ಎಪಿಎಂಸಿ ಉಳಿಸಿ

– ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯಪಾಲರ ಅಂಗಳಕ್ಕೆ
– ಮಧ್ಯವರ್ತಿಗಳು-ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ, ರೈತರಿಗೆ ನಷ್ಟದ ಆತಂಕ
– ರೈತ ನಾಯಕ ಯಡಿಯೂರಪ್ಪ ಸರಕಾರ ಕೇಂದ್ರದ ಒತ್ತಡಕ್ಕೆ ಮಣಿಯದಿರಲಿ ಎಂಬ ಆಗ್ರಹ

– ಶಶಿಧರ ಹೆಗಡೆ, ಬೆಂಗಳೂರು
ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರಕಾರವು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದು, ಇದು ಈಗಾಗಲೇ ರಾಜ್ಯಪಾಲರ ಅಂಗಳ ತಲುಪಿದೆ. ಇದು ಜಾರಿಗೆ ಬಂದರೆ ರೈತರು ಬೆಳೆದ ಬೆಳೆಗೆ ಆಧಾರಸ್ತಂಭವಾಗಿರುವ ಎಪಿಎಂಸಿ ವ್ಯವಸ್ಥೆಯೇ ಕುಸಿದು ಬೀಳಲಿದೆ. ಭವಿಷ್ಯದಲ್ಲಿ ರೈತರಿಗೆ ಖಾಸಗಿ ಕಂಪನಿಗಳಿಂದ ಭಾರಿ ಆಪತ್ತು ಎದುರಾಗಲಿದೆ ಎಂಬ ಆತಂಕ ಕೇಳಿ ಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತ ನಾಯಕರೆಂದೇ ಗುರುತಿಸಿಕೊಂಡವರು. ಮೊದಲ ಬಾರಿ ಅವರು ರೈತ ಬಜೆಟನ್ನೂ ಮಂಡಿಸಿ ಗಮನ ಸೆಳೆದವರು.
ಇಂತಹ ಯಡಿಯೂರಪ್ಪ ಸರಕಾರ ಕೇಂದ್ರದ ಒತ್ತಡಕ್ಕೆ ಕಟ್ಟುಬಿದ್ದು ರೈತರ ಹಿತ ಬಲಿ ಕೊಡಬಾರದು. ಕಾಯಿದೆ ತಿದ್ದುಪಡಿಯಿಂದ ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಬುಡಮೇಲಾಗಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ರೈತ ವಿರೋಧಿ ಕಾಯಿದೆ ತರಬಾರದು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವಂತೆ ಮೇ 5ರಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ಪತ್ರ ಬರೆದಿದೆ.

ಬೇಕಿದ್ದರೆ ಸುಧಾರಣೆ ಮಾಡಲಿ
ರಾಜ್ಯದಲ್ಲಿ 177 ಎಪಿಎಂಸಿ ಮತ್ತು ಉಪ ಸಂಸ್ಥೆಗಳಿವೆ. ರೈತರು ಮತ್ತು ವರ್ತಕರ ನಡುವಿನ ಕೊಂಡಿಗೆ ಎಪಿಎಂಸಿ ಒಂದು ಸಾಂಸ್ಥಿಕ ವ್ಯವಸ್ಥೆಯಾಗಿದೆ. ಇಲ್ಲಿಯೂ ತೂಕದಲ್ಲಿ ಮೋಸವಾಗುತ್ತದೆ, ರೈತರ ಶೋಷಣೆ ನಡೆಯುತ್ತದೆ ಎಂಬ ದೂರಿದೆ. ಇಲ್ಲಿ ಸುಧಾರಣೆ ತರುವುದು ಬಿಟ್ಟು ಎಪಿಎಂಸಿ ವ್ಯವಸ್ಥೆಯನ್ನೇ ದುರ್ಬಲಗೊಳಿಸುವುದು ಸರಿಯಲ್ಲ ಎಂಬ ಅಭಿಪ್ರಾಯವಿದೆ.

ಹೊಸ ಕಾಯಿದೆಯ ಸಾರವೇನು?
ವರ್ತಕರು ನೇರವಾಗಿ ಹೊಲಕ್ಕೆ ಬಂದು ಬೆಳೆ ಖರೀದಿಸಬಹುದು. ರೈತರ ಹೊಲದಿಂದ ನೇರ ಖರೀದಿ ಸಂಬಂಧ ರಾಜ್ಯದ ಎಪಿಎಂಸಿ ಕಾಯಿದೆಯ ನಾನಾ ಕಲಂಗಳಿಗೆ ತಿದ್ದುಪಡಿ ಸೂಚಿಸಲಾಗಿದೆ. ಅದರಂತೆ ರೈತರಿಗೆ ಮೋಸ ಮಾಡಿದ ಪ್ರಕರಣಗಳ ಸಂಬಂಧದಲ್ಲಿ ವರ್ತಕರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕೃಷಿ ಉತ್ಪನ್ನ ಮತ್ತು ಕೃಷಿ ಜೀವನೋಪಾಯಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟಕ್ಕೆ ರಾಷ್ಟ್ರವ್ಯಾಪಿ ಮುಕ್ತ ಮಾರುಕಟ್ಟೆ ಸೃಷ್ಟಿ.

ರಾಜ್ಯದ ಹಾಲಿ ಕಾಯಿದೆ ಶಕ್ತಿಯುತ
ರೈತರ ಹಿತರಕ್ಷ ಣೆ ದೃಷ್ಟಿಯಿಂದ ರಾಜ್ಯದಲ್ಲಿ ಹಾಲಿ ಜಾರಿಯಲ್ಲಿರುವ ಎಪಿಎಂಸಿ ಕಾಯಿದೆ ಶಕ್ತಿಯುತವಾಗಿದೆ. ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ 1966 ಮತ್ತು ನಿಯಮಗಳು 1968ರ ಕಲಂ 8, 66, 67, 70ರ ಅನ್ವಯ ಎಪಿಎಂಸಿಯ ಹೊರಗೆ ಬೆಳೆ ಮಾರಾಟಕ್ಕೆ ನಿರ್ಬಂಧವಿದೆ. ರೈತರ ಹೊಲಗಳಿಗೆ ತೆರಳಿ ವರ್ತಕರು ಬೆಳೆ ಖರೀದಿಸುವಂತಿಲ್ಲ. ಇಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು. ಇನ್ನು ಎಪಿಎಂಸಿ ಪ್ರಾಂಗಣದಲ್ಲೂ ರೈತರನ್ನು ವರ್ತಕರು ಶೋಷಣೆಗೆ ಒಳಪಡಿಸಿದರೆ ಕ್ರಮ ಕೈಗೊಳ್ಳಲು ಅವಕಾಶ ಇದೆ.

ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಹೊಸ ಕಾಯಿದೆಯಿಂದ ರೈತರಿಗೆ ಲಾಭವೇ ಹೊರತು ನಷ್ಟವಾಗದು. ಸರಕಾರ ರೈತರ ಹಿತ ರಕ್ಷಣೆ ಮಾಡಲಿದೆ.
– ಜಿ ಎಸ್ ಮಾಧುಸ್ವಾಮಿ ಸಂಸದೀಯ ವ್ಯವಹಾರ ಸಚಿವ

ಪರಿಣಾಮಗಳೇನು?
ಸಂಕಷ್ಟದ ಸಮಯದಲ್ಲಿ ಬೆಂಬಲ ಬೆಲೆ ಇಲ್ಲ
ಮಧ್ಯವರ್ತಿ/ ಖಾಸಗಿ ಕಂಪನಿಗಳು ನಿಗದಿ ಮಾಡಿದ್ದೇ ದರವಾಗಬಹುದು
ಎಪಿಎಂಸಿಗಳಿಗೆ ಬಾಗಿಲು ಹಾಕುವ ಸ್ಥಿತಿ
ಸರಕಾರಕ್ಕೂ ಆದಾಯ ಖೋತಾ
ಮಧ್ಯವರ್ತಿಗಳ ಮೂಲಕ ಕಾರ್ಪೊರೇಟ್‌ ಕಂಪನಿಗಳು ಹಳ್ಳಿಗಳನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳುವ ಆತಂಕ
ರೈತರ ಆದಾಯ ಹೆಚ್ಚಿಸುವ ಆಶಯಕ್ಕೆ ಧಕ್ಕೆ
ರಾಜ್ಯದ ಸಹಕಾರಿ ವ್ಯವಸ್ಥೆಗೆ ಕೊಡಲಿಯೇಟು
ವರ್ತಕರಿಂದ ಮೋಸವಾದರೆ ದೂರಲು ಸೂಕ್ತ ವೇದಿಕೆ ಇಲ್ಲ.

ಸರಕಾರದ ಪ್ರಕಾರ ಲಾಭವೇನು?
ಕೃಷಿ ಉತ್ಪನ್ನ ಮಾರಲು ರೈತರಿಗೆ ಹೆಚ್ಚಿನ ಅವಕಾಶ
ಈಗಿರುವ ಎಪಿಎಂಸಿ ವ್ಯವಸ್ಥೆಗಿಂತ ಹೆಚ್ಚು ಶಿಸ್ತುಬದ್ಧ ವ್ಯವಸ್ಥೆ
ಖಾಸಗಿ ಕಂಪನಿಗಳ ನಡುವೆ ಪೈಪೋಟಿ ಕಾರಣ ರೈತರ ಬೆಳೆಗೆ ಹೆಚ್ಚಿನ ಬೆಲೆ
ಖಾಸಗಿ ಕಂಪನಿಗಳಿಂದ ಉತ್ತಮ ಖರೀದಿ ಜಾಲ.

ಎಪಿಎಂಸಿ ವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದರಲ್ಲಿ ಕೇಂದ್ರ ಸರಕಾರ ಹೇಗೆ ನಿರ್ದೇಶನ ನೀಡಲು ಸಾಧ್ಯ? ಇದು ಒಕ್ಕೂಟದ ವ್ಯವಸ್ಥೆಗೆ ವಿರುದ್ಧವಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ನಡೆಸಿ. ಆತುರವೇಕೆ?
– ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ

ಕೇಂದ್ರ ಸರಕಾರದ ನಿರ್ದೇಶನ ಆಧರಿಸಿ ಎಪಿಎಂಸಿ ಕಾಯಿದೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಮುಂದಾಗಿರುವುದು ರೈತರ ಪಾಲಿಗೆ ಮಾರಕ. ರಾಜ್ಯದ ಜನರನ್ನು ಉದ್ಧಾರ ಮಾಡಲು ಸಿಎಂ ಆಗಿದ್ದೀರೋ ಅಥವಾ ಪ್ರಧಾನಿ ಮೋದಿ ಅವರನ್ನು ಮೆಚ್ಚಿಸುವುದಕ್ಕೋ?
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top