ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ! : ವಿಸ್ತಾರ ಅಂಕಣ

ನಮ್ಮ ಶಿಕ್ಷಣ ವ್ಯವಸ್ಥೆ (Education system) ಸರಿ ಇಲ್ಲ. ಇದರಲ್ಲಿ ಎಳ್ಳಷ್ಟು ನೈತಿಕ ಶಿಕ್ಷಣ ಇಲ್ಲ. ಪ್ರಾಯೋಗಿಕ ಶಿಕ್ಷಣದ ಸೋಂಕಿಲ್ಲ. ಇಂಥಾ ಶಿಕ್ಷಣ ಹೆಚ್ಚಾದಂತೆ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತದೆ. ಇಂಥಾ ಶಿಕ್ಷಣ ಸುಧಾರಣೆಯಾಗಲೇಬೇಕು…!
××××××××××××××××××××××××××
– ನಮ್ಮ ನಾಡಿನ ಶಿಕ್ಷಣ ತಜ್ಞರು, ಚಿಂತಕರು ಇಂಥಾ ಮಾತನ್ನು ಹೇಳುತ್ತಲೇ ಇರುತ್ತಾರೆ. ಅವರ ಬರಹ, ಭಾಷಣ- ಎಲ್ಲೆಲ್ಲೂ ಈ ಕೊರಗನ್ನು ಕಾಣಬಹುದು. ಹಾಗೆ ನೋಡಿದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಯೋಜನೆಗಳಿವೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲೆಂದೇ ಈ ಯೋಜನೆಗಳು ವಿನ್ಯಾಸಗೊಂಡಿವೆ. ಶಿಕ್ಷಣ ಹಕ್ಕೂ (Education right) ಕೂಡ ಜಾರಿಯಾಗಿ ದಶಕಗಳೇ ಸಂದಿವೆ. ಆದರೂ ಉನ್ನತ ಶಿಕ್ಷಣದ ದಾಖಲಾತಿಯ ಸರಾಸರಿ ಪ್ರಮಾಣ ನಿರೀಕ್ಷಿಸಿದಷ್ಟು ಹೆಚ್ಚುತ್ತಿ,ಲ್ಲ. ಹಾಗಾಗಿ ಶಿಕ್ಷಣದ ವ್ಯವಸ್ಥೆ ತಳ ಸಮುದಾಯದ ಮಕ್ಕಳ ಅಭಿವೃದ್ಧಿಗೆ ಸಹಕಾರಿಯಾಗಿಲ್ಲ ಎಂಬುದು ಇನ್ನೂ ಕೆಲವರು ಮುಂದಿಡುವ ಕೊರಗು. ಒಂದಿಷ್ಟು ಮಂದಿಯಂತೂ, ನಮ್ಮ ರ್ಯಾಂಕ್‌ಗಳನ್ನೇ ಗೇಲಿ ಮಾಡುವುದುಂಟು. “ರ್ಯಾಂಕ್ ಬಂದ ಮಕ್ಕಳು ಅಗ್ರ ಶ್ರೇಯಾಂಕಿತರೇ ಹೊರತು ಬುದ್ಧಿವಂತರಲ್ಲ, ಕೌಶಲಿಗಳೂ ಅಲ್ಲ!” ಎಂದು ಮೂಗು ಮುರಿಯುತ್ತಾರೆ.
ಅಂದರೆ ಏನು? ಈಗಿನ ನಮ್ಮ ಶಿಕ್ಷಣದಲ್ಲಿ ಏನೋ ಸಮಸ್ಯೆ ಇದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಮೊದಲನೆಯದಾಗಿ ಶಿಕ್ಷಣದ ಗುಣಮಟ್ಟ ಸರಿಯಿಲ್ಲ. ಎರಡನೆಯದಾಗಿ, ಗುಣಮಟ್ಟದ ಶಿಕ್ಷಣವು ಬಡವರ ಕೈಗೆ ಸಿಗುತ್ತಿಲ್ಲ. ಮೂರನೆಯದಾಗಿ, ಈ ಶಿಕ್ಷಣವು ವಿದ್ಯಾರ್ಥಿಗಳನ್ನು ಮಕ್ಕಿ ಕಾ ಮಕ್ಕಿ ಗಿರಾಕಿಗಳನ್ನಾಗಿ ಮಾಡಿದೆಯೇ ಹೊರತು ಜ್ಞಾನವಂತರನ್ನಾಗಿ ಅಲ್ಲ. ಇದೆಲ್ಲವೂ ಅನೇಕರು ಒಪ್ಪುವ ಮಾತು. ಇದೇ ಕಾರಣಕ್ಕೆ, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.
ಭಾರತದಲ್ಲಿ 34 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National education policy) ಜಾರಿಗೆ ತರಲಾಗಿದೆ. ನೆನಪಿರಲಿ, ಈ ಮೂರೂವರೆ ದಶಕದಲ್ಲಿ ಶರವೇಗದಲ್ಲಿ ಬದಲಾಗಿದೆ (2000ರ ಹಿಂದಿನ ಸಾವಿರಾರು ವರ್ಗಗಳಲ್ಲಿ ಘಟಿಸದ ಬದಲಾವಣೆಯ ವೇಗದ ಪ್ರಮಾಣ, ಆ ನಂತರದ ಎರಡೂವರೆ ದಶಕದ ಅವಧಿಯಲ್ಲಿ ಸಾವಿರ ಪಟ್ಟು ಹೆಚ್ಚಿದೆ ಎಂಬ ಮಾತಿದೆ). ಬದಲಾಗದೇ ಉಳಿದಿದ್ದು ನಮ್ಮ ಅಧಿಕೃತ ಶಿಕ್ಷಣ ನೀತಿ. ಇದೇ ಇರಲಿ, ಈ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿ ಮಾಡಿದೆಯೇ? ಹಾಗೇನೂ ಇಲ್ಲ. 2015 ಫೆಬ್ರವರಿಯಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿ ನಡೆಸಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ಘೋಷಿಸಿದ್ದರು. ಭಾರತದ ಶಿಕ್ಷಣಕ್ಕೆ ಸಂಬಂಧಿಸಿದ 39 ಅಂಶಗಳನ್ನು ಜನರ ಮುಂದೆ ಇಡುತ್ತಿದ್ದೇವೆ, ದೇಶದ ಎಲ್ಲ ಜನರೂ ಇದಕ್ಕೆ ಸಲಹೆ ಕೊಡಬೇಕು, ಅದೆಲ್ಲದರ ಆಧಾರದಲ್ಲಿ ಶಿಕ್ಷಣ ನೀತಿ ರೂಪಿಸುತ್ತೇನೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ನಂತರ ಐದು ವರ್ಷ ವಿಚಾರ ಮಂಥನ ನಡೆಸಲಾಗಿದೆ.
ಬಹುಶಃ ಜಗತ್ತಿನಲ್ಲಿ ಯಾವುದೇ ಶಿಕ್ಷಣ ನೀತಿ ರೂಪಿಸುವಾಗ ಇಷ್ಟು ಪ್ರಮಾಣದ ಚರ್ಚೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ನಡೆದಿಲ್ಲ. ದೇಶದ 30 ಕೋಟಿ ಜನರ ಬಳಿಗೆ ಇದನ್ನು ಕೊಂಡೊಯ್ಯಲಾಗಿದೆ. ಹರಿದು ಬಂದ 2 ಲಕ್ಷಕ್ಕಿಂತ ಅಧಿಕ ಸಲಹೆಗಳನ್ನು ಸೇರಿಸಿದ್ದರೆ, ಅದರ ಒಟ್ಟು ಪುಟಗಳ ಸಂಖ್ಯೆ 50 ಸಾವಿರ ದಾಟುತ್ತಿತ್ತು. ನಿವೃತ್ತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಸಮಿತಿ ಇದೆಲ್ಲವನ್ನೂ ದತ್ತಾಂಶ ರೂಪಕ್ಕೆ ಇಳಿಸಿಕೊಂಡು ಎಲ್ಲವನ್ನೂ ಅಧ್ಯಯನ ಮಾಡಿ ಕರಡು ನೀತಿಯೊಂದನ್ನು ರೂಪಿಸಿತು. ಬಳಿಕ ಮತ್ತೆ ಸಾರ್ವಜನಿಕರ ಚರ್ಚೆಗೆ ಬಿಡಲಾಯಿತು. ಅಲ್ಲಿಂದ ಬಂದ ಸಲಹೆಗಳನ್ನೂ ಅಳವಡಿಸಿ ಕೊನೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಘೋಷಣೆ ಮಾಡಲಾಯಿತು.
ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಇರುವ ಪ್ರಮುಖ ದೂರು ಯಾವುದು? ಅವರು ಮುಖ್ಯವಾಗಿ ಇರುವುದೇ ನೀತಿ ನಿರೂಪಣೆ ಮಾಡಲು. ಆದರೆ ಸಂಸತ್ತಿನಲ್ಲಿ ಕಾನೂನು ರಚನೆ, ತಿದ್ದುಪಡಿಯಂತಹ ಶಾಸನ ರಚನಾ ಕೆಲಸಕ್ಕೆ ಅವರ ಬಳಿ ಸಮಯವೇ ಇರುವುದಿಲ್ಲ. ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪ ಮಾಡಿಕೊಂಡಿರುತ್ತಾರೆ ಎನ್ನುವುದು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅತ್ಯಂತ ವಿಸ್ತೃತವಾದ ಚರ್ಚೆ, ಸಾರ್ವಜನಿಕ ಸಹಭಾಗಿತ್ವ ನಡೆಸಲಾಗಿದೆ. ಆದರೂ ಕೇಂದ್ರದಲ್ಲಿ ಪ್ರತಿಪಕ್ಷಗಳು ಹಾಗೂ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಮಾತನಾಡುತ್ತಿದೆ.
ಕರ್ನಾಟಕದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಶಿಕ್ಷಣ ನೀತಿ ಜಾರಿ (state education policy) ಮಾಡುವುದಾಗಿಯೂ ಘೊಷಣೆ ಮಾಡಲಾಗಿದೆ. ಇದಕ್ಕಾಗಿ ಸಮಿತಿಯನ್ನೂ ರಚಿಸಿ ಮೊದಲ ಸಭೆಯೂ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎನ್ನುವುದು ಸಚಿವರ ಹಾಗೂ ಸ್ವತಃ ಮುಖ್ಯಮಂತ್ರಿಗಳ ವಾದ. ಎಲ್ಲಿ ಅನ್ಯಾಯವಾಗುತ್ತದೆ ಎಂದು ಕೇಳಿದರೆ, ಇದರಲ್ಲಿ ಹಿಂದುತ್ವ ಹೇರುವ ಪಠ್ಯವಿದೆ, ನಾವು ಸಮಾನತೆಯನ್ನು ಸಾರುವ ಪಠ್ಯ ರೂಪಿಸುತ್ತೇವೆ ಎನ್ನುತ್ತಾರೆ. ಅಸಲಿಗೆ ಇವರಿಗೆಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಏನು ಎನ್ನುವುದೇ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ಈ ರೀತಿ ನಟಿಸುತ್ತಿದ್ದಾರೆ. ಏಕೆಂದರೆ ʼನೀತಿʼಗೂ ʼಪಠ್ಯʼಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೀತಿ ಎನ್ನುವುದು ಒಟ್ಟಾರೆ ಶಿಕ್ಷಣದ ವ್ಯವಸ್ಥೆ, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ, ಭಾಷಾ ದೃಷ್ಟಿಕೋನ, ವಿಜ್ಞಾನದ ಕುರಿತು ದೃಷ್ಟಿಕೋನ, ಸಂಶೋಧನೆಗೆ ನೀಡುವ ಒತ್ತು, ಮೂಲಸೌಕರ್ಯ ಸೇರಿ ಅನೇಕ ವಿಚಾರಗಳಲ್ಲಿ ಇರುತ್ತದೆ. ಹೆಚ್ಚೆಂದರೆ ದೇಶದ ಘನತೆ, ಸಾರ್ವಭೌಮತೆ, ಗಣತಂತ್ರದ ಮಹತ್ವ ಸಾರುವ ಪಠ್ಯ ಸೇರಿಸಬೇಕು ಎಂದಿರಬಹುದೇ ಹೊರತು, ಇಂಥದ್ದೇ ಪಠ್ಯವನ್ನು ಸೇರಿಸಿ ಎಂದಿರುವುದಿಲ್ಲ. ಇದನ್ನೇ ಹಿಂದುತ್ವ, ಕೇಸರೀಕರಣ ಎನ್ನುವುದು ಸರಿಯಲ್ಲ. ವಾಸ್ತವವಾಗಿ ಶಿಕ್ಷಣ ನೀತಿ, ಪಠ್ಯ ಹೇಗಿರಬೇಕು ಎಂಬುದನ್ನು ಹೇಳಿದಿಯೇ ಹೊರತು, ಯಾವುದಿರಬೇಕು ಎಂಬುದನ್ನು ಹೇಳುವುದಿಲ್ಲ. ಇದನ್ನು ನಿರ್ಧಾರ ಮಾಡುವುದು ಆಯಾ ರಾಜ್ಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು. ಹಾಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಸರೀಕರಣದ ಪ್ರಯತ್ನ ಎನ್ನುವುದು ಒಪ್ಪುವ ಮಾತಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಸಾಮಾನ್ಯವಾಗಿ ಪೋಷಕರ ಮನೋಭಾವವನ್ನು ನೋಡೋಣ. ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿಸಬೇಕು ಎಂಬ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಸೋಲಾಗಿ, ಶಿಕ್ಷಣ ಮಾಧ್ಯಮ ಯಾವುದು ಎನ್ನುವುದನ್ನು ಪೋಷಕರು ನಿರ್ಧರಿಸಬೇಕೆ ವಿನಃ ಸರ್ಕಾರವಲ್ಲ ಎಂದು ತೀರ್ಪು ಬಂದಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರಿಗೆ ಕನ್ನಡ ಅಭಿಮಾನ ಇಲ್ಲ ಎಂದು ಅರ್ಥವೇ? ತಮ್ಮ ಮಕ್ಕಳು ದೇಶದ ಮಟ್ಟದಲ್ಲಿ, ವಿಶ್ವದ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಸಿದ್ಧವಾಗಬೇಕು ಎನ್ನುವುದು ಎಲ್ಲ ಪೋಷಕರ ಆಸೆ, ಅದು ಸಹಜವೂ ಹೌದು. ಕನ್ನಡದಲ್ಲಿ ಓದಿದರೆ ಅವಕಾಶಗಳು ಕಡಿಮೆ ಎನ್ನುವುದು ಅವರ ಅನಿಸಿಕೆ. ಅವರ ಅನಿಸಿಕೆ ಸರಿಯೋ ತಪ್ಪೋ ಎನ್ನುವುದು ಬೇರೆ ಚರ್ಚೆಯ ವಿಷಯ. ಆದರೆ ತಮ್ಮ ಮಕ್ಕಳು ಉನ್ನತ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬೇಕು ಎನ್ನುವುದು ಪೋಷಕರ ಆಸೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿವಿಧ ರಾಜ್ಯಗಳು ಅನುಷ್ಠಾನ ಮಾಡುತ್ತವೆ. ಹಾಗೂ ವಿಶ್ವವಿದ್ಯಾಲಯಗಳಲ್ಲೂ ಜಾರಿ ಮಾಡಲಾಗುತ್ತದೆ. ಅಲ್ಲಿನ ಬೋಧನಾ ಪದ್ಧತಿ, ಪರೀಕ್ಷೆ, ಮೌಲ್ಯಮಾಪನ, ಅಂಕನೀಡಿಕೆಗಳು ಇದೀಗ ವಿಶ್ವದ ಮಟ್ಟದಲ್ಲಿ ಇರುವ ವ್ಯವಸ್ಥೆಗೆ ಅನುಗುಣವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಾಲ್ಕು ವರ್ಷದ ಪದವಿ ಇದೆ. ಆದರೆ ಭಾರತದಲ್ಲಿ ಮಾತ್ರ ಮೂರು ವರ್ಷದ ಪದವಿ ಕೋರ್ಸ್‌ಗಳಿವೆ. ವಿದೇಶಿ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಈಗಾಗಲೆ ಅದು ಸಮಸ್ಯೆಯಾಗುತ್ತಿದೆ. ಮೂರು ವರ್ಷ ಪದವಿಯನ್ನು ಪದವಿ ಎಂದೇ ಅನೇಕ ದೇಶಗಳು ಪರಿಗಣಿಸದೇ ಇರುವುದರಿಂದ, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಲು ಅಡ್ಡಿಯಾಗುತ್ತಿದೆ. ಹಾಗಾಗಿ ಎನ್ಇಪಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಪ್ರಸ್ತಾಪಿಸಲಾಗಿದೆ. ಇದೇನೂ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಕೋರ್ಸ್‌ನ ಯಾವುದೇ ವರ್ಷ ಹೊರನಡೆಯಬಹುದು. ಆಯಾ ವರ್ಷಕ್ಕೆ ಅನುಗುಣವಾಗಿ ಪ್ರಮಾಣಪತ್ರ, ಡಿಪ್ಲೊಮಾ ಮುಂತಾದ ಮಾನ್ಯತೆಯನ್ನು ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡಬೇಕು, ವಿದೇಶಕ್ಕೆ ತೆರಳಬೇಕು ಎನ್ನುವುವವರು ನಾಲ್ಕು ವರ್ಷ ಪೂರೈಸುತ್ತಾರೆ.
ಎಸ್ಇಪಿ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಒಂದು ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ಶಿಫಾರಸಿನಂತೆ ಎನ್ಇಪಿ ಜಾರಿಯನ್ನು ಮಾಡುವುದರಿಂದ ರಾಜ್ಯ ಸರ್ಕಾರ ಹಿಂತೆಗೆಯಿತು ಎಂದೇ ಭಾವಿಸಿಕೊಳ್ಳೋಣ. ಇದು ಯಾರಿಗೆ ಅನ್ವಯವಾಗುತ್ತದೆ? ಸರ್ಕಾರದ ನಿಯಂತ್ರಣದಲ್ಲಿರುವ ಕೆಲವು ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರದ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಅಷ್ಟೆ. ಈಗಂತೂ ರಾಜ್ಯದಲ್ಲಿ ಸರ್ಕಾರದಷ್ಟೇ, ಉನ್ನತ ಶಿಕ್ಷಣದಲ್ಲಿ ಸರ್ಕಾರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಗಳು ಸೆಳೆಯುತ್ತಿವೆ. ರಾಜ್ಯದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲ್ಪಡುವ ಖಾಸಗಿ ವಿವಿಗಳು, ಡೀಮ್ಡ್ ವಿವಿಗಳಿಗೆ ಎಸ್ಇಪಿ ಅನ್ವಯವೇ ಆಗುವುದಿಲ್ಲ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಇರುವ ಖಾಸಗಿ ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮಗಳಿಗೆ ಎಸ್ಇಪಿ ಅನ್ವಯ ಆಗುವುದಿಲ್ಲ. ಜಿಲ್ಲೆಗೊಂದರಂತಿರುವ ಜವಾಹರ ನವೋದಯ ವಿದ್ಯಾರ್ಥಿಗಳು, ಕೇಂದ್ರೀಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಎನ್ಇಪಿಯೇ ಜಾರಿಯಾಗುತ್ತದೆ, ಅಲ್ಲಿಗೂ ಎಸ್ಇಪಿ ಅನ್ವಯ ಆಗುವುದಿಲ್ಲ. ರಾಜ್ಯ ಸರ್ಕಾರದಿಂದಲೇ ನಡೆಸುವ ಕೆಲವು ವಸತಿ ಶಾಲೆಗಳಲ್ಲೂ ಸಿಬಿಎಸ್ಸಿ ಪಠ್ಯವಿದ್ದು, ಅಲ್ಲಿಂದಲೂ ಎಸ್ಇಪಿ ಹೊರಗೇ ಇರಲಿದೆ. ಇಡೀ ದೇಶ ಎನ್ಇಪಿ ರೀತಿಯಲ್ಲಿ ನಡೆಯುತ್ತಿರುವುದರಿಂದ, ಎಸ್ಇಪಿಯಲ್ಲಿ ಓದಿದ ಕರ್ನಾಟಕ ವಿದ್ಯಾರ್ಥಿಗಳಿಗೆ ಹೊರರಾಜ್ಯಗಳಲ್ಲಿ ಉನ್ನತ ಶಿಕ್ಷಣಕ್ಕೆ, ಕೆಲಸಕ್ಕೆ ತೊಂದರೆಯಾಗಬಹುದು. ಇದೇ ಕಾರಣಕ್ಕೆ ವಿದೇಶದಲ್ಲಿ ಶಿಕ್ಷಣ ಪಡೆಯಲೂ ಅಡಚಣೆ ಆಗಬಹುದು. ಆಗ ನಷ್ಟ ಆಗುವುದು ಯಾರಿಗೆ? ಇದೇ ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ.
ಈಗಾಗಲೆ ಹೇಳಿದಂತೆ, ಪೋಷಕರ ಮೊದಲ ಆದ್ಯತೆ ತಮ್ಮ ಮಕ್ಕಳ ಏಳಿಗೆ. ತಮ್ಮ ಮಕ್ಕಳು ಎಸ್ಇಪಿಯಲ್ಲಿ ಓದಿದರೆ ಭವಿದ್ಯ ಇಲ್ಲ ಎಂದು ತಿಳಿದರೆ ಅವರೂ ನಿಧಾನವಾಗಿ ಸಿಬಿಎಸ್ಇ ಶಾಲೆಗಳತ್ತ ಹೊರಳುತ್ತಾರೆ. ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿರುವ ಕಾರಣ, ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳೂ ನಿಧಾನವಾಗಿ ಸಿಬಿಎಸ್ಇ (CBSE) ಮಾನ್ಯತೆಯತ್ತ ಹೆಜ್ಜೆ ಹಾಕುತ್ತವೆ. ಅಲ್ಲಿಗೆ, ಅನುದಾನಿತ ಶಾಲೆಗಳನ್ನು ಹೊರತುಪಡಿಸಿ ಖಾಸಗಿ ವಲಯದಲ್ಲಿ ರಾಜ್ಯ ಪಠ್ಯಕ್ರಮ ದಿನೇದಿನೇ ಕಡಿಮೆಯಾಗುತ್ತದೆ. ಕೊನೆಗೆ ಉಳಿಯುವುದು ಸರ್ಕಾರಿ ಶಾಲೆ, ಕಾಲೇಜುಗಳು, ಅನುದಾನಿತ ಶಾಲೆ ಕಾಲೇಜುಗಳು. ಇವೆಲ್ಲದರಲ್ಲಿ ಓದುವ ಬಡ ಮಕ್ಕಳಿಗೆ ಇದು ಅನ್ಯಾಯ ಆಗುತ್ತದೆ. ತಾನು ಬಡವರ ಪರ, ಬಡವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಇತ್ತ ರಾಜಕೀಯ ಕಾರಣಗಳಿಗೋಸ್ಕರ ಎನ್ಇಪಿಯನ್ನು ವಿರೋಧಿಸುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತದೆ. ರಾಜಕೀಯ ಉದ್ದೇಶದಿಂದ, ಬಡ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಲ್ಲು ಹಾಕುವುದು ಸರ್ವಥಾ ಸಮರ್ಥನೀಯವಲ್ಲ. ರಾಜ್ಯ ಸರ್ಕಾರ ಕೂಡಲೆ ಈ ಎನ್ಇಪಿ ವರ್ಸಸ್ ಎಸ್ಇಪಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪೋಷಕರೆಲ್ಲ ಒತ್ತಾಯ ಮಾಡುವುದೊಂದೇ ಕನ್ನಡ ಶಾಲೆಗಳನ್ನು ಉಳಿಸಲು ಇರುವ ದಾರಿ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top