ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ – ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ

– ಕೋರೆ-ಕತ್ತಿ ಫೈಟ್‌ ನಡುವೆ ಕಡಾಡಿ, ಗಸ್ತಿ ಎಂಟ್ರಿ.

– ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್‌.

ವಿಕ ಸುದ್ದಿಲೋಕ ಬೆಂಗಳೂರು.

ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್‌ ಭರ್ಜರಿ ಶಾಕ್‌ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವ ಸಂದೇಶ ರವಾನಿಸಿದೆ. ರಾಜ್ಯ ಬಿಜೆಪಿ ಕೋರ್‌ ಕಮಿಟಿ ಶಿಫಾರಸಿಗೆ ಮಾನ್ಯತೆ ಕೊಟ್ಟಿಲ್ಲ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಮೂವರ ಹೆಸರನ್ನು ರಾಜ್ಯ ಘಟಕದಿಂದ ಶಿಫಾರಸು ಮಾಡಲಾಗಿತ್ತು. ರಾಜ್ಯಸಭೆಯ ಹಾಲಿ ಸದಸ್ಯ ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ್‌ ಕತ್ತಿ ಹಾಗೂ ಉದ್ಯಮಿ ಪ್ರಕಾಶ್‌ ಶೆಟ್ಟಿ ಹೆಸರನ್ನು ಕೋರ್‌ ಕಮಿಟಿ ಸೂಚಿಸಿತ್ತು. ಆದರೆ ಬಿಜೆಪಿ ವರಿಷ್ಠರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿಈ ಮೂವರ ಹೆಸರಿಲ್ಲ.

ಭಿನ್ನಮತ ನಡೆಯಲ್ಲ

‘ಬಂಡಾಯದ ಬಾವುಟ ಹಾರಿಸಲು ಹೊರಟವರಿಗೆ ಪಕ್ಷದಲ್ಲಿ ಬೆಲೆ ಕೊಡುವುದಿಲ್ಲ. ಯಾವುದೇ ಅಭಿಪ್ರಾಯವಿದ್ದರೂ ಅದನ್ನು ಪಕ್ಷದ ಚೌಕಟ್ಟಿನಲ್ಲೇ ಪ್ರಕಟಿಸಬೇಕು. ಅದನ್ನು ಬಿಟ್ಟು ಗುಂಪುಗಾರಿಕೆ ಮಾಡಿದರೆ ಸ್ಥಾನಮಾನ ನೀಡಲಾಗುವುದಿಲ್ಲ’ ಎಂಬ ಸಂದೇಶ ವರಿಷ್ಠರಿಂದ ರವಾನೆಯಾಗಿದೆ.

ಹಣಕಾಸು ತಜ್ಞ ಕೆ.ವಿ.ಕಾಮತ್‌ ಅವರನ್ನು ರಾಜ್ಯಸಭೆಗೆ ಕರೆಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಚ್ಛಿಸಿದ್ದಾರೆ. ಕಾಮತ್‌ ಅಲ್ಲದಿದ್ದರೂ ಹೈಕಮಾಂಡ್‌ ತನ್ನದೇ ಆದ ಒಬ್ಬ ಅಭ್ಯರ್ಥಿಯ ಹೆಸರನ್ನು ಸೂಚಿಸಬಹುದು. ಮತ್ತೊಂದು ಸ್ಥಾನಕ್ಕೆ ರಾಜ್ಯ ಘಟಕ ಕಳುಹಿಸಿದ ಹೆಸರನ್ನು ಪರಿಗಣಿಸಬಹುದು. ರಾಜ್ಯ ಘಟಕವೂ ಇದೇ ಪ್ರಸ್ತಾಪವನ್ನು ಹೈಕಮಾಂಡ್‌ ಮುಂದಿಟ್ಟಿತ್ತು ಎಂಬ ಚರ್ಚೆಯಾಗಿತ್ತು. ಆದರೆ, ಈ ಸೂತ್ರವನ್ನೂ ಹೈಕಮಾಂಡ್‌ ತಳ್ಳಿ ಹಾಕಿದೆ.

ಬೆಳಗಾವಿಯಲ್ಲಿ ಸಂಚಲನ

ರಾಜ್ಯಸಭೆ ಟಿಕೆಟ್‌ಗಾಗಿ ಬೆಳಗಾವಿ ಜಿಲ್ಲೆಯ ಪ್ರಭಾಕರ ಕೋರೆ ಹಾಗೂ ಕತ್ತಿ ಕುಟುಂಬದ ನಡುವೆ ಸಂಘರ್ಷ ನಡೆದಿತ್ತು. ರಾಜ್ಯಸಭೆ ಸದಸ್ಯರಾಗಿ ಪುನರಾಯ್ಕೆಯಾಗಲು ಬಯಸಿದ್ದ ಕೋರೆ ಈ ಸಂಬಂಧ ಸಾಕಷ್ಟು ಪ್ರಯತ್ನ ನಡೆಸಿದ್ದರು. ಸಿಎಂ ಹಾಗೂ ವರಿಷ್ಠರ ಸಂಪರ್ಕವನ್ನೂ ಮಾಡಿದ್ದರು. ಸಹೋದರ ರಮೇಶ್‌ ಕತ್ತಿಗೆ ಟಿಕೆಟ್‌ ಕೊಡಿಸುವಂತೆ ಮಾಜಿ ಸಚಿವ ಉಮೇಶ್‌ ಕತ್ತಿ ಸಿಎಂ ಎದುರು ದುಂಬಾಲು ಬಿದ್ದಿದ್ದರು. ಈ ನಿಟ್ಟಿನಲ್ಲಿ ಒತ್ತಡ ತರಲು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೆಲ ಶಾಸಕರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದರು. ಬಂಡಾಯದ ಮುನ್ಸೂಚನೆಯನ್ನೂ ನೀಡಿದ್ದರು. ಆದರೆ, ಬೆಳಗಾವಿ ಜಿಲ್ಲೆ ಕೋರೆ ಹಾಗೂ ಕತ್ತಿ ಕುಟುಂಬಕ್ಕೆ ಶಾಕ್‌ ಕೊಟ್ಟಿರುವ ಹೈಕಮಾಂಡ್‌ ಇದೇ ಜಿಲ್ಲೆಯ ಈರಣ್ಣ ಕಡಾಡಿ ಅವರನ್ನು ಆಯ್ಕೆ ಮಾಡಿದೆ.

ಅಶೋಕ ಗಸ್ತಿ ಕಲ್ಯಾಣ ಕರ್ನಾಟಕದ ರಾಯಚೂರಿನವರು. ಈ ಭಾಗದಿಂದ ರಾಜ್ಯಸಭೆ ಟಿಕೆಟ್‌ಗೆ ಒತ್ತಡವೇನೂ ಇರಲಿಲ್ಲ. ಈ ನಡುವೆಯೂ ಅಚ್ಚರಿಯ ಆಯ್ಕೆ ಮಾಡಿರುವ ಹೈಕಮಾಂಡ್‌ ಪಕ್ಷ ನಿಷ್ಠೆಗೆ ಮಣೆ ಹಾಕಿದೆ. ಇದರೊಂದಿಗೆ ತನಗೆ ಹೆಚ್ಚಿನ ಶಕ್ತಿಯಿರುವ ಉತ್ತರ ಕರ್ನಾಟಕದಲ್ಲೇ ಪಕ್ಷದ ಅಡಿಪಾಯ ಭದ್ರಪಡಿಸಲು ಹೊಸ ಮುಖಗಳನ್ನು ಪಕ್ಷ ಶೋಧಿಸಿದಂತಾಗಿದೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಈರಣ್ಣ ಕಡಾಡಿ ಹಾಗೂ ಅಶೋಕ ಗಸ್ತಿ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

———————-

ಸಂಘ ನಿಷ್ಠ ಕಡಾಡಿ

ಬೆಳಗಾವಿಯ ಈರಣ್ಣ ಕಡಾಡಿ ಲಿಂಗಾಯತ(ಪಂಚಮಸಾಲಿ) ಸಮುದಾಯಕ್ಕೆ ಸೇರಿದವರು. ಈ ಹಿಂದೆ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷರಾಗಿದ್ದರು. ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. ಮೊದಲಿನಿಂದಲೂ ಸಂಘ ಪರಿವಾರದ ಸಂಪರ್ಕ ಹೊಂದಿದವರಾಗಿದ್ದಾರೆ.

———————-

ಸವಿತಾ ಸಮಾಜದ ಗಸ್ತಿ

ರಾಯಚೂರಿನ ಅಶೋಕ ಗಸ್ತಿ ವೃತ್ತಿಯಲ್ಲಿವ ಕೀಲರು. ಸವಿತಾ ಸಮಾಜಕ್ಕೆ ಸೇರಿದ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು, ಸಣ್ಣ ಸಮುದಾಯಕ್ಕೂ ಪಕ್ಷ ಪ್ರಾತಿನಿಧ್ಯ ನೀಡಿದಂತಾಗಿದೆ. ಸಾಮಾನ್ಯ ಕಾರ್ಯಕರ್ತರಂತೆ ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಶ್ರಮ ವಹಿಸಿರುವ ಇವರು ಪಕ್ಷದ ಒಬಿಸಿ ಮೋರ್ಚಾದಲ್ಲಿ ಮುಂಚೂಣಿಯಲ್ಲಿದ್ದರು. ಸಂಘ ಪರಿವಾರಕ್ಕೂ ನಿಕಟರು.

———————-

ಬೆಳಗಾವಿ ಘಟಾನುಘಟಿಗಳು ಥಂಡಾ

ಬೆಳಗಾವಿಯ ಘಟಾನುಘಟಿಗಳೀಗ ರಕ್ಷಣಾತ್ಮಕ ನಡೆ ಅನುಸರಿಸಲು ಹೊರಟಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲೂ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡುವ ಮೂಲಕ ಬೆಳಗಾವಿ ರಾಜಕಾರಣಿಗಳಿಗೆ ಹೈಕಮಾಂಡ್‌ ಶಾಕ್‌ ನೀಡಿತ್ತು. ಅದರ ಮುಂದುವರಿದ ಭಾಗವೆಂಬಂತೆ ಕಡಾಡಿ ಹೆಸರು ಪ್ರಕಟಿಸಲಾಗಿದೆ. ಒತ್ತಡ ತಂತ್ರ ಅನುಸರಿಸಿದರೆ ವರಿಷ್ಠರು ಸಹಿಸುವುದಿಲ್ಲ ಎನ್ನುವುದು ಬೆಳಗಾವಿ ರಾಜಕಾರಣಿಗಳಿಗೆ ಅರಿವಿಗೆ ಬರುವಂತಾಗಿದೆ. ಇದು ಜಿಲ್ಲೆಯ ರಾಜಕಾರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.

………..

ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ನಮ್ಮ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಈರಣ್ಣ ಕಡಾಡಿ ಹಾಗೂ ಅಶೋಕ್‌ ಗಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಕರ್ನಾಟಕದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಈ ಅಭ್ಯರ್ಥಿಗಳಿಗೆ ಶುಭ ಹಾರೈಕೆ.

– ಬಿ.ಎಲ್‌.ಸಂತೋಷ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ

ನಾನು ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಿರುವುದು ಸಂತಸ ತಂದಿದೆ. ಅವರಿಗೆ ನನ್ನ ಬೆಂಬಲವಿದೆ.

– ರಮೇಶ್‌ ಕತ್ತಿ, ಟಿಕೆಟ್‌ ಆಕಾಂಕ್ಷಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top