ಪಾಕಿಸ್ತಾನದ ಬಲೋಚಿಸ್ತಾನ್ ನಲ್ಲಿರುವ ಗ್ವಾದರ್ ಹಾಗೂ ನಂತರ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ(ಪಿಒಜೆಕೆ) ಪ್ರದೇಶದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಡೊನಾಲ್ಡ್ ಬ್ಲೋಮ್ ಕಳೆದ ವಾರ ಭೇಟಿ ನೀಡಿದ್ದಾರೆ. ಇದರಲ್ಲಿ ವಿಶೇಷ ಏನು ಎಂದು ಕೇಳಬಹುದು. ಗ್ವಾದರ್ ಬಂದರು ಭೌಗೋಳಿಕವಾಗಿ ಅತ್ಯಂತ ಆಯಕಟ್ಟಿನ ಸ್ಥಳ. ಈ ಬಂದರು, ಹೋರ್ಮಸ್ ಜಲಸಂಧಿಯ ಮಾರ್ಗದಲ್ಲೇ ಇದೆ. ಸ್ಟ್ರೇಟ್ ಆಫ್ ಹೋರ್ಮಸ್ ಎಂದೇ ಪ್ರಸಿದ್ಧವಾದ ಈ ಪ್ರದೇಶದ ಮೂಲಕ ವಿಶ್ವದ ಶೇ.20-30 ಕಚ್ಚಾತೈಲ ಸರಬರಾಜಾಗುತ್ತದೆ. ತೈಲ ಉತ್ಪಾದನೆ ರಾಷ್ಟ್ರಗಳು ಅದನ್ನು ಜಗತ್ತಿಗೆ ಸಾಗಿಸಲು ಇರುವ ಬಹುದೊಡ್ಡ ಕೇಂದ್ರ ಈ ಜಲಸಂಧಿ. ಅದರ ಸಮೀಪದಲ್ಲೇ ಇರುವ ಗ್ವಾದರ್ ಬಂದರಿನ ಮೇಲೆ ಪ್ರಾಬಲ್ಯ ಸಾಧಿಸುವ ಎಲ್ಲ ಪ್ರಯತ್ನಗಳನ್ನೂ ಚೀನಾ ಮಾಡುತ್ತಿದೆ. ಪಾಕಿಸ್ತಾನದ ಒಟ್ಟು ಸಾಲದ ಬಾಬ್ತಿನಲ್ಲಿ ಶೇ.30 ಭಾಗವನ್ನು ಚೀನಾದಿಂದಲೇ ಪಡೆದುಕೊಂಡಿದೆ.
ಚೀನಾದಿಂದ ಸಾಲ ಪಡೆಯುವುದೂ ಒಂದೆ, ಮೀಟರ್ ಬಡ್ಡಿಗೆ ಸಾಲ ಪಡೆಯುವುದೂ ಒಂದೆ. ಚೀನಾ ಸಾಲದ ಹಿಂದೆ ನೇಣು ಹಗ್ಗವೂ ಉಚಿತವಾಗಿ ಲಭಿಸುತ್ತದೆ. ಸಾಲದ ಸುಳಿಗೆ ದೇಶಗಳನ್ನು ಸಿಲುಕಿಸಿ ಅಲ್ಲಿನ ಸಂಪನ್ಮೂಲ, ಭೂಭಾಗಗಳನ್ನು ಬಳಕೆ ಮಾಡಿಕೊಳ್ಳುವುದು ಚೀನಾದ ತಂತ್ರದ ಭಾಗ. ಶ್ರೀಲಂಕಾದಲ್ಲೂ ಹೀಗೆಯೇ ಮಾಡಿದೆ ಆ ದೇಶ. ಆದರೆ ಚೀನಾದ ಈ ನಡೆಯು ಅಮೆರಿಕದ ಕಣ್ಣನ್ನು ಕೆಂಪಾಗಿಸಿದೆ. ಅದಕ್ಕಾಗಿ ಗ್ವಾದರ್ ಬಂದರಿಗೆ ಡೊನಾಲ್ಡ್ ಬ್ಲೋಮ್ ಭೇಟಿ ನೀಡಿದ್ದಾರೆ. ಇಷ್ಟೇ ಆಗಿದ್ದರೆ ವಿಶೇಷ ಏನೂ ಇರಲಿಲ್ಲ. ಆದರೆ ಅಲ್ಲಿಂದ ಮುಂದೆ ಸಾಗಿ ಗಿಲ್ಗಿಟ್-ಬಾಲ್ಟಿಸ್ತಾನಕ್ಕೂ ಅಮೆರಿಕ ರಾಯಭಾರಿ ಭೇಟಿ ನೀಡಿದ್ದಾರೆ.
ಈ ಎರಡೂ ಭೇಟಿಗಳನ್ನು ಅವರು ಮುಚ್ಚಿಟ್ಟಿದ್ದಾರೆ. ಅಂದರೆ ಗೌಪ್ಯವಾಗಿ ವಿಸಿಟ್ ಮಾಡಿದ್ದಾರೆ. ಇಲ್ಲಿವರೆಗೂ ಅಮೆರಿಕವಾಗಲಿ, ಪಾಕಿಸ್ತಾನವಾಗಲಿ ಈ ಭೇಟಿಯ ಕುರಿತು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಗಿಲ್ಗಿಟ್-ಬಾಲ್ಟಿಸ್ತಾನದ ರಾಜಕಾರಣಿಗಳನ್ನು ಭೇಟಿ ಮಾಡಿದ್ದಾರೆ. ಗಿಲ್ಗಿಟ್ ಅಸೆಂಬ್ಲಿಯ ಡೆಪ್ಯುಟಿ ಸ್ಪೀಕರ್ ಕಚೇರಿ ನೀಡಿದ ಮಾಹಿತಿಯಿಂದಷ್ಟೇ ಹೊರಜಗತ್ತಿಗೆ ಇದು ತಿಳಿದುಬಂದಿದೆ. ಈ ಬಗ್ಗೆ ನವದೆಹಲಿಯಲ್ಲಿ ತಣ್ಣಗೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿರುವ ಅಮೆರಿಕ ರಾಯಭಾರಿಎರಿಕ್ ಗಾರ್ಸೆಟಿ, ಇದರ ಬಗ್ಗೆ ನಾವು ಪ್ರತಿಕ್ರಿಯಿಸಲು ಏನೂ ಇಲ್ಲ. ಇತ್ತೀಚೆಗೆ ಜಿ20 ಶೃಂಗದ ಸಮಯದಲ್ಲಿ ನಮ್ಮ ಜತೆಗೆ ಜಮ್ಮು ಕಾಶ್ಮೀರ ಭೇಟಿಗೆ ಅವರು ಆಗಮಿಸಿದ್ದರು. ಜಮ್ಮು ಕಾಶ್ಮೀರ ವಿಚಾರವು ಪಾಕಿಸ್ತಾನ ಹಾಗೂ ಭಾರತ ಬಗೆಹರಿಸಿಕೊಳ್ಳಬೇಕಾದ ವಿಚಾರ. ಇದರಲ್ಲಿ ಅಮೆರಿಕ ಸೇರಿ ಯಾವುದೇ ತೃತೀಯ ಶಕ್ತಿ ಏನೂ ಮಾಡಲು ಸಾಧ್ಯವಿಲ್ಲ ಎಂದು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ದೇಶದ ರಾಯಭಾರಿಗಳು ಭಿನ್ನ ದೇಶಗಳಲ್ಲಿ ಭಿನ್ನ ನಿಲುವನ್ನು ತಳೆಯುತ್ತಾರೆ ಎಂದರೆ ಅದು ಅಮೆರಿಕದಿಂದ ಮಾತ್ರ ಸಾಧ್ಯ. ಹಾಗಾದರೆ ಈ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಅಮೆರಿಕ ರಾಯಭಾರಿ ಭೇಟಿ ನೀಡಿದ್ದೇಕೆ? ಅದರ ಮಹತ್ವವೇನು?
ಹಿಮಾಲಯದ ಹೃದಯಭಾಗದಲ್ಲಿರುವ ಭೂಭಾಗವೇ ಗಿಲ್ಗಿಟ್-ಬಾಲ್ಟಿಸ್ತಾನ್. ಇದು ಭೌಗೋಳಿಕವಾಗಿ ಹಾಗೂ ರಾಜಕೀಯವಾಗಿಯೂ ಯಾವುದೇ ದೇಶಕ್ಕೆ ಅತ್ಯಗತ್ಯವಾಗಿ ಹೇಳಿ ಮಾಡಿಸಿದ ಜಾಗ. ಕಾಶ್ಮೀರವು ಭಾರತದ ಮುಕುಟ ಎನ್ನಲಾಗುತ್ತದೆ. ಹಾಗೆಯೇ “ಕಾಶ್ಮೀರ ಮುಕಟದ ಮಣಿ” ಎಂದು ಈ ಸ್ಥಳಕ್ಕೆ ಹೇಳಲಾಗುತ್ತದೆ. ರಾಜಕೀಯವಾಗಿ ಈ ಪ್ರದೇಶ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿದೆಯಾದರೂ (ಪಿಒಜೆಕೆ) ಭೌಗೋಳಿಕವಾಗಿ ಭಾರತದೊಂದಿಗೆ ಬೆಸೆದುಕೊಂಡಿದೆ. ಗಿಲ್ಗಿಟ್-ಬಾಲ್ಟಿಸ್ತಾನ ಎಂದ ಕೂಡಲೆ ಪರ್ವತಾರೋಹಿಗಳಲ್ಲಿ ರೋಮಾಂಚನ ಮೂಡಿಸುತ್ತದೆ ಹಾಗೂ ಧ್ಯಾನ ಮಾಡ ಬಯಸುವವರಲ್ಲಿ ಆಸಕ್ತಿ ಹುಟ್ಟಿಸುತ್ತದೆ. ಆದರೆ ಅದೆಲ್ಲವನ್ನೂ ಮೀರಿ ಗಿಲ್ಗಿಟ್-ಬಾಲ್ಟಿಸ್ತಾನ ಮಹತ್ವದ ಪ್ರದೇಶ.
ಈ ಪ್ರದೇಶವು ವಿಶ್ವದ ಅತಿ ಎತ್ತರದ ಶಿಖರಗಳ ನಡುವೆ ಇದೆ. ಪ್ರಾಚೀನ ಭಾರತದಲ್ಲಿ ಪಶ್ಚಿಮದ ದೇಶಗಳೊಡನೆ ವ್ಯಾಪಾರ, ವ್ಯವಹಾರಕ್ಕೆ ಬಳಕೆ ಮಾಡುತ್ತಿದ್ದ ಸಿಲ್ಕ್ ರೋಡಿನ ಭಾಗವೂ ಆಗಿರುವುದರಿಂದ ವ್ಯಾಪಾರಿ ಕೇಂದ್ರವೂ ಹೌದು. ಈ ಪ್ರದೇಶವನ್ನು ಹಾದು ಅನೇಕ ಜನರು, ಸಂಸ್ಕೃತಿಗಳು, ಮತಗಳು ಭಾರತ ಹಾಗೂ ಪೂರ್ವದ ಕಡೆಗೆ ಆಗಮಿಸಿವೆ.
1947ರಲ್ಲಿ ಭಾರತ ವಿಭಜನೆಯಾದ ಸಂದರ್ಭದಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನೂ ಭಾರತಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಆದರೆ ನಂತರ ಪಾಕಿಸ್ತಾನದ ದುಷ್ಟ ಬುದ್ಧಿ ಹಾಗೂ ಭಾರತದ ಕಡೆಯಿಂದ ಇಟ್ಟ ತಪ್ಪು ಹೆಜ್ಜೆಗಳಿಂದಾಗಿ ಪಾಕಿಸ್ತಾನದ ಆಕ್ರಮಿತ ಪ್ರದೇಶವಾಗಿ ಮಾರ್ಪಾಡಾಗಿದೆ.
ಭೌಗೋಳಿಕ ತಂತ್ರಗಾರಿಕೆಯ ವಿಚಾರವಾಗಿ ನೋಡಿದರೆ ಭಾರತದ ಸುರಕ್ಷತೆ ದೃಷ್ಟಿಯಿಂದಲೂ ಗಿಲ್ಗಿಟ್-ಬಾಲ್ಟಿಸ್ತಾನ್ ಬಹುಮುಖ್ಯವಾದದ್ದು. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಚೀನಾ, ಮತ್ತೊಂದು ಕಡೆ ಭಾರತವನ್ನು ಬೆಸೆಯುತ್ತದೆ. ಪಶ್ಚಿಮದ ಕಡೆಯಿಂದ ಭೂ ಮಾರ್ಗದಲ್ಲಿ ಉಂಟಾಗುವ ಯಾವುದೇ ದಾಳಿಯನ್ನು ತಡೆಯಲು ಈ ಪ್ರದೇಶ ನೈಸರ್ಗಿಕ ಬೇಲಿಯಂತೆ ಕೆಲಸ ಮಾಡುತ್ತದೆ. ಚೀನಾ ಹಾಗೂ ಪಾಕಿಸ್ತಾನ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪೆಕ್) ಈ ಪ್ರದೇಶದ ಮೇಲೆಯೇ ಹಾದುಹೋಗುತ್ತದೆ. ಈ ಯೋಜನೆಗೆ ಭಾರತ ಈಗಾಗಲೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ನೆಲವನ್ನು ಅತಿಕ್ರಮಣ ಮಾಡಿಕೊಂಡಿರುವ ಪಾಕಿಸ್ತಾನ, ಆ ನೆಲವನ್ನು ಬಳಸಲು ಚೀನಾಕ್ಕೆ ಅನುಮತಿ ನೀಡಿದೆ. ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದ ಎಂಬ ಗಾದೆ ಮಾತಿನಂತೆ ಇದಾಗಿದೆ. ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶದಲ್ಲಿ ಸಿಂಧು ಸೇರಿ ಅನೇಕ ಜೀವನದಿಗಳು ಹರಿಯುತ್ತವೆ. ಈ ಪ್ರದೇಶದಲ್ಲಿ ಯಾರು ನಿಯಂತ್ರಣ ಹೊಂದಿದ್ದಾರೆ ಎನ್ನುವುದು ನದಿಪಾತ್ರದ ಜನಜೀವನ, ನಗರಗಳು ಹಾಗೂ ಕೈಗಾರಿಕೆಗಳನ್ನು ನೇರವಾಗಿ ಪ್ರಭಾವಿಸುತ್ತದೆ.
ಇದೆಲ್ಲವೂ ಶುದ್ಧ ವ್ಯಾಪಾರಿ ಹಾಗೂ ಸುರಕ್ಷತೆಯ ದೃಷ್ಟಿಕೋನವಾದವು. ಆದರೆ ಆ ಪ್ರದೇಶದಲ್ಲೂ ಜನರು ವಾಸಿಸುತ್ತಾರಲ್ಲ? ಸುಮಾರು 12-15 ಲಕ್ಷ ಜನಸಂಖ್ಯೆ ವಾಸಿಸುವ ಪ್ರದೇಶದಲ್ಲಿ ಒಂದು ಸರಕಾರದವಿದೆ. ಅಲ್ಲಿನ ಜನರಲ್ಲಿರುವ ವಿಚಾರ ಯಾವುದು? ರಾಕೆಟ್ ಹಾರಿಸುವುದು, ಸಂಶೋಧನೆ ಮಾಡುವುದು, ಹೂಡಿಕೆ ತರುವುದಲ್ಲ. ರಸ್ತೆ, ಕುಡಿಯುವ ನೀರು, ಇವುಗಳೇ ಅಲ್ಲಿನ ಜನರ ಅತಿ ದೊಡ್ಡ ಬೇಡಿಕೆಗಳು. ಒಂದು ಕಡೆ ಪಾಕಿಸ್ತಾನ ಎಂಬ ದೇಶವೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಪಾಕ್ ಪಾಸ್ಪೋರ್ಟ್ನ ಗೌರವ ಪಾತಾಳಕ್ಕೆ ಕುಸಿದಿದೆ. ಪಾಕಿಸ್ತಾನದ ಪಾಸ್ಪೋರ್ಟನ್ನು ಅಲ್ಲಿನ ಪ್ರಜೆಯೊಬ್ಬನೇ ಹರಿದು ಹಾಕಿದ ವಿಡಿಯೋ ಇತ್ತೀಚೆಗೆ ಹರಿದಾಡಿತ್ತು. ಒಂದೆಡೆ ಭಾರತ ಚಂದ್ರನ ಮೇಲೆ ಕಾಲಿಟ್ಟರೆ, ತಮ್ಮ ದೇಶದಲ್ಲಿ ಅಂತಹ ಕನಸು ಕಾಣುವುದೂ ಎಷ್ಟು ದೂರದ ವಿಚಾರ ಎಂದು ಪಾಕಿಸ್ತಾನದ ಪ್ರಜೆಗಳೇ ಹೇಳಿಕೊಳ್ಳುತ್ತಿದ್ದಾರೆ. ಚಂದ್ರನ ಮೇಲೆಯೂ ವಿದ್ಯುತ್ ಇಲ್ಲ, ಪಾಕಿಸ್ತಾನದಲ್ಲೂ ವಿದ್ಯುತ್ ಇಲ್ಲ. ಚಂದ್ರನ ಮೇಲೆಯೂ ರಸ್ತೆ ಇಲ್ಲ, ಪಾಕಿಸ್ತಾನದಲ್ಲೂ ರಸ್ತೆ ಇಲ್ಲ. ಚಂದ್ರನ ಮೇಲೆಯೂ ಕುಡಿಯಲು ನೀರಿಲ್ಲ, ಪಾಕಿಸ್ತಾನದಲ್ಲೂ ನೀರಿಲ್ಲ. ಹಾಗಾಗಿ ಪಾಕಿಸ್ತಾನೀಯರು ಈಗಾಗಲೆ ಚಂದ್ರನ ಮೇಲೆಯೇ ವಾಸಿಸುತ್ತಿದ್ದೇವೆ ಎಂದು ತಮ್ಮದೇ ದೇಶದ ಪರಿಸ್ಥಿತಿಯನ್ನು, ಅಲ್ಲಿನ ರಾಜಕಾರಣಿಗಳನ್ನು ಆಡಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಸ್ಥಿತಿಯೇ ಹೀಗಿರುವಾಗ ಗಿಲ್ಗಿಟ್-ಬಾಲ್ಟಿಸ್ತಾನ ಎಂಬ ತ್ರಿಶಂಕು ಸ್ವರ್ಗದ ಕಥೆ ಏನಾಗಿರಬೇಡ? ಅಲ್ಲಿನ ಜನರಿಗೂ ಜೀವಿಸುವ, ಕನಸು ಕಾಣುವ ಹಕ್ಕಿರುತ್ತದೆಯಲ್ಲವೇ?
ಗಿಲ್ಗಿಟ್ ಬಾಲ್ಟಿಸ್ತಾನ ಎನ್ನುವುದು ಭಾರತಕ್ಕೆ ಕೇವಲ ವ್ಯಾಪಾರದ, ಸುರಕ್ಷತೆಯ, ಮಾನವೀಯತೆಯ ವಿಚಾರವಲ್ಲ. ಅದು ನಮ್ಮ ಸಂಸ್ಕೃತಿಯ ಬೇರುಗಳನ್ನು ಬೆಸೆಯುವ ಸೂತ್ರ. ನಮ್ಮ ಮುಕುಟದ ಮಣಿಯನ್ನು ಕಡೆಗಣಿಸುವುದು ಅಸಾಧ್ಯ. ತಾನು ಜಮ್ಮು ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎನ್ನುವ ಅಮೆರಿಕ, ಗಿಲ್ಗಿಟ್-ಬಾಲ್ಟಿಸ್ತಾನ್ ವಿಚಾರದಲ್ಲಿ ಮೂಗು ತೂರಿಸುತ್ತಿದೆ. ತನ್ನ ಮಿತ್ರರಾಷ್ಟ್ರಗಳನ್ನು ನಿಯಂತ್ರಣದಲ್ಲಿಡಲು, ಮಿತ್ರ ರಾಷ್ಟ್ರದ ಶತ್ರುವನ್ನು ಛೂ ಬಿಡುವುದು ಅಮೆರಿಕದ ತಂತ್ರಗಾರಿಕೆಯ ಭಾಗ. ಅದನ್ನೇ ಈಗಲೂ ಮಾಡುತ್ತಿದೆ. ಒಂದೆಡೆ ಚೀನಾವನ್ನು ನಿಯಂತ್ರಿಸಬೇಕೆಂದರೆ ಭಾರತದ ಅವಶ್ಯಕತೆಯಿದೆಯೆಂದು ಭಾರತದ ಜತೆಗೆ ಚೆನ್ನಾಗಿರುವುದು. ಭಾರತವನ್ನು ನಿಯಂತ್ರಿಸಲು ಇತ್ತ ಪಾಕಿಸ್ತಾನವನ್ನು ಬಳಕೆ ಮಾಡಿಕೊಳ್ಳುವುದು. ಕೊನೆಗೆ ಚೀನಾ ಜತೆಗೂ ವ್ಯಾಪಾರ ಸಂಬಂಧವನ್ನು ಇರಿಸಿಕೊಂಡು ಹಣ ಮಾಡುವುದು.
ಅಮೆರಿಕದ ಈ ಆಟವನ್ನು ಹೆಚ್ಚು ದಿನ ನಡೆಯಲು ಬಿಡುವುದು ತಪ್ಪು. ಭಾರತವು ಈ ಹಿಂದಿನಂತಿಲ್ಲ ಎನ್ನುವುದು ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ತಿಳಿದುಬಂದಿದೆ. ಭಾರತ ತನ್ನ ಸಾಫ್ಟ್ ಪವರ್ ಬಳಸಿಕೊಂಡು ಇಡೀ ವಿಶ್ವವನ್ನು ಬೆಸೆಯಬಲ್ಲದು ಎನ್ನುವುದು ತಿಳಿದಿದೆ. ಆದರೆ ಅಮೆರಿಕವು ತನ್ನ ಆಟಗಳನ್ನು ಆಡದೇ ಬಿಡುವುದಿಲ್ಲ. ಈಗಿನ ನರೇಂದ್ರ ಮೋದಿ ಸರ್ಕಾರದ ಸ್ಪಷ್ಟ ನೀತಿಗಳು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಂತಹ ವೃತ್ತಿಪರರು ಈ ವಿಚಾರಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬಲ್ಲರು ಎಂಬ ನಂಬಿಕೆ ಇಡಬಹುದು. ಅದು ಬಿಟ್ಟು ನಮಗೆ ಬೇರೆ ದಾರಿ ತಾನೆ ಏನಿದೆ?