ಕೊರೊನಾದಿಂದ ಸರಕಾರ ಕಲಿತ ಪಾಠವಾದರೂ ಏನು?

2016ರಲ್ಲಿ ಕೇಂದ್ರ ಸರಕಾರ ಘೋಷಿಸಿದ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ತತ್ತರಿಸಿದ ಉದ್ಯಮಗಳಿಗೆ ಲೆಕ್ಕವಿಲ್ಲ. ಆಗ ಕೆಲಸ ಕಳೆದುಕೊಂಡವರು, ಮುಂದೆ ಉದ್ಯೋಗ ದೊರಕುತ್ತದೆ ಎಂದು ಇದೇ ಸಮಯಕ್ಕೆ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದವರು ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ಜನರು ಸಹಿಸಿಕೊಂಡಿದ್ದಾರೆ. ಕಾರಣ, ಇದು ದೇಶಕ್ಕೆ ಒಳಿತು ಮಾಡುವ ನಿರ್ಧಾರ ಎಂಬ ನಂಬಿಕೆಯಲ್ಲಿ. ಪ್ರಧಾನಿಯವರು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಉನ್ನತ ಆದರ್ಶವನ್ನು ಹೊಂದಿರುತ್ತಾರೆ ಎಂದು. ಅದೇ ರೀತಿ, 2020ರಲ್ಲಿ ಇದ್ದಕ್ಕಿದ್ದಂತೆಕೊರೊನಾ ಅಪ್ಪಳಿಸಿದಾಗ ಪ್ರಧಾನಿಯವರ ಕರೆ ಮೇರೆಗೆ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಯಿತು. ಲಕ್ಷಾಂತರ ವಲಸೆ ಕಾರ್ಮಿಕರು ಊರಿನತ್ತ ತೆರಳಿದರು, ಊಟ ವಸತಿ ಇಲ್ಲದೆ ಪರಿತಪಸಿದರು. ಸರಕಾರ ಸಾಕಷ್ಟು ಪ್ರಮಾಣದಲ್ಲಿ ಆಹಾರ, ಇತರೆ ನೆರವು ನೀಡಿತು ಎನ್ನುವುದರಲ್ಲಿ ಸುಳ್ಳಿಲ್ಲ. ಆದರೆ ಅಷ್ಟೆ ಪ್ರಮಾಣದಲ್ಲಿ ಈ ಹೊಣೆಯನ್ನು ಸಮಾಜ ಹೊತ್ತುಕೊಂಡಿತು. ಸಾವಿರಾರು ಸ್ವಯಂಸೇವಾ ಸಂಸ್ಥೆಗಳು, ವ್ಯಕ್ತಿಗಳು ತಮ್ಮ ವ್ಯಾಪ್ತಿಯಲ್ಲಿ ಸೇವೆಯಲ್ಲಿ ತೊಡಗಿದ್ದರಿಂದ ಪರಿಸ್ಥಿತಿ ಸಾಕಷ್ಟು ಸುಧಾರಿಸಿತು. ಎಂದಿನಂತೆ ಈ ಬಾರಿಯೂ ಹೊಡೆತ ಬಿದ್ದದ್ದು ಸಣ್ಣಪುಟ್ಟ ಉದ್ದಿಮೆಗಳಿಗೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಉದ್ಯೋಗ ಸೃಷ್ಟಿಸಿರುವ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಅತ್ಯಂತ ನಾಜೂಕಿನಿಂದ ನಡೆಯುತ್ತಿರುತ್ತವೆ. ಹೆಚ್ಚೆಂದರೆ ಒಂದೆರಡು ತಿಂಗಳ ನಷ್ಟ ಸಹಿಸಿಕೊಳ್ಳುವಷ್ಟು ಮಾತ್ರ ಶಕ್ತಿ ಹೊಂದಿರುತ್ತವೆ. ನಂತರವೂ ನಷ್ಟ ಮುಂದುವರಿದರೆ ಒಂದೋ ಕೆಲಸಗಾರರನ್ನು ಕಡಿಮೆ ಮಾಡಬೇಕು ಅಥವಾ ಉದ್ಯಮ ಬಂದ್ ಮಾಡಬೇಕು ಎಂಬಂಥ ಪರಿಸ್ಥಿತಿ. ಆಗಲೂ ಭಾರತೀಯರು ಸರಕಾರದ ನಿರ್ಧಾರದತ್ತ ಬೊಟ್ಟು ಮಾಡಲಿಲ್ಲ. ಕಾರಣ, ವೈದ್ಯಕೀಯವಾಗಿ ಅಭಿವೃದ್ಧಿ ಹೊಂದಿದವು ಸೇರಿದಂತೆ ಎಲ್ಲ ದೇಶಗಳಿಗೂ ಕೊರೊನಾ ಹೊಸ ಸವಾಲಾಗಿತ್ತು. ಇದನ್ನು ಎದುರಿಸುವುದು ಹೇಗೆ ಎಂಬುದು ಯಾವ ದೇಶಕ್ಕೂ ಗೊತ್ತಿರಲಿಲ್ಲ. ಹಾಗಾಗಿ ಭಾರತ ಸರಕಾರಕ್ಕೂ ಬೇರೆ ದಾರಿ ಇರಲಿಲ್ಲ. ಹಾಗಾಗಿ ಲಾಕ್ಡೌನ್ ಮಾಡಿರಬಹುದು ಎಂದೇ ಬಹುತೇಕ ಜನ ಅಂದುಕೊಂಡರು.
ಆದರೆ ಈಗೇನಾಗಿದೆ?ಕೊರೊನಾ ವ್ಯಾಪಿಸಿ ಒಂದು ವರ್ಷ ದಾಟಿದೆ. ಜನರ ಮನೋಭಾವದಲ್ಲಿ ಬದಲಾವಣೆ ಆಗಿದೆ. ಬಹಳಷ್ಟು ನಾಗರಿಕರು ಯಾವುದೇ ಪೊಲೀಸ್ ಒತ್ತಾಯವಿಲ್ಲದೆ ಸಾಮಾಜಿಕ ಅಂತರ ಪಾಲಿಸುತ್ತಾರೆ, ಮಾಸ್ಕ್ ಧರಿಸುತ್ತಾರೆ, ಕೈಗಳನ್ನು ಸ್ವಚ್ಛಗೊಳಿಸುತ್ತಾರೆ. ಕಂಪನಿಗಳು ತಮ್ಮ ನೌಕರರು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಿವೆ ಹಾಗೂ ಅದನ್ನೇ ಹೊಸ ಜೀವನ ಶೈಲಿಯಾಗಿ ರೂಪಿಸಿಕೊಂಡಿವೆ. ಹೋಟೆಲ್ ಉದ್ದಿಮೆಗಳು ಹೆಚ್ಚೆಚ್ಚು ಸ್ಯಾನಿಟೈಸ್ ಮಾಡುವ, ಶುಚಿಗೊಳಿಸುವ ಕಾರ್ಯಕ್ಕೆ ಒಗ್ಗಿಕೊಂಡಿವೆ. ಸಮಾಜದ ಬಹುತೇಕ ಎಲ್ಲ ಕ್ಷೇತ್ರಗಳೂ ಕೊರೊನಾ ನಂತರದ ಯುಗಕ್ಕೆ ಹೊಂದಿಕೊಳ್ಳುತ್ತಿವೆ. ಆದರೆ ಸರಕಾರಗಳು ಏನು ಮಾಡುತ್ತಿವೆ? ಇನ್ನೂ ಕೊರೊನಾ ಯುಗದಲ್ಲೇ ಇವೆ, ಅಧಿಕಾರಿಗಳಂತೂ ಕೊರೊನಾ ಯುಗವೇ ತಮಗೆ ಚೆಂದ ಎಂಬಂತೆ ವರ್ತಿಸುತ್ತಿದ್ದಾರೆ.
ಕೊರೊನಾ ಎರಡನೇ ಅಲೆ ವ್ಯಾಪಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ,ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಾಗಿದೆ ಎಂದು ಸರಕಾರ ನೀಡುವ ಅಂಕಿ ಅಂಶಗಳು ಹೇಳುತ್ತಿವೆ.ಕೊರೊನಾ ಹೆಚ್ಚಳ ಸತ್ಯವೇ ಅಲ್ಲ ಎಂಬ ವಾದವೂ ಇದೆ. (ಹಾಗೆ ನೋಡಿದರೆ, ಸರಕಾರ ನೀಡಿರುವ ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ ಭಾರತದಲ್ಲಿ ದಾಖಲಾಗಿರುವ ಕೊರೊನಾ ಪ್ರಕರಣಗಳ ಸಂಖ್ಯೆ 1.30 ಕೋಟಿ. ವಾಸಿಯಾಗಿರುವುದು 11.91 ಕೋಟಿ. ಮೃತಪಟ್ಟವರ ಸಂಖ್ಯೆ 1.67 ಲಕ್ಷ. ಆದರೆ, ವೈದ್ಯಲೋಕದ ಕೆಲವು ತಜ್ಞರು ಹೇಳುವ ಪ್ರಕಾರ ಸೋಂಕಿತರ ಸಂಖ್ಯೆ, ಸರಕಾರದ ನೀಡಿರುವ ಸಂಖ್ಯೆಗಿಂತ 50-60 ಪಟ್ಟು ಹೆಚ್ಚಿದೆ. ಈ ಅರ್ಥದಲ್ಲಿ ದೇಶದ ಜನಸಂಖ್ಯೆಯ ಶೇ.50ರಿಂದ ಶೇ.60ರಷ್ಟು ಜನರಿಗೆ ಕೊರೊನಾ ಬಂದು ಹೋಗಿದ್ದು, ಅವರ್ಯಾರು ಭಯ ಪಡಬೇಕಿಲ್ಲ. ರೂಪಾಂತರಿತ ಕೊರೊನಾ ಎಂಬುದು ಇಲ್ಲವೇ ಇಲ್ಲ)
ಇರಲಿ, ನಾವೀಗ ಸರಕಾರ ನೀಡುವ ಅಂಕಿ ಅಂಶಗಳನ್ನು ಒಪ್ಪಿಕೊಂಡರೂ, ಇನ್ಮುಂದೆ ಲಾಕ್ ಡೌನ್ ನಂಥ ಕ್ರಮಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇತ್ತೀಚೆಗೆ ಕೇಂದ್ರ ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ ಮಾಸಿಕ ವರದಿಯಲ್ಲಿ, ’ಕೊರೊನಾದಿಂದ ಎದುರಾಗುವ ದುಷ್ಪರಿಣಾಮವನ್ನು ಎದುರಿಸಲು ದೇಶ ಸರ್ವಸನ್ನದ್ಧವಾಗಿದೆ’ ಎಂದು ತಿಳಿಸಲಾಗಿದೆ. ಹಾಗಾದರೆ, ಮತ್ತೆ ಲಾಕ್ಡೌನ್ ಮಾಡುವುದೇ ‘ಸರ್ವ ಸನ್ನದ್ಧತೆಯೇ?’ ಎಂದು ಸರಕಾರವೇ ಉತ್ತರಿಸಬೇಕು.
ಲಾಕ್ಡೌನ್ ಮಾಡುವಿಕೆ, ಹೊಸ ನಿರ್ಬಂಧಗಳನ್ನು ಹೇರುವಿಕೆಯಲ್ಲಾದರೂ ಯಾವುದಾದರೂ ಸಮಾನತೆ, ವೈಜ್ಞಾನಿಕತೆ ಇದೆಯೇ ಎಂದು ಹುಡುಕಬೇಕು ಅಷ್ಟೆ. ಉದಾಹರಣೆಗೆ, ಕರ್ನಾಟಕ ಸರಕಾರ ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಸಿನಿಮಾ ಚಿತ್ರ ಮಂದಿರಗಳಲ್ಲಿ ಶೇ.50 ಆಸನಗಳನ್ನು ಮಾತ್ರ ಭರ್ತಿ ಮಾಡಬೇಕು. ಅದೇ ಸಮೂಹ ಸಾರಿಗೆ ವಾಹನಗಳಲ್ಲಿ ಶೇ.100 ಆಸನಗಳನ್ನು ಭರ್ತಿ ಮಾಡಬಹುದು. ಹಾಗೆ ನೋಡಿದರೆ ಸಾರಿಗೆ ವಾಹನಗಳಲ್ಲಿರುವಷ್ಟು ಸೋಂಕು ಹರಡುವ ಅಪಾಯ ಸಿನಿಮಾ ಚಿತ್ರ ಮಂದಿರದಲ್ಲಿರುವುದಿಲ್ಲ. ಒಂದು ಪ್ರದರ್ಶನಕ್ಕೆ ಬಂದ ಅಷ್ಟೂ ಜನರು ತಂತಮ್ಮ ಆಸನಗಳಲ್ಲಿರುತ್ತಾರೆ. ಮುಂದಿನ ಪ್ರದರ್ಶನಕ್ಕೆ ಮುನ್ನ ಸ್ಯಾನಿಟೈಸ್, ಫ್ಯೂಮಿಗೇಟ್ ಮಾಡಿದರೆ ಆಯಿತು, ವೈರಸ್ ಹರಡುವಿಕೆಯ ಸರಪಳಿ ಮುರಿಯಬಹುದು. ಆದರೆ ಬಸ್ನಲ್ಲಿ? ಒಂದು ನಿಲ್ದಾಣದಲ್ಲಿ ಹತ್ತಿದವ ನಡುವೆ ಇಳಿಯುತ್ತಾನೆ. ಆ ಆಸನಕ್ಕೆ ಮತ್ತೊಬ್ಬ ಹತ್ತಿ ಕೂರುತ್ತಾನೆ. ಪ್ರತಿ ಪ್ರಯಾಣಿಕ ಹತ್ತಿ ಇಳಿದಾಗಲೂ ಬಸ್ಸನ್ನು ಸ್ಯಾನಿಟೈಸ್ ಮಾಡಲು ಸಾಧ್ಯವೇ? ಹಾಗಾದರೆ ಈ ಮಾರ್ಗಸೂಚಿಯಲ್ಲಿ ಯಾವ ತರ್ಕ ಅಡಗಿದೆ? ಹಾಗೆಯೇ ಜಿಮ್ಗಳನ್ನು ಮುಚ್ಚುವುದರಿಂದ ಕೊರೊನಾ ಸೋಂಕು ಹೇಗೆ ಕಡಿಮೆಯಾಗುತ್ತದೆ? ಹಾಗೆಂದು ಸಾರಿಗೆಯಲ್ಲೂ ಶೇ.50 ಆಸನಕ್ಕೆ ನಿಗದಿಪಡಿಸಿ ಎಂಬುದು ಅಭಿಪ್ರಾಯವಲ್ಲ.
ಇದೀಗ ಕರ್ನಾಟಕ ಸರಕಾರ ಹೊಚ್ಚ ಹೊಸ ಲಾಕ್ಡೌನ್ ಸೂತ್ರದೊಂದಿಗೆ ಬಂದಿದೆ. ಶನಿವಾರದಿಂದ ಆರಂಭಗೊಂಡು, ಪ್ರತಿದಿನ ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ 10 ದಿನ ಕರ್ಫ್ಯೂ ವಿಧಿಸಲಾಗುತ್ತದೆ ಎಂದಿದೆ. ಕರ್ಫ್ಯೂ ಎಂಬ ನಟೋರಿಯಸ್ ಪದ ಬಳಕೆಯಿಂದ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡುವುದನ್ನು ಹೊರತುಪಡಿಸಿ, ಈ ನಿರ್ಧಾರಕ್ಕೆ ಯಾವ ತರ್ಕ ಇದೆ ಎಂಬುದು ಯಾರಿಗೂ ಗೊತ್ತಿಲ್ಲ. ವಾರಪೂರ್ತಿ ಕೆಲಸ ಮಾಡಿದ ದಣಿವಾರಿಸಿಕೊಳ್ಳಲು ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ತೆರಳುವವರ ಸಂಖ್ಯೆ ದೊಡ್ಡದಿದೆ. ಆದರೆ ಸರಕಾರ ಸರಿಯಾಗಿ ಶನಿವಾರದಿಂದಲೇ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಈಗಾಗಲೆ ಹೋಟೆಲ್ ಉದ್ಯಮ ತತ್ತರಿಸಿದ್ದು, ಅನೇಕ ಹೋಟೆಲ್ ಉದ್ದಿಮೆದಾರರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ಹೆಜ್ಜೆಯನ್ನೂ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್ಡೌನ್ ನಂತಹ ಕ್ರಮಗಳು ಯಾವ ಮಟ್ಟದ ಹಾನಿ ಮಾಡಬಲ್ಲವು ಎಂಬುದನ್ನು ಸರಕಾರ ಯೋಚಿಸಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ಸರಕಾರವೇ ಎಲ್ಲ ಕಡೆ ಹೇಳುತ್ತದೆ: ಮಾಸ್ಕ್ ಧರಿಸಿ, ಕೈ ತೊಳೆಯಿರಿ ಹಾಗೂ ವೈಯಕ್ತಿಕ ಅಂತರ ಕಾಪಾಡಿ ಎಂದು. ಈ ನಿಯಮಗಳ ಪಾಲನೆ ಎಲ್ಲಿ ಆಗುತ್ತಿದೆ ಹಾಗೂ ಎಲ್ಲಿ ಆಗುತ್ತಿಲ್ಲ ಎಂದು ಕೇಳಿದರೆ ಸಾಮಾನ್ಯ ಜನರಿಗೂ ಉತ್ತರ ಗೊತ್ತು. ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಮಗಳಲ್ಲಿ ಈ ನಿಯಮ ಪಾಲನೆ ಆಗುತ್ತಿದೆ. ರಾಜಕೀಯ ರ್ಯಾಲಿಗಳಲ್ಲಿ, ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲನೆ ಆಗುತ್ತಿಲ್ಲ ಎಂಬುದು ಯಾರಿಗೆ ಗೊತ್ತಿಲ್ಲ? ನ್ಯಾಯಾಲಯ ಛೀಮಾರಿ ಹಾಕಿದ್ದನ್ನು ಹೊರತುಪಡಿಸಿ, ಚುನಾವಣಾ ರ್ಯಾಲಿಗಳನ್ನು ತಡೆಯಲು ಸರಕಾರಗಳು ಯಾವುದಾದರೂ ಕ್ರಮಗಳನ್ನು ಕೈಗೊಂಡಿವೆಯೇ?
ಲಾಕ್ಡೌನ್ ತೆರವಿಗೆ ಸಮಾಜ ಹೇಗೆ ಸ್ಪಂದಿಸಿತು ಎಂಬುದನ್ನು ನೋಡೋಣ.ಕೊರೊನಾ ವೇಗ ಸಂಪೂರ್ಣ ತಗ್ಗಿದ ಸಮಯದಲ್ಲಿ ಒಂದೊಂದೆ ಉದ್ಯಮ, ವ್ಯಾಪಾರ, ಸ್ಥಳಗಳನ್ನು ತೆರೆಯಲು ಸರಕಾರ ಅವಕಾಶ ನೀಡಿತು. ಈ ಕ್ರಮದ ಪರಿಣಾಮ ಗೋಚರಿಸಲು ಆರಂಭವಾಗಿದೆ. 2021-22ರ ಹಣಕಾಸು ವರ್ಷದ ಆರಂಭದಲ್ಲೆ ಆರ್ಥಿಕತೆ ಧನಾತ್ಮಕತೆಯತ್ತ ಸಾಗಿದೆ ಎಂಬ ಸಂದೇಶ ಲಭಿಸಿದೆ. ಕಳೆದ ವರ್ಷ ಲಾಕ್ಡೌನ್, ನಿರ್ಬಂಧಗಳ ನಂತರ ಚೇತರಿಕೆ ಕಂಡಿದೆ. 2021ರ ಮಾರ್ಚ್ 31ರವರೆಗೆ, ವಾಣಿಜ್ಯ ತೆರಿಗೆಯು ವಾರ್ಷಿಕ 82,443 ಕೋಟಿ ರೂ. ಗುರಿಯನ್ನು ಮೀರಿ 82,491 ಕೋಟಿ ರೂ. ಸಂಗ್ರಹವಾಗಿದೆ. ಅಬಕಾರಿ ಇಲಾಖೆ ತನ್ನ 22,700 ಕೋಟಿ ರೂ. ಗುರಿ ಮೀರಿ 23,131 ಕೋಟಿ ರೂ. ಮುಟ್ಟಿದೆ. ಆಸ್ತಿ ನೋಂದಣಿ ಕುಸಿತ ಕಂಡುಬಂದಿರುವುದು ಹೊರತುಪಡಿಸಿ, ಆದಾಯ ತರುವ ಎಲ್ಲ ಇಲಾಖೆಗಳೂ ಉತ್ತಮ ಸಾಧನೆ ತೋರಿವೆ. ಅವಕಾಶ ಸಿಕ್ಕರೆ ರಾಜ್ಯ ಆರ್ಥಿಕತೆ ಹಳಿಗೆ ಮರಳುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನು ಇದು ಸಾಬೀತುಪಡಿಸಿದೆ.
ಆರೋಗ್ಯ, ಆರ್ಥಿಕತೆಯನ್ನು ಸರಕಾರಗಳು ಭಾರತೀಯ ದೃಷ್ಟಿಕೋನದಲ್ಲಿ ನೋಡುವುದನ್ನು ರೂಢಿಸಿಕೊಳ್ಳಬೇಕು. ಪಾಶ್ಚಿಮಾತ್ಯ ದೇಶಗಳ ಹಾಗೂ ಭಾರತೀಯರ ರೋಗನಿರೋಧಕ ವ್ಯವಸ್ಥೆಯಲ್ಲಿ ವ್ಯತ್ಯಾಸವಿದೆ. ಸ್ಥಳೀಯವಾಗಿ ಲಭಿಸುವ ಗಿಡಮೂಲಿಕೆಗಳು, ಸಾಂಬಾರ ಪದಾರ್ಥಗಳು ರೋಗ ನಿರೋಧಕತೆ ಹೆಚ್ಚಿಸಲು ಅಗಾಧ ಕೊಡುಗೆ ನೀಡಿವೆ ಎಂಬುದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಆದರೆ ಇಲ್ಲಿನ ಸಂಶೋಧಕರು, ವೈದ್ಯರು ಆಯುರ್ವೇದ ಔಷಧ ಸಂಶೋಧನೆ ಮಾಡಿದಾಗ ಸರಕಾರದಿಂದ ಲಭಿಸಿದ ಸ್ಪಂದನೆ ಯಾರೂ ಮೆಚ್ಚುವಂಥದ್ದಲ್ಲ. ಯಾವುದೇ ಅಡ್ಡ ಪರಿಣಾಮಗಳಿಲ್ಲದಿದ್ದರೂ, ಈ ಔಷಧ ತಯಾರಕರಿಗೆ ಇನ್ನಿಲ್ಲದ ತೊಂದರೆಯನ್ನು ನೀಡಲಾಯಿತು. ಇಷ್ಟರ ನಂತರ ಬಿಡುಗಡೆಯಾಗಿರುವ ಲಸಿಕೆಯ ಪರಿಣಾಮಕಾರಿತ್ವ ಎಷ್ಟರಮಟ್ಟಿಗಿದೆ ಎಂಬುದು ಇನ್ನೂ ಸಾಬೀತಾಗಿಲ್ಲ. ಲಸಿಕೆಯಿಂದಷ್ಟೆ ಸೋಂಕು ತಡೆಯಬಹುದು ಎಂದು ಹೇಳುವಾಗ, ಭಾರತದ ಅಗಾಧ ಜನಸಂಖ್ಯೆಗೆ ತಕ್ಕಷ್ಟು ಲಸಿಕೆ ನೀಡಲು ಸಾಧ್ಯವೇ ಎಂಬುದರ ಚಿಂತನೆಯೂ ನಡೆಯುತ್ತಿಲ್ಲ. ಭಯಭೀತಗೊಂಡಿರುವ ಜನರಲ್ಲಿ ಜೀವನೋತ್ಸಾಹ ತುಂಬುವ ಬದಲಿಗೆ ಸರಕಾರದ ಭಾಗವಾಗಿರುವವರೇ ಭಯಗೊಳಿಸುವುದರಲ್ಲಿ ನಿರತರಾಗಿರುತ್ತಾರೆ. ಇದು ಆರೋಗ್ಯ ತುರ್ತುಪರಿಸ್ಥಿತಿ ಎಂದು ಪದೇಪದೆ ಹೇಳುತ್ತಾರೆ. ಆದರೆ ಸರಕಾರಗಳು ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡುವ ಹಣ ಮಾತ್ರ ಗಣನೀಯ ಏರಿಕೆ ಕಂಡಿಲ್ಲ. ಆರೋಗ್ಯ ತುರ್ತುಪರಿಸ್ಥಿತಿ ಇದ್ದರೂ ಸರಕಾರ ಏಕೆ ಹೆಚ್ಚು ಹಣ ಮೀಸಲಿಟ್ಟಿಲ್ಲ? ಹಾಗಾದರೆ ಆರೋಗ್ಯ ತುರ್ತುಪರಿಸ್ಥಿತಿ ಎಂಬುದು ಸುಳ್ಳೇ? ಕೆಲ ಲಸಿಕಾ ಕಂಪನಿಗಳಿಗೆ ಲಾಭ ಮಾಡಿಕೊಡಲು ಇಂತಹ ಪ್ರಯತ್ನವೇ? ಎಂಬ ಅನುಮಾನವೂ ಮೂಡುತ್ತದೆ. ಹಣಕಾಸು ಕೊರತೆ ಸೇರಿ ಅನೇಕ ಕಾರಣಗಳಿಂದಾಗಿ ಇಂದು ಜನರು ಸರಕಾರಿ ಆಸ್ಪತ್ರೆಗೆ ತೆರಳಲು ಸಿದ್ಧವಾಗಿದ್ದಾರೆ. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಮೂಲಸೌಕರ್ಯ, ಖಾಯಿಲೆಗಳ ನಿರ್ವಹರ್ಣೆ ಮಾಡಲು ಸರಕಾರದ ವ್ಯವಸ್ಥೆ ಸಿದ್ಧವಾಗಿಲ್ಲ.ಕೊರೋನೋತ್ತರ ಕೇಂದ್ರ ಹಾಗೂ ರಾಜ್ಯಸರಕಾರದ ಬಜೆಟ್ ನ ಅನುದಾನ ಹಂಚಿಕೆಯಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆ ಮೊದಲ ಆದ್ಯತೆ ಸಿಗುತ್ತದೆ ಎಂಬ ನಿರೀಕ್ಷೆ ಸರ್ವೇಸಾಮಾನ್ಯವಾಗಿತ್ತು.ಆದರೆ ಆದದ್ದೆಲ್ಲವೂ ತದ್ವಿರುದ್ಧ!
ಕೊರೊನಾ ಲಾಕ್ಡೌನ್ ಸಮಯದಲ್ಲಿ ಲಕ್ಷಾಂತರ ಜನರು ತಮ್ಮ ಹಳ್ಳಿಗಳಿಗೆ ತೆರಳಿದರು. ಮನೆಯಿಂದಲೇ ಕೆಲಸ ಮಾಡುವ ಇರಾದೆಯಿಂದ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ಹಳೆ ಮೈಸೂರಿನ ಕೆಲ ಜಿಲ್ಲೆಗಳಲ್ಲಿ ಹೊರತುಪಡಿಸಿದರೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ 4ಜಿ ಇಂಟರ್ನೆಟ್ ಇರಲಿ, ಸಾಮಾನ್ಯ ದೂರವಾಣೀ ಕರೆ ಮಾಡಲೂ ಆಗದಷ್ಟು ನೆಟ್ವರ್ಕ್ ಸಮಸ್ಯೆ ಇದೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆಯನ್ನು ತಡೆಯಲು ಸರಕಾರಕ್ಕೆ ಇದು ಸುವರ್ಣಾವಕಾಶವಾಗಿತ್ತು. ನೆಟ್ವರ್ಕ್ ಸಮಸ್ಯೆಯಿಂದ ಅನೇಕ ಯುವಕರು ಒಲ್ಲದ ಮನಸ್ಸಿನಿಂದಲೇ ಮತ್ತೆ ನಗರಗಳಿಗೆ ವಾಪಸಾದರು. ಈಗಿನ ಕಾಲದಲ್ಲಿ ಮೂಲಸೌಕರ್ಯ ಎಂದರೆ ಕೇವಲ ರಸ್ತೆಯಲ್ಲ. 4ಜಿ ಇಂಟರ್ನೆಟ್ ಸೇವೆ ಒದಗಿಸಿದರೆ ಅದಕ್ಕಿಂತ ದೊಡ್ಡ ಸಹಾಯ ಇನ್ನೊಂದಿಲ್ಲ. ಆದರೆ ಸರಕಾರದ ಬಳಿ ಇಂತಹದ್ದೊಂದು ಸಮಸ್ಯೆಗೆ ಉತ್ತರವೇ ಇರಲಿಲ್ಲ. ಹಾಗೆ ನೋಡಿದರೆ, ಎಷ್ಟು ಜನರು ಈ ರೀತಿ ಗ್ರಾಮಗಳಿಗೆ ತೆರಳಿದ್ದರು ಎಂಬ ದತ್ತಾಂಶವೇ ಸರಕಾರದ ಬಳಿ ಇಲ್ಲ.
ಮಾತೆತ್ತಿದರೆ ಲಾಕ್ಡೌನ್, ಕರ್ಫ್ಯೂ ಎನ್ನುತ್ತದೆ ಸರಕಾರಿ ವ್ಯವಸ್ಥೆ. ಆದರೆ ಲಾಕ್ಡೌನ್ ಎನ್ನುವುದು,ಕೊರೊನಾ ಎರಡನೇ ಅಲೆ ಎದುರಿಸಲು ಕೇಂದ್ರ ಸರಕಾರ ರೂಪಿಸಿಕೊಂಡಿರುವ ಮಾರ್ಗಸೂಚಿಯಲ್ಲೇ ಇಲ್ಲ. ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿರುವಂತೆ,ಕೊರೊನಾ ಎದುರಿಸಲು ಕೇಂದ್ರ ಸರಕಾರ ಐದು ಅಂಶದ ಕಾರ್ಯಸೂಚಿ ರೂಪಿಸಿಕೊಂಡಿದೆ. ಕೊರೊನಾ ಪರೀಕ್ಷೆ ಸಂಖ್ಯೆಯಲ್ಲಿ ಅಗಾಧ ಏರಿಕೆ ಮಾಡುವುದು,ಕೊರೊನಾ ಸೋಂಕಿತರೊಂದಿಗೆ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಹಾಗೂ ಸೋಂಕಿತರನ್ನು ಇತರರಿಂದ ಬೇರ್ಪಡಿಸುವುದು, ಸರಕಾರಿ ಮತ್ತು ಖಾಸಗಿ ವೈದ್ಯಕೀಯ ವ್ಯವಸ್ಥೆಯ ಬಲವರ್ಧನೆ, ಸಾರ್ವಜನಿಕರಲ್ಲಿ ಕೊರೊನಾ ನಿಯಂತ್ರಣ ನಡವಳಿಕೆಗಳನ್ನು ಖಾತ್ರಿ ಪಡಿಸಿಕೊಳ್ಳುವಿಕೆ, ಹೆಚ್ಚಿನ ಸಂಖ್ಯೆಕೊರೊನಾ ಪ್ರಕರಣ ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ವ್ಯಾಪಕ ಲಸಿಕೆ ನೀಡುವಿಕೆ. ಈ ಐದು ಅಂಶಗಳಲ್ಲಿ ಎಲ್ಲಿಯೂ ನೈಟ್ ಕರ್ಫ್ಯೂ, ಲಾಕ್ಡೌನ್, ಶೇ.50 ಆಸನ ಮೀಸಲಿರಿಸುವಿಕೆಯಂತಹ ಕ್ರಮಗಳ ಸುಳಿವೂ ಇಲ್ಲ. ಅಂದಮೇಲೆ ಈ ಕ್ರಮಗಳನ್ನು ಯಾವ ಆಧಾರದಲ್ಲಿ ತೆಗೆದುಕೊಳ್ಳಲಾಗುತ್ತಿದೆ? “ಕೊರೊನಾ ಜತೆಗೆ ಜೀವಿಸುವುದನ್ನು ಕಲಿಯಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೇ ಹೇಳಿದ್ದರು.ಕೊರೊನಾ ಸಂಪೂರ್ಣ ನಿರ್ನಾಮ ಆಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅಂದಮೇಲೆಯೂ ಊದ್ಯಮ, ವ್ಯಾಪಾರ, ಜನಜೀವನವನ್ನು ಬಾಧಿಸುವ ಕ್ರಮಗಳನ್ನು ತಜ್ಞರು ಸೂಚಿಸುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಮುಂದೆ ಪರಿಸ್ಥಿತಿ ಕೈಮೀರಿದಾಗ ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಕಾರಣಕ್ಕೆ, ಈ ರೀತಿಯಲ್ಲಿ ಅಪ್ರಾಯೋಗಿಕ ಹಾಗೂ ಆರ್ಥಿಕ, ಸಾಮಾಜಿಕವಾಗಿ ಅಪಾಯಕಾರಿ ಸಲಹೆಗಳನ್ನು ತಜ್ಞರು ನೀಡದಿರುವುದು ಒಳಿತು. ಮಾಸ್ಕ್ ಧಾರಣೆ, ರೋಗನಿರೋಧಕತೆ ಹೆಚ್ಚಳಕ್ಕೆ ದೇಸಿ ಔಷಧಗಳ ಬಳಕೆ, ನೈರ್ಮಲ್ಯ ಕಾಪಾಡುವಿಕೆಯಂತಹ ಕ್ರಮಗಳಿಗೆ ಸರಕಾರ ಒತ್ತು ನೀಡುವ ಬದಲು ಬಂದ್ ಮಾಡುವಂತಹ ಹೆಜ್ಜೆಗಳನ್ನೇ ಇಟ್ಟರೆ, ಈ ಒಂದು ವರ್ಷದಲ್ಲಿ ಕಲಿತದ್ದಾದರೂ ಏನನ್ನು? ಎಂದು ಪ್ರಶ್ನಿಸಬೇಕಾಗುತ್ತದೆ.
ಕಡೆ ಮಾತು:
ಬೆಂಗಳೂರಿನಿಂದ ಬರುವ ಪ್ರತಿಯೊಬ್ಬರು ಕೋವಿಡ್ ನೆಗೆಟಿವ್ ಪತ್ರ ಹೊಂದಿರಬೇಕು; ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಲಾಕ್ ಡೌನ್ ಮಾಡಲು ಹಿಂಜರಿಯುವುದಿಲ್ಲ; ಪ್ರವಾಸಿ ತಾಣಗಳಿಗೆ, ಸಿನಿಮಾ ಮಂದಿರಗಳಿಗೆ ಹೋಗಲು ಕೋವಿಡ್ ನೆಗೆಟಿವ್ ಪತ್ರ ಬೇಕು; ಮದುವೆ ಸಮಾರಂಭದಲ್ಲಿ ಭಾಗವಹಿಸುವ 200 ಜನರ ಕೋವಿಡ್ ಪರೀಕ್ಷೆ ಅಗತ್ಯ…
-ಇಂಥಾ ಆದೇಶಗಳನ್ನು ಹೊರಡಿಸುವ ಮೂಲಕ ರಾಜ್ಯದ ಕೆಲವು ಜಿಲ್ಲಾಧಿಕಾರಿಗಳು/ಅಧಿಕಾರಿಗಳು ಇನ್ನೂ ಕೊರೊನಾ ದರ್ಪ ಮುಂದುವರಿಸಿದ್ದಾರೆ. ಅಚ್ಚರಿ ಎಂದರೆ, ಯಾವುದೇ ಅಧಿಕಾರಿಗಳು ಕೊರೊನಾ ಮುಂಜಾಗ್ರತ ಕ್ರಮ ಕುರಿತು ಪ್ರತ್ಯೇಕವಾಗಿ ಆದೇಶ/ಸುತ್ತೋಲೆ ಹೊರಡಿಸುವಂತಿಲ್ಲ ಎಂದು ಸರಕಾರ ಹೇಳಿದ ಬಳಿಕವೂ, ಅವರು ಈ ಕೆಲಸ ಮಾಡುತ್ತಿದ್ದಾರೆ. ಇದು ಜನರಲ್ಲಿ ಭಯ ಹುಟ್ಟಿಸುವ ಭಯೋತ್ಪಾದನೆ ಅಲ್ಲದೇ ಮತ್ತೇನೂ ಅಲ್ಲ. ಕೊರೊನಾದೊಂದಿಗೆ ಬಾಳ್ವೆ ಮಾಡುವುದನ್ನು ಮೊದಲು ಅಧಿಕಾರಿಗಳೇ ಅರಿಯಬೇಕಿದೆ ಅಲ್ಲವೇ?!
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top