ವಿಕ ಸುಕದ್ದಿಲೋಕ ಬೆಂಗಳೂರು.
ಕೋವಿಡ್-19 ಆತಂಕದ ನಡುವೆ ಗುರುವಾರದಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಪರೀಕ್ಷೆಯ ಸುರಕ್ಷತೆ ವಿಚಾರವಾಗಿ ಮೊದಲಿದ್ದ ಆತಂಕ ದೂರವಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಎದುರಿಸಲು ಸಜ್ಜಾಗಿರುವುದು ಎಲ್ಲೆಡೆ ಕಂಡು ಬಂದಿದೆ.
ಪೋಷಕರು, ಶಿಕ್ಷಕರು, ಗಣ್ಯರು ಹಾಗೂ ಊರಿನ ಜನರು ವಿದ್ಯಾರ್ಥಿಗಳ ಬೆನ್ನಿಗೆ ನಿಂತು ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಎಲ್ಲೆಡೆ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸೇಷನ್ ಸೇರದಂತೆ ಸಕಲ ಸುರಕ್ಷತಾ ಕ್ರಮಗಳೊಂದಿಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಕೆಲವೆಡೆ ಶಾಲೆಗಳು ತಳಿರು-ತೋರಣಗಳಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿದ್ದು, ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸಿಎಂ ಯಡಿಯೂರಪ್ಪ, ನಾಡಿನ ಸ್ವಾಮಿಜಿಗಳು ಸೇರಿದಂತೆ ಹಲವು ಗಣ್ಯರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದು, ಅಭಯ ತುಂಬಿದ್ದಾರೆ.
‘‘ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಗೆ ಒತ್ತು ನೀಡಿರುವ ಸರಕಾರ, ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಶೇಷ ಆದ್ಯತೆ ನೀಡಿದೆ. ಪ್ರತಿ ಕೊಠಡಿಗೆ ಕೇವಲ 18ರಿಂದ 20 ವಿದ್ಯಾರ್ಥಿಗಳನ್ನು ಮಾತ್ರ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ವಿದ್ಯಾರ್ಥಿ ಮತ್ತು ಸಿಬ್ಬಂದಿ ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು ಸ್ಯಾನಿಟೈಸರ್‌ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿ, ದೇಹದ ಉಷ್ಣತೆಯನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದ ಒಳಗೆ ಹೋಗಲು ಅವಕಾಶ ನೀಡಲಾಗುವುದು,’’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
– ಸೋಂಕಿತರಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ
– ರಾಜ್ಯದ 10 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ
– ಪರೀಕ್ಷೆ ವೇಳೆ ವಿದ್ಯಾರ್ಥಿ ಸೋಂಕಿಗೆ ತುತ್ತಾದರೆ ಆ ಕೇಂದ್ರದ ಪರೀಕ್ಷೆ ರದ್ದು,
– ಆಗಸ್ಟ್‌ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ
– ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ವರೆಗೂ ನಿಷೇಧಾಜ್ಞೆ
– ಪರೀಕ್ಷಾ ಕೇಂದ್ರಗಳ ಸುತ್ತ 5,755 ಆರೋಗ್ಯ ತಪಾಸಣಾ ಕೌಂಟರ್ಗಳ ಸ್ಥಾಪನೆ
– 11 ಜಿಲ್ಲೆಗಳಲ್ಲಿ ಕಂಟೈನ್ಮೆಂಟ್ ವಲಯಗಳಲ್ಲಿದ್ದ 27 ಪರೀಕ್ಷಾ ಕೇಂದ್ರಗಳು ಸುರಕ್ಷಿತ ವಲಯಗಳಿಗೆ ಸ್ಥಳಾಂತರ
8,48,203 – ಪರೀಕ್ಷೆ ಬರೆಯಲಿರುವ ಒಟ್ಟು ಒಟ್ಟು ವಿದ್ಯಾರ್ಥಿಗಳು
4,48,560 – ಬಾಲಕರು
3,99,643 – ಬಾಲಕಿಯರು
2,879 – ಒಟ್ಟು ಪರೀಕ್ಷಾ ಕೇಂದ್ರಗಳು
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಕೆಗಳು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು. ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾದ ಈ ಪರೀಕ್ಷೆಯನ್ನು ಯಾವುದೇ ಆತಂಕ ಭಯವಿಲ್ಲದೆ ಆತ್ಮವಿಶ್ವಾಸದಿಂದ ಎದುರಿಸಿ ಯಶಸ್ಸು ಪಡೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಿಲಿ.
– ಬಿ.ಎಸ್.ಯಡಿಯೂರಪ್ಪ ಸಿಎಂ