ಚೀನಾ ಅವಲಂಬನೆ ತಗ್ಗಿಸೋಣ

ಅಮೆರಿಕ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಕೋವಿಡ್-19 ಬಿಕ್ಕಟ್ಟು ಚೀನಾಗೆ ದುಬಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊಸ ಅವಕಾಶಗಳನ್ನು ತನ್ನದಾಗಿಸಿಕೊಂಡು, ಗಣನೀಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆ ಇದೆ.

ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ‘ಜಗತ್ತಿನ ಉತ್ಪಾದನೆಯ ಕಾರ್ಖಾನೆ’ ಎಂದು ಸಂತಸದಿಂದ ಕರೆಯುತ್ತಿತ್ತು. ನಾನಾ ರಾಷ್ಟ್ರಗಳು ಚೀನಾದ ಅಗ್ಗದ ಮಾಲುಗಳಿಂದ ಸಂಸ್ಕರಿತ, ಉತ್ತಮ ದರ್ಜೆಯ ಪ್ರಾಡಕ್ಟ್‌ಗಳ ತನಕ ಎಲ್ಲವನ್ನೂ ಸ್ವೀಕರಿಸುತ್ತಿತ್ತು. ವ್ಯಾಪಾರದ ಮೂಲಕ ಚೀನಾ ತನ್ನ ಜಿಡಿಪಿಯನ್ನು ಶರವೇಗದಲ್ಲಿ ಏರಿಸುತ್ತಾ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ ಈಗ ಚಿತ್ರಣ ಬದಲಾಗಿದೆ. ಕೊರೊನಾ ವೈರಸ್ ಪರಿಣಾಮ, ಚೀನಾದ ಮೇಲಿನ ಅವಲಂಬನೆಯನ್ನು ಕಟ್ಟುನಿಟ್ಟಾಗಿ ಕಡಿಮೆ ಮಾಡಲು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರ ಜಪಾನ್ ಜಂಟಿಯಾಗಿ ನಿರ್ಧರಿಸಿವೆ. ಸಾಮಾಜಿಕ ಅಂತರದ ಜತೆಗೆ ಆರ್ಥಿಕ ವಹಿವಾಟುಗಳಲ್ಲೂ ಅಂತರ ಕಾಪಾಡಿಕೊಳ್ಳುವ ಸಂದೇಶವನ್ನು ರವಾನಿಸಿವೆ!  ಈ ಬಿಕ್ಕಟ್ಟು ಅತಿ ದೊಡ್ಡ ಸಮಕಾಲೀನ ರಾಜಕೀಯ, ಆರ್ಥಿಕ ಸಂಘರ್ಷಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ಚೀನಾದ ಮಹತ್ತ್ವಾಕಾಂಕ್ಷೆಗೆ ಬೆಚ್ಚಿಬಿದ್ದಿರುವ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು, ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿವೆ! ದಕ್ಷಿಣ ಕೊರಿಯಾ ಮೂಲದ ಕಂಪನಿಗಳೂ ಚೀನಾದಿಂದ ಭಾರತಕ್ಕೆ ತಮ್ಮ ಘಟಕಗಳನ್ನು ಸ್ಥಳಾಂತರಗೊಳಿಸಲು ಉತ್ಸುಕವಾಗಿವೆ.

ಜಪಾನ್ ಕಾರ್ಯತಂತ್ರವೇನು?

ಚೀನಾದಿಂದ ಬೇರೆ ರಾಷ್ಟ್ರಗಳಿಗೆ ತಮ್ಮ ಕಾರ್ಖಾನೆಗಳನ್ನು ಸ್ಥಳಾಂತರವಾಗೊಳಿಸುವ ಉದ್ಯಮಿಗಳಿಗೆ ನೆರವಾಗಲು 2.25 ಶತಕೋಟಿ ಡಾಲರ್ (17,100 ಕೋಟಿ ರೂ.) ಪ್ಯಾಕೇಜ್ ಅನ್ನು ಜಪಾನ್ ಪ್ರಧಾನಿ ಶಿಂಜೊ ಅಬೆ ಘೋಷಿಸಿದ್ದಾರೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಚೀನಾ-ಜಪಾನ್ ನಡುವೆ ಆಮದು-ತುರ್ತು ವಹಿವಾಟು ದೊಡ್ಡ ಪ್ರಮಾಣದಲ್ಲಿರುತ್ತಿತ್ತು. ಆದರೆ ಕಳೆದ ವರ್ಷದಿಂದೀಚೆಗೆ ಚೀನಾವು ಜಪಾನ್‌ನಿಂದ ಆಮದನ್ನು ಕಡಿತಗೊಳಿಸಿತ್ತು. ಜತೆಗೆ ಅಮೆರಿಕವು ಚೀನಾ ವಿರುದ್ಧ ಹೇರಿದ ನಿರ್ಬಂಧಗಳಿಂದ ಚೀನಾದಲ್ಲಿರುವ ಜಪಾನಿ ಕಂಪನಿಗಳಿಗೆ ಅಡ್ಡಿಯಾಗಿದೆ. ಜಪಾನ್ ವಾಣಿಜ್ಯ ಮಂಡಳಿಗಳು ಈಗಾಗಲೇ ಭಾರತದ ಅಧಿಕಾರಿಗಳು ಹಾಗೂ ವಾಣಿಜ್ಯ ಮಂಡಳಿಗಳ ಜತೆಗೆ ಚರ್ಚಿಸಿವೆ. ಕೇಂದ್ರ ಸರಕಾರ ಕೂಡ ಜಪಾನ್ ಮೂಲದ ಹೂಡಿಕೆಯನ್ನು ಆಕರ್ಷಿಸಲು ಪೂರ್ವಸಿದ್ಧತೆಗೆ ಮುಂದಾಗಿದೆ. 

ಭಾರತ ಸಜ್ಜು:

ಭಾರತದಲ್ಲಿ ಈಗಾಗಲೇ ಉನ್ನತ ಮಟ್ಟದ ಸಭೆಯಲ್ಲಿ ನಡೆದಿದ್ದು, ಚೀನಾದಿಂದ ಸ್ಥಳಾಂತರವಾಗಲು ನಿರ್ಧರಿಸಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ‘‘ಔಷಧ, ಆಟೊಮೊಬೈಲ್ ಸೇರಿಂದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗೆ ಆಹ್ವಾನಿಸಲಾಗುವುದು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಜಪಾನ್, ಅಮೆರಿಕ ಮೂಲದ ಕಂಪನಿಗಳನ್ನು ಆಕರ್ಷಿಸಲು ಯತ್ನಿಸಲಾಗುತ್ತಿದೆ. ಸರಕಾರ ಇತ್ತೀಚೆಗೆ ಮೊಬೈಲ್ ಉತ್ಪಾದನೆಯನ್ನು ಹೆಚ್ಚಿಸಲು 48,000 ಕೋಟಿ ರೂ.ಗಳ ಮೂರು ಇನ್ಸೆಂಟಿವ್ ಯೋಜನೆಗಳನ್ನು ಪ್ರಕಟಿಸಿದೆ. ಆ್ಯಪಲ್, ಸ್ಯಾಮ್‌ಸಂಗ್, ಒಪ್ಪೊ, ವಿವೊ ಮುಂತಾದ ದಿಗ್ಗಜ ಕಂಪನಿಗಳಿಗೆ ಭಾರತದಲ್ಲಿ ಅವುಗಳ ಪೂರ್ಣಪ್ರಮಾಣದ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ. ಭಾರತವನ್ನು ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ ಮತ್ತು ರಫ್ತಿನ ಪ್ರಮುಖ ತಾಣವಾಗಿಸಲು ಚಿಂತನೆ ನಡೆದಿದೆ.

ಕಾರಣವೇನು?

ಕೊರೊನಾ ವೈರಸ್ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವುದು- ಪೂರೈಕೆಯ ಸರಣಿಗೆ ಭಾರಿ ಅಡಚಣೆಯಾಗಿರುವುದು.- ಚೀನಾದ  ಅವಲಂಬನೆಯಿಂದ ಆಯಾ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ- ಸಾರ್ಸ್, ಕೊರೊನಾ ಇತ್ಯಾದಿ ಸಾಂಕ್ರಾಮಿಕ ರೋಗಗಳು ಚೀನಾದಿಂದಲೇ ಹಬ್ಬಿರುವುದು- ಬಹುರಾಷ್ಟ್ರೀಯ ಕಂಪನಿಗಳ ಷೇರುಗಳನ್ನು ಚೀನಾ ಖರೀದಿಸುತ್ತಿರುವುದು- ಅಮೆರಿಕದ ಬಾಂಡ್‌ಗಳಲ್ಲಿ ಚೀನಾ ಹೂಡಿಕೆ ಗಣನೀಯವಾಗಿದ್ದು, ಭವಿಷ್ಯದಲ್ಲಿ ಬಿಕ್ಕಟ್ಟಿನ ಆತಂಕ- ವಿಶ್ವದ ಸೂಪರ್ ಪವರ್ ಆಗಲು ಚೀನಾದ ಸನ್ನಾಹ.

ಕೋಟ್‌: 
ವಿಶ್ವಾದ್ಯಂತ ಷೇರು ಮಾರುಕಟ್ಟೆಗಳ ಪತನದ ನಂತರ ಎಲ್ಲ ಕಡೆಗಳಲ್ಲೂ ತನ್ನ ಹೂಡಿಕೆಯನ್ನು ಚೀನಾ ಹೆಚ್ಚಿಸಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿದ್ದು, ಪ್ರತಿ ತಂತ್ರವನ್ನು ಅನುಸರಿಸುವುದು ಖಚಿತ. ಇದು ಭಾರತಕ್ಕೆ ಉಜ್ವಲ ಅವಕಾಶ ಸೃಷ್ಟಿಸಿದೆ. – ಸಂಪತ್‌ರಾಮನ್, ಮಾಜಿ ಅಧ್ಯಕ್ಷರು, ಅಸೊಚೆಮ್

ಚೀನಾದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೇರಳ ಅವಕಾಶಗಳಿದ್ದರೂ, ಚೀನಿ ಸರಕಾರ ಅನೇಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಅಲ್ಲಿ ಸ್ವಾತಂತ್ರ್ಯ ಕಡಿಮೆ. ಕೊರೊನಾ ಬಿಕ್ಕಟ್ಟಿನ ನಂತರ ಚಿತ್ರಣ ಬದಲಾಗಿದ್ದುಘಿ, ಅಲ್ಲಿಂದ ಅನೇಕ ಕಂಪನಿಗಳು ನಿರ್ಗಮಿಸುವ ಸಾಧ್ಯತೆ ಇದೆ.-ಜೆ.ಕ್ರಾಸ್ಟಾ, ಉಪಾಧ್ಯಕ್ಷ, ಅಸೊಚೆಮ್ ಸದರ್ನ್ ಕೌನ್ಸಿಲ್

ಅಮೆರಿಕ-ಚೀನಾ ವಾಣಿಜ್ಯ ಸಮರ

ಅಮೆರಿಕವಂತೂ ಚೀನಾ ಜತೆಗೆ ಕಳೆದ ವರ್ಷದಿಂದ ವಾಣಿಜ್ಯ ಸಮರ ತೀವ್ರಗೊಳಿಸಿದೆ. 2019ರಲ್ಲಿ ಅಮೆರಿಕ ಮೂಲದ 50ಕ್ಕೂ ಹೆಚ್ಚು ಕಂಪನಿಗಳು ಚೀನಾದಿಂದ ಈಗಾಗಲೇ ಸ್ಥಳಾಂತರವಾಗಿವೆ. ಸುಮಾರು 200 ಅಮೆರಿಕನ್ ಕಂಪನಿಗಳು ತಮ್ಮ ಉತ್ಪಾದನಾ ನೆಲೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಳಿಸಲು ಉತ್ಸುಕವಾಗಿವೆ. ಅಮೆರಿಕದಲ್ಲಿ  ಮುಂಬರುವ ಅಧ್ಯಕ್ಷೀಯ ಚುನಾವಣೆಯ ನಂತರ ಇದು ಕಾರ್ಯಗತವಾಗುವ ನಿರೀಕ್ಷೆ ಇದೆ.

ಹೂಡಿಕೆಗೆ ಪರ್ಯಾಯ ರಾಷ್ಟ್ರಗಳು : ಭಾರತ, ವಿಯೆಟ್ನಾಂ, ಮಲೇಷ್ಯಾ, ಇಂಡೊನೇಷ್ಯಾ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top