ದೇಶದ ಒಳಿತಿಗಿಂತ ವೈಯಕ್ತಿಕ ನಂಬಿಕೆಯೇ ಮುಖ್ಯ ಎನ್ನುವವನು ನಾಗರಿಕನೇ ಅಲ್ಲ : ವಿಸ್ತಾರ ಅಂಕಣ

ಸರ್ಕಾರ ನಡೆಸುವವರಿಗಾದರೂ, ಸಾಮಾನ್ಯ ಜನರಿಗೂ ʼದೇಶ ಮೊದಲುʼ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇರಕೂಡದು ಅಲ್ಲವೇ? ಹಾಗೇನಾದರೂ ದೇಶಕ್ಕಿಂತಲೂ ತನ್ನ ನಂಬಿಕೆಯೇ ಮೊದಲು ಎಂದು ಯಾರಾದರೂ ವಾದಿಸಿದರೆ ಅದನ್ನು ಸಿವಿಲ್ ಕಾನೂನಿನ (civil law) ಬದಲಿಗೆ ಕ್ರಿಮಿನಲ್ ಕಾನೂನಿನ (criminal law) ವ್ಯಾಪ್ತಿಯಲ್ಲಿ ಚರ್ಚಿಸುವುದು ಸೂಕ್ತ.

ಭಾರತಕ್ಕೆ ಸಮಾನ ನಾಗರಿಕ ಸಂಹಿತೆ (Uniform civil Code) ಬೇಕೆ? ಬೇಡವೇ? ಇದು ಈಗಿನ ಜ್ವಲಂತ ಪ್ರಶ್ನೆ. ಭಾರತ ಎನ್ನುವುದು ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ದೇಶ. ಇಲ್ಲಿನ ಭಾಷೆ, ವೇಷ, ಆಹಾರ, ವಿಹಾರ, ಮದುವೆ ಪದ್ಧತಿಗಳು ಒಂದು ಮತದಿಂದ ಇನ್ನೊಂದು ಮತಕ್ಕೆ ಬದಲಾಗುತ್ತದೆ ಎನ್ನುವುದು ಮೇಲ್ನೋಟಕ್ಕೇ ಕಾಣುತ್ತದೆ. ಕೇವಲ ಮತದಿಂದ ಮತಕ್ಕಲ್ಲ. ಹಿಂದು ಧರ್ಮದಲ್ಲೇ (Hindu Religion) ಮತದಿಂದ ಮತಕ್ಕೆ, ಜಾತಿಯಿಂದ ಜಾತಿಗೆ, ಸಮುದಾಯದಿಂದ ಸಮುದಾಯಕ್ಕೆ ಪದ್ಧತಿಗಳು, ನಂಬಿಕೆಗಳು ಬದಲಾಗುತ್ತವೆ. ಜಾತಿಗಷ್ಟೆ ನಿಂತಿತೇ ಎಂದರೆ ಅದೂ ಇಲ್ಲ. ಉಪಜಾತಿಗಳಲ್ಲಿ, ಉಪ ಪಂಗಡಗಳಲ್ಲಿಯೂ ಭಿನ್ನತೆ ಇದೆ. ಇನ್ನು ಮುಸ್ಲಿಂ ಮತ, ಕ್ರೈಸ್ತ ಮತದಲ್ಲೂ ಸಮಾನ ಅಂಶಗಳಿಲ್ಲ. ಅಲ್ಲಿನ ಉಪಪಂಗಡಗಳಲ್ಲೇ ಭಿನ್ನ ಆಚರಣೆಗಳು, ನಂಬಿಕೆಗಳು, ಪರಸ್ಪರ ಭಿನ್ನತೆ ಇದೆ.

*******************************************************************

ಭಾರತಕ್ಕೆ ಸಮಾನ ನಾಗರಿಕ ಸಂಹಿತೆ (Uniform civil Code) ಬೇಕೆ? ಬೇಡವೇ? ಇದು ಈಗಿನ ಜ್ವಲಂತ ಪ್ರಶ್ನೆ. ಭಾರತ ಎನ್ನುವುದು ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ದೇಶ. ಇಲ್ಲಿನ ಭಾಷೆ, ವೇಷ, ಆಹಾರ, ವಿಹಾರ, ಮದುವೆ ಪದ್ಧತಿಗಳು ಒಂದು ಮತದಿಂದ ಇನ್ನೊಂದು ಮತಕ್ಕೆ ಬದಲಾಗುತ್ತದೆ ಎನ್ನುವುದು ಮೇಲ್ನೋಟಕ್ಕೇ ಕಾಣುತ್ತದೆ. ಕೇವಲ ಮತದಿಂದ ಮತಕ್ಕಲ್ಲ. ಹಿಂದು ಧರ್ಮದಲ್ಲೇ (Hindu Religion) ಮತದಿಂದ ಮತಕ್ಕೆ, ಜಾತಿಯಿಂದ ಜಾತಿಗೆ, ಸಮುದಾಯದಿಂದ ಸಮುದಾಯಕ್ಕೆ ಪದ್ಧತಿಗಳು, ನಂಬಿಕೆಗಳು ಬದಲಾಗುತ್ತವೆ. ಜಾತಿಗಷ್ಟೆ ನಿಂತಿತೇ ಎಂದರೆ ಅದೂ ಇಲ್ಲ. ಉಪಜಾತಿಗಳಲ್ಲಿ, ಉಪ ಪಂಗಡಗಳಲ್ಲಿಯೂ ಭಿನ್ನತೆ ಇದೆ. ಇನ್ನು ಮುಸ್ಲಿಂ ಮತ, ಕ್ರೈಸ್ತ ಮತದಲ್ಲೂ ಸಮಾನ ಅಂಶಗಳಿಲ್ಲ. ಅಲ್ಲಿನ ಉಪಪಂಗಡಗಳಲ್ಲೇ ಭಿನ್ನ ಆಚರಣೆಗಳು, ನಂಬಿಕೆಗಳು, ಪರಸ್ಪರ ಭಿನ್ನತೆ ಇದೆ.

ಇಂತಹ ದೇಶಕ್ಕೆ ಸಮಾನ ನಾಗರಿಕ ಸಂಹಿತೆ ಅನ್ವಯಿಸುವುದರಿಂದ ಎಲ್ಲರ ನಂಬಿಕೆಗಳನ್ನೂ ಸಮಾನವಾಗಿಸಿ, ದೇಶದ ಜೀವಾಳವಾದ ವೈವಿಧ್ಯತೆಯನ್ನು ಕಸಿದಂತೆ ಆಗುವುದಿಲ್ಲವೇ? ಎನ್ನುವುದು ಮೊದಲ ಪ್ರಶ್ನೆ. ಕಳೆದ ವಾರದ ಲೇಖನದಲ್ಲಿ ಚರ್ಚಿಸಿದಂತೆ ಸಮಾನ ನಾಗರಿಕ ಸಂಹಿತೆ ಎನ್ನುವುದು ಅದು ಹೇಗೊ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡುಬಿಟ್ಟಿದೆ. ಹಾಗಾದರೆ ಇದು ನಿಜವೇ? ಈ ಬಗ್ಗೆ ಚರ್ಚಿಸೋಣ‌.

ಭಾರತವು ವಿಶ್ವದಲ್ಲೇ ಅತ್ಯಂತ ವೈವಿದ್ಯಮಯ ರಾಷ್ಟ್ರ, ಸಂಸ್ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವುದರಿಂದ ಮುಸ್ಲಿಮರ ವೈಯಕ್ತಿಕ ಕಾನೂನುಗಳಿಗೆ, ನಂಬಿಕೆಗಳಿಗೆ ಧಕ್ಕೆ ಆಗುತ್ತದೆ ಎಂದು ಅನೇಕರು ಹೇಳುತ್ತಾರೆ. ದೇಶದಲ್ಲಿ ಈಗ ಸಮಾನ ಕ್ರಿಮಿನಲ್ ಕಾನೂನು ಇದೆ. ಐಪಿಸಿ, ಸಿಆರ್ಪಿಸಿ ಎಲ್ಲರಿಗೂ ಒಂದೆ. ಹಾಗಾದರೆ ಭಾರತೀಯರು ಇದನ್ನು ಒಪ್ಪಿಕೊಂಡಿದ್ದು ಹೇಗೆ? ಇಲ್ಲಿ ಇದ್ದಂತಹ ನ್ಯಾಯ ವ್ಯವಸ್ಥೆ ಯಾವ ರೀತಿಯದ್ದು?

ಮಹಾಭಾರತದಲ್ಲಿ ಹಸ್ತಿನಾಪುರಕ್ಕೆ ಯುವರಾಜನನ್ನು ಆಯ್ಕೆ ಮಾಡುವ ಸಮಯ ಬರುತ್ತದೆ. ಸಹಜವಾಗಿ ಯುಧಿಷ್ಠಿರ, ಅಂದರೆ ಧರ್ಮರಾಯ ಉತ್ತರಾಧಿಕಾರಿ ಎಂದು ಎಲ್ಲರೂ ಭಾವಿಸಿರುತ್ತಾರೆ. ಯುಧಿಷ್ಠಿರ ಈ ಸ್ಥಾನಕ್ಕೆ ಅರ್ಹನೂ ಆಗಿದ್ದ. ಆದರೆ ದುರ್ಯೋಧನ ತನಗೇ ಪಟ್ಟ ಬೇಕು ಎಂದು ಪಟ್ಟು ಹಿಡಿದ. ಈ ಸಮಯದಲ್ಲಿ ತೀರ್ಮಾನ ಮಾಡುವ ಹೊಣೆಯನ್ನು ವಿದುರನಿಗೆ ನೀಡಲಾಯಿತು. ವಿದುರ ಒಂದು ಪ್ರಶ್ನೆಯನ್ನು ಇಬ್ಬರ ಮುಂದಿಟ್ಟ.

ಒಬ್ಬ ಶೂದ್ರ, ಒಬ್ಬ ವೈಶ್ಯ, ಒಬ್ಬ ಕ್ಷತ್ರಿಯ ಹಾಗೂ ಒಬ್ಬ ಬ್ರಾಹ್ಮಣ ಇರುತ್ತಾರೆ. ಒಂದು ಕೊಲೆಯನ್ನು ಮಾಡಿದರೆ ಈ ನಾಲ್ಕು ಜನರಿಗೆ ಯಾವ ರೀತಿ ಶಿಕ್ಷೆ ನೀಡಬೇಕು ಎಂದು ಕೇಳುತ್ತಾನೆ. ಆಗ ದುರ್ಯೋಧನನಿಗೆ ಯಾವುದೇ ಗೊಂದಲ ಇಲ್ಲ. ತಪ್ಪು ತಪ್ಪೇ. ಅದು ಯಾರು ಮಾಡಿದ್ದರೂ ಅಷ್ಟೆ, ಎಲ್ಲರಿಗೂ ಸಮಾನವಾದ ಕಠಿಣ ಶಿಕ್ಷೆ ಕೊಡಬೇಕು ಎನ್ನುತ್ತಾರೆ. ಹೌದಲ್ಲವೇ? ಈಗ ನಾವು ಹೇಳುವುದು ಅದನ್ನೇ ತಾನೆ? ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ನಮ್ಮ ತಲೆಗೆ ಅಚ್ಚೊತ್ತಲಾಗಿದೆ. ಆದರೆ ಧರ್ಮರಾಯನ ಮಾತನ್ನೂ ಕೇಳಬೇಕಲ್ಲ?

ಧರ್ಮರಾಯ ಹೇಳುತ್ತಾನೆ. ಶೂದ್ರನಿಗೆ, ಕೊಲೆ ಮಾಡಿದ್ದಕ್ಕೆ ಯಾವ ಶಿಕ್ಷೆಯನ್ನು ಕೊಡಬೇಕೊ ಅದನ್ನು ಅವಶ್ಯವಾಗಿ ಕೊಡಬೇಕು. ವೈಶ್ಯನಿಗೆ, ಶೂದ್ರನಿಗಿಂತ ಎರಡು ಪಟ್ಟು ಹೆಚ್ಚು ಶಿಕ್ಷೆ ಕೊಡಬೇಕು. ಏಕೆಂದರೆ ಅವನಿಗೆ ಸಮಾಜದಲ್ಲಿ ಒಳಿತು ಕೆಡುಕುಗಳ ಅರಿವು ಇರುತ್ತದೆ ಹಾಗೂ ಕೊಲೆ ಮಾಡಿದರೆ ಯಾವ ಶಿಕ್ಷೆ ದೊರಕಬಹುದು ಎಂಬ ಲೆಕ್ಕಾಚಾರವೂ ತಿಳಿದಿರುತ್ತದೆ. ಅದು ತಿಳಿದೂ ಮಾಡಿದ್ದಾನೆ ಅದಕ್ಕಾಗಿ ದುಪ್ಪಟ್ಟು ಶಿಕ್ಷೆ. ಇನ್ನು ಕ್ಷತ್ರಿಯನಿಗೆ, ವೈಶ್ಯನಿಗಿಂತ ನಾಲ್ಕು ಪಟ್ಟು ಶಿಕ್ಷೆ. ಕ್ಷತ್ರಿಯನಾದವನು ತನ್ನ ಪ್ರಾಣವನ್ನು ಪಣಕ್ಕಿಟ್ಟಾದರೂ ಇತರರ ಪ್ರಾಣವನ್ನು ರಕ್ಷಣೆ ಮಾಡುವ ಧರ್ಮ ಪಾಲನೆ ಮಾಡಬೇಕಾದವನು. ಅವನು ಕೊಲೆ ಮಾಡಿದ್ದಾನೆ ಎಂದರೆ ಅದು ದೊಡ್ಡ ಅಪರಾಧ. ಬ್ರಾಹ್ಮಣನಾದವನು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದವನು. ಒಳಿತು-ಕೆಡುಕು, ಪಾಪ-ಪುಣ್ಯಗಳನ್ನು ತಿಳಿದವನು. ಅವನು ಕೊಲೆ ಮಾಡಿದ್ದಾನೆ ಎಂದರೆ ಕ್ಷತ್ರಿಯನಿಗಿಂತ ಎರಡು ಪಟ್ಟು ಕಠಿಣ ಶಿಕ್ಷೆ ಕೊಡಬೇಕು ಎಂದು ತಿಳಿಸುತ್ತಾನೆ.

ಇದನ್ನು ಇಂದಿನ ಕಾಲದಲ್ಲಿ ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಹಾಗಾದರೆ ಶೂದ್ರರನ್ನು ನೀವು ದಡ್ಡರು ಎಂದು ಪರಿಗಣಿಸಿ ಅವಮಾನ ಮಾಡುತ್ತೀರ ಎಂದು ವಿತಂಡ ವಾದ ಮಾಡಬಹುದು. ನೀವು ವರ್ಣ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದೀರ ಎಂದು ಹೇಳಬಹುದು. ಆದರೆ ಇಲ್ಲಿರುವ ತಾತ್ಪರ್ಯ ಏನು? ಸಮಾಜದಲ್ಲಿ ಸಾಮಾನ್ಯ ಜನರು ತಪ್ಪು ಮಾಡಿದರೆ ಅದಕ್ಕೆ ಅದರದ್ದೇ ಪ್ರಮಾಣದಲ್ಲಿ ಶಿಕ್ಷೆ ವಿಧಿಸಬೇಕಾಗಿರುವುದು ಕಾನೂನಿನ ಕೆಲಸ. ಆದರೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ತಪ್ಪು ಮಾಡಿದರೆ ಅದು ಮಹಾಪರಾಧವಾಗಬೇಕು. ಅವರಿಗೆ ಕಠಿಣಾತಿಕಠಿಣ ಶಿಕ್ಷೆಯಾದರೆ ಇಡೀ ಸಮಾನ ಎಚ್ಚೆತ್ತುಕೊಳ್ಳುತ್ತದೆ ಎನ್ನುವುದು ಅದರ ತಾತ್ಪರ್ಯ. (ಧರ್ಮರಾಯ ಹೇಳುವ ಈ ಮಾತು ವಿದುರ ನೀತಿ ಎಂದೇ ಪ್ರಸಿದ್ಧಿಯಾಗಿದೆ)

ಮಹಾಭಾರತದಲ್ಲಿ ಈ ರೀತಿಯ ಪದ್ಧತಿ ಇದ್ದರೂ ಭಾರತದಲ್ಲಿ ಸಮಾನ ಕ್ರಿಮಿನಲ್ ಕಾನೂನು ರೂಪಿಸಲಾಯಿತು. ಆಗ ಯಾರಾದರೂ ಹಿಂದುಗಳು ಮುಂದೆ ಬಂದು ಇದು ನಮ್ಮ ವರ್ಣಾಶ್ರಮ ಪದ್ಧತಿಗೆ ವಿರುದ್ಧವಾದದ್ದು, ಮಹಾಭಾರತದ ದೃಷ್ಟಾಂತಕ್ಕೆ ವ್ಯತಿರಿಕ್ತವಾದದ್ದು ಎಂದು ಹೇಳಿದರೇ? ಇಲ್ಲ. ಏಕೆಂದರೆ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುವುದು ಹಿಂದುವಿನ ರಕ್ತದಲ್ಲೇ ಇದೆ. ಇಂದು ಭಾರತದಲ್ಲಿ ವೈವಿಧ್ಯತೆ ಇದೆ, ಅದು ನಾಶವಾಗಬಾರದು ಎಂದು ಹೇಳುತ್ತಿರುವವರು ಒಂದು ವಿಷಯ ತಿಳಿಯಬೇಕು. ಈ ದೇಶದಲ್ಲಿ ವೈವಿಧ್ಯತೆ ಉಳಿದುಕೊಂಡಿರುವುದೇ ಹಿಂದುವಿನ ಕಾರಣಕ್ಕೆ. ಹಿಂದುವಿನ ಕಾರಣಕ್ಕೆ ಎಂದ ಕೂಡಲೆ ಹಿಂದು ಧರ್ಮ ಆಚರಣೆ ಮಾಡುವವರಷ್ಟೆ ಎಂದಲ್ಲ. ಇಲ್ಲಿ ವಾಸಿಸುವ ಎಲ್ಲರಲ್ಲೂ ಈ ವೈವಿಧ್ಯತೆ ಇದೆ. ಭಾರತೀಯ ಮುಸ್ಲಿಮರಲ್ಲಿ ಇರುವಷ್ಟು ವೈವಿಧ್ಯತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇರಲು ಸಾಧ್ಯವಿಲ್ಲ. ಏಕೆಂದರೆ ಈ ಮಣ್ಣಿನ ಗುಣವೇ ವೈವಿಧ್ಯತೆ.

ಹಾಗೆ ಸಮಾನ ಕ್ರಿಮಿನಲ್ ಕಾನೂನನ್ನು ಒಪ್ಪಿಕೊಂಡಾಯಿತು. ಆದರೆ ಆ ರೀತಿ ಎಲ್ಲರಿಗೂ ಸಮಾನ ನ್ಯಾಯ ಸಿಗುತ್ತಿದೆಯೇ? ಮಹಾಭಾರತದ ವಿದುರ ನೀತಿ ಪ್ರಕಾರ, ಶೂದ್ರನಿಗೆ, ಅಂದರೆ ಈಗಿನ ಸಂದರ್ಭದಲ್ಲಿ ಶ್ರೀ ಸಾಮಾನ್ಯನಿಗೆ ಕಡಿಮೆ ಶಿಕ್ಷೆ; ಬ್ರಾಹ್ಮಣನಿಗೆ, ಅಂದರೆ ಈಗಿನ ಸಂದರ್ಭದಲ್ಲಿ ಸಮಾಜದಲ್ಲಿನ ಗಣ್ಯ ವ್ಯಕ್ತಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು. ಆದರೆ ಈಗಿನ ಕಾನೂನಿನ ಅಡಿಯಲ್ಲಿ ಸಾಮಾನ್ಯ ಜನರಿಗೆ ಹೆಚ್ಚಿನ ಶಿಕ್ಷೆಯೂ, ಸಮಾಜದಲ್ಲಿನ ಗಣ್ಯರಿಗೆ ಅತಿ ಕಡಿಮೆ ಶಿಕ್ಷೆಯೂ ದೊರಕುತ್ತಿದೆ. ಏಕೆ ಹೀಗಾಯಿತು?

ಅಂದಿನ ಕಾನೂನು ವ್ಯವಸ್ಥೆ, ನ್ಯಾಯ ಪದ್ಧತಿ ಸಾಮಾನ್ಯನಿಗೆ ಅರ್ಥವಾಗುತ್ತಿತ್ತು. ಆದರೆ ಅದನ್ನು ಇಸ್ಲಾಮಿಕ್ ಆಕ್ರಮಣದ ಸುಮಾರು 800 ವರ್ಷದಲ್ಲಿ ಒಂದಷ್ಟು ಬದಲಾಯಿಸಲಾಯಿತು. ಆದರೆ ಕ್ರೈಸ್ತರ ಆಕ್ರಮಣದ ಸುಮಾರು 200 ವರ್ಷದಲ್ಲಿಯಂತೂ ಸಂಪೂರ್ಣ ತಲೆಕೆಳಕಾಗಿಸಲಾಯಿತು. ನ್ಯಾಯ ವ್ಯವಸ್ಥೆ ಎನ್ನುವುದು ಸಾಮಾನ್ಯ ಜನರ ವಿಚಾರ ಅಲ್ಲ. ಅದನ್ನು ರಾಜನೂ ನೀಡುವುದಲ್ಲ. ಅದಕ್ಕೇ ಕಾನೂನು ಓದಿಕೊಂಡವರಿರುತ್ತಾರೆ, ಅವರು ಮಾತ್ರ ಕಾನೂನಿನ ಅರಿವನ್ನು ಹೊಂದಿರುತ್ತಾರೆ. ಜನರು ಅವರ ಬಳಿ ತೆರಳಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು, ಅವರು ಅದನ್ನು ಮಂಡಿಸಬೇಕು. ಕೊನೆಯದಾಗಿ ನ್ಯಾಯಾಧೀಶರು ನ್ಯಾಯ ಕೊಡುತ್ತಾರೆ ಎನ್ನುವಂತೆ ಮಾಡಲಾಯಿತು. ಒಂದು ಹಂತದಲ್ಲಿ ನ್ಯಾಯ ಸಿಗದಿದ್ದರೆ ಏನು ಮಾಡುವುದು? ಇನ್ನೊಂದು ಹಂತಕ್ಕೆ ಅಪೀಲ್ ಹೋಗುವುದು. ಹೀಗೆ ಹಂತದಿಂದ ಹಂತಕ್ಕೆ ಏರುತ್ತ ಹಣದ ವೆಚ್ಚವೂ ಹೆಚ್ಚುತ್ತ ಹೋಗುತ್ತದೆ. ಒಬ್ಬ ಗಣ್ಯ ವ್ಯಕ್ತಿ ಹಾಗೂ ಒಬ್ಬ ಸಾಮಾನ್ಯನ ನಡುವೆ ಮೊಕದ್ದಮೆ ನಡೆದರೆ ಜಿಲ್ಲಾ ನ್ಯಾಯಾಲಯದಲ್ಲಿ ಅಷ್ಟೆ ಸೆಣೆಸಬಹುದು. ವಿಡಂಬನಾತ್ಮಕವಾಗಿ ಹೇಳುವುದಾದರೆ, ಸಾಮಾನ್ಯನಾದವನು ಕೆಳಹಂತದ ನ್ಯಾಯಾಲಯದಲ್ಲೇ ಸೋತು ಮನೆಗೆ ಹೋಗುವುದು ಒಳ್ಳೆಯದು. ಅಲ್ಲೇನಾದರೂ ಗೆದ್ದುಬಿಟ್ಟರೆ ಗಣ್ಯ ವ್ಯಕ್ತಿಯಾದವನು ಹೈಕೋರ್ಟ್ ನಲ್ಲೊ, ಸುಪ್ರೀಂ ಕೋರ್ಟ್ ನಲ್ಲೊ ಅಪೀಲು ಸಲ್ಲಿಸುತ್ತಾನೆ. ಈ ಸಾಮಾನ್ಯ ವ್ಯಕ್ತಿ ಅಲ್ಲಿ ಸೆಣೆಸುವ ವೇಳೆಗೆ ಅವನ ಜೀವ ಹಾಗೂ ಜೀವನ ಅರ್ಧ ಮುಗಿದಿರುತ್ತದೆ. ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎಂಬ ಮಾತೇ ಇದೆ. ಸಾಮಾನ್ಯರಿಗೆ ನ್ಯಾಯ ದುಬಾರಿ ಆಗಬಾರದು ಎಂಬ ಕಾರಣಕ್ಕೇ ಲೋಕ ಅದಾಲತ್, ಕಾನೂನು ಸೇವಾ ಪ್ರಾಧಿಕಾರದಂತಹ ಸೇವೆಗಳನ್ನು ಸರ್ಕಾರ ಆರಂಭಿಸಿದೆ. ಇಲ್ಲಿ ಈಗಿರುವ ನ್ಯಾಯಾಧೀಶರದ್ದೊ, ವಕೀಲರದ್ದೋ, ಪೊಲೀಸರದ್ದೊ ತಪ್ಪು ಎಂದಲ್ಲ. ಆದರೆ ಒಟ್ಟಾರೆ ನಾವು ರೂಪಿಸಿಕೊಂಡಿರುವ ವ್ಯವಸ್ಥೆಯ ದೋಷ ಇದು.

ಅಂದರೆ ಸಮಾನ ಕ್ರಿಮಿನಲ್ ಕಾನೂನು ಜಾರಿ ಮಾಡಿದ ಕೂಡಲೆ ಸಮಾಜದಲ್ಲಿ ಸಮಾನ ಕ್ರಿಮಿನಲ್ ನ್ಯಾಯ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟ. ಇದು ಸಾಮಾನ್ಯ ಜನರಿಗೂ ದಿನಂಪ್ರತಿ ಅನುಭವಕ್ಕೆ ಬರುತ್ತಿದೆ.
ಅದೇ ರೀತಿ ಸಮಾನ ನಾಗರಿಕ ಸಂಹಿತೆ ರೂಪಿಸಲಾಗುತ್ತಿದೆ ಎಂಬ ಮಾತ್ರಕ್ಕೆ ತಮ್ಮ ವೈಯಕ್ತಿಕ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಮುಸ್ಲಿಮರಲ್ಲಿ ಹೆದರಿಕೆಯನ್ನು ಹುಟ್ಟಿಸುವ ಕೆಲಸ ನಡೆಯುತ್ತಿದೆ. ಸರ್ಕಾರಿ ಕೆಲಸಗಳಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಬೇಕು ಎಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಆದರೆ ಮೀಸಲಾತಿ ನೀಡುತ್ತಿಲ್ಲವೇ? ಎಸ್ಸಿಎಸ್ಟಿ ಸಮುದಾಯಕ್ಕೆ ಮೀಸಲಾತಿ, ಅಂಗವಿಕಲರಿಗೆ ಮೀಸಲಾತಿ, ಜಲಾಶಯ ಮುಳುಗಡೆ ಪ್ರದೇಶದವರಿಗೆ ಮೀಸಲಾತಿ, ಹೈದರಾಬಾದ್ ಕರ್ನಾಟಕ ಭಾಗದವರಿಗೆ ಮೀಸಲಾತಿ, ಕನ್ನಡ ಮಾಧ್ಯಮದವರಿಗೆ ಮೀಸಲಾತಿ, ಗ್ರಾಮೀಣ ಪ್ರದೇಶದಲ್ಲಿ ಓದಿದವರಿಗೆ ಮೀಸಲಾತಿ, ಸೇನೆಯಿಂದ ನಿವೃತ್ತರಾದವರಿಗೆ ಮೀಸಲಾತಿ, ಯುದ್ಧ ಸಂತ್ರಸ್ತರ ಕುಟುಂಬದವರಿಗೆ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ, ತೃತೀಯ ಲಿಂಗಿಗಳಿಗೆ ಮೀಸಲಾತಿ…. ಹಾಗಾದರೆ ಇವೆಲ್ಲವೂ ಸಂವಿಧಾನಕ್ಕೆ ವಿರುದ್ಧವೇ? ಸಮಾಜದಲ್ಲಿ ಸಮಾನತೆಯನ್ನು ತರಬೇಕಾದರೆ ಅಲ್ಲಿರುವ ಅವಕಾಶ ವಂಚಿತ ಸಮುದಾಯ, ವರ್ಗ, ವ್ಯಕ್ತಿಗಳಿಗೆ ಒಂದಷ್ಟು ಉತ್ತೇಜನ, ವಿಶೇಷ ಸೌಲಭ್ಯ ನೀಡಬೇಕಾದ್ದು ಸಮಾಜದ ಕರ್ತವ್ಯ. ಸಮಾನವಾಗಿ ಎಲ್ಲರಿಗೂ ಉದ್ಯೋಗಾವಕಾಶ ನೀಡಬೇಕು ಎಂದಿದ್ದರೂ ಮೀಸಲಾತಿ ಇದೆ. ಸಮಾನ ನಾಗರಿಕ ಸಂಹಿತೆ ಬಂದ ನಂತರವೂ ಒಂದಷ್ಟು ವಿಶೇಷ ಅವಕಾಶಗಳು ಇದ್ದೇ ಇರುತ್ತವೆ.

ದೇಶದಲ್ಲಿ ಸ್ವಾತಂತ್ರ್ಯ ಎನ್ನುವುದು ಹೇಗೆ ಒಂದಷ್ಟು ನಿಬಂಧನೆಗಳೊಂದಿಗೆ, ಮತ್ತೊಂದಿಷ್ಟು ಹೊಣೆಗಾರಿಕೆಗಳೊಂದಿಗೆ ಬಂದಿದೆಯೋ ಹಾಗೆಯೇ. ಸಮಾನ ನಾಗರಿಕ ಸಂಹಿತೆ ಎನ್ನುವುದೂ ಒಂದು ವ್ಯಾಪಕವಾದ ಚೌಕಟ್ಟನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನ ಒಳಗೆ ಮತ್ತೆ ಒಂದಷ್ಟು ವಿಶೇಷ ಅವಕಾಶಗಳು, ಸವಲತ್ತುಗಳು ಇದ್ದೇ ಇರುತ್ತವೆ. ಈ ವ್ಯಾಪಕ ಚೌಕಟ್ಟು ಎನ್ನುವುದು ಒಟ್ಟಾರೆ ದೇಶದ ಒಳಿತನ್ನು ಹೊಂದಿರುತ್ತದೆ. ಮುಸ್ಲಿಮರಲ್ಲಿ ಹೆಚ್ಚಿನ ಮಕ್ಕಳನ್ನು ಮಾಡಿಕೊಳ್ಳುತ್ತಾರೆ ಎಂದು ಇಂದು ಆಡಿಕೊಳ್ಳುತ್ತಾರೆ ಅನೇಕರು. ಬಹುಪತ್ನಿತ್ವದ ಬಗ್ಗೆಯೂ ಹೇಳುತ್ತಾರೆ. ಆದರೆ ಹಿಂದುಗಳಲ್ಲೇ ಎರಡು ತಲೆಮಾರು ಹಿಂದೆ ಯೋಚಿಸಿದರೆ ಹೇಗಿತ್ತು? ನಮ್ಮ ತಾತ ಅಥವಾ ಮುತ್ತಾತನ ಕಾಲದಲ್ಲಿ ಅಂದರೆ ಈಗ್ಗೆ ಕೇವಲ 60-70 ವರ್ಷದ ಹಿಂದಷ್ಟೆ ಹಿಂದುಗಳಲ್ಲಿಯೂ ಬಹುಪತ್ನಿತ್ವ ಎನ್ನುವುದು ಬಹಳ ದೊಡ್ಡ ಅಪರಾಧ ಎಂಬಂತೆ ನೋಡುತ್ತಿರಲಿಲ್ಲ. ಒಂದೇ ಮನೆಯಲ್ಲಿ ಇಬ್ಬರು ಹೆಂಡತಿಯರು ಇದ್ದ ಅನೇಕ ಮನೆಗಳಿದ್ದವು. ರಾಜ ಮಹಾರಾಜರುಗಳಂತೂ ಅಧಿಕೃತವಾಗಿಯೇ ಅನೇಕ ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದರು. ಏಕಪತ್ನೀವ್ರತಸ್ಥ ಶ್ರೀರಾಮಚಂದ್ರನು ಆದರ್ಶ. ಆದರೆ ಎಲ್ಲರೂ ಆ ಆದರ್ಶಮಯ ಜೀವನ ನಡೆಸಲು ಅನೇಕ ಬಾರಿ ಆಗುತ್ತಿರಲಿಲ್ಲ. ಮಕ್ಕಳೂ ಅಷ್ಟೆ. 10-12 ಮಕ್ಕಳು ಸಾಮಾನ್ಯವಾಗಿರುತ್ತಿದ್ದರು. ಆದರೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ರೂಪಿಸಿದ ಕಾನೂನುಗಳಿಗೆ ಅನುಗುಣವಾಗಿ ಹಾಗೂ ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಿಂದಾಗಿಯೂ ಹಿಂದುಗಳಲ್ಲಿ ಮಕ್ಕಳನ್ನು ಪಡೆಯುವ ಪ್ರಮಾಣ ಈಗ ಒಂದು ಅಥವಾ ಎರಡಕ್ಕೆ ಬಂದು ನಿಂತಿದೆ.

ಇದೇ ರೀತಿ ಮುಸ್ಲಿಮರಲ್ಲೂ. ಇತ್ತೀಚಿನ 20-30 ವರ್ಷಗಳಲ್ಲಿ ವಿದ್ಯಾವಂತ ಮುಸ್ಲಿಂ ಯುವಕರು ಬಹುಪತ್ನಿತ್ವದಿಂದ ದೂರ ಸರಿಯುತ್ತಿದ್ದಾರೆ. ಒಂದು ಅಥವಾ ಎರಡು ಮಕ್ಕಳು ಸಾಕು ಎನ್ನುವವರ ಸಂಖ್ಯೆ ಅಗಾಧವಾಗಿಲ್ಲದಿದ್ದರೂ ಸಾಕಷ್ಟು ಸಂಖ್ಯೆಯಲ್ಲಂತೂ ಇದ್ದಾರೆ. ತನ್ನ ಪತ್ನಿಯೊಂದಿಗೆ ಸಂತಸದ ಜೀವನ ಕಳೆಯಬೇಕು ಎಂದು ಯೋಚಿಸುತ್ತ ಅವರನ್ನು ವಾರಾಂತ್ಯದ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ಕರೆದುಕೊಂಡುಹೋಗುವವರಿದ್ದಾರೆ. ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಕಾರಣಕ್ಕೆ ತಮ್ಮ ಆರ್ಥಿಕತೆಗೆ ಅನುಗುಣವಾಗಿ ಸಂತಾನವನ್ನು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳೂ ಮಾನವನ ಸ್ವಭಾವವನ್ನು ಬದಲಾಯಿಸುತ್ತವೆ. ಆದರೆ ಅದಕ್ಕೆ ಕಾನೂನಿನ ಬಲವೂ ಇದ್ದರೆ ಪ್ರಕ್ರಿಯೆ ಇನ್ನಷ್ಟು ಬೇಗ ಆಗುತ್ತದೆ.

ಸಮಾನ ನಾಗರಿಕ ಸಂಹಿತೆ ಎನ್ನುವುದು ಒಂದು ಚೌಕಟ್ಟಾದರೂ ಅದನ್ನು ರೂಪಿಸುವಾಗ ಎಲ್ಲ ಸಮುದಾಯಗಳಲ್ಲಿರುವ ಒಳ್ಳೆಯ ಅಂಶಗಳಿಗೆ ಹಾಗೂ ಮಾನವ ಸಮಾಜಕ್ಕೆ ಅವಮಾನಕರ ಅಲ್ಲ ಎನ್ನುವಂತಹ ಆಚರಣೆ, ನಂಬಿಕೆಗಳಿಗೆ ಅವಕಾಶ ಇರಬೇಕು. ಅದರ ಆಚೆಗೆ ಇರುವ ಯಾವದೇ ವೈಯಕ್ತಿಕ ಕಾನೂನುಗಳನ್ನು, ವೈಯಕ್ತಿಕ ನಂಬಿಕೆಗಳನ್ನು ತಡೆಯುವುದರಲ್ಲಿ ಯಾವುದೇ ತೊಂದರೆ ಯಾರಿಗೂ ಇರಕೂಡದು. ವೈಯಕ್ತಿಕ ನಂಬಿಕೆ ಎನ್ನುವುದು ಮುಖ್ಯ. ಆದರೆ ಸಾಮಾಜಿಕ ನಂಬಿಕೆ, ಸಾಮಾಜಿಕ ಒಳಿತು ಎನ್ನುವುದು ಅದಕ್ಕಿಂತಲೂ ಮುಖ್ಯ. ಕೇವಲ ಮುಸ್ಲಿಮರಷ್ಟೆ ಅಲ್ಲ, ಸಮಾನ ನಾಗರಿಕ ಸಂಹಿತೆ ಜಾರಿಯಾದರೆ ಹಿಂದುಗಳಲ್ಲಿರುವ ಅನೇಕ ವೈಯಕ್ತಿಕ ನಂಬಿಕೆಗಳನ್ನೂ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಹಾಗಾಗಿ ಸಮಾನ ನಾಗರಿಕ ಸಂಹಿತೆ ಕುರಿತು ಯಾವುದೋ ಒಂದು ಸಮುದಾಯಕ್ಕೆ ತೊಂದರೆಯಾಗುತ್ತದೆ ಎಂದು ಭಯ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬಾರದು. ಅದರ ಬದಲಿಗೆ, ಈಗ ಕೇಂದ್ರ ಸರ್ಕಾರ ನೀಡಿರುವ ಕರೆಯನ್ನು ಸ್ವೀಕರಿಸಬೇಕು. ಸಮಾನ ನಾಗರಿಕ ಸಂಹಿತೆ ಹೇಗೆ ಇರಬೇಕು? ಎಂಬ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ನಮ್ಮ ಸುತ್ತಮುತ್ತ, ಸಮಾಜದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ, ಕ್ಲಬ್ ಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಈ ಕುರಿತ ಸಾಧಕ ಬಾಧಕಗಳನ್ನು ಚರ್ಚೆ ನಡೆಸಬೇಕು. ಎಲ್ಲರೂ ಒಟ್ಟಾಗಿ ಸೇರಿ ಸಮಾನ ನಾಗರಿಕ ಸಂಹಿತೆಗೆ ಸಲಹೆ ನೀಡಬೇಕು. ಕೇಂದ್ರ ಸರ್ಕಾರವೂ ಇದರಲ್ಲಿ ಯಾವುದೇ ಒಂದು ಸಮುದಾಯ, ಮತವನ್ನು ಗುರಿಯಾಗಿಸಿಕೊಳ್ಳದೆ ಒಟ್ಟಾರೆ ದೇಶದ ಒಳಿತಿಗೆ ಬೇಕಾಗಿರುವಂತೆ ಕಾನೂನನ್ನು ರೂಪಿಸಬೇಕು. ಸರ್ಕಾರ ನಡೆಸುವವರಿಗಾದರೂ, ಸಾಮಾನ್ಯ ಜನರಿಗೂ ʼದೇಶ ಮೊದಲುʼ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇರಕೂಡದು ಅಲ್ಲವೇ? ಹಾಗೇನಾದರೂ ದೇಶಕ್ಕಿಂತಲೂ ತನ್ನ ನಂಬಿಕೆಯೇ ಮೊದಲು ಎಂದು ಯಾರಾದರೂ ವಾದಿಸಿದರೆ ಅದನ್ನು ಸಿವಿಲ್ ಕಾನೂನಿನ ಬದಲಿಗೆ ಕ್ರಿಮಿನಲ್ ಕಾನೂನಿನ ವ್ಯಾಪ್ತಿಯಲ್ಲಿ ಚರ್ಚಿಸುವುದು ಸೂಕ್ತ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top