ಮಲ್ಯ ಗಡೀಪಾರು ಸನ್ನಿಹಿತ – ದೇಶ ಬಿಟ್ಟು ಹೋದವರಿಗೆ ಇದು ಪಾಠ

ಒಂದು ಕಾಲದಲ್ಲಿ ‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದು ಖ್ಯಾತನಾಗಿದ್ದ ‘ಮದ್ಯದ ದೊರೆ’ ವಿಜಯ ಮಲ್ಯ ಭಾರತೀಯ ಬ್ಯಾಂಕುಗಳಿಗೆ ಮೋಸ ಮಾಡಿ 2016ರಲ್ಲಿ ಬ್ರಿಟನ್‌ಗೆ ಪಲಾಯನ ಮಾಡಿದ್ದರು. ಅಂದಿನಿಂದಲೂ ಮಲ್ಯ ಅವರನ್ನು ವಾಪಸ್ ಭಾರತಕ್ಕೆ ಕರೆ ತರುವ ಪ್ರಯತ್ನವನ್ನು ಭಾರತ ಸರಕಾರ ಮಾಡುತ್ತಲೇ ಇದೆ. ಹಂತ ಹಂತವಾಗಿ ಕಾನೂನು ಹಾಗೂ ರಾಜತಾಂತ್ರಿಕ ಉಪಾಯಗಳ ಮೂಲಕ ಇದೀಗ ಮುಂದಿನ 28 ದಿನಗಳಲ್ಲಿ ಭಾರತೀಯ ಕೋರ್ಟು ಕಟಕಟೆಯಲ್ಲಿ ಮಲ್ಯ ನಿಲ್ಲಲಿದ್ದಾರೆ. ವಿಜಯ ಮಲ್ಯ ರೀತಿಯಲ್ಲೇ ಸುಸ್ತಿದಾರರಾಗಿ ದೇಶ ತೊರೆದಿರುವ ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಇನ್ನುಳಿದವರಿಗೂ ಮಲ್ಯ ಪ್ರಕರಣ ಪಾಠವಾಗಲಿದೆ ಮತ್ತು ಅವರೆಲ್ಲರನ್ನೂ ಭಾರತ ಸರಕಾರ ವಾಪಸ್ ತಾಯಿನಾಡಿಗೆ ಕರೆ ತಂದು ಶಿಕ್ಷೆ ಕೊಡಿಸುವ ಹೊಸ ಭರವಸೆ ಕಾಣಿಸುತ್ತಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿ ಹಲವು ಬ್ಯಾಂಕುಗಳಿಗೆ ವಿಜಯ ಮಲ್ಯ ಒಟ್ಟು 9000 ಕೋಟಿ ರೂ.ಗೂ ಅಧಿಕ ಸಾಲ ಬಾಕಿ ತೀರಿಸಬೇಕಿತ್ತು. ಆದರೆ, ಮಲ್ಯ ಸಾಲವನ್ನು ತೀರಿಸುವ ಯಾವುದೇ ಪ್ರಯತ್ನ ಮಾಡದೇ ಇರುವುದರಿಂದ ಬ್ಯಾಂಕುಗಳು ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿದವು. ಕಾನೂನು ಕುಣಿಕೆ ಎದುರಿಸುವ ಪರಿಸ್ಥಿತಿ ಉದ್ಭವವಾದ ಕೂಡಲೇ ಮಲ್ಯ ದೇಶ ತೊರೆದು ಲಂಡನ್ ಸೇರಿಕೊಂಡಿದ್ದರು. 2017ರಲ್ಲಿ ಲಂಡನ್ ಪೊಲೀಸರು ಮಲ್ಯರನ್ನು ಬಂಧಿಸಿದ್ದರು. ವಿಚಾರಣೆಗಳು ಮುಗಿದ ಬಳಿಕ ಕಳೆದ ವರ್ಷವೇ ಲಂಡನ್‌ನ ಕೋರ್ಟ್ ಮಲ್ಯ ಗಡೀಪಾರಿಗೆ ಸಮ್ಮತಿಸಿತ್ತು. ಜೊತೆಗೆ ಬ್ರಿಟನ್ ವಿದೇಶಾಂಗ ಸಚಿವಾಲಯ ಇದಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ವಿಜಯ ಮಲ್ಯ ಕಾನೂನು ಅವಕಾಶಗಳನ್ನು ಬಳಸಿಕೊಂಡು, ಲಂಡನ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅಲ್ಲಿ ಅವರಿಗೆ ಸೋಲಾಗಿದ್ದು, ಮಲ್ಯರನ್ನು ಕರೆತಂದು ವಿಚಾರಣೆಗೊಳಪಡಿಸಿ, ಸಾಲ ವಸೂಲಿ ಮಾಡುವ ಅವಕಾಶ ಭಾರತಕ್ಕಿದೆ.
ಹಾಗೆಯೇ, ಮಲ್ಯ ಎಸಗಿರುವ 9000 ಕೋಟಿ ರೂಪಾಯಿಗಳ ಹಗರಣಕ್ಕೆ ತಾರ್ಕಿಕ ಅಂತ್ಯ ನೀಡುವ ಕಾಲ ಸನ್ನಿಹಿತವಾಗಿದೆ. ಈ ಯಶಸ್ಸಿಗಾಗಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಅಭಿನಂದನೆ ಹೇಳಬೇಕು. ಇದು ದೇಶದ ರಾಜತಾಂತ್ರಿಕ ವಿಜಯವೂ ಹೌದು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದಾದ ಮಾತೆಂದರೆ, ಭಾರತದಲ್ಲಿ ದೊಡ್ಡಮೊತ್ತದ ಹಗರಣ ಎಸಗಿ ವಿದೇಶದಲ್ಲಿ ಬಚ್ಚಿಟ್ಟುಕೊಳ್ಳಲು ಹವಣಿಸುವ ದೊಡ್ಡ ಕುಳಗಳು ಇನ್ನು ಮುಂದೆ ಕಾನೂನು ಕ್ರಮವನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಹುಕೋಟಿ ಹಗರಣಗಳ ಆರೋಪಿಗಳು ಸುಲಭವಾಗಿ ನುಣುಚಿಕೊಳ್ಳುವ ಸಾಧ್ಯತೆಗಳು ಕ್ಷೀಣಗೊಳ್ಳುತ್ತಿವೆ. ಇಂಥ ದೊಡ್ಡ ಪ್ರಕರಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಭಾರತ ಸರಕಾರ ಕೂಡ ಪ್ರಭಾವವನ್ನು, ಭ್ರಷ್ಟಾಚಾರದ ವಿಚಾರದಲ್ಲಿ ತನ್ನ ಸ್ಪಷ್ಟ ಕಠಿಣ ನೀತಿಯನ್ನು ಜಗಜ್ಜಾಹೀರುಗೊಳಿಸಿದೆ. ಅಪರಾಧಿ ಎಷ್ಟೇ ಪ್ರಭಾವಿಯಾದರೂ ಬಿಡುವುದಿಲ್ಲ ಎಂಬ ಸಂದೇಶವನ್ನು ನೀಡಿದೆ. ವಿವಿಧ ಆರ್ಥಿಕ ಮತ್ತು ಕ್ರಿಮಿನಲ್ ಅಪರಾಧ ಎಸಗಿ ನಾನಾ ದೇಶಗಳಲ್ಲಿ ತಲೆ ಮರೆಸಿಕೊಂಡಿರುವವರನ್ನು ತನಿಖೆಯ ವ್ಯಾಪ್ತಿಗೆ ತರುವಲ್ಲಿ ಪರಸ್ಪರ ಸಹಕರಿಸಲು ಜಿ-20 ಶೃಂಗದಲ್ಲಿ ಪ್ರಧಾನಿ ಮೋದಿ ಮುಂದಿಟ್ಟಿದ್ದ ಪ್ರಸ್ತಾಪಕ್ಕೆ ವಿಶ್ವ ನಾಯಕರು ಸಮ್ಮತಿಸಿರುವುದನ್ನೂ ಇಲ್ಲಿ ನೆನೆಯಬೇಕು. ಇವೆಲ್ಲವೂ ಸರಕಾರದ ನಡೆ ಸರಿಯಾದ ದಿಕ್ಕಿನಲ್ಲಿ ಆಗುತ್ತಿದೆ ಎಂಬುದನ್ನು ಸಾರುತ್ತಿದೆ. ಇನ್ನು ಮುಂದೆ ಆರ್ಥಿಕ ವಂಚನೆ ಎಸಗಿ ಪಾರಾಗಬಹುದು ಎಂದು ಯಾರಾದರೂ ಯೋಚಿಸುತ್ತಿದ್ದರೆ ಅಂಥವರಿಗೂ ಇದು ಎಚ್ಚರಿಕೆಯ ಗಂಟೆ. ದೇಶದ ಅರ್ಥವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸುವ ಇಂಥ ಕಠಿಣ ಕ್ರಮಗಳು ಹೀಗೆಯೇ ಮುಂದುವರಿಯಲಿ. ಸೆರೆಸಿಕ್ಕಿದ ಅಪರಾಧಿಗಳಿಂದ ಹಣ ವಸೂಲಿ ಹಾಗೂ ಅವರಿಗೆ ಶಿಕ್ಷೆಗಳಾಗುವ ಮೂಲಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top