ಸಿದ್ದರಾಮಯ್ಯ ಅದೃಷ್ಟರೇಖೆಯೂ ಬೆಂಗಳೂರಿನ ಅಗ್ನಿಪರೀಕ್ಷೆಯೂ…

ಬಿಬಿಎಂಪಿ ಚುನಾವಣೆ ಒಂಥರಾ ಸಾರ್ವತ್ರಿಕ ಚುನಾವಣೆ ಇದ್ದಂತೆ. ಇದು ರಾಜ್ಯರಾಜಕಾರಣದ ದಿಕ್ಸೂಚಿಯೂ ಹೌದು. ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವ ಸಾಧ್ಯತೆಯೂ ಹೆಚ್ಚು. ಈ ಎಲ್ಲ ಕಾರಣಗಳಿಗಾಗಿ ಈ ಚುನಾವಣೆ ಸಿಎಂ ಸಿದ್ದರಾಮಯ್ಯ ಪಾಲಿಗೆ ನಿಜವಾದ ಸವಾಲು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೃಷ್ಟದ ಕೈಚಳಕವನ್ನು ನಂಬುತ್ತಾರೋ ಇಲ್ಲವೋ? ಅದು ಬೇರೆ ವಿಚಾರ. ಆದರೆ ಅವರು ಈ ರಾಜ್ಯ ಕಂಡ ಮಹಾ ಅದೃಷ್ಟವಂತ ಮುಖ್ಯಮಂತ್ರಿ ಎಂಬುದರಲ್ಲಿ ಅನುಮಾನವಿಲ್ಲ. ರಾಜಕೀಯ ಏರಿಳಿತದ ಹಾದಿಯಲ್ಲಿ ಅನಿರೀಕ್ಷಿತ ತಿರುವಿನಲ್ಲಿ ಸಾಗಿ ಕಾಂಗ್ರೆಸ್ ಪಕ್ಷದ ಕದ ತಟ್ಟಿದ ಅವರ ಪಾಲಿಗೆ ಆ ನಿರ್ಧಾರ ರಾಜಕೀಯ ಪುನರ್ಜನ್ಮ ಮಾತ್ರವಾಗದೆ ಅಧಿಕಾರವೆಂಬ ಅದೃಷ್ಟದ ಬಾಗಿಲು ತೆರೆದಂತೆಯೇ ಆಯಿತು.

ಎಬಿಪಿಜೆಡಿ ಕಟ್ಟಬೇಕಿತ್ತು: 2006ನೇ ಇಸವಿ. ಮಾಜಿ ಪ್ರಧಾನಿ ದೇವೇಗೌಡರ ಜತೆಗೆ ಮುನಿಸಿಕೊಂಡು ಜೆಡಿಎಸ್ನಿಂದ ಹೊರಬಿದ್ದ ಸಿದ್ದರಾಮಯ್ಯ ಒಂದು ಹಂತದಲ್ಲಿ ತಮ್ಮದೇ

ಆದ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ತೀರ್ವನಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಅವರು ಅದೇ ವರ್ಷದ ಜುಲೈ ತಿಂಗಳಿನಲ್ಲಿ ಅಖಿಲ ಭಾರತ ಪ್ರಗತಿಪರ ಜನತಾದಳ(ಎಬಿಪಿಜೆಡಿ)ವೆಂಬ ಸ್ವಂತ ರಾಜಕೀಯ ರಥಕ್ಕೆ ಚಾಲನೆ ಕೊಡಬೇಕಿತ್ತು. ಆದರೆ ಆದದ್ದೇ ಬೇರೆ.

ಕಾಂಗ್ರೆಸ್ನತ್ತ ಮುಖ: ಕಾಂಗ್ರೆಸ್ ಪಾಳಯಕ್ಕೆ ಸೇರುವ ವಿಷಯದಲ್ಲಿ ಮೊದ ಮೊದಲು ಸ್ವತಃ ಸಿದ್ದರಾಮಯ್ಯನವರಿಗೇ ಸ್ಪಷ್ಟತೆ ಇರಲಿಲ್ಲ. ಎಬಿಪಿಜೆಡಿ ಕಟ್ಟಬೇಕೇ? ಅಥವಾ ದೀರ್ಘ ಕಾಲದಿಂದ ವಿರೋಧಿಸಿಕೊಂಡು ಬಂದ ಕಾಂಗ್ರೆಸ್ಸನ್ನು ಸೇರಬೇಕೇ? ಎಂಬ ಬಗ್ಗೆ ಅವರಲ್ಲಿ ಗೊಂದಲವಿತ್ತು. ನೇರ ನಡೆನುಡಿಗೆ ಹೆಸರಾದ ತಾನು ಕಾಂಗ್ರೆಸ್ ಸೇರಿದರೆ ಸಮರ್ಥಿಸಿಕೊಳ್ಳುವುದು ಹೇಗೆಂಬ ಆತಂಕಕ್ಕೂ ಸಿಲುಕಿ ದ್ದರು. ಅವರ ಆಪ್ತ ವಲಯದಲ್ಲೂ ಈ ವಿಷಯವಾಗಿ ಒಮ್ಮತವಿರಲಿಲ್ಲ. ಇಷ್ಟೆಲ್ಲದರ ನಡುವೆ ಗಟ್ಟಿ ತೀರ್ವನಕ್ಕೆ ಬಂದ ಸಿದ್ದರಾಮಯ್ಯ ಜುಲೈ 3ನೇ ವಾರದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಉಪಸ್ಥಿತಿಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಬಂದೇಬಿಟ್ಟರು. ಅದು ಅವರ ರಾಜಕೀಯ ಜೀವನದ ಮಹತ್ವದ ತಿರುವಾಯಿತು ಕೂಡ.

ಖರ್ಗೆ ದುರದೃಷ್ಟ: ಕಾಂಗ್ರೆಸ್ ಸೇರಬಯಸಿ ಹೊಸ ರಾಜಕೀಯ ದಿಕ್ಕು ಕಂಡುಕೊಳ್ಳಲು ಮುಂದಾಗಿದ್ದ ಸಿದ್ದರಾಮಯ್ಯಗೆ ಅನುಕೂಲ ಕೈ ಬೀಸಿ ಕರೆಯುತ್ತಿದ್ದರೆ, ಅತ್ತ ನಲ್ವತ್ತು ವರ್ಷ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದೃಷ್ಟ ಕೈ ಕೊಡತೊಡಗಿತ್ತು. 2008ರ ಅಸೆಂಬ್ಲಿ ಚುನಾವಣೆ ಖರ್ಗೆಯವರ ಬಹುಕಾಲದ ಆಸೆಗೆ ತಣ್ಣೀರೆರಚಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡು ಬಿಜೆಪಿ ಸರ್ಕಾರ ರಚನೆ ಮಾಡಿತು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಖರ್ಗೆ ನೇತೃತ್ವದಲ್ಲೇ ಆ ಚುನಾವಣೆ ಎದುರಿಸಲು ಹೈಕಮಾಂಡ್ ತೀರ್ವನಿಸಿದ್ದರಿಂದ ಪಕ್ಷದ ಸೋಲಿನ ಹೊಣೆ ಸಹಜವಾಗಿ ಖರ್ಗೆ ಹೆಗಲೇರಿತ್ತು. ಅವರ ಬ್ಯಾಡ್ಲಕ್ ಸರಣಿ ಅಷ್ಟಕ್ಕೇ ನಿಲ್ಲುವುದಿಲ್ಲ. ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ರಾಜ್ಯದಲ್ಲಿ ಜಯದ ಗ್ಯಾರಂಟಿ ಇರುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದರು. ಹೀಗಾಗಿ ಕಲಬರಗಿ ಕ್ಷೇತ್ರದಿಂದ ಖರ್ಗೆ ಸ್ಪರ್ಧೆಗೆ ಹೈಕಮಾಂಡ್ ಒಲವು ತೋರಿತು. ಇಲ್ಲಿ ಸಿಎಂ ಆಗುವ ಆಸೆ ಕೈಗೂಡದಿದ್ದಾಗ ಕೇಂದ್ರದಲ್ಲಿ ಮಂತ್ರಿ ಆಗುವ ಆಸೆ ಚಿಗುರೊಡೆದಿರಲೂ ಸಾಕು, ಖರ್ಗೆ ಲೋಕಸಭೆ ಪ್ರವೇಶಿಸಿದರು. ಅದು ಖರ್ಗೆಯವರ ರಾಜಕೀಯ ಜೀವನದ ದಿಕ್ಕುತಪ್ಪಿದ ನಡೆಯಾದರೆ, ಅದೇ ಘಳಿಗೆ ಸಿದ್ದರಾಮಯ್ಯ ಅವರಿಗೆ ವರದಾನವಾಗಿಬಿಟ್ಟಿತು.

ವಿಪಕ್ಷ ನಾಯಕನಾಗಲು ಕೊಸರಾಟ: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಎಂಟ್ರಿ ಅಷ್ಟು ಸಲೀಸಾಗೇನೂ ಇರಲಿಲ್ಲ. ‘ನಲ್ವತ್ತು ವರ್ಷ ದುಡಿದ ನಮಗೇ ಇಲ್ಲಿ ಜಾಗ ಇಲ್ಲ, ಇವರೊಬ್ಬರು ಬಂದರು, ಆದ್ರೂ ಸಹಿಸಿಕೊಳ್ಳಬೇಕಪ್ಪ’! ಎಂಬ ಮಾತು ಪಕ್ಷದ ಉನ್ನತ ನಾಯಕರಿಂದಲೇ ಬಂದಿತ್ತು. ಈ ಅಸಹನೆ, ಕುಹಕ ಸಿದ್ದರಾಮಯ್ಯ ಅವರ ಸಹನೆಯನ್ನೇ ಪರೀಕ್ಷಿಸಿತ್ತು. ಬಹುಕಾಲದ ಆಪ್ತ ಸಿಎಂ ಇಬ್ರಾಹಿಂಗೆ ಮೇಲ್ಮನೆ ಟಿಕೆಟ್ ಸಿಗದಿದ್ದಾಗ ಸಿದ್ದರಾಮಯ್ಯ ಅಸಹನೆ ಕಟ್ಟೆಯೊಡೆಯಿತು. ಆದರೆ ಮಜಾ ಅಂದರೆ ಅದೇ ಹೂಂಕಾರ ಅವರಿಗೆ ಖರ್ಗೆ ತೆರವು ಮಾಡಿದ್ದ ವಿಪಕ್ಷ ನಾಯಕನ ಸ್ಥಾನವನ್ನು ತಂದುಕೊಟ್ಟಿತು. ಸಿದ್ದು ಸಿಟ್ಟಿನಿಂದ ಇಬ್ರಾಹಿಂಗೆ ಅನುಕೂಲವಾಗಲಿಲ್ಲ. ಆದರೆ ಸ್ವತಃ ಸಿದ್ದರಾಮಯ್ಯನವರ ಅನುಕೂಲಕ್ಕೇ ಬಂತು.

ಐತಿಹಾಸಿಕ ದಿನ: ಆಂತರಿಕ ಕಲಹದಿಂದ ಬಿಜೆಪಿ ಸರ್ಕಾರದ ವರ್ಚಸ್ಸು ಕುಂದಿತ್ತು. ಗಣಿ ರಾಜಕಾರಣದ ಅಟ್ಟಹಾಸ ಅಸಹ್ಯ ಮೂಡಿಸುವ ಹಂತ ತಲುಪಿತ್ತು. ಬಳ್ಳಾರಿಗೆ ಬರಲು ಗಣಿ ರೆಡ್ಡಿಗಳು ವಿಧಾನಸಭೆಯಲ್ಲಿ ಪಂಥಾಹ್ವಾನ ನೀಡಿದ್ದಕ್ಕೆ ಪ್ರತಿಯಾಗಿ ತೊಡೆ ತಟ್ಟಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ವಿಟ್ ಇಂಡಿಯಾ ದಿನವಾದ ಆಗಸ್ಟ್ 9 (2010)ರಂದು ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಆರಂಭಿಸಿಯೇಬಿಟ್ಟರು. ಆಗ ಆರ್.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದರಾದರೂ ಪಾದಯಾತ್ರೆ ಯಶಸ್ಸಿನ ಕಿರೀಟ ಸಿದ್ದರಾಮಯ್ಯನವರಿಗೇ ಸೇರಿತು. ಪಾದಯಾತ್ರೆ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಸುಣ್ಣವಾದರೆ, ಪಾದಯಾತ್ರೆ ಖ್ಯಾತಿಯ ಸಿದ್ದರಾಮಯ್ಯ ಅನಾಯಾಸವಾಗಿ ಸಿಎಂ ಪಟ್ಟ ಅಲಂಕರಿಸಿದರು.

ಭಾಗ್ಯದ ಬಾಗಿಲು: ಜನತಾದಳದಿಂದ ಕಾಂಗ್ರೆಸ್ಗೆ ಬಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಯೋಚಿಸಿದರಾ ಎಂಬುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಚರ್ಚೆ. ಈ ಭಾವನೆಗೆ ಆರಂಭದಲ್ಲೇ ಇಂಬು ನೀಡಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಲ್ಲೇ, ಪೂರ್ಣಪ್ರಮಾಣದ ಸಂಪುಟ ರಚನೆ ಆಗುವುದಕ್ಕೂ ಮೊದಲೇ ಘೊಷಣೆ ಮಾಡಿದ ಅನ್ನಭಾಗ್ಯ ಯೋಜನೆ. ಈ ಯೋಜನೆ ಬಡವರಿಗೆ ಖುಷಿ ತಂದಿದೆಯಾದರೂ, ಅದರ ದೂರಗಾಮಿ ಆರ್ಥಿಕ, ಸಾಮಾಜಿಕ ಪರಿಣಾಮದ ಚರ್ಚೆಯನ್ನೂ ಹುಟ್ಟುಹಾಕಿದ್ದು ಸುಳ್ಳಲ್ಲ. ಇನ್ನೊಂದೆಡೆ, ಕಾಲಕ್ರಮೇಣ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಅಂತರ, ತಿಕ್ಕಾಟ ಹೆಚ್ಚಿತು.

ನಿಗಮ-ಮಂಡಳಿಗೆ ‘ಮೂಲ’ ಸಮಸ್ಯೆ: ಅನ್ನಭಾಗ್ಯ ಘೊಷಣೆಯಿಂದ ಆರಂಭವಾದ ಬಾಲಗ್ರಹಪೀಡೆ ಸಿದ್ದರಾಮಯ್ಯನವರನ್ನು ವಿಪರೀತವಾಗಿ ಕಾಡಿದ್ದು ನಿಗಮ ಮಂಡಳಿ ನೇಮಕದ ವಿಚಾರ. ಮೂಲ ಕಾಂಗ್ರೆಸ್ಸಿಗರಿಗೆ ಎಷ್ಟು ಮತ್ತು ಯಾವ ನಿಗಮದ ಚುಕ್ಕಾಣಿ ಕೊಡಬೇಕೆಂಬ ಹಗ್ಗ ಜಗ್ಗಾಟದಲ್ಲಿಯೇ ಎರಡು ವರ್ಷ ಕಳೆಯಿತು. ನಂತರ ಅರ್ಧದಷ್ಟು ನಿಗಮ ಮಂಡಳಿಗಳಿಗೆ ನೇಮಕಾತಿ ಆದೇಶ ಹೊರಬಿತ್ತಾದರೂ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ, ಪೂರ್ಣಪ್ರಮಾಣದಲ್ಲಿ ಅಧಿಕಾರ ಹಂಚಿಕೆ ಆಗಲಿಲ್ಲ ಎಂಬ ಕೊರಗು ಇದ್ದೇ ಇದೆ.

ಸಂಪುಟ ಆಕಾಂಕ್ಷಿಗಳಿಗೆ ‘ನಾಳೆ’ ಸೂತ್ರ: ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬ ಹೊಯ್ದಾಟದಲ್ಲೂ ಅಧಿಕಾರ ಹಂಚಿಕೆ ವಿಚಾರದಲ್ಲಿನ ಆಂತರಿಕ ತುಮುಲ ಢಾಳಾಗಿ ಕಾಣಿಸಿತು. ಆದರೆ ಆಪ್ತರಲ್ಲದವರಿಗೆ ಅಧಿಕಾರ ನಿರಾಕರಣೆಗೆ ಮೂರ್ನಾಲ್ಕು ಅಧಿವೇಶನಗಳು, ಉಪಚುನಾವಣೆ, ಲೋಕಸಭಾ ಚುನಾವಣೆಯಿಂದ ಹಿಡಿದು ಇದೀಗ ಎದುರಾಗಿರುವ ಬಿಬಿಎಂಪಿ ಚುನಾವಣೆಯವರೆಗೆ ಎಲ್ಲವೂ ಸಿಎಂ ನೆರವಿಗೆ ಬಂದವು ಎಂಬುದು ನಿರ್ವಿವಾದ.

ಪರಂ ಸೋಲಿನಿಂದ ಹಾದಿ ಸುಗಮ: ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಹೆಚ್ಚು ನಿರಾಳವಾಗಿಸಿದ್ದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರ ಸೋಲು. ಅಸೆಂಬ್ಲಿ ಚುನಾವಣೆಯಲ್ಲಿ ಪರಮೇಶ್ವರ್ ಗೆಲುವಿನ ನಗೆ ಬೀರಿದ್ದರೆ ಸಿದ್ದರಾಮಯ್ಯ ಸಿಎಂ ಆಗುವುದಕ್ಕೆ ಬಲವಾದ ಪೈಪೋಟಿ ಎದುರಾಗುತ್ತಿತ್ತು. ಆದರೆ ಅನಾಯಾಸವಾಗಿ ಸಿದ್ದರಾಮಯ್ಯ ಆ ಸವಾಲಿನಿಂದ ಬಚಾವಾದರು. ಹಾಗಾಗಿ, ಏನೇ ಪ್ರಯಾಸಪಟ್ಟರೂ ಪರಮೇಶ್ವರ ಶಸ್ತ್ರತ್ಯಾಗ ಮಾಡಿ ಮುಖ್ಯಮಂತ್ರಿ ಆಗುವ ಮಾತು ಹಾಗಿರಲಿ, ಮಂತ್ರಿಯಾಗುವ ಆಕಾಂಕ್ಷೆಯನ್ನೂ ಕೈಚೆಲ್ಲುವ ಅನಿವಾರ್ಯತೆ ಸೃಷ್ಟಿಯಾಯಿತು.

ಬಿಬಿಎಂಪಿ ಎಂಬ ಅಗ್ನಿಪರೀಕ್ಷೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಒಂಥರ ಸಾರ್ವತ್ರಿಕ ಚುನಾವಣೆಯಿದ್ದಂತೆ. ಇದು ಇಡೀ ರಾಜ್ಯ ರಾಜಕಾರಣದ ದಿಕ್ಸೂಚಿಯೂ ಹೌದು. ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಸಾಧ್ಯತೆಯೂ ಹೆಚ್ಚು. ಈ ಎಲ್ಲ ಕಾರಣಗಳಿಗಾಗಿ ಈ ಚುನಾವಣೆ ಸಿಎಂ ಸಿದ್ದರಾಮಯ್ಯ ಪಾಲಿಗೆ ನಿಜವಾದ ಸವಾಲು; ಮಾಡು ಇಲ್ಲವೇ ಮಡಿ ಹೋರಾಟದ ಅನಿವಾರ್ಯತೆಯನ್ನೂ ಸೃಷ್ಟಿಸಿದೆ. ಕಾಂಗ್ರೆಸ್ ಪಾಲಿಗೆ ಇದು ಲಿಟ್ಮಸ್ ಟೆಸ್ಟ್. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾರಣಕ್ಕೆ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಬಹುದು ಎಂಬ ಸಾಮಾನ್ಯ ಲೆಕ್ಕಾಚಾರ ಸಹಜವಾದರೂ, ಟಿಕೆಟ್ ಹಂಚಿಕೆ ಹಂತದಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ವ್ಯವಸ್ಥಿತ ಹೊಂದಾಣಿಕೆ ಆಗಿರುವುದು ಸಿಎಂ ನಿದ್ದೆಗೆಡಿಸುವ ಅಂಶವೇ ಸರಿ. ಅದೂ ಅಲ್ಲದೆ ಸಂಪ್ರದಾಯದಂತೆ ಬೆಂಗಳೂರು ನಗರದ ಸುಶಿಕ್ಷಿತ ಮತದಾರರು ಬಿಜೆಪಿಯನ್ನು, ದೇವೇಗೌಡರ ಮೇಲಿನ ಒಲವಿಗಾಗಿ ಒಕ್ಕಲಿಗರು, ಮುಸ್ಲಿಮರು ಮತ್ತು ಇತರ ಸಣ್ಣಪುಟ್ಟ ದುರ್ಬಲ ಸಮುದಾಯದವರು ಜೆಡಿಎಸ್ ಕೈ ಹಿಡಿದರೆ ಸಿದ್ದರಾಮಯ್ಯ ತಲೆಬೇನೆ ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಮುಂದಿದೆ ಕದನ ಕುತೂಹಲ: ಕಳೆದ ಅಧಿವೇಶನದ ಸಂದರ್ಭದಲ್ಲಿ ಸಿಎಂ ಮತ್ತು ಅವರ ಆಪ್ತರ ವಿರುದ್ಧ ಗುಂಪು ಸಭೆ ನಡೆಸಿದ್ದ ಅತೃಪ್ತ ಶಾಸಕರು ಮತ್ತೆ ಕ್ರಿಯಾಶೀಲವಾಗುವ ಎಲ್ಲ ಸಾಧ್ಯತೆಗಳೂ ಇವೆ. ಅದಕ್ಕಿಂತ ಹೆಚ್ಚಾಗಿ ಆ.25ರ ನಂತರ ಅತೃಪ್ತ ಮತ್ತು ಅವಕಾಶ ವಂಚಿತ ಶಾಸಕರು ನಾಯಕತ್ವ ಬದಲಾವಣೆಗೆ ಬೇಡಿಕೆ ಮುಂದಿಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಪ್ರಯತ್ನದಲ್ಲಿದ್ದಾರೆ. ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಮೂವರು ಮತ್ತು ಹಾಸನ ಮೂಲದ ಓರ್ವ ಪ್ರಮುಖ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ 35 ಶಾಸಕರು ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಡಿಕೆಶಿ ನೇತೃತ್ವದಲ್ಲಿ ಸುಮಾರು 25 ಶಾಸಕರು ಕನ್ನಿಂಗ್ ಹ್ಯಾಮ್ ರಸ್ತೆಯ ಶಾಮನೂರು ಫ್ಲಾಟ್ನಲ್ಲಿ ಸಭೆ ನಡೆಸಿದ್ದಾರೆ. ಇವೆಲ್ಲದರ ಒಟ್ಟಾರೆ ಪರಿಣಾಮ ಬಿಬಿಎಂಪಿ ಚುನಾವಣೆಯ ಮಾರನೇ ದಿನದಿಂದಲೇ ಅನುಭವಕ್ಕೆ ಬಂದರೆ ಅಚ್ಚರಿಯಿಲ್ಲ.

***

ಖರ್ಗೆ ನಡೆ ತಂದ ತಲೆಬಿಸಿ

ಬೇರೆಲ್ಲದರ ಜತೆ ಮತ್ತಷ್ಟು ತಲೆಬಿಸಿಗೆ ಕಾರಣವಾದದ್ದು ಮಲ್ಲಿಕಾರ್ಜುನ ಖರ್ಗೆ ನಡೆ. ಮೂಲಗಳ ಪ್ರಕಾರ, ದೆಹಲಿ ರಾಜಕಾರಣದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಖರ್ಗೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತ್ತು ಹಿಂದುಳಿದ ವರ್ಗಗಳವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆರಂಭಿಸಿದ್ದಾರೆ; ಹಿರಿಯ ಶಾಸಕರನೇಕರು ಖರ್ಗೆ ಲಯಕ್ಕೆ ತಾಳ ಹಾಕುತ್ತಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ. ಅಂದರೆ, ಹಿಂದೆ ಕಳೆದುಕೊಂಡಿದ್ದನ್ನು ಈಗ ಗಳಿಸುವ ಯತ್ನದಲ್ಲಿ ಖರ್ಗೆ ಇದ್ದಾರಾ? ಕಾಲವೇ ಹೇಳಬೇಕಷ್ಟೆ.

***

ಕೈಗಾರಿಕಾ ಖಾತೆ ಬದಲಾವಣೆ ದಿಕ್ಸೂಚಿಯೇ?

ಕಾಂಗ್ರೆಸ್ ಪಕ್ಷಕ್ಕೆ ಇಡೀ ದೇಶದಲ್ಲಿ ಅಶಕ್ತತೆ ಕಾಡುತ್ತಿದೆ. ಆದ್ದರಿಂದ ಇರುವ ಒಂದು ಪ್ರಮುಖ ರಾಜ್ಯ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡುವ ರಿಸ್ಕನ್ನು ಇಷ್ಟು ದಿನ ತೆಗೆದುಕೊಳ್ಳದೇ ಇದ್ದದ್ದು ಸಹಜ. ಆದರೆ ಉಳಿದ ಎರಡು ವರ್ಷ ಅವಧಿಯಲ್ಲೂ ಹೈಕಮಾಂಡ್ ಇದೇ ನಿಲುವನ್ನು ಮುಂದುವರಿಸುತ್ತದೆ ಎನ್ನಲಾಗದು. ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾಗುವುದಾದರೆ ಕಾರಣ ಹಲವು. ಮೂಲ ಕಾಂಗ್ರೆಸ್ಸಿಗರ ಅತೃಪ್ತಿ, ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎನ್ನುವ ಕೊರಗು, ಜೆಡಿಎಸ್ ಮತ್ತೆ ಸೆಕ್ಯುಲರ್ ಮತಗಳಿಗೆ ಲಗ್ಗೆ ಹಾಕುವ ಮುನ್ಸೂಚನೆ ಇತ್ಯಾದಿ ಇತ್ಯಾದಿ. ಇದಕ್ಕೆ ಒಂದು ಉದಾಹರಣೆ ಕೈಗಾರಿಕಾ ಖಾತೆಯನ್ನು ದೇಶಪಾಂಡೆಯವರಿಗೆ ವಹಿಸಿದ್ದು. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ದೇಶಪಾಂಡೆ ನಿರೀಕ್ಷೆ ಮಾಡಿದ್ದ ಖಾತೆ ಈಗ ಒಲಿದು ಬರುವುದರ ಹಿಂದೆ ಹೈಕಮಾಂಡ್ನ ಅತೃಪ್ತಿಯ ಕಾರಣವೇನಾದರೂ ಇದ್ದೀತೇ? ಹೌದು ಎಂಬುದು ಊಹೆಗೆ ನಿಲುಕುವಂತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top