ಮರಣವೇ ದಂಡನೆ, ಹಾಗಂತ ಕೊಲ್ಲುವುದು ಪೊಲೀಸರ ಕೆಲಸವಲ್ಲ

ಇತ್ತೀಚಿನ ಕೆಲ ರೇಪ್‌ ಪ್ರಕರಣಗಳನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ರೇಪ್‌ ಇನ್‌ ಇಂಡಿಯಾ ಎಂಬ ಹೊಸ ಘೋಷವಾಕ್ಯ ಮೊಳಗಿಸಿದ್ದಾರೆ. ಹಾಗೆಯೇ ಸಂಸತ್ತಿನ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದೆ. ಈ ಎರಡು ಮಹತ್ವದ ವಿಷಯಗಳ ತುಲನಾತ್ಮಕ ಅವಲೋಕನ ಇಲ್ಲಿದೆ.

ಹೈದರಾಬಾದ್‌ನ ಪಶುವೈದ್ಯೆ ಮೇಲಿನ ಅತ್ಯಾಚಾರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಅತ್ಯಾಚಾರ ಎಸಗಿದ ಕಿರಾತಕರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಇಡೀ ದೇಶವೇ ಏಕ ಕಂಠದಿಂದ ಆಗ್ರಹಿಸಿದೆ. ಹಾಗಂದ ಮಾತ್ರಕ್ಕೆ ವಿಚಾರಣಾಧೀನ ಕೈದಿಗಳಾಗಿರುವ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಗುಂಡು ಹೊಡೆದು ಕೊಲ್ಲುವುದು ಎಷ್ಟು ಸರಿ? ಹೀಗೊಂದು ಚರ್ಚೆ ಶುರುವಾಗಿರುವುದು ಗೊತ್ತಿರುವ ಸಂಗತಿ.

2012ರ ಡಿ.16ರಂದು ದಿಲ್ಲಿಯಲ್ಲಿನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಆಘಾತದಿಂದಲೇ ದೇಶ ಚೇತರಿಸಿಕೊಂಡಿಲ್ಲ. ನಿರ್ಭಯಾ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಅಂಥದ್ದರಲ್ಲಿಹೈದರಾಬಾದ್‌ನ ಶಂಸಾಬಾದ್‌ ನಿವಾಸಿ ‘ದಿಶಾ’ ಮೇಲೆ ನಾಲ್ವರು ನರರಾಕ್ಷಸರು ಸಾಮೂಹಿಕ ಅತ್ಯಾಚಾರ ಮಾಡಿ ಸುಟ್ಟು ಹಾಕಿದರು. ಈ ಬರ್ಬರ ಘಟನೆ ಒಂದೆಡೆಯಾದರೆ, ಮುಂದೇನು ಎನ್ನುವ ಹೊತ್ತಿಗೆ ಕೇವಲ ಒಂದು ವಾರದಲ್ಲಿಆರೋಪಿಗಳ ಎನ್‌ಕೌಂಟರ್‌ ನಡೆದು ಇಡೀ ಪ್ರಕರಣ ಹೊಸದೊಂದು ಆಯಾಮಕ್ಕೆ ಹೊರಳಿದೆ. ಪ್ರಕರಣದ ತನಿಖೆ ನಡೆಸಿ ಸಾಕ್ಷ್ಯಾಧಾರ ಕಲೆ ಹಾಕುತ್ತಿರುವ ಪೊಲೀಸ್‌ ತಂಡ ಅತ್ಯಾಚಾರದ ಘಟನಾವಳಿ ಮರುಸೃಷ್ಟಿಗೋಸ್ಕರ ಅತ್ಯಾಚಾರ ನಡೆದ ಪ್ರದೇಶಕ್ಕೆ ಡಿ. 4ರ ಬೆಳಗಿನ ಆರೋಪಿಗಳನ್ನು ಕರೆದೊಯ್ದಿದ್ದಾಗ ಆ ಎನ್‌ಕೌಂಟರ್‌ ನಡೆದಿದೆ. ಆ ಪೊಲೀಸ್‌ ಎನ್‌ಕೌಂಟರನ್ನು ಕೋಟ್ಯಂತರ ಜನರು ಸಂಭ್ರಮಿಸಿದ್ದಾರೆ. ಆ ಸಂಭ್ರಮ ಈ ದೇಶದಲ್ಲಿಮಹಿಳೆಯರ ಕುರಿತು ಇರುವ ಗೌರವದ ದ್ಯೋತಕ. ಅತ್ಯಾಚಾರದಂತಹ ಮೃಗೀಯ ಪ್ರವೃತ್ತಿಯ ವಿರುದ್ಧ ಇರುವ ಸಹಜ ಜನಾಕ್ರೋಶದ ಪರಿಣಾಮ ಎಂದು ಭಾವಿಸೋಣ.

ಆದರೆ ಲಕ್ಷಾಂತರ, ಕೋಟ್ಯಂತರ ಜನರು ಜೈ ಎನ್ನುತ್ತಿದ್ದಾರೆ ಅಂದ ಮಾತ್ರಕ್ಕೆ ಪೊಲೀಸ್‌ ಎನ್‌ಕೌಂಟರನ್ನು ಸುಲಭವಾಗಿ ಒಪ್ಪುವುದು ಹೇಗೆ. ಭಾರತ ಜನರಿಂದ ಜನರಿಗೋಸ್ಕರ ಕೊಡಲ್ಪಟ್ಟ ಸಂವಿಧಾನಬದ್ಧ ಆಳ್ವಿಕೆಗೆ ಒಳಪಟ್ಟ ದೇಶ. ಇಲ್ಲಿಸಂತ್ರಸ್ತೆಗೆ ನ್ಯಾಯ ಕೊಡುವುದಕ್ಕೂ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಕ್ಕೂ ನಮ್ಮ ಸಂವಿಧಾನ, ನಮ್ಮ ಕಾಯಿದೆ-ಕಾನೂನೇ ಮೂಲಾಧಾರ. ಹಾಗಂತ ವಿಚಾರಣೆ ವೇಳೆ ಕೈದಿಯೊಬ್ಬ ಮಾರಣಾಂತಿಕ ದಾಳಿ ನಡೆಸಲು ಮುಂದಾದರೆ ತನ್ನ ಜೀವರಕ್ಷಣೆ ಮಾಡಿಕೊಳ್ಳಬೇಕಾದ ಹಕ್ಕು ಪೊಲೀಸರಿಗಿಲ್ಲವೇ? ಇದ್ದೇ ಇದೆ. ಅತ್ಯಾಚಾರ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರು, ಪೊಲೀಸರ ಬಳಿಯಿದ್ದ ಪಿಸ್ತೂಲನ್ನೇ ತೆಗೆದುಕೊಂಡು ಗುಂಡು ಹಾರಿಸಲು ಯತ್ನಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಆ ಸಂಗತಿಯ ನಿಷ್ಕರ್ಷೆ ಕೂಡ ಈಗ ಆರಂಭವಾದ ತನಿಖೆಯಿಂದ ಹೊರಬರಬೇಕು. ಅತ್ಯಾಚಾರ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದು ನಿಜವಾದರೆ ಎನ್‌ಕೌಂಟರ್‌ ಮಾನ್ಯವಾಗುತ್ತದೆ. ಅದಲ್ಲದಿದ್ದರೆ ಎನ್‌ಕೌಂಟರ್‌ ನಡೆಸಿದ ಪೊಲೀಸರು ಜೀವನಪರ್ಯಂತ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ಭಾರತದ ಕಾನೂನಿನ ವೈಶಿಷ್ಟ್ಯ ಎನ್ನಲು ಅಡ್ಡಿಯಿಲ್ಲ. ಆ ಕಾರಣಕ್ಕಾಗಿಯೇ ಭಾರತವು ಪಾಕಿಸ್ತಾನ, ಅಫಘಾನಿಸ್ತಾನ, ಅರಬ್‌ ದೇಶಗಳಿಗಿಂತ ಭಿನ್ನ ಮತ್ತು ಶ್ರೇಷ್ಠ ಎನಿಸಿಕೊಂಡಿರುವುದು.

ಇನ್ನು ಹೈದರಾಬಾದ್‌ ಎನ್‌ಕೌಂಟರ್‌ ಘಟನೆಗೆ ಸಂಬಂಧಿಸಿ ಜಿಜ್ಞಾಸೆಯ ಪ್ರಶ್ನೆಗಳು ಈ ರೀತಿ ಹುಟ್ಟಿಕೊಳ್ಳುತ್ತ ಹೋಗುತ್ತವೆ. ಭಾರತದ ಒಬ್ಬ ಪ್ರಜೆಯ ಸ್ವಾತಂತ್ರ್ಯ ಮತ್ತು ಆತ ಎಸಗಬಹುದಾದ ಅಪರಾಧಕ್ಕೆ ಅನುಭವಿಸುವ ಶಿಕ್ಷೆ ಕುರಿತು ಸಂವಿಧಾನ/ಕಾನೂನು ಹೇಳುವುದೇನು? ಒಬ್ಬ ವ್ಯಕ್ತಿ ಅಪರಾಧ ಎಸಗಿರುವುದು ಸ್ಥಾಪಿತ ಕಾಯಿದೆ ಪ್ರಕಾರ ನಿರೂಪಿತವಾಗದೇ ಇರುವಾಗ ಯಾವುದೇ ತೆರನಾದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಶಿಕ್ಷೆಗೆ ಗುರಿಪಡಿಸಲು ಆಗದು ಎಂದು ಸಂವಿಧಾನದ 20ನೇ ವಿಧಿ ಹೇಳುತ್ತದೆ.

(ವಿಧಿ- 20: Protection in respect of conviction for offences No person shall be convicted of any offence except for violation of the law in force at the time of the commission of the act charged as an offence, nor be subjected to a penalty greater than that which might have been inflicted under the law in force at the time of the commission of the offence.)

ಹಾಗೆಯೇ ಒಬ್ಬ ಗುರುತರ ಅಪರಾಧ ಎಸಗಿದ ವ್ಯಕ್ತಿಗೆ ಮರಣದಂಡನೆಯನ್ನೇ ವಿಧಿಸುವುದಿದ್ದರೂ ಅದು ಸಂವಿಧಾನಬದ್ಧವಾಗಿ ಸ್ಥಾಪಿತವಾದ ಕಾನೂನಿನ ಮೂಲಕವೇ ಆಗಬೇಕು. ಕಾಯಿದೆಬದ್ಧ ಪ್ರಕ್ರಿಯೆಯ ಹೊರತಾಗಿ ಯಾವುದೇ ವ್ಯಕ್ತಿಯ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲಎಂದು ಸಂವಿಧಾನದ 21ನೇ ವಿಧಿ ಹೇಳುತ್ತದೆ. ಅಂದರೆ ಅತ್ಯಾಚಾರ ಎಸಗಿದ ಆರೋಪಿಯ ಸಾವು ನ್ಯಾಯಾಲಯ ವಿಧಿಸುವ ಮರಣ ದಂಡನೆಯಿಂದಲೇ ಆಗಬೇಕು, ಬೇರಾವುದೇ ವಿಧಾನದಿಂದ ಅಲ್ಲಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. (“No person shall be deprived of his life or personal liberty except according to a procedure established by law.”)

ಹಾಗಾದರೆ ಅತ್ಯಾಚಾರಿಗಳಿಗೆ ಕನಿಕರ ತೋರಬೇಕೆಂಬುದು ಇದರ ಅರ್ಥವೇ? ಖಂಡಿತ ಹಾಗಿಲ್ಲ. ಅತ್ಯಾಚಾರಿಗಳಿಗೆ ಒಂದು ಗುಲಗುಂಜಿಯಷ್ಟೂ ಉದಾರತೆ ತೋರುವ ಅಗತ್ಯವಿಲ್ಲ. ಅವರಿಗೆ ಮರಣದಂಡನೆ ಶಿಕ್ಷೆಯೇ ಯೋಗ್ಯವಾದದ್ದು.

ಪೊಲೀಸರಿಗೆ ಜೀವರಕ್ಷಣೆಯ ಹಕ್ಕಿಲ್ಲವೇ?
ಖಂಡಿತವಾಗಿ ಆ ಹಕ್ಕಿದೆ. ಪೊಲೀಸರಿಗೆ ಮಾತ್ರವಲ್ಲ, ಸಾಮಾನ್ಯ ಪ್ರಜೆಗೂ ಆ ಹಕ್ಕಿದೆ. ಆದರೆ ತನ್ನ ಜೀವರಕ್ಷಣೆಗಾಗಿ ಮತ್ತೊಬ್ಬನ ಜೀವ ತೆಗೆದಿದ್ದೇನೆಂಬುದನ್ನು ಸಾಕ್ಷಿ- ಪುರಾವೆ ಸಮೇತ ನಿರೂಪಿಸಬೇಕಾಗುತ್ತದೆ. ಅದಿಲ್ಲದೇ ಹೋದರೆ ಪೊಲೀಸರೂ ಆದಿಯಾಗಿ ಬೇರೆಯವರ ಪ್ರಾಣ ತೆಗೆದ ಯಾವನೇ ವ್ಯಕ್ತಿಯಾದರೂ ಕಠಿಣ ದಂಡನೆಗೆ ಒಳಪಡಲೇಬೇಕಾಗುತ್ತದೆ.

ನ್ಯಾಯದಾನದಲ್ಲಿನಂಬಿಕೆ ಇಡಬಹುದೇ?
ಹಾಗೆ ಮಾಡದೇ ಬೇರೆ ವಿಧಿಯಿಲ್ಲ. ಒಂದು ಅಪವಾದವಿದೆ. ಯಾವುದೇ ಪ್ರಕರಣ ಒಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಅದು ನಿರ್ದಿಷ್ಟ ಕಾಲಮಿತಿಯಲ್ಲಿಇತ್ಯರ್ಥವಾಗುವುದಿಲ್ಲಎಂಬುದು ನಮ್ಮ ನ್ಯಾಯದಾನ ಪ್ರಕ್ರಿಯೆಗೆ ಅಂಟಿದ ಶಾಪ. ಏಳು ವರ್ಷದ ಹಿಂದೆ ಇಡೀ ದೇಶದಲ್ಲಿತಲ್ಲಣ ಮೂಡಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಇನ್ನೂ ಕ್ಷಣಗಣನೆ ಮಾಡುತ್ತಿರುವುದೇ ಒಂದು ನಿದರ್ಶನ. ಅದು ನಮ್ಮ ವ್ಯವಸ್ಥೆಯ ಲೋಪ. ಅದನ್ನು ಸರಿಪಡಿಸಬೇಕಾದವರು ಸರಿಪಡಿಸಬೇಕು. ಹಾಗಂದ ಮಾತ್ರಕ್ಕೆ ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ.

ಎನ್‌ಕೌಂಟರ್‌ ನ್ಯಾಯ ನ್ಯಾಯವೇ?
ಹಾಗೆ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ನಾಲ್ವರೂ ಆರೋಪಿಗಳನ್ನು ತ್ವರಿತಗತಿಯಲ್ಲಿವಿಚಾರಣೆಗೆ ಒಳಪಡಿಸಿ, ಅಪರಾಧವನ್ನು ನಿರೂಪಿಸಿ ಒಂದೆರಡು ತಿಂಗಳ ಒಳಗೆ ಶಿಕ್ಷೆಗೆ ಗುರಿಪಡಿಸಿದ್ದರೆ ಸಂತ್ರಸ್ತೆಯ ಆತ್ಮಕ್ಕೆ ಶಾಂತಿ ಸಮಾಧಾನ ಸಿಗುತ್ತಿತ್ತು. ಈಗ ಆಗಿರುವ ಘಟನೆಯಿಂದ ಒಂದು ಗುರುತರ ಆರೋಪ ಪ್ರಕರಣದ ವಿಚಾರಣಾ ಪ್ರಕ್ರಿಯೆ ಅರ್ಧಕ್ಕೆ ಮೊಟಕಾಗುತ್ತದೆ. ಮುಂದೆ ಇದೊಂದು ಆರೋಪ ಪ್ರಕರಣವಾಗಿ ಶಾಶ್ವತವಾಗಿ ಇತಿಹಾಸದಲ್ಲಿದಾಖಲಾಗುತ್ತದೆಯೇ ಹೊರತು ಅಪರಾಧ ಪ್ರಕರಣವಾಗಿ ಅಲ್ಲ.

ಇದು ಉತ್ತಮ ಸಂಪ್ರದಾಯವಲ್ಲ
ಎನ್‌ಕೌಂಟರ್‌ ಒಂದು ಕೆಟ್ಟ ಸಂಪ್ರದಾಯ. ಪಶುವೈದ್ಯೆ ಪ್ರಕರಣದ ವಿಚಾರಣೆ ಪ್ರಕ್ರಿಯೆಯಲ್ಲಿಗುರುತರ ಲೋಪಗಳಾಗಿವೆ. ಪ್ರಕರಣದ ಮರುಸೃಷ್ಟಿಗೆ ಮಧ್ಯರಾತ್ರಿಯ ಸಮಯ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದು ಒಂದು ಪ್ರಶ್ನೆಯಾದರೆ, ಪೊಲೀಸರು ಅಗತ್ಯ ಭದ್ರತಾ ಕ್ರಮ ತೆಗೆದುಕೊಳ್ಳದೆ ಲೋಪವೆಸಗಿದ್ದಾರೆಂಬುದೂ ಮನದಟ್ಟಾಗುತ್ತದೆ.

ಸುಂದರ ವ್ಯವಸ್ಥೆಗೆ ಶಕ್ತಿ ದೊರೆಯಲಿ
ಭಾರತದ ಆಡಳಿತ ವ್ಯವಸ್ಥೆ ಒಂದು ಅದ್ಭುತ ಕಲ್ಪನೆ. ಅದರಲ್ಲಿಲೋಪದೋಷಗಳಿದ್ದರೆ ಅದಕ್ಕೆ ನಾವೆಲ್ಲರೂ ಹೊಣೆ. ಶಾಸನ ಮಾಡುವ ಶಾಸಕಾಂಗ, ಮಾಡಿದ ಶಾಸನ ಜಾರಿಗೊಳಿಸುವ ನ್ಯಾಯಾಂಗ, ಸರಕಾರ, ಕಾರ್ಯಾಂಗ, ಜನರಿಗೆ ರಕ್ಷಣೆ ಕೊಡುವ ಪೊಲೀಸ್‌ ಇತ್ಯಾದಿ ರಕ್ಷಣಾ ಪಡೆಗಳು. ಒಂದು ವ್ಯವಸ್ಥೆ ಮತ್ತೊಂದಕ್ಕೆ ಪೂರಕ. ಒಂದು ಮತ್ತೊಂದರಲ್ಲಿಮೂಗು ತೂರಿಸುವ ಹಾಗಿಲ್ಲ. ಸಾರ್ವತ್ರಿಕ ಮತ್ತು ಸಹಜ ನ್ಯಾಯವೇ ನಮ್ಮ ಒಟ್ಟು ವ್ಯವಸ್ಥೆಯ ಜೀವಾಳ. ಇಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತದೆ.

ಪರಿಹಾರ ಏನು?
ಅತ್ಯಾಚಾರದಂತಹ ಗುರುತರ ಪ್ರಕರಣಗಳಲ್ಲಿತ್ವರಿತ ಎಡೆಬಿಡದ ವಿಚಾರಣೆ, ಆ ಮೂಲಕ ತ್ವರಿತ ಶಿಕ್ಷೆಯೊಂದೇ ಪರಿಹಾರ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಅದೇ ಸರಿಯಾದ ಕ್ರಮ. ಈಗ ಆಂಧ್ರದಲ್ಲಿಆ ಉಪಕ್ರಮ ಜಾರಿಗೆ ಬಂದಿದೆ. ದೇಶಾದ್ಯಂತ ತುರ್ತು ಜಾರಿಗೆ ಬಂದರೆ ಸಾಕಷ್ಟು ದೊಡ್ಡ ಪರಿಣಾಮ ನಿರೀಕ್ಷಿಸಬಹುದು.

*********
ಎರಡನೇ ವಿಚಾರ ಪೌರತ್ವ ತಿದ್ದುಪಡಿ ಕಾಯಿದೆ ಕುರಿತ ಚರ್ಚೆಯದ್ದು.

ಇದು ಮುಸ್ಲಿಂ ವಿರೋಧಿಯೇ?
ಪೌರತ್ವ ತಿದ್ದುಪಡಿ ಕಾಯಿದೆ- 2019 ಮುಸ್ಲಿಂ ವಿರೋಧಿ ಎಂಬುದು ಪ್ರಮುಖವಾಗಿ ಕೇಳಿ ಬರುತ್ತಿರುವ ಆಕ್ಷೇಪ. ತಿದ್ದುಪಡಿ ಕಾಯಿದೆಯ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಆ ಆರೋಪದಲ್ಲಿಹುರುಳಿಲ್ಲಎಂಬುದು ಸ್ಪಷ್ಟವಾಗುತ್ತದೆ. ಈ ಕಾಯಿದೆ ಭಾರತದ ಮುಸ್ಲಿಮರು ಈಗ ಹೊಂದಿರುವ ಸ್ವಾತಂತ್ರ್ಯ ಅಥವಾ ಘನತೆಯನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಯಾವ ದೇಶಗಳಲ್ಲಿಮುಸ್ಲಿಮರಿಗೆ ವಿಶೇಷ ಅಧಿಕಾರ, ಸ್ಥಾನಮಾನ ನೀಡಿದ ಷರಿಯಾ ಕಾನೂನು ಜಾರಿಯಲ್ಲಿದೆಯೋ, ಯಾವ ದೇಶದಲ್ಲಿಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೋ ಆ ದೇಶದ ಪ್ರಜೆಗಳು ಅಕ್ರಮವಾಗಿ ಭಾರತದೊಳಕ್ಕೆ ನುಸುಳುವುದನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದ್ದು.

ಧಾರ್ಮಿಕ ತಾರತಮ್ಯ ಧೋರಣೆ ಉಳ್ಳದ್ದೇ?
ಖಂಡಿತವಾಗಿ ಹಾಗೆ ಹೇಳಲು ಸಾಧ್ಯವಿಲ್ಲ. ಹೇಗೆ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದ ಮುಸ್ಲಿಮರು ಭಾರತದ ಪೌರತ್ವ ಹೊಂದುವುದನ್ನು ನಿರ್ಬಂಧಿಸಲಾಗಿದೆಯೋ ಹಾಗೆಯೇ ಶ್ರೀಲಂಕಾದ ಸಹಸ್ರಾರು ಹಿಂದು ನಿರಾಶ್ರಿತರನ್ನೂ ಈ ಕಾಯಿದೆ ವ್ಯಾಪ್ತಿಯಿಂದ ಹೊರಗಿಡಲಾಗಿರುವುದನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಭಾರತ ಮತ್ತು ಪಾಕಿಸ್ತಾನಕ್ಕೆ ಇರುವ ವ್ಯತ್ಯಾಸವನ್ನು ಅರಿಯಬೇಕು; 1947ರಲ್ಲಿಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಏಕಕಾಲಕ್ಕೆ ಉದಯಿಸಿದವು. ಆದರೆ ಭಾರತ ಜಾತ್ಯತೀತ ದೇಶವಾಗಿ, ಧರ್ಮವನ್ನು ಲೆಕ್ಕಿಸದೆ ಎಲ್ಲಪ್ರಜೆಗಳಿಗೆ ಸಮಾನ ಮೂಲಭೂತ ಹಕ್ಕನ್ನು ನೀಡಿದೆ. ಆದರೆ ಅದೇ ಪಾಕಿಸ್ತಾನ ಇಸ್ಲಾಮಿಕ್‌ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಪರಿಣಾಮ ಏನು? ಭಾರತದ ಮುಸ್ಲಿಮರು ಜಗತ್ತಿನ ಇತರೆಲ್ಲದೇಶಗಳಿಗಿಂತ ಹೆಚ್ಚು ಸುಖ, ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಅದೇ ಪಾಕಿಸ್ತಾನದಲ್ಲಿರುವ ಹಿಂದುಗಳು, ಕ್ರೈಸ್ತರು, ಸಿಕ್ಖರು, ಜೈನರು, ಬೌದ್ಧರು ಎರಡನೇ ದರ್ಜೆಯ ನಾಗರಿಕರಾಗಿ, ಭಯಂಕರ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಭಾರತದ ವಿವಿಧ ನಗರಗಳ ಬೀದಿಗಳಲ್ಲಿಭಿಕಾರಿಗಳಂತೆ ಬದುಕುತ್ತಿದ್ದಾರೆ. ಅಂಥವರಿಗೆ ನ್ಯಾಯ ಕೊಡುವುದು ಈ ಕಾಯಿದೆಯ ಮೂಲೋದ್ದೇಶ.

ಮಾನದಂಡ ವ್ಯತ್ಯಾಸವಾಗಬಾರದು
ನಮ್ಮ ಸಂವಿಧಾನ ದುರ್ಬಲರ ಕಲ್ಯಾಣ, ವಿಶ್ವಮಾನವ ದೃಷ್ಟಿಯುಳ್ಳದ್ದು. ಅದನ್ನೇ ಅಲ್ಪಸಂಖ್ಯಾತ ಕಲ್ಯಾಣ ಎಂದು ವ್ಯಾಖ್ಯಾನಿಸುವುದಾದರೆ ಕಾಶ್ಮೀರದಿಂದ ಹಿಡಿದು ಪಾಕಿಸ್ತಾನ, ಬಾಂಗ್ಲಾ, ಅಫಘಾನಿಸ್ತಾನದವರೆಗೆ ಎಲ್ಲಅಲ್ಪಸಂಖ್ಯಾತರಿಗೆ ಒಂದೇ ಮಾನದಂಡ ಅನ್ವಯವಾಗಬೇಕಲ್ಲ. ಭಾರತದ ಅಲ್ಪಸಂಖ್ಯಾತರಿಗೆ ಸಿಗಬೇಕಾದ ನ್ಯಾಯ, ಉದಾರತೆ ನೆರೆಯ ದೇಶಗಳಲ್ಲಿರುವ ಅಲ್ಪಸಂಖ್ಯಾತರಿಗೂ ಸಿಗಬೇಕಲ್ಲ.

ಭಾರತ ಧರ್ಮಛತ್ರವಲ್ಲ!
ಈ ಪ್ರಶ್ನೆಗೆ ನಾವು ಮೂಲಭೂತ ಉತ್ತರವನ್ನು ಕಂಡುಕೊಳ್ಳಬೇಕಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾದಿಂದ ಹಿಡಿದು ಭಾರತದ ಎಲ್ಲರಾಜ್ಯಗಳು ಸೇರಿ ನಾಲ್ಕರಿಂದ ಐದು ಕೋಟಿ ಅಕ್ರಮ ವಲಸಿಗರಿದ್ದಾರೆ ಎಂಬುದು ಒಂದು ಅಂದಾಜು. ಈ ಜನರು ಇಲ್ಲಿನ ಐದು ಕೋಟಿ ಮೂಲ ನಿವಾಸಿಗಳ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂತಲೇ ಅರ್ಥವಲ್ಲವೆ? ಇಲ್ಲಿಆರ್ಥಿಕ, ಸಾಮಾಜಿಕ ವ್ಯವಸ್ಥೆ ಏರುಪೇರಾಗುವುದಕ್ಕೂ ಅವರು ಕಾರಣರಾಗುತ್ತಾರೆ ಎಂಬುದನ್ನು ಅರಿಯಬೇಕಿದೆ.

ಗೊಂದಲ ಯಾಕಾಗಿ?
ಜನಸಾಮಾನ್ಯರಲ್ಲಿಈ ಕುರಿತು ಹೆಚ್ಚಿನ ಗೊಂದಲವಿಲ್ಲ. ಕಾನೂನು, ಸಂವಿಧಾನವನ್ನು ಯಥಾರ್ಥದಲ್ಲಿತಿಳಿದವರಲ್ಲಿಗೊಂದಲವಿಲ್ಲ. ಗೊಂದಲ ಇರುವುದು ರಾಜಕೀಯ ಅಸ್ತಿತ್ವದ ಆತಂಕಕ್ಕೆ ಸಿಲುಕಿರುವವರಲ್ಲಿಮಾತ್ರ ಎಂಬಂತೆ ಭಾಸವಾಗುತ್ತದೆ. ಮುಖ್ಯವಾಗಿ ಕಾಂಗ್ರೆಸ್‌ ನಾಯಕರು ಈ ವಿಷಯದಲ್ಲಿಹೆಚ್ಚು ಮಾತನಾಡುತ್ತಿದ್ದಾರೆ. ಹಾಗೆ ಮಾಡುವ ಮೂಲಕ ತಾವು ಈ ದೇಶದ ಅಲ್ಪಸಂಖ್ಯಾತರ ಪರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ, ವಾಸ್ತವದಲ್ಲಿಈ ವಾದ ಪ್ರಜ್ಞಾವಂತ ಮುಸ್ಲಿಮರಿಗೂ ಕಿರಿಕಿರಿ ಉಂಟು ಮಾಡಿರಲಿಕ್ಕೆ ಸಾಕು. ರಾಜಕೀಯ ಪಕ್ಷಗಳು ರಾಜಕೀಯ ಲಾಭನಷ್ಟದ ಹಿತ ನೋಡುವುದು ತಪ್ಪಲ್ಲ, ಆದರೆ ದೇಶದ ಹಿತವನ್ನು ಬಲಿಕೊಟ್ಟು ಅಲ್ಲ. ಕಾಂಗ್ರೆಸ್‌ ಸಮಸ್ಯೆಯ ಮೂಲ ಇರುವುದೇ ಅಲ್ಲಿ. ಅದನ್ನು ಅರಿತ ವಿನಃ ಆ ಪಕ್ಷದ ಸಮಸ್ಯೆಗೆ ಅನ್ಯ ಪರಿಹಾರವಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ 1943ರ ಹೊತ್ತಿಗೆ ಮುಸ್ಲಿಮೇತರರಿಗೆ ಪೌರತ್ವ ಪ್ರತಿಪಾದಿಸಿದ್ದ ಕಾಂಗ್ರೆಸ್‌ ಪಕ್ಷ ಈಗ ಅದಕ್ಕೆ ತದ್ವಿರುದ್ಧ ನಿಲುವು ತಾಳುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ಸೆಕ್ಯುಲರ್‌ ಪಕ್ಷಗಳಿಗೆ ಪಟ್ನಾಯಕ್‌ ಮಾದರಿ
ರಾಷ್ಟ್ರವಾದ ಮತ್ತು ಸೆಕ್ಯುಲರ್‌ ಚಿಂತನೆಯ ಎರಡು ಮಾರ್ಗಗಳಲಿ ್ಲನಡೆಯುತ್ತಿರುವ ರಾಜಕೀಯ ಧ್ರುವೀಕರಣದ ಪೈಪೋಟಿಯ ನಡುವೆ ಮಧ್ಯಮ ಮಾರ್ಗದಲ್ಲಿರಾಜಕೀಯ ಅಸ್ತಿತ್ವ ಕಾಯ್ದುಕೊಳ್ಳುವ ಒಡಿಶಾದ ಸಿಎಂ ನವೀನ್‌ ಪಟ್ನಾಯಕ್‌ ಮತ್ತು ಬಿಹಾರ ಸಿಎಂ ನಿತೀಶ್‌ ನಡೆಯನ್ನು ಗಮನಿಸಬೇಕು. ಈ ಇಬ್ಬರು ನಾಯಕರು ಪ್ರಾದೇಶಿಕ ಅಸ್ಮಿತೆ, ಅಭಿವೃದ್ಧಿ, ರಾಷ್ಟ್ರೀಯ ಐಕ್ಯತೆ, ಬೆಳವಣಿಗೆಗೆ ಪೂರಕವಾದ ನಿಲುವನ್ನು ತಾಳಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ, ಎನ್‌ಆರ್‌ಸಿ ಪ್ರಸ್ತಾಪ ಮುಂತಾದ ಸಂದರ್ಭದಲ್ಲಿಕೇಂದ್ರ ಸರಕಾರದೊಂದಿಗೆ ಕೈ ಜೋಡಿಸಲು ಮುಂದಾದ ನವೀನ್‌ ಪಟ್ನಾಯಕ್‌ ರಾಜಕೀಯ ಅಸ್ತಿತ್ವವನ್ನೂ ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ. ಈ ನಿಲುವು ಮುಖ್ಯವಾಗಿ ಕಾಂಗ್ರೆಸ್‌ಗೆ ಮಾದರಿ ಆದರೆ ಆ ಪಕ್ಷಕ್ಕೆ ಮತ್ತು ದೇಶಕ್ಕೆ ಎರಡಕ್ಕೂ ಒಳಿತು.

ಕಾಂಗ್ರೆಸ್‌ ದುರ್ಬಲವಾದರೆ ದೇಶ ದುರ್ಬಲ
ಈ ದೃಷ್ಟಿಯಿಂದ ನೋಡಿದಾಗ ಕಾಂಗ್ರೆಸ್‌ ಮುಕ್ತ ಎಂಬ ಘೋಷಣೆ ಕರ್ಣ ಕಠೋರವಾಗಿ ಕೇಳಿಸುತ್ತದೆ. ಅದು ಅನಪೇಕ್ಷಣೀಯ. ಪ್ರಜಾತಂತ್ರ ಪ್ರೀತಿಸುವವರು ಈ ಘೋಷಣೆಯನ್ನು ದ್ವೇಷಿಸಿಯೇ ದ್ವೇಷಿಸುತ್ತಾರೆ. ಪ್ರಬಲ ಆಳುವ ಪಕ್ಷಕ್ಕೆ ಸಮರ್ಥ ಪ್ರತಿಪಕ್ಷವೂ ಅಪೇಕ್ಷಣೀಯ. ಸದ್ಯಕ್ಕೆ ಕಾಂಗ್ರೆಸ್‌ ಮಾತ್ರ ಸಮರ್ಥ ಪ್ರತಿಪಕ್ಷದ ಅಭಾವವನ್ನು ನೀಗಬಲ್ಲದು. ಆದರೆ ಅದು ತನ್ನ ಆಲೋಚನಾ ಕ್ರಮ ಬದಲಿಸಿಕೊಂಡಾಗ ಮಾತ್ರ ಎಂಬುದನ್ನು ನೆನಪಿಡುವುದು ಒಳಿತು.

ಓದುಗರ ಒಡಳಾಳ
ವಿವೇಕದ ಸೋಷಿಯಲ್‌ ಮೀಡಿಯಾ ಸಂಕಲ್ಪ
ವಾಟ್ಸ್ಯಾಪ್‌, ಫೇಸ್‌ಬುಕ್‌ನಲ್ಲಿ ಬರುವ ಸಂದೇಶಗಳನ್ನು ಪರಾಮರ್ಶೆ ಮಾಡದೆ ಫಾರ್‌ವರ್ಡ್‌ ಮಾಡುವುದನ್ನು ನಿಲ್ಲಿಸ್ತೀವಾ? ನಿಮಗಿಷ್ಟವಾದವರು ಅಂತ ಹೇಳಿದ್ದು, ಕೇಳಿದ್ದನ್ನು ಗೊತ್ತುಗುರಿ ಇಲ್ಲದೆ ಲೈಕ್‌, ಶೇರ್‌ ಮಾಡುವುದನ್ನು ನಿಲ್ಲಿಸ್ತೀವಾ? ಸ್ವಚ್ಛ, ವಿವೇಕದ ಸೋಷಿಯಲ್‌ ಮೀಡಿಯಾ ಅಭಿಯಾನ ಶುರುಮಾಡೋಣ.
– ವೆಂಕಟೇಶ ಜೋಶಿ, ರಟ್ಟಿಹಳ್ಳಿ, ರಾಣೆಬೆನ್ನೂರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top