾತ ಪತ್ರಕರ್ತರು, ಲೇಖಕರಲ್ಲಿ ಒಬ್ಬರು ಎಂದು ಖಡಾಖಂಡಿತವಾಗಿ ಪರಿಗಣಿಸಬಲ್ಲವರಾದ ಅರುಣ್‌ ಶೌರಿ. ಆ ಪುಸ್ತಕದ ಹೆಸರು `Worshipping False Gods’. ಈ ಪುಸ್ತಕದ ಮುಖಪುಟದಲ್ಲಿ ಇದ್ದದ್ದು ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಫೋಟೊ. ಬಾಬಾ ಸಾಹೇಬರ ಸಿಗ್ನೇಚರ್ ಪಟವದು. ಬ್ಲ್ಯಾಕ್‌ ಸೂಟ್‌ ಧರಿಸಿ ವಿಮಾನ ಏರುತ್ತಿರುವ, ಜನರ ಕಡೆಗೆ ಕೈಬೀಸುತ್ತಿರುವ ಚಿತ್ರ. ತಪ್ಪು ದೇವರನ್ನು ಆರಾಧಿಸಲಾಗುತ್ತಿದೆ ಎಂದು ಶೀರ್ಷಿಕೆ ನೀಡಿ, ಅಂಬೇಡ್ಕರರ ಫೋಟೊ ಹಾಕಿದರೆ ಏನರ್ಥ? ಅಂಬೇಡ್ಕರರು ಆರಾಧಿಸಲು ಅರ್ಹರಲ್ಲ ಎಂದು ಅರುಣ್‌ ಶೌರಿ ಪ್ರತಿಪಾದಿಸಿದ್ದರು.
ಅಂಬೇಡ್ಕರರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ, ಅವರು ಬ್ರಿಟಿಷರ ಜತೆಗೆ ಶಾಮೀಲಾಗಿದ್ದರು… ಇತ್ಯಾದಿ ಇತ್ಯಾದಿ ಆ ಪುಸ್ತಕದ ತಿರುಳು. ಈ ಪುಸ್ತಕ ಪ್ರಕಟವಾದ ಕೂಡಲೆ ದೇಶದೆಲ್ಲೆಡೆ ವಿರೋಧಗಳು ಆರಂಭವಾದವು. ಹೇಳಿಕೇಳಿ ಅರುಣ್‌ ಶೌರಿ ಅದಾಗಲೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರು, ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅರುಣ್‌ ಶೌರಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರತಿಪಾದಿಸುವ ರಾಷ್ಟ್ರೀಯತೆಯನ್ನು ಬಲವಾಗಿ ಬೆಂಬಲಿಸುತ್ತಿದ್ದರು. ರಾಜಕೀಯ ತಜ್ಞ ಕ್ರಿಸ್ಟೊಫ್ ಜಫರ್‌ಲೆಟ್‌, ʼಅರುಣ್‌ ಶೌರಿ ತೀವ್ರವಾದಿ ಹಿಂದು ವಿಚಾರಗಳ ಕುರಿತು ಮೃದು ಧೋರಣೆ ಇರುವ ಲೇಖಕ” ಎಂದು ಕರೆದಿದ್ದರು. ಪತ್ರಕರ್ತರಾಗಿ ಅರುಣ್‌ ಶೌರಿ ಅವರನ್ನು ಆರಾಧಿಸುತ್ತಿದ್ದ ಅನೇಕರಿಗೆ, ಅರುಣ್‌ ಶೌರಿ ರಾಷ್ಟ್ರೀಯತೆಯ ಪರವಾಗಿ ಮಾತನಾಡುವುದು ಅರಗಿಸಿಕೊಳ್ಳಲಾಗದ ತುತ್ತಾಗಿತ್ತು. ಇಷ್ಟೆಲ್ಲ ಇದ್ದರೂ, ಅರುಣ್‌ ಶೌರಿ ಅವರ ಅಂಬೇಡ್ಕರ್‌ ಅವರ ಪುಸ್ತಕಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು ಇದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತಕ ವಲಯ!
ಅಂಬೇಡ್ಕರರು ದೇಶಕ್ಕೆ ನೀಡಿದ ಕೊಡುಗೆ ಏನು? ಅವರು ಪ್ರತಿಪಾದಿಸಿದ್ದ ಮೌಲ್ಯಗಳು ಎಂಥದ್ದು? ಸಂವಿಧಾನ ನಿರ್ಮಾಣದಲ್ಲಿ ಅವರ ಪಾತ್ರ ಏನು? ಅರುಣ್‌ ಶೌರಿ ಹೇಗೆ ತಮ್ಮ ಗುರಿಯಲ್ಲಿ ವಿಫಲರಾಗಿದ್ದಾರೆ? ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟವರು ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್‌ ವಿಚಾರಗಳ ಚಿಂತಕರು ಎಂದೇ ಪ್ರಸಿದ್ಧರಾದ, ದಲಿತ ಚಳವಳಿ ಮುಖಂಡರೂ ಆದ ರಮೇಶ್‌ ಪತಂಗೆ ಅವರು. ಅರುಣ್‌ ಶೌರಿ ಪುಸ್ತಕದ ವಿರುದ್ಧ ಸರಣಿ ಲೇಖನಗಳನ್ನು ಬರೆದು, ಹೇಗೆ ಶೌರಿ ತಪ್ಪೆಸಗಿದ್ದಾರೆ ಎಂದು ಹೇಳಿದರು. ಪತಂಗೆ ಅವರ ಲೇಖನಗಳ ಕನ್ನಡ ಅನುವಾದವನ್ನೂ ಆರ್‌ಎಸ್‌ಎಸ್‌ ವಲಯದಲ್ಲಿ ವ್ಯಾಪಕವಾಗಿ ಹಂಚಲಾಯಿತು. ಇಷ್ಟನ್ನೂ ಏಕೆ ಹೇಳಬೇಕಾಯಿತು ಎಂದರೆ, ಯಾವುದೇ ವಿಚಾರ, ಮೌಲ್ಯದ ವಿರುದ್ಧ ಅಪಪ್ರಚಾರ ನಡೆದಾಗ ಖಂಡಿಸಲು ಯಾರೂ ಹಿಂಜರಿಯಬಾರದು.
ಇವರು ನಮ್ಮವರು, ನಮ್ಮ ಊರಿನವರು, ಜಾತಿಯವರು ಎಂದು ತಪ್ಪುಗಳನ್ನು ನುಂಗಿಕೊಳ್ಳುತ್ತಾ ಹೋದರೆ ಸಮಾಜದಲ್ಲಿ ಶಾಶ್ವತ ಮೌಲ್ಯಗಳು ಇಲ್ಲದಂತಾಗಿ ಸಂಸ್ಕೃತಿ ದಿಕ್ಕಾಪಾಲಾಗಿಬಿಡುತ್ತದೆ. ಸಮಾಜವು ಮುನ್ನಡೆಯಲು ಕೆಲವು ಮೌಲ್ಯಗಳು ಬೇಕಾಗುತ್ತವೆ. ಈ ಮೌಲ್ಯಗಳು ಯಾವಾಗಲೂ ಅಮೂರ್ತವಾಗಿರುತ್ತವೆ. ಮೌಲ್ಯಗಳನ್ನು ಅಳವಡಿಸಿಕೊಂಡು ಅದರಂತೆಯೇ ಜೀವನ ನಡೆಸಿದ ವ್ಯಕ್ತಿಗಳ ಜೀವನವೇ, ನಾವೆಲ್ಲರೂ ಅರಿಯಬಹುದಾದ, ಅನುಸರಿಸಬಹುದಾದ ಮೂರ್ತರೂಪದ ಮೌಲ್ಯ. ಕೊಟ್ಟ ಮಾತಿಗೆ ತಪ್ಪಬಾರದು ಎನ್ನುವುದು ಮೌಲ್ಯ, ಶ್ರೀರಾಮಚಂದ್ರ ಅದರ ಮೂರ್ತರೂಪ. ದಾನ ಮಾಡಬೇಕು ಎನ್ನುವುದು ಮೌಲ್ಯ, ಕರ್ಣ ಅದರ ಮೂರ್ತರೂಪ. ಪ್ರತಿಜ್ಞೆ ಮಾಡಿದ ನಂತರ ಮುರಿಯಬಾರದು ಎನ್ನುವುದು ಮೌಲ್ಯ, ಭೀಷ್ಮ ಅದರ ಮೂರ್ತ ರೂಪ. ತಂದೆಯಾದವನು ಮಕ್ಕಳ ಕುಕೃತ್ಯಗಳಿಗೆ ಕುರುಡಾಗಬಾರದು ಎನ್ನುವುದು ಮೌಲ್ಯ, ಧೃತರಾಷ್ಟ್ರ ಅದರ ಮೂರ್ತರೂಪ. ಸಮಾಜದಲ್ಲಿ ಮೇಲು ಕೀಳು ಇರಕೂಡದು ಎನ್ನುವುದು ಮೌಲ್ಯ, ಡಾ. ಬಾಬಾಸಾಹೇಬ್ ಅಂಬೇಡ್ಕರರು ಅದರ ಮೂರ್ತರೂಪ.
ಆದರೆ ಇಂದು ಕರ್ನಾಟಕದಲ್ಲಿ ಹಾಗೂ ದೇಶದಲ್ಲೂ ಮೂರ್ತಿ ಭಂಜನೆಯ ಕಾರ್ಯ ಭರದಿಂದ ಸಾಗಿದೆ. ಭಾರತವು ಯಾವ ಪ್ರಾಚೀನ ಮೌಲ್ಯಗಳನ್ನು ಆರಾಧಿಸಿಕೊಂಡು ಬಂದಿದೆಯೋ, ಯಾವ ಮೌಲ್ಯಗಳಿಗಾಗಿ ಇಡೀ ಜಗತ್ತು ನಮ್ಮ ಕಡೆಗೆ ನೋಡುತ್ತಿದೆಯೋ ಅಂಥ ಮೌಲ್ಯಗಳನ್ನೇ ಬುಡಮೇಲು ಮಾಡುವ ಪ್ರಯತ್ನ ಸಾಗಿದೆ. ಅದರಲ್ಲಿ, ಮೈಸೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ ಮಹಿಷ ದಸರಾ ಅಥವಾ ಮಹಿಷ ಉತ್ಸವ ಎಂಬ ಆಚರಣೆ.
ಕರ್ನಾಟಕದ ಚಿಕ್ಕಚಿಕ್ಕ ಮಕ್ಕಳ ಬಾಯಲ್ಲೂ “ಅಯಿಗಿರಿ ನಂದಿನಿ…” ಭಕ್ತಿ ಗೀತೆ ನಲಿದಾಡುತ್ತದೆ. ಅದರ ಒಂದು ಸಾಲು “ಜಯಜಯಹೇ ಮಹಿಷಾಸುರ ಮರ್ದಿನಿ..” ಎಂದು ಬರುತ್ತದೆ. ಮಹಿಷಾಸುರನ ಸಂಹಾರ ಎನ್ನುವುದು ಜಗತ್ತಿನ ಒಳಿತಿಗಾಗಿ ಅನಿವಾರ್ಯವಾಗಿದ್ದ ಕೆಲಸ. ಅದಕ್ಕಾಗಿ ದೇವಿಯು ಚಾಮುಂಡಿಯ ಅವತಾರ ತಾಳಿ ಮಹಿಷನನ್ನು ಸಂಹಾರ ಮಾಡುತ್ತಾಳೆ. ಈ ಪುರಾಣ ಕಥೆಯನ್ನೇ ಒಂದು ಮೌಲ್ಯವಾಗಿ ಆಚರಿಸುತ್ತೇವೆ. ಮಹಿಷ ಎನ್ನುವುದು ಕೆಡುಕಿನ, ಕತ್ತಲೆಯ, ದುಷ್ಟತನದ ಸಂಕೇತ. ಚಾಮುಂಡಿ ತಾಯಿಯು ಬೆಳಕಿನ, ಒಳಿತಿನ ಹಾಗೂ ಸದಾಚಾರದ ಸಂಕೇತ. ನಾವು ಜೀವನದಲ್ಲಿ ಎಂದಿಗೂ ಒಳಿತನ್ನೇ ವಿಜೃಂಭಿಸಬೇಕು, ಅದನ್ನೇ ಜೀವನದಲ್ಲಿ ಪಾಲಿಸಬೇಕು. ಅದಕ್ಕಾಗಿಯೇ ಕೆಡುಕಿನ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ಮೈಸೂರಿನಲ್ಲಿ ದಸರಾ ಆಚರಣೆ ನಡೆಯುತ್ತಿದೆ.
ಇತ್ತೀಚಿಗೆ ಹುಟ್ಟಿರುವ ಕೆಲವು ಕಟ್ಟುಕಥೆಗಳ ಇತಿಹಾಸಕಾರರು ಮಹಿಷನನ್ನು ರಾಕ್ಷಸ ಎನ್ನುವುದರಿಂದ ಹೊರತಂದು ಆತನೊಬ್ಬ ಒಳ್ಳೆಯ ರಾಜ, ಅವನೊಬ್ಬ ಬೌದ್ಧನಾಗಿದ್ದ ಎಂಬ ಕಥೆ ಕಟ್ಟುತ್ತಿದ್ದಾರೆ. ಇವರ ಉದ್ದೇಶ ಇಷ್ಟೆ. ಬೌದ್ಧ ಮತಕ್ಕೆ ಮಹಿಷಾಸುರನನ್ನು ಅಂಟಿಸಿಬಿಟ್ಟರೆ ಅಷ್ಟರ ಮಟ್ಟಿಗೆ ದಲಿತ ಸಮುದಾಯಕ್ಕೆ ಹತ್ತಿರ ಮಾಡಿಸಿದಂತೆ ಆಗುತ್ತದೆ. ಆಗ ಮಹಿಷನನ್ನು ಯಾರಾದರೂ ತೆಗಳಿದರೆ ದಲಿತ ಸಮುದಾಯವನ್ನು ತೆಗಳಿದಂತೆ ಎಂಬ ನರೇಟಿವ್ ಸೃಷ್ಟಿ ಮಾಡುವುದು. ಮುಂದಿನ ದಿನಗಳಲ್ಲಿ ಚಾಮುಂಡಿ ತಾಯಿಯನ್ನೇ ನಕಾರಾತ್ಮಕವಾಗಿ ಬಿಂಬಿಸಿ, ಒಟ್ಟಾರೆ ಆರ್ಯ-ದ್ರಾವಿಡ, ಮೂಲನಿವಾಸಿ-ವಲಸಿಗರು ಎಂಬ ಸವೆದುಹೋದ ಸಿದ್ಧಾಂತಕ್ಕೆ ಮರುಜೀವ ನೀಡುವುದು. ಸಹಬಾಳ್ವೆಯಿಂದ ಜೀವನ ನಡೆಸಲು ಬಯಸುವ ಸಮುದಾಯಗಳಲ್ಲಿ ಒಡಕನ್ನು ಉಂಟುಮಾಡುವ ಉದ್ದೇಶ ಹೊರತುಪಡಿಸಿ ಇದರ ಹಿಂದೆ ಯಾವುದೇ ಘನ ಕಾರಣ ಕಾಣುತ್ತಿಲ್ಲ. ಈ ಉತ್ಸವ ನಡೆಸುವವರನ್ನು ಇಡೀ ದಲಿತ ಸಮಾಜ ಒಪ್ಪಿಬಿಟ್ಟಿದೆ ಎಂದೇನಿಲ್ಲ. ದಲಿತ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು, ಅದೇ ವೇಳೆ ದೇಶದ ಅಖಂಡತೆಯೂ, ಸಾಮಾಜಿಕ ಸಾಮರಸ್ಯವೂ ಜೀವಂತವಾಗಿರಬೇಕು ಎಂದು ಬಯಸಿದ ಅಂಬೇಡ್ಕರಂತಹ ಮಹಾತ್ಮರು ಎಲ್ಲಿ? ಸಮಾಜವನ್ನು ಒಡೆಯಲು, ಇಲ್ಲಸಲ್ಲದ ಸಿದ್ಧಾಂತಗಳನ್ನು ಹರಿಯಬಿಡುವ ಈಗಿನ ಕಟ್ಟುಕತೆ ಇತಿಹಾಸಕಾರರೆಲ್ಲಿ? ಈಗ ಮಹಿಷನನ್ನು ಆರಾಧಿಸಲು ಮುಂದಾಗಿರುವ ಗುಂಪಿನಲ್ಲಿರುವ ಸದಸ್ಯರೇ ಈ ಹಿಂದೆ ಜಗದ್ಗುರು ಶಂಕರಾಚಾರ್ಯರ ವಿರುದ್ಧ, ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್‌ ವಿರುದ್ಧ ಅಪಪ್ರಚಾರ ಮಾಡಿದವರು !
ಇಂದು ದೇಶ ವಿದೇಶಗಳಲ್ಲಿ ಭಾರತದ್ದು ಎಂದು ಹೇಳಲಾಗುವ ಮೌಲ್ಯಗಳಲ್ಲಿ ಪ್ರಮುಖವಾದದ್ದು ಕೆಡುಕಿನ ವಿರುದ್ಧ ಒಳಿತಿನ ಜಯ. ಅಂಧಕಾರದಿಂದ ಬೆಳಕಿನೆಡೆಗೆ ನಡೆಯುವ ಜೀವನ. ಇದೇ ಕಾರಣಕ್ಕೆ ಅಮೆರಿಕದ ಶ್ವೇತಭವನದಲ್ಲೂ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ಹಿಂದು ಸಮಾಜದಲ್ಲಿ ಅಸ್ಪೃಶ್ಯತೆಯ ಸಮಸ್ಯೆ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಹಿಂದೆ ಇದ್ದಂತಹ ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗಿದೆ, ಮನಗಳು ಒಂದುಗೂಡುವತ್ತ ಸಾಗಿವೆ. ಇನ್ನೊಂದೆರಡು ಪೀಳಿಗೆಯ ಜೀವಿತದಲ್ಲಿ ಇನ್ನೂ ಸುಧಾರಣೆ ಆಗುವ ಎಲ್ಲ ಲಕ್ಷಣಗಳಿವೆ. ಈ ಹಂತದಲ್ಲಿ ಸಮಾಜದಲ್ಲಿ ಗೊಂದಲ ಮೂಡಿಸುವ, ಮನಸ್ಸುಗಳನ್ನು ಒಡೆಯುವ ಕೆಲಸಕ್ಕೆ ಯಾರೂ ಕೈ ಹಾಕುವುದು ತರವಲ್ಲ. ಅಂಬೇಡ್ಕರರಂತಹ ಮಹಾತ್ಮರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಹಾಗೆಯೇ ಮಹಿಷನಂತಹ ಅಸುರನನ್ನು ಒಂದು ಸಮುದಾಯಕ್ಕೆ ಟ್ಯಾಗ್‌ ಮಾಡುವುದೂ ಅಪಾಯಕಾರಿ. ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಗೆ ನಾವು ಯಾವ ಮೌಲ್ಯಗಳನ್ನು ಉಳಿಸಿ ಹೋಗುತ್ತೇವೆ? ಈ ರೀತಿ ಮಾಡಲು ಮುಂದಾಗಿರುವ ಕುತ್ಸಿತ ಮನಸ್ಸುಗಳನ್ನು ಆದಷ್ಟೂ ಬೇಗ ಸಮಾಜ ಗುರುತಿಸಿ ಅವರನ್ನು ದೂರ ಇಡುವುದೊಂದೇ ಭಾರತದ ಏಳಿಗೆಗೆ ಏಕೈಕ ಮಾರ್ಗ ಎನ್ನಿಸುತ್ತದೆ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top