ಸದನದಲ್ಲಿ ಐದಿಂಚು ಗೋಡೆಯನ್ನೇ ದಾಟುವಂತಿಲ್ಲ; ಅಂಥದ್ದರಲ್ಲಿ ಸಂಸತ್ ಮೇಲಿನ ದಾಳಿ ಕ್ಷಮಿಸಬೇಕೆ?

ಡಿಸೆಂಬರ್ 13ರಂದು ಲೋಕಸಭೆಯ ಸದನದಲ್ಲಿ ಶೂನ್ಯವೇಳೆ ನಡೆಯುತ್ತಿದ್ದಾಗ ಸಾಗರ ಶರ್ಮಾ ಹಾಗೂ ಡಿ. ಮನೋರಂಜನ ಎಂಬಿಬ್ಬರು ಯುವಕರು ಗದ್ದಲ ಎಬ್ಬಿಸಿದರು. ವೀಕ್ಷಕರ ಗ್ಯಾಲರಿಯಿಂದ ದಿಢೀರನೆ ಜಿಗಿದು ಘೋಷಣೆ ಕೂಗಲು ಪ್ರಾರಂಭಿಸಿದರು. ಒಬ್ಬನಂತೂ ಸದಸ್ಯರ ಮೇಜಿನ ಮೇಲೆ ಮಂಗನಂತೆ ಜಿಗಿಯುತ್ತ ಸ್ಪೀಕರ್ ಕುರ್ಚಿ ಕಡೆಗೆ ಹೋಗುತ್ತಿದ್ದ. ಕೂಡಲೇ, ಸ್ಪೀಕರ್ ಸ್ಥಾನದಲ್ಲಿ ಆ ಸಮಯದಲ್ಲಿ ಆಸೀನರಾಗಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರ್ವಾಲ ಅವರ ಕೈಗೆ ಸಂಸತ್ತಿನ ಅಧಿಕಾರಿಗಳು ಚೀಟಿಯೊಂದನ್ನು ನೀಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವಿಲ್ಲದ ಕಾರಣಕ್ಕೆ ಸ್ವತಃ ನಡುಗುವ ಸ್ವರದಲ್ಲೇ ಅಗರ್ವಾಲ ಅವರು “ಸದನದ ಕಾರ್ಯ ಕಲಾಪವನ್ನು ಎರಡು ಗಂಟೆವರೆಗೆ ಮುಂದೂಡಲಾಗಿದೆ” ಎಂದು ಘೋಷಿಸಿದರು. ನೇರಪ್ರಸಾರ ಮಾಡುತ್ತಿದ್ದ ಲೋಕಸಭೆ ಟಿವಿಯ ಸಿಗ್ನಲ್ ಅಲ್ಲಿಗೆ ಸ್ಥಗಿತವಾಯಿತು. ಅಲ್ಲಿಂದ ನಂತರ ಏನಾಯಿತು ಎಂದು ಒಂದು ಕ್ಷಣ ಗಾಬರಿಯಾಗಿದ್ದಂತೂ ನಿಜ. ಇದೇ ವೇಳೆ ಇನ್ನಿಬ್ಬರು ಸಂಸತ್ತಿನ ಹೊರಗಡೆ, ತನ್ನನ್ನು ತಾನು ಯುವತಿ ಎಂದು ಕರೆದುಕೊಳ್ಳುವ ನೀಲಂ ಆಝಾದ್ ಎಂಬ 42 ವರ್ಷದ ಮಹಿಳೆ ಹಾಗೂ ಅಮೋಲ ಶಿಂಧೆ ಸ್ಮೋಕ್ ಕ್ಯಾಂಡಲ್‌ನಿಂದ ಹಳದಿ ಹೊಗೆ ಜತೆಗೆ ಘೋಷಣೆಗಳನ್ನು ಕೂಗಿದರು. ತಕ್ಷಣ ಪೊಲೀಸರು ಇಬ್ಬರನ್ನೂ ಬಂಧಿಸಿದರು.

ಇಷ್ಟಕ್ಕೂ ನಾಲ್ವರು ಸಂಸತ್ ಒಳಗೆ ಪ್ರವೇಶಿಸಿದ್ದಕ್ಕೆ ಏಕೆ ಗಾಬರಿಯಾಗಬೇಕು? ಅವರೇನು ಬಂದೂಕು ತಂದಿದ್ದರೇ? ಅವರೇನು ಯಾರನ್ನಾದರೂ ಕೊಂದರೇ? ಯಾರನ್ನಾದರೂ ಒತ್ತೆಯಾಗಿರಿಸಿಕೊಂಡರೇ? ಎಂಬ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲ ಹೊಣಗೇಡಿಗಳು ಕೇಳುತ್ತಿದ್ದಾರೆ. ಮೊದಲನೆಯದಾಗಿ, ಸಂವಿಧಾನ ಎನ್ನುವುದು ದೇಶವನ್ನು ಮುನ್ನಡೆಸುವ ಆತ್ಮವಾದರೆ, ಸಂಸತ್ ಭವನ ಎನ್ನುವುದು ಇಡೀ ದೇಶದ ಹೃದಯ. ಪತ್ರಕರ್ತರಾದವರಿಗೆ ಇದರ ಅರಿವಿರುತ್ತದೆ. ವಿಧಾನಸೌಧದ ಉದಾಹರಣೆಯನ್ನೇ ತೆಗೆದುಕೊಂಡರೆ, ಸಭಾಂಗಣದೊಳಕ್ಕೆ ಕೇವಲ ಸದಸ್ಯರಿಗೆ, ವಿಧಾನಮಂಡಲ ಅಧಿಕಾರಿಗಳಿಗೆ ಹಾಗೂ ಮಾರ್ಷಲ್‌ಗಳಿಗಷ್ಟೇ ಪ್ರವೇಶವಿರುತ್ತದೆ. ಪತ್ರಕರ್ತರಿಗೆ ಬೇರೆ ಗ್ಯಾಲರಿ, ಉಳಿದ ಸರ್ಕಾರಿ ಅಧಿಕಾರಿಗಳಿಗೆ ಬೇರೆ ಗ್ಯಾಲರಿ, ಪ್ರೇಕ್ಷಕರಿಗೆ ಬೇರೆ ಗ್ಯಾಲರಿ ಇರುತ್ತದೆ. ಪತ್ರಕರ್ತರು ವರದಿ ಮಾಡಲು ಕುಳಿತುಕೊಳ್ಳುವ ಗ್ಯಾಲರಿಗೂ ಶಾಸಕರ ಸಭಾಂಗಣಕ್ಕೂ ನಡುವೆ ಇರುವುದು ಕೇವಲ 5 ಇಂಚಿನ ಒಂದು ಮರದ ಕಟ್ಟೆ ಅಷ್ಟೆ. ಅದನ್ನು ಯಾವುದೇ ಸಂದರ್ಭದಲ್ಲಿ ದಾಟಿ ಪತ್ರಕರ್ತರು ಒಳಗೆ ಹೋಗುವಂತಿಲ್ಲ.

ಮಾರ್ಷಲ್‌ಗಳು ಎಂದರೆ ಭದ್ರತಾ ಸಿಬ್ಬಂದಿ. ಇವರೇನು ಸಂಸತ್ತಿನ ಅಥವಾ ವಿಧಾನಮಂಡಲದ ಭದ್ರತಾ ಸಿಬ್ಬಂದಿ ಅಲ್ಲ. ಅವರುಗಳೂ ಸಾಮಾನ್ಯ ಪೊಲೀಸ್ ಸಿಬ್ಬಂದಿ. ಆದರೆ ವಿಧಾನಮಂಡಲ ಅಧಿವೇಶನ ನಡೆಯುವ ಸಮಯದಲ್ಲಿ ಅವರೆಲ್ಲರೂ ಖಾಕಿ ಕಳಚಿ ಬಿಳಿ ಸಮವಸ್ತ್ರ ಧರಿಸಿ ಒಳಗೆ ಪ್ರವೇಶಿಸುತ್ತಾರೆ. ಯಾವುದೇ ಸಂದರ್ಭದಲ್ಲೂ ಖಾಕಿ ಪಡೆಯೂ ವಿಧಾನಮಂಡಲದ ಈ ಸಭಾಂಗಣದೊಳಗೆ ಕಾಲಿಡುವಂತಿಲ್ಲ. ಇದು ಸಂವಿಧಾನಕರ್ತೃಗಳು ಶಾಸನರಚನಾಕಾರರಿಗೆ (ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು) ನೀಡುವ ರಕ್ಷಣೆ. ಸದನದೊಳಗೆ ನಿಂತು ಸದಸ್ಯನೊಬ್ಬ ನ್ಯಾಯಾಲಯಕ್ಕೆ ಬೇಕಾದರೂ ಟೀಕಿಸಬಹುದು. ಅವರ ಮಾತಿನ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಕೇವಲ ಸಭಾಪತಿ ಇಲ್ಲವೇ ಸ್ಪೀಕರ್ ಗೆ ಮಾತ್ರ ಇರುತ್ತೆ. ನ್ಯಾಯಾಲಯದಲ್ಲೂ ಇದನ್ನು ಪ್ರಶ್ನಿಸುವಂತಿಲ್ಲ, ನ್ಯಾಯಾಂಗ ನಿಂದನೆಯ ಮಾತೇ ಇಲ್ಲ. ಓದುಗರಿಗೆ ಅಚ್ಚರಿ ಎನಿಸಬಹುದು. ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಲು ತೆರಳುತ್ತಿರುವ ಸದಸ್ಯನೊಬ್ಬ, ರಸ್ತೆಯಲ್ಲಿ ಯಾರಾದರೂ ತನ್ನನ್ನು ಉದ್ದೇಶಪೂರ್ವಕವಾಗಿ ತಡೆಗಟ್ಟಿ ಸದನಕ್ಕೆ ಬರುವುದನ್ನು ವಿಳಂಬ ಮಾಡಿಸಿದರೆ, ಅಂಥವರ ವಿರುದ್ಧ ‘ಹಕ್ಕು ಚ್ಯುತಿ’ ಮಂಡಿಸಬಹುದು. ದೇಶ ನಡೆಯುವುದೇ ಶಾಸನದ ಆಧಾರದಲ್ಲಿ. ಅಲ್ಲಿ ಯಾವುದೇ ಹಸ್ತಕ್ಷೇಪ, ನಿರ್ಬಂಧ ಇರಕೂಡದು. ಅಂತಹ ಮುಕ್ತ ವಾತಾವರಣ ಇರಬೇಕು ಎಂಬ ಕಾರಣಕ್ಕೆ ಇಷ್ಟು ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಇಂತಹ ರಕ್ಷಿತ ಹಾಗೂ ಪವಿತ್ರ ಪ್ರದೇಶಕ್ಕೆ ಅನಧಿಕೃತ ಪ್ರವೇಶ ಮಾಡಿದ್ದು ಸ್ಪಷ್ಟವಾಗಿ ಅಪರಾಧ, ಇದರಲ್ಲಿ ಎರಡು ಮಾತೇ ಇಲ್ಲ.

ಎರಡನೆಯದಾಗಿ, ಈ ಘಟನೆ ನಡೆಸಲು ಆಯ್ಕೆ ಮಾಡಿಕೊಂಡ ದಿನ ಯಾವುದು? ಡಿಸೆಂಬರ್ 13 ಎನ್ನುವುದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಕರಾಳ ದಿನ. 2001 ಡಿಸೆಂಬರ್ 13ರಂದು ಐವರು ಬಂದೂಕುಧಾರಿ ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಅವರೊಂದಿಗೆ ಸೆಣೆಸಿ ಹೊಡೆದುರುಳಿಸುವ ವೇಳೆಗೆ ಆರು ದೆಹಲಿ ಪೊಲೀಸ್ ಸಿಬ್ಬಂದಿ, ಇಬ್ಬರು ಸಿಆರ್ಪಿಎಫ್ ಯೋಧರು, ಒಬ್ಬ ಇತರೆ ಸಿಬ್ಬಂದಿ ಸೇರಿ 9 ಜನರ ಬಲಿದಾನವಾಯಿತು. ದೇಶದಲ್ಲಿ ಸರ್ವಾಧಿಕಾರ ಆಡಳಿತವಿದೆ, ನಿರುದ್ಯೋಗ ಹೆಚ್ಚಾಗಿದೆ ಎಂದು ಬಾಯಿಗೆ ಬಂದಂತೆ ಘೋಷಣೆ ಕೂಗಿದ ಈ ನಾಲ್ವರು ಅಪರಾಧಿಗಳು ಏಕೆ ಇದೇ ದಿನವನ್ನು ಆಯ್ಕೆ ಮಾಡಿಕೊಂಡರು? ಇಡೀ ದೇಶವು ತಲೆತಗ್ಗಿಸುವಂತೆ ಮಾಡಿದ ದಿನವೇ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಬೇಕೆಂದೆ?

ಬೇರೆ ಬೇರೆ ರಾಜ್ಯಗಳಿಗೆ ಸೇರಿದ ಈ ಅಪರಾಧಿಗಳು ಫೇಸ್ಬುಕ್ನಲ್ಲಿ ಭಗತ್ ಸಿಂಗ್ ಫ್ಯಾನ್ ಕ್ಲಬ್ ಮೂಲಕ ಪರಿಚಿತರಾದರು ಎನ್ನಲಾಗುತ್ತಿದೆ. ಭಗತ್ ಸಿಂಗ್ ಫ್ಯಾನ್ಸ್ ಆದ ಕಾರಣ, ಇವರೂ ಭಗತ್ ಸಿಂಗ್ ರೀತಿಯಲ್ಲೇ ‘ಹೋರಾಟʼ ನಡೆಸಿದರು ಎಂದು ಬಣ್ಣ ಬಳಿಯುವ ಹುನ್ನಾರವೂ ನಡೆಯುತ್ತಿದೆ.

1929 ಎಪ್ರಿಲ್ 8ರಂದು ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ಸಂಸತ್ತಿನ ಒಳಗಡೆ ಬಾಂಬ್ ಎಸೆದಿದ್ದರು. ಯಾವ ಸದಸ್ಯರೂ ಇಲ್ಲದ, ಖಾಲಿ ಸ್ಥಳಗಳನ್ನು ನೋಡಿ ಬಾಂಬ್ ಎಸೆದಿದ್ದರು. ಬಾಂಬ್ ಎಸೆದಿದ್ದು ಯಾರದ್ದೇ ಪ್ರಾಣ ಹಾನಿ ಮಾಡಲು ಅಲ್ಲ. ಅಂದು ದೇಶದಲ್ಲಿ ಅಧಿಕಾರ ಚಲಾಯಿಸುತ್ತಿದ್ದದ್ದು ಬ್ರಿಟಿಷರು. ಅವರು ಹೇಗೆ ಭಾರತವನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ವಿಶ್ವಕ್ಕೆ, ವಿಶೇಷವಾಗಿ ಬ್ರಿಟನ್ನಿಗೆ ತಿಳಿಸಬೇಕಾಗಿತ್ತು. ಜತೆಗೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚೆಚ್ಚು ಭಾಗವಹಿಸುವಂತೆ ಯುವಕರಿಗೆ ಸಂದೇಶ ನೀಡಬೇಕಿತ್ತು. ಅದಕ್ಕಾಗಿ ಇಂಥದ್ದೊಂದು ಶಾಕ್ ನೀಡುವ ಘಟನೆಯ ಯೋಜನೆ ಮಾಡಿದರು. ಅಂತಹ ಉದಾತ್ತ ಚಿಂತನೆಯನ್ನು ಹೊಂದಿದ್ದ ಘಟನೆಗೂ ಇಂದಿನ ಈ ದಾರಿ ತಪ್ಪಿದ ಯುವಕರು ಎಸಗಿದ ಕೃತ್ಯಕ್ಕೂ ಹೋಲಿಕೆ ಮಾಡುತ್ತಿರುವುದೇ ಒಂದು ರೀತಿ ಬೌದ್ಧಿಕ ಅಪರಾಧ. ಜತೆಗೆ ಇದು ಸ್ವಾತಂತ್ರ್ಯ ಹೋರಾಟಕ್ಕೆ ಮಾಡುವ ಅವಮಾನ.

ಇದೀಗ ಸಂಸತ್ ಮೇಲೆ ದಾಳಿ ಮಾಡಿರುವವರೆಲ್ಲರೂ ಅಚಾನಕ್ಕಾಗಿ ಬಂದವರಲ್ಲ. ಎಲ್ಲವನ್ನೂ ಪ್ಲಾನ್ ಮಾಡಿಕೊಂಡೇ ಬಂದಿದ್ದಾರೆ. ಆಗಲೇ ಹೇಳಿದಂತೆ, ಸಂಸತ್ತಿನ ಮೇಲೆ ಉಗ್ರರು ದಾಳಿ ಮಾಡಿದ ದಿನಾಂಕವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಪರಾಧಿಗಳೆಲ್ಲ ಐಎನ್‌ಡಿಐಎ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಜೊತೆ ವಿವಿಧ ರೀತಿಯಲ್ಲಿ ನಂಟು ಹೊಂದಿರುವ ಅನುಮಾನಗಳು ಕಾಣುತ್ತಿವೆ. ಯಾವುದೇ ಪುರಾವೆಗಳು ಸಿಗಬಾರದೆಂದು ಎಲ್ಲ ಅಪರಾಧಿಗಳ ಮೊಬೈಲ್ಗಳನ್ನು ಲಲಿತ್ ಝಾ ಸುಟ್ಟು ಹಾಕಿದ್ದಾನೆ. ಸಂಸತ್ ಪ್ರವೇಶದಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ವಿವಿಧ ಹಂತದ ತಪಾಸಣೆ ಇದ್ದರೂ ಸ್ಮೋಕ್ ಬಾಂಬ್ ಹೇಗೆ ಒಯ್ದರು ಎಂಬುದು ಅಚ್ಚರಿಯ ವಿಚಾರ. ಕಚೇರಿಗೆ ಆಗಮಿಸಿದವರಿಗೆ ಅಣ್ಣಮ್ಮ, ಮಾರಮ್ಮ, ಗಣೇಶ ಕೂರಿಸಲು 5-10 ಸಾವಿರ ರೂ. ಕೊಡುವಂತೆ ಅತ್ಯಂತ ನಿರ್ಲಕ್ಷ್ಯತನದಿಂದ ಸಂಸತ್ ಪಾಸ್ ವಿತರಿಸುವ ಮೈಸೂರು-ಕೊಡಗು ಸಂಸದರ ಕಚೇರಿಯ ಬೇಜವಾಬ್ದಾರಿತನವನ್ನೂ ನಾಜೂಕಾಗಿ ಇವರೆಲ್ಲ ಬಳಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. 2024ರ ಲೋಕಸಭೆ ಚುನಾವಣೆಗೆ ಇದು ದಿಕ್ಸೂಚಿ ಎಂದೇ ಭಾವಿಸಲಾಗುತ್ತಿದೆ. ಸಮುದಾಯಗಳನ್ನು ಒಬಿಸಿ ವೋಟ್‌ಬ್ಯಾಂಕ್ ಹೆಸರಿನಲ್ಲಿ ಒಡೆದು ಬಿಜೆಪಿಯನ್ನು ಸೋಲಿಸಬಹುದು ಎಂದು ಐಎನ್‌ಡಿಐಎ ಬ್ಲಾಕ್ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಕರ್ನಾಟಕದಲ್ಲಿ ಜಾದೂ ಮಾಡಿದ ಕಾಂಗ್ರೆಸ್ ಗ್ಯಾರಂಟಿಯು ತೆಲಂಗಾಣದ ಗಡಿಯನ್ನು ದಾಟಿ ಮುಂದೆ ಹೋಗಲಿಲ್ಲ. ಇತ್ತೀಚೆಗಷ್ಟೆ ಕಾಂಗ್ರೆಸ್ ಒಡಿಶಾದ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 351 ಕೋಟಿ ರೂ. ನಗದು ಜತೆಗೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ವಿವರ, ದಾಖಲೆ ಸಿಕ್ಕಿದೆ. ಇದೆಲ್ಲವೂ ಕಾಂಗ್ರೆಸ್ ಹಾಗೂ ಐಎನ್‌ಡಿಐಐಎ ಬ್ಲಾಕ್ ಕುರಿತು ಜನರಲ್ಲಿ ನಕಾರಾತ್ಮಕ ಭಾವನೆ ಮೂಡಿಸುತ್ತಿದೆ. ಇದೇ ವೇಳೆ ಕೇಂದ್ರ ಸರ್ಕಾರವು ಈ ಅಧಿವೇಶನದಲ್ಲಿ ಟೆಲಿಕಾಂ ಮಸೂದೆ, ವಿವಿಧ ವಸಾಹತು ಕಾಲದ ಕಾಯ್ದೆಗಳನ್ನು ರದ್ದುಪಡಿಸುವ ಪ್ರಸ್ತಾವನೆಯನ್ನೂ ಹೊಂದಿತ್ತು. ಇದೆಲ್ಲದರಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು, ಸಂಸತ್ ಮೇಲೆ ದಾಳಿ ಮಾಡಲಾಯಿತೇ? ಎಂದು ಅನುಮಾನಗಳು ಬರುತ್ತವೆ. ಕಾರಣ ಯಾವುದೇ ಇರಲಿ, ಈಗ ದಾಳಿ ಮಾಡಿದವರಿಂದ ಯಾರಿಗೂ ಹಾನಿ ಆಗದೇ ಇರಲಿ, ಇದು ದೇಶದ ಮೇಲೆ ನಡೆಸಿದ ದಾಳಿ ಎಂದೇ ಪರಿಗಣಿಸಬೇಕು. ಮೆಟ್ರೋ ರೈಲಿನಲ್ಲಿ ಇದ್ದಕ್ಕಿದ್ದಂತೆ ನೃತ್ಯ ಮಾಡುವ, ಜಗಳ ಆಡುವಂತೆ ಪ್ರಾಂಕ್ ವಿಡಿಯೋ ಮಾಡುವುದಕ್ಕೂ, ಸಂಸತ್ ಭದ್ರತೆಯನ್ನು ಮುರಿದು ಒಳಗೆ ನುಗ್ಗುವುದಕ್ಕೂ ವ್ಯತ್ಯಾಸವಿದೆ ಎನ್ನುವುದು ಈ ದೇಶದ ಜನರಿಗೆ ಅರಿವಿಗೆ ಬರುವಂತೆ ಶಿಕ್ಷೆಯೂ ಆಗಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top