– ಡಿ ಜೀವಸತ್ವ ಕಡಿಮೆಯಾದರೆ ಸೋಂಕಿನ ಹಾವಳಿ, ಹೆಚ್ಚಾದರೆ ಪ್ರತಿರೋಧದ ಸುಂಟರಗಾಳಿ.
– ಸುಧೀಂದ್ರ ಹಾಲ್ದೊಡ್ಡೇರಿ.
ಕೋವಿಡ್-19 ಹಾವಳಿ ಕುರಿತಂತೆ ಜಗತ್ತಿನಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಜರುಗುತ್ತಿರುವುದು ನಿಮಗೆ ಗೊತ್ತು. ಅಮೆರಿಕದ ಇಲಿನಾಯ್ಸ್‌ನಲ್ಲಿರುವ ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿಯ ವೈದ್ಯ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಕೋವಿಡ್-19 ಸೋಂಕಿನಿಂದ ಹೆಚ್ಚು ನಲುಗಿದ ದೇಶಗಳಾದ ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಇರಾನ್, ಸೌತ್‌ಕೊರಿಯ, ಸ್ಪೇನ್, ಸ್ವಿಝರ್‌ಲೆಂಡ್, ಬ್ರಿಟನ್ ಹಾಗೂ ಅಮೆರಿಕವನ್ನು ಆಯ್ದುಕೊಂಡರು. ಈ ಎಲ್ಲ ದೇಶಗಳಲ್ಲಿ ಸೋಂಕಿನಿಂದ ಸತ್ತವರ ಆಸ್ಪತ್ರೆ ದಾಖಲೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು. ಆದರೆ ಈ ಸಾವುಗಳ ನಡುವೆ ಯಾವುದೇ ಒಂದು ಗುರುತರ ಚಹರೆ ಅವರ ಕಣ್ಣಿಗೆ ಬೀಳಲಿಲ್ಲ. ಸೋಂಕಿನ ಆರಂಭದ ದಿನಗಳಲ್ಲಿ ಇಳಿವಯಸ್ಸಿನಿಂದಾಗಿ ಸಾವುಗಳಾಗುತ್ತವೆ ಎಂಬ ವರದಿಗಳು ಬಂದವು. ನಂತರದ ದಿನಗಳಲ್ಲಿ ಅದು ವೈದ್ಯಕೀಯ ಸೇವೆಯ ಗುಣಮಟ್ಟದ ಲೋಪಗಳಿಂದ ಸಾವುಗಳಾಗುತ್ತಿರಬಹುದೆಂದು ಊಹೆ ಮಾಡಲಾಗಿತ್ತು. ಸೋಂಕು ಗುರುತಿಸಲು ನಡೆಸುತ್ತಿರುವ ಪರೀಕ್ಷೆಗಳ ಸಂಖ್ಯೆ ಕಡಿಮೆಯಿರುವುದರಿಂದಲೂ ಸಾವಿನ ಸಂಖ್ಯೆ ಹೆಚ್ಚುತ್ತಿರಬಹುದೆಂದು ದೂರಲಾಗಿತ್ತು. ಹಾಗೆಯೇ ಪರೀಕ್ಷೆಯಲ್ಲಿ ತಾಳೆ ನೋಡಲು ಆಯ್ಕೆ ಮಾಡಿಕೊಂಡ ವೈರಸ್ ಮಾದರಿಗಳ ಸಂಖ್ಯೆ ಕಡಿಮೆಯಿರುವುದೂ ಸಾವುಗಳು ಹೆಚ್ಚಾಗಲು ಕಾರಣವೆಂದು ದೂಷಿಸಲಾಗಿತ್ತು. ಆದರೆ ಇಂಥ ಯಾವುದೇ ಒಂದು ನಿರ್ದಿಷ್ಟ ಮಾದರಿಯ ಲೋಪದೋಷಗಳಿಗೂ ಸಾವಿನ ಸಂಖ್ಯೆಗೂ ಸಂಬಂಧ ಕಲ್ಪಿಸಲು ಸಂಶೋಧಕರಿಗೆ ಸಾಧ್ಯವಾಗುತ್ತಿಲ್ಲ. ಹಾಗಿದ್ದರೆ ಕೋವಿಡ್-19 ಸೋಂಕಿನಿಂದ ಸಾವಿಗೀಡಾಗಲು ಮತ್ತೇನಾದರೂ ಕಾರಣವಿರಬಹುದೆಂಬ ಅನುಮಾನ ಸಂಶೋಧನಾ ತಂಡದ ಮುಖ್ಯಸ್ಥರಾದ ಪ್ರೊ.ವ್ಯಾಡಿಮ್ ಬ್ಯಾಕ್‌ಮನ್ ಅವರದಾಗಿತ್ತು. ಬಯೋಮೆಡಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪರಿಣತರಾದ ಬ್ಯಾಕ್‌ಮನ್ ಅವರು ‘ಡಿ’ ಜೀವಸತ್ವದ ವಿವಿಧ ಪರಿಣಾಮಗಳನ್ನು ಕುರಿತಂತೆ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿದವರು. ಇತ್ತೀಚಿನ ಕೋವಿಡ್-19ರ ಸೋಂಕಿನಿಂದ ಸಾವಿಗೀಡಾದವರ ಮೇಲೆ ‘ಡಿ’ ಜೀವಸತ್ವ ಪರಿಣಾಮ ಬೀರಿತ್ತೆ ಎಂಬ ಕುತೂಹಲದಿಂದ ಅವರು ವಿಶಿಷ್ಟ ಅಧ್ಯಯನವೊಂದನ್ನು ನಡೆಸಿದರು. ಈ ಸೋಂಕಿನಿಂದಾಗಿ ಸತ್ತವರಲ್ಲಿ ‘ಡಿ’ ಜೀವಸತ್ವದ ಪ್ರಮಾಣವನ್ನು ತಿಳಿಯಲು ಅವರು ಸಾರ್ವಜನಿಕವಾಗಿ ಲಭ್ಯವಿರುವ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದರು. ಅಚ್ಚರಿಯೆಂಬಂತೆ ಇಟಲಿ, ಸ್ಪೇನ್ ಹಾಗೂ ಬ್ರಿಟನ್ ದೇಶದ ಬಹುಪಾಲು ಸೋಂಕಿತರ ದೇಹದಲ್ಲಿ ‘ಡಿ’ ಜೀವಸತ್ವದ ಪ್ರಮಾಣ ಅತ್ಯಂತ ಕಡಿಮೆಯಿರುವುದು ಅವರ ಗಮನಕ್ಕೆ ಬಂದಿತು. ಇದೇ ಬಗೆಯ ಚಹರೆ ಉಳಿದ ರಾಷ್ಟ್ರಗಳ ಸೋಂಕಿತರ ದಾಖಲೆಗಳಲ್ಲಿ ಕಾಣಲಿಲ್ಲ. ಸೋಂಕಿಗೆ ಬಲಿಯಾದವರಲ್ಲಿ ‘ಡಿ’ ಜೀವಸತ್ವದ ಕೊರತೆಯಿತ್ತೆಂಬ ಸುಳಿವಿನ ಜಾಡು ಹಿಡಿದು ಅಧ್ಯಯನವನ್ನು ಮುಂದುವರಿಸಿದ ಬ್ಯಾಕ್‌ಮನ್ ಅವರ ತಂಡಕ್ಕೆ ಅಚ್ಚರಿಯೊಂದು ಕಾದಿತ್ತು. ‘ಡಿ’ ಜೀವಸತ್ವ ಕೊರತೆಯಿರದವರಲ್ಲಿ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುವ ಸುರಕ್ಷಾ ವ್ಯವಸ್ಥೆ ಸದೃಢವಾಗಿತ್ತು. ಅಂತೆಯೇ ಸೋಂಕು ತಗುಲಿದರೂ ಅವರು ಸಾವಿಗೀಡಾಗುವ ಸಾಧ್ಯತೆ ಕಡಿಮೆಯಿತ್ತು. ಕೋವಿಡ್-19 ಸೋಂಕಿತರಲ್ಲಿ ಕೆಲವರಿಗೆ ಸುರಕ್ಷಾ ವ್ಯವಸ್ಥೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಕಾರ್ಯನಿರ್ವಹಿಸಿದ ನಿದರ್ಶನಗಳಿವೆ. ಇಂಥ ವಿಪರೀತ ಚಟುವಟಿಕೆಯಿಂದ ದೇಹವು ಹೆಚ್ಚಿನ ಪ್ರಮಾಣದಲ್ಲಿ ‘ಸೈಟೋಕೈನ್’ ಎಂಬ ಜೀವರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ವೈದ್ಯವಿಜ್ಞಾನಿಗಳು ಈ ಪ್ರಕ್ರಿಯೆಯನ್ನು ದೇಹದೊಳಗೆದ್ದ ‘ಸೈಟೋಕೈನ್ ಸುಂಟರಗಾಳಿ’ ಎಂದು ಗುರುತಿಸುತ್ತಾರೆ. ಇಂಥ ಸೈಟೋಕೈನ್ ಭೋರ್ಗರೆತದಿಂದ ಜೀವಕೋಶಗಳು ತಮ್ಮ ಎಂದಿನ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಆಗ ಆ ಸ್ಥಳಗಳಲ್ಲಿ ಉರಿಯೂತಗಳಾಗಬಹುದು. ಉರಿಯೂತಗಳು ಹೆಚ್ಚಾಗಿ ಕೆಲವೊಮ್ಮೆ (ಅಪರೂಪದಲ್ಲಿ ಅಪರೂಪ) ಅಲ್ಲಿನ ಅಂಗಗಳು ನಿಷ್ಕ್ರಿಯವಾಗಬಹುದು. ಶ್ವಾಸಕೋಶ, ಹೃದಯ, ಮೂತ್ರಪಿಂಡಗಳಂಥ ದೇಹದ ಪ್ರಮುಖ ಅಂಗವೊಂದರಲ್ಲಿ ಇಂಥ ಉರಿಯೂತವಾಗಿದ್ದಲ್ಲಿ ಸೋಂಕಿತರು ಸಾವಿಗೀಡಾಗಬಹುದು. ಬ್ಯಾಕ್‌ಮನ್ ಅವರ ತಂಡವು ಈ ವಿಷಯದ ಬಗ್ಗೆಯೂ ಅಧ್ಯಯನ ನಡೆಸಿದೆ. ಅದರ ಪ್ರಕಾರ, ‘ಡಿ’ ಜೀವಸತ್ವ ಅಗತ್ಯ ಪ್ರಮಾಣದಲ್ಲಿರುವವರ ದೇಹದಲ್ಲಿ ಸುರಕ್ಷಾ ವ್ಯವಸ್ಥೆಯ ಚಟುವಟಿಕೆಗಳು ವಿಪರೀತದ ಹಂತದಲ್ಲಿರುವುದಿಲ್ಲ. ಅಂದರೆ ಅವರ ದೇಹದೊಳಗೆ ‘ಸೈಟೋಕೈನ್ ಸುಂಟರಗಾಳಿ’ಯೇಳುವ ಸಾಧ್ಯತೆಗಳು ಕಡಿಮೆ. ಈ ನಿಟ್ಟಿನಲ್ಲಿಯೂ ಕೋವಿಡ್-19ರ ಸೋಂಕಿತರು ‘ಡಿ’ ಜೀವಸತ್ವದ ಹಾಜರಿಯಿಂದ ಹೆಚ್ಚು ಸುರಕ್ಷವಾಗಿರುತ್ತಾರೆ. ನಿಮಗೆ ಗೊತ್ತಿರುವಂತೆ ಕೋವಿಡ್-19 ಸೋಂಕಿಗೆ ಬಲಿಯಾದವರಲ್ಲಿ ಅಮೆರಿಕ ಹಾಗೂ ಕೆಲವು ಯುರೋಪಿಯನ್ ದೇಶಗಳ ಜನರ ಸಂಖ್ಯೆ ಹೆಚ್ಚು. ಈ ಪ್ರದೇಶದಲ್ಲಿ ವಾಸಿಸುವವರು ವರ್ಷದಲ್ಲಿ ಹೆಚ್ಚಿನ ಕಾಲ ಬಿಸಿಲು ಕಾಣುವುದಿಲ್ಲ. ಅಂತೆಯೇ ಇವರಲ್ಲ ನೇಕರಿಗೆ ‘ಡಿ’ ಜೀವಸತ್ವದ ಕೊರತೆಯಿರುವುದು ಸಾಮಾನ್ಯ. ಅಲ್ಲಿನ ಜನರು ಗುಳಿಗೆಗಳ ರೂಪದಲ್ಲಿ ‘ಡಿ’ ಜೀವಸತ್ವವನ್ನು ಸೇವಿಸಿ ದೇಹದಲ್ಲಿ ಅದರ ಸಮತೋಲವನ್ನು ಕಾಪಾಡಿಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ರಕ್ತ ಮಾದರಿ ಪರೀಕ್ಷೆಯ ಮೂಲಕ ದೇಹದೊಳಗೆ ‘ಡಿ’ ಜೀವಸತ್ವದ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಿದೆಯೆ ಎಂಬುದನ್ನು ತಿಳಿಯಬಹುದು. ಆದರೆ ಎಲ್ಲ ಜನರೂ ಇಂಥ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಂಡಿರಬಹುದು. ಅರಿವಿಗೆ ಬರದೇ ತಮ್ಮ ದೇಹದಲ್ಲಿ ಕಡಿಮೆ ಪ್ರಮಾಣದ ‘ಡಿ’ ಜೀವಸತ್ವ ಹೊಂದಿರುವವರಿಗೆ ಕೋವಿಡ್-19 ಸೋಂಕು ಬಂದಲ್ಲಿ ಅದು ಮಾರಣಾಂತಿಕವಾಗಬಹುದು. ಇದು ನಾರ್ಥ್‌ವೆಸ್ಟರ್ನ್ ಯೂನಿವರ್ಸಿಟಿಯ ಸಂಶೋಧಕರ ಸದ್ಯದ ಅಭಿಪ್ರಾಯ. ಬಿಸಿಲು ಹೆಚ್ಚಾಗಿ ಬೀಳುವ ನಮ್ಮಂಥ ದೇಶಗಳ ಜನರಿಗೆ ಮನೆಯಿಂದ ಆಚೆ ಅಡ್ಡಾಡುವ ಹವ್ಯಾಸವೂ ಹೆಚ್ಚು. ಆದ್ದರಿಂದ ನಮ್ಮ ಬಹುತೇಕ ಮಂದಿಗೆ ‘ಡಿ’ ಜೀವಸತ್ವದ ಕೊರತೆ ಇರುವುದಿಲ್ಲ. ಆದರೆ ಪ್ರಸ್ತುತ ಲಾಕ್‌ಡೌನ್ ಸಂದರ್ಭದಲ್ಲಿ ತಿಂಗಳುಗಟ್ಟಲೆ ಮನೆಯಲ್ಲೇ ಕುಳಿತವರು, ಬಿಸಿಲಿನ ಸಂಪರ್ಕವನ್ನು ಬಹುಮಟ್ಟಿಗೆ ಕಡಿದುಕೊಂಡಿರಬಹುದು. ಅಂಥವರ ದೇಹದಲ್ಲಿ ‘ಡಿ’ ಜೀವಸತ್ವದ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆಯಿದೆ. ಈ ಹಿಂದೆ ನಾವು ಶಾಲಾ ಪಠ್ಯಪುಸ್ತಕಗಳನ್ನು ಓದುತ್ತಿರುವಾಗ ‘ಡಿ’ ಜೀವಸತ್ವದ ಮಹತ್ವವನ್ನು ಸ್ವಲ್ಪಮಟ್ಟಿಗೆ ಅರಿತಿರುತ್ತೇವೆ. ದೇಹದೊಳಗಿನ ಕ್ಯಾಲ್ಶಿಯಂ ಸಮತೋಲನವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಆ ಮೂಲಕ ನಮ್ಮ ಮೂಳೆ ಹಾಗೂ ಹಲ್ಲುಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರಿಂದ ‘ಡಿ’ ಜೀವಸತ್ವವು ನಮಗೆ ಅತ್ಯಗತ್ಯ. ಹಾಗೆಯೇ ಬಿಸಿಲಿಗೆ ಒಡ್ಡಿಕೊಂಡಾಗ ನಮ್ಮ ಚರ್ಮದಲ್ಲಿಡಿ ಜೀವಸತ್ವವು ಸ್ವಾಭಾವಿಕವಾಗಿ ಉತ್ಪಾದನೆಯಾಗುತ್ತದೆ. ಹಾಗೆಂದ ಮಾತ್ರಕ್ಕೆ ಈ ಪ್ರಕ್ರಿಯೆ ಅಷ್ಟು ಸರಳವಲ್ಲ, ಹಾಗೆಯೇ ಇದು ಎಲ್ಲರ ದೇಹದಲ್ಲಿಯೂ ಒಂದೇ ಬಗೆಯದಾಗಿರುವುದಿಲ್ಲ. ಸೂರ್ಯನ ಬೆಳಕಿನಲ್ಲಿ ನಮ್ಮ ಚರ್ಮವನ್ನು ಬಾಧಿಸುವ ಅತಿ-ನೇರಿಳೆ (ಅಲ್ಟ್ರಾ ವಯಲೆಟ್- ಯುವಿ) ಕಿರಣಗಳಿರುವುದು ನಿಮಗೆ ಗೊತ್ತು. ಈ ಕಿರಣಗಳಲ್ಲಿ ಎರಡು ಭಾಗಗಳಿರುತ್ತವೆ, ಒಂದು ಯುವಿ-ಎ, ಮತ್ತೊಂದು ಯುವಿ-ಬಿ. ನಮಗೆ ತಲುಪುವ ಯುವಿ ಕಿರಣಗಳಲ್ಲಿ 95ರಷ್ಟು ಭಾಗ ಯುವಿ-ಎ, ಉಳಿದೈದು ಭಾಗ ಯುವಿ-ಬಿ. ಯುವಿ-ಎ ಕಿರಣಗಳು ಮೋಡಗಳನ್ನು ಹಾಗೂ ನಮ್ಮ ಕಿಟಕಿಯ ಗಾಜುಗಳನ್ನೂ ದಾಟಿ ನಮ್ಮ ಚರ್ಮವನ್ನು ಸೋಕಬಲ್ಲವು. ಆದರೆ ಯುವಿ-ಬಿ ಕಿರಣಗಳಿಗೆ ಅಂಥ ಸಾಮರ್ಥ್ಯವಿಲ್ಲ. ಯುವಿ-ಎ ಕಿರಣಗಳ ತರಂಗಾಂತರ ದೊಡ್ಡದು, ಯುವಿ-ಬಿ ಕಿರಣಗಳ ತರಂಗಾಂತರ ಚಿಕ್ಕದು. ಇವೆರಡೂ ಬಗೆಯ ಯುವಿ ಕಿರಣಗಳು ನಮ್ಮ ಚರ್ಮವನ್ನು ಕಪ್ಪಾಗಿಸಬಲ್ಲವು. ಹಾಗೆಯೇ ಇವುಗಳ ದೀರ್ಘಕಾಲೀನ ಸಂಪರ್ಕದಿಂದ ಚರ್ಮದ ಕ್ಯಾನ್ಸರ್ ಕೂಡಾ ಬರಬಹುದು. ಆದರೆ ಈ ಯುವಿ-ಬಿ ಕಿರಣಗಳಿಗೆ ನಮ್ಮ ಚರ್ಮದಲ್ಲಿ ‘ಡಿ’ ಜೀವಸತ್ವವನ್ನು ಉತ್ಪಾದಿಸಬಲ್ಲ ಒಂದು ಒಳ್ಳೆಯ ಗುಣವಿದೆ. ಅದರಿಂದಾಗಿ ನಾವು ಸೇವಿಸುವ ಆಹಾರದೊಳಗಿನ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ (ರಂಜಕ) ಖನಿಜಾಂಶಗಳನ್ನು ಹೀರಿಕೊಳ್ಳುವ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಅಂತೆಯೇ ನಮ್ಮ ಮೂಳೆ ಹಾಗೂ ಹಲ್ಲುಗಳು ಸದೃಢವಾಗುತ್ತದೆ. ‘ಡಿ’ ಜೀವಸತ್ವ ಕಡಿಮೆಯಿರುವವರಲ್ಲಿ ಮೂಳೆಗಳು ಬೇಗ ಸವೆಯುತ್ತವೆ, ಮೂಳೆಮುರಿತದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಉಸಿರಾಟಕ್ಕೆ ಸಂಬಂಧಿಸಿದ ಸೋಂಕುಗಳ ಹತೋಟಿಯಲ್ಲಿಯೂ ‘ಡಿ’ ಜೀವಸತ್ವವು ಮಹತ್ವದ ಪಾತ್ರ ವಹಿಸುತ್ತದೆಂದು ಕೆಲ ವೈದ್ಯಕೀಯ ವರದಿಗಳು ದೃಢಪಡಿಸಿವೆ. ಹಾಗೆಯೇ ಶ್ವಾಸಕೋಶದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ‘ಡಿ’ ಜೀವಸತ್ವ ನೆರವಾಗುತ್ತದೆಂಬ ಸುದ್ದಿಯೂ ಇದೆ. ಮತ್ತೊಂದು ಕುತೂಹಲಕರ ಸಂಗತಿಯೆಂದರೆ, ‘ಡಿ’ ಜೀವಸತ್ವವು ನಮ್ಮ ರಕ್ತದಲ್ಲಿ ಹರಿದಾಡುವ ಒಂದು ಬಗೆಯ ಕೊಬ್ಬಿನಂಶ. ನಿರ್ದಿಷ್ಟವಾದ ಪ್ರೊಟೀನ್ ಹೊತ್ತೊಯ್ಯುವ ಕಣಗಳಿಗೆ ಮಾತ್ರ ಇದು ಅಂಟಿಕೊಂಡಿರುತ್ತದೆ. ಅಂಗಾಂಶಗಳಲ್ಲಿ ವಿಪರೀತ ಉರಿಯೂತವಿರುವೆಡೆ ಈ ಪ್ರೊಟೀನ್ ಪ್ರಮಾಣ ಕಡಿಮೆಯಿರುತ್ತದೆ. ಇದನ್ನೇ ‘ಡಿ’ ಜೀವಸತ್ವದ ಕೊರತೆ ಎಂದು ಭಾವಿಸಬಹುದು. ಹಾಗಿದ್ದಲ್ಲಿ ‘ಡಿ’ ಜೀವಸತ್ವದ ಗುಳಿಗೆಗಳನ್ನು ನುಂಗಿ ದೇಹದೊಳಗೆ ಅದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದಲ್ಲವೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಬ್ಯಾಕ್‌ಮನ್ ಹೀಗೆಂದು ಉತ್ತರಿಸುತ್ತಾರೆ. ‘ಡಿ’ ಜೀವಸತ್ವವು ಕೋವಿಡ್-19 ಸೋಂಕು ತಗಲುವುದನ್ನುತಪ್ಪಿಸುವುದಿಲ್ಲ. ಆದರೆ, ಅದರ ವಿರುದ್ಧ ಹೋರಾಡಲು ನಿಮ್ಮ ದೇಹದ ಸ್ವಾಭಾವಿಕ ಸುರಕ್ಷಾ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತದೆ. ಆದರೆ ‘ಡಿ’ ಜೀವಸತ್ವವು ದೇಹದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಯೂ ಇರುತ್ತದೆ. ‘ಡಿ’ ಜೀವಸತ್ವ ಹೆಚ್ಚಿರುವವರಲ್ಲಿ ಕೆಲವರಿಗೆ ಮೂತ್ರಪಿಂಡ ಹಾನಿ, ಮೂಳೆಗಳ ನೋವು ಹಾಗೂ ಮೂತ್ರಪಿಂಡದಲ್ಲಿ ಕ್ಯಾಲ್ಶಿಯಂ ಹರಳುಗಳ ಶೇಖರಣೆಯಂಥ ತೊಂದರೆಗಳು ಎದುರಾಗಿವೆ. ಆದ್ದರಿಂದ ಪರಿಣತರ ನಿಗಾ ಇಲ್ಲದೆಡೆ, ‘ಡಿ’ ಜೀವಸತ್ವದ ಸ್ವಯಂ-ವೈದ್ಯ ಮಾಡಿಕೊಳ್ಳುವುದು ಅಪಾಯಕಾರಿ. ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳಲ್ಲಿ, ಕೋವಿಡ್-19 ಸೋಂಕಿನ ವಿರುದ್ಧ ಮಲೇರಿಯಾ ನಿವಾರಣೆಗೆಂದು ಬಳಸುವ ಮದ್ದು ‘ಹೈಡ್ರಾಕ್ಸಿಕ್ಲೋರೋಕ್ವಿನ್’ ಪರಿಣಾಮಕಾರಿಯಾಗಿದ್ದ ವಿಷಯ ನಿಮಗೆ ಗೊತ್ತಿರಬಹುದು. ಆದರೆ, ಇದೇ ಮದ್ದನ್ನು ಯಾವ ವೈದ್ಯಕೀಯ ನಿಗಾ ಇಲ್ಲದೆಯೇ ಸೇವಿಸಿದವರ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ. ಸದ್ಯಕ್ಕೆ ಕೋವಿಡ್-19 ಸೋಂಕಿತರ ಮೇಲೆ ಅದನ್ನು ಪ್ರಯೋಗಿಸಲು ಅವಕಾಶವಿಲ್ಲ. ಆದ್ದರಿಂದ ಕೋವಿಡ್-19 ಸೋಂಕಿನ ವಿರುದ್ಧ ವೈದ್ಯರ ಸಲಹೆಯಿಲ್ಲದೆಯೇ, ‘ಡಿ’ ಜೀವಸತ್ವ ಸೇರಿದಂತೆ ಯಾವ ಮದ್ದನ್ನೂ ನಾವು ಸ್ವತಃ ಸೇವಿಸಬಾರದು.