ವಿಜ್ಞಾನಕ್ಕೆ ಸಾಹಿತ್ಯ ಬೆಸೆದ ಸ್ನೇಹಜೀವಿ

-ದೇಶಿ ವಿಮಾನ ತಂತ್ರಜ್ಞಾನ ವಿನ್ಯಾಸದ ರೂವಾರಿ

ನಿನ್ನೆ ನಮ್ಮೊಂದಿಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಇಂದು ನಮ್ಮೊಂದಿಗಿಲ್ಲ.ಇದೇ ಬದುಕಿನ ವಿಸ್ಮಯ.ವಿಜಯ ಕರ್ನಾಟಕದ ಸಂಪಾದಕನಾಗುವವರೆಗೆ ನನಗೂ ಅವರಿಗೂ ಅಂತಹ ಒಡನಾಟ,ಸಂಪರ್ಕವೇನಿರಲಿಲ್ಲ.ಆದರೆ ಅವರ ಸಹೃದಯತೆ ಪರಿಚಯ ಅದಕ್ಕೂ ಮೊದಲೇನನಗಾಗಿತ್ತು.ನಂತರ ಅದು ಗಾಢವಾಯಿತು.ನಾನು ವಿಜಯವಾಣಿ,ದಿಗ್ವಿಜಯ ಚಾನೆಲ್ ನಿಂದ ಹೊರಬಂದ ದಿನ‌ ಸಾಯಂಕಾಲ ಆರು ಗಂಟೆ ಸುಮಾರಿಗೆ ನನಗೊಂದು ಫೋನ್ ಕರೆ ಬಂತು.ರಿಸೀವ್ ಮಾಡಿದಾಗ ನಾನು ಸುಧೀಂದ್ರ ಹಾಲ್ದೊಡ್ಡೇರಿ ಎಂದು ಪರಿಚಯಿಸಿಕೊಂಡರು.ನೇರವಾಗಿ ಮಾತಾಡ್ತೇನೆ ಆಗಬಹುದಾ ಎಂದರು.ಮಾತಾಡಿ ಎಂದೆ.ನೀವು ನಿಮ್ಮ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಅಂತ ಕೇಳಿದರು.ಹೌದು ಎಂದೆ,ಛೇ..ನನಗೆ ಬೇಸರವಾಯ್ತು ಎಂದರು.ಯಾಕೆ? ನಾನು ಖುಷಿಯಿಂದ ಹಿರ ಬಂದಿದ್ದೇನೆ ಎಂದೆ.ನಿಮ್ಮಂಥವರು ಈಗಿನ ಕಾಲದ ಮಾಧ್ಯಮಗಳಲ್ಲಿರಲೇಬೇಕಿತ್ತು.ದಿಗ್ವಿಜಯ ಚಾನೆಲ್ ನಲ್ಲಿ‌ ಪ್ರತಿನಿತ್ಯ ರಾತ್ರಿ 9ಕ್ಕೆ ನೀವು ನಡೆಸಿಕೊಡುತ್ತಿದ್ದ ಪ್ರೈಮ್ ಟೈಮ್ ಶೋ ನ್ಯೂಸ್ ಔಟ್ ಲುಕ್ ನ್ನು ತಪ್ಪದೇ ನೋಡುತ್ತಿದ್ದೆ.ಯಾವುದೇ ಅರಚಾಟ,ಕಿರುಚಾಟವಿಲ್ಲದೆ ವಸ್ತುನಿಷ್ಠವಾಗಿ ನೀವು ಮಾತನಾಡ್ತಿದ್ದ ರೀತಿ ಮತ್ತು ಬಳಸುತ್ತಿದ್ದ ಭಾಷಾ ಸೊಗಸನ್ನು ಖುಷಿಯಿಂದ ಆಸ್ವಾದಿಸುತ್ತಿದ್ದೆ,ಇನ್ನೇನು ಮಾಡಲಿ ಎಂದರು. ರಾಜಕೀಯದಿಂದ ಹಿಡಿದು ವಿಜ್ಞಾನ,ತಂತ್ರಜ್ಞಾನದವರೆಗೆ ಎಲ್ಲ ವಿಷಯಗಳ ಕುರಿತು ನಾನು ಮಾತನಾಡ್ತಿದ್ದೆ.ನಾನು ಯಾವುದರಲ್ಲೂ ತಜ್ಞನಾಗಿರಲಿಲ್ಲ.ಅಷ್ಟೋ ಇಷ್ಟೊ ವಿಷಯ ತಯಾರಿ ಮಾಡಿಕೊಳ್ಳುವುದನ್ನು ಬಿಟ್ಟು!ಆದರೆ ಸುಧೀಂದ್ರ ಅವರು ಹಾಗಾಗಿರಲಿಲ್ಲ.ಹಿರಿಯ ವಿಜ್ಞಾನಿ,ಕನ್ನಡ ಮತ್ತು ಇಂಗ್ಲಿಷಿನಲ್ಲಿ ಅವರ ಭಾಷಾ ಪಾರಮ್ಯ ಸೊಗಸೋ ಸೊಗಸು.ಅಷ್ಟು ದೊಡ್ಡ ವ್ಯಕ್ತಿಯಾಗಿದ್ರೂ ಸೌಜನ್ಯದ‌ ಮೇರು ಪರ್ವತವಾಗಿದ್ರು.ನನ್ನ ಬಗ್ಗೆ ಅವರು ಅಂದು ಆಡಿದ ಮಾತುಗಳು ನನ್ನ ವೃತ್ತಿ,ಪ್ರವೃತ್ತಿ,ನಡವಳಿಕೆಗಳ ವಿಷಯದಲ್ಲಿ ನಾನು ಮತ್ತಷ್ಟು ಗಂಭೀರವಾಗಿ ಆಲೋಚಿಸುವಂತೆ,ತೊಡಗಿಸಿಕೊಳ್ಳುವಂತೆ ಮಾಡಿತು.ಸುಧೀಂದ್ರ ಅವರ ವಿಷಯದಲ್ಲಿ ಇನ್ನೊಂದು ಸಂಗತಿಯನ್ನು ಈಗ ಹೇಳಿಬಿಡ್ತೇನೆ. ಅವರು ವಿಜಯ ಕರ್ನಾಟಕದ ಆರಂಭಿಕ ಅಂಕಣಕಾರ.ಹದಿಮೂರು ದಿನಗಳ ಹಿಂದೆ ಅವರಿಗೆ ಹೃದಯಾಘಾತ ಆಗುವ ದಿನ ಮುಂಜಾನೆ ಕೂಡ ವಿಕದಲ್ಲಿ ಅವರ ಅಂಕಣ ಪ್ರಕಟವಾಗಿತ್ತು.ವಿಕದಲ್ಲಿ ಸುಧೀಂದ್ರ ಅವರು ಹಿರಿಯ ಅಂಕಣಕಾರರು.21 ವರ್ಷ ಸತತವಾಗಿ ಬರೆದಿದ್ದಾರೆ.ಈಗಲೂ ಅವರ ಲೇಖನ,ವಿಷಯ, ನಿರೂಪಣೆ ತಾಜಾತಾಜಾ…ಅದಿರಲಿ,ಅವರ ಸೌಜನ್ಯ ಎಂಥದ್ದು.ಅವರು ಅಂಕಣ ಕಳಿಸಿದ್ದನ್ನು ತಕ್ಷಣದಲ್ಲಿ ನನ್ನ ಮೊಬೈಲ್ ಇಮೇಲ್ ನ ಇನ್ ಬಾಕ್ಸ್ ಅಲರ್ಟ್ ನಲ್ಲಿ ತೋರಿಸಿಯೇ ತೋರಿಸುತ್ತಿತ್ತು.ಅದರ ಬೆನ್ನಿಗೇ ಸುಧೀಂದ್ರ ಅವರಿಂದ ಒಂದು ಮೆಸೇಜು,ಅಂಕಣ ಕಳಿಸಿದ್ದೇನೆ‌ ಅಂತ.ಅದಕ್ಕಿಂತ ಮುಖ್ಯವಾದ್ದು ಅಷ್ಟು ದೊಡ್ಡ ವ್ಯಕ್ತಿಯಾಗಿದ್ರೂ ಕೊನೆವರೆಗೂ ಎಂದೂ ಕೂಡ ನೇರವಾಗಿ ಕರೆ ಮಾಡಿದವರಲ್ಲ.ಒಂದು ನಿಮಿಷ ನಾನು ನಿಮ್ಮೊಂದಿಗೆ ಮಾತನಾಡಬಹುದಾ?ಎಂಬ ಸಂದೇಶ ಕಳಿಸಿ ಕೇಳಿದ ನಂತರವೇ ಕರೆ,ಮಾತು..ಅವರ ಸಂದೇಶ ಬಂದ ತಕ್ಷಣ ಹೆಚ್ಚಿನ ಸಂದರ್ಭಗಳಲ್ಲಿ ನಾನೇ ಅವರಿಗೆ ಕರೆ ಮಾಡುತ್ತಿದ್ದೆ.ಅವರು ನನಗೆ ಮೆಸೇಜ್ ಮಾಡಿ ಅನುಮತಿ ಕೇಳಿ ಕರೆ ಮಾಡಬೇಕಿತ್ತಾ? ಅದು ಅವರಲ್ಲಿ ರಕ್ತಗತವಾಗಿದ್ದ ಶುದ್ಧ ಸೌಜನ್ಯ.ಇಲ್ಲಿ‌ ಮಾತ್ರವಲ್ಲ,ಇಡೀ ಜಗತ್ತಿನಲ್ಲಿ ವಿಜ್ಞಾನದ ಹಿನ್ನೆಲೆಯಲ್ಲಿ ಏನೇ ಬೆಳವಣಿಗೆ ಆಗಲಿ,ಮುಂಜಾನೆ‌ ಆರಕ್ಕ ಸುಧೀಂದ್ರ ಅವರ ನಂಬರಿಂದ ಒಂದು ಮೆಸೇಜ್ ಪಕ್ಕಾ ಇರುತ್ತಿತ್ತು.ನಾನು ಈ ಬಗ್ಗೆ ಒಂದು‌ ಬರಹ ಕಳಿಸಲಾ ಅಂತ! ನಿನ್ನೆ ಕೂಡ ಬೆಂಗಳೂರಿನ ಕೆಲ ಭಾಗಗಳಲ್ಲನನಗಾಗಿ,ೊ ಶಬ್ದ ಕೇಳಿಬಂತು ಎಂದಾಗ ತಕ್ಷಣ ನೆನಪಾದದ್ದು ಇದೇ ಸುಧೀಂದ್ರ ಅವರು.ಹೃದಯಾಘಾತಕ್ಕೊಳಗಾಗುವ ನಾಲ್ಕು ದಿನ ಮೊದಲು ಇಂಥದ್ದೇ ಒಂದು ಸಂಭಾಷಣೆ ನಡೆದು ಒಂದು ಲೇಖನ ಬರೆದುಕೊಟ್ಟಿದ್ದರು.ಈ ಕೊರತೆ ತುಂಬುವವರು ಇನ್ಯಾರು?
ವಿಧಿ ಸಂಕಲ್ಪವನ್ನು ನಾವೆಲ್ಲರೂ ಒಪ್ಪಲೇಬೇಕಲ್ಲ.ನಿನ್ನೆ ಇಡೀ ದಿನವನ್ನು ಮೌನವಾಗಿ ಸುಧೀಂದ್ರ ಅವರಿಗೆ ಅರ್ಪಿಸಿದ್ದೇನೆ.
ಸಾವಿನಲ್ಲೂ ಸಾರ್ಥಕತೆ ಮೆರೆದರು.ಅವರ ಕೊನೆ ಆಸೆಯಂತೆ ದೇಹವನ್ನು ಬೆಂಗಳೂರು ಮೆಡಿಕಲ್ ಕಾಲೇಜಿ(ಬಿಎಂಸಿ)ಗೆ ದಾನ ಮಾಡಲಾಗಿದೆ.
ನಿಮ್ಮದು ನಿಜವಾಗಲೂ ತುಂಬಲಾರದ ನಷ್ಟ ಕಣ್ರೀ ಸುಧೀಂದ್ರಜಿ..
ಜೀವನಪೂರ್ತಿ ನೀವು ವ್ರತದಂತೆ ಪಾಲಿಸಿದ ಆ ನಿಮ್ಮ ದೊಡ್ಡ ಗುಣ ನನ್ನನ್ನು ಕಿಂಚಿತ್ತಾದರೂ ಆವರಿಸಿಕೊಳ್ಳಲಿ ಎಂಬಾಸೆಯಿಂದ ನಾಲ್ಕಕ್ಷರಗಳ ನಮನಗಳು..
ನಿಮ್ಮವ..
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top