ಉಪರಾಷ್ಟ್ರೀಯತೆಯನ್ನು ಬೆಂಬಲಿಸುವ ರಾಷ್ಟ್ರೀಯ ಕಾಂಗ್ರೆಸ್‌! : ವಿಸ್ತಾರ ಅಂಕಣ

ಭಾರತದಲ್ಲಿ ವಿಶಾಲ ರಾಷ್ಟ್ರಕ್ಕೆ ಹೊಂದುವಂತಹ ವಿಶಿಷ್ಟ ಸಂವಿಧಾನವನ್ನು (Constitution) ನಾವು ಹೊಂದಿದ್ದೇವೆ. ಈ ಸಂವಿಧಾನದ ದೃಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು. ಈ ಹಿನ್ನೆಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ, ಜಾತಿ, ಭಾಷೆ, ಪ್ರಾಂತ್ಯ, ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ (unity in diversity) ಎಂದು ಪರಿಗಣಿಸಲಾಗಿದೆ. ನಮ್ಮ ಸಂವಿಧಾನವು ಪ್ರಾಂತೀಯತೆಯ ಸಂಕುಚಿತ ಮನೋಭಾವನೆಯನ್ನು ತೊಡೆದು ಹಾಕಲು ಏಕಪೌರತ್ವ ವ್ಯವಸ್ಥೆಯನ್ನೂ (Single citizenship) ಜಾರಿಗೆ ತಂದಿದೆ.
ಇದು ರಾಷ್ಟ್ರೀಯ ಏಕತೆಯ ಕುರಿತು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೇಳುವ ಮಾತು. ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸಿದ ಆರಂಭದಲ್ಲಿ ಮುಖ್ಯವಾಗಿ ದೇಶದ ಎಲ್ಲ ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬಿತ್ತುವುದೊಂದೇ ಪರಿಹಾರ ಎಂದು ನಾಯಕರಿಗೆ ಮನವರಿಕೆಯಾಗಿತ್ತು. ಭಾರತವು ಅಲ್ಲಿಯವರೆಗೂ ತಾಂತ್ರಿಕವಾಗಿ ಒಂದು ರಾಷ್ಟ್ರವಾಗಿರಲಿಲ್ಲ. ಆದರೆ, ರಾಷ್ಟ್ರೀಯತೆಯ ಅರಿವು ಇತ್ತು, ಅದು ಭಾವನಾತ್ಮಕವಾಗಿ ಭಾರತವನ್ನು ಜೋಡಿಸಿತ್ತು. ಹಾಗೆ ನೋಡಿದರೆ, ಭಾವನಾತ್ಮಕತೆಯನ್ನು ಒಳಗೊಂಡ, ಅದೇ ಕಾಲಕ್ಕೆ- ಅದನ್ನೂ ಮೀರಿದ ಸಶಕ್ತವಾದ ಸಾಂಸ್ಕೃತಿಕ ರಾಷ್ಟ್ರೀಯತೆ (Cultural nationalism) ಭಾರತದಲ್ಲಿ ಅನಾದಿ ಕಾಲದಿಂದಲೂ ಇದೆ. ಆದರೆ ಹೊಸ ವ್ಯವಸ್ಥೆಯಲ್ಲಿ ಅಂದರೆ ರಾಜಕೀಯ ಪರಿಪ್ರೇಕ್ಷೆಯಲ್ಲೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಬೇಕಿತ್ತು. ನೆರೆಯ ಪಾಕಿಸ್ತಾನವು ಮತದ ಆಧಾರದಲ್ಲಿ ಪ್ರತ್ಯೇಕವಾಯಿತು, ಅದೇ ಆಧಾರದಲ್ಲಿ ಭಾರತದ ವಿರುದ್ಧ ದ್ವೇಷ ಸಾಧಿಸುತ್ತ ಸಾಗಿತು. ಭಾರತದಲ್ಲೂ ಇದೇ ರೀತಿ ಆಗಬಾರದು ಎನ್ನುವ ಕಾರಣಕ್ಕೆ, ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪನಗೊಳಿಸುವ ಸಲುವಾಗಿ ಭಾವನಾತ್ಮಕ ನೆಲೆಯ ರಚನಾತ್ಮಕ ಪ್ರಯತ್ನಗಳನ್ನು ಸಮಾಜ-ಸರಕಾರ ನಡೆಸುತ್ತಲೇ ಇದ್ದವು ಮತ್ತು ಈಗಲೂ ಆ ಕಾರ್ಯ ನಿರಂತರವಾಗಿ ಮುಂದುವರಿದಿದೆ.
ಸ್ವಾತಂತ್ರ್ಯಪೂರ್ವದ ಸಾರ್ವಜನಿಕ ಗಣೇಶೋತ್ಸವದಿಂದ ಹಿಡಿದು ತೀರಾ ಇತ್ತೀಚೆಗೆ ವಾರಣಾಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮಂ ಎಂಬ ಸಾಂಸ್ಕೃತಿಕ ಉತ್ಸವದವರೆಗೂ ಅದನ್ನು ಕಾಣಬಹುದು. 80ರ ದಶಕದಲ್ಲಿ ನಾವುಗಳು ಶಾಲೆ-ಕಾಲೇಜಿಗೆ ತೆರಳುತ್ತಿದ್ದಾಗ ʼಮಿಲೇ ಸುರ್‌ ಮೇರಾ ತುಮ್ಹಾರಾʼ ಎಂಬ ಹಾಡು ದೂರದರ್ಶನದಲ್ಲಿ ಆಗಾಗ್ಗೆ ಪ್ರಸಾರವಾಗುತ್ತಲೇ ಇತ್ತು. ನಾವೆಲ್ಲರೂ ಅನೇಕ ವಿಧಗಳಲ್ಲಿ ಭಿನ್ನವಾಗಿದ್ದರೂ ನಮ್ಮ ಸ್ವರ ಒಂದೇ, ನಮ್ಮ ಪ್ರತ್ಯೇಕ ಸ್ವರಗಳು ಸೇರಿ ಒಂದೇ ಸ್ವರವಾಗುತ್ತೇವೆ ಎನ್ನುವುದು ಆ ಹಾಡಿನ ಭಾವ. ಅದಕ್ಕಾಗಿ ವಿವಿಧ ಭಾಷೆ, ಸಂಸ್ಕೃತಿಗಳನ್ನು ಹಾಡಿನಲ್ಲಿ ಪರಿಚಯಿಸಲಾಗಿತ್ತು. ಈ ಹಾಡನ್ನು ಕೇಳಿದರೆ ಈಗಲೂ ಮೈನವಿರೇಳುತ್ತದೆ. ಏಕ್ ಚುಡಿಯಾ, ಅನೇಕ್ ಚುಡಿಯಾ ಎಂಬ ನರ್ಸರಿ ರೈಂನಲ್ಲೂ ಇದ್ದದ್ದು ಈ ಭಾವನೆಯೇ.
ಆದರೆ ಇಂದು ಭಾರತದಲ್ಲಿ ಏನಾಗುತ್ತಿದೆ? ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಎಲ್ಲ ರಾಜ್ಯಗಳಿಗೂ ರಾಜ್ಯಪಾಲರನ್ನು ನೇಮಕ ಮಾಡಲಾಗುತ್ತದೆ. ರಾಜ್ಯಪಾಲರು ಎಂದರೆ ಅವರು ರಾಷ್ಟ್ರಪತಿಯವರ ಪ್ರತಿನಿಧಿ. ರಾಜ್ಯಗಳಲ್ಲಿ ಪ್ರತ್ಯೇಕತೆಯ ಭಾವನೆ ಮೂಡಬಾರದು, ಅವುಗಳು ದೇಶದೊಂದಿಗೆ ಬೆಸೆದುಕೊಂಡಿರುವಂತೆ ಸದಾ ಕಾಯ್ದುಕೊಳ್ಳುವುದೂ ರಾಜ್ಯಪಾಲರ ಕರ್ತವ್ಯಗಳಲ್ಲೊಂದು. ರಾಜ್ಯಗಳಲ್ಲಿ ನಡೆಯುವ ಆತಂಕಕಾರಿ, ವಿಭಜನಕಾರಿ ಚಟುವಟಿಕೆಗಳನ್ನು ಗಮನಿಸಿ ಕ್ರಮ ಕೈಗೊಳ್ಳುವ, ರಾಷ್ಟ್ರಪತಿಗೆ ವರದಿ ಮಾಡುವುದೂ ರಾಜ್ಯಪಾಲರ ಕಾರ್ಯ. ರಾಜ್ಯ ಸರ್ಕಾರವು ಯಾವುದೇ ಕಾಯ್ದೆಯನ್ನು, ಆದೇಶಗಳನ್ನು ರಾಜ್ಯಪಾಲರ ಹೆಸರಿನಲ್ಲೇ ಹೊರಡಿಸುತ್ತದೆ. ಜನರಿಗೆ ಒಳಿತಲ್ಲದ ಕಾಯ್ದೆ, ಆದೇಶಗಳು ಹೊರಬರದಂತೆ ತಡೆಯವ ಶಕ್ತಿಯೂ ಒಂದು ಮಟ್ಟಿಗೆ ರಾಜ್ಯಪಾಲರ ಬಳಿ ಇದೆ. ಭಾರತದ ಕನಿಷ್ಠ 6-7 ರಾಜ್ಯಗಳಲ್ಲಿ ಇಂದು ರಾಜ್ಯಪಾಲ ವರ್ಸಸ್‌ ರಾಜ್ಯ ಸರ್ಕಾರ ಎಂಬ ಸಮರ ಏರ್ಪಟ್ಟಿದೆ. ಕೇರಳ ರಾಜ್ಯಪಾಲರ ವಿಚಾರವಂತೂ ಸುಪ್ರೀಂ ಕೋರ್ಟ್‌ (Supreme court) ಅಂಗಳವನ್ನೂ ತಲುಪಿದೆ. ವಿಧಾನಮಂಡಲವು ಅಂಗೀಕರಿಸಿ ಕಳಿಸಿಕೊಟ್ಟಿರುವ 8 ಮಸೂದೆಗಳಿಗೆ ಅಂಗೀಕಾರ ನೀಡದೆ ಇರುವುದಕ್ಕೆ ಸುಪ್ರೀಂ ಕೋರ್ಟ್‌ ಸಹ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ರಾಜ್ಯ ಸರ್ಕಾರದ ನಡೆ ಸರಿಯಾಗಿದೆಯೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.
ತಾನೂ ಒಕ್ಕೂಟ ವ್ಯವಸ್ಥೆಯ ಭಾಗ ಎನ್ನುವುದನ್ನು ಕೇರಳ ಸೇರಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಮರೆತಿದ್ದಾರೆ. ವಿನಾಕಾರಣ ಕೇಂದ್ರ ಸರ್ಕಾರದ ಸಭೆಗಳಿಗೆ ಗೈರಾಗುವುದು, ವಿವಿಧ ಆನುದಾನಗಳ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂಬುದನ್ನು ರಾಜಕೀಯ ಜಗಳವನ್ನಾಗಿ ಮಾರ್ಪಾಡಿಸುವುದು ನಡೆದೇ ಇದೆ. ಕೇಂದ್ರದಿಂದ ಸಮಪಾಲು ಕೇಳುವುದು ರಾಜ್ಯಗಳ ಹಕ್ಕು. ಅದನ್ನು ಕೇಳಲೇಬೇಕು ಹಾಗೂ ಕೇಂದ್ರ ಕೊಡಲೇಬೇಕು. ಆದರೆ, ಕೇಂದ್ರ ಸರಕಾರ ಪಾಲು ಕೊಡದಂತೆ ಕೆಲ ರಾಜ್ಯಗಳು ರಾಜಕೀಯದ ವಿಷಮ ವಾತಾವರಣ ನಿರ್ಮಿಸಿ, ಕೇಂದ್ರ ಕೊಟ್ಟಿಲ್ಲ ಎಂದು ರಾಜಕೀಯ ಕಾರಣಕ್ಕಾಗಿ ಕೂಗಾಡುವುದು ಸರಿಯಲ್ಲ. ಒಮ್ಮೊಮ್ಮೆ ಹಿರಿಯಣ್ಣನಾದ ಕೇಂದ್ರ ಸರಕಾರವೂ ರಾಜ್ಯಗಳ ವಿರುದ್ಧ ಇಂಥಾ ಅಸ್ತ್ರ ಪ್ರಯೋಗಿಸುತ್ತಲೇ ಇರುತ್ತದೆ. ರಾಜ್ಯ ಸರಕಾರವನ್ನು ಕಿತ್ತೊಗೆಯುವ ಕೇಂದ್ರದ ಆಟವನ್ನು ನಾವೆಲ್ಲರೂ ನೋಡಿದ್ದೇವೆ. ಇತ್ತೀಚಿನ ದಶಕಗಳಲ್ಲಿ ಅದು ಕಡಿಮೆಯಾಗಿದೆ.
ಇಂಥವೆಲ್ಲಾ ಹೇಗೆ ನಡೆಯುತ್ತವೆ ? ನಮ್ಮ ಕರ್ನಾಟಕ ಸರಕಾರ ಕೇಂದ್ರದೊಂದಿಗೆ ಇತ್ತೀಚೆಗೆ ನಡೆಸಿದ ವ್ಯವಹಾರವನ್ನೇ ನೋಡೋಣ. ಕಾಂಗ್ರೆಸ್‌ ಪಕ್ಷವು ತಾವು ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೆ ಮಾಸಿಕ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತು. ಆದರೆ ವಿವಿಧ ಕಾರಣದಿಂದ ಅದು ಸಾಧ್ಯವಾಗಿಲ್ಲ. ಇದರ ಸಂಪೂರ್ಣ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಹೊರಿಸಿದರು. ಇದೇ ರೀತಿ ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ನವದೆಹಲಿ… ಹೀಗೆ ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರು ವರ್ಸಸ್‌ ರಾಜ್ಯ ಸರ್ಕಾರ, ಕೇಂದ್ರ ಸರ್ಕರ ವರ್ಸಸ್‌ ರಾಜ್ಯ ಸರ್ಕಾರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲೆಲ್ಲಾ ರಾಜ್ಯಪಾಲರ ತಪ್ಪೇ ಇಲ್ಲ ಎಂದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಶಾಸಕಾಂಗವೇ ಅತ್ಯುಚ್ಛ. ಯಾವುದೇ ಕಾನೂನು ರಚಿಸುವ ಅಧಿಕಾರ ಈ ಅಂಗಕ್ಕೆ ಇದೆ. ಹಾಗಾಗಿ, ರಾಜ್ಯಪಾಲರು ನೇರವಾಗಿ ಶಾಸಕಾಂಗವನ್ನು ಎದುರುಹಾಕಿಕೊಳ್ಳುವುದು ಸರಿಯಲ್ಲ. ಆದರೆ ರಾಜ್ಯ ಸರ್ಕಾರಗಳು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ದಾಳಿ ನಡೆಸಲು ಈ ತಂತ್ರವನ್ನು ಬಳಸುತ್ತಿವೆ. ಇದು ಕೂಡ ಸರಿಯಲ್ಲ.
ಸರ್ದಾರ್‌ ವಲ್ಲಭಭಾಯಿ ಪಟೇಲರನ್ನು ದೇಶ ಇಂದು ಆರಾಧಿಸುವುದು ಅವರು ದೇಶದ ಮೊದಲ ಗೃಹಸಚಿವ, ಉಪಪ್ರಧಾನಿ ಆಗಿದ್ದರು ಎಂಬ ಕಾರಣಕ್ಕಲ್ಲ. 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ರಾಜಕೀಯವಾಗಿ ದೇಶದೊಳಗೆ ಸೇರಿಸಿಕೊಳ್ಳುವಲ್ಲಿ ಗಣನೀಯ ಕಾರ್ಯ ನಡೆಸಿದರು ಎಂಬ ಕಾರಣಕ್ಕೆ. ಗುಜರಾತ್‌ನಲ್ಲಿ ನಿರ್ಮಾಣ ಮಾಡಲಾದ ಸರ್ದಾರರ ಪ್ರತಿಮೆಗೆ ಏಕತೆಯ ಪ್ರತಿಮೆ ಎಂದೇ ಹೆಸರಿಡಲಾಗಿದೆ.
ಒಂದೆಡೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿದ್ದುಕೊಂಡೇ ಒಕ್ಕೂಟ ವ್ಯವಸ್ಥೆಯನ್ನು ಮುರಿಯಲು ಪ್ರಯತ್ನಿಸುತ್ತಿವೆ. ಇನ್ನೊಂದೆಡೆ ಜಾತಿ, ಮತ, ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕಾರ್ಯವೂ ನಡೆದಿದೆ. ಮಾರ್ಚ್‌ನಲ್ಲಿ ಕೇರಳದಲ್ಲಿ ʼಕಟ್ಟಿಂಗ್‌ ಸೌತ್‌ʼ ಎಂಬ ಹೆಸರಿನ ಮಾಧ್ಯಮ ಸಮ್ಮೇಳನವೊಂದು ಜರುಗಿತು. ಕೇರಳ ಸರ್ಕಾರದ ಅಧೀನದ ಕೇರಳ ಮಾಧ್ಯಮ ಅಕಾಡೆಮಿಯು ವಿವಿಧ ಸುದ್ದಿಸಂಸ್ಥೆಗಳೊಂದಿಗೆ ಆಯೋಜಿಸಿದ್ದ ಮಾಧ್ಯಮ ಸಮ್ಮೇಳನ ಅದು. ಈ ಸಮ್ಮೇಳನವನ್ನು ವರ್ಚುವಲ್‌ ಆಗಿ ಉದ್ಘಾಟನೆ ಮಾಡಿದವರು ಕೇರಳ ಸಿಎಂ ಪಿಣರಾಯಿ ವಿಜಯನ್‌. ಅದರಲ್ಲಿ ಅವರು ಮಾತನಾಡಿದ್ದು, ʼಇಂದು ಅನೇಕ ಮಾಧ್ಯಮಗಳು ವಿವಿಧ ಬಂಡವಾಳಶಾಹಿ ದೇಶಗಳೊಂದಿಗೆ ಸೇರಿಕೊಂಡಿವೆ. ದೇಶಗಳ ನಡುವೆ ಯುದ್ಧವನ್ನು ಸೃಷ್ಟಿಸಿ ಶಸ್ತ್ರಾಸ್ತ್ರ ವ್ಯಾಪಾರಕ್ಕೂ ಇವುಗಳು ಸಂಚು ರೂಪಿಸಿವೆ. ಇಂತಹ ವಿಭಜನೆಗಳಿಂದ ದೇಶವು ದೂರವಿರಬೇಕುʼ ಎಂದರು. ಒಂದೆಡೆ ದೇಶದ ಒಗ್ಗೂಡುವಿಕೆ, ಬಹುತ್ವ ಎನ್ನುತ್ತಲೇ ಇನ್ನೊಂದೆಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವುದು ದಿನೇದಿನೆ ಹೆಚ್ಚಾಗುತ್ತಿದೆ. ಕೇರಳ ಸರ್ಕಾರದ ವರಸೆಯನ್ನು ನೋಡಿದರೆ, ಕಮ್ಯುನಿಸ್ಟರು ತಮ್ಮ ನಿಜ ಬಣ್ಣವನ್ನು ಬಯಲು ಮಾಡಲು ಆರಂಭಿಸಿದ್ದಾರೆ ಎಂದೇ ತೋಚುತ್ತದೆ. ಆರೇಳು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರ ಮೊದಲ ಸರಕಾರದ ಅವಧಿಯಲ್ಲಿ ಕರ್ನಾಟಕದಲ್ಲೂ ಒಂದಿಷ್ಟು ಮಂದಿ ದ್ರಾವಿಡ ಸಾಹಿತ್ಯ ಸಮ್ಮೇಳನ ಮಾಡಲು ಪ್ರಯತ್ನಿಸಿದರು. ಆದರೆ, ಕರ್ನಾಟಕದ ಜನತೆ ಇದನ್ನು ಪ್ರತಿರೋಧಿಸಿದ ಪರಿಣಾಮ ಕೈ ಬಿಟ್ಟರು.
1960ರಲ್ಲಿ ಆಸ್ಟ್ರೇಲಿಯಾದ ರಾಜಕೀಯ ಚಿಂತಕ ಡಾ. ಫ್ರೆಡ್ರಿಕ್‌ ಚಾರ್ಲ್ಸ್‌ ಶ್ವಾರ್ಜ್‌ ತಮ್ಮ ʼಯು ಕೆನ್‌ ಟ್ರಸ್ಟ್‌ ದಿ ಕಮ್ಯುನಿಸ್ಟ್‌ʼ ಎಂಬ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾರೆ. ʼಕಮ್ಯುನಿಸ್ಟರು ನಂಬಿಕೆಗೆ ಅತ್ಯಂತ ಅರ್ಹರು. ಕ್ಯಾನ್ಸರ್‌ ಕೀಟಾಣುವು ತನ್ನ ಭೀಕರ ವಿಕಾಸದ ನಿಯಮಕ್ಕೆ ತಕ್ಕಂತೆ ವರ್ತಿಸುತ್ತದೆ ಎಂಬ ಮಾತಿನಲ್ಲಿ ವಿಶ್ವಾಸ ಇಡಬಹುದು. ಬ್ಯಾಂಕ್‌ ದರೋಡೆಕೋರನೊಬ್ಬ ಹಣ ದೋಚಿಕೊಂಡು ಪರಾರಿಯಾಗಲು ಯತ್ನಿಸುತ್ತಾನೆ ಎನ್ನುವುದರಲ್ಲಿ ವಿಶ್ವಾಸ ಇಡಬಹುದು. ಹಾಗೆಯೇ ಕಮ್ಯುನಿಸ್ಟರು ತಮ್ಮ ನಡೆಯನ್ನು ಎಂದಿಗೂ ಮುಚ್ಚಿಡುವುದಿಲ್ಲ ಎಂಬ ಮಾತಿನ ಮೇಲೆ ವಿಶ್ವಾಸ ಇಡಬಹುದುʼ ಎಂದಿದ್ದರು. ಈ ಪುಸ್ತಕ ರಚನೆಯಾದ ಒಂದೇ ದಶಕದಲ್ಲಿ, “ರಾಜ್ಯಾಂಗವನ್ನು ಒಳಗಿನಿಂದಲೇ ಭಂಗಗೊಳಿಸಲೆಂದೇ ನಾವು ಸರ್ಕಾರಗಳಲ್ಲಿ ಪ್ರವೇಶಿಸಿದ್ದೇವೆ ಎಂದು ಕೇರಳದ ಅಂದಿನ ಮುಖ್ಯಮಂತ್ರಿ ನಂಬೂದ್ರಿಪಾದ್‌ ಹಾಗೂ ಲೋಕಸಭೆ ಸದಸ್ಯ ಎ.ಕೆ. ಗೋಪಾಲನ್‌ ಜಂಟಿ ಹೇಳಿಕೆ ನೀಡಿದರು. ಚೀನಾ ಯುದ್ಧದ ಸಮಯದಲ್ಲಿ ಚೀನಾಕ್ಕೆ ಬೆಂಬಲಿಸುತ್ತ, ಭಾರತವನ್ನೇ ತೆಗಳುತ್ತ ಕುಳಿತವರು ಕಮ್ಯುನಿಸ್ಟರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ.
ಆದರೆ ಭಾರತೀಯ ʼರಾಷ್ಟ್ರೀಯʼ ಕಾಂಗ್ರೆಸ್‌ ಪಕ್ಷಕ್ಕೆ ಏನಾಗಿದೆ? ತನ್ನ ಪಕ್ಷದ ಹೆಸರಿನಲ್ಲೇ ರಾಷ್ಟ್ರೀಯ ಎನ್ನುವುದನ್ನು ಒಳಗೊಂಡಿದ್ದರೂ ಭಾಷೆ, ಪ್ರಾಂತಗಳ ಹೆಸರಿನಲ್ಲಿ ಉಪರಾಷ್ಟ್ರೀಯವಾದವನ್ನು (Sub nationalism) ಬೆಂಬಲಿಸುತ್ತಿರುವುದು ಆತಂಕದ ವಿಚಾರ. ಈ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸಲು ರಾಜ್ಯಗಳಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸುವ ತಂತ್ರವಾಗಿ ಕಾಂಗ್ರೆಸ್‌ ಹೀಗೆ ಮಾಡುತ್ತಿರಬಹುದು. ನೇರವಾಗಿ ತಾನೇ ಉಪರಾಷ್ಟ್ರೀಯವಾದವನ್ನು ಮಾತನಾಡದಿದ್ದರೂ, ಅಂತಹ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದೂ ತಪ್ಪೆ. ಲೋಕಸಭೆ ಚುನಾವಣೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ಒಮ್ಮೆ ದೇಶವನ್ನು ಒಡೆಯುವ ಶಕ್ತಿಗಳಿಗೆ ಅವಕಾಶ ನೀಡಿದರೆ ಭವಿಷ್ಯದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ಕುರಿತು ಕಾಂಗ್ರೆಸ್‌ ಪಕ್ಷವು ಗಂಭೀರವಾಗಿ ಚಿಂತನೆ ನಡೆಸುವುದು ಮುಖ್ಯ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top