WHO ಅಮೆರಿಕ-ಚೀನಾ ವಾರ್‌

– ಚೀನಾಗೆ ಮಣಿದರೆ ಅನುದಾನ ಬಂದ್‌ ಎಚ್ಚರಿಕೆ
– 30 ದಿನಗಳ ಗಡುವು ನೀಡಿದ ಟ್ರಂಪ್‌.

ವಾಷಿಂಗ್ಟನ್‌: ಕೊರೊನಾ ಸಂಕಷ್ಟದ ಆರಂಭದಿಂದಲೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿರುದ್ಧ ಹರಿಹಾಯುತ್ತಿರುವ ಅಮೆರಿಕವು, ಡಬ್ಲ್ಯುಎಚ್‌ಒ ಚೀನಾ ಹಿಡಿತದಿಂದ ಹೊರಬರದಿದ್ದರೆ ತನ್ನ ಪಾಲಿನ ಅನುದಾನ ಶಾಶ್ವತವಾಗಿ ಸ್ಥಗಿತಗೊಳಿಸುವ ಎಚ್ಚರಿಕೆ ರವಾನಿಸಿದೆ. ಅಲ್ಲದೇ ಇದೇ ರೀತಿಯ ವರ್ತನೆ ತೋರಿದರೆ ಸದಸ್ಯತ್ವದಿಂದ ಹೊರಬರುವ ಸುಳಿವು ನೀಡಿದೆ. ಇದರೊಂದಿಗೆ ಅಮೆರಿಕ ಮತ್ತು ಚೀನಾ ನಡುವಿನ ಸಮರ ಇನ್ನಷ್ಟು ತೀವ್ರಗೊಂಡಿದೆ.

ಪದೇಪದೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಡಬ್ಲುಎಚ್‌ಒ ತಪ್ಪು ಹೆಜ್ಜೆ ಇರಿಸುತ್ತಿದೆ. ಇದರಿಂದ ವಿಶ್ವಕ್ಕೆ ಕಂಟಕವಾಗುತ್ತಿದೆ. ಸಂಸ್ಥೆಯು ಚೀನಾ ಪ್ರಭಾವದಲ್ಲಿಲ್ಲ ಎಂದು ನೀವು ಮುಂದಿನ 30 ದಿನಗಳಲ್ಲಿ ನಿರೂಪಿಸಬೇಕು. ಇಲ್ಲದಿದ್ದರೆ ಅಮೆರಿಕ ನೀಡುತ್ತಿರುವ ಅನುದಾನವನ್ನು ಕಾಯಂ ಆಗಿ ರದ್ದುಗೊಳಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಲ್ಕು ಪುಟಗಳ ಪತ್ರದಲ್ಲಿ ಡಬ್ಲುಎಚ್‌ಒ ಪ್ರಧಾನ ನಿರ್ದೇಶಕ ಡಾ.ಟೆಡ್ರೊಸ್‌ ಅಧಾನೊಮ್‌ ಅವರಿಗೆ ಸವಾಲು ಹಾಕಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಸಮಾವೇಶದಲ್ಲಿ ಕೊರೊನಾ ವೈರಸ್‌ ಮೂಲದ ತನಿಖೆಯಾಗಬೇಕು ಎಂದು 123 ರಾಷ್ಟ್ರಗಳ ಪ್ರಸ್ತಾವನೆಗೆ ಚೀನಾ ವಿರೋಧಿಸಿದ ಬೆನ್ನಲ್ಲೇ ಟ್ರಂಪ್‌ ಅವರಿಂದ ಈ ಎಚ್ಚರಿಕೆ ಹೊರಬಿದ್ದಿದೆ. ಪತ್ರವನ್ನು ಅವರು ಟ್ವೀಟ್‌ ಮಾಡಿದ್ದು, ಟ್ವೀಟಿಗರಿಂದ ಭಾರಿ ಪರ-ವಿರೋಧ ಚರ್ಚೆ ಆರಂಭವಾಗಿದೆ. ಇತ್ತ ಚೀನಾ ವಿದೇಶಾಂಗ ಸಚಿವಾಲಯ, ಕೊರೊನಾ ನಿಯಂತ್ರಣದಲ್ಲಿ ತಮ್ಮ ಆಡಳಿತದ ವೈಫಲ್ಯ ಮರೆಮಾಚಲು ಟ್ರಂಪ್‌ ನಮ್ಮ ಮೇಲೆ ಬೊಟ್ಟು ಮಾಡುತ್ತಿದ್ದಾರೆಂದು ಆರೋಪಿಸಿದೆ.

ಚೀನಾ ಸಂಚನ್ನು ಖಂಡಿಸಲಿಲ್ಲ ಏಕೆ?
”ಜ.28 ರಂದು ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಜತೆಗಿನ ಭೇಟಿ ಬಳಿಕ ಚೀನಾದ ಪಾರದರ್ಶಕತೆಯನ್ನು ಹಾಡಿಹೊಗಳಿದಿರಿ. ಜ.30ರಂದೇ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ನೀವು ಆಗಲೂ ಕೂಡ ಚೀನಾದ ಅಚಾರ್ತುಯವನ್ನು ಖಂಡಿಸಲಿಲ್ಲ. ಕೊರೊನಾವನ್ನು ಸರ್ವವ್ಯಾಪಿ ವ್ಯಾಧಿ ಎಂದು ಡಬ್ಲುಎಚ್‌ಒ ಘೋಷಿಸುವ ಮುನ್ನವೇ 4 ಸಾವಿರ ಜನರು ಬಲಿಯಾಗಿದ್ದರು. ಅಲ್ಲದೆ 114 ದೇಶಗಳಿಗೆ ಅದು ಹರಡಿತ್ತು. ನಿಮ್ಮದು ಇಂಥ ನಿರ್ಲಕ್ಷತ್ರ್ಯ,” ಎಂದು ಟ್ರಂಪ್‌ ಅವರು ಟೆಡ್ರೋಸ್‌ ವಿರುದ್ಧ ಆರೋಪ ಮಾಡಿದ್ದಾರೆ.

ಸಮಿತಿಯಲ್ಲಿ ಭಾರತಕ್ಕೆ ಸ್ಥಾನ
ವಿಶ್ವ ಆರೋಗ್ಯ ಸಂಸ್ಥೆ ಸಮಾವೇಶದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿ ಭಾರತ ಸೇರಿ 10 ರಾಷ್ಟ್ರಗಳಿಗೆ ಸ್ಥಾನ ನೀಡಲಾಗಿದೆ. ಬ್ರಿಟನ್‌, ರಷ್ಯಾ, ಕೊಲಂಬಿಯಾ, ಬೋಟ್ಸವಾನ, ಘಾನಾ, ಗುನಿಯಾ ಬಿಸಾವು, ಮಡಗಾಸ್ಕರ್‌, ಒಮನ್‌, ರಿಪಬ್ಲಿಕ್‌ ಆಫ್‌ ಕೊರಿಯಾ ಸದಸ್ಯತ್ವ ಪಡೆದ ಇತರ ರಾಷ್ಟ್ರಗಳು. ಇದರಿಂದ ಭಾರತ ವರ್ಚಸ್ಸು ವೃದ್ಧಿಯಾಗಿದೆ.

3782 ಕೋಟಿ ರೂ. ರದ್ದು
ಈಗಾಗಲೇ ಡಬ್ಲುಎಚ್‌ಒಗೆ ನೀಡುತ್ತಿದ್ದ ವಾರ್ಷಿಕ 3782 ಕೋಟಿ ರೂ. ಅನುದಾನವನ್ನು ತಾತ್ಕಾಲಿಕವಾಗಿ ಟ್ರಂಪ್‌ ಆಡಳಿತ ಏ.14ರಿಂದ ರದ್ದುಗೊಳಿಸಿದೆ.

ಅಮೆರಿಕದ ಮತ್ತು ಅಮೆರಿಕನ್ನರ ಹಿತಾಸಕ್ತಿಗೆ ವಿರುದ್ಧವಾಗಿರುವ ಒಂದು ಸಂಸ್ಥೆಗೆ ನಮ್ಮ ಪ್ರಜೆಗಳ ತೆರಿಗೆ ಪಾವತಿಯನ್ನು ಅನುದಾನವೆಂದು ನೀಡಲು ನನ್ನಿಂದ ಆಗುವುದಿಲ್ಲ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top