ಕನ್ನಡಕ್ಕೆ ನಿಜವಾದ ಅಪಾಯ ಹಿಂದಿಯಿಂದ ಅಲ್ಲ, ಇಂಗ್ಲಿಷ್‌ನಿಂದ

ಭಾಷೆಯ ಜೊತೆಗೆ ಉದ್ಯೋಗದ ಪ್ರಶ್ನೆ, ರಾಜಕೀಯ ಸೇರಿಕೊಂಡು ಸನ್ನಿವೇಶವನ್ನು ಜಟಿಲಗೊಳಿಸಿದೆ.

ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ. ಅದು ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಜಾಯಮಾನ- ಎಲ್ಲವೂ ಹೌದು. ಹಾಗಾಗಿಯೇ, ಭಾಷೆಗೆ ಎಲ್ಲೋ ಏನೋ ಧಕ್ಕೆಯಾಗುತ್ತಿದೆ, ಅಪಾಯ ಕಾದಿದೆ ಎಂಬ ಆತಂಕ ಎದುರಾದಾಗಲೆಲ್ಲಾ, ಭಾವೋದ್ವೇಗ ಕೆರಳಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಿವೆ. ಅಂತೆಯೇ ಹಿಂದಿ ದಿವಸ್‌ ಆಚರಣೆ ಹಿನ್ನೆಲೆಯಲ್ಲಿ ಹಿಂದಿ ಹಾಗೂ ಹಿಂದಿಯೇತರ ಭಾಷೆಯ ಕುರಿತ ಚರ್ಚೆ, ವಾದ-ವಿವಾದ-ವಾಗ್ವಾದ ಮತ್ತೆ ಮುನ್ನೆಲೆಗೆ ಬಂದಿರುವ ಹೊತ್ತಲ್ಲಿ, ಇದರ ಇತಿಹಾಸ, ವರ್ತಮಾನ, ಭವಿಷ್ಯದ ಕಡೆ ಆಲೋಚಿಸೋಣ.
ಹಾಗೆ ನೋಡಿದರೆ, ಸ್ವತಂತ್ರ ಭಾರತದ ಸಂವಿಧಾನ ರಚನೆ ಸಂದರ್ಭ ಹೆಚ್ಚಿನ ವಿವಾದ, ಬಿಸಿಬಿಸಿ ಚರ್ಚೆ ನಡೆದದ್ದು ಭಾಷೆಯ ವಿಷಯದಲ್ಲಿ. ಹೌದು. ಯಾವ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ನಡೆದಷ್ಟು ಸಂವಾದ ಇನ್ಯಾವ ಅಂಶಕ್ಕೂ ನಡೆದಿಲ್ಲ ಎಂದು ಸ್ವತಃ ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ರಾಗಿದ್ದ ಅಂಬೇಡ್ಕರ್‌ ಅವರೇ ಒಂದೆಡೆ ದಾಖಲಿಸಿದ್ದಾರೆ. ಅಂದರೆ, ಭಾಷೆ ಎಂದಿಗೂ ಮನುಷ್ಯನ ಸಂವೇದನೆಯನ್ನು ಜಾಗೃತಗೊಳಿಸುವ ಸಾಧನವಾಗಿ ಅಂದು, ಇಂದೂ ಮುಂದುವರಿದಿದೆ. ಹೀಗಾಗಿಯೇ ಬಹುತ್ವದ ಭಾರತದಲ್ಲಿ ಭಾಷೆಗಳ ನಡುವೆ ಸಾಮರಸ್ಯ ಇರುವಂತೆಯೇ, ಅನೇಕ ಸಂದರ್ಭಗಳಲ್ಲಿ ಸ್ಪರ್ಧೆ, ತಿಕ್ಕಾಟವೂ ನಡೆದಿದೆ. ನಡೆಯುತ್ತಿದೆ.
ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಂಗೀಕರಿಸಬೇಕು ಎಂಬ ವಿಚಾರ ಕುರಿತು ಕಾಂಗ್ರೆಸ್‌ ಸಭೆಯಲ್ಲಿ ಗಂಭೀರ ವಾಗ್ವಾದವೇ ನಡೆಯಿತು. ವಿಚಾರವನ್ನು ಮತಕ್ಕೆ ಹಾಕಿದಾಗ, ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕು ಎಂಬುದಕ್ಕೆ ಪರವಾಗಿ 77 ಹಾಗೂ ವಿರೋಧವಾಗಿಯೂ 77 ಮತ ಚಲಾವಣೆಯಾಗುತ್ತದೆ. ಆಗ, ಸಭೆಯ ಅಧ್ಯಕ್ಷ ತೆ ವಹಿಸಿದ್ದ ಬಾಬು ರಾಜೇಂದ್ರ ಪ್ರಸಾದರು ಹಿಂದಿಯ ಪರವಾಗಿ ಮತ ಚಲಾಯಿಸುತ್ತಾರೆ. ಅಲ್ಲಿಗೆ, ರಾಷ್ಟ್ರಭಾಷೆಯಾಗಿ ಹಿಂದಿ 77-78 ಮತಗಳಿಂದ ಜಯಿಸುತ್ತದೆ ಎಂದು ಅಂಬೇಡ್ಕರ್‌ ವಿವರಿಸಿದ್ದಾರೆ.
ಆದರೆ ಅಸಲಿಗೆ ಸಂವಿಧಾನ ರಚನೆಯಾದಾಗ ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನ ನೀಡುವುದಿಲ್ಲ. ಹಿಂದಿ ಮತ್ತು ಇಂಗ್ಲಿಷನ್ನು ಸರಕಾರದ ಸಂವಹನದಲ್ಲಿ ಬಳಕೆ ಮಾಡಬೇಕಾದ ಅಧಿಕೃತ ಭಾಷೆಗಳು ಎಂದು ತಿಳಿಸಲಾಗಿದೆ. ನಂತರ 8ನೇ ಪರಿಚ್ಛೇದದಲ್ಲಿ ಕನ್ನಡದ ಜತೆಗೆ 22 ಭಾರತೀಯ ಭಾಷೆಗಳನ್ನು ಹೆಸರಿಸಲಾಗಿದೆ. ಅಲ್ಲಿ ಹಿಂದಿಯೂ ಇದೆ. ಅಂದರೆ ಭಾರತದ ಇತರೆ ಎಲ್ಲ ಭಾಷೆಗಳಂತೆಯೇ ಅದೂ ಒಂದಾಗಿದೆ, ಆದರೆ ಮುಖ್ಯವಾಗಿ ಹೆಚ್ಚಿನ ಜನರು ಮಾತನಾಡುವುದರಿಂದಾಗಿ ತುಸು ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
ಸಂವಿಧಾನದ 351ನೇ ವಿಧಿಯಲ್ಲಿ, ಹಿಂದಿಯನ್ನು ಉತ್ತೇಜಿಸುವ ಕುರಿತು ಕೇಂದ್ರ ಸರಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಹಿಂದಿಯನ್ನು ಪ್ರಸಾರ ಮಾಡಬೇಕು ಎಂದು ಸಂವಿಧಾನದಲ್ಲಿ ಆದೇಶಿಸಿದ್ದರೂ 351ನೇ ವಿಧಿಯಲ್ಲಿರುವ ಪದ ಬಳಕೆಯನ್ನು ಒಮ್ಮೆ ಗಮನಿಸಬೇಕು. ಭಾರತದ ಸಮ್ಮಿಶ್ರ ಸಂಸ್ಕೃತಿಯ ಎಲ್ಲ ಮೂಲತತ್ವಗಳ ಅಭಿವ್ಯಕ್ತಿ ಮಾಧ್ಯಮವಾಗುವಂತೆ ಹಿಂದಿ ಭಾಷೆಯನ್ನು ಅಭಿವೃದ್ಧಿಗೊಳಿಸಬೇಕು. ಮೊದಲನೆಯದಾಗಿ ಹಿಂದೂಸ್ತಾನಿ ಭಾಷೆಯಿಂದ ಅಥವಾ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ (ಕನ್ನಡ ಸೇರಿ 22 ಭಾಷೆಗಳು) ಶೈಲಿ, ಪದಾವಳಿಗಳನ್ನು ಸಮೀಕರಿಸಿಕೊಂಡು ಅಭಿವೃದ್ಧಿಪಡಿಸಬೇಕು. ಹೊಸ ಶಬ್ದಭಂಡಾರದ ಅವಶ್ಯಕತೆ ಇದ್ದರೆ ಮೊದಲಿಗೆ ಸಂಸ್ಕೃತದಿಂದ, ನಂತರ ಇತರೆ ಭಾಷೆಗಳಿಂದ ಶಬ್ದಗಳನ್ನು ತೆಗೆದುಕೊಂಡು ಹಿಂದಿ ಭಾಷೆಯ ಶ್ರೀಮಂತಿಕೆಯನ್ನು ಸುನಿಶ್ಚಿತಗೊಳಿಸಬೇಕು ಎಂಬುದು ಸಂವಿಧಾನದ ಆಶಯ. ಅಂಬೇಡ್ಕರ್‌ ಕೂಡ ಸಂಸ್ಕೃತದ ಶ್ರೀಮಂತಿಕೆಯ ಬಗ್ಗೆ ಅರಿವು ಉಳ್ಳವರಾಗಿದ್ದರು ಎಂಬುದನ್ನು ಗಮನಿಸಬಹುದು.
ಅಂದರೆ ಹಿಂದಿ ಭಾಷೆಯನ್ನು ಇತರೆ ಭಾಷಿಕರ ಮೇಲೆ ಹೇರಬೇಕು ಎಂದಾಗಲಿ, ಕಡ್ಡಾಯ ಮಾಡಬೇಕು ಎಂದಾಗಲಿ ಅಲ್ಲವೇ ಅಲ್ಲ. ಸಂವಿಧಾನಕರ್ತೃಗಳ ಆಶಯ ಅದು ಆಗಿರಲಿಲ್ಲ. ಹಿಂದಿ ಭಾರತದ ಇತರೆ ಎಲ್ಲ ಭಾಷೆಗಳ ಪ್ರತಿನಿಧಿಯಾಗುವಂತೆ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದರು.
ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಮೊದಲಿಗೆ ಹಿಂದೂಸ್ತಾನಿ ಭಾಷೆಯಿಂದ ಪದಗಳನ್ನು ಪಡೆಯಬೇಕು ಎಂಬ ನಿರ್ದೇಶನ. ಹಿಂದಿ ಮತ್ತು ಉರ್ದು ಭಾಷೆಗಳ ಮಿಶ್ರಣದಿಂದ ಉತ್ತರ ಭಾರತ ಹಾಗೂ ಈಗಿನ ಪಾಕಿಸ್ತಾನ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದ್ದ ಹಿಂದೂಸ್ತಾನಿ ಭಾಷೆಯನ್ನು ಅಭಿವೃದ್ಧಿಪಡಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಥೇಚ್ಛವಾಗಿ ಬಳಕೆ ಮಾಡಿದ್ದು ಮತ್ತಾರೂ ಅಲ್ಲ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ. ದಕ್ಷಿಣ ಆಫ್ರಿಕಾದಲ್ಲಿ ಹೋರಾಟಗಳನ್ನು ನಡೆಸಿದ ನಂತರ ಭಾರತಕ್ಕೆ ಗಾಂಧೀಜಿ ಆಗಮಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. 1915ರಲ್ಲಿ ಬಿಹಾರದ ಚಂಪಾರಣ್ಯ ಆಂದೋಲನದಲ್ಲಿ ಭಾಗವಹಿಸಿದಾಗ ಅವರಿಗೆ ಎದುರಾದ ಬಹುದೊಡ್ಡ ಸಮಸ್ಯೆ ಎಂದರೆ ಭಾಷೆ. ಬ್ರಿಟಿಷ್‌ ಶಿಕ್ಷ ಣ ವ್ಯವಸ್ಥೆಯಲ್ಲಿ ಬ್ಯಾರಿಸ್ಟರ್‌ ಪದವಿ ಪಡೆದಿದ್ದ ಗಾಂಧೀಜಿ, ಯಾವತ್ತೂ ಹಿಂದಿಯ ಕಡೆ ಗಮನ ನೀಡಿರಲಿಲ್ಲ. ಗುಜರಾತಿಯಾದ್ದರಿಂದ ಹಿಂದಿಯ ಪರಿಚಯ ಸಾಕಷ್ಟು ಪ್ರಮಾಣದಲ್ಲೇ ಇತ್ತು. ಆದರೆ ಬಿಹಾರ, ಉತ್ತರಪ್ರದೇಶದಂತಹ ಹಿಂದಿ ಸೀಮೆಗಳ ಗ್ರಾಮೀಣ ಜನರನ್ನು ತಲುಪಲು ಗುಜರಾತಿ ಪ್ರಭಾವ ಹೊಂದಿದ್ದ ಹಿಂದಿ ಸಾಕಾಗುತ್ತಿರಲಿಲ್ಲ. ಚಂಪಾರಣ್ಯದಲ್ಲಿ ಕೆಲವು ಸ್ಥಳೀಯರ ಸಹಾಯ ಪಡೆದು ಹೇಗೋ ಹೊರಗೆ ಬಂದರು. ಆದರೆ ನಂತರ ಛಲಬಿಡದೆ, ಎಲ್ಲರಿಗೂ ಸಲ್ಲುವಂಥ ಹಿಂದಿಯನ್ನು ಸುಲಲಿತವಾಗಿ ಕಲಿತರು.
ನಂತರದಲ್ಲಿ ದೇಶಾದ್ಯಂತ ಸಂಚಾರ ಮಾಡಿದಾಗ, ಹಿಂದಿ ಮಾತ್ರವೇ ದೇಶವನ್ನು ಒಂದು ಮಾಡುವ ಭಾಷೆಯಾಗಬಲ್ಲದು ಎಂಬುದು ಅವರ ಅರಿವಿಗೆ ಬಂದಿತು. ಹಾಗಾಗಿಯೇ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸಬೇಕು ಎಂದೇ ಅವರು ಪ್ರತಿಪಾದಿಸಿದರು ಹಾಗೂ ಇಡೀ ಸ್ವಾತಂತ್ರ್ಯ ಸಂಗ್ರಾಮದ ಸಂಪರ್ಕ ಭಾಷೆಯಾಗಿ ಹಿಂದಿ ಮತ್ತು ಹಿಂದೂಸ್ತಾನಿಯನ್ನೇ ಬಳಸಿದರು.
ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಭಾಷೆಯ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ‘‘ಭಾರತದ ಎಲ್ಲ ಉನ್ನತ ಶೈಕ್ಷ ಣಿಕ ಪಠ್ಯದಲ್ಲೂ ಹಿಂದಿ, ಸಂಸ್ಕೃತ, ಪರ್ಷಿಯನ್‌, ಅರೇಬಿಕ್‌, ಇಂಗ್ಲಿಷ್‌ ಜತೆಗೆ ಪ್ರಾದೇಶಿಕ ಭಾಷೆಗಳನ್ನು ಕಲಿಸಬೇಕು. ಭಾಷೆಗಳ ಈ ದೊಡ್ಡ ಪಟ್ಟಿಗೆ ಯಾರೂ ಹೆದರುವುದು ಬೇಡ. ನಮ್ಮ ಶಿಕ್ಷ ಣ ವ್ಯವಸ್ಥೆ ವೈಜ್ಞಾನಿಕವಾಗಿದ್ದರೆ ಹಾಗೂ ವಿದೇಶಿ ಮಾಧ್ಯಮದ ಮೂಲಕ ಭಾಷೆಯನ್ನು ಕಲಿಯಲು ಮಕ್ಕಳನ್ನು ಒತ್ತಾಯ ಮಾಡದಿದ್ದರೆ ಈ ಭಾಷೆಗಳನ್ನು ಕಲಿಯುವುದು ಕಷ್ಟವಲ್ಲ ಎಂದರು. ಹೇಗೆ ಕಲಿಸಬೇಕು ಎಂಬ ರೂಪರೇಷೆಯನ್ನೂ ನೀಡಿರುವ ಗಾಂಧೀಜಿ, ಹಿಂದಿ, ಗುಜರಾತಿ ಹಾಗೂ ಸಂಸ್ಕೃತವನ್ನು ಒಂದೇ ಭಾಷೆ ಎಂದು ಪರಿಗಣಿಸಬಹುದು. ಪರ್ಷಿಯನ್‌ ಹಾಗೂ ಅರೇಬಿಕ್‌ಗಳನ್ನು ಒಂದು ಗುಂಪು ಮಾಡಬಹುದು. ಹಿಂದಿಯಿಂದಲೇ ಸಾಕಷ್ಟು ಪದಪುಂಜವನ್ನು ಎರವಲು ಪಡೆದಿರುವ ಉರ್ದು, ಪರ್ಷಿಯನ್ನಿಗಿಂತ ಭಿನ್ನವೇನೂ ಇಲ್ಲ. ಗುಜರಾತಿ, ಹಿಂದಿ, ಬಂಗಾಳಿ ಹಾಗೂ ಮರಾಠಿ ಕಲಿತವರು ಸಂಸ್ಕೃತವನ್ನು ಕಲಿಯಬೇಕು ಎಂದಿದ್ದಾರೆ. ಅಂದರೆ ಭಾಷೆಯ ಉಗಮ, ರಚನೆ, ಸ್ವರೂಪವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡರೆ ಹೊಸ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವಲ್ಲ ಎಂಬುದನ್ನು ಗಾಂಧಿ ವಿವರಿಸಿದ್ದಾರೆ.
ಅಂದರೆ ಭಾರತದದಲ್ಲಿ ಒಂದು ಭಾಷೆ ಮತ್ತೊಂದು ಭಾಷೆಯ ಜತೆ ಬೆಸೆದುಕೊಂಡಿದೆ. ನಾವು ಆ ಭಾಷೆಗಳನ್ನು ಬೇರೆ ಬೇರೆಯದು ಎಂದು ಭಾವಿಸಿಕೊಂಡರೂ ಮೂಲವನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ಗಾಂಧೀಜಿ ಸೂಚ್ಯವಾಗಿ ನಮಗೆ ತಿಳಿಸಿಕೊಟ್ಟಿದ್ದಾರೆ.
1918ರಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯನ್ನು ಉದ್ಘಾಟಿಸಿ ಕನ್ನಡಿಗರನ್ನು ಕುರಿತು ಗಾಂಧೀಜಿ ಹೇಳಿದ ಮಾತು ಈ ಸಂದರ್ಭದಲ್ಲಿ ಪ್ರಮುಖವಾಗುತ್ತದೆ. ‘‘ಒಂದು ತಿಂಗಳ ಕಾಲ, ಪ್ರತಿದಿನ ನಾಲ್ಕು ತಾಸಿನಂತೆ ಹಿಂದಿಯನ್ನು ಕಲಿಯುವಷ್ಟು ಸಾಮರ್ಥ್ಯ‌ ನಿಮ್ಮಲ್ಲಿಲ್ಲವೇ? 20 ಕೋಟಿ ನಿಮ್ಮದೇ ದೇಶವಾಸಿಗಳೊಂದಿಗೆ (ಉತ್ತರ ಭಾರತೀಯರೊಂದಿಗೆ) ಸಂಪರ್ಕ ಸಾಧಿಸುವ ಈ ಕಾರ್ಯಕ್ಕೆ ಇಷ್ಟು ಸಮಯ ನೀಡುವುದು ಹೆಚ್ಚು ಎಂದು ನೀವು ಭಾವಿಸಿರುವಿರಾ’’ ಎಂದು ಪ್ರಶ್ನಿಸಿದ್ದರು. ಇದರರ್ಥ- ಹಿಂದಿ ಎಂಬುದು ಉತ್ತರ ಮತ್ತು ದಕ್ಷಿಣದ ಬೆಸುಗೆ ಎಂಬುದು ಗಾಂಧಿ ಚಿಂತನೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂವಹನಕ್ಕಾಗಿ ಒಂದು ದೇಶೀಯ ಭಾಷೆಯನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸ್ವತಂತ್ರ ಭಾರತದಲ್ಲಿ ಆಡಳಿತ ಭಾಷಾ ಆಯೋಗವನ್ನು ರಚಿಸಲಾಗಿತ್ತು. ದೇಶಾದ್ಯಂತ ಸಂಪರ್ಕಕ್ಕೆ ಹಿಂದಿಯನ್ನು ಬಳಕೆ ಮಾಡಬಹುದು ಎಂಬ ಪ್ರಸ್ತಾವನೆಗೆ ಇಡೀ ಲೋಕಸಭೆ ಸಮ್ಮತಿಸಿತು. ಒಬ್ಬಿಬ್ಬರು ಸಂಸತ್‌ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಜಾರಿ ಮಾಡಲು ಮುಂದಾದಾಗ, ಮುಖ್ಯವಾಗಿ ಸರಕಾರಿ ಹುದ್ದೆಗಳಲ್ಲಿ ಹಿಂದಿ ಮಾತನಾಡದಿರುವ ರಾಜ್ಯಗಳ ಜನರಿಗೆ ಅನ್ಯಾಯವಾಗುತ್ತದೆ ಎಂಬ ಆತಂಕ ಶುರುವಾಯಿತು ಮತ್ತು ಅದು ಯೋಚಿಸಲೇಬೇಕಾದ ಆತಂಕವೂ ಆಗಿತ್ತು.
ಈ ನಿಟ್ಟಿನಲ್ಲಿ ಅರ್ಥಶಾಸ್ತ್ರಜ್ಞ ಪಂಡಿತ್‌ ದೀನದಯಾಳ ಉಪಾಧ್ಯಾಯ ಅವರ ಉಪಾಯವೊಂದಿದೆ. ‘‘ವಾಸ್ತವವಾಗಿ ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾಗಲು, ಅದಕ್ಕೆ ಸಂಬಂಧಿಸಿದಂತೆ ಹಿಂದಿ ಭಾಷಾ ಜ್ಞಾನವನ್ನು ಅವಶ್ಯಕವೆಂದು ಎಂದಿಗೂ ಪರಿಗಣಿಸಬಾರದು. ಪ್ರಾದೇಶಿಕ ಭಾಷೆಗಳ ಮಾಧ್ಯಮಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು. ಆದರೆ ಆಯ್ಕೆಯಾದ ನಂತರದಲ್ಲಿ ಉದ್ಯೋಗಿಗೆ ಹಿಂದಿ ಭಾಷೆಯಲ್ಲಿ ವ್ಯವಹರಿಸುವಂತಹ ಜ್ಞಾನವನ್ನು ನೀಡಲು ಏರ್ಪಾಟು ಮಾಡಬೇಕು. ಭವಿಷ್ಯದಲ್ಲಿ ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾಗುವ ಆತಂಕವನ್ನು, ಹಿಂದಿಯೇತರ ರಾಜ್ಯಗಳಲ್ಲಿ ನಿವಾರಿಸಿದರೆ ಹಿಂದಿಯನ್ನು ಪರಿಚಯಿಸಲು ಯಾವುದೇ ವಿರೋಧವೂ ಇರುವುದಿಲ್ಲ. ಹಿಂದಿಯ ಕುರಿತು ವಿರೋಧವು ಅದರ ಜಾರಿ, ವಿಧಾನಗಳ ಕುರಿತೇ ವಿನಃ ಸೈದ್ಧಾಂತಿಕವಾದದ್ದಲ್ಲ ,’’ ಎಂದಿದ್ದಾರೆ.
ಈಗ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ದಕ್ಷಿಣದ ತಮಿಳುನಾಡು, ಕರ್ನಾಟಕ, ಅತ್ತ ಕಡೆ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ತಲೆದೋರಿರುವ ಸಮಸ್ಯೆ ಪ್ರಮುಖವಾಗಿ ಉದ್ಯೋಗ ಕೇಂದ್ರಿತವಾದುದು. ಬ್ಯಾಂಕಿಂಗ್‌ ಸೇರಿದಂತೆ ಅನೇಕ ಹುದ್ದೆಗಳಿಗೆ ಕೇಂದ್ರ ಸರಕಾರ ನಡೆಸುವ ಪರೀಕ್ಷೆಗಳಲ್ಲಿ ಹಿಂದಿಯನ್ನೇ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಯುಪಿಎಸ್‌ಸಿ ಪರೀಕ್ಷೆಗಳಲ್ಲೂ ಹಿಂದಿ ಮಾತನಾಡುವ ಪ್ರದೇಶಗಳ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗುತ್ತಾರೆ. ಇದು ಸಹಜವಾಗಿ ಕನ್ನಡಿಗರು ಹಾಗೂ ಇತರೆ ಭಾಷಿಕರಲ್ಲಿ ಅಸಮಾಧಾನ ಮೂಡಿಸಿದೆ. ಹಿಂದಿ ಬಲ್ಲವರಿಗಷ್ಟೆ ಉದ್ಯೋಗ ಎಂಬಂಥ ನೀತಿಗಳು, ಕನ್ನಡಿಗರು ಸೇರಿದಂತೆ ಇತರೆ ಭಾಷಿಕರಿಗೆ ಮಾಡುವ ಅನ್ಯಾಯ ಮಾತ್ರವಲ್ಲ, ದೇಶದ ಐಕ್ಯತೆಯ ದೃಷ್ಟಿಯಿಂದಲೂ ಇದು ಬಹಳ ಅಪಾಯಕಾರಿ. ಅಖಿಲ ಭಾರತ ಸೇವೆಗಳಲ್ಲಿ ಎಲ್ಲ ರಾಜ್ಯಗಳ, ಎಲ್ಲ ಭಾಷೆಗಳ, ಎಲ್ಲ ಸಾಮಾಜಿಕ ಸಂರಚನೆಗಳಿಗೂ ಪ್ರಾತಿನಿಧ್ಯವಿರಬೇಕು. ಆಗ ಮಾತ್ರವೇ ದೇಶದ ಐಕ್ಯತೆ, ಅಖಂಡತೆಯನ್ನು ಕಾಪಾಡಲು ಸಾಧ್ಯ.
ಗೃಹ ಸಚಿವರ ಆಶಯ ಈಡೇರಲಿ
ಇನ್ನೂ ವರ್ತಮಾನಕ್ಕೆ ಬರೋಣ. ಸೆ.15ರ ಹಿಂದಿ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವ ಅಮಿತ್‌ ಷಾ, ‘‘ನಿಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲೇ ಓದುತ್ತಿರಲಿ, ಮನೆಯಲ್ಲಿ ಮಾತೃಭಾಷೆಯಲ್ಲೇ ಅವರೊಂದಿಗೆ ವ್ಯವಹರಿಸಿ. ಮಾತೃಭಾಷೆಯೇ ಬೇರು. ಬೇರಿನಿಂದ ಕಡಿತಗೊಂಡ ವೃಕ್ಷ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ,’’ ಎಂದು ಪೋಷಕರಿಗೆ ಕರೆ ನೀಡಿದರು. ಅದೇ ಭಾಷಣದಲ್ಲಿ, ಬೇರೆ ಪ್ರಾದೇಶಿಕ ಭಾಷೆಗಳಿಗಿಂತ ಹಿಂದಿ ಭಿನ್ನವೇನಲ್ಲ. ಹಿಂದಿಯು ಎಲ್ಲ ಭಾಷೆಗಳ ‘ಸಖಿ’(ಸ್ನೇಹಿತೆ) ಎಂದಿದ್ದಾರೆ.
ಬಹುಶಃ ಗೃಹಸಚಿವರ ಇದೇ ನಿಲುವು ಕೇಂದ್ರ ಸರಕಾರದ ಕಾರ್ಯ ವಿಭಾಗದಲ್ಲೂ ಮನಃಪೂರ್ವಕವಾಗಿ ಅನುಷ್ಠಾನವಾದರೆ ಅದಕ್ಕಿಂತ ಸಂತಸದ ವಿಚಾರ ಇನ್ನೊಂದಿಲ್ಲ. ಕೇಂದ್ರ ಗೃಹಸಚಿವರು ಎಷ್ಟೇ ನಯವಾಗಿ ಮಾತನಾಡಿದರೂ ಮತ್ತೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳೆ ಕನ್ನಡವನ್ನು ಕಡೆಗಣಿಸುವ ವಿಚಾರ ಬಂದೇ ಬರುತ್ತದೆ. ಏಕೆಂದರೆ ಈ ಅಧಿಕಾರಿ ವರ್ಗವೇ ಅಂಥದ್ದು. ಅಲ್ಲಿರುವ ಅನೇಕರು ಮೊದಲನೆಯದಾಗಿ ಸೋಮಾರಿಗಳು. ಇರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಯಥಾಸ್ಥಿತಿವಾದಿಗಳು. ಕೆಲವು ಭಾಷಾ ಅಂಧರು, ಉದ್ದೇಶಪೂರ್ವಕವಾಗಿ ಭಾಷೆ ಹೇರಬೇಕೆಂದವರು ಇದ್ದಾರಾದರೂ ಅವರ ಸಂಖ್ಯೆ ಕಡಿಮೆ. ಕರ್ನಾಟಕದಲ್ಲೆ ತೆಗೆದುಕೊಳ್ಳಿ. ಕನ್ನಡವನ್ನು ಆಡಳಿತದ ಎಲ್ಲ ಹಂತದಲ್ಲೂ ಅನುಷ್ಠಾನ ಮಾಡಲು ಏಕೆ ಆಗುತ್ತಿಲ್ಲ? ಹತ್ತಾರು ಬಾರಿ ಸ್ವತಃ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಅನೇಕ ಬಾರಿ ಎಚ್ಚರಿಕೆ ನೀಡಿದೆ. ಆದರೂ ಅಧಿಕಾರಿಗಳು ಏಕೆ ಕನ್ನಡ ಅನುಷ್ಠಾನ ಮಾಡುತ್ತಿಲ್ಲ? ಅವರೇನು ಕನ್ನಡ ವಿರೋಧಿಗಳೇ? ಅಲ್ಲ. ಖಂಡಿತವಾಗಿಯೂ ಇದು ಅಧಿಕಾರಿ ವರ್ಗದಲ್ಲಿರುವ ಆಲಸ್ಯದ ಪರಿಣಾಮ. ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇರುವುದು ಕೂಡ ಇದೇ ಮನಸ್ಥಿತಿ. ಎಲ್ಲ ಭಾಷೆಗಳನ್ನೂ ಒಳಗೊಂಡರೆ ಅಷ್ಟರಮಟ್ಟಿಗೆ ಪ್ರಶ್ನೆಪತ್ರಿಕೆ ರಚಿಸಬೇಕು, ಅದೆಲ್ಲವನ್ನೂ ಮೌಲ್ಯಮಾಪನ ನಡೆಸಬೇಕು ಎಂಬ ಚಿಂತೆಗೆ ಬೀಳುತ್ತಾರೆ. ಕಾರಣ ಆಲಸ್ಯವೆ ಇರಲಿ, ಉದ್ದೇಶಪೂರ್ವಕವೇ ಆಗಿರಲಿ, ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸಿದರೆ ಸಾಕಷ್ಟು ಸಮಸ್ಯೆ ಬಗೆಹರಿಯುತ್ತದೆ.
ಇದೆಲ್ಲವನ್ನೂ ಯಾಕೆ ಹೇಳಿದೆ ಎಂದರೆ, ಹಿಂದಿ ಹೇರಿಕೆ ಎಂಬುದು ಸಾಂಸ್ಕೃತಿಕ ರಾಜಕೀಯ. ಹಿಂದುತ್ವದ ಹುನ್ನಾರ, ಉತ್ತರ ಭಾರತೀಯರ ಭಾಷಾ ಪಾಳೇಗಾರಿಕೆ ಎಂಬೆಲ್ಲಾ ಅನುಮಾನಗಳನ್ನು ಕೆಲವರು ಹುಟ್ಟುಹಾಕುತ್ತಾರೆ. ಮೇಲ್ನೋಟಕ್ಕೆ ಇದು ಸರಿ ಅನಿಸುತ್ತದೆ. ಇದೆಲ್ಲದರಲ್ಲಿ ಅರ್ಧ ಸತ್ಯವೂ ಇರಬಹುದು. ಆದರೆ, ದಕ್ಷಿಣ ಭಾರತದ ಭಾಷಿಕರು ಇಷ್ಟೆಲ್ಲಾ ಎಚ್ಚರಗೊಂಡಿರುವ ಹೊತ್ತಲ್ಲಿ, ಕೇಂದ್ರ ಸರಕಾರ, ದಿಲ್ಲಿ ಮೂಲದ ರಾಜಕೀಯ ಪಕ್ಷ ಗಳು, ಭಾಷಾ ಪಾಳೇಗಾರಿಕೆ ಮಾಡಲು ಪ್ರಯತ್ನಿಸುತ್ತವೆಯೇ? ಇದು ಕೂಡ ಯೋಚಿಸಬೇಕಾದ ಸಂಗತಿ. ನಮ್ಮ ಅಧಿಕಾರಿಗಳ ವಿಳಂಬ ದ್ರೋಹ, ಯಥಾಸ್ಥಿತಿವಾದ ಭಾಷಾ ಸಮಸ್ಯೆ ಜೀವಂತವಿರಲು ಹೆಚ್ಚು ಕಾಣಿಕೆ ನೀಡುತ್ತಿರುತ್ತದೆ.
ಪುನರ್ವಿಂಗಡಣೆ ಮತ್ತು ಭಾಷಿಕ ನ್ಯಾಯ
ಹಿಂದಿ ಕುರಿತು ಚರ್ಚೆಯನ್ನು ಸದ್ಯವೇ ದೇಶದಲ್ಲಿ ನಡೆಯಲಿರುವ ಕ್ಷೇತ್ರ ಪುನರ್ವಿಂಗಡಣೆಯ ಹಿನ್ನೆಲೆಯಲ್ಲೂ ಪರಿಶೀಲಿಸೋಣ. ದೇಶದ ಎಲ್ಲ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಂಥ ಮಹಾನ್‌ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಸಾಮಾನ್ಯವಾಗಿ ಕ್ಷೇತ್ರಗಳನ್ನು ಮರುವಿಂಗಡಿಸುವಾಗ ಎರಡು ವಿಚಾರಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಮೊದಲನೆಯದು ಜನಸಂಖ್ಯೆ, ಎರಡನೆಯದು ಭೂಭಾಗ. ಒಬ್ಬ ಸಂಸದ ನಿರ್ವಹಿಸಲು ಅಗತ್ಯವಿರುವಷ್ಟು ಜನಸಂಖ್ಯೆ ಹಾಗೂ ಆತನ ವ್ಯಾಪ್ತಿಗೆ ಒಳಪಡಬಹುದಾದ ಭೂಮಿಯನ್ನು ಸಮತೋಲನಗೊಳಿಸಿ ಕ್ಷೇತ್ರವನ್ನು ಹಂಚಲಾಗುತ್ತದೆ. ಆದರೆ ಹೆಚ್ಚಿನ ಪ್ರಾಧಾನ್ಯತೆ ಜನಸಂಖ್ಯೆಗೇ ಲಭಿಸುವುದರಿಂದ, ಉತ್ತರ ಭಾರತದ ರಾಜ್ಯಗಳಲ್ಲಿ ಸಂಸದರ ಸಂಖ್ಯೆ ತೀವ್ರವಾಗಿ ಹೆಚ್ಚಾಗಲಿದೆ. ಇಲ್ಲೊಂದು ಸೂಕ್ಷ ್ಮ ಸಂಗತಿ ಇದೆ. ಜನಸಂಖ್ಯೆ ನಿಯಂತ್ರಿಸಲು ಸರಕಾರ ಇದುವರೆಗೆ ಹಮ್ಮಿಕೊಂಡಿರುವ, ಜಾರಿಗೊಳಿಸಿರುವ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದು ದಕ್ಷಿಣದ ರಾಜ್ಯಗಳು. ಸರಕಾರ ನಡೆಸಿದ ಪ್ರಚಾರದ ಜತೆಗೆ, ದಕ್ಷಿಣ ಭಾರತದ ಜನರಲ್ಲಿರುವ ಆರ್ಥಿಕ ಜಾಗೃತಿ, ಉತ್ತಮ ಶಿಕ್ಷ ಣ ಕೊಡಿಸಬೇಕೆಂಬ ಹೊಣೆಗಾರಿಕೆಯೂ ಮಕ್ಕಳ ಸಂಖ್ಯೆಯನ್ನು, ಆ ಮೂಲಕ ಜನಸಂಖ್ಯೆಯನ್ನು ಮಿತಿಗೊಳಿಸಿಕೊಳ್ಳಲು ಕಾರಣವಾಯಿತು. ಇಂಥದ್ದೊಂದು ವಿವೇಕದ ನಡೆ, ಈ ಹೊತ್ತು ಹೆಚ್ಚು ಸಂಸದರನ್ನು ಆಯ್ಕೆ ಮಾಡದಂಥ ಪರಿಸ್ಥಿತಿ ನಿರ್ಮಿಸಿದೆ. ಬದಲಿಗೆ, ಹಿಂದಿ ಮಾತನಾಡುವ ರಾಜ್ಯಗಳಿಂದ ಹೆಚ್ಚು ಸಂಸದರು ಆಯ್ಕೆ ಮಾಡುವಂಥ ಸ್ಥಿತಿಗೆ ಕಾರಣವಾಗಿದೆ. ಉತ್ತರ ಭಾರತದಲ್ಲಿ ಹೆಚ್ಚು ಸಂಸದರು ಆಯ್ಕೆಯಾಗಿ ಬಂದರೆ ಮತ್ತಷ್ಟು ಹಿಂದಿ ಪ್ರಭಾವ ಸಹಜವಾಗಿಯೇ ಹೆಚ್ಚುತ್ತದೆ. ಹಾಗಾಗಿ, ದಕ್ಷಿಣ ಭಾರತೀಯರು ಭಾಷೆಯ ವಿಚಾರವನ್ನು ಸೂಕ್ಷ ್ಮವಾಗಿ ನಿಭಾಯಿಸಬೇಕಾಗುತ್ತದೆ.
ಪ್ರಾದೇಶಿಕ ಭಾಷೆಗಳಿಗೆ ಬಲ ನೀಡುವ ನಿಟ್ಟಿನಲ್ಲಿ ನಮ್ಮ ಸಂಸದರ ಹೊಣೆಗಾರಿಕೆ ಬಹಳಷ್ಟಿದೆ. 2014ರಿಂದ ಸಂಸತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಲು ಅವಕಾಶ ನೀಡಲಾಗಿದೆ. ಯಾವುದೇ ಭಾಷೆಯಲ್ಲಿ ಮಾತನಾಡಿದರೂ, ಎಲ್ಲ ಸಂಸದರಿಗೂ ನೀಡಿರುವ ಹೆಡ್‌ಫೋನ್‌ಗಳ ಮೂಲಕ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ತಕ್ಷ ಣದಲ್ಲೆ ಅನುವಾದಿಸುವ ಕಾರ್ಯವೂ ನಡೆಯುತ್ತಿದೆ. ಹಾಗಾಗಿ, ಸಂಸದರು ಯಾವ ಭಾಷೆಯಲ್ಲಿ ಮಾತನಾಡಿದರೂ ಅಲ್ಲಿರುವ ಬೇರೆ ಭಾಷೆಯ ಸಹ ಸಂಸದರಿಗೆ ಹಾಗೂ ಸಭಾಧ್ಯಕ್ಷ ರಿಗೆ ಅರ್ಥವಾಗುತ್ತದೆ. ಈ ಸೌಲಭ್ಯವಿದ್ದರೂ ನಮ್ಮ ಎಷ್ಟು ಸಂಸದರು ಚರ್ಚೆಯ ವೇಳೆ ಕನ್ನಡವನ್ನು ಬಳಸಿದ್ದಾರೆ? ತಾವೂ ಹಿಂದಿಯಲ್ಲೆ, ಇಂಗ್ಲಿಷಿನಲ್ಲೆ ಮಾತನಾಡಬೇಕು ಎಂಬ ಹಪಹಪಿ ಏಕೆ?
ನೈಜ ಸವಾಲು ಇಂಗ್ಲಿಷ್‌
ಕಡೆಯದಾಗಿ, ಹಿಂದಿ ಕುರಿತು ನಮ್ಮ ವಿರೋಧ, ಹೋರಾಟದ ನಡುವೆ, ಹಿಂದಿಯೇತರ ಭಾಷೆಗಳಿಗೆ ನಿಜವಾದ ಸವಾಲು ಸೃಷ್ಟಿಯಾಗಿರುವುದು ಹಿಂದಿಯಿಂದಲೇ ಅಥವಾ ಇಂಗ್ಲಿಷ್‌ನಿಂದಲೇ ಎಂಬುದರ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.
ಶಿಕ್ಷ ಣದ ಭಾಷೆಯ ಆಯ್ಕೆ ಹಕ್ಕು ಪೋಷಕರದ್ದೇ ವಿನಃ ಸರಕಾರ ನಿರ್ಧರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಕನ್ನಡವಷ್ಟೆ ಅಲ್ಲ, ಹಿಂದಿ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಸಂಕಷ್ಟದಲ್ಲಿವೆ. ಯುಪಿಎಸ್‌ಸಿ ಪರೀಕ್ಷೆಗಳಲ್ಲೂ ಇಂಗ್ಲಿಷ್‌ ಭಾಷೆ ಗೊತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವರೇ ವಿನಃ ಹಿಂದಿ ಭಾಷಿಕರಲ್ಲ. ಹಾಗೆ ನೋಡಿದರೆ, ಇಂಗ್ಲಿಷ್‌ ಮಾಧ್ಯಮದ ತಾಂತ್ರಿಕ ಶಿಕ್ಷ ಣವನ್ನು ಹೆಚ್ಚು ಹೆಚ್ಚು ಕಲಿಯುತ್ತಿರುವವರು ದಕ್ಷಿಣ ಭಾರತೀಯರು. ಹಿಂದಿ ಭಾಷಿಕರು ಕಡಿಮೆ ಇದ್ದಾರೆ. ಅಂದರೆ, ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಿಗೆ ಸಮಾನ ಸವಾಲು, ಸಂಕಷ್ಟ ಇರುವುದು ಇಂಗ್ಲಿಷ್‌ನಿಂದಷ್ಟೆ. ಇಂಗ್ಲಿಷ್‌ಗೆ ಪರ್ಯಾಯವಾಗಿ ಕನ್ನಡವನ್ನು ಕಟ್ಟಬೇಕು, ಭಾರತೀಯ ಭಾಷೆಗಳನ್ನು ಕಟ್ಟಬೇಕು ಎಂದರೆ, ನಮ್ಮ ಭಾಷೆಗಳನ್ನು ಅನ್ನದ ಇಲ್ಲವೇ ಬದುಕಿನ ಭಾಷೆಯನ್ನಾಗಿಸಬೇಕು. ಇಂಗ್ಲಿಷ್‌ ಬಲ್ಲವರಿಗೆ ಉದ್ಯೋಗ ಖಾತ್ರಿ ಎಂಬ ಪರಿಸ್ಥಿತಿ ಇರುವುದರಿಂದ ಎಲ್ಲರೂ ಇಂಗ್ಲಿಷ್‌ ಸೆಳೆತಕ್ಕೆ ಒಳಗಾಗಿದ್ದಾರೆ. ಇದನ್ನು ತಪ್ಪಿಸಿ, ನಮ್ಮ ಭಾಷೆಯನ್ನು ಕಟ್ಟಬೇಕು ಎಂದರೆ, ನಾವು ಕನ್ನಡವನ್ನು ಉದ್ಯೋಗ ಮಾರುಕಟ್ಟೆಯ ಭಾಷೆಯನ್ನಾಗಿಸಬೇಕು. ಕೇವಲ ಭಾವನಾತ್ಮಕತೆಯಿಂದಾಗಲಿ, ಹಿಂದಿಯನ್ನು ವಿರೋಧಿಸುವುದರಿಂದಾಗಲಿ ಇದು ಸಾಧ್ಯವಿಲ್ಲ. ನಮಗೆಲ್ಲರಿಗೂ ಗೊತ್ತಿರುವ ವಿಷಯ ಏನೆಂದರೆ, ಚೀನಾ, ಜಪಾನ್‌ ದೇಶಗಳು ಇಂಗ್ಲಿಷ್‌ ಭಾಷೆಯನ್ನು ಆಶ್ರಯಿಸದೇ ಸ್ವಾವಲಂಬಿಯಾಗಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದಿವೆ. ಮೊನ್ನೆ ಅತಿಹೆಚ್ಚು ಸದ್ದು ಮಾಡಿದ ಪೆಗಾಸಸ್‌ ಮೂಲದಲ್ಲಿ ವಿನ್ಯಾಸಗೊಂಡಿರುವುದು ಇಸ್ರೇಲಿನ ಹೀಬ್ರೂ ಭಾಷೆಯಲ್ಲಿ! ಹಾಗಾಗಿ, ನಾವು ಕೂಡ ಇಂಗ್ಲಿಷ್‌ ಬಿಟ್ಟು, ಭಾರತೀಯ ಭಾಷೆಗಳಲ್ಲಿ ನಮ್ಮ ಶಿಕ್ಷ ಣವನ್ನು ಎಲ್ಲ ಸ್ತರದಲ್ಲೂ ರೂಪಿಸಬೇಕಿದೆ. ಇಂಥಾ ಆಲೋಚನೆಗಳು ಹೆಚ್ಚಬೇಕಿದೆ.
ಭಾಷೆಯನ್ನು ರಾಜಕೀಯ ಉಪಕರಣವಾಗಿ ಬಳಸಿಕೊಳ್ಳುವ ಪ್ರಯತ್ನವೂ ಅನೇಕ ವರ್ಷಗಳಿಂದ ನೆರೆಯ ರಾಜ್ಯದಲ್ಲೆ ವ್ಯಾಪಕವಾಗಿ ನಡೆದುಕೊಂಡೇ ಬಂದಿದೆ. ಆರ್ಯ ದ್ರಾವಿಡ ಸವಕಲು ಸಿದ್ಧಾಂತವನ್ನು ಮೂಲವಾಗಿಸಿ ದೇಶವನ್ನೆ ಎರಡು ಭಾಗ ಮಾಡುವ ಮೌಖಿಕ ಪ್ರಯತ್ನಗಳು ಕರ್ನಾಟಕದಲ್ಲೂ ಆಗಾಗ್ಗೆ ನಡೆಯುತ್ತಿರುತ್ತದೆ. ಜೈ ಭಾರತ ಜನನಿಯ ತನುಜಾತೆ ಎಂದು ರಾಷ್ಟ್ರಕವಿ ಕುವೆಂಪು ಸ್ಪಷ್ಟವಾಗಿ ಹೇಳಿದ್ದರೆ ಡಿವಿಜಿ ಸೇರಿ ಎಲ್ಲ ಮಹನೀಯರೂ ಇದೇ ಭಾವವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಗರಡಿಯಲ್ಲಿ ಬೆಳೆದ ಕನ್ನಡಿಗರು, ಅದು ಭಾಷೆಯಿರಬಹುದು, ಜಾತಿಯಿರಬಹುದು, ಧರ್ಮವೇ ಇರಬಹುದು, ಇಂತಹ ಒಡೆಯುವ ವಿಚಾರಗಳಿಗೆ ಸಾರ್ವತ್ರಿಕ ಸಮ್ಮತಿಯನ್ನು ಎಂದಿಗೂ ನೀಡಿಲ್ಲ. ಆದರೆ ದೇಶದ ಐಕ್ಯತೆಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂಬುದನ್ನೆ ಬಂಡವಾಳವಾಗಿಸಿ ಭಾಷೆಯನ್ನು, ಭಾಷಿಕರನ್ನು ಕಡೆಗಣಿಸುವ ಪ್ರಯತ್ನವನ್ನು ಯಾರೂ ಮಾಡದಂತೆ ಎಚ್ಚರಿಕೆಯಂತೂ ಇರಲೇಬೇಕು.
 
 
 
 
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top