ಕೃಷಿ ವಲಯಕ್ಕೆ ಇನ್ನಷ್ಟು ಉತ್ತೇಜನ ನೀಡುವಂಥ ಕ್ರಮಗಳನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. 14 ಹಿಂಗಾರು ಬೆಳೆಗಳ ಬೆಂಬಲ ಬೆಲೆಯನ್ನು ಏರಿಸಿದೆ. ವಿವಿಧ ಬೆಳೆಗಳಿಗೆ ಶೇ.50ರಿಂದ ಶೇ. 83ರವರೆಗೆ ಗರಿಷ್ಠ ಬೆಂಬಲ ಬೆಲೆ ಏರಿಸಲಾಗಿದೆ. ಭತ್ತ, ಜೋಳ, ಸಜ್ಜೆ, ರಾಗಿ, ಹತ್ತಿ ಮುಂತಾದವು ಬೆಲೆ ಏರಿಕೆಯ ಲಾಭ ಪಡೆದಿವೆ. ಅಲ್ಪಾವಧಿ ಕೃಷಿ ಸಾಲಗಳ ಮರುಪಾವತಿಯ ಅವಧಿಯನ್ನು ವಿಸ್ತರಿಸಿದೆ. ರೈತರ ಲಾಭವನ್ನು ಶೇ.50ರಷ್ಟು ಹೆಚ್ಚಿಸಲು ಕ್ರಮ ತೆಗೆದುಕೊಂಡಿದೆ. ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ ನೀಡಲು ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ಮಧ್ಯಮ ಗಾತ್ರದ ಉದ್ಯಮಗಳ ವ್ಯವಹಾರ ಗಾತ್ರವನ್ನು 100 ಕೋಟಿಯಿಂದ 250 ಕೋಟಿ ರೂ.ಗೆ ಹೆಚ್ಚಿಸಿರುವುದು ವಿನಾಯಿತಿಗಳ ದೃಷ್ಟಿಯಿಂದ ಅನುಕೂಲಕರವಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೆಚ್ಚುವರಿ 20,000 ಕೋಟಿ ರೂ. ಸಾಲ ಹಾಗೂ 50,000 ಕೋಟಿ ರೂ. ಈಕ್ವಿಟಿ ನೀಡಲಾಗುತ್ತಿದೆ.
ಇವೆಲ್ಲವೂ, ಕೊರೊನಾಘಾತದಿಂದ ತತ್ತರಿಸಿದ ಹಾಗೂ ಲಾಕ್‌ಡೌನ್‌ನಿಂದ ಬಸವಳಿದ ಕೃಷಿ ಮತ್ತು ಉದ್ಯಮ ವಲಯವನ್ನು ಮೇಲೆತ್ತಲು ಸರಕಾರ ನೀಡುತ್ತಿರುವ ಸಹಾಯಗಳ ಸರಣಿಯಲ್ಲಿ ಇತ್ತೀಚಿನದು. ಈ ಎರಡು ವಲಯಗಳು ನಮ್ಮ ಆರ್ಥಿಕತೆಯಲ್ಲಿ ಅತ್ಯಂತ ಮುಖ್ಯವಾದದ್ದು. ಕೃಷಿ ನಮ್ಮ ಜಿಡಿಪಿಗೆ ಶೇ.20ರಷ್ಟು ಹಾಗೂ ಕಿರು-ಮಧ್ಯಮ ಉದ್ಯಮ ಶೇ.30ರಷ್ಟು ಕೊಡುಗೆ ನೀಡುತ್ತವೆ. ಇವುಗಳಿಗೆ ಬಲ ತುಂಬುವುದೆಂದರೆ ಆರ್ಥಿಕತೆಗೆ ಚೇತನ ತುಂಬಿದಂತೆ. ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಎರಡು ತಿಂಗಳ ಲಾಕ್‌ಡೌನ್‌ನ ಪರಿಣಾಮ ಬಹುತೇಕ ಮುಚ್ಚಿಯೇ ಹೋಗುವ ಪರಿಸ್ಥಿತಿ ಎದುರಿಸಿವೆ. ಇವುಗಳನ್ನು ನಂಬಿದ್ದ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಅಥವಾ ಆದಾಯದಲ್ಲಿ ಕೊರತೆ ಅನುಭವಿಸುತ್ತಿದ್ದಾರೆ. ಈ ವಲಯಕ್ಕೆ ನೀಡುವ ನೆರವಿನ ಉಪಕ್ರಮಗಳು ಅವರ ಬದುಕನ್ನು ಸುಧಾರಿಸಲು ಸಹಾಯವಾಗಬಲ್ಲವು. ಆದರೆ ಈ ನೆರವು ಅಧಿಕಾರಶಾಹಿಯ ಅಡೆತಡೆಗಳನ್ನು ಮೀರಿ ಅವರನ್ನು ತಲುಪುವುದು ಅಗತ್ಯ.
ಅತ್ಯಂತ ಹೆಚ್ಚಿನ ಹೊಡೆತ ತಿಂದಿರುವುದು, ಆದರೆ ಸದ್ಯ ದೇಶವನ್ನು ಪೊರೆಯುವ ಶಕ್ತಿ ಹೊಂದಿರುವುದು ಕೂಡ ಕೃಷಿ ಕ್ಷೇತ್ರವೇ. ಆಮದು- ರಫ್ತು ಏರುಪೇರಿನಿಂದ ಮಾರುಕಟ್ಟೆಯಲ್ಲಿ ಉಂಟಾಗುವ ತಲ್ಲಣಗಳು, ಕಾಳಸಂತೆಕೋರರ ಹಾವಳಿ, ಮಧ್ಯವರ್ತಿಗಳ ಕಾಟ, ಹವಾಮಾನ ವೈಪರೀತ್ಯ ಇತ್ಯಾದಿಗಳಿಂದ ಉಂಟಾಗುವ ಬೆಳೆ ಕುಸಿತ ಮುಂತಾದವುಗಳ ಜೊತೆಗೆ ಈ ಬಾರಿ ಕೊರೊನಾ, ಲಾಕ್‌ಡೌನ್, ಜಾಗತಿಕ ಬೇಡಿಕೆ ಕುಸಿತ ಇತ್ಯಾದಿಗಳೂ ಸೇರಿ ಕೃಷಿ ವಲಯವನ್ನು ಕಂಗೆಡಿಸಿವೆ. ಸಂಗ್ರಹಾಗಾರಗಳನ್ನು ಹೊಂದಿರಲು ಶಕ್ತರಲ್ಲದ ನಮ್ಮ ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ರೈತರು, ಮಾರುಕಟ್ಟೆಯ ವಿಪ್ಲವಗಳಿಗೆ ಸುಲಭದಲ್ಲಿ ತುತ್ತಾಗುವವರು. ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಬೆಂಬಲ ಬೆಲೆಗಳು ರೈತನ ಕೈ ಹಿಡಿಯುತ್ತವೆ. ಬೆಂಬಲ ಬೆಲೆ ಘೋಷಣೆಯಾದರೆ ಸಾಲದು, ಅದನ್ನು ಸಕಾಲದಲ್ಲಿ ಸರಿಯಾಗಿ ವ್ಯವಸ್ಥೆ ಕೂಡ ಜಾರಿಯಾಗಬೇಕು. ಸಹಾಯಧನ ಸಕಾಲದಲ್ಲಿ ಪಾವತಿಯಾದರೆ ರೈತರು ಕಾಯುವುದು ತಪ್ಪುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರ, ಲೋಪಗಳಿಗೆ ಆಸ್ಪದವಿಲ್ಲದಂತೆ ಕಾಯ್ದುಕೊಳ್ಳಬೇಕು. ಕಳೆದ ಒಂದು ದಶಕದಿಂದ ಸಾಲದ ಮರುಪಾವತಿ ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಗಾಬರಿಗೊಳಿಸುವಷ್ಟು ಹೆಚ್ಚಿದೆ. ಒಳ್ಳೆಯ ಬೆಲೆ ಇದ್ದಾಗಲೂ ಮಧ್ಯವರ್ತಿಗಳ ಹಾವಳಿಯಿಂದ ಅದು ರೈತರಿಗೆ ಸಿಗುತ್ತಿಲ್ಲ. ಇನ್ನೊಂದೆಡೆ, ಹೊಸ ಜಾಗತಿಕ ಆರ್ಥಿಕ ಬೆಳವಣಿಗೆಗಳು ಹೊರದೇಶಗಳ ಉತ್ಪಾದನೆಗಳನ್ನು ಅಗ್ಗವಾಗಿ ತಂದು ದೇಶದೊಳಗೆ ಸುರಿಯಲು ಹೊಂಚು ಹಾಕುತ್ತಿವೆ. ಇಂಥ ತಲ್ಲಣದ ಸ್ಥಿತಿಯಲ್ಲಿ ಬೆಂಬಲ ಬೆಲೆ, ಸಾಲ ಮನ್ನಾ, ಸಬ್ಸಿಡಿ, ಬೆಳೆ ವಿಮೆ ಇತ್ಯಾದಿ ಕ್ರಮಗಳು ಅಗತ್ಯವಾಗಿವೆ.