ಸಂವಾದ, ಸಂವಹನ ಮಾದರಿ ಸರಕಾರದ ದಾರಿಕೃಷಿ ಉತ್ತೇಜನ, ಗೋಸಂರಕ್ಷಣೆಗೆ ಭಾವನಾತ್ಮಕ ಮಾರ್ಗಕ್ಕಿಂತಲೂ ವ್ಯಾವಹಾರಿಕ ನಿಲುವು ಬೇಕು

ಒಂದೆಡೆ ರಾಜಧಾನಿ ದಿಲ್ಲಿಯ ರಾಜಬೀದಿಗಳಲ್ಲಿ ರೈತ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದರೆ, ಅದರ ಬೆನ್ನಲ್ಲೇ ರೈತ ಹೋರಾಟವನ್ನು ಬೆಂಬಲಿಸುವ ಮತ್ತು ಇಡೀ ಹೋರಾಟವನ್ನೇ ಗೇಲಿ ಮಾಡುವ ಪರ ವಿರೋಧದ ಬೌದ್ಧಿಕ (?) ಸಮರ ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿದೆ. ಎಫ್‌ಬಿ, ಟ್ವಿಟರ್‌, ವಾಟ್ಸ್ಯಾಪ್‌ಗಳಲ್ಲಿ ಹರಿದಾಡುತ್ತಿರುವ ಮೀಡಿಯಾ ಪೋಸ್ಟ್‌ಗಳು ಹಾಗೂ ವಿಡಿಯೋಗಳು ಕೂಡ ರೈತ ಚಳವಳಿಯಷ್ಟೇ ಪ್ರಮುಖವಾಗಿ ಗಮನ ಸೆಳೆಯುತ್ತಿವೆ.
ಅಂತಹ ಕೆಲ ಉದಾಹರಣೆಗಳನ್ನು ಮೊದಲು ಗಮನಿಸೋಣ. ಉದಾಹರಣೆ ಒಂದು: ದಿಲ್ಲಿ ರೈತ ಪ್ರತಿಭಟನೆ ವೇಳೆ ಪಿಎಫ್‌ಐ ಕಾರ್ಯಕರ್ತನೊಬ್ಬ ಸಿಖ್‌ ಪಂಗಡಕ್ಕೆ ಸೇರಿದ ಪಂಜಾಬಿನ ರೈತನ ವೇಷ ತೊಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಯಿತು. ಆದರೆ ಅವರು ನಿಕ್ಕೂ ರೈತರೇ ಆಗಿದ್ದರು. ಉದಾಹರಣೆ ಎರಡು: ದಿಲ್ಲಿ ಕಡೆ ಧಾವಿಸುತ್ತಿರುವ ರೈತರು ಬಳಸಿದ ಕಾರುಗಳು, ವಾಹನಗಳ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗೊಳಗಾದವು. ರೈತರಿಗೆ ಇಷ್ಟು ದುಬಾರಿ ವಾಹನಗಳು ಎಲ್ಲಿಂದ ಬಂದವು ಎಂಬುದು ಟೀಕಾಕಾರರ ಮೂಲ ಪ್ರಶ್ನೆ! ಉದಾಹರಣೆ ಮೂರು: ನೇರ ಪ್ರಶ್ನೆ ಮತ್ತು ನೇರ ಉತ್ತರ ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ಪ್ರಶ್ನೋತ್ತರ ರೂಪದ ಬರೆಹ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ಎಲ್ಲರೂ ಗಮನಿಸಿರಬಹುದು. ಅದು ಹೀಗಿದೆ. ಗೋಧಿಯನ್ನು ಹೆಚ್ಚಾಗಿ ಎಲ್ಲಿ ಬೆಳೆಯಲಾಗುತ್ತದೆ? ಪಂಜಾಬಿನಲ್ಲಿ. ಗೋಧಿಯನ್ನು ಹೆಚ್ಚು ಖರೀದಿಸುವವರು ಯಾರು? ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ(ಎಫ್‌ಸಿಐ). ಎಫ್‌ಸಿಐನಿಂದ ಧಾನ್ಯವನ್ನು ಯಾರು ಖರೀದಿಸುತ್ತಾರೆ? ದೊಡ್ಡ ದೊಡ್ಡ ದಾಸ್ತಾನುದಾರರು. ಪಂಜಾಬಿನ ಅತಿ ದೊಡ್ಡ ಮಾರ್ಗದರ್ಶಿ ಕಂಪೆನಿ ಯಾವುದು? ಸುಖ್ವಿಂದರ್‌ ಆಗ್ರೋ. ಸುಖ್ವಿಂದರ್‌ ಆಗ್ರೋ ಕಂಪೆನಿ ಮಾಲೀಕರು ಯಾರು? ಹಪ್ರೀರ್ತ್‌ ಬಾದಲ್‌! ಹಪ್ರೀರ್ತ್‌ ಬಾದಲ್‌ ಯಾರು? ಬಿಜೆಪಿ ವಿರೋಧಿ ರಾಜಕೀಯ ಕ್ಯಾಂಪಲ್ಲಿದ್ದಾರೆ. ಅತಿ ಹೆಚ್ಚು ಗೋಧಿ ಕೊಳೆಯುತ್ತಿರುವುದು ಎಲ್ಲಿ? ಎಫ್‌ಸಿಐ ಉಗ್ರಾಣದಲ್ಲಿ. ಕೊಳೆತ ಗೋಧಿಯನ್ನು ಖರೀದಿಸುವವರು ಯಾರು? ವೈನ್‌ ತಯಾರಕ ಕಂಪೆನಿಗಳು! ಅತಿ ಹೆಚ್ಚು ವೈನರಿಗಳು ಎಲ್ಲಿವೆ? ಪಂಜಾಬಿನಲ್ಲಿ. ಆಹಾರ ಸಂಸ್ಕರಣಾ ಸಚಿವಾಲಯ ಯಾರ ಬಳಿ ಇದೆ? ಹಪ್ರೀರ್ತ್‌ ಬಾದಲ್‌ ಬಳಿ!ಮಹಾರಾಷ್ಟ್ರದಲ್ಲೂ ಅದೇ ಕತೆ. ಯಾರ ಬಳಿ ಮದ್ಯ ತಯಾರಿಕಾ ಘಟಕಗಳಿವೆ? ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರ ಬಳಿ ಇವೆ. ಸಕ್ಕರೆ ಕಾರ್ಖಾನೆಗಳಲ್ಲಿ ಏನನ್ನು ಉತ್ಪಾದಿಸಲಾಗುತ್ತದೆ? ಸಕ್ಕರೆ ಮತ್ತು ಆಲ್ಕೋಹಾಲ್‌! ಆಲ್ಕೋಹಾಲನ್ನು ಎಲ್ಲಿ ಬಳಸಲಾಗುತ್ತದೆ? ಮದ್ಯ ತಯಾರಿಕೆಯಲ್ಲಿ. ಮದ್ಯ ತಯಾರಿಕಾ ಕಂಪೆನಿಗಳ ಮಾಲೀಕರು ಯಾರು? ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಾಯಕರು. ಇಲ್ಲಿ ಸಾಂದರ್ಭಿಕವಾಗಿ ಉಲ್ಲೇಖ ಮಾಡಿರುವ ಎರಡೂ ಉದಾಹರಣೆಗಳ ಗುರಿ ಹಾಗೂ ಉದ್ದೇಶವನ್ನು ವಿವರಿಸುವ ಅಗತ್ಯವಿಲ್ಲದೇ ಹೋದರೂ ಒಂದೆರಡು ಸಂಗತಿಗಳನ್ನು ಹೇಳಲೇಬೇಕು.
ಇಂತಹ ಕಾಲೆಳೆಯುವ ಬದಲು, ರೈತ ಪ್ರತಿಭಟನೆ ಮತ್ತು ರೈತರ ಬೇಡಿಕೆಗಳ ಕುರಿತು ರಚನಾತ್ಮಕ ಚರ್ಚೆ ನಡೆದಿದ್ದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತಿತ್ತು. ಮೊದಲನೆಯದಾಗಿ ರಾಜಕೀಯ ಹಿತಾಸಕ್ತಿ ಮತ್ತು ಸಾಮಾಜಿಕ ಆರ್ಥಿಕ ಹಿತಾಸಕ್ತಿ ಸಂಘರ್ಷಗಳ ಸಂದರ್ಭಗಳಲ್ಲಿ ಅವಕಾಶದ ದುರುಪಯೋಗ ಪಡಿಸಿಕೊಳ್ಳುವವರು ತೂರಿಕೊಳ್ಳುವುದು ಹೊಸದೇನೂ ಅಲ್ಲ. ರೈತರ ರಾರಯಲಿ, ಪ್ರತಿಭಟನೆಗಳ ಸಂದರ್ಭಗಳಲ್ಲೂ ಹಾಗೆ ಆಗಿರಬಹುದು. ನಿರಾಕರಿಸಲು ಸಾಧ್ಯವಿಲ್ಲ. ಹಾಗೆಯೇ ರಾಜಕೀಯ ಮತ್ತು ಉದ್ಯಮದ ಹಿತಾಸಕ್ತಿಗಳು ಎಂದೂ ಯಾರಿಂದಲೂ ಬೇರ್ಪಡಿಸಲು ಸಾಧ್ಯವೇ ಇಲ್ಲದಷ್ಟು ಬಲವಾಗಿ ಅಂಟಿಕೊಂಡಿರುವುದನ್ನೂ ಸಹ ಎಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಈ ಮಾತಿಗೆ ಕಾಂಗ್ರೆಸ್‌, ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷ ವೂ ಹೊರತಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರಾರು, ವೈನರಿ ಮಾಲೀಕರಾರು ಎಂಬುದರ ಚರ್ಚೆಯೇ ಅನಗತ್ಯ. ಎಲ್ಲದಕ್ಕಿಂತ ಹೆಚ್ಚು ಬೇಸರ ತರಿಸಿದ್ದು ರೈತರು ದುಬಾರಿ ಕಾರಲ್ಲಿ ಹೊರಟ ಸೆಲೆಕ್ಟ್ ಫೋಟೊಗಳನ್ನು ಬಳಸಿ ಟ್ರೋಲ್‌ ಮಾಡಿದ್ದು. ದೊಡ್ಡ ಸಂಖ್ಯೆಯಲ್ಲಿ ರೈತರು ಕಾರಲ್ಲಿ ಮಾತ್ರ ಬರಲಿಲ್ಲ, ಬರಿಗಾಲಲ್ಲಿ, ಬಸ್ಸುಗಳಲ್ಲಿ, ರೈಲುಗಳ ಮೂಲಕವೂ ದಿಲ್ಲಿ ತಲುಪಿದ್ದಾರೆ ಎಂಬುದು ವಾಸ್ತವ. ರೈತರು ಯಾವತ್ತೂ ಬರಿಗಾಲಲ್ಲೇ ಬರಬೇಕು, ಹರಕಲು, ಹಳಸಲು ಬಟ್ಟೆಯನ್ನೇ ತೊಡಬೇಕು, ರೈತರು ಒಳ್ಳೆಯ ಹೊಟೇಲುಗಳ ಮೆಟ್ಟಿಲು ಹತ್ತಬಾರದೆಂಬ ಮಾನಸಿಕ ದಾರಿದ್ರ್ಯ ಇವರಿಗೆ ಯಾಕೆ? ಇಂಥ ಮಾನಸಿಕತೆಗೆ ಆಯಾ ಪಕ್ಷ ಗಳ ನೇತೃತ್ವ ವಹಿಸಿದವರು ಸರಿಯಾದ ಮಾರ್ಗದರ್ಶನ ಮಾಡದೇ ಹೋದರೆ ಮುಂದೊಂದು ದಿನ ಬಹಳ ದೊಡ್ಡ ಸಮಸ್ಯೆ ಸೃಷ್ಟಿ ಆಗುತ್ತದೆ.
ಅದು ಹೇಗಾದರೂ ಇರಲಿ, ಚರ್ಚೆಯ ಇನ್ನೊಂದು ಮಗ್ಗುಲಿಗೆ ಹೊರಳಿ ಆಲೋಚನೆ ಮಾಡೋಣ. ಇಂದು ದೇಶದಲ್ಲಿ ಹೆಚ್ಚಿನ ಸಮಸ್ಯೆಗಳು ಸೃಷ್ಟಿ ಆಗುತ್ತಿರುವುದು ಸರಕಾರಗಳ ನೀತಿಗಳಿಂದಲ್ಲ. ಅಕಸ್ಮಾತ್‌ ಸರಕಾರದ ನೀತಿಗಳಿಂದ ಸಮಸ್ಯೆ ಸೃಷ್ಟಿಯಾದರೆ ಅದನ್ನು ಸರಿಪಡಿಸುವುದು ದೊಡ್ಡ ಸವಾಲಿನ ಕೆಲಸವೂ ಅಲ್ಲ, ಏಕೆಂದರೆ ಸರಕಾರದ ನೀತಿಗಳು ಕಾಗದದಲ್ಲಿ ಮಾತ್ರ ಇರುತ್ತವೆ. ಶಾಶ್ವತ ಸಮಸ್ಯೆಗಳು ಸೃಷ್ಟಿ ಆಗುವುದು ಎಂದೂ ಅಳಿಸಲಾಗದ ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸುವ ಸೈದ್ಧಾಂತಿಕ ಮತ್ತು ರಾಜಕೀಯ ಲಾಭ ನಷ್ಟದ ನಿಲುವುಗಳಿಂದ. ಇಲ್ಲೂ ಅಷ್ಟೆ, ಈ ದ್ವಂದ್ವ, ತಾಕಲಾಟಗಳಿಗೆ ಯಾವ ರಾಜಕೀಯ ಪಕ್ಷ ವೂ ಹೊರತಲ್ಲ.
ಈಗ ರೈತ ಪ್ರತಿಭಟನೆಗೆ ಕಾರಣವಾಗಿರುವ ಎಪಿಎಂಸಿ ಕಾಯಿದೆ ಮತ್ತು ಕೃಷಿ ಕಾಯಿದೆ ತಿದ್ದುಪಡಿಯನ್ನೇ ಉದಾಹರಿಸುವುದಾದರೆ ಈ ಪ್ರಸ್ತಾಪ ಶುರುವಾಗಿದ್ದು ಅಟಲ್‌ ಬಿಹಾರಿ ವಾಜಪೇಯಿ ಸರಕಾರದ ಕಾಲದಲ್ಲಿ. 2003ರಿಂದ 2013ರವರೆಗೆ ದೇಶ ಆಳಿದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ನಿರಂತರವಾಗಿ ನಿಯಂತ್ರಿತ ಎಪಿಎಂಸಿ ವ್ಯವಸ್ಥೆ ಬದಲಿಗೆ ಮುಕ್ತ ಕೃಷಿ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಲಾಬಿ ಮಾಡಿದ್ದಕ್ಕೆ ಪ್ರತ್ಯಕ್ಷ ಉದಾಹರಣೆಗಳಿವೆ. ಪತ್ರ ವ್ಯವಹಾರ, ಚರ್ಚೆಗಳ ದಾಖಲೆಗಳ ಸಾಕ್ಷಿ ಪುರಾವೆಗಳಿವೆ. ಹದಿನೈದು ವರ್ಷಗಳ ಕಾಲ ಯಾವೆಲ್ಲ ಸರಕಾರಗಳು ಏನು ಪ್ರಯತ್ನ ಮಾಡಿದ್ದವೋ ಅದನ್ನು ಮೋದಿ ಸರಕಾರ ಜಾರಿ ಮಾಡಿದೆ. ಹಾಗಾದರೆ ಈಗೇಕೆ ವಿರೋಧ? ಹೌದು, ಅವರು ವಿರೋಧಕ್ಕೆ ನೀಡುತ್ತಿರುವ ಕೆಲವು ಕಾರಣದಲ್ಲಿ, ಅರ್ಥವಿದೆ. ಕಾಂಗ್ರೆಸ್‌ನ ಈಗಿನ ನಿಲುವೇನೆಂದರೆ ಬೇಗ ಕೆಡುವ ಪದಾರ್ಥಗಳಾದ ಹಾಲು, ಹಣ್ಣು, ತರಕಾರಿ ಮಾರಾಟವನ್ನು ಮಾತ್ರ ಎಪಿಎಂಸಿ ವ್ಯವಸ್ಥೆಯಿಂದ ಹೊರಗಿಡಬೇಕೇ ಹೊರತೂ ರೈತ ಬೆಳೆಯುವ ಎಲ್ಲ ಕೃಷಿ ಪದಾರ್ಥಗಳನ್ನಲ್ಲ ಎಂಬುದು. ಇದು ನಿಜವಾಗಿ ವಾಸ್ತವಿಕ ನೆಲೆಗಟ್ಟಿನ ಚಿಂತನೆ. ಎಲ್ಲ ಕೃಷಿ ಪದಾರ್ಥಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿ ಕೊಡುವುದರಿಂದ ಮುಂದೆ ರೈತರು ಅತಂತ್ರರಾಗಿಯೇ ಆಗುತ್ತಾರೆ, ಕನಿಷ್ಠ ಬೆಂಬಲ ಬೆಲೆ ಮರೀಚಿಕೆ ಆಗಿಯೇ ಆಗುತ್ತದೆ. ಈಗಿನ ರೈತ ಪ್ರತಿಭಟನೆಯ ಬಿಕ್ಕಟ್ಟಿಗೆ ಪರಿಹಾರ ಬೇಕಾದರೆ ಒಂದೋ ಸರಕಾರ ಬೇಗ ಕೆಡುವ ಪದಾರ್ಥಗಳನ್ನಷ್ಟೇ ಎಪಿಎಂಸಿ ವ್ಯವಸ್ಥೆಯಿಂದ ಹೊರಗಿಡುವ ತೀರ್ಮಾನಕ್ಕೆ ಬರಬೇಕು ಅಥವಾ ಬೇಗ ಕೆಡುವ ಪದಾರ್ಥಗಳನ್ನು ಶೇಖರಿಸಲು ಅಗತ್ಯ ಇರುವ ಕೋಲ್ಡ್‌ ಸ್ಟೋರೇಜ್‌, ತುರ್ತು ಸಾಗಾಟ ವ್ಯವಸ್ಥೆಯನ್ನು ಎಪಿಎಂಸಿಗಳ ಮೂಲಕವೇ ಕಲ್ಪಿಸಲು ಸರಕಾರ ಮುಂದಾಗಬೇಕು. ಅದಿಲ್ಲ ಅಂದರೆ ಈಗ ಉಂಟಾಗಿರುವ ಕಗ್ಗಂಟನ್ನು ಬಿಡಿಸಲು ಸಾಧ್ಯವಿಲ್ಲ. ಹಾಗೆ ಮಾಡುವ ಮುನ್ನ ಎಲ್ಲ ರೀತಿಯ ಪ್ರತಿಷ್ಠೆಯೆಂಬ ಸೈದ್ಧಾಂತಿಕ ನಿಲುವನ್ನು ಬದಿಗಿಟ್ಟು ಸರಕಾರ ತನ್ನ ನೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಲು ಮುಂದಾಗಲೇ ಬೇಕಾಗುತ್ತದೆ.
ಹಾಗೆಯೇ ಈಗ ಲವ್‌ ಜಿಹಾದ್‌ ತಡೆ ಮತ್ತು ಗೋಹತ್ಯೆ ನಿಷೇಧ ಕಾಯಿದೆಗಳ ಕುರಿತು ನಡೆಯುತ್ತಿರುವ ಚರ್ಚೆಯನ್ನೂ ಇದೇ ನಿಟ್ಟಿನಲ್ಲಿ ನೋಡೋಣ. ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಲವ್‌ ಜಿಹಾದ್‌ ತಡೆ ಕಾಯಿದೆಯನ್ನು ಹೇಗೆ ರೂಪಿಸಲು ಸಾಧ್ಯ ಎಂಬುದನ್ನು ಪ್ರತ್ಯೇಕವಾಗಿ ಚರ್ಚೆ ಮಾಡಬೇಕಾಗುತ್ತದೆ. ಅದಕ್ಕೆ ಹೊರತಾಗಿ ಇತ್ತೀಚೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಜಾರಿಗೆ ತಂದಿರುವ ಹಾಗೂ ಕರ್ನಾಟಕದ ಬಿಜೆಪಿ ಸರಕಾರ ಜಾರಿಗೆ ತರಲು ಹೊರಟಿರುವ ಗೋ ಹತ್ಯೆ ತಡೆ ಕಾಯಿದೆ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇಲ್ಲಿ ನಾವು ಗಮನಿಸಬೇಕಾದ ಎರಡು ಪ್ರಮುಖ ಸಂಗತಿಗಳಿವೆ. ಒಂದು, ಈ ಹಿಂದೆ ಐವತ್ತು ಅರವತ್ತು ವರ್ಷಗಳಿಂದ ಜಾರಿಯಲ್ಲಿರುವ ಗೋ ಸಂರಕ್ಷ ಣಾ ಕಾಯಿದೆಗೂ ಈಗ ಜಾರಿಗೆ ಮುಂದಾಗಿರುವ ಪ್ರಸ್ತಾವಿತ ಕಾಯಿದೆಗೂ ಬಹಳ ವ್ಯತ್ಯಾಸ ಏನು ಎಂಬುದನ್ನು ನೋಡೋಣ. ಹೊಸ ಕಾಯಿದೆ ಗೋವುಗಳ ಹತ್ಯೆಯನ್ನು ಸಂಪೂರ್ಣ ನಿಷೇಧಿಸಿದೆ. ಹಳೆ ಕಾಯಿದೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಹಸುವನ್ನು ಕಡಿಯಬಹುದಾಗಿತ್ತು. ಅಕ್ರಮ ಗೋ ಸಾಗಾಟಕ್ಕೆ 3 ವರ್ಷ ಶಿಕ್ಷೆ ಇತ್ತು, ಅದೀಗ ಏಳು ವರ್ಷ ಆಗಿದೆ. ದಂಡದ ಮೊತ್ತದಲ್ಲಿ ತುಸು ವ್ಯತ್ಯಾಸ ಆಗಿದೆ ಅಷ್ಟೆ. ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ ಗೋಸಂರಕ್ಷ ಕರಿಗೆ ತುಸು ಹೆಚ್ಚು ಕಾನೂನು ರಕ್ಷ ಣೆಯನ್ನು ಪ್ರಸ್ತಾಪ ಮಾಡಲಾಗಿದೆ. ನನ್ನ ದೃಷ್ಟಿಯಲ್ಲಿ ಇಂತಹ ಕಾಯಿದೆಗಳಿಂದ ಗೋ ಸಂರಕ್ಷ ಣೆ ಆಗಲು ಸಾಧ್ಯವಿಲ್ಲ. ಅಳಿವಿನಂಚಿನಲ್ಲಿರುವ ಗೋ ತಳಿಗಳ ಸಂರಕ್ಷ ಣೆ, ಸಂವರ್ಧನೆ ಸಾಧ್ಯವಿಲ್ಲ. ಗೋ ಸಂರಕ್ಷ ಣೆ ಆಗಲೇಬೇಕು. ಅದರಲ್ಲಿ ಎರಡನೇ ಮಾತಿಲ್ಲ.
ಈ ಹೊತ್ತಲ್ಲಿ ಮೈಸೂರು ಮಹಾರಾಜರು ನೆನಪಾಗುತ್ತಾರೆ. ನೂರು ಕಿ. ಮೀ. ದೂರವನ್ನು ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳದೆ ನಡೆಯುವ ಹಾಗೂ ಗುಣಮಟ್ಟದ ಹಾಲು ನೀಡುವ ಅಮೃತಮಹಲ್‌ ದೇಸಿ ತಳಿಯ ರಾಸುಗಳನ್ನು ಸಂರಕ್ಷ ಣೆ ಮಾಡುವುದಕ್ಕಾಗಿಯೇ, ಮಹಾರಾಜರು ಕಾವಲ್‌ ಪ್ರದೇಶಗಳನ್ನು ಗುರುತಿಸಿದ್ದರು. ಈ ವಿಶಿಷ್ಟ ತಳಿಯ ರಾಸುಗಳಿಗಾಗಿ ರಕ್ಷ ಣೆಗೊಳಗಾದ ನೈಸರ್ಗಿಕ ಹುಲ್ಲುಗಾವಲು ಪ್ರದೇಶಗಳೇ ಅಮೃತ ಮಹಲ್‌ ಕಾವಲುಗಳು. ರಾಜ್ಯದಲ್ಲಿ ಇಂಥಾ 4 ಲಕ್ಷ ಎಕರೆ ಕಾವಲ್‌ ಪ್ರದೇಶಗಳನ್ನು ಮಹಾರಾಜರು ಹುಲ್ಲಿಗಾಗಿ ಮೀಸಲಿಟ್ಟಿದ್ದರು! ಈಗ ಎಲ್ಲ ಕಾವಲ್‌ಗಳು ಅತಿಕ್ರಮಣಕ್ಕೆ ಒಳಗಾಗಿವೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅಮೃತ ಮಹಲ್‌ ಕಾವಲ್‌ ಹೆಸರಿಗಷ್ಟೇ ಜೀವಂತವಾಗಿದೆ. ಗೋವುಗಳ ಸಂರಕ್ಷ ಣೆ, ಗೋ ಪ್ರೀತಿ ಎಂದರೆ, ಇಂಥಾ ಕೆಲಸಗಳು ಆಗಬೇಕಿದೆಯೇ ಹೊರತು, ವಿಧಾನಸಭೆಯಲ್ಲಿ ಕೇಸರಿ ಶಾಲು ಹಾಕಿಕೊಳ್ಳುವ ಪ್ರದರ್ಶನವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾವಲ್‌ ಎಂದು ನೂರಾರು ಎಕರೆ ಭೂಮಿಯನ್ನು ಮೀಸಲಿಡಲು ಸಾಧ್ಯವಿಲ್ಲದಿದ್ದರೂ, ರಚನಾತ್ಮಕವಾಗಿ ಹಾಗೂ ಪ್ರಾಮಾಣಿಕವಾಗಿ ಆಲೋಚನೆ ಮಾಡಿದರೆ, ಏನಾದರೂ ಹೊಳೆದೀತು.
ಯಂತ್ರೋಪಕರಣಗಳ ಕಾರಣಕ್ಕೆ, ನಗರಗಳಿಗೆ ವಲಸೆ ಕಾರಣಕ್ಕೆ, ಮೇವಿನ ಕೊರತೆ ಕಾರಣಕ್ಕೆ ಪಾಲನೆ ಮಾಡಲಾಗದ ಗೋವುಗಳನ್ನು ಸಾಕಲು, ಅಳಿವಿನಂಚಿನಲ್ಲಿರುವ ತಳಿ ಸಂರಕ್ಷ ಣೆ ಮಾಡಲು ಸರಕಾರವೇ ಜಿಲ್ಲೆಗೊಂದು ಗೋ ಶಾಲೆ ತೆರೆಯಬೇಕು. ಅದಿಲ್ಲ ಎಂದಾದರೆ ಬಿಜೆಪಿ ತನ್ನ ಸಂಘಟನೆ ಮೂಲಕ, ಪ್ರಮುಖ ಕಾರ್ಯಕರ್ತರ ಮೂಲಕ ಗೋಶಾಲೆ ತೆರೆಯಲು ಮುಂದಾಗಬೇಕು. ಖಾಸಗಿಯಾಗಿ ಗೋಶಾಲೆ ನಡೆಸುವವರಿಗೆ ಪ್ರೇರಣೆ, ಪ್ರೋತ್ಸಾಹ ನೆರವು ನೀಡಲು ಮುಂದಾಗಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ಇದು ಕೇವಲ ಭಾವನಾತ್ಮಕ ವಿಷಯ ಆಗಬಾರದು. ಬದಲಾಗಿ ಇದೊಂದು ವ್ಯಾವಹಾರಿಕ ವಿಷಯ ಮತ್ತು ಸಮಸ್ಯೆ, ಅದಕ್ಕೆ ವ್ಯಾವಹಾರಿಕವಾಗಿ ಪರಿಹಾರ ಕಂಡುಕೊಳ್ಳಬೇಕೇ ಹೊರತು ಭಾವನಾತ್ಮಕ ಮಾರ್ಗಗಳಿಂದಲ್ಲ.
ಅತಿ ಮುಖ್ಯವಾಗಿ ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿರುವುದರಿಂದ ಸರಕಾರದ ರೀತಿ ನೀತಿಗಳು ಪ್ರಜೆಗಳನ್ನು ಒಳಗೊಳ್ಳುವ ಸಂವಾದ, ಸಂವಹನ, ಸಂಪರ್ಕದ ಮಾಧ್ಯಮಗಳಲ್ಲೇ ಆಗಬೇಕೆ ವಿನಃ ಕಾಯಿದೆ, ಕಾನೂನು, ಸುಗ್ರೀವಾಜ್ಞೆಗಳ ಮುಖೇನ ಅಲ್ಲ. ಉದಾಹರಣೆಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದತಿ ಭಾವನಾತ್ಮಕ ಅಥವಾ ಧಾರ್ಮಿಕ ವಿಷಯವಲ್ಲ, ಅದೊಂದು ಆಡಳಿತಾತ್ಮಕವಾಗಿ ಅತ್ಯಗತ್ಯವಾದ ಕೆಲಸ. ದೇಶದ ಏಕತೆ, ಸಮಗ್ರತೆ, ಸೇನೆಗೆ ಸಂಬಂಧಿಸಿದ ವಿಷಯ. ಅದೇ ರೀತಿ ಸಿಎಎ ಮತ್ತು ಎನ್‌ಆರ್‌ಸಿ ಕೂಡ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಸುಲಭದಲ್ಲಿ ರದ್ದು ಮಾಡಿದ ಜೋಷ್‌ನಲ್ಲಿದ್ದ ಕೇಂದ್ರ ಸರಕಾರ ತರಾತುರಿಯಲ್ಲಿ ಸಿಎಎ ರದ್ದತಿ ಮತ್ತು ಎನ್‌ಆರ್‌ಸಿ ಜಾರಿಗೆ ಮುಂದಾಗಿ ಕೈ ಸುಟ್ಟುಕೊಂಡಿತು. ಸಂವಾದ, ಸಂಪರ್ಕ ಮತ್ತು ಸಂವಹನದ ಕೊರತೆಯಿಂದ ಒಂದು ಉತ್ತಮ ಉದ್ದೇಶ ಸೋಲಬೇಕಾಗಿ ಬಂತು. ಈಗ ನಡೆಯುತ್ತಿರುವ ಗೋಹತ್ಯೆ ತಡೆ ವಿಧೇಯಕವೂ ಅಷ್ಟೆ, ಗೋಹತ್ಯೆ ತಡೆ ಕಾನೂನಿಗಿಂತಲೂ ಗೋ ಸಂರಕ್ಷ ಣೆಗೆ ಬೇಕಾದ ಆಡಳಿತಾತ್ಮಕ ಬದ್ಧತೆ ತೋರಿದ್ದರೆ ಹೆಚ್ಚು ಪ್ರಯೋಜನ ಮತ್ತು ಪರಿಣಾಮಕಾರಿ ಆಗುತ್ತಿತ್ತು. ಗೋಹತ್ಯೆ ತಡೆ ಕಾರ್ಯಕ್ರಮ ಪ್ರತ್ಯಕ್ಷ ವಾಗಿ ಕೃಷಿಗೆ, ಜನಜೀವನಕ್ಕೆ, ಆರ್ಥಿಕತೆಗೆ, ಉದ್ಯಮಕ್ಕೆ ಮತ್ತು ಪರೋಕ್ಷ ವಾಗಿ ಭಾವನೆಗೆ ಸಂಬಂಧಿಸಿದ್ದು. ಇಲ್ಲಿ ಕೇಸರಿ ಶಾಲಿಗೆ ಆಸ್ಪದ ಎಲ್ಲಿ? ಆದರೆ ಈಗ ನೋಡಿದರೆ ಪ್ರಯೋಜನಕ್ಕಿಂತಲೂ ವಿವಾದಗಳ ವಿಷಯದಲ್ಲೇ ಹೆಚ್ಚು ಆಸಕ್ತಿ ಇದ್ದಂತೆ ತೋರುತ್ತಿದೆ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ವಿವಾದಗಳಿಂದ ಸಾಧಿಸಲಾಗದ್ದನ್ನು ವಿವೇಚನೆಯಿಂದ ಸಾಧಿಸಬಹುದು. ಎಲ್ಲ ವಿಚಾರಗಳಲ್ಲೂ ಕಾಲ ಕಾಲಕ್ಕೆ ವೈಚಾರಿಕ, ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಸುಧಾರಣೆ ಆಗಲೇಬೇಕು. ಅದಕ್ಕೆ ಬೆನ್ನು ಹಾಕುವುದು, ವಿರೋಧಿಸುವುದು ಎರಡೂ ಸರಿಯಲ್ಲ. ಸಂಬಂಧಪಟ್ಟವರು ಆಲೋಚನೆ ಮಾಡಬೇಕು.
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top