ರಾಷ್ಟ್ರದ ಹೆಮ್ಮೆಯ ಉದಾರ ರತ್ನ

ಸಮಾಜದ ಸಂಕಟ ನಿವಾರಣೆಗೆ ಧಾವಿಸುವ ರತನ್ ಟಾಟಾ ಅವರನ್ನು ಉದ್ಯಮಿಯಾಗಿ ಮಾತ್ರವಲ್ಲ, ಒಬ್ಬ ಉದಾರಿಯಾಗಿ ದೇಶದ ಜನ ನೆನೆಯುತ್ತಿದ್ದಾರೆ, ಗೌರವದಿಂದ ಕಾಣುತ್ತಿದ್ದಾರೆ.

– ಹ.ಚ.ನಟೇಶ್‌ಬಾಬು
ವ್ಯಾಪಾರಿಗಳು ಅಥವಾ ಉದ್ಯಮಿಗಳೆಂದರೆ ಸಮಾಜದಲ್ಲಿ ನಕಾರಾತ್ಮಕ ಭಾವನೆಗಳೇ ಹೆಚ್ಚು. ಲಾಭಕ್ಕಾಗಿ ಜನರನ್ನು ದೋಚುವ ಕಳ್ಳರಂತೆ ಉದ್ಯಮಿಗಳನ್ನು ಕೆಲವರು ಬಿಂಬಿಸುತ್ತಾರೆ. ಆದರೆ, ರತನ್ ಟಾಟಾ ಎಂದಾಗ ಎಲ್ಲರ ಮನದಲ್ಲಿ ಹೆಮ್ಮೆ ಮತ್ತು ಗೌರವದ ಭಾವ. 82 ವರ್ಷದ ರತನ್ ಟಾಟಾ, ಕೋವಿಡ್-19 ವಿರುದ್ಧದ ಸಮರಕ್ಕಾಗಿ 500 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರ ಟಾಟಾ ಗ್ರೂಪ್ 1,000 ಕೋಟಿ ರೂ. ನೀಡಿದೆ. ಟಾಟಾ ಗ್ರೂಪ್‌ನ ತಾಜ್ ಹೋಟೆಲ್‌ಗಳು, ಕೋವಿಡ್-19ಗೆ ಚಿಕಿತ್ಸೆ ನೀಡುವ ವೈದ್ಯರಿಗಾಗಿ ಬಾಗಿಲು ತೆರೆದಿವೆ. ಸಮಾಜದಲ್ಲಿ ಸಂಕಷ್ಟ ಎದುರಾದಾಗಲೆಲ್ಲ ರತನ್ ಟಾಟಾ ನೆರವಿಗೆ ಧಾವಿಸುತ್ತಲೇ ಇದ್ದಾರೆ. ಅವರನ್ನು ಉದ್ಯಮಿಯಾಗಿ ಮಾತ್ರವಲ್ಲ, ಒಬ್ಬ ಉದಾರಿಯಾಗಿ ದೇಶದ ಜನ ನೆನೆಯುತ್ತಿದ್ದಾರೆ. ಪದ್ಮ ವಿಭೂಷಣ, ಪದ್ಮ ಭೂಷಣ ಪುರಸ್ಕಾರಗಳಿಗೆ ಪಾತ್ರರಾಗಿರುವ ರತನ್ ಟಾಟಾ ಅವರಿಗೆ, ‘ಭಾರತ ರತ್ನ’ ನೀಡಬೇಕು ಎನ್ನುವ ಹಕ್ಕೋತ್ತಾಯಗಳು, ಆಂದೋಲನಗಳೂ ಆರಂಭಗೊಂಡಿವೆ. ಕೋವಿಡ್‌ನಂಥ ಸಂಕಷ್ಟದಲ್ಲಿ ದೊಡ್ಡ ಮೊತ್ತ ನೀಡಿ, ಇತರೆ ಉದ್ಯಮಿಗಳಿಗೆ ಮಾದರಿಯಾಗಿ ನಿಂತ ರತನ್ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದು ಬಂದಿದೆ.

ಟಾಟಾ ಗ್ರೂಪ್ ಅಧ್ಯಕ್ಷರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ ರತನ್, 2012ರಲ್ಲಿ ತಮ್ಮ 75ನೇ ಜನ್ಮದಿನದಂದೇ ನಿವೃತ್ತಿ ಪಡೆದರು. ‘‘ಅಧಿಕಾರದಿಂದ ಕೆಳಗಿಳಿಯಿರಿ,’’ ಎಂದು ಯಾರೂ ಅವರನ್ನು ಒತ್ತಾಯಿಸಿರಲಿಲ್ಲ. ರಾಜಕಾರಣಿಗಳಂತೆ, ಅವರೂ ಉಸಿರಿರುವ ತನಕ ಪಟ್ಟಕ್ಕೆ ಅಂಟಿಕೊಳ್ಳಬಹುದಿತ್ತು. ಆದರೆ, ಅಧಿಕಾರದ ಕುರ್ಚಿಯನ್ನು ಹೊಸಬರಿಗೆ ತೆರೆದಿಟ್ಟರು. ರತನ್ ಸ್ಥಾನವನ್ನು ಸೈರಸ್ ಮಿಸ್ತ್ರಿ  ಸ್ವೀಕರಿಸಿದರು. ಬಳಿಕ ಸಂಸ್ಥೆಯಲ್ಲಿನ ಆಂತರಿಕ ಸಂಘರ್ಷಗಳಿಂದಾಗಿ ಮಿಸ್ತ್ರಿ ಹೊರಹೋಗಬೇಕಾಯಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತೆ ಸೂತ್ರ ಹಿಡಿದ ರತನ್ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್.ಚಂದ್ರಶೇಖರನ್ ಅವರನ್ನು ಕರೆ ತಂದರು.

ನಿವೃತ್ತಿ ಅನ್ನುವುದು ಒಬ್ಬ ವ್ಯಕ್ತಿಯ ಪಾಲಿಗೆ ವಿಶ್ರಾಂತಿಯ ಸಂದರ್ಭ. ಆದರೆ, ರತನ್ ಟಾಟಾರಂಥವರಿಗೆ ನಿವೃತ್ತಿ ಅನ್ನುವುದು ಹಾಲಿ ಕೆಲಸವನ್ನು ಬದಲಿಸಿ, ಇನ್ನೊಂದು ಕೆಲಸ ಆರಂಭಿಸುವ ಅವಕಾಶ. ಸಮಾಜಮುಖಿ ಕೆಲಸಗಳಲ್ಲಿ ಮೊದಲಿಂದಲೂ ಸಕ್ರಿಯರಾಗಿದ್ದ ಅವರು, ಈಗ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ. ಟಾಟಾ ಟ್ರಸ್ಟ್‌ನ ನೇತೃತ್ವವಹಿಸಿಕೊಂಡಿರುವ ರತನ್ ಟಾಟಾ, ಈ ತುಂಬು ಜೀವನದಲ್ಲಿ ಕಂಡ ಕನಸುಗಳು ನೂರಾರು. ಅವುಗಳನ್ನು ನನಸು ಮಾಡಲು ಮಾಡಿದ ಕೆಲಸಗಳು ಒಂದೆರಡಲ್ಲ. ಉದಾರತೆ, ಕರುಣೆ, ಸಮಾಜ ಸೇವೆಗಳು ಟಾಟಾ ಕುಟುಂಬದೊಂದಿಗೆ ಬೆಸೆದುಕೊಂಡಿವೆ. ಜೆಮ್‌ಶೆಟ್‌ಜಿ ಟಾಟಾ ತೋರಿದ ಜನಕಲ್ಯಾಣದ ಹಾದಿಯಲ್ಲಿ ರತನ್ ಹೆಜ್ಜೆ ಹಾಕುತ್ತಿದ್ದಾರೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ನೀಡಬೇಕು ಎನ್ನುವುದನ್ನು ತಮ್ಮ ಕ್ರಿಯೆಯ ಮೂಲಕವೇ ಸಾಬೀತು ಮಾಡಿದ್ದಾರೆ.
ಆರೋಗ್ಯರಕ್ಷೆ, ಪೌಷ್ಟಿಕ ಆಹಾರ, ಶಿಕ್ಷಣ, ನೀರಿನ ಯೋಜನೆ, ಜೀವನ ಮಟ್ಟ ಸುಧಾರಣೆ, ಡಿಜಿಟಲ್ ರೂಪಾಂತರ, ಸಾಮಾಜಿಕ ನ್ಯಾಯ, ಕೌಶಲ ಅಭಿವೃದ್ದಿ, ಪರಿಸರ, ವಿಪತ್ತು ನೆರವು ಸೇರಿದಂತೆ ಏನೇ ಇರಲಿ, ಅಲ್ಲೆಲ್ಲ ರತನ್ ಅವರ ಟಾಟಾ ಟ್ರಸ್ಟ್ ಹಾಜರು. ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಪ್ರೋತ್ಸಾಹಿಸುತ್ತಿದ್ದು, ಸ್ಕಾಲರ್‌ಶಿಪ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಕಟ್ಟಿಕೊಡುತ್ತಿದೆ.

ಕಾರ್ ಖರೀದಿಸಲಾಗದ ಶ್ರೀಸಾಮಾನ್ಯರು ತಮ್ಮ ಪತ್ನಿ ಮತ್ತು ಮಕ್ಕಳನ್ನು ಮೋಟಾರ್ ಸೈಕಲ್‌ಗಳಲ್ಲಿ ಕೂರಿಸಿಕೊಂಡು ಬಿಸಿಲು-ಮಳೆಯಲ್ಲಿ ಸುತ್ತಾಡುವುದನ್ನು ಕಂಡಾಗಲೆಲ್ಲ, ರತನ್ ಟಾಟಾಗೆ ಸಂಕಟವಾಗುತ್ತಿತ್ತು. ಶ್ರೀಸಾಮಾನ್ಯರ ಕಾರ್ ಕನಸನ್ನು ಈಡೇರಿಸುವ ಸಲುವಾಗಿಯೇ ಅಗ್ಗದ ದರದ ನ್ಯಾನೊ ಕಾರ್ ಅನ್ನು ಮಾರುಕಟ್ಟೆಗೆ ಬಿಟ್ಟರು.

ಜನ ಸಾಮಾನ್ಯರ ಆರೋಗ್ಯದ ಬಗ್ಗೆಯೂ ರತನ್ ಟಾಟಾ ಅವರಿಗೆ ತೀರದ ಕಾಳಜಿ. ದೇಶದಲ್ಲಿನ ಪ್ರತಿಯೊಬ್ಬರಿಗೂ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸಿಗುವಂತಾಗಬೇಕು ಎನ್ನುವುದು ರತನ್‌ರ ಆಶಯ. ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು 1,000 ಕೋಟಿ ರೂ.ಗಳನ್ನು ಅವರ ಟ್ರಸ್ಟ್ ನೀಡಿದ್ದು, ಖುದ್ದಾಗಿ ರತನ್ ಟಾಟಾ ಅವರೇ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮುಂಬಯಿನಲ್ಲಿರುವ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಶೇ.60ರಷ್ಟು ರೋಗಿಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜನರಷ್ಟೇ ಅಲ್ಲ, ಶ್ವಾನಗಳತ್ತಲೂ ಕಾಳಜಿ
ಜನರ ಬಗೆಗಷ್ಟೇ ಅಲ್ಲ ಅವರ ಶ್ವಾನ ಪ್ರೀತಿಯೂ ಎಲ್ಲರಿಗೂ ಗೊತ್ತು. ತಮ್ಮ ದಿವಂಗತ ನಾಯಿಯ 14ನೇ ಜನ್ಮದಿನವನ್ನೂ ಅವರು ನೆನಪಿಟ್ಟುಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಅವರ ಬಾಂಬೆ ಹೌಸ್‌ನ ಒಂದು ಭಾಗವು ಅನೇಕ ವರ್ಷಗಳಿಂದ ಬೀದಿ ನಾಯಿಗಳಿಗೆ ಆಸರೆ ಕೇಂದ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ನವೋದ್ಯಮಿಗಳನ್ನು ಬೆಂಬಲಿಸುತ್ತಿರುವ ರತನ್ ಟಾಟಾ, ಡಜನ್‌ಗೂ ಅಧಿಕ ಸ್ಟಾರ್ಟಪ್‌ಗಳಲ್ಲಿ ಹಣ ಹೂಡಿದ್ದಾರೆ. ಸಾಕು ಪ್ರಾಣಿಗಳಿಗೆ ಆಹಾರ ಒದಗಿಸುವ ಆನ್‌ಲೈನ್ ಸ್ಟೋರ್ ‘ಡಾಗ್‌ಸ್ಟಾಟ್’, ಆಹಾರ ಮತ್ತು ಇತರೆ ಉತ್ಪನ್ನಗಳ ಸ್ಟಾರ್ಟಪ್‌ಗಳಿಗೆ ಸಾಥ್ ನೀಡಿದ್ದಾರೆ. ಓಲಾ, ಒನ್97 ಕಮ್ಯುನಿಕೇಷನ್ಸ್(ಪೇಟಿಎಂ), ಸ್ನ್ಯಾಪ್‌ಡೀಲ್, ಅರ್ಬನ್‌ಕ್ಲಾಪ್, ಫಸ್ಟ್‌ಸಿಟಿ, ಅರ್ಬನ್‌ಲ್ಯಾಡರ್‌ಗಳಲ್ಲಿ ರತನ್ ಹೂಡಿಕೆ ಇದೆ.
‘‘ಭಾರತದಲ್ಲಿ ದೇವಸ್ಥಾನ ಅಥವಾ ಆಸ್ಪತ್ರೆ ಕಟ್ಟಡಗಳ ನಿರ್ಮಾಣದಂಥ ಸಾಂಪ್ರದಾಯಿಕ ಕೆಲಸಗಳಿಗೆ ದೊಡ್ಡ ಮೊತ್ತದ ದೇಣಿಗೆ ಬರುತ್ತಿದೆ. ಕಟ್ಟಡಗಳ ಹೊರತಾಗಿ ಇತರೆ ಜನಪರ ಕೆಲಸಗಳಿಗೂ ಹೆಚ್ಚುಹೆಚ್ಚು ದೇಣಿಗೆಯು ಬರುವಂತಾಗಬೇಕು,’’ ಎನ್ನುವುದು ರತನ್ ಆಶಯ. ಇದನ್ನು ನಿಜಗೊಳಿಸುವಂತೆ ಟಾಟಾ ಗ್ರೂಪ್‌ನ ಸಂಸ್ಥೆಗಳು ವಿಜ್ಞಾನ, ತಂತ್ರಜ್ಞಾನ, ಅಧ್ಯಯನ, ಕ್ರೀಡೆ, ವೈದ್ಯಕೀಯ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿವೆ.

ಲೈಸೆನ್ಸ್ ಇರುವ ಪೈಲಟ್
ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್‌ಶೆಟ್‌ಜಿ ಅವರ ಮೊಮ್ಮಗನಾದ ರತನ್, 1937ರ ಡಿ.28ರಂದು ಸೂರತ್‌ನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ-ತಾಯಿ ಬೇರೆಯಾದರು. ಅಜ್ಜಿಯ ಬಳಿಯೇ ಅವರು ಬೆಳೆಯಬೇಕಾಯಿತು. ‘‘ನನ್ನ ಬಾಲ್ಯ ತುಂಬಾ ಚೆನ್ನಾಗಿತ್ತು. ಆದರೆ, ನಾನು ಮತ್ತು ನನ್ನ ಸಹೋದರ ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಕೆಲವೊಂದು ಕಷ್ಟದ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಏಕೆಂದರೆ, ಆಗ ನಮ್ಮ ಹೆತ್ತವರು ವಿಚ್ಛೇದನ ಪಡೆದಿದ್ದರು. ಆಗಿನ ದಿನಗಳು ಇಂದಿನಂತೆ ಸಾಮಾನ್ಯವಾಗಿರಲಿಲ್ಲ. ಆದರೆ, ನಮ್ಮನ್ನು ನಮ್ಮ ಅಜ್ಜಿ ಎಲ್ಲಾ ರೀತಿಯಲ್ಲೂ ಪ್ರೀತಿಯಿಂದ ಸಲಹಿದರು. ನನ್ನ ತಾಯಿ ಮರು ಮದುವೆಯಾದ ಬಳಿಕವಂತೂ ಶಾಲೆಯ ಇತರ ಹುಡುಗರು ತುಂಬಾ ಹಗರವಾದ ಮಾತನಾಡಲು ಆರಂಭಿಸಿದ್ದರು. ಆದರೆ, ಇಂತಹ ಸಂದರ್ಭದಲ್ಲಿ ಘನತೆ, ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಮ್ಮ ಅಜ್ಜಿ ನಮಗೆ ಕಲಿಸಿದರು. ಅಜ್ಜಿ ಕಲಿಸಿಕೊಟ್ಟಿದ್ದ ಪಾಠ ಮತ್ತು ವೌಲ್ಯವನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ,’’ ಎಂದು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ರತನ್ ಹೇಳಿಕೊಂಡಿದ್ದರು. ಮುಂಬಯಿನಲ್ಲಿ ಆರಂಭಿಕ ವಿದ್ಯಾಭ್ಯಾಸವಾಯಿತು. 1962ರಲ್ಲಿ ಕಾರ್ನೆಲ್ ವಿವಿಯಲ್ಲಿ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಮೇಲೆ, ಟಾಟಾ ಗ್ರೂಪ್ ಪ್ರವೇಶಿಸಿದರು.
ಅಂದ ಹಾಗೇ, ಉದ್ಯಮಿಗಳಲ್ಲಿ ಮೇಲೆಮೇಲೆ ಏರುವ ತವಕ ಸಹಜ. ಆದರೆ, ಆಕಾಶಕ್ಕೇರುವ ನೈಪುಣ್ಯತೆಯನ್ನು ರತನ್ ಹೊಂದಿದ್ದಾರೆ. ಅವರ ಬಳಿ ಪೈಲಟ್ ಲೈಸೆನ್ಸ್ ಸಹ ಇದೆ. ಇಷ್ಟಕ್ಕೂ 2007ರಲ್ಲೇ ಅವರು ಬೆಂಗಳೂರಿನ ಏರ್ ಇಂಡಿಯಾ ಶೋನಲ್ಲಿ ‘ಎಫ್-16’ ನಡೆಸಿದ್ದರು. ಅಲ್ಲದೇ ಸಹ-ಪೈಲಟ್ ಆಗಿ ಯುದ್ಧ ವಿಮಾನವನ್ನು 40 ನಿಮಿಷ ಹಾರಿಸಿದ್ದೂ ಉಂಟು. 69ನೇ ವಯಸ್ಸಿನಲ್ಲೂ ವಿಮಾನವನ್ನು ಓಡಿಸಿದವರು. ಭಾರತದ ಅಗ್ರ ಕುಬೇರರ ಪಟ್ಟಿಯಲ್ಲಿ ರತನ್ ಇಲ್ಲ. ಅವರ ಒಟ್ಟು ಸಂಪತ್ತು 100 ಕೋಟಿ ಡಾಲರ್(ಸುಮಾರು 7,400 ಕೋಟಿ ರೂ.). ಆದರೆ, ಉದಾರತೆಯಲ್ಲಿ ಇವರಿಗೆ ಇವರೇ ಸಾಟಿ. ತಮ್ಮ ಶೇ.60ರಷ್ಟು ಷೇರುಗಳನ್ನು ಚಾರಿಟಬಲ್ ಟ್ರಸ್ಟ್‌ಗೆ ಹಾಕಿದ ಏಕೈಕ ಭಾರತೀಯ ಉದ್ಯಮಿ ಎನ್ನುವ ಹೆಗ್ಗಳಿಕೆ ರತನ್ ಅವರದು. ‘‘ಈ ದೇಶವು ಎಲ್ಲರಿಗೂ ಸಮಾನ ಅವಕಾಶಗಳ ನೆಲೆಯಾಗಬೇಕು ಎನ್ನುವುದು ನನ್ನ ಕನಸು. ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಅಳಿಸಿಹೋಗಬೇಕು,’’ ಎನ್ನುವ ರತನ್ ಟಾಟಾ ಮಾತುಗಳೇ, ಅವರ ವ್ಯಕ್ತಿತ್ವವನ್ನೂ ಬಿಚ್ಚಿಟ್ಟಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top