ವಯೋವೃದ್ಧ ನಾಯಕ ನೇಪಥ್ಯಕ್ಕೆ ಸರಿದರೆ ತಪ್ಪೇನು?

ಬ್ರಿಟನ್ನಿನಲ್ಲಿ 56 ವಯಸ್ಸಿನ ಗಡಿ ದಾಟಿದ ನಂತರ ಪ್ರಧಾನಿ ಆದವರ ಉದಾಹರಣೆ ಸಿಗುವುದಿಲ್ಲ. ಅಮೆರಿಕದ ಈವರೆಗಿನ ಅಧ್ಯಕ್ಷರ ಸರಾಸರಿ ವಯೋಮಿತಿ 54 ವರ್ಷ. ಅದೇ ಭಾರತದಲ್ಲಿ ರಾಜಕೀಯ ನಾಯಕರ ಅಧಿಕಾರ ಮತ್ತು ನಿವೃತ್ತಿ ವಿಷಯದಲ್ಲಿ ಜನರ ಹಾಗೂ ಜನನಾಯಕರ ಮಾನಸಿಕತೆ ಹೇಗಿದೆ ನೋಡಿ.

david camaroonಯಾರು ಏನು ಬೇಕಾದರೂ ಹೇಳಲಿ, ಭಾರತದ ಈಗಿನ ರಾಜಕೀಯ ವ್ಯವಸ್ಥೆ ಬ್ರಿಟನ್ ದೇಶದ ಬಳುವಳಿಯೆ. ಅದರಲ್ಲಿ ಬೇರೆ ಮಾತೇ ಇಲ್ಲ. ಆದರೆ ಅದೇ ವ್ಯವಸ್ಥೆ ನಮ್ಮ ಸಮಾಜದ ಮೇಲೆ ಉಂಟುಮಾಡುವ ಪರಿಣಾಮದಲ್ಲಿ ಲವಲೇಶವೂ ಹೋಲಿಕೆ ಇಲ್ಲ. ಯಾಕೆ ಹೀಗೆ? ಆಲೋಚನೆಯಲ್ಲಿ ಹೊಸತನವಿಲ್ಲ. ದಕ್ಷತೆ ಬೆಳೆಸಿಕೊಳ್ಳುವುದಿಲ್ಲ. ಸರಳತೆ ಎಂಬುದು ಗೊತ್ತೇ ಇಲ್ಲ. ಹೊಣೆಗಾರಿಕೆಗೂ ರಾಜಕೀಯ ವ್ಯವಸ್ಥೆಗೂ ಆಗಿಬರುವುದೇ ಇಲ್ಲ. ಭಟ್ಟಂಗಿತನವನ್ನು ನಮ್ಮ ನಾಯಕರು ಎಂದಿಗೂ ಬಿಡಲಾರರು. ಅಲ್ಲೋಇಲ್ಲೋ ಒಬ್ಬಿಬ್ಬರು ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವ ಯತ್ನ ಮಾಡಿದರು ಅನ್ನಿ, ಶತಾಯಗತಾಯ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸ್ವಲ್ಪ ದಿನ ಕಳೆದಮೇಲೆ ಮತ್ತದೇ ಜಡ್ಡುಗಟ್ಟಿದ ವ್ಯವಸ್ಥೆ ಇಣುಕಿಹಾಕದೇ ಹೋದರೆ ಹೇಳಿ. ತೋರುಗಾಣಿಕೆಯ ಸಂಭಾವಿತಿಗೆಯೇ ನಮ್ಮವರಿಗೆ ಪ್ರೀತಿ. ಇದಕ್ಕೆಲ್ಲ ಏನು ಕಾರಣ? ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹೊಸ ತಲೆಮಾರಿನ ನಾಯಕತ್ವ ಹುಟ್ಟುಹಾಕುವ ಸಂಕಲ್ಪ ಮಾಡಿದ ಸುದ್ದಿ ಓದಿದಾಗ ಬಿಟ್ಟೂ ಬಿಡದೆ ಕಾಡಿದ ಪ್ರಶ್ನೆಗಳಿವು.

ಉತ್ತರ ಸಿಕ್ಕಿತು ನೋಡಿ. ಮೈಸೂರಿನಲ್ಲಿ ಎರಡು ದಿನಗಳ ಹಿಂದೆ ಚಹಾದ ಜೊತೆ ಮಾತಿಗೆ ಸಿಕ್ಕಿದ ಪ್ರೊಫೆಸರ್ ಕೃಷ್ಣೇಗೌಡರು ಬ್ರಿಟನ್ನಿನ ಹಾಲಿ ಪ್ರಧಾನಿ ಡೇವಿಡ್ ಕೆಮರೂನ್ ಜೀವನದ ಪ್ರಸಂಗವೊಂದರ ಕುರಿತು ಮಾಡಿದ ಉಲ್ಲೇಖ ಅವರೇಕೆ ಹಾಗೆ, ನಾವೇಕೆ ಹೀಗೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿತು.

ಡೇವಿಡ್ ಕೆಮರೂನ್ 2010ರ ಮೇ 11ರಂದು ಬ್ರಿಟನ್ನಿನ 32ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅದಲ್ಲ ವಿಚಾರ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದ ಮುಂಜಾವಿನ ಅವರ ದಿನಚರಿ ಹೇಗಿತ್ತು ಎಂಬುದು ಇಲ್ಲಿ ಹೇಳಲು ಹೊರಟಿರುವ ಸಂಗತಿ. ನಸುಕಿನಲ್ಲಿ ಎದ್ದು ಮನೆ ಸಮೀಪದ ಬ್ರೆಡ್ ಅಂಗಡಿಗೆ ಕಾಲ್ನಡಿಗೆಯಲ್ಲೇ ಹೋದ ಕೆಮರೂನ್ ಒಂದು ಕೈಯಲ್ಲಿ ಒಂದು ಪೌಂಡ್ ಬ್ರೆಡ್ಡು, ಮತ್ತೊಂದು ಕೈಯಲ್ಲಿ ಒಂದು ಲೀಟರ್ ಹಾಲಿನ ಕ್ಯಾನು ಮತ್ತು ಕಂಕುಳಲ್ಲಿ ಅಂದಿನ ದಿನಪತ್ರಿಕೆಯನ್ನು ಹಿಡಿದುಕೊಂಡು ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆ ಅಪರೂಪದ ದೃಶ್ಯವನ್ನು ಯಾರೋ ಒಬ್ಬ ಪತ್ರಕರ್ತ ಸೆರೆಹಿಡಿದು ದಿನಪತ್ರಿಕೆಗಳಿಗೆ ನೀಡಿದ. ಅದು ಇಂಗ್ಲೆಂಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಮರುದಿನ ಪ್ರಕಟವಾಯಿತು. ಮೂರು ವರ್ಷಗಳ ಹಿಂದೆ ಪ್ರೊ.ಕೃಷ್ಣೇಗೌಡರು ಇಂಗ್ಲೆಂಡಿಗೆ ಪ್ರವಾಸ ಹೋಗಿದ್ದಾಗ ಚಿರಪರಿಚಿತರೊಬ್ಬರು ಅದೇ ಫೋಟೊ ತೋರಿಸಿ ‘ನಮ್ಮ ಪ್ರಧಾನಿ ಹೀಗಿದ್ದಾರೆ ನೋಡಿ’ ಎಂದು ಹೆಮ್ಮೆಯಿಂದ ಹೇಳಿದರಂತೆ. ಆ ಸಲದ ಚುನಾವಣೆಯಲ್ಲಿ ಬ್ರಿಟನ್ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್​ನಲ್ಲಿ ಕೆಮರೂನ್​ರ ಕನ್ಸರ್ವೆಟಿವ್ ಪಕ್ಷ ಜಯಭೇರಿ ಬಾರಿಸಿತ್ತು. ಚುನಾವಣಾ ಫಲಿತಾಂಶ ಹೊರಬಂದ ಮಾರನೇ ದಿನ ನಡೆದ ಪ್ರಸಂಗವದು. ಆ ದಿನ ಸಾಯಂಕಾಲ ನಡೆದ ಸಂಸದೀಯ ಸಭೆಯಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಕೆಮರೂನ್ ಒಮ್ಮತದಿಂದ ಆಯ್ಕೆಯಾದರು. ತಾವು ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾದ ಪತ್ರವನ್ನು ಬಕಿಂಗ್​ಹ್ಯಾಮ್​ಅರಮನೆಗೆ ಹೋಗಿ ರಾಣಿಗೆ ತಲುಪಿಸಿದ ಮರುಕ್ಷಣದಲ್ಲಿ ಮಹಾರಾಣಿ ಕೆಮರೂನ್​ರನ್ನು ಬ್ರಿಟನ್ನಿನ ನೂತನ ಪ್ರಧಾನಿಯಾಗಿ ನೇಮಕಮಾಡುವ ವಿಧಿವಿಧಾನ ಪೂರೈಸಿದರು. ಅದಾದ ಬಳಿಕವೇ ಕೆಮರೂನ್ ಸರ್ಕಾರಿ ಕಾರನ್ನು ಏರಿದ್ದು. ಪ್ರಧಾನಿಗೆಂದೇ ಮೀಸಲಾದ ಕಾರಲ್ಲಿ ರಾಣಿಯ ಅರಮನೆಯಿಂದ ಪ್ರಧಾನಿ ನಿವಾಸಕ್ಕೆ ಹಿಂದಿರುಗಿದರು. ನಮ್ಮ ದೇಶದ ಈಗಿನ ಪ್ರಧಾನಿಗೆ ಕೆಮರೂನ್​ರಂತೆಯೇ ನಡೆದುಕೊಳ್ಳುವ, ಸರಳವಾಗಿ ಬದುಕುವ, ಬೀದಿಯಲ್ಲಿ ನಡೆದಾಡಿ ಜನಸಾಮಾನ್ಯರೊಂದಿಗೆ ಬೆರೆಯುವ ಮನಸ್ಸಿದ್ದರೂ ಅದನ್ನು ಆಚರಣೆಯಲ್ಲಿ ತರುವ ವಾತಾವರಣ ಇಲ್ಲಿಲ್ಲ, ಆ ಮಾತು ಬೇರೆ. ಪ್ರಧಾನಿಯ ಮಾತು ಹಾಗಿರಲಿ, ನಮ್ಮ ಕಾಪೋರೇಟರುಗಳು, ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಒಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಅವರ ಹಿಂದೆಮುಂದೆ ಯಾರೆಲ್ಲ ಇರುತ್ತಾರೆ, ಅವರ ದರ್ಪ ದೌಲತ್ತು ಹೇಗಿರುತ್ತದೆ? ಹಾಗೆ ಸುಮ್ಮನೆ ಕಲ್ಪನೆ ಮಾಡಿಕೊಂಡರೆ ಸಾಕು.

ಬ್ರಿಟನ್ನಿನ ಪ್ರಧಾನಿಗಳ ಇತಿಹಾಸದ ವಿಷಯದಲ್ಲಿ ನಮ್ಮ ನಾಯಕರು ಅರಿತುಕೊಳ್ಳಲೇಬೇಕಾದ ಇನ್ನೊಂದು ಮಹತ್ವದ ಸಂಗತಿಯಿದೆ. ಅದು ಬ್ರಿಟನ್ನಿನ ಪ್ರಧಾನಿಗಳ ವಯಸ್ಸಿಗೆ ಸಂಬಂಧಿಸಿದ್ದು. ಹಾಲಿ ಪ್ರಧಾನಿ ಕೆಮರೂನ್ 2010ರಲ್ಲಿ ಅಧಿಕಾರ ವಹಿಸಿಕೊಂಡಾಗ ಅವರ ವಯಸ್ಸು ಕೇವಲ 44. ತೊಂಭತ್ತರ ದಶಕದಲ್ಲಿ ಹೆಸರುಮಾಡಿದ್ದ ಜಾನ್ ಮೇಜರ್ ಪ್ರಧಾನಿ ಆದಾಗ ಅವರಿಗೆ 47 ವರ್ಷ ವಯಸ್ಸು. ಅಂಥ ಹೆಸರುವಾಸಿಯಾಗಿದ್ದ ಮಾರ್ಗರೆಟ್ ಥ್ಯಾಚರ್ 1975ರಲ್ಲಿ ಪ್ರಧಾನಿ ಆದಾಗ ಅವರಿಗೆ ಆಗಿದ್ದು 50 ವರ್ಷ ಮಾತ್ರ. ಟೋನಿ ಬ್ಲೇರ್ ಪ್ರಧಾನಿ ಆದಾಗ ಅವರಿಗೆ 53 ವರ್ಷ ವಯಸ್ಸಾಗಿತ್ತು. ಹಾಗೆ ನೋಡಿದರೆ ಕೆಮರೂನ್ ಪೂರ್ವದಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದ ಗೋರ್ಡನ್ ಬ್ರೌನ್ ಅವರೇ ಅತ್ಯಂತ ಹಿರಿಯ ವಯಸ್ಸಿನ ಪ್ರಧಾನಿ ಎನ್ನಬೇಕು. 2007ರಲ್ಲಿ ಪ್ರಧಾನಿ ಆದಾಗ ಅವರಿಗೆ 56 ವರ್ಷ. ಬ್ರಿಟನ್ ಇತಿಹಾಸವನ್ನು ಜಾಲಾಡಿದರೂ 56 ವಯಸ್ಸಿನ ಗಡಿ ದಾಟಿದ ನಂತರ ಪ್ರಧಾನಿ ಆದವರ ಒಂದೇ ಒಂದು ಉದಾಹರಣೆ ನಮಗೆ ಸಿಗುವುದಿಲ್ಲ.

ಬ್ರಿಟನ್ ಮಾತ್ರವಲ್ಲ, ಅಮೆರಿಕದ ಅಧ್ಯಕ್ಷರ ಇತಿಹಾಸ ಕೂಡ ಅದಕ್ಕಿಂತ ಭಿನ್ನವಲ್ಲ. ಅಮೆರಿಕದಲ್ಲಿ ಇದುವರೆಗೆ ಅಧ್ಯಕ್ಷರಾದವರ ಸರಾಸರಿ ವಯೋಮಿತಿ 54 ವರ್ಷ ಮಾತ್ರ. ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್​ರಿಂದ ಹಿಡಿದು ಈಗಿನ ಬರಾಕ್ ಒಬಾಮವರೆಗೆ ಅಮೆರಿಕವನ್ನು 44 ಅಧ್ಯಕ್ಷರು ಆಳಿದ್ದಾರೆ. ಆ ಪೈಕಿ ಥಿಯೋಡರ್ ರೂಸ್​ವೆಲ್ಟ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅವರಿಗೆ ಕೇವಲ 42 ವರ್ಷ ವಯಸ್ಸು. ಅಧ್ಯಕ್ಷರ ಪೈಕಿ ಹೆಚ್ಚು ಹೆಸರುವಾಸಿಯಾದ ಜಾನ್ ಎಫ್. ಕೆನಡಿ ಅಧ್ಯಕ್ಷರಾದಾಗ ಅವರಿಗೆ 43ರ ಹರೆಯ. 2008ರಲ್ಲಿ ಬರಾಕ್ ಹುಸೇನ್ ಒಬಾಮ ಅಧ್ಯಕ್ಷರಾದಾಗ ಅವರಿಗೆ 47 ವರ್ಷ. ಅಂದರೆ ಐವತೆôದನೇ ವಯಸ್ಸಿಗೆ ಎರಡನೇ ಬಾರಿಯ ಅಧಿಕಾರಾವಧಿಯನ್ನೂ ಮುಗಿಸಿ ಸಕ್ರಿಯ ರಾಜಕೀಯದಿಂದಲೇ ನಿವೃತ್ತಿಯಾಗುವ ತಯಾರಿ ನಡೆಸಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಈಗ ಅಮೆರಿಕದಲ್ಲಿ ಜಪ್ಪಯ್ಯ ಅಂದರೂ ಒಬ್ಬ ವ್ಯಕ್ತಿ ಮೂರನೇ ಬಾರಿಗೆ ಅಧ್ಯಕ್ಷನಾಗಲು ಅವಕಾಶವಿಲ್ಲ.

ಒಬ್ಬ ವ್ಯಕ್ತಿ ಗರಿಷ್ಠ ಎರಡು ಬಾರಿ ಮಾತ್ರ ಅಧ್ಯಕ್ಷನಾಗಬಹುದೆಂಬುದು ಆರಂಭದಲ್ಲಿ ಶಾಸನಾತ್ಮಕ ನಿಯಮವಾಗಿರಲಿಲ್ಲ. ವಾಸ್ತವದಲ್ಲಿ ಅದು ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಆರಂಭಿಸಿದ ಸಂಪ್ರದಾಯವಾಗಿತ್ತು. ಫ್ರಾಂಕ್ಲಿನ್ ಡಿ. ರೂಸ್​ವೆಲ್ಟ್ ಮಾತ್ರ ನಾಲ್ಕು ಬಾರಿ (1944ರಲ್ಲಿ ನಾಲ್ಕನೇ ಅವಧಿ) ಅಧ್ಯಕ್ಷರಾದರು. ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಮುಂದೆ ಒಂದು ವರ್ಷದಲ್ಲಿ ಅವರು ಕೊನೆಯುಸಿರೆಳೆದರು. ರೂಸ್​ವೆಲ್ಟ್ ಮಾತ್ರ ಹೀಗೆ ಸತತವಾಗಿ ನಾಲ್ಕು ಬಾರಿ ಅಮೆರಿಕ ಅಧ್ಯಕ್ಷರಾಗಲು ಬಲವಾದ ಕಾರಣವಿತ್ತು. ಎರಡನೇ ಮಹಾಯುದ್ಧದ ಪರಿಣಾಮ ಅಮೆರಿಕ ಭಯಂಕರ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿತ್ತು. ಹೀಗಾಗಿ ಅಮೆರಿಕನ್ನರಿಗೆ ಬೇರೆ ಆಯ್ಕೆ ಇರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅಮೆರಿಕನ್ನರು ನಿರೀಕ್ಷೆ ಮಾಡಿದಂತೆ ಅಧ್ಯಕ್ಷ ರೂಸ್​ವೆಲ್ಟ್ ದೇಶದ ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದರು ಎಂಬ ಮಾತಿದೆ. ಅದೇ ಕೊನೆ. ರೂಸ್​ವೆಲ್ಟ್ ನಂತರದಲ್ಲಿ ಬೇರೆ ಯಾರೂ ಎರಡಕ್ಕಿಂತ ಹೆಚ್ಚು ಅವಧಿಗೆ ಅಧ್ಯಕ್ಷನಾಗಲು ಮತದಾರರು ಅವಕಾಶ ಕೊಡಲಿಲ್ಲ. ಅಧ್ಯಕ್ಷ ಉಲಿಸ್ಸೆ ಗ್ರ್ಯಾಂಟ್​ರಂಥವರು ಮೂರನೇ ಬಾರಿಗೆ ಅಧ್ಯಕ್ಷರಾಗಲು ಯತ್ನಿಸಿದರಾದರೂ ಅಮೆರಿಕದ ಮತದಾರರು ಅದಕ್ಕೆ ಸೊಪ್ಪುಹಾಕಲಿಲ್ಲ. ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ಹೂವರ್ ಕಮಿಷನ್ ಸಲಹೆ ಮೇರೆಗೆ 1947ರಲ್ಲಿ ಅಮೆರಿಕ ಸಂವಿಧಾನಕ್ಕೆ 22ನೇ ತಿದ್ದುಪಡಿ ತಂದು ಅಧ್ಯಕ್ಷರ ಸತತ ಅಧಿಕಾರಾವಧಿಯನ್ನು ಎರಡು ಅವಧಿಗೆ ಮಿತಿಗೊಳಿಸಿದರು. ಹೀಗಾಗಿ ಸತತ ಎರಡಕ್ಕಿಂತ ಹೆಚ್ಚು ಅವಧಿ ಅಧ್ಯಕ್ಷರಾಗುವುದು ಅಮೆರಿಕದಲ್ಲಿ ಅಸಾಧ್ಯದ ಮಾತು.

ಅಮೆರಿಕದ ಅಧ್ಯಕ್ಷ ಪರಂಪರೆಯಲ್ಲಿ ಇನ್ನೂ ಒಂದು ಒಳ್ಳೆಯ ಸಂಪ್ರದಾಯವಿದೆ. ಅಲ್ಲಿ ಅಧ್ಯಕ್ಷರಾದವರು ಅಧಿಕಾರದಿಂದ ಕೆಳಗಿಳಿದ ನಂತರದಲ್ಲಿ ಜನಸಾಮಾನ್ಯರಲ್ಲಿ ಒಬ್ಬರಾಗಿ ವಿಶ್ರಾಂತ ಜೀವನ ನಡೆಸುತ್ತಾರೆ. ಅಧಿಕಾರಾವಧಿ ಮುಗಿದ ಬಳಿಕ ಹಾಗೊಮ್ಮೆ ಸಾರ್ವಜನಿಕ ಜೀವನದಲ್ಲಿ ಇರಲೇಬೇಕೆನ್ನಿಸಿದರೆ ಯಾವುದಾದರೂ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುಂದುವರಿಯುತ್ತಾರೆಯೇ ಹೊರತು ಸಕ್ರಿಯ ರಾಜಕೀಯದ ಕಡೆ ಇಣುಕಿಯೂ ನೋಡುವುದಿಲ್ಲ. ಈ ಸಂಪ್ರದಾಯ ಭಾರತದಲ್ಲೂ ರೂಢಿಗೆ ಬಂದರೆ ಎಷ್ಟು ಚೆಂದ ಅಲ್ಲವೇ? ಬರಬಹುದೇ? ಅಂತಹ ಆಶಾಭಾವನೆ ಇಟ್ಟುಕೊಳ್ಳೋಣ. ಏನಂತೀರಿ?

ಭಾರತದಲ್ಲಿ ರಾಜಕೀಯ ನಾಯಕರ ಅಧಿಕಾರ ಮತ್ತು ನಿವೃತ್ತಿ ವಿಷಯದಲ್ಲಿ ಇಲ್ಲಿನ ಜನರ ಹಾಗೂ ಜನನಾಯಕರ ಮಾನಸಿಕತೆ ಹೇಗಿದೆ ಎಂಬುದನ್ನು ವಿಶ್ಲೇಷಿಸಲೋಸುಗ ಇಷ್ಟೆಲ್ಲ ಪೀಠಿಕೆ ಹಾಕಬೇಕಾಗಿ ಬಂತು. ‘ಅಯ್ಯೋ

ಎಲ್.ಕೆ. ಆಡ್ವಾಣಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನವೇ ಸಿಗುತ್ತಿಲ್ಲ’ ಎಂದು ಇನ್ನೂ ಲೊಚಗುಟ್ಟುತ್ತೇವೆ. ಆಡ್ವಾಣಿ ಪ್ರಧಾನಿಯಾಗುವ ಕೊನೇ ಅವಕಾಶವನ್ನ್ನೂ ಮೋದಿ ಕಿತ್ತುಕೊಂಡುಬಿಟ್ಟರು ಎಂದು ಹಳಹಳಿಸುವವರೂ ಇದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಬಿಜೆಪಿಯಲ್ಲಿ ವಾಜಪೇಯಿ-ಆಡ್ವಾಣಿ ಯುಗಾಂತ್ಯ ಎಂದು ಮಾಧ್ಯಮಗಳಲ್ಲಿ ಒಂದೇ ಸಮನೆ ವಿಶ್ಲೇಷಣೆ ನಡೆಯುತ್ತಿದೆ. ಆಡ್ವಾಣಿಗೆ ವಯಸ್ಸೆಷ್ಟು ಎಂದರೆ ಎಂಭತ್ತೇಳು. ವಾಜಪೇಯಿಗೆ ಭರ್ತಿ ತೊಂಭತ್ತಾಯಿತು. ಹಾಗಾದರೆ ಇವರೆಲ್ಲ ಇನ್ನೆಷ್ಟು ದಿನ ಸಾರ್ವಜನಿಕ ಜೀವನದಲ್ಲಿ ದುಡಿಯಬೇಕು? ಒಂದೊಮ್ಮೆ ಇನ್ನೂ ಹೆಚ್ಚು ಕಾಲ ಸಾರ್ವಜನಿಕ ಬದುಕಲ್ಲಿ ಮುಂದುವರಿಯಲು ಮನಸ್ಸಿದ್ದರೂ ದೇಹ ಅದಕ್ಕೆ ಅವಕಾಶ ಮಾಡಿಕೊಡಲು ತಯಾರಿರಬೇಕಲ್ಲ? ಅಷ್ಟಕ್ಕೂ ದೇಶಕ್ಕಾಗಿ ದುಡಿದವರೆಲ್ಲರೂ ಅಧಿಕಾರ ಅನುಭವಿಸಲೇಬೇಕೆಂಬ ನಿಯಮವೇನಿಲ್ಲವಲ್ಲ!

ನಿಜ, ಹಾಗೆ ನೋಡಿದರೆ ಆಡ್ವಾಣಿಗೆ ಈ ಹಿಂದೆಯೇ ದೇಶದ ಪ್ರಧಾನಿಯಾಗಲು ಒಂದು ಅವಕಾಶ ಕೊಡಬೇಕಿತ್ತು. ಕಾರಣ ಇಷ್ಟೆ. ಪಕ್ಷವನ್ನು ಕಟ್ಟುವುದರಲ್ಲಿ ವಾಜಪೇಯಿಗಿಂತಲೂ ಆಡ್ವಾಣಿ ಕೊಡುಗೆಯೇ ಜಾಸ್ತಿ ಎಂದರೆ ತಪ್ಪಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಆಡ್ವಾಣಿಯವರದು ಶುಭ್ರವ್ಯಕ್ತಿತ್ವ, ಸಮರ್ಪಿತ ಜೀವನ. ಮೌಲ್ಯಗಳ ಅನುಸರಣೆಯಲ್ಲಿ ಸದಾ ಎಚ್ಚರಿಕೆ ಕಾಯ್ದುಕೊಂಡವರು. ಇಷ್ಟೆಲ್ಲ ಇರುವಾಗ ಈ ಹಿಂದೆ ವಾಜಪೇಯಿ ಸರ್ಕಾರದ ಕಾಲದಲ್ಲಿ ಆರು ತಿಂಗಳು ಮೊದಲು ಚುನಾವಣೆಗೆ ಹೋಗುವ ಬದಲು ಆಡ್ವಾಣಿ ಪ್ರಧಾನಿಯಾಗಲು ಒಂದು ಛಾನ್ಸ್ ಕೊಡಬಹುದಿತ್ತು. ಆದರೆ ವಾಜಪೇಯಿ “I am not tired and i will not retire” ಎಂದುಬಿಟ್ಟರು. ಹಾಗಾದರೆ ವಾಜಪೇಯಿ ಆಡ್ವಾಣಿಗೆ ಅನ್ಯಾಯ ಮಾಡಿದರು ಅನ್ನಬಹುದೇ? ಅಥವಾ ವಾಜಪೇಯಿ ಅವರನ್ನೇ ಮುಂದುವರಿಸುವ ಪಕ್ಷದ ಲೆಕ್ಕಾಚಾರ ತಲೆಕೆಳಗಾಯಿತೇ? ಹೇಳುವುದು ಕಷ್ಟ.

ಅದೆಲ್ಲ ಪಕ್ಷದೊಳಗಿನ ವ್ಯವಹಾರ ಎಂದು ಸುಮ್ಮನಾಗೋಣವೇ…. ಆದರೆ ಒಂದು ಮಾತು. ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ವಿಚಾರಕ್ಕೇ ಮತ್ತೆ ಬರುತ್ತೇನೆ. ಅಲ್ಲಿ ಒಂದು ಬಹಳ ಒಳ್ಳೆಯ ತೀರ್ವನ ತೆಗೆದುಕೊಂಡರು. ಪಕ್ಷದ ಸದಸ್ಯರು ಕಾರ್ಯಕರ್ತರಾಗಬೇಕು, ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕು ಅಂತ. ಎಷ್ಟೊಳ್ಳೆಯ ಕಲ್ಪನೆ ಅಲ್ಲವೇ? ಅದರ ಅರ್ಥ ಚುನಾವಣೆಯಲ್ಲಿ ನವಯುವಕರಿಗೆ ಪಕ್ಷದ ಟಿಕೇಟು ಕೊಟ್ಟು, ಇಪ್ಪತ್ತು ಮೂವತ್ತು ವರ್ಷಗಳಿಂದ ಸಂಸದರು, ಶಾಸಕರಾಗಿ ಗೂಟ ಹೊಡೆದುಕೊಂಡಿರುವವರ ಕೈಗೆ ಪಕ್ಷದ ಬಾವುಟ ಕೊಟ್ಟು ಬೀದಿಗಿಳಿದು ಕೆಲಸ ಮಾಡಲು ಹೇಳುತ್ತಾರೆ ಅಂತಲಾ? ಈ ನೀತಿಯನ್ನು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ಸಿಗರೂ ಅನುಸರಿಸಿದರೆ ಚೆನ್ನ. ಹಾಗೆ ಮಾಡಿದರೆ ಕೇಜ್ರಿವಾಲ್​ರಂಥವರಿಗೆ ಮಾಡಲು ಕೆಲಸವೇ ಇರುವುದಿಲ್ಲ ಎಂಬುದು ಸತ್ಯ ಬಿಡಿ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top