ಆರ್ಥಿಕ ಸ್ವಾವಲಂಬನೆಗೆ ಸ್ವದೇಶಿ ಮಂತ್ರ

– ಎನ್‌.ರವಿಕುಮಾರ್‌.

ಇಂದು ದೇಶಗಳ ಮಧ್ಯೆ ನಡೆಯುತ್ತಿರುವುದು ಆರ್ಥಿಕ ಯುದ್ಧ. ಭಾರತ ಮತ್ತು ಚೀನಾ ದೇಶಗಳ ಮಧ್ಯೆ ನಡೆಯುತ್ತಿರುವುದು ಕೂಡ ಭೌಗೋಳಿಕ ಯುದ್ಧವಲ್ಲ; ಈ ಆರ್ಥಿಕ ಯುದ್ಧವೇ. ಚೀನಾ ಮೌನವಾಗಿ ನಡೆಸಿರುವ ಆರ್ಥಿಕ ಅಕ್ರಮಣ ನಮ್ಮ ಜನರ ಗಮನಕ್ಕೆ ಬರುತ್ತಿಲ್ಲ. ಭಾರತದಂತೆ ಚೀನಾ ಕೂಡ ಕೃಷಿ ಪ್ರಧಾನವಾಗಿತ್ತು. 70ರ ದಶಕದ ನಂತರ ಅದು ಉತ್ಪಾದನಾ ಶಕ್ತಿಯಾಗಿ ಬದಲಾವಣೆಯಾಯಿತು. ಇಂದು ಜಗತ್ತಿನ ಆರ್ಥಿಕ ಶಕ್ತಿ ಅಮೆರಿಕ ನಂತರ ಸ್ಥಾನ ಚೀನಾದ್ದು. ಇಂದು ಚೀನಾದ ಜಿಡಿಪಿ ಭಾರತದ 3ರಷ್ಟಿದೆ. ಚೀನಾದ ರಫ್ತು ನಮಗಿಂತ 10 ಪಟ್ಟು ಹೆಚ್ಚಿದೆ. ಚೀನಾದ ರಕ್ಷಣಾ ಬಜೆಟ್‌ ನಮಗಿಂತ 7 ಪಟ್ಟು ಹೆಚ್ಚಿದೆ. ಜನಸಂಖ್ಯೆಯೂ ನಮಗಿಂತ ಸ್ವಲ್ಪ ಹೆಚ್ಚಿದೆ. ಭಾರತ ಮತ್ತು ಚೀನಾ ನಡುವೆ 83.6 ಬಿಲಿಯನ್‌ ಡಾಲರ್‌ನಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ. ಭಾರತದಲ್ಲಿ ಹೊಸ ಕೈಗಾರಿಕೆ ತೆರೆಯಲು 71 ದಿನ ಬೇಕಾದರೆ ಚೀನಾದಲ್ಲಿ ಕೇವಲ 38 ದಿನ ಸಾಕು. ಈ ರೀತಿ ಚೀನಾ ಜಾಗತೀಕರಣ ಮತ್ತು ಉದಾರೀಕರಣವನ್ನು ಸಮರ್ಥವಾಗಿ ಬಳಸಿಕೊಂಡು ಮುಂದೆ ಬಂದಿದೆ.
1991ರಲ್ಲಿ ಭಾರತ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸಿತು, ಉದಾರ ನೀತಿಯನ್ನು ಅಳವಡಿಸಿಕೊಂಡಿತು. ಆ ಸಮಯದಲ್ಲಿ ಚೀನಾದೊಂದಿಗೆ ಭಾರತದ ವ್ಯಾಪಾರ ಹೆಚ್ಚಿನ ಮಟ್ಟದಲ್ಲಿ ಇರಲಿಲ್ಲ. ಕಳೆದ 25 ವರ್ಷಗಳಲ್ಲಿ ನಮ್ಮ ವ್ಯಾಪಾರ ವಹಿವಾಟು ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ, ಚೀನಾ ಭಾರತದ ಅತ್ಯಂತ ದೊಡ್ಡ ವ್ಯಾಪಾರಿ ಜೊತೆಗಾರ ದೇಶವಾಗಿ ಬೆಳೆದಿದೆ. 1991ರಲ್ಲಿ 265 ದಶಲಕ್ಷ ಡಾಲರ್‌ಗಳಷ್ಟಿದ್ದ ವ್ಯಾಪಾರದ ಪ್ರಮಾಣ, 2014-15ರ ಹೊತ್ತಿಗೆ 72.34 ಶತಕೋಟಿ ಡಾಲರ್‌ ಮುಟ್ಟಿದೆ. ಇಲ್ಲಿ ನಡೆಯುತ್ತಿರುವ ವ್ಯಾಪಾರ ಚೀನಾಕ್ಕೆ ಹೆಚ್ಚು ಲಾಭದಾಯಕ. ಏಕೆಂದರೆ ಭಾರತದಿಂದ ಚೀನಾ ಆಮದು ಮಾಡಿಕೊಳ್ಳುವುದು ಅತಿ ಕಡಿಮೆ ಮತ್ತು ರಫ್ತು ಮಾಡುವುದು ಅತಿ ಹೆಚ್ಚು. ಇದರಿಂದ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ವ್ಯಾಪಾರದ ಕೊರತೆಯುಂಟಾಗುತ್ತಿದೆ ಮತ್ತು ವಿದೇಶಿ ವಿನಿಮಯ ನಷ್ಟವಾಗುತ್ತಿದೆ.

ಆಮದಿನಲ್ಲಿ ಚೀನಾ ಪ್ರಭಾವಿ
ವರ್ಷದಿಂದ ವರ್ಷಕ್ಕೆ ನಾವು ಚೀನಾಕ್ಕೆ ರಫ್ತು ಮಾಡುವುದು ಕುಗ್ಗುತ್ತಿದೆ. ಚೀನಾದಿಂದ ಆಮದು ಹೆಚ್ಚುತ್ತಿದೆ ಮತ್ತು ವ್ಯಾಪಾರದ ಕೊರತೆ ನಿರಂತರವಾಗಿ ಏರುತ್ತಿದೆ. ನಾವು ರಫ್ತು ಮಾಡುತ್ತಿರುವುದು ಕಡಿಮೆ ಬೆಲೆಯ ಕಚ್ಚಾ ಸಾಮಗ್ರಿಗಳು ಮಾತ್ರ. ನಮ್ಮ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಔಷಧಗಳು ಇತ್ಯಾದಿ ಸಿದ್ಧವಸ್ತುಗಳನ್ನು ಚೀನಾ ತರಿಸಿಕೊಳ್ಳುವುದಿಲ್ಲ. ಚೀನಾದಿಂದ ನಾವು ಆಮದು ಮಾಡಿಕೊಳ್ಳುತ್ತಿರುವುದು ಸಿದ್ಧವಸ್ತುಗಳು ಮತ್ತು ದುಬಾರಿ ಬೆಲೆಯ ಯಂತ್ರೋಪಕರಣಗಳು. ಚೀನಾ ಭಾರತದಿಂದ ಪಡೆಯುವ ವಸ್ತುಗಳೆಂದರೆ, ಕಬ್ಬಿಣದ ಅದಿರು, ತಾಮ್ರದ ಅದಿರು, ಕಚ್ಚಾ ಹತ್ತಿ, ಎಮ್ಮೆ ಮಾಂಸ ಇತ್ಯಾದಿ. ಚೀನಾದಿಂದ ಭಾರತಕ್ಕೆ ಆಮದಾಗುವ ವಸ್ತುಗಳೆಂದರೆ ದೂರಸಂಪರ್ಕ ಯಂತ್ರಗಳು, ವಿದ್ಯುತ್‌ ಜನರೇಟರ್‌ಗಳು, ರಾಸಾಯನಿಕಗಳು, ಟಯರ್‌ಗಳು, ಸ್ಟೀಲ್‌ ಪೈಪ್‌ಗಳು, ನಾನಾ ಬಗೆಯ ಆಟದ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ಸೌರಶಕ್ತಿ ಫಲಕಗಳು ಇತ್ಯಾದಿ.
ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಗೆ ಚೀನಾದ ಅಗ್ಗದ ಸರಕುಗಳು ಪ್ರವಾಹದ ರೀತಿಯಲ್ಲಿ ಹರಿದುಬಂದಿದೆ. ಮೊಬೈಲ್‌ಗಳು, ಟಾರ್ಚ್‌ಗಳು, ಆಟದ ಸಾಮಾನು, ಪ್ಲಾಸ್ಟಿಕ್‌ ಸಾಮಾನುಗಳು, ಎಲೆಕ್ಟ್ರಾನಿಕ್ಸ್‌ ಸಾಮಾನುಗಳು, ಹಣತೆಗಳು, ದೇವರ ಫೋಟೋಗಳು, ಫ್ರೇಮ್‌ಗಳು, ಅಡುಗೆ ಸಾಮಾನುಗಳು, ಪಟಾಕಿ, ಬೀಗದ ಕೈ ಸೇರಿದಂತೆ ಎಲ್ಲಾ ರೀತಿಯ ಸಿದ್ಧವಸ್ತುಗಳು ಬರುತ್ತಿವೆ. ನಾವು ಬಳಸುವ ವಸ್ತುಗಳಲ್ಲಿ ಚೀನಾದ ಪಾಲು ಯಂತ್ರೋಪಕರಣಗಳಲ್ಲಿ ಶೇ.25, ಸಿದ್ಧ ಉಡುಪುಗಳಲ್ಲಿ ಶೇ.75, ರೇಷ್ಮೆ ನೂಲು ಹಾಗೂ ರೇಷ್ಮೆ ಬಟ್ಟೆ ಶೇ.90, ಕೃತಕ ನೂಲು ಶೇ.60, ರಾಸಾಯನಿಕ ಹಾಗೂ ಔಷಧಿ ಸಾಮಗ್ರಿ ಶೇ.30, ರಸಗೊಬ್ಬರ ಶೇ.60, ಪಿಂಗಾಣಿ ಸಾಮಗ್ರಿ ಶೇ.66, ಕಂಪ್ಯೂಟರ್‌ ತಂತ್ರಾಂಶಗಳು ಶೇ.33, ಉಕ್ಕು ಶೇ.25, ಎಲೆಕ್ಟ್ರಾನಿಕ್‌ ವಸ್ತುಗಳು ಶೇ.656, ಸಿಮೆಂಟ್‌ ಶೇ.10ರಷ್ಟು ಇದೆ. ಹೀಗೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮೆಲ್ಲರ ಮನೆಗಳಿಗೆ ಚೀನಾ ನುಗ್ಗಿದೆ.
ಚೀನಾದಿಂದ ಡಂಪಿಂಗ್‌ :
100 ರೂ. ವೆಚ್ಚದಲ್ಲಿ ಸಿದ್ಧಗೊಳಿಸಿದ ವಸ್ತುವನ್ನು ರೂ.120ಕ್ಕೆ ಮಾರಿದರೆ ಅದಕ್ಕೆ ರೂ.20 ಲಾಭ ಸಿಗುತ್ತದೆ. ಉತ್ಪಾದನಾ ವೆಚ್ಚಕ್ಕಿಂತ ಸ್ವಲ್ಪ ಹೆಚ್ಚು ಬೆಲೆಗೆ ಮಾರುವುದು ನ್ಯಾಯಬದ್ಧ ವ್ಯಾಪಾರ. ಆದರೆ ಚೀನಾದ ವ್ಯಾಪಾರ ತಂತ್ರವೇ ಬೇರೆ. ಅದು ತನ್ನ ಅನೇಕ ಸರಕುಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರುತ್ತದೆ. ಅದರಿಂದ ಭಾರತೀಯ ದೊಡ್ಡ, ಮಧ್ಯಮ, ಸಣ್ಣ ಎಲ್ಲಾ ಉದ್ಯಮಗಳು ಮುಚ್ಚಿಹೋಗುತ್ತವೆ. ಚೀನಾದಲ್ಲಿರುವ ಕಮ್ಯುನಿಸ್ಟ್‌ ಸರಕಾರ ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನು ದಮನಿಸಿ, ರೈತರಿಂದ ಬಲವಂತವಾಗಿ ಜಮೀನನ್ನು ಕಿತ್ತುಕೊಂಡು ಕೈಗಾರಿಕೋದ್ಯಮಿಗಳಿಗೆ ನೀಡಿ, ಖೈದಿಗಳನ್ನೂ ನೌಕರರನ್ನೂ ಜೀತದಾಳುಗಳಂತೆ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತದೆ. ಹೀಗೆ ಕಾರ್ಮಿಕರ ಶೋಷಣೆಯ ಮೂಲಕ ಅಲ್ಲಿ ಉತ್ಪಾದನಾ ವೆಚ್ಚ ಕಡಿಮೆ.
ಆರ್ಥಿಕ ಆಕ್ರಮಣದ ದುಷ್ಪರಿಣಾಮ : 
ಚೀನಾದ ಕೈಗಾರಿಕಾ ಉತ್ಪನ್ನಗಳು ಭಾರಿ ಪ್ರಮಾಣದಲ್ಲಿ ಭಾರತಕ್ಕೆ ನುಗ್ಗುತ್ತಿರುವುದರಿಂದ ನಮ್ಮ ಸಂಘಟಿತ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ಗೃಹ ಕೈಗಾರಿಕೆಗಳು ಎಲ್ಲದರ ಮೇಲೂ ಭಾರಿ ದುಷ್ಪರಿಣಾಮ ಉಂಟಾಗುತ್ತಿದೆ. ಭಾರತದ ಕಬ್ಬಿಣ ಮತ್ತು ಉಕ್ಕು, ಯಂತ್ರೋಪಕರಣಗಳು, ರೇಡಿಯಲ್‌ ವೈರುಗಳು, ಹತ್ತಿಯ ಸಿದ್ಧ ಉಡುಪುಗಳು ಮುಂತಾದ ನೂರಾರು ದೊಡ್ಡ ಹಾಗೂ ಮಧ್ಯಮ ಕೈಗಾರಿಕೆಗಳು ನಷ್ಟ ಅನುಭವಿಸುತ್ತಿವೆ. ಇದರ ಪರಿಣಾಮವಾಗಿ ಭಾರತದ್ದೇ ಆದ ಶಿವಕಾಶಿಯ ಪಟಾಕಿ ಉದ್ಯಮ, ಅಲಿಘರ್‌ನ ಬೀಗದ ಉದ್ಯಮ, ಆಟದ ಸಾಮಾನುಗಳು, ಬೊಂಬೆಗಳು, ವಿಗ್ರಹಗಳು ಮುಂತಾದವನ್ನು ತಯಾರಿಸುವ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿದ್ದಾರೆ.
ಸ್ವದೇಶಿ ಬಳಕೆಯೇ ರಾಮಬಾಣ :
ಚೀನಾ ಸೈನಿಕರು ನಮ್ಮ ದೇಶಕ್ಕೆ ನುಗ್ಗದಂತೆ, ಗಡಿಗಳಲ್ಲಿ ನಮ್ಮ ಸೈನಿಕರು ಹಗಲಿರುಳು ಕಾವಲು ಕಾಯುತ್ತಾರೆ. ಹಾಗೆಯೇ ನಾವೆಲ್ಲರೂ ನಮ್ಮ ಮನೆಗೆ ಚೀನಾ ವಸ್ತುಗಳು ನುಗ್ಗದಂತೆ ಕಾಯಬೇಕಾಗಿದೆ. ಇದು ಒಂದು ರೀತಿಯ ಆರ್ಥಿಕ ಯುದ್ಧ. ಈ ಯುದ್ಧದಲ್ಲಿ ನಾವೆಲ್ಲರೂ ಸೈನಿಕರೇ. ಚೀನಾದಿಂದ ಬರುವ ವಸ್ತುಗಳು ಅಗ್ಗವಾದರೂ, ಅವುಗಳ ಗುಣಮಟ್ಟ ತೀರಾ ಕಡಿಮೆ. ಇದನ್ನೂ ಜನರಿಗೆ ಮನಗಾಣಿಸಬೇಕು. ಚೀನೀ ವಸ್ತುಗಳನ್ನು ಕೊಳ್ಳುವುದರಿಂದ ಭಾರತದ ಆರ್ಥಿಕತೆಯ ಮೇಲಾಗುವ ದುಷ್ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲಾಯಿತು ಮತ್ತು ಸಾರ್ವಜನಿಕವಾಗಿ ಅವುಗಳ ಹೋಳಿ ಮಾಡಲಾಯಿತು. ಇಂಥ ಅಭಿಯಾನ ಚೀನಾ ವಸ್ತುಗಳ ವಿರುದ್ಧವೂ ಆಗಬೇಕು.
ಸಮರ್ಥ ವಿದೇಶಿ ವಿನಿಮಯ :
1991ರ ಮೇ ತಿಂಗಳಲ್ಲಿ ಭಾರತ ವಿದೇಶಿ ಠೇವಣಿ ನಿಯಮಗಳ ಅನುಸಾರ ತಪ್ಪಿತಸ್ಥವಾಗುವುದನ್ನು ತಪ್ಪಿಸಲು ಭಾರತದಿಂದ ಜ್ಯೂರಿಚ್‌ಗೆ ವಿಮಾನದ ಮೂಲಕ 20 ಟನ್‌ ಚಿನ್ನವನ್ನು ಒತ್ತೆಯಿಡಲು ಕಳುಹಿಸಿ 240 ದಶಲಕ್ಷ ಡಾಲರ್‌ ಪಡೆಯಿತು ಮತ್ತು ಜುಲೈ ತಿಂಗಳಿನಲ್ಲಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನಲ್ಲಿ 47 ಟನ್‌ ಚಿನ್ನ ಒತ್ತೆಯಿಟ್ಟು 600 ದಶಲಕ್ಷ ಡಾಲರ್‌ ಸಂಗ್ರಹಿಸಲಾಗಿತ್ತು. ಆರ್‌ಬಿಐನ ಮಾಜಿ ಗವರ್ನರ್‌ ವೈ.ವಿ.ರೆಡ್ಡಿ ಅವರ ನೆನಪುಗಳ ‘ಅಡ್ವೈಸ್‌ ಆ್ಯಂಡ್‌ ಡಿಸೆಂಟ್‌’ನಲ್ಲಿ ಉಲ್ಲೇಖಿಸಿರುವಂತೆ ಅದನ್ನು ಸಾಕಷ್ಟು ಜನ ವೀಕ್ಷಿಸಿದರೂ, ಸಾಕ್ಷಿ ಸಮೇತ ದಾಖಲಿಸಲು ಈಗಿನಂತೆ ಗ್ಯಾಜೆಟ್‌ಗಳಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಬಿಜೆಪಿ ಸರಕಾರದ ವಿದೇಶಿ ವಿನಿಮಯ ಸಂಗ್ರಹ ಈಗ 500 ದಶಲಕ್ಷ ಡಾಲರ್‌ಗಳಿಗಿಂತ ಅಧಿಕವಾಗಿದೆ. ಆರ್‌ಬಿಐ ಮಾಹಿತಿಯ ಪ್ರಕಾರ ಜೂನ್‌ 12ಕ್ಕೆ ಕೊನೆಗೊಂಡ ವಾರದಲ್ಲಿ ಭಾರತ ಪ್ರಸ್ತುತ ಒಂದು ವರ್ಷಕ್ಕೂ ಹೆಚ್ಚು ಕಾಲ ಆಮದು ಮಾಡಿಕೊಳ್ಳುವಷ್ಟು ಮೀಸಲು ಸಾಮರ್ಥ್ಯ‌ ಹೊಂದಿದೆ.
ಸ್ವಾಭಿಮಾನಿ ಭಾರತ ಕಟ್ಟುವತ್ತ  :
ಭಾರತವು ಅತ್ಯಂತ ಧೈರ್ಯಶಾಲಿಯಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಪಿಪಿಇ ಕಿಟ್‌, ವೆಂಟಿಲೇಟರ್‌ ಕೊರತೆ ಉಂಟಾಗುವ ಮುನ್ನವೇ ಅವುಗಳನ್ನು ಸ್ವಾವಲಂಬಿಯಾಗಿ ತಯಾರಿಸಿದ್ದೇವೆ. ವಿದೇಶದಿಂದ ಏನನ್ನೂ ತರಿಸಿಕೊಳ್ಳಲಿಲ್ಲ. ಮೋದಿಯವರು ದೇಶವನ್ನು ಸಶಕ್ತಗೊಳಿಸಿ ‘ಆತ್ಮನಿರ್ಭರ ಭಾರತ’ವನ್ನಾಗಿಸಲು 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ. ‘ಲೋಕಲ್‌ ಸೆ ಗ್ಲೋಬಲ್‌’ ಎಂಬ ಘೋಷವಾಕ್ಯದ ಮೂಲಕ ಜಾಗತೀಕರಣದ ಬದಲಿಗೆ ಸ್ಥಳೀಯ ಉತ್ಪಾದನೆಯ ವಸ್ತುಗಳನ್ನೇ ಬ್ರಾಂಡ್‌ ಮಾಡಿ ಬಳಸಲು ಕರೆ ನೀಡಿದ್ದಾರೆ. ನಾವು ಸಮರ್ಥ, ಸಶಕ್ತ, ಸ್ವಾಭಿಮಾನಿ ಭಾರತ ಕಟ್ಟಲು ಸ್ವದೇಶಿ ವಸ್ತುಗಳನ್ನು ಬಳಸೋಣ. ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡೋಣ. ಚೀನಾದ ವಸ್ತುಗಳನ್ನು ಬಳಸಿ ಆ ದೇಶವನ್ನು ಬಲಿಷ್ಠಗೊಳಿಸಿದ್ದೇ ನಾವು. ಈಗ ಚೀನಾವನ್ನು ಸೋಲಿಸಲು ಭಾರತವನ್ನು ಗೆಲ್ಲಿಸಲು ಸ್ವದೇಶಿ ವಸ್ತುಗಳ ಉಪಯೋಗವೇ ರಾಮಬಾಣವೆಂದು ಸಂಕಲ್ಪ ಮಾಡೋಣ.

(ಲೇಖಕರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top