ನಾಡಿನ ಲಕ್ಷಾಂತರ ಯುವಜನರಲ್ಲಿ ಓದಿನ ಗೀಳು, ಬರವಣಿಗೆಯ ಗುಂಗು ಹುಟ್ಟಿಸಿದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ.


ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿದ ರವಿ ಬೆಳಗೆರೆ ಸಿನಿಮಾ, ಕಿರುತೆರೆಯಲ್ಲೂ ಮಿಂಚು ಹರಿಸಿದವರು. ಕಪ್ಪು ಬಿಳುಪು ಸುಂದರಿ ಹಾಯ್ ಬೆಂಗಳೂರಿನಿಂದ ಹುಟ್ಟಿದ ಹಣದಿಂದ ಪ್ರಾರ್ಥನಾ ಶಾಲೆ ಕಟ್ಟಿದ ಅವರ ಬದುಕು ಮಾತ್ರ ಸದಾ ಕಲರ್‌ಫುಲ್
ಅಕ್ಷರಗಳ ಘಮ ಅವಳಿ ವ್ಯಕ್ತಿತ್ವ ಸಮಾಗಮ

ಹರಿಪ್ರಕಾಶ್ ಕೋಣೆಮನೆ
ನನಗೆ ಪಿ. ಲಂಕೇಶ್ ಅವರನ್ನು ಪ್ರತ್ಯಕ್ಷವಾಗಿ ನೋಡಲಾಗಲಿಲ್ಲ. ಆದರೆ ಲಂಕೇಶ್ ಪತ್ರಿಕೆಯನ್ನು, ಅವರ ಪುಸ್ತಕಗಳನ್ನು ಓದಿರುವೆ. ಲಂಕೇಶ್ ಅವರು ಅಪರೂಪದ ಒಳನೋಟ ಹೊಂದಿದ್ದ ಲೇಖಕರಾಗಿದ್ದರು. ಅವರ ಬರಹಗಳಿಗೆ ಒಂದು ತಾತ್ವಿಕತೆ ಇತ್ತಾದರೂ, ಪತ್ರಕರ್ತ ಲಂಕೇಶ್‌ಗೆ ಮಾತ್ರ ವ್ಯಾವಹಾರಿಕತೆಯೂ ಮುಖ್ಯವಾಗಿರುತ್ತಿತ್ತು. ಹಾಗಾಗಿಯೇ ಏನೋ, ಹಲವು ಬಾರಿ ಸಾರ್ವಜನಿಕ ಸಂಘ ಸಂಸ್ಥೆಗಳು, ಸಾಹಿತಿಗಳು, ರಾಜಕಾರಣಿ, ಅಕಾರಿಗಳ ಕುರಿತು ಲಂಕೇಶ್ ತಾವು ನಂಬಿದ್ದಕ್ಕಿಂತ ವಿರುದ್ಧವಾದುದನ್ನೇ ಬರೆಯುತ್ತಿದ್ದರು. ಹೀಗಾಗಿಯೇ ಏನೋ, ಅವರಿಗೆ ಅಭಿಮಾನಿಗಳ ಸಂಖ್ಯೆಯಷ್ಟೇ ವಿರೋಗಳೂ ಇದ್ದರು. ಅವರು ನಂಬಿದ ತತ್ವ ಹಾಗೂ ಅದರ ಅನುಸರಣೆಯಲ್ಲಿ ಅಂತರವಿತ್ತು ಎಂಬುದು ಬಹಳಷ್ಟು ಜನರ ತಕರಾರಾಗಿತ್ತು. ಇದೆಲ್ಲವನ್ನೂ ಹೊರತುಪಡಿಸಿಯೂ, ಲೇಖಕ ಲಂಕೇಶ್ ಅವರು ಒಂದು ಆಲೋಚನಾ ಕ್ರಮ ಹೊಂದಿರುವ ಓದುಗರ ಪಾಲಿಗೆ, ಜನಾಂಗದ ಕಣ್ಣು ತೆರೆಸಿದವರೇ ಆಗಿದ್ದರು.
ಇಂಥಾ ಲಂಕೇಶ್ ಗರಡಿಯಿಂದ ಟಿಸಿಲೊಡೆದು ಕುಡಿಯಾಗಿ, ಮರವಾಗಿ ಬೆಳೆದು, ಲಂಕೇಶ್ ಅವರಿಗೇ ಪ್ರತಿಸವಾಲು ಹಾಕಿ, ಹೆಚ್ಚೂ ಕಡಿಮೆ ಅವರ ಎದುರು, ಅವರೇ ಬೆರಗುಗಣ್ಣಿನಿಂದ ನೋಡುವಷ್ಟು ಗಟ್ಟಿಗನಾಗಿ ಬೆಳೆದ ಪತ್ರಕರ್ತ, ಲೇಖಕ ಅಂದರೆ ರವಿ ಬೆಳಗೆರೆ ಒಬ್ಬರೇ ಇರಬೇಕು. ಒಟ್ಟಾರೆ, ಪಿ. ಲಂಕೇಶ್ ಮತ್ತು ರವಿ ಬೆಳಗೆರೆ- ಇಬ್ಬರೂ ಕನ್ನಡ ಪತ್ರಿಕೋದ್ಯಮ ಇತಿಹಾಸದ ಎರಡು ಪ್ರಮುಖ ಅಧ್ಯಾಯಗಳು ಎಂಬುದರಲ್ಲಿ ಯಾವ ಅನುಮಾನವೂ ಬೇಡ.
ಬೆಳಗೆರೆ ಅವರನ್ನು ಹುಚ್ಚು ಅಭಿಮಾನದಿಂದ, ಅಚ್ಚರಿಯ ಕಣ್ಣುಗಳಿಂದ ನೋಡಲಾರಂಭಿಸಿದ ಸಹಸ್ರಾರು ಕನ್ನಡಿಗರಲ್ಲಿ ನಾನೂ ಒಬ್ಬ. ಹಾಯ್ ಬೆಂಗಳೂರಿನ ಖಾಸ್ ಬಾತ್, ಸಂಪಾದಕೀಯ, ಬಾಟಮ್ ಐಟಂಗಳು, ನನ್ನ ಕಾಲೇಜು ಜೀವನದಲ್ಲಿ, ಎಲ್ಲರಂತೆ ನನ್ನನ್ನೂ ಸೆಳೆದದ್ದು ಸುಳ್ಳಲ್ಲ. ರವಿ ಬೆಳಗೆರೆ ಅವರನ್ನು, ಅವರ ಬರಹಗಳನ್ನು ಒಪ್ಪುವವರು, ಒಪ್ಪದವರು ಎಂದು ಎರಡೂ ವರ್ಗದ ಓದುಗರು ಆಗಲೂ ಇದ್ದರು. ಈಗಲೂ ಇದ್ದಾರೆ. ಸ್ವಾರಸ್ಯ ಅಂದ್ರೆ, ಈ ಉಭಯ ಗುಂಪಿನವರು ತಮಗರಿವಿಲ್ಲದಂತೆ ರವಿಯನ್ನು ಅಪ್ಪಿಕೊಂಡಿದ್ದರು. ಹಲವರು ಹಾಯ್ ಬೆಂಗಳೂರು ಎಂಬ ಕಪ್ಪು ಬಿಳುಪಿನ ಪತ್ರಿಕೆಯನ್ನು ರಾಜಾರೋಷವಾಗಿ ಓದಿದರೆ, ಕೆಲವರು ಮುಚ್ಚಿಟ್ಟುಕೊಂಡಾದರೂ ಅದನ್ನು ಓದದೇ ಇರುತ್ತಿರಲಿಲ್ಲ. ಒಂದು ಪತ್ರಿಕೆ ಆ ರೀತಿ ಜನರನ್ನು ಹಿಡಿದಿಟ್ಟುಕೊಂಡು ಓದುವ ಹಾಗೆ ಮಾಡುವುದಿದೆಯಲ್ಲ ಅದು ಸಣ್ಣ ಕೆಲಸವಲ್ಲ. ಇದೊಂದು ರೀತಿಯಲ್ಲಿ, ಎಸ್ ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ ಅವರು ಹೊಸ ಓದುಗರನ್ನು ಸೃಷ್ಟಿಸಿದ ಕೆಲಸಕ್ಕೆ ಸಮ ಎಂದರೆ ಅತಿಶಯೋಕ್ತಿಯಲ್ಲ. ಲಂಕೇಶ್ ಅವರಂತೆ ಬೆಳಗೆರೆ ಒಂದು ಜನಾಂಗದ (ಓದುಗರ) ಕಣ್ಣು ತೆರೆಸಿದರೋ, ಇಲ್ಲವೋ, ಆದರೆ ಲಂಕೇಶ್ ಅವರಿಗಿಂತ ಹೆಚ್ಚು ಪ್ರಮಾಣದ ಓದುಗರನ್ನು ಅವರು ಹುಟ್ಟುಹಾಕಿದರು!
ಅವರು ಸೃಷ್ಟಿಸಿದ ಓದುವ ವರ್ಗದ ಕುರಿತು ಕೆಲವು ಸಂಗತಿಗಳನ್ನು ನಾನಿಲ್ಲಿ ಹೇಳಬೇಕು.
ರವಿ ಅವರ ಬರಹಗಳನ್ನು ಎರಡು ಕಾರಣಗಳಿಗಾಗಿ ಓದುವ ದೊಡ್ಡ ವರ್ಗ ಇದೆ. ಒಂದು ವರ್ಗ ರವಿ ಬರೆಯುತ್ತಿದ್ದ ಖಾಸ್ ಬಾತ್, ಸಂಪಾದಕೀಯ, ಬಾಟಮ್ ಐಟಂನಂಥ ಅಂಕಣಗಳನ್ನು ಹಚ್ಚಿಕೊಂಡಿದ್ದರು. ಜತೆಗೆ, ರವಿ ಬೇರೆಯವರಿಂದ ಬರೆಸಿ, ಅದನ್ನು ಸ್ವತಃ ತಿದ್ದಿ ತೀಡಿ ಒರಿಜಿನಾಲಿಟಿಗೆ ತಂದು ಪ್ರಕಟಿಸುತ್ತಿದ್ದ ಪೊಲಿಟಿಕಲ್ ಹಾಗೂ ಕ್ರೈಮ್ ಸ್ಟೋರಿಗಳನ್ನು ಪ್ರೀತಿಯಿಂದ, ಬಾಯಿ ಚಪ್ಪರಿಸಿಕೊಂಡು ಚಟವಾಗಿಸಿಕೊಂಡು ಓದಿದರು.
ಇನ್ನೊಂದು ವರ್ಗವಿತ್ತು. ಅವರು ರವಿ ಬರಹದ ವಿಷಯ, ವಾಸ್ತವದ ಕಡೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಅವರಿಗೆ ಓದಿನ ಮುದ ಕೊಡುತ್ತಿದ್ದದ್ದು ಬರಹದ ಮಾದಕ ಫ್ಲೇವರ್. ರವಿ ಬೆಳಗೆರೆ ಅವರ ಬರವಣಿಗೆಯ ಮಾಂತ್ರಿಕ ಶೈಲಿ, ಭಾಷೆಯ ದುಡಿಸಿಕೊಳ್ಳುವಿಕೆ, ಆಡು ನುಡಿ, ಘಟನಾವಳಿಗಳನ್ನು ಹೇಳುತ್ತಿದ್ದ ಪರಿ, ನೆನಪುಗಳನ್ನು ಜೋಡಿಸುತ್ತಿದ್ದ ರೀತಿ ನೀತಿ- ಎಲ್ಲವೂ ಅದ್ಭುತವಾಗಿತ್ತು. ಇದೆಲ್ಲವನ್ನೂ ಪತ್ರಿಕೆಯ ಬರವಣಿಗೆಯಲ್ಲಿ ಬಳಸುತ್ತಿದ್ದ ರೀತಿ ನಿಜಕ್ಕೂ ಅನನ್ಯ. ಅವರ ಬರವಣಿಗೆ ಶೈಲಿಗೆ ಅವರೇ ಸಾಟಿ. ಬೇರೆಯವರು ಆರಂಭಿಸಿದ್ದೆಲ್ಲಾ ನಕಲು ಮಾತ್ರ. ಅದು ಪತ್ರಿಕೆಗಳೇ ಇರಬಹುದು,ಬರವಣಿಗೆಯೇ ಇರಬಹುದು.
ಹೀಗೆ, ರವಿ ಬೆಳಗೆರೆ, ತನ್ನದೇ ಮಾದರಿಯ ಬರಹವನ್ನು ಹುಟ್ಟುಹಾಕಿ, ಅದರ ಮೂಲಕವೇ ವಿಶಿಷ್ಟ ಓದುಗರನ್ನು ಸೃಷ್ಟಿಸಿದರು. ಅಲ್ಲಿ ರಿಕ್ಷಾ ಚಾಲಕ- ಪೌರಕಾರ್ಮಿಕರಿಂದ ಹಿಡಿದು ಗಾರ್ಮೆಂಟಿನ ಮಹಿಳಾ ನೌಕರರವರೆಗೆ -ಥರಾವರಿ ಓದುಗರಿದ್ದರು.
ರವಿ ಬೆಳಗೆರೆ ತೀರಿ ಹೋದ ಸಂದರ್ಭದಲ್ಲಿ ಅವರ ಹೆಚ್ಚುಗಾರಿಕೆಗಳನ್ನು ಎರಡು ಕಾರಣಗಳಿಗಾಗಿ ನಾವು ಮೆಲುಕು ಹಾಕಬೇಕು. ಒಂದು ಸಾಧ್ಯವಾದರೆ ನಾವೂ ಅಂತಹ ಸಾಹಸ ಮಾಡಬೇಕು ಎಂಬ ಕಾರಣಕ್ಕೆ. ಇನ್ನೊಂದು, ರವಿ ಬೆಳಗೆರೆ ಹಾಗೆ ಏನನ್ನು ಮಾಡಬಾರದು ಎಂಬುದಕ್ಕಾಗಿ.
ಮೊದಲು ರವಿ ಅವರ ವ್ಯಕ್ತಿತ್ವವನ್ನು ಪ್ರೇರಣೆ,ಆದರ್ಶ,ಅನುಸರಣೆ ದೃಷ್ಟಿಯಿಂದ ನೋಡೋಣ.
ರವಿ ಕನ್ನಡದಲ್ಲಿ ಸೃಷ್ಟಿಸಿದ ಅಗಾಧ ಗಾತ್ರದ ಓದುಗ ವರ್ಗ. ಹಾಯ್ ಬೆಂಗಳೂರಿಂದ ಆರಂಭವಾಗಿ ಹಿಮಾಲಯನ್ ಬ್ಲಂಡರ್, ಮುಸ್ಲಿಂ, ಖಾಸ್ ಬಾತ್‌ಗಳೊಂದಿಗೆ ಮುಂದುವರಿದು ರಾಜ್ ಲೀಲಾ ವಿನೋದದವರೆಗೆ ತಮ್ಮ ಬರಹದ ಮೂಲಕವೇ ಅಸಂಖ್ಯಾತ ಓದುಗರನ್ನುಹುಟ್ಟುಹಾಕಿದರು ಮತ್ತು ಅವರನ್ನು ಬೆಳೆಸಿದರು. ರವಿ ಹುಟ್ಟು ಹಾಕಿದ ಓದುಗರು ಕೇವಲ ರವಿಯ ಓದುಗರಾಗಿ ಅಲ್ಲೇ ಉಳಿಯಲಿಲ್ಲ. ಅವರೊಂದು ಓದುಗ ಪ್ರವಾಹವಾಗಿ ಮುಂದುವರೆದರು. ಇವತ್ತಿಗೂ, ಇನ್ನು ಮುಂದೆಯೂ ಕೂಡ! ಅದರಿಂದ ಕನ್ನಡಕ್ಕೆ, ಕನ್ನಡ ಭಾಷೆಗೆ ಆದ ಲಾಭ ಸಣ್ಣದಲ್ಲ.
ಎರಡನೆಯದ್ದು ಪತ್ರಿಕೋದ್ಯಮಕ್ಕೆ ಆದ ಲಾಭ. ರವಿ ಮುಖ್ಯವಾಹಿನಿ ಪತ್ರಿಕೋದ್ಯಮಕ್ಕಿಂತ ಟ್ಯಾಬ್ಲಾಯ್ಡ ಪತ್ರಿಕೆಯಿಂದಲೇ ಖ್ಯಾತಿ, ಹಣ, ಪ್ರಭಾವವನ್ನು ಸಂಪಾದಿಸಿದರು. ಅವರ ಬರಹದ ಶೈಲಿಯ ಆಕರ್ಷಣೆಯ ಕಾರಣಕ್ಕೆ ಹತ್ತಾರು ಪತ್ರಕರ್ತರ ಸಂತತಿ ಹುಟ್ಟಿ ಬೆಳೆಯಿತು. ರವಿ ಪತ್ರಕರ್ತರಾಗಿ ದೇಶದ ಉದ್ದಗಲಕ್ಕೆ ಸಂಚರಿಸಿ ಕಂಡದ್ದು ಕೇಳಿದ್ದನ್ನೆಲ್ಲ ಬರೆದರು. ದೇಶದ ಹೊರಗೂ ಸುತ್ತಿ ಅಕ್ಷರಗಳಲ್ಲಿ ಅನುಭವವನ್ನು ಕಟ್ಟಿ ಕೊಟ್ಟರು. ಯುದ್ಧ ಭೂಮಿ, ಭೂಗತ ಜಗತ್ತು, ಉಗ್ರರ ಸಾಮ್ರಾಜ್ಯದಿಂದ ಹಿಡಿದು ಕರ್ನಾಟಕದ ಕೋಳಿ ಫಯಾಜ್, ಭೀಮಾ ತೀರದ ಹಂತಕರು, ರೆಡ್ ಲೈಟ್ ಏರಿಯಾದವರೆಗೆ ತೆರಳಿ ಒಬ್ಬ ಪತ್ರಕರ್ತನಾಗಿ ಫಸ್ಟ್ ಹ್ಯಾಂಡ್ ಅನುಭವ ಸಂಪಾದಿಸಿದರು. ಅದನ್ನು ಕಣ್ಣಾರೆ ಕಂಡಿದ್ದಕ್ಕಿಂತ, ಅನುಭವಕ್ಕೆ ದಕ್ಕಿದ್ದಕ್ಕಿಂತ ಹೆಚ್ಚು ಆಕರ್ಷಕವಾಗಿ ಬರೆದು ಕನ್ನಡ ಓದುಗ ಲೋಕಕ್ಕೆ ಉಣಬಡಿಸಿದರು. ಈ ಕಾಲದ ಪತ್ರಕರ್ತರು ಈ ನಿಟ್ಟಿನಲ್ಲಿ ಬೆಳಗೆರೆ ಅವರಿಂದ ಕಲಿಯುವುದು ಸಾಕಷ್ಟಿದೆ. ಪತ್ರಕರ್ತನಿಗೆ ಈ ಜಂಗಮ ಗುಣ, ರಾಕ್ಷಸೀ ಬರಹ ದಕ್ಕದೇ ಹೋದರೆ ಮುಂದೆ ಕೆಲವೇ ದಿನಗಳಲ್ಲಿ ಇಡೀ ಪತ್ರಿಕೋದ್ಯಮ ಬರಡಾಗಿಬಿಡಬಹುದು.
ಎರಡನೆಯದ್ದು ರವಿ ಮುಟ್ಟದ, ಪ್ರಯೋಗ ಮಾಡದ ಕೆಲಸ ಕ್ಷೇತ್ರಗಳೇ ಇಲ್ಲ. ಟ್ಯಾಬ್ಲಾಯ್ಡ ಪತ್ರಿಕೆ ಮುಖ್ಯ ಕೆಲಸವಾದರೂ ರೇಡಿಯೊ, ಟಿವಿ, ಎಂದೂ ಮರೆಯದ ಹಾಡು ಅಂತಹ ಜನಪ್ರಿಯ ಟಿವಿ ರಿಯಾಲಿಟಿ ಶೋಗಳು, ಕ್ರೈಮ್ ಡೈರಿಯಂತಹ ಎಪಿಸೋಡ್‌ಗಳು, ಸಿನಿಮಾ ಒಂದಲ್ಲ ಎರಡಲ್ಲ. ಒಬ್ಬ ಪತ್ರಕರ್ತ ತನ್ನನ್ನು ತಾನು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾದ ರೀತಿ ಅದು. ಪ್ರತಿಯೊಬ್ಬ ಪತ್ರಕರ್ತ ಆ ದೃಷ್ಟಿಯಿಂದ ರವಿ ಅನುಕರಣೀಯ ಅಂತ ಭಾವಿಸಿದರೆ ತಪ್ಪಲ್ಲ.
ನಿಜ, ರವಿ ಬೆಳಗೆರೆ ಅವರನ್ನು ಒಪ್ಪದ ಕೆಲ ಸಂಗತಿಗಳಿವೆ. ಈ ಪ್ರಪಂಚದಲ್ಲಿ ಮಾಡುವಂಥವು, ಮಾಡಬಾರದಂಥವು, ಹೇಳುವಂಥವು ಮತ್ತು ಹೇಳಬಾರದಂಥವು ಅಂತ ಕೆಲ ತರತಮ ಆಲೋಚನೆಗಳಿವೆ. ಕ್ರೈಮ್, ಸೆಕ್ಸು, ಗಾಸಿಪ್‌ಗಳೆಲ್ಲ ಸೇಲ್ ಆಗುತ್ತವೆ ನಿಜ. ಆದರೆ ಪ್ರಪಂಚ ಅದೇ ಅಲ್ಲ ಎಂಬುದೂ ಅಷ್ಟೇ ಸತ್ಯ. ಪ್ರತಿ ಮನುಷ್ಯನಿಗೆ ಒಂದಲ್ಲ ಒಂದು ದೌರ್ಬಲ್ಯ ಇದ್ದೇ ಇರುತ್ತದೆ ಎಂಬುದು ಅನುಭವಿಗಳು ಹೇಳುವ ಮಾತು. ಆದರೆ ತಮಗಿರುವ ಕೆಲ ದೌರ್ಬಲ್ಯಗಳನ್ನು ರಾಜಾರೋಷವಾಗಿ ಹೇಳಿಕೊಂಡ ವಿರಳಾತಿವಿರಳ ಮನುಷ್ಯ ರವಿ ಬೆಳಗೆರೆ ಅವರು. ರವಿ ಕುಡಿತ, ಹೆಣ್ಣಿನ ಆಸಕ್ತಿ, ಸಿಗರೇಟು, ತಡರಾತ್ರಿಯ ಚಟುವಟಿಕೆಗಳಿಗೆಲ್ಲ ಸೆಲೆಬ್ರಿಟಿ ಸ್ಟೇಟಸ್ಸನ್ನು ತಂದುಕೊಟ್ಟರು. ಆದರೆ ಅದು ಎಂದೂ ಆದರ್ಶ ಆಗಲಾರದು. ರವಿ ಬೆಳಗೆರೆ ಸಿಗರೇಟು, ವಿಸ್ಕಿ ಇವುಗಳೊಟ್ಟಿಗೇ ಬೆಳೆದರು. ಅದು ಈ ಪೀಳಿಗೆಯ ಪತ್ರಕರ್ತರಿಗೆ ಅನುಕರಣೆ ಆಗಬಾರದು.
ರವಿ ಬೆಳಗೆರೆ ಅವರ ಕೈಯಲ್ಲಿ ಪ್ರೀತಿ, ಪ್ರೇಮ, ಕಾಮ, ಒಲವು, ವಿರಹ, ಸಾವು, ಬದುಕು, ಯಾತನೆ, ಯುದ್ಧ ಎಲ್ಲವೂ ಓದುವ ಅದ್ಭುತ ಸರಕಾದವು. ಇದು ಪತ್ರಕರ್ತ, ಬರಹಗಾರನೊಬ್ಬನ ತಾಕತ್ತು. ಅದೇ ಕಾರಣಕ್ಕಾಗಿ ಓರ್ವ ಪತ್ರಕರ್ತ ಸೆಲೆಬ್ರಿಟಿಯಾಗಿ ಬುದ್ಧಿಜೀವಿಗಳಿಗೆ ಮಾತ್ರವಲ್ಲ, ಕೂಲಿಕಾರರು, ತರಕಾರಿ ಮಾರುವವರು, ಟೀ ಮಾರುವವರ ಬಾಯಲ್ಲಿ ಮನೆ ಮಾತಾದರು.
ರವಿ ಬೆಳಗೆರೆ ಅವರಿಗೆ ಅವರ ತಾಯಿಯ ಬಗ್ಗೆ ಅಪಾರ ಮಮಕಾರ ಇದ್ದುದನ್ನು ಅವರ ಮಾತುಗಳಲ್ಲೇ ಅರ್ಥ ಮಾಡಿಕೊಳ್ಳಬಹುದು. ಅವರೊಂದು ಕಡೆ “ಯಾವ ಮಗ ಅಥವಾ ಮಗಳು ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತಾರೋ ಅವರನ್ನು ಬದುಕು ಚೆನ್ನಾಗಿ ನೋಡಿಕೊಳ್ಳುತ್ತದೆ,” ಎಂದು ಖಚಿತ ಧ್ವನಿಯಲ್ಲಿ ಹೇಳುತ್ತಾರೆ. ತಾನು ಯಶಸ್ಸಿನ ಮೆಟ್ಟಿಲೇರಿ ನಿಂತಾಗ ನೋಡಲು ತಾಯಿ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಾರೆ. ಇದು ಪ್ರತಿಯೊಬ್ಬನಿಗೂ ಕಿವಿಮಾತಾಗಬೇಕು. ಹಾಯ್ ಬೆಂಗಳೂರು, ಕ್ರೈಮ್ ಡೈರಿ ಅಪಾರ ದುಡ್ಡು ತಂದುಕೊಟ್ಟಿತು ಎಂದು ಹೇಳಲು ಹಿಂಜರಿಕೆ ತೋರದ ಬೆಳಗೆರೆ, “ಅದೇ ದುಡ್ಡಲ್ಲಿ ಪ್ರಾರ್ಥನಾ ಸ್ಕೂಲ್ ಕಟ್ಟಿಸಿದೆ, ಹತ್ತು ಸಾವಿರ ಮಕ್ಕಳು, ನಾಲ್ಕೂವರೆ ಸಾವಿರ ಸಿಬ್ಬಂದಿ ಅದೇ ಪ್ರಾರ್ಥನಾ ಸ್ಕೂಲಲ್ಲಿ ಜೀವನದ ಹಾದಿ ಕಾಣುತ್ತಿದ್ದಾರೆ. ಸ್ಕೂಲ್ ಅಡ್ಮಿಶನ್ನಿಗೆ ಜಾತಿ ಮತ್ತು ಡೊನೇಶನ್ ಎರಡನ್ನೂ ಕೇಳುವುದಿಲ್ಲ,” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ನಿಜ, ಹಣ ಸಂಪಾದನೆಯ ಗುರಿ ಎಷ್ಟು ಮುಖ್ಯವೋ, ಅದರ ಸಂಪಾದನೆಯ ಮಾರ್ಗವೂ ಅಷ್ಟೇ ಮುಖ್ಯ. ಆದರೆ, ಸಂಪಾದಿಸಿದ ಹಣವನ್ನು ಕೊಳೆಯಲು ಬಿಡುವವರ ಮಧ್ಯೆ, ಅದನ್ನು ಶಿಕ್ಷಣ ಸಂಸ್ಥೆ ಕಟ್ಟಿ, ನೂರಾರು ಜನರಿಗೆ ಉದ್ಯೋಗ ನೀಡಿದ ರವಿ, ತುಸು ಭಿನ್ನವಾಗಿ ನಿಲ್ಲುತ್ತಾರೆ.
ಇಂದು ಪ್ರಾರ್ಥನಾ ಸ್ಕೂಲಲ್ಲಿ ಅಟೋ ಓಡಿಸುವವರು, ತರಕಾರಿ ಮಾರುವವರ ಮಕ್ಕಳು, ಬಡ ಮಧ್ಯಮ ವರ್ಗದವರೇ ಹೆಚ್ಚಾಗಿ ಕ್ವಾಲಿಟಿ ಎಜುಕೇಶನ್ ಪಡೆಯುವಂತಾಯಿತಲ್ಲ, ಅದಕ್ಕೆ ಸಾಟಿ ಇನ್ನೊಂದಿಲ್ಲ.
ರವಿ ಬೆಳಗೆರೆಗೆ ಐವತ್ತು ತುಂಬಿದಾಗ ಅವರ ಜೀವನ ಸಾಧನೆ ಕುರಿತ ಸಂಗ್ರಹ ಸಂಚಿಕೆ ಫಸ್ಟ್ ಹಾಫ್ ಬಂತು.ಆಗ ಅವರು ಹೇಳಿದ್ದರು, “ನಾನು ಇನ್ನೂ ಐವತ್ತು ವರ್ಷ ಬಾಳುತ್ತೇನೆ, ನೂರು ವರ್ಷ ಬದುಕುತ್ತೇನೆ ಕಣ್ರೀ” ಎಂದು ಬಾಯ್ತುಂಬ ಹೇಳಿಕೊಂಡಿದ್ದರು. ಅದಾಗಿ ೧೨ ವರ್ಷಗಳಷ್ಟೇ ಬದುಕಿದರು. ಅವರಂದುಕೊಂಡ ಹಾಗೆ ನೂರು ವರ್ಷ ಬದುಕಬಹುದಿತ್ತೇನೋ, ಆದರೆ ಅವರು ಬುಧ್ಯಾಪೂರ್ವಕವಾಗಿ ಬೆಳೆಸಿಕೊಂಡಿದ್ದ,ಅವರು ಬಹುವಾಗಿ ಇಷ್ಟಪಡುತ್ತಿದ್ದ ಕೆಲ ದೌರ್ಬಲ್ಯಗಳು ಅವರ ದೇಹವನ್ನು ಹಣ್ಣಾಗಿಸಿದ್ದವು ಅಂತ ತೋರುತ್ತದೆ. ರವಿ ಅವರ ಇಚ್ಛಾಶಕ್ತಿಗಿಂತ, ಅವರ ದೌರ್ಬಲ್ಯದ ಕೈ ಮೇಲಾಯಿತು. ರವಿ ಅವರು ಬರವಣಿಗೆಯಲ್ಲಿ, ಮಾತಿನ ಸಂದರ್ಭಗಳಲ್ಲಿ ಸೃಷ್ಟಿಸಿದ ಪಡೆನುಡಿಗಳು ಶಾಶ್ವತ. ಅವರು ಮಾತಿನಲ್ಲಿ ಬರಹದಲ್ಲಿ ನೀಡಿದ ಸಂದೇಶಗಳು ಶಾಶ್ವತ..
ಇವನ ಮುಖ ಹಿಂಡಿ ಒಣ ಹಾಕಿದ ಅಂಡರ್‌ವೇರ್‌ಇದ್ದಹಾಗಿದೆ ಎಂದು ಆಡಿದ ಲಘು ಲೇವಡಿಯ ಮಾತಿನಿಂದ ಹಿಡಿದು, ಬದುಕಿನಲ್ಲಿ ಬರೆದಿಟ್ಟುಕೊಳ್ಳಲೇ ಬೇಕಾದ ಅನೇಕ ಮಾತುಗಳನ್ನು ಅವರು ಆಡಿದ್ದಾರೆ. “ಯಾವ ಸ್ನೇಹಿತರು ಎಷ್ಟು ದೂರದ ತನಕ ನಡೆದರೋ ಅಷ್ಟು ಉಪಕಾರ ಆಯ್ತು ಅಂತ ತಿಳಿದುಕೊಳ್ಳಬೇಕು, ಯಾರೂ ಕೂಡ ಸಾವಿನ ತನಕ ಹಿಂಬಾಲಿಸುವುದಿಲ್ಲ, ಅವರು ಒಂದು ವೇಳೆ ನಮ್ಮಿಂದ ದೂರಾದರೆ ಅವರಿಗಿದ್ದ ನಮ್ಮ ಅವಶ್ಯಕತೆ ಮುಗೀತು ಅಂತ ಭಾವಿಸಬೇಕು. ಪ್ರತಿ ಅಂಧಕಾರಕ್ಕೆ ಒಂದು ಸೂರ್ಯೋದಯ ಇರತ್ತೆ, ಪ್ರತಿ ಅಂತ್ಯಕ್ಕೆ ಒಂದು ಆದಿಯೂ ಇದ್ದೇ ಇರುತ್ತೆ,” ಎಂಬ ಅವರ ವೇದಾಂತದ ಮಾತುಗಳು ನಿತ್ಯ ನಿರಂತರ ಹಸಿರು.
ಬೆಳಗಾಗುವುದರೊಳಗೆ ರವಿ ಇಲ್ಲ. ರವಿಯ ನೆನಪುಗಳು ನಿತ್ಯನೂತನ
#ರವಿಬೆಳಗೆರೆ 

 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top