ದರ್ಶನಕ್ಕೆ ಬೇಡ ಆತುರ

– ಸೋಮವಾರ ದೇಗುಲ ತೆರೆದರೂ ಹೆಚ್ಚಿನೆಡೆ ದರುಶನಕ್ಕೆ ಸೀಮಿತ
– ಸೇವೆ ಆರಂಭ ಸ್ವಲ್ಪ ವಿಳಂಬ | ಜನದಟ್ಟಣೆ ತಪ್ಪಿಸುವುದು ಉತ್ತಮ

ವಿಕ ಸುದ್ದಿಲೋಕ ಬೆಂಗಳೂರು.
ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆದರೆ, ಬಹುತೇಕ ದೇವಾಲಯಗಳಲ್ಲಿ ಸದ್ಯಕ್ಕೆ ದರ್ಶನಕ್ಕೆ ಮಾತ್ರ ಅವಕಾಶ ನೀಡುವ ಚಿಂತನೆ ನಡೆದಿದ್ದು, ದೇವರ ಸೇವೆಗಳು ಕೆಲವು ದಿನ ಬಿಟ್ಟು ಆರಂಭಗೊಳ್ಳಲಿವೆ.
ಕೇಂದ್ರ ಸರಕಾರ ವಿಧಿಸಿರುವ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ದೇವಾಲಯಗಳು ಭಕ್ತರಿಗೆ ಅವಕಾಶ ನೀಡ
ಬೇಕಾಗಿದೆ. ಹೀಗಾಗಿ ಕೆಲವೊಂದು ದೇವಾಲಯಗಳು ಒಂದು ವಾರ ಕಾದು ನೋಡಿ ತೆರೆಯುವ ನಿರ್ಧಾರಕ್ಕೂ ಬಂದಿವೆ.
ಕೊರೊನಾ ಹರಡುವುದನ್ನು ತಡೆಯುವುದನ್ನು ತಪ್ಪಿಸಲು ಮಾ. 20ರಿಂದಲೇ ರಾಜ್ಯದ ಎಲ್ಲ ದೇಗುಗಳಲ್ಲಿ ದೇಗುಲಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ನಿತ್ಯ ಪೂಜೆ ಮತ್ತಿತರ ಅಗತ್ಯ ಕಾರ್ಯಕ್ರಮ ಹೊರತುಪಡಿಸಿ ಜಾತ್ರೆ, ರಥೋತ್ಸವಗಳು ಕೂಡ ಕಳೆದ 77 ದಿನಗಳಿಂದ ನಡೆದಿಲ್ಲ. ಇಷ್ಟು ದೀರ್ಘಾವಧಿಗೆ ರಾಜ್ಯದ ದೇಗುಲಗಳು ಮುಚ್ಚಿದ ಉದಾಹರಣೆ ಹಿಂದೆಂದೂ ಇಲ್ಲ.
ಹೀಗಾಗಿ, ಲಾಕ್‌ಡೌನ್‌ ಸಡಿಲಿಕೆಯ ನಾನಾ ಹಂತಗಳಲ್ಲಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ತೀವ್ರವಾಗಿತ್ತು. ಇದೀಗ ಜೂನ್ 8ರಿಂದ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅವಕಾಶ ನೀಡಲು ಕೇಂದ್ರ ಸರಕಾರ ಸೂಚಿಸಿದೆ. ಬಹುಕಾಲದಿಂದ ದೇವರ ದರ್ಶನಕ್ಕೆ ಹಾತೊರೆಯುತ್ತಿದ್ದ ಭಕ್ತರು ಜೂನ್ 8ಕ್ಕೇ ದೇವಾಲಯ ತಲುಪಲು ಪ್ರಯತ್ನಿಸುವ ಸಾಧ್ಯತೆಗಳಿವೆ. ಆದರೆ, ಅವರು ಹೇಳಿಕೊಂಡಿರುವ ಹರಕೆ ಪೂರೈಸಲು ಸಾಧ್ಯವಾಗದೆ ನಿರಾಶರಾಗುವ ಸಂಭವವೂ ಇದೆ. ಜತೆಗೆ ಹೆಚ್ಚಿನ ಭಕ್ತರು ಏಕಕಾಲದಲ್ಲಿ ಧಾವಿಸಿದರೆ ಜನದಟ್ಟಣೆ ಉಂಟಾಗಿ ಸಾಮಾಜಿಕ ಅಂತರ ಕಾಪಾಡುವುದು ಕೂಡ ಕಷ್ಟ. ದೇವಾಲಯಗಳಿಗೆ ಸಂಬಂಧಿಸಿದ ಛತ್ರಗಳು ಹೆಚ್ಚಿನೆಡೆ ಒಮ್ಮೆಗೇ ತೆರೆದುಕೊಳ್ಳುವ ಸಾಧ್ಯತೆ ಇಲ್ಲ. ವಸತಿ ವ್ಯವಸ್ಥೆ ಹೇಗಿದೆ ಎಂಬುದನ್ನು ಗಮನಿಸಿಕೊಂಡು ಹೋಗುವುದು
ಉತ್ತಮ.

ಪ್ರಮುಖ ನಿಯಮಗಳು
– 65 ವರ್ಷ ಮೀರಿದ ಹಿರಿಯರು, 10ರ ಕೆಳ ಹರೆಯದ ಮಕ್ಕಳು, ಗರ್ಭಿಣಿಯರಿಗೆ ಪ್ರವೇಶವಿಲ್ಲ
– ಪಾದರಕ್ಷೆಗಳನ್ನು ದೇಗುಲದ ಬಳಿ ತರಬಾರದು
– ಪ್ರವೇಶಕ್ಕೆ ಮುನ್ನ ಕೈ ಕಾಲು ತೊಳೆಯಬೇಕು
– ಸರತಿ ಸಾಲಿನಲ್ಲಿ 6 ಅಡಿ ಅಂತರ ಕಾಯಬೇಕು
– ಪ್ರವೇಶ, ನಿರ್ಗಮನಕ್ಕೆ ಪ್ರತ್ಯೇಕ ಬಾಗಿಲು
– ವಿಗ್ರಹ, ಗ್ರಂಥಗಳನ್ನು ಮುಟ್ಟುವಂತಿಲ್ಲ
– ಸಾಮೂಹಿಕ ಭಜನೆ ಬೇಡ
– ಪ್ರಸಾದ, ತೀರ್ಥ ಪ್ರೋಕ್ಷಣೆಗೆ ಅವಕಾಶವಿಲ್ಲ.

ಸೇವೆಗಳು ತಕ್ಷಣ ಆರಂಭ ಇಲ್ಲ
ದೇಗುಲಗಳು ತೆರೆದರೂ ಅಲ್ಲಿನ ಪ್ರಮುಖ ಸೇವೆಗಳು ಕೂಡಲೇ ಆರಂಭವಾಗುವುದು ಸಂಶಯ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಪೂಜೆ ಮತ್ತು ಸರ್ಪ ಸಂಸ್ಕಾರ ಸೇವೆಗಳು ತಕ್ಷಣ ಆರಂಭವಾಗುವುದಿಲ್ಲ. ಕೊಲ್ಲೂರಿನಲ್ಲಿ ಚಂಡಿಕಾ ಹೋಮದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸದ್ಯಕ್ಕೆ ದರ್ಶನ ಮತ್ತು ಸಾಮಾಜಿಕ ಅಂತರ ಕಾಪಾಡುವುದರ ಮೇಲೆಯೂ ಹೆಚ್ಚಿನ ಗಮನ ನೀಡಲು ದೇವಾಲಯಗಳು ನಿರ್ಧರಿಸಿವೆ. ಆದರೆ, ಧರ್ಮಸ್ಥಳದಲ್ಲಿ ಬಹುತೇಕ ಎಲ್ಲ ಸೇವೆಗಳು ನಡೆಯಲಿವೆ.

ಕೆಲವು ಕಡೆ 1 ವಾರ ವಿಳಂಬ
ಉಡುಪಿ ಕೃಷ್ಣ ಮಠ, ಹೊರನಾಡು, ಗೋಕರ್ಣ, ಶೃಂಗೇರಿ ಸೇರಿದಂತೆ ಹಲವಾರು ದೇವಾಲಯಗಳು ಜೂನ್ 8 ರಿಂದಲೇ ಓಪನ್ ಆಗುವುದಿಲ್ಲ. ಉಡುಪಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಿಳಂಬವಾಗಲಿದೆ. ಹೊರನಾಡು ದೇವಾಲಯದಲ್ಲಿ ಸದ್ಯಕ್ಕೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತ್ರ ದರ್ಶನ ಸಿಗಲಿದೆ. ಶೃಂಗೇರಿ ಶಾರದಾಂಬಾ ದೇಗುಲದಲ್ಲಿ ಕೆಲವು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಹಂತಹಂತವಾಗಿ ತಿರುಪತಿ ಓಪನ್
ತಿರುಪತಿ ತಿರುಮಲ ದೇವಾಲಯ ಹಂತಹಂತವಾಗಿ ತೆರೆದುಕೊಳ್ಳಲಿದೆ. ಜೂನ್ 8, 9ರಂದು ಟಿಟಿಡಿಯ ಸಿಬ್ಬಂದಿ ಮತ್ತು ಕುಟುಂಬಿಕರಿಗೆ ಅವಕಾಶ ನೀಡಲಾಗುತ್ತದೆ. ಜೂನ್ 10ರಂದು 500 ಮಂದಿ ಸ್ಥಳೀಯರಿಗೆ ಪ್ರವೇಶಾವಕಾಶ. ಜೂನ್ 11ರಿಂದ 3000 ಮಂದಿಗೆ 300 ರೂ. ಟೋಕನ್ ಪಡೆದು ದರ್ಶನಕ್ಕೆ ಅವಕಾಶ ನೀಡಲಾಗುವುದು. ಪುಷ್ಕರಿಣಿಯಲ್ಲಿ ಸ್ಥಾನಕ್ಕೆ ಅವಕಾಶವಿಲ್ಲ. ಛತ್ರಗಳಲ್ಲಿ ಒಂದು ಕೋಣೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top