ಭಾರತದ ಮಟ್ಟಿಗೆ ಗುಡ್ ಗವರ್ನನ್ಸ್ ಪದಪ್ರಯೋಗವನ್ನು ಅಧಿಕೃತವಾಗಿ ಪರಿಚಯ ಮಾಡಿ ಆರು ವರ್ಷ ಕಳೆದಿದೆ. 2014ರ ಡಿಸೆಂಬರ್ 23ರಂದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ-1 ಸರಕಾರ ಪಂಡಿತ್ ಮದನಮೋಹನ ಮಾಳವೀಯ ಹಾಗೂ ಮಾಜಿ ಪ್ರಧಾನಿ, ಮಹಾನ್ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿ ಘೋಷಿಸಿತು. ಅದೇ ವೇಳೆ ಸರಕಾರ ಇನ್ನೊಂದು ಮಹತ್ವದ ತೀರ್ಮಾನ ಪ್ರಕಟಿಸಿತು. ಅದೇ ಗುಡ್ ಗವರ್ನನ್ಸ್ ಡೇ. ಎ.ಬಿ.ವಾಜಪೇಯಿ ಅವರ ಹುಟ್ಟಿದ ದಿನವಾದ ಡಿ.25ನ್ನು ಗುಡ್ ಗವರ್ನನ್ಸ್ ದಿನವಾಗಿ ಆಚರಿಸಲಾಗುತ್ತಿದೆ. ಕಾಕತಾಳೀಯವೋ ಎಂಬಂತೆ ಈ ವರ್ಷ ಅಟಲ್ ಹುಟ್ಟುಹಬ್ಬದ ಹೊತ್ತಿಗೆ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ತಮಿಳುನಾಡಿನ ಕೆಲ ಮಹತ್ವದ ತಾಣಗಳಿಗೆ ಪ್ರವಾಸ ಕೈಗೊಂಡಿದ್ದೆ. ಪ್ರಯಾಣ ಮಾಡುವಾಗ ಅಟಲ್ ಬಹುವಾಗಿ ನೆನಪಿಗೆ ಬಂದರು. ಅದಕ್ಕೆ ಕಾರಣ ಅಟಲ್ ಕನಸಿನ ಅದ್ಭುತವಾದ ಸುವರ್ಣ ಚತುಷ್ಪಥ.
ಎಲ್ಲರಿಗೂ ಗೊತ್ತಿರುವ ಹಾಗೆ ಸುವರ್ಣ ಚತುಷ್ಪಥ ಯೋಜನೆ ರೂಪಿತವಾದದ್ದು 1999ರಲ್ಲಿ. ಯೋಜನೆ ಕಾರ್ಯಾರಂಭವಾದದ್ದು 2000-2001ರಲ್ಲಿ. 2004ರ ಹೊತ್ತಿಗೆ ಶೇ.60ರಷ್ಟು ಹೆದ್ದಾರಿ ನಿರ್ಮಾಣ ಕಾರ್ಯ ಮುಕ್ತಾಯವಾಗಿತ್ತು. 2012ರಲ್ಲಿ ಯೋಜನೆ ಪರಿಪೂರ್ಣವಾಯಿತು. ಈ ಮೂಲಕ ಈ ದೇಶದ 2846 ಕಿ.ಮೀ ಉದ್ದದ ಚತುಷ್ಪಥ ಮತ್ತು ಷಟ್ಪಥ ಕಾಮಗಾರಿ ಪೂರ್ಣಗೊಂಡಿತ್ತು.
ದೇಶದ ನಾಲ್ಕು ಪ್ರಮುಖ ಮಹಾನಗರಗಳಾದ ಉತ್ತರದ ದಿಲ್ಲಿ, ಪೂರ್ವದ ಕೋಲ್ಕೊತಾ, ಪಶ್ಚಿಮದ ಮುಂಬೈ, ದಕ್ಷಿಣದ ಕನ್ಯಾಕುಮಾರಿ ಬೆಸೆಯುವ ಮತ್ತು ಅದಕ್ಕಿಂತ ಮುಖ್ಯವಾಗಿ ದೇಶದ ಪ್ರಮುಖ ಕೃಷಿ, ಕೈಗಾರಿಕೆ ಮತ್ತು ಸಾಂಸ್ಕೃತಿಕ ವಲಯಗಳನ್ನು ಬೆಸೆಯುವ ಮಹತ್ವಾಕಾಂಕ್ಷೆಯ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯೇ ರೋಮಾಂಚನಕಾರಿ. ಇದು ಭಾರತದಲ್ಲಿ ಇದುವರೆಗಿನ ಅತಿದೊಡ್ಡ ಹೆದ್ದಾರಿ ಯೋಜನೆ. ಜಗತ್ತಿನಲ್ಲಿ 5ನೇ ಅತಿದೊಡ್ಡ ಹೆದ್ದಾರಿ ಯೋಜನೆ. ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಗೆ ಮಾಡಿದ ವೆಚ್ಚ ಆರುನೂರು ಬಿಲಿಯನ್. ಅಂದರೆ ಅರವತ್ತು ಸಾವಿರ ಕೋಟಿ ರೂಪಾಯಿ. ಗುಡ್ ಗವರ್ನನ್ಸ್ಗೆ ಭಾರತದಲ್ಲಿ ಇದೊಂದು ಉತ್ತಮ ಉದಾಹರಣೆ.
ಗುಡ್ ಗವರ್ನನ್ಸ್ ವ್ಯಾಖ್ಯಾನ ಏನು?
ಸರಳವಾಗಿ ಹೇಳುವುದಾದರೆ ಉತ್ತಮ ಯೋಜನೆ ರೂಪಿಸುವಿಕೆ. ಅತ್ಯುತ್ತಮ ಕಾರ್ಯಾನುಷ್ಠಾನ. ತೆರಿಗೆ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಪರತೆ. ವಾಜಪೇಯಿ ಸರಕಾರ ಈ ಯೋಜನೆ ರೂಪಿಸಲು ತೆಗೆದುಕೊಂಡ ಕಾಲಾವಧಿ ಕೇವಲ ಒಂದು ವರ್ಷ. ಕಾರ್ಯಾನುಷ್ಠಾನಕ್ಕೆ ಬಂದದ್ದು ನಾಲ್ಕರಿಂದ ಐದು ವರ್ಷಗಳಲ್ಲಿ. ಇನ್ನು ಈ ಯೋಜನೆಯಿಂದ ಆಗುವ ಪ್ರಯಾಣದ ಸಮಯದ ಉಳಿತಾಯ, ಸುಖಾನುಭವ, ಇಂಧನ, ವಾಹನ ನಿರ್ವಹಣೆಯಲ್ಲಿ ಕ್ಷ ಮತೆ, ಪ್ರಜೆಗಳಿಗೆ ಮೂಲಸೌರ್ಯ ಕಲ್ಪಿಸುವ ವಿಷಯದಲ್ಲಿ ಎತ್ತರಕ್ಕೇರಿದ ಭಾರತದ ಘನತೆ ಇವುಗಳಿಗೆ ಹೋಲಿಸಿದರೆ 60 ಸಾವಿರ ಕೋಟಿ ರೂಪಾಯಿ ವೆಚ್ಚ ಅತ್ಯಂತ ನ್ಯಾಯಯುತ.
ಇಲ್ಲಿ ತಮಿಳುನಾಡಿನ ಹೆಚ್ಚುಗಾರಿಕೆ ಏನು?
ಇದೇ ಅತ್ಯಂತ ಆಸಕ್ತಿಕರ ವಿಚಾರ. ಸುವರ್ಣ ಚತುಷ್ಪಥ ಹೆದ್ದಾರಿ ಹಾದು ಹೋಗಿರುವ ಅಳತೆಗೆ ಸಂಬಂಧಿಸಿ ಕರ್ನಾಟಕ ಮತ್ತು ತಮಿಳುನಾಡಿಗೆ ಹೋಲಿಸಿ ನೋಡಿದರೆ ಹೆಚ್ಚೇನೂ ವ್ಯತ್ಯಾಸ ಇಲ್ಲ. ಹೆದ್ದಾರಿ ವಿಸ್ತಿರ್ಣದಲ್ಲಿ ಕರ್ನಾಟಕದಲ್ಲಿ ಕೊಂಚ ಕಡಿಮೆ, ತಮಿಳುನಾಡಿನಲ್ಲಿ ತುಸು ಜಾಸ್ತಿ ಇದೆ. ಆದರೆ ಗುಣಮಟ್ಟದ ವಿಷಯಕ್ಕೆ ಬಂದರೆ ಕರ್ನಾಟಕದಲ್ಲಿ ವಾಜಪೇಯಿ ರಸ್ತೆ ಅಥವಾ ಸುವರ್ಣ ಚತುಷ್ಪಥ ಹೆದ್ದಾರಿ ಗುಣಮಟ್ಟ ಅತ್ಯಂತ ಕಳಪೆ. ತಮಿಳುನಾಡಿನ ಉದ್ದಕ್ಕೂ ಹೆದ್ದಾರಿ ಕಾಮಗಾರಿಯ ಗುಣಮಟ್ಟ ವಿಶ್ವದರ್ಜೆಯದ್ದು. ವಾಜಪೇಯಿ ರಸ್ತೆ ನಿರ್ಮಾಣ ಮಾಡಿ ಅಲ್ಲೂ ಇಲ್ಲೂ ಹದಿನೈದು ವರ್ಷಗಳಾಗಿವೆ. ತಮಿಳುನಾಡಿನ ರಸ್ತೆಯಲ್ಲಿ ಒಂದೇ ಒಂದು ಹೊಂಡವನ್ನು ಹುಡುಕಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಹೊಂಡಗಳಿಲ್ಲದ ಒಂದಿಂಚೂ ರಸ್ತೆಯನ್ನು ಕಾಣಲು ಸಾಧ್ಯವಿಲ್ಲ. ಇದಕ್ಕೆ ಕಾರಣವೇನು ಹಾಗಾದರೆ? ಕಾರಣ ಇಷ್ಟೇ, ರಾಜ್ಯ ಸರಕಾರದ ಮುತುವರ್ಜಿ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ, ಹೆದ್ದಾರಿ ನಿರ್ವಹಣೆಯಲ್ಲಿ ಅಚ್ಚುಕಟ್ಟು. ತಮಿಳುನಾಡಿನಲ್ಲಿ ಇವೆರಡಕ್ಕೂ ಗರಿಷ್ಠ ಆದ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿ ಕನಿಷ್ಠ ಆದ್ಯತೆ ನೀಡಲಾಗಿದೆ ಅಷ್ಟೆ.
ತಮಿಳುನಾಡಿನಗುಂಟ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಎಂತಹ ಮುಂದಾಲೋಚನೆ ಮತ್ತು ಸಾರ್ವಜನಿಕ ಹಿತದ ಮುತುವರ್ಜಿ ವಹಿಸಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆ ಕೊಟ್ಟರೆ ನಾನು ಹೇಳುವ ಸಂಗತಿ ಮನವರಿಕೆ ಆಗಬಹುದು. ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗುಂಟ ಸಾವಿರಾರು ಸ್ಥಳೀಯ ಬಸ್ ತಂಗುದಾಣಗಳಿವೆ. ಹೆದ್ದಾರಿಗುಂಟ ಪ್ರತಿ ಬಸ್ ತಂಗುದಾಣದ ಬಳಿಯೂ ಬಸ್ ನಿಲುಗಡೆಗೆ ಹೆದ್ದಾರಿಯಿಂದ ಹೊರಗೆ ತುಸು ರಸ್ತೆ ವಿಸ್ತರಿಸಿ ಪ್ರತ್ಯೇಕ ಸ್ಥಳ ಮೀಸಲಿಡಲಾಗಿದೆ. ಇದರಿಂದ ಆಗುವ ಲಾಭ ಪ್ರಮುಖವಾಗಿ ಮೂರು. ಹೆದ್ದಾರಿಯ ಮೇಲೆ ವೇಗವಾಗಿ ಸಾಗುವ ವಾಹನಕ್ಕೆ ಅಡೆತಡೆ ಆಗುವುದಿಲ್ಲ. ಬಸ್ ಪ್ರಯಾಣಿಕರ ಸುರಕ್ಷ ತೆ ಹೆಚ್ಚು. ನಿಲ್ದಾಣಗಳಲ್ಲಿ ಅಪಘಾತದ ಪ್ರಮಾಣ ಶೂನ್ಯ.
ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲ; ಕರ್ನಾಟಕದ ರಾಜ್ಯ ಹೆದ್ದಾರಿಗಳ ಗುಣಮಟ್ಟ, ಸ್ಥಿತಿಗತಿಯ ಬಗ್ಗೆ ನಾನು ಇಲ್ಲಿ ಹೆಚ್ಚು ಹೇಳುವ ಅಗತ್ಯವಿಲ್ಲ. ನಿಮಗೆ ನನಗಿಂತಲೂ ಚೆನ್ನಾಗಿ ಗೊತ್ತಿದೆ. ಏಕೆಂದರೆ ಅದರ ಕಷ್ಟನಷ್ಟವನ್ನು ಅನುಭವಿಸಿಯೇ ಇರುತ್ತೀರಿ.
ತಮಿಳುನಾಡಿನ ವಿಚಾರಕ್ಕೆ ಬಂದರೆ ರಾಷ್ಟ್ರೀಯ ಹೆದ್ದಾರಿಗಳು ಮಾತ್ರವಲ್ಲ, ರಾಜ್ಯ ಹೆದ್ದಾರಿಗಳೂ ಶೇ.95ಷ್ಟು ಅತ್ಯುತ್ಕೃಷ್ಟವಾಗಿವೆ. ತಮಿಳುನಾಡಿನ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿ ವಿಚಾರಕ್ಕೆ ಬಂದರೆ ಇಲ್ಲಿ ಉಲ್ಲೇಖಿಸಲೇಬೇಕಾದ ಇನ್ನೂ ಒಂದು ಸಂಗತಿಯಿದೆ. ಕರ್ನಾಟಕದ ಮಂತ್ರಿಗಳು, ಅಧಿಕಾರಿಗಳು ಮತ್ತು ಹಿರಿಕಿರಿಯ ಜನಪ್ರತಿನಿಧಿಗಳು ಗಮನವಿಟ್ಟು ಕೇಳಿಸಿಕೊಳ್ಳಬೇಕು. ತಮಿಳುನಾಡಿನ ಪ್ರತಿಯೊಂದು ಪುಟ್ಟ ನಗರಕ್ಕೂ ಸಹ ಬೈ ಪಾಸ್ ರಸ್ತೆಗಳಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ಉದ್ದೇಶಪಟ್ಟರೆ ಮಾತ್ರ ನಗರಗಳ ಒಳಕ್ಕೆ ಪ್ರವೇಶಿಸಬೇಕು. ಅದಿಲ್ಲ ಅಂದರೆ ಬೈಪಾಸಲ್ಲಿ ಸರಾಗವಾಗಿ ಪ್ರಯಾಣಿಸಬಹುದು. ಇದರಿಂದ ಎಷ್ಟೊಂದು ಸಮಯ ಉಳಿತಾಯವಾಗುತ್ತದೆ. ನಗರಗಳಲ್ಲಿ ಅನಗತ್ಯ ಸಂಚಾರದಟ್ಟಣೆಗೆ ಕಡಿವಾಣ ಸಾಧ್ಯ.
ಬೈಪಾಸ್ ಅಂತ ಬಂದಾಗ ಕರ್ನಾಟಕದ ಒಂದು ಬೈಪಾಸ್ ರಸ್ತೆಯ ಕರ್ಮಕಾಂಡವನ್ನು ಇಲ್ಲಿ ಉಲ್ಲೇಖಿಸಲೇಬೇಕು. ನಿಮಗೆಲ್ಲ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಗೊತ್ತು. ಹಾಗೆಯೇ ಬೆಂಗಳೂರು ಪುಣೆ ಹೆದ್ದಾರಿ ಮೇಲೆ ಹುಬ್ಬಳ್ಳಿ ನಗರ ಪ್ರವೇಶಕ್ಕೆ ಮೊದಲು ಸಿಗುವ ಗಬ್ಬೂರು ಕ್ರಾಸ್ ಕೂಡ ಗೊತ್ತು. ಆ ಗಬ್ಬೂರು ಕ್ರಾಸ್ನಿಂದ ಧಾರವಾಡದ ಹೊರವಲಯದವರೆಗೆ ಒಂದು ಬೈಪಾಸ್ ಇದೆ. ಅದಕ್ಕೆ ಯಮಲೋಕದ ದಾರಿ ಎಂಬ ಕುಖ್ಯಾತಿ ಇದೆ. ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಇಲ್ಲಿಯವರೆಗೆ ಪ್ರಾಣ ಕಳೆದುಕೊಂಡ ಅಮೂಲ್ಯ ಜೀವಗಳು ಅಸಂಖ್ಯ. ಅದಕ್ಕೆ ಕಾರಣ ಅತ್ಯಂತ ಕಿರಿದಾದ, ಅವೈಜ್ಞಾನಿಕ ಬೈಪಾಸ್ ರಸ್ತೆ. ಆ ರಸ್ತೆಗೆ ಹೆಣಭಾರದ ಟೋಲ್ ಸಂಗ್ರಹ ಎಲ್ಲಿ ಶುರುವಾಗಿ ಎಂದು ಮುಗಿಯಬೇಕೆಂಬುದು ಯಾರಿಗೂ ಗೊತ್ತಿಲ್ಲ. ಆ ರಸ್ತೆಗಿಂತ ಹುಬ್ಬಳ್ಳಿ-ಧಾರವಾಡ ನಗರದ ಒಳಗಿನ ರಸ್ತೆಯೇ ಎಷ್ಟೋ ಮೇಲು ಎಂದು ಭಾವಿಸುವವರೇ ಹೆಚ್ಚು. ಅಂಥ ಪ್ರಯಾಣಿಕರಿಗೆ ವೇಗನಿಯಂತ್ರಕರ ಚಿತ್ರಹಿಂಸೆ ಬೇರೆ. ಒತ್ತಾಯ ಪೂರ್ವಕವಾಗಿ ಎಲ್ಲರೂ ಮನಸ್ಸಿಲ್ಲದಿದ್ದರೂ ಬೈಪಾಸನ್ನೇ ಬಳಸಬೇಕು. ಟೋಲ್ ಕಟ್ಟಬೇಕು. ಹು.ಧಾ ನಗರದ ಆಳುಗರಿಗೆ ಟೋಲ್ ಏಜೆಂಟರಿಂದ ಮಾಮೂಲಿ ಸಂದಾಯ ಆಗಬೇಕು.
ಸೂತ್ರ ವೆರಿ ಸಿಂಪಲ್.
ಅದಕ್ಕೆ ತಮಿಳರು ಕರ್ನಾಟಕ ಮತ್ತು ತಮಿಳುನಾಡಿನ ರಾಜಕಾರಣಿಗಳಿಗೆ ಇರುವ ವ್ಯತ್ಯಾಸವನ್ನು ಹೀಗೆ ಸೊಗಸಾಗಿ ಹೇಳುತ್ತಾರೆ. ‘‘ಇಂಗೆ ವ್ಯಾಲೆಸೆಯ್ದು ಮೀದಿ ಸಾಪಡವಾಂಗ, ಅಂಗೆ ಸಾಪ್ದು ಮಿಚ್ಚಿದು ವ್ಯಾಲೆಸೇಯವಾಂಗ.’’ ಅಂದರೆ ತಮಿಳುನಾಡಿನಲ್ಲೂ ಭ್ರಷ್ಟಾಚಾರವಿದೆ, ಕರ್ನಾಟಕದಲ್ಲೂ ಭ್ರಷ್ಟಾಚಾರವಿದೆ. ವ್ಯತ್ಯಾಸ ಏನು ಅಂದರೆ ತಮಿಳುನಾಡಿನಲ್ಲಿ ರಾಜಕಾರಣಿಗಳು ಮಾಡಬೇಕಾದ ಕಾಮಗಾರಿಯನ್ನೆಲ್ಲ ಅಚ್ಚುಕಟ್ಟಾಗಿ ಮಾಡಿ ಅಳಿದುಳಿದಿದ್ದನ್ನು ತಾವು ತಿಂತಾರೆ. ಕರ್ನಾಟದಲ್ಲಿ ಮೊದಲು ತಿನ್ನಬೇಕಾದ್ದನ್ನು ತಿಂದು ತೇಗಿ ಉಳಿದಿದ್ದರಲ್ಲಿ ಕಾಮಗಾರಿಗಳಿಗೆ ತೇಪೆ ಹಾಕ್ತಾರೆ ಅಂತ ಈ ಮಾತಿನ ಮರ್ಮ! ಈ ಹೇಳಿಕೆಗಳ ಬಗ್ಗೆ ಆಕ್ಷೇಪವಿದ್ದರೆ ನಮ್ಮ ರಾಜ್ಯದ ಹೆದ್ದಾರಿಗಳು, ನಗರ ಗ್ರಾಮೀಣದ ರಸ್ತೆಗಳು, ಸೇತುವೆಗಳು, ಬಸ್ಸ್ಟ್ಯಾಂಡಿನಿಂದ ಹಿಡಿದು ಎಲ್ಲ ಸರಕಾರಿ ಕಟ್ಟಡಗಳ ಕಾಮಗಾರಿಗಳನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಿ ಸಾಕು.
ತಮಿಳುನಾಡಿನಲ್ಲಿ ರಾಜಕೀಯ ಬಹಳ ಪರಿಶುದ್ಧ ಅಂತ ಹೇಳುವುದಿಲ್ಲ. ಅಲ್ಲಿ ಕಿತ್ತಾಟ, ಕಾಲೆಳೆದಾಟ, ರಾಜಕೀಯವಾಗಿ ಅಪಖ್ಯಾತಿಗೆ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ತಮಿಳುನಾಡಿನ ನೇತಾರರು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಅದರ ಜೊತೆಗೇನೆ ಆ ರಾಜ್ಯದ ಅಭಿವೃದ್ಧಿಗೂ ಅಷ್ಟೇ ಆದ್ಯತೆ ಕೊಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತಾರೆ. ಕೇಂದ್ರ ಸರಕಾರದ ಜೊತೆಗೆ ಒಟ್ಟಾಗಿ ಗುದ್ದಾಡಿ ಗೆಲ್ಲುತ್ತಾರೆ. ತಮಿಳುನಾಡಿನಲ್ಲಿ ಅಭಿವೃದ್ಧಿ, ಆಕರ್ಷಣೆ ಎಂದರೆ ಚೆನ್ನೈ ಮಾತ್ರವಲ್ಲ. ಚೆನ್ನೈ ಜೊತೆಗೆ ಕೊಯಮತ್ತೂರು, ಮಧುರೈ, ತೂತುಕುಡಿ, ಸೇಲಂ, ತಿರುಚಿ, ಈರೋಡ್, ವೇಲೂರು, ಕನ್ಯಾಕುಮಾರಿಯವರೆಗೆ ಕನಿಷ್ಠ ಹತ್ತಕ್ಕೂ ಹೆಚ್ಚು ನಗರಗಳನ್ನು ಕೈಗಾರಿಕೆ, ಮೂಲಸೌಕರ್ಯದ ದೃಷ್ಟಿಯಿಂದ ಅಭಿವೃದ್ಧಿ ಮಾಡಿದ್ದಾರೆ. ಸಣ್ಣಪುಟ್ಟ ನಗರಗಳಲ್ಲೂ ಫ್ಲೈಓವರ್ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಬೆಂಗಳೂರು ನಗರದ ಅವ್ಯವಸ್ಥೆ, ಹುಬ್ಬಳ್ಳಿಯಂತಹ ಎರಡನೇ ಹಂತದ ನಗರಗಳನ್ನು ಮನಸ್ಸಿನಲ್ಲಿ ತಂದುಕೊಳ್ಳಿ ಸಾಕು. ಜಯಲಲಿತಾ, ಕರುಣಾನಿಧಿ ಸ್ಪರ್ಧೆಗೆ ಬಿದ್ದವರಂತೆ ಉಚಿತ ಕೊಡುಗೆಗಳನ್ನು ನೀಡಿದ್ದಾರೆ ಎಂಬ ಆಕ್ಷೇಪ ಇದೆ ನಿಜ. ಆ ಕೆಲಸದಲ್ಲಿ ಕರ್ನಾಟಕದವರಿಗಿಂತ ಅವರಿಗೆ ಹೆಚ್ಚಿನ ಆಸ್ಥೆ ಇದೆ. ಅದಕ್ಕೆ ಒಂದೇ ಒಂದು ಉದಾಹರಣೆ ತಮಿಳುನಾಡಿನ ಅಮ್ಮ ಕ್ಯಾಂಟೀನಿನ ಊಟ, ಉಣಿಸು. ನಮ್ಮ ಕರ್ನಾಟಕದ ಇಂದಿರಾ ಕ್ಯಾಂಟೀನಿನ ಅಧ್ವಾನ. ಹೇಳುತ್ತ ಹೋದರೆ ಇಂತಹ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು.
ಎಲ್ಲದಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಗುಡ್ ಗವರ್ನನ್ಸ್ ಇಂಡೆಕ್ಸ್ನಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿರುವುದು ಮೇಲಿನ ಎಲ್ಲ ಸಂಗತಿಗಳಿಗೆ ನೀಡಿದ ಸರ್ಟಿಫಿಕೇಟ್ ಎನ್ನಬಹುದು.
ನಮ್ಮಲ್ಲಿ ಆಲೋಚನಾ ದಾರಿದ್ರ್ಯ ಎಷ್ಟಿದೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುವುದು ಸೂಕ್ತ. 1984ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜನತಾ ದರ್ಶನ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದರು. ಮೂವತ್ತು ವರ್ಷ ಕಾಲ ಜಿಡ್ಡುಗಟ್ಟಿದ್ದ ಅಧಿಕಾರಶಾಹಿಗೆ ಚುರುಕು ಮುಟ್ಟಿಸಲು, ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದರಿಂದ ಜನಪ್ರಿಯತೆ ಗಳಿಸಲು ಅವರು ಆ ಕಾರ್ಯಕ್ರಮ ಆರಂಭಿಸಿದ್ದರು. ಆಗ ಈಗಿನ ಹಾಗೆ ಗ್ರಾಮದಿಂದ ಜಿಲ್ಲೆಯವರೆಗೆ ಆಡಳಿತ ವ್ಯವಸ್ಥೆಯೂ ಬಲಿತಿರಲಿಲ್ಲ. ಈಗ ಹಾಗಲ್ಲ ಪಂಚಾಯಿತಿ, ತಾಲೂಕು, ಜಿಲ್ಲೆ, ರಾಜ್ಯದವರೆಗೆ ರಾಜಕೀಯ ಮತ್ತು ಅಧಿಕಾರಿಗಳ ನೆಟ್ವರ್ಕ್ ಇದೆ. ಆದರೂ ಜನತಾದರ್ಶನ ಎಂಬ ಕಾಟಾಚಾರದ ಕಾರ್ಯಕ್ರಮವನ್ನು, ಸಾಲದ್ದಕ್ಕೆ ಗ್ರಾಮವಾಸ್ತವ್ಯ ಎಂಬ ತೋರಿಕೆಯ, ಫಲಶ್ರುತಿ ಕಿಂಚಿತ್ತೂ ಇಲ್ಲದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಾಗಾದರೆ ರಾಜ್ಯದ ಮುಖ್ಯಮಂತ್ರಿ ಜನತಾದರ್ಶನ ಮಾಡುವುದಾದರೆ, ಗ್ರಾಮವಾಸ್ತವ್ಯ ಮಾಡಿಯೇ ಜನರ ಸಮಸ್ಯೆ ಪರಿಹಾರ ಮಾಡುವುದಾದರೆ ಗ್ರಾಮಪಂಚಾಯಿತಿಗೆ, ಪಿಡಿಒಗೆ, ಗ್ರಾ.ಪಂ ಕಾರ್ಯದರ್ಶಿಗೆ, ತಾಲೂಕು ಪಂಚಾಯಿತಿಗೆ, ತಾಲೂಕು ಆಡಳಿತಕ್ಕೆ, ಶಾಸಕರಿಗೆ, ಜಿಲ್ಲಾಡಳಿತಕ್ಕೆ, ಜಿಲ್ಲಾಮಂತ್ರಿಗೆ ಏನು ಕೆಲಸ? ಕೆಳಹಂತದ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಹಾಗೆ ಮಾಡುವುದು ಮುಖ್ಯಮಂತ್ರಿಯ ಕೆಲಸವೇ ಹೊರತು, ಗ್ರಾಮಪಂಚಾಯಿತಿ ಮಾಡುವ ಕೆಲಸವನ್ನು ತಾವೇ ಮಾಡುವುದಲ್ಲ. ಈಗ ಉಳಿದ ಮಂತ್ರಿಗಳೂ ಇದೇ ಹಾದಿ ಹಿಡಿದಿರುವುದು ಮತ್ತೊಂದು ದುರಂತ. ಆಸ್ಪತ್ರೆಯಲ್ಲಿ ಮಲಗುವ, ಶಾಲೆಯಲ್ಲಿ ಮಲಗುವ, ಹಾಡಿಗಳಲ್ಲಿ ಮಲಗುವ ಮಂತ್ರಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ತಾವು ಹಾಕಿಕೊಂಡ ಗರಿಗರಿ ಡ್ರೆಸ್ಸಲ್ಲೇ ಮಲಗಿ ಪ್ರೆಸ್ ಫೋಟೊ ಸೆಷನ್ ಮುಗಿದರೆ ಮಂತ್ರಿಯ ವಾಸ್ತವ್ಯದ ಕಾರ್ಯಕ್ರಮವೂ ಮುಗೀತು.
ಅದೂ ಸಾಲದ್ದಕ್ಕೆ ಈಗ ಮಂತ್ರಿಗಳಿಗೆ ಸೋಷಿಯಲ್ ಮೀಡಿಯಾ ಪ್ರಚಾರದ ಗೀಳು ಬೇರೆ. ಗದ್ದೆಯಲ್ಲಿ, ರಸ್ತೆಬದಿಯ ಗಿರ್ಮಿಟ್ ಅಂಗಡಿಗಳಲ್ಲಿ ಅವಲಕ್ಕಿ ಮೊಸರು ತಿಂದಿದ್ದರವರೆಗೆ ಮಂತ್ರಿಗಳ ಅಭಿವೃದ್ಧಿ ಅಧಿಕೃತ ಕಾರ್ಯಕ್ರಮಗಳಾಗುತ್ತಿವೆ. ಅಧಿಕಾರಿಗಳ ಜೊತೆ ಕುಳಿತುಕೊಳ್ಳಿ, ಇಲಾಖೆಯಲ್ಲಿ ಕಗ್ಗಂಟಾಗಿರುವ ಸಮಸ್ಯೆ ಬಗೆಹರಿಸಿ ಅಂದರೆ ಸೆಲಿಧೀ, ಫೋಟೊಗಳಿಗೆ ತೃಪ್ತಿಪಟ್ಟುಕೊಳ್ಳುವ ಕಾಲ ಬಂದಿದೆ.
ತಂತ್ರಜ್ಞಾನ ಎಷ್ಟೊಂದು ಬೆಳೆದಿದೆ. ಮುಖ್ಯಮಂತ್ರಿಗಳು ವಿಧಾನಸೌಧದಲ್ಲೇ ಕುಳಿತು ಜಿಲ್ಲಾಧಿಕಾರಿ, ಜಿಲ್ಲಾಮಂತ್ರಿ ಕೆಲಸ ಕಾರ್ಯವನ್ನು ಅಗತ್ಯಬಿದ್ದರೆ ಯಾವುದೇ ತಾಲೂಕು ಆಡಳಿತದ ಕಾರ್ಯಕ್ಷ ಮತೆಯನ್ನು ಪರಾಮರ್ಶೆ ಮಾಡಬಹುದಾದ ಈ ಕಾಲದಲ್ಲಿ, ಆರು ತಿಂಗಳಿಗೊಮ್ಮೆ ಎಲ್ಲಾ ಅಧಿಕಾರಿಗಳನ್ನು ಬೆಂಗಳೂರಲ್ಲಿ ಗುಡ್ಡೆ ಹಾಕಿಕೊಂಡು ಕುಳಿತು ಯಾವ ಕಾರ್ಯಸಾಧಿಸಲು ಸಾಧ್ಯವಿದೆ. ಬೀದರ್ನಿಂದ ಚಾಮರಾಜನಗರದವರೆಗಿನ ಜಿಲ್ಲಾಧಿಕಾರಿಗಳು ಬೆಂಗಳೂರಿಗೆ ಬಂದು ಹೋಗಲು ಕನಿಷ್ಠ ಎರಡು ದಿನ ಕಾಲಹರಣ. ಜಿಲ್ಲಾಧಿಕಾರಿ ವಿಮಾನದಲ್ಲಿ ಬರುತ್ತಾರೆ. ಅವರು ಬಳಸುವ ಕಾರು ರಸ್ತೆಯಲ್ಲಿ ಬೆಂಗಳೂರಿಗೆ ಬರುತ್ತದೆ. ಅಧಿಕಾರಿಗಳಲ್ಲಿ ಹೆಚ್ಚಿನವರು ಸ್ಟಾರ್ ಹೊಟೇಲುಗಳಲ್ಲೇ ಉಳಿದುಕೊಳ್ಳುತ್ತಾರೆ. ಇದರ ಒಟ್ಟು ಹಣದ ಖರ್ಚು ಯಾರದ್ದು? ಅಪವ್ಯಯವಾಗುವ ಸಮಯದ ಮೌಲ್ಯ ಎಷ್ಟು?
ಅಯ್ಯೋ ಶಿವನೆ…ಒಬ್ಬ ವಾಜಪೇಯಿ, ಅವರು ನಿರ್ಮಿಸಿದ ಹೆದ್ದಾರಿ, ಗುಡ್ ಗವರ್ನನ್ಸ್ ಆಚರಣೆಯ ಸಂದರ್ಭ ಇಷ್ಟೆಲ್ಲ ಪಿತ್ಥ ಕೆರಳಲು ಕಾರಣವಾಯ್ತು!
ಓದುಗರ ಒಡಲಾಳ
ನೀವು ನಿಮ್ಮ ಈ ಹಿಂದಿನ ಅಂಕಣದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಸರಕಾರಿ ಕೆಲಸದ ಸಮಯದಲ್ಲಿ, ಸರಕಾರಿ ಸೌಕರ್ಯ ಬಳಸಿ ದೇವಾಲಯ ಸುತ್ತುವುದನ್ನು ಪ್ರಶ್ನೆ ಮಾಡಿದ್ದಿರಿ. ಖಾಸಗಿ ಸಮಯವನ್ನು ಆ ಕೆಲಸಕ್ಕೆ ಬಳಸಿ ಅಂತ ಸಲಹೆ ಕೊಟ್ಟಿದ್ದಿರಿ. ಆ ವಿಷಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಹಾಗೇನೇ ಈ ಆಸ್ಪತ್ರೆಯಲ್ಲಿ, ಶಾಲೆಯಲ್ಲಿ ಮಲಗುವವರಿಗೂ ಒಂದು ಕಿವಿಮಾತು ಹೇಳ್ತೀರಾ? ರಾತ್ರಿ ಇವರೆಲ್ಲ ತಮ್ಮ ತಮ್ಮ ಮನೆಗಳಲ್ಲೇ ಮಲಗಿ, ಅಗತ್ಯಬಿದ್ದರೆ ಸರಕಾರಿ ಅತಿಥಿಗೃಹಗಳಲ್ಲಿ, ಹೊಟೇಲುಗಳಲ್ಲಿ ಮಲಗಿ ಕೆಲಸದ ಅವಧಿಯಲ್ಲಿ ಆಡಳಿತ ಸುಧಾರಣೆಗೆ, ಗುಣಮಟ್ಟದ ಜನತಾಸೇವೆಗೆ ಒತ್ತು ಕೊಡಲಿ ಅಲ್ಲವೇ?
ಡಾ. ಪ್ರವೀಣ್ ಚಂದ್ರ, ಬಿಟಿಎಂ ಲೇಔಟ್, ಬೆಂಗಳೂರು