ಭಾರತದಿಂದಲೇ ಬರಲಿದೆಯಾ ಮೊದಲ ಕೊರೊನಾ ಲಸಿಕೆ?

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್‌ ವೈರಸ್‌ ತಡೆಗಟ್ಟುವ ಲಸಿಕೆ ಪಡೆಯಲು ಎರಡು ಪ್ರಯೋಗಾಲಯ ಪ್ರಯತ್ನಗಳು ಆರಂಭವಾಗಿವೆ. ಈ ಎರಡೂ ಪ್ರಯತ್ನಗಳು ಈಗ ಯಾವ ಹಂತದಲ್ಲಿವೆ? ಭಾರತದಲ್ಲಿ ಈ ಹಿಂದೆಯೂ ಲಸಿಕೆಗಳನ್ನು ಸಿದ್ಧಪಡಿಸಲಾಗಿತ್ತೆ? ಇತ್ಯಾದಿ ವಿವರ ಇಲ್ಲಿವೆ.

ಆಗಸ್ಟ್‌ 15ರ ಒಳಗೆ ಭಾರತದಲ್ಲಿ ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಸಿದ್ಧವಾಗಲಿದೆ ಎಂಬುದು ಬಿಸಿಬಿಸಿ ಚರ್ಚೆಯ ವಿಷಯ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಅದನ್ನು ಕೆಂಪು ಕೋಟೆಯ ಮೇಲಿನಿಂಧ ಘೋಷಿಸುವಂತೆ ಆಗಬೇಕು ಎಂಬುದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌)ಯ ಕನಸು. ಹೀಗಾಗಿ ಅದು ಎರಡು ಕಂಪನಿಗಳ ವ್ಯಾಕ್ಸೀನ್‌ ತಯಾರಿಕೆ ಹಾಗೂ ಮಾನವರ ಮೇಲಿನ ಪ್ರಯೋಗಗಳಿಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಇಷ್ಟು ತರಾತುರಿಯಲ್ಲಿ ವ್ಯಾಕ್ಸೀನ್‌ ಸಂಶೋಧಿಸಲಾಗದು ಎಂದೂ ಕೆಲವು ತಜ್ಞರು ಕೊಂಕು ತೆಗೆದಿದ್ದಾರೆ. ಆದರೆ ಭಾರತ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಲಸಿಕೆ ತಯಾರಕರಲ್ಲಿ ಒಂದು. ಹೀಗಾಗಿ ಶೀಘ್ರ ಲಸಿಕೆ ಶೋಧದ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಸದ್ಯ ಭಾರತದ ವೇಗದಲ್ಲಿ ಲಸಿಕೆ ಸಿದ್ಧತೆಗೆ ಮುಂದಾಗಿರುವ ಇತರ ದೇಶಗಳೆಂದರೆ ಬ್ರಿಟನ್‌ (ಆಕ್ಸ್‌ಫರ್ಡ್‌) ಹಾಗೂ ಚೀನಾ (ವುಹಾನ್‌) ಮಾತ್ರ. ಸುಮಾರು ನೂರು ಕಡೆ ಕೋವಿಡ್‌ ಲಸಿಕೆಯ ಪ್ರಯತ್ನಗಳು ನಡೆಯುತ್ತಿದ್ದು. ಅದರಲ್ಲಿ ಮಾನವರ ಮೇಲಿನ ಪ್ರಯೋಗಕ್ಕೆ ಕನಿಷ್ಠ 12 ಲಸಿಕೆಗಳು ತೊಡಗಿವೆ.

ಭಾರತ್‌ ಬಯೋಟೆಕ್‌ನ ಮಾನವ ಪ್ರಯೋಗ
ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಎಂಬ ಔಷಧ ಕಂಪನಿಗೆ ಲಸಿಕೆಯ ಮಾನವ ಟ್ರಯಲ್‌ಗಳಿಗೆ ಅನುಮತಿ ದೊರೆತಿದೆ. ಮೊದಲ ಸುತ್ತಿನಲ್ಲಿ 1000 ಮಂದಿ ಪ್ರಯೋಗಕ್ಕೆ ಒಳಗಾಗಲಿದ್ದಾರೆ. ಮಾನವ ಪ್ರಯೋಗದ ಮೊದಲ ಹಾಗೂ ಎರಡನೇ ಸುತ್ತುಗಳು ಏಕಕಾಲಕ್ಕೆ ನಡೆಯಲಿವೆ. ಡ್ರಗ್‌ ಕಂಟ್ರೋಲರ್‌ ಆಫ್‌ ಇಂಡಿಯಾ (ಡಿಸಿಜಿಐ) ಕೂಡ ಇದಕ್ಕೆ ಅನುಮತಿ ನೀಡಿದ್ದು, ಆ.15ರೊಳಗೆ ಲಸಿಕೆ ಸಿದ್ಧಪಡಿಸುವಂತೆ ಹೇಳಿದೆ. ದುರ್ಬಲ ವೈರಾಣುವನ್ನು ಉಪಯೋಗಿಸಿ ಈ ಲಸಿಕೆ ಸಿದ್ಧವಾಗಲಿದೆ. ಇದಕ್ಕೆ ಕೋವ್ಯಾಕ್ಸೀನ್‌ ಎಂದು ಹೆಸರು ನೀಡಲಾಗಿದೆ. ಇದಲ್ಲದೆ ಇನ್ನೂ ಒಂದು ಲಸಿಕೆಯನ್ನು ಸಿದ್ಧಪಡಿಸಲು ಭಾರತ್‌ ಬಯೋಟೆಕ್‌ ಮುಂದಾಗಿದ್ದು, ಅದರ ಹೆಸರು ಕೊರೊಫ್ಲೂ. ಇದು ಇನ್‌ಫ್ಲುಯೆಂಜಾ ವೈರಾಣುವನ್ನು ಉಪಯೋಗಿಸಿ ನಡೆದಿರುವ ಪ್ರಯೋಗ. ಭಾರತ್‌ ಬಯೋಟೆಕ್‌ ಇದಲ್ಲದೆ ಇನ್ನೂ ಹಲವು ವಿದೇಶಿ ಕಂಪನಿಗಳ ಸಹಯೋಗದೊಂದಿಗೆ ಇತರ ಕೆಲವು ಲಸಿಕೆಗಳ ಯತ್ನದಲ್ಲಿ ತೊಡಗಿದೆ. ಉದಾಹರಣೆಗೆ ವಿಸ್ಕಾನ್ಸಿನ್‌ ಯೂನಿವರ್ಸಿಟಿಯ ಜೊತೆ ಹಾಗೂ ಥಾಮಸ್‌ ಜೆಫರ್‌ಸನ್‌ ಯೂನಿವರ್ಸಿಟಿಯ ಜೊತೆಗೆ.

ಝೈದಸ್‌ ಕ್ಯಾಡಿಲಾ ಕಂಪನಿಯ ಲಸಿಕೆ
ಔಷಧ ತಯಾರಿಕೆಯಲ್ಲಿ ಜಾಗತಿಕ ಕಂಪನಿ ಎನಿಸಿಕೊಂಡಿರುವ ಹೈದರಾಬಾದ್‌ನ ಝೈಡಸ್‌ ಕ್ಯಾಡಿಲಾ ಕಂಪನಿ ಕೂಡ ಲಸಿಕೆ ಸಿದ್ಧಪಡಿಸಲು ಮುಂದಾಗಿದೆ. ಇದು ಕೂಡ ಮೊದಲ ಹಾಗೂ ಎರಡನೇ ಹಂತದ ಕೋವಿಡ್‌ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದು, ಇದು ಕೂಡ ಮಾನವ ಪ್ರಯೋಗದ ಹಂತದಲ್ಲಿದೆ. ಈಗಾಗಲೇ ಪ್ರಾಣಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿದ್ದು, ರೋಗನಿರೋಧ ಶಕ್ತಿಯನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ಝೈಡಸ್‌ ಜೊತೆಗೆ ಭಾರತದ ಹಾಗೂ ವಿದೇಶಗಳ ಹಲವು ಕಂಪನಿಗಳು ಹಾಗೂ ಸರಕಾರಿ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಝೈಕೋವ್‌-ಡಿ ಎಂಬ ಹೆಸರಿಂದ ಕರೆಯಲ್ಪಡುವ ಈ ಲಸಿಕೆಯು ರೋಗಿಯ ದೇಹದಲ್ಲಿ ವೈರಾಣು ಮ್ಯುಟೇಶನ್‌ ಹಾಗೂ ಬೆಳವಣಿಗೆಯನ್ನು ತಡೆಯುತ್ತದೆ. ಈ ದೈತ್ಯ ಔಷಧ ಕಂಪನಿ ಕೋವಿಡ್‌ ಅನ್ನು ಎದುರಿಸುವ ಇತರ ಔಷಧಗಳ ಶೋಧದಲ್ಲೂ ತೊಡಗಿದೆ.

ಲಸಿಕೆಯ ಶೋಧದಲ್ಲಿ ಇತರರು
ಭಾರತ್‌ ಮತ್ತು ಝೈಡಸ್‌ ಕಂಪನಿಗಳು ಮಾನವ ಪ್ರಯೋಗ ಹಂತ ತಲುಪಿದ್ದರೆ, ಉಳಿದ ಹಲವಾರು ಕಂಪನಿಗಳು ಕೂಡ ಲಸಿಕೆ ಸಿದ್ಧಪಡಿಸುವ ಪ್ರಾಥಮಿಕ ಪ್ರಯತ್ನಗಳಲ್ಲಿ ತೊಡಗಿವೆ. ದುರ್ಬಲ ವೈರಾಣುವಿನ ಆವಿಷ್ಕಾರ ಹಾಗೂ ಇದರಿಂದ ಪ್ರಯೋಗಜೀವಿಯ ಮೇಲೆ ಅದರ ಪರಿಣಾಮವನ್ನು ಲೆಕ್ಕಿಸುವುದು ಮೊದಲ ಹಂತ. ಪುಣೆ ಮೂಲದ ಸೇರಂ ಇನ್‌ಸ್ಟಿಟ್ಯೂಟ್‌ ಇದರಲ್ಲಿ ಮುಂಚೂಣಿಯಲ್ಲಿದೆ. ಈ ವರ್ಷದ ಅಂತ್ಯದಲ್ಲಿ ಲಸಿಕೆ ತಯಾರಿಸಲಿದ್ದೇವೆ ಎಂಬುದು ಈ ಸಂಸ್ಥೆಯ ಆತ್ಮವಿಶ್ವಾಸ. ಇದಲ್ಲದೆ ಸದ್ಯ ಬೆಂಗಳೂರು ಮೂಲದ ಮಿನ್‌ವ್ಯಾಕ್ಸ್‌, ಇಂಡಿಯನ್‌ ಇಮ್ಯುನೊಲಾಜಿಕಲ್‌ ಲಿಮಿಟೆಡ್‌(ಆಸ್ಪ್ರೇಲಿಯದ ಒಂದು ಯೂನಿವರ್ಸಿಟಿ ಸಹಯೋಗದಲ್ಲಿ)ಗಳು ಇದರಲ್ಲಿ ತೊಡಗಿವೆ. ಭಾರತದ ಇನ್ನೂ ಕೆಲವಯ ವ್ಯಾಕ್ಸೀನ್‌ ಕಂಪನಿಗಳು ಮೋಡೆರ್ನಾ, ಆಸ್ಟ್ರಾಜೆನೆಕಾ ಮುಂತಾದ ಜಾಗತಿಕ ದೈತ್ಯ ಕಂಪನಿಗಳ ಸಹಯೋಗದಲ್ಲಿ ಲಸಿಕೆ ಶೋಧದಲ್ಲಿವೆ.

ಆಯುರ್ವೇದ ವ್ಯಾಕ್ಸಿನ್‌
ಆಯುರ್ವೇದದ ಮೂಲಕ ಲಸಿಕೆ ಹೊಂದಬಹುದು ಎಂಬ ಆಶ್ಚರ‍್ಯಕರ ಪ್ರಮೇಯವೊಂದನ್ನು ಮಂಡಿಸಲಾಗಿದೆ ಹಾಗೂ ಈಗಾಗಲೇ ಜಪಾನಿನ ಎಐಎಸ್‌ಟಿ ಸಂಸ್ಥೆ ಈ ಕುರಿತು ಪ್ರಯೋಗದಲ್ಲಿ ತೊಡಗಿದ್ದು, ಅದಕ್ಕೆ ದಿಲ್ಲಿ ಐಐಟಿ ಸಹಯೋಗ ನೀಡಿದೆ.

ಇತರ ಭಾರತೀಯ ಲಸಿಕೆಗಳು
ಮನುಕುಲಕ್ಕೆ ಘೋರ ಕಾಯಿಲೆಗಳು ಅಟಕಾಯಿಸಿಕೊಂಡಾಗಲೆಲ್ಲಾ ಭಾರತ ನೆರವಿಗೆ ಬಂದಿದೆ. ಹಲವು ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ ಭಾರತ ಲಸಿಕೆ ಸಿದ್ಧಪಡಿಸಿದೆ. ಉದಾಹರಣೆಗೆ ಕ್ಷಯ, ಕಲರಾ ಹಾಗೂ ಪ್ಲೇಗ್‌ ವ್ಯಾಕ್ಸೀನ್‌ಗಳು. 1800ರಲ್ಲಿ ಜಗತ್ತಿನ ಮೊತ್ತ ಮೊದಲ ಸಿಡುಬು ಲಸಿಕೆ ಭಾರತವನ್ನು ತಲುಪಿತು. ಇದು ಭಾರತದಲ್ಲಿ ಪ್ರಯೋಗವಾದ ಮೊದಲ ಲಸಿಕೆ. 1890ರ ಹೊತ್ತಿಗೆ ಬಂಗಾಳ ಮುಂತಾದ ಕಡೆ ಕಾಲರಾ ಕಾಳ್ಗಿಚ್ಚಿನಂತೆ ಹಬ್ಬಿತು. ಆಗ ಭಾರತದಲ್ಲಿ ಮೊತ್ತಮೊದಲ ಲಸಿಕೆ ಸಂಶೋಧನೆಗಳು ಆರಂಭವಾದವು. ಆಗ್ರಾ, ಉತ್ತರಪ್ರದೇಶ ಮುಂತಾದ ಕಡೆ ಟ್ರಯಲ್‌ ನಡೆಯಿತು. ಡಾ.ಹಫ್‌ಕೈನ್‌ ಎಂಬ ವೈದ್ಯ ಕಾಲರಕ್ಕೆ ಲಸಿಕೆಯ ಭಾರತದ ಆವೃತ್ತಿಯನ್ನು ಸಿದ್ಧಪಡಿಸಿದ. 1896ರಲ್ಲಿ ಪ್ಲೇಗ್‌ ಕಾಯಿಲೆ ದೇಶದಲ್ಲಿ ವಕ್ಕರಿಸಿಕೊಂಡಿತು. 1897ರಲ್ಲಿ ಇದೇ ಹಫ್‌ಕೈನ್‌ ಪ್ಲೇಗ್‌ಗೂ ವ್ಯಾಕ್ಸೀನ್‌ ಕಂಡುಹಿಡಿದ. ಇದೇ ಭಾರತದಲ್ಲಿ ಸಿದ್ಧವಾದ ಮೊದಲ ಲಸಿಕೆ.
ಇದೇ ಹಫ್‌ಕೈನ್‌ ಮುಂದೆ ಲಸಿಕೆ ಶೋಧನಾ ಸಂಸ್ಥೆಯೊಂದನ್ನು ಕಟ್ಟಿದ. ಈ ಸಂಸ್ಥೆಯಲ್ಲೇ ಮುಂದೆ ಭಾರತವನ್ನು ಕಾಡಿದ ಪ್ಲೇಗ್‌ ಹಾಗೂ ಸಿಡುಬಿಗೂ ಲಸಿಕೆಗಳು ತಯಾರಾದವು. ಕೂನೂರಿನಲ್ಲಿದ್ದ ಪೇಸ್ಟರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, 1907ರಲ್ಲಿ ರೇಬೀಸ್‌ಗೆ ವ್ಯಾಕ್ಸೀನ್‌ ಸಿದ್ಧಪಡಿಸಿತು. ನಂತರ ಇದೇ ಸಂಸ್ಥೆಯು ಇನ್‌ಫ್ಲುಯೆಂಜಾಗೂ ವ್ಯಾಕ್ಸೀನ್‌ ಹುಡುಕಿತು. ಸ್ವತಂತ್ರ ಭಾರತದಲ್ಲಿ ಕ್ಷಯ ರೋಗ ಹೆಚ್ಚಾಗತೊಡಗಿದಾಗ, ಚೆನ್ನೈಯಲ್ಲಿ ಭಾರತ ಸರಕಾರ ಕಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದು ಪ್ರಯೋಗಾಲಯ ಸ್ಥಾಪಿಸಿ, ಕ್ಷಯರೋಗಕ್ಕೊಂದು ಲಸಿಕೆ ಸಿದ್ಧಪಡಿಸಿತು. ಇದನ್ನೇ ಈಗ ವ್ಯಾಪಕವಾಗಿ ಬಿಸಿಜಿ ಲಸಿಕೆ ಎಂದು ಎಲ್ಲ ಮಕ್ಕಳಿಗೂ ಕೊಡಲಾಗುತ್ತಿದೆ.
ಕೆಲವು ಪ್ರಮುಖ ಕಾಯಿಲೆಗಳಿಗೆ ರಾಷ್ಟ್ರೀಯ ಲಸಿಕೆ ಅಭಿಯಾನವನ್ನೇ ನಡೆಸಿ ಚಿಕಿತ್ಸೆ ಕೊಡಲಾಗುತ್ತಿದೆ. ಉದಾಹರಣೆಗೆ ಪೋಲಿಯೋ. ಹಾಗೆಯೇ ಭಾರತದ ಕಂಪನಿಗಳು ಜಗತ್ತಿಗೆ ರೇಬೀಸ್‌, ಇನ್‌ಫ್ಲುಯೆಂಜಾ ಲಸಿಕೆಗಳನ್ನು ರಪ್ತು ಕೂಡ ಮಾಡುತ್ತಿವೆ. ಡಿಫ್ತೀರಿಯಾ, ಟಿಟಾನಸ್‌ ಮೊದಲಾದ ಕಾಯಿಲೆಗಳಿಗೂ ಭಾರತದಲ್ಲಿ ಲಸಿಕೆಗಳು ಸಿದ್ಧಗೊಂಡಿವೆ ಹಾಗೂ ಹೊರದೇಶಕ್ಕೂ ರಫ್ತು ಆಗುತ್ತಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top