ನೈತಿಕ ಪೊಲೀಸ್‌ಗಿರಿಯ ಕುರಿತು ಅನೈತಿಕ ದೃಷ್ಟಿಕೋನ ಯಾಕಪ್ಪ??!! : ವಿಸ್ತಾರ ಅಂಕಣ

“ನೈತಿಕ ಪೊಲೀಸ್‌ಗಿರಿ (Moral policing) ಎನ್ನುವುದು, ಭಾರತದಲ್ಲಿ ನೈತಿಕತೆಯನ್ನು ಅನುಷ್ಠಾನ ಮಾಡಲು ಮುಂದಾಗುವ ಜಾಗರೂಕ (Vigilante) ಗುಂಪುಗಳ ಒಕ್ಕೂಟದ ವರ್ಗ. ಭಾರತ ಕಾನೂನಿನ ಹಾಗೂ ಭಾರತದ ಪೊಲೀಸ್ ಶಕ್ತಿಯ ಕೆಲವು ಕ್ರಿಯೆಗಳನ್ನೂ ನೈತಿಕ ಪೊಲೀಸ್‌ಗಿರಿ ಎನ್ನಲಾಗುತ್ತದೆ. ಜಾಗರೂಕ ಗುಂಪುಗಳು ಅಥವಾ ಸರ್ಕಾರ ಅಥವಾ ಪೊಲೀಸರು ಯಾವುದನ್ನು ʼಅನೈತಿಕʼ (Immoral) ಹಾಗೂ ʼಭಾರತೀಯ ಸಂಸ್ಕೃತಿʼಗೆ (Indian culture) ವಿರುದ್ಧವಾದದ್ದು ಎಂದು ಪರಿಗಣಿಸುತ್ತಾರೆಯೋ ಆ ಎಲ್ಲ ಕ್ರಿಯೆಗಳೂ ನೈತಿಕ ಪೊಲೀಸ್‌ಗಿರಿಯ ಟಾರ್ಗೆಟ್. ತಾವು ಭಾರತೀಯ ಸಂಸ್ಕೃತಿಯನ್ನು ರಕ್ಷಣೆ ಮಾಡುತ್ತೇವೆ ಎನ್ನುವ ಅನೇಕ ಜಾಗರೂಕ ಗುಂಪುಗಳು ಭಾರತದಲ್ಲಿವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಆಮದು ಮಾಡಿಕೊಂಡಿದ್ದು ಎಂದು ಅವರು ಭಾವಿಸುವ ಸಾಂಸ್ಕೃತಿಕ ವಿಚಾರಗಳನ್ನು ತಡೆಯುವ ಹಾಗೂ ವಿರೋಧಿಸುವ ಕಾರ್ಯವನ್ನು ಈ ಗುಂಪುಗಳು ಮಾಡುತ್ತವೆ”
ಇದು ನೈತಿಕ ಪೊಲೀಸ್‌ಗಿರಿಯ ಕುರಿತು ಪ್ರಖ್ಯಾತ ಆನ್‌ಲೈನ್‌ ಎನ್‌ಸೈಕ್ಲೊಪೀಡಿಯಾ ಹೊಂದಿರುವ ಮಾಹಿತಿಯ ಮೊದಲ ಪ್ಯಾರ. ಮೇಲಿನ ಪ್ಯಾರಾವನ್ನು ಯಾರಾದರೂ ವಿದೇಶಿಗನೋ ಅಥವಾ ಭಾರತದವರೇ ಓದಿದರೆ ಯಾವ ಭಾವನೆ ಬರುತ್ತದೆ? ಭಾರತದ ಸಂಸ್ಕೃತಿಯನ್ನು ಕಾಪಾಡುವ ಸಲುವಾಗಿ ಗುಂಪುಗಳು, ವಿದೇಶದಿಂದ ಆಮದು ಮಾಡಿಕೊಂಡ ಸಾಂಸ್ಕೃತಿಕ ವಿಚಾರಗಳ ವಿರೋಧ ಎಂದರೆ ಯಾರು ನೆನಪಾಗುತ್ತಾರೆ? ಸಹಜವಾಗಿಯೇ ಭಾರತದಲ್ಲಿ ಬಲಪಂಥೀಯರು ಎಂದು ಕರೆಯಲಾಗುವ ರಾಷ್ಟ್ರೀಯವಾದಿಗಳು (Nationalists) ಕಣ್ಮುಂದೆ ಬರುತ್ತಾರೆ. ಹಾಗಾದರೆ ಭಾರತದಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಮಾಡುತ್ತಿರುವವರು ರಾಷ್ಟ್ರೀಯವಾದಿಗಳು ಮಾತ್ರವೇ?
ಇತ್ತೀಚಿನ ಕೆಲವು ಸುದ್ದಿಗಳನ್ನು ಪರಿಶೀಲಿಸೋಣ. ಅನ್ಯಕೋಮಿನ ಯುವಕನೊಂದಿಗೆ ತೆರಳುತ್ತಿದ್ದ ಬುರ್ಖಾಧಾರಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಎಂಬಿಬಿಎಸ್ ಡ್ರಾಪ್ಔಟ್ ಒಬ್ಬನನ್ನು ಬೆಂಗಳೂರು ಪೊಲೀಸರು ಆಗಸ್ಟ್ 28ರಂದು ಬಂಧಿಸಿದರು. ತಾನು ಮುಸ್ಲಿಂ ಯುವತಿಯಾಗಿ ಅನ್ಯಕೋಮಿನ ಯುವಕನ ಜತೆಗೆ ಹೋಗುವುದು ತಪ್ಪು ಎಂದು ಆತ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.
ಎರಡನೇ ಸುದ್ದಿ ತೀರಾ ಇತ್ತೀಚಿನದ್ದು. ಅಲ್ಪಸಂಖ್ಯಾತ ಯುವತಿಯರ ಜತೆಗೆ ಕಾಣಿಸಿಕೊಳ್ಳುವ ಅನ್ಯ ಕೋಮಿನ ಯುವಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದ ಗುಂಪಿನ ಒಟ್ಟು 8 ಜನರನ್ನು ಗುಜರಾತ್‌ನ ವಡೋದರಾ ಪೊಲೀಸರು ಸೆಪ್ಟೆಂಬರ್ 1ರಂದು ಬಂಧಿಸಿದರು. ಗುಜರಾತ್‌ನಾದ್ಯಂತ ಸುಮಾರು 500ಕ್ಕೂ ಹೆಚ್ಚು ಜನರ ನೆಟ್‌ವರ್ಕ್‌ ಜತೆಗೆ ಈ ಗುಂಪು ಕೆಲಸ ಮಾಡುತ್ತಿತ್ತು. ಮುಸ್ಲಿಂ ಯುವತಿಯ ಜತೆಗೆ ಹೋಗುತ್ತಿರುವ ಯುವಕನ ಫೋಟೊ ತೆಗೆಯುವುದು, ಅವರ ಬೈಕ್‌ನ ನಂಬರ್ ಆಧರಿಸಿ ಅವರ ಮನೆ ವಿಳಾಸ ಪಡೆದುಕೊಳ್ಳುವುದು, ಅದನ್ನು ವಿಳಾಸಕ್ಕೆ ಸಂಬಂಧಿಸಿದ ಸದಸ್ಯರಿಗೆ ಹಂಚಿಕೊಳ್ಳುವುದು, ಅವರ ಮೇಲೆ ದಾಳಿ ಮಾಡುವುದು ಈ ಗುಂಪಿನ ಕೆಲಸ. ಇಲ್ಲಿವರೆಗೆ ಸುಮಾರು 50 ಅನ್ಯಕೋಮಿನ, ಬಹುತೇಕ ಹಿಂದು ಯುವಕರ ಮೇಲೆ ಈ ಗುಂಪು ದಾಳಿ ಮಾಡಿದೆ.
ಆದರೆ ಇಂದಿಗೂ ಹಿಂದು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತ್ರವೇ ಮೂಲಭೂತವಾದದ್ದು, ಕೀಳು ಮಟ್ಟದ್ದು ಎಂದು ತೋರಿಸುವ ಪ್ರಯತ್ನಗಳು ಸಾಗಿವೆ. ಈ ರೀತಿಯ ನರೇಟಿವ್‌ಗೆ ಬುದ್ಧಿಜೀವಿಗಳು, ಚಿಂತಕರು (intellectuals) ಎನ್ನಿಸಿಕೊಂಡಿರುವವರ ಬೆಂಬಲ ಇದ್ದೇ ಇದೆ. ಜತೆಗೆ ಕಾಂಗ್ರೆಸ್ ಸೇರಿ ದೇಶದಲ್ಲಿ ʼಸೆಕ್ಯುಲರ್ʼ (Secular) ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಅನೇಕ ರಾಜಕೀಯ ಪಕ್ಷಗಳ ಕೃಪಾಕಟಾಕ್ಷವೂ ಇದೆ. ಮುಸ್ಲಿಂ ಮತಬ್ಯಾಂಕ್ ಕಳೆದುಹೋಗುತ್ತದೆ ಎಂಬ ಏಕೈಕ ಉದ್ದೇಶದಿಂದ ಈ ರಾಜಕೀಯ ಪಕ್ಷಗಳು, ಮುಸ್ಲಿಂ ಯುವಕರಿಂದ ನಡೆಯುವ ನೈತಿಕ ಪೊಲೀಸ್‌ಗಿರಿಯ ಕುರಿತು ಮಾತೇ ಆಡುವುದಿಲ್ಲ. ಸಾನಿಯಾ ಮಿರ್ಜಾ ಪೂರ್ಣ ತಲೆ ಮುಚ್ಚುವಂತೆ ಬಟ್ಟೆ ತೊಟ್ಟು ಟೆನ್ನಿಸ್ ಆಡಬೇಕು ಎಂದು ಫತ್ವಾ ಹೊರಡಿಸಿದಾಗ ಈ ʼಚಿಂತಕರುʼ, ರಾಜಕೀಯ ಪಕ್ಷಗಳು ಬಾಯೇ ಬಿಡುವುದಿಲ್ಲ. ಆದರೆ, ಶಬರಿಮಲೆ ಅಯ್ಯಪ್ಪ ಸ್ವಾಮಿ (sabarimala temple) ದೇವಸ್ಥಾನಕ್ಕೆ ಒಂದು ವಯೋಮಿತಿಯೊಳಗಿನ ಸ್ತ್ರೀಯರಿಗೆ ಪ್ರವೇಶವಿಲ್ಲ ಎನ್ನುವುದನ್ನು, ʼಶಬರಿಮಲೆಗೆ ಸ್ತ್ರೀಯರಿಗೆ ಪ್ರವೇಶವೇ ಇಲ್ಲʼ ಎಂದು ಸುಳ್ಳು ಹಬ್ಬಿಸಲಾಗುತ್ತದೆ. ಇದನ್ನು ಹಿಂದುಗಳ ನೈತಿಕ ಪೊಲೀಸ್‌ಗಿರಿ ಎಂದು ಬ್ರ್ಯಾಂಡ್ ಮಾಡಲಾಗುತ್ತದೆ.
ಶಬರಿಮಲೆಗೆ ಸುಮಾರು 10 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ ಸುಮಾರು 55 ವರ್ಷದ ಮೇಲಿನ ಸ್ತ್ರೀಯರು ಸಾವಿರಾರು ಸಂಖ್ಯೆಯಲ್ಲಿ ಈಗಲೂ ಬರುತ್ತಾರೆ. ಶಬರಿಮಲೆ ಒಂದು ದೇವಸ್ಥಾನ ಬಿಟ್ಟು ದೇಶದ ಇನ್ನಾವುದೇ ಅಯ್ಯಪ್ಪ ದೇವಾಲಯಕ್ಕೆ ಯಾವುದೇ ವಯಸ್ಸಿನ ಸ್ತ್ರೀಯರು ತೆರಳಲು ಯಾವ ನಿರ್ಬಂಧವೂ ಇಲ್ಲ. ಆದರೆ ಇದೊಂದೇ ವಿಚಾರ ಇಟ್ಟುಕೊಂಡು ಇಡೀ ಹಿಂದು ಧರ್ಮವೇ ಮೂಲಭೂತವಾದದ್ದು ಎಂದು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾದರೆ, ದೇಶದ ಅನೇಕ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶವೇ ಇಲ್ಲವಲ್ಲ? ಒಂಟಿಯಾಗಿ ಬರುವ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ದೆಹಲಿಯ ಜಾಮಾ ಮಸೀದಿ ಹೇಳಿರಲಿಲ್ಲವೇ? ಆಗ ಏಕೆ ಈ ʼಚಿಂತಕರು, ಬುದ್ಧಿಜೀವಿಗಳುʼ, ʼಸೆಕ್ಯುಲರ್ʼ ರಾಜಕೀಯ ಪಕ್ಷಗಳು ಧ್ವನಿಯನ್ನೇ ಎತ್ತುವುದಿಲ್ಲ.
ಹಾಗೆಂದು ಇಸ್ಲಾಂನ ಎಲ್ಲವನ್ನೂ ವಿರೋಧಿಸಬೇಕು ಎಂದು ಹೇಳುತ್ತಿರುವುದಲ್ಲ. ಬದಲಿಗೆ, ವಿರೋಧದಲ್ಲಾಗಲಿ, ಸ್ವೀಕಾರದಲ್ಲಾಗಲಿ ಸೆಲೆಕ್ಟಿವ್ ಆಗಬಾರದು. ಒಂದು ಕೋಮಿನ ಮಹಿಳೆಯ ಸ್ವಾತಂತ್ರ್ಯದ ಕುರಿತು ಮಾತನಾಡುತ್ತ, ನೈತಿಕ ಪೊಲೀಸ್‌ಗಿರಿಯ ಪ್ರಶ್ನೆ ಎತ್ತುವವರು, ಇನ್ನೊಂದು ಕೋಮಿನ ಮಹಿಳೆಯ ಸ್ವಾತಂತ್ರ್ಯ ಹರಣ ಆಗುತ್ತಿದ್ದಾಗ ʼಅದು ಅವರ ವೈಯಕ್ತಿಕ ಕಾನೂನು, ಸಂಪ್ರದಾಯʼ ಎಂದು ಸುಮ್ಮನಿರುವುದು ಸರಿಯಲ್ಲ.
ಹಾಗೆಂದು, ತಾವೇ ಸಮಾಜದ ರಕ್ಷಕರು ಎಂದು ಹೇಳಿಕೊಂಡು, ಸಮಾಜದಲ್ಲಿ ಸಹಜವಾಗಿ ಆಗಬೇಕಾದ ಬೆಳವಣಿಗೆ, ಬದಲಾವಣೆಗಳನ್ನು ತಡೆಯಲು ಮುಂದಾಗುವುದೂ ಸರಿಯಲ್ಲ. ಹಾಗಾಗಿ ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ಅನೈತಿಕತೆಯನ್ನು ತೋರುವುದನ್ನು ನಾವು ಖಂಡಿಸಲೇಬೇಕಿದೆ. ನೈತಿಕ ಪೊಲೀಸ್‌ಗಿರಿ ಎನ್ನುವುದು ಕೇವಲ ಭೌತಿಕ ಸ್ವರೂಪದ್ದು ಮಾತ್ರವಲ್ಲ, ಡಿಜಿಟಲ್ ಯುಗದಲ್ಲಿ ಅನೇಕ ರೂಪ ತಾಳಿದೆ. ಇದರ ಕುರಿತು ಮುಂದಿನ ವಾರದ ಲೇಖನದಲ್ಲಿ ಚರ್ಚೆ ನಡೆಸೋಣ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top