ರಾಜಸ್ಥಾನದಲ್ಲೂ ಅನರ್ಹತೆ ಅಸ್ತ್ರ?

– ವಿಶ್ವಾಸಮತ ಯಾಚನೆಗೆ ಗೆಹ್ಲೋಟ್ ನಿರ್ಧಾರ | ಸರಕಾರ ಉಳಿಸಿಕೊಳ್ಳುವುದೇ ತಕ್ಷಣದ ಆದ್ಯತೆ | ಗುರುವಾರ ಸಂಪುಟ ವಿಸ್ತರಣೆ ಸಾಧ್ಯತೆ

ಜೈಪುರ: ಸಚಿನ್ ಪೈಲಟ್ ಬಂಡಾಯದ ನಡುವೆಯೂ ರಾಜಸ್ಥಾನದಲ್ಲಿ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ.
ಅದರ ಭಾಗವಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸಮತ ಯಾಚನೆಗೆ ನಿರ್ಧರಿಸಿದ್ದಾರೆ. ಜತೆಗೆ, ಪೈಲಟ್ ಬಣದಲ್ಲಿರುವ ಶಾಸಕರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಯುತ್ತಿದೆ.
ಸದನದಲ್ಲಿ ಒಮ್ಮೆ ವಿಶ್ವಾಸಮತ ಸಾಬೀತುಪಡಿಸಿದರೆ ಆರು ತಿಂಗಳ ಸರಕಾರಕ್ಕೆ ಯಾವ ಆತಂಕವೂ ಇಲ್ಲ. ಹೀಗಾಗಿ ವಿಶ್ವಾಸಮತ ಯಾಚಿಸಿ ಸದ್ಯಕ್ಕೆ ಸರಕಾರ ಉರುಳದಂತೆ ನೋಡಿಕೊಳ್ಳುವ ತಂತ್ರಗಾರಿಕೆಗೆ ಕಾಂಗ್ರೆಸ್ ಮುಂದಾಗಿದೆ. ಪೈಲಟ್ ಸೇರಿ ಅವರ ಬಣದ 19 ಶಾಸಕರು ಮಂಗಳವಾರದ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು. ಹೀಗಾಗಿ ಪೈಲಟ್ ಬಣದಲ್ಲಿ 19 ಶಾಸಕರಿದ್ದಾರೆ ಎಂದುಕೊಂಡರೂ ಈಗಿನ ಬಲಾಬಲದಲ್ಲಿ ಸರಕಾರಕ್ಕೆ ಬೆಂಬಲ ಸೂಚಿಸುವ ಶಾಸಕರ ಸಂಖ್ಯೆ 104. ಇದರಿಂದ ವಿಶ್ವಾಸಮತ ಕೋರುವುದೇ ಉತ್ತಮ ಎಂಬ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ.
ವಿಶ್ವಾಸಮತ ಯಾಚನೆಗೆ ಮುಂದಾದರೆ ಕೊನೆಕ್ಷಣದಲ್ಲಿ ಬಿಜೆಪಿ ನೇರವಾಗಿ ರಂಗಪ್ರವೇಶ ಮಾಡಬಹುದು. ಆಗ ಕೆಲವು ಶಾಸಕರು ಅತ್ತ ವಾಲಿದರೂ ಅಚ್ಚರಿ ಇಲ್ಲ. ಅದನ್ನು ತಡೆಯಲು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವುದು ಸೂಕ್ತ. ಆಗ ಸದನದ ಸಂಖ್ಯಾಬಲವೇ ಕುಸಿಯುವುದರಿಂದ ಸರಳ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 85-90ರ ನಡುವೆ ಬರಬಹುದು. ನಿರಾಯಾಸವಾಗಿ ವಿಶ್ವಾಸಮತ ಸಾಬೀತುಪಡಿಸಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಈಗ ತಮ್ಮೊಂದಿಗೆ 28 ಶಾಸಕರಿದ್ದರೆ ಎಂದು ಪೈಲಟ್ ಬಣ ಹೇಳಿಕೊಂಡಿದೆ.

ರಾಜ್ಯಪಾಲರ ಭೇಟಿ
ಮಂಗಳವಾರ ನಡೆದ ಶಾಸಕಾಂಗ ಪಕ್ಷ ದ ಸಭೆಯಲ್ಲಿ ಸಚಿನ್ ಪೈಲಟ್ ಹಾಗೂ ಇಬ್ಬರು ಬೆಂಬಲಿಗ ಸಚಿವರನ್ನು ವಜಾಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಬಳಿಕ ರಾಜಭವನಕ್ಕೆ ತೆರಳಿದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮನ್ನು ಬೆಂಬಲಿಸುವ 104 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದರು. ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ಹಾಗೂ ವಿಶ್ವೇಂದರ್ ಸಿಂಗ್, ರಮೇಶ್ ಮೀನಾ ಅವರನ್ನು ಸಂಪುಟದಿಂದ ವಜಾಗೊಳಿಸುವ ಕಾಂಗ್ರೆಸ್ ಪ್ರಸ್ತಾವವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಗುರುವಾರ ಸಂಪುಟ ವಿಸ್ತರಣೆ?
ಗೆಹ್ಲೋಟ್ ಸಂಪುಟದಲ್ಲಿ ಖಾಲಿಯಾದ ಸ್ಥಾನಗಳಿಗಾಗಿ ಈಗ ಪೈಪೋಟಿ ತೀವ್ರಗೊಂಡಿದೆ. ಮೂವರು ಕಾಂಗ್ರೆಸ್ಸಿಗರು, ಬಿಎಸ್ಪಿಯಿಂದ ಕಾಂಗ್ರೆಸ್‌ಗೆ ಹಾರಿದ 3 ಶಾಸಕರು, ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಡುವೆ ಪೈಪೋಟಿ ಜೋರಾಗಿದ್ದು, ಸಂಪುಟ ಪುನಾರಚನೆ ಮತ್ತು ವಿಸ್ತರಣೆ ವೇಳೆ ಇವರಿಗೆ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಈ ಮಧ್ಯೆ, ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸಲು ಚಿಂತನೆ ನಡೆದಿದ್ದು, ಮಹೇಶ್ ಜೋಶಿ ಅವರನ್ನು ಪ್ರಮುಖ ಅಭ್ಯರ್ಥಿಯಾಗಿ ಗುರುತಿಸಲಾಗಿದೆ. ಗುರುವಾರ ಸಂಪುಟ ಪುನಾರಚನೆ ಮತ್ತು ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಝೆಡ್ ದರ್ಜೆ ಸೆಕ್ಯೂರಿಟಿ ವಾಪಸ್?
ಸಚಿನ್ ಪೈಲಟ್ ಅವರು ಡಿಸಿಎಂ ಆಗಿದ್ದಾಗ ನೀಡಲಾಗಿದ್ದ ಜೆಡ್ ದರ್ಜೆಯ ಭದ್ರತೆಯನ್ನು ಗೆಹ್ಲೋಟ್ ಸರಕಾರ ವಾಪಸ್ ಪಡೆಯುವ ಸಾಧ್ಯತೆಯಿದೆ. ಸಿಎಂ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

59 ಪದಾಧಿಕಾರಿಗಳ ರಾಜೀನಾಮೆ
ಸಚಿನ್ ಪೈಲಟ್ ಅವರನ್ನು ಹುದ್ದೆಗಳಿಂದ ತೆರವುಗೊಳಿಸಿದ್ದನ್ನು ಖಂಡಿಸಿ ರಾಜಸ್ಥಾನದ ಟೋಂಕ್ ಜಿಲ್ಲಾ ಕಾಂಗ್ರೆಸ್ ಘಟಕದ 59 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಮಂಗಳವಾರ ಸಂಜೆ ರಾಜೀನಾಮೆ ಪತ್ರಗಳನ್ನು ಪಕ್ಷದ ಮುಖಂಡರಿಗೆ ರವಾನಿಸಿದ್ದಾರೆ.

ಗೆಹ್ಲೋಟ್ ಗುಡುಗು
ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ವಿರುದ್ಧ ಗುಡುಗಿರುವ ಸಿಎಂ ಗೆಹ್ಲೋಟ್, ಕಮಲ ಪಾಳಯದ ಆಟ ನಡೆಯಲ್ಲ ಎಂದು ಎಚ್ಚರಿಸಿದ್ದಾರೆ. ‘‘ಮಧ್ಯಪ್ರದೇಶದಲ್ಲಿ ನಡೆಸಿದ ಆಟವನ್ನು ರಾಜಸ್ಥಾನದಲ್ಲಿ ರಿಪೀಟ್ ಮಾಡಲು ಬಿಜೆಪಿ ನೋಡುತ್ತಿದೆ. ರೆಸಾರ್ಟ್ ರಾಜಕೀಯ ಇಲ್ಲಿ ನಡೆಯಲ್ಲ. ಪೈಲಟ್ ಅವರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಪೈಲಟ್ ಕೈಲಿ ಏನೂ ಇಲ್ಲ. ಇಡೀ ಶೋ ನಡೆಸುತ್ತಿರುವುದು ಬಿಜೆಪಿ. ರಾಜಸ್ಥಾನದಲ್ಲಿ ಬಿಜೆಪಿ ಆಟ ನಡೆಯಲು ಬಿಡಲ್ಲ,’’ ಅವರು ಗುಡುಗಿದ್ದಾರೆ.

ಬಿಜೆಪಿ ತಿರುಗೇಟು
ಅಶೋಕ್ ಅವರ ಎಚ್ಚರಿಕೆಯ ಮಾತುಗಳಿಗೆ ರಾಜಸ್ಥಾನ ಬಿಜೆಪಿ ತಿರುಗೇಟು ನೀಡಿದೆ. ‘‘ಕಾಂಗ್ರೆಸ್ ಸರಕಾರದ ಆಡಳಿತದಿಂದ ಜನತೆ ಹತಾಶರಾಗಿದ್ದಾರೆ, ಕೋಪಗೊಂಡಿದ್ದಾರೆ. ಜಗತ್ತಿನ ಯಾವ ಶಕ್ತಿಯೂ ಕಾಂಗ್ರೆಸ್ ಸರಕಾರವನ್ನು ಉಳಿಸಲು ಸಾಧ್ಯವಿಲ್ಲ. ಜನರು ಬಯಸಿದಂತೆ ಎಲ್ಲವೂ ನಡೆಯಲಿದೆ. ನಾವು ಪರಿಸ್ಥಿತಿಗೆ ತಕ್ಕಂತೆ ನಮ್ಮ ತಂತ್ರಗಾರಿಕೆ ಪ್ರಯೋಗಿಸುತ್ತೇವೆ. ಜನತೆಯ ಬೇಡಿಕೆಗೆ ತಕ್ಕ ಸರಕಾರ ಅಧಿಕಾರದಲ್ಲಿರುವುದು ಅಗತ್ಯ,’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ಸಚಿನ್ ಪೈಲಟ್‌ರನ್ನು ಕಾಂಗ್ರೆಸ್ ವಜಾ ಮಾಡಿದ್ದೇಕೆ?
ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಅವರಿಂದ ಸಚಿನ್ ಪೈಲಟ್‌ಗೆ ದೂರವಾಣಿ ಕರೆ; ಗೆಹ್ಲೋಟ್ ಅಡಿ ಕೆಲಸ ಮಾಡುವುದಿಲ್ಲವೆಂದು ಪೈಲಟ್ ಸ್ಪಷ್ಟೋಕ್ತಿ
ಪೈಲಟ್ ಮತ್ತು ಅವರ ಬೆಂಬಲಿಗರನ್ನು ವಜಾಗೊಳಿಸುವಂತೆ ಪಕ್ಷದ ನಾಯಕರ ಒತ್ತಾಯದ ನಡುವೆಯೂ ಮತ್ತೆ ಕರೆ ಮಾಡಿದ ಪ್ರಿಯಾಂಕಾ, ಆಗಲೂ ಮಣಿಯದ ಪೈಲಟ್
2ನೇ ಬಾರಿ ಪ್ರಿಯಾಂಕಾ ಕರೆ ಮಾಡಿದಾಗ ಸಿಎಂ ಮಾಡಬೇಕು ಎಂದು ಬೇಡಿಕೆಯಿಟ್ಟ ಯುವ ನಾಯಕ
ಸಿಎಂ ಸ್ಥಾನ ನೀಡಲು ಕನಿಷ್ಠ 6 ತಿಂಗಳ ಕಾಲಾವಕಾಶ ಕೇಳಿದ ಹೈಕಮಾಂಡ್; ತಕ್ಷಣವೇ ಆಗಬೇಕೆಂದು ಪಟ್ಟು ಹಿಡಿದ ಪೈಲಟ್
ಸೋನಿಯಾ, ರಾಹುಲ್ ಕರೆಗೂ ಸರಿಯಾಗಿ ಸ್ಪಂದಿಸದ ಪೈಲಟ್; ವಜಾಕ್ಕೆ ಸೂಚನೆ

ಕಾದು ನೋಡಲು ಬಿಜೆಪಿ ನಿರ್ಧಾರ
ಪೈಲಟ್ ಮತ್ತು ಬೆಂಬಲಿಗರಿಗೆ ಕಾಂಗ್ರೆಸ್ ಕೊಕ್ ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಮಂಗಳವಾರ ತುರ್ತುಸಭೆ ಸೇರಿದ್ದಾರೆ. ಜೈಪುರದಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ವಿ.ಸತೀಶ್, ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಪ್ರತಿಪಕ್ಷ ಮುಖಂಡ ಗುಲಾಬ್ ಚಾಂದ್ ಕಟಾರಿಯಾ, ಪ್ರತಿಪಕ್ಷ ಉಪನಾಯಕ ರಾಜೇಂದ್ರ ರಾಥೋಡ್ ಪಾಲ್ಗೊಂಡಿದ್ದರು. ಕಾಂಗ್ರೆಸ್‌ನಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮುಂದಿನ ಕಾರ್ಯತಂತ್ರದ ಬಗ್ಗೆ ನಾಯಕರು ಚರ್ಚಿಸಿದ್ದಾರೆ. ‘‘ಸದ್ಯಕ್ಕೆ ನಾವಾಗಿ ವಿಶ್ವಾಸಮತ ಯಾಚನೆಗೆ ಆಗ್ರಹಿಸುವುದು ಬೇಡ. ಏನಾಗುತ್ತದೆಯೋ ಕಾದು ನೋಡಿ ಮುಂದಿನ ನಡೆ ಬಗ್ಗೆ ತೀರ್ಮಾನಿಸೋಣ,’’ ಎಂಬ ನಿರ್ಣಯ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ಏನಾಗಬಹುದು?
ಸಾಧ್ಯತೆ 1: ಪೈಲಟ್ ಬಣ ವಿಶ್ವಾಸಮತದ ವಿರುದ್ಧ ಮತ ಹಾಕಿದರೆ, 123-28 = 95. ಅಶೋಕ್ ಗೆಹ್ಲೋಟ್ ಸರಕಾರ ಪತನವಾಗುತ್ತದೆ
ಸಾಧ್ಯತೆ 2: ಪೈಲಟ್ ಬಣದ ಶಾಸಕರನ್ನು ಅನರ್ಹಗೊಳಿಸಿದರೆ ಸದನದ ಸಂಖ್ಯಾಬಲವೇ 172ಕ್ಕೆ ಕುಸಿಯುತ್ತದೆ. ಆಗ ಬಹುಮತ ಸಂಖ್ಯೆ 87 ಆಗುವುದರಿಂದ ಗೆಹ್ಲೋಟ್ ಸರಕಾರ ಉಳಿಯುತ್ತದೆ.

ಸತ್ಯಕ್ಕೆ ಭಂಗ ತರಬಹುದು, ಅದನ್ನು ಕದಡಬಹುದು ಆದರೆ ಎಂದಿಗೂ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ
– ಸಚಿನ್ ಪೈಲಟ್ (ವಜಾಗೊಳಿಸಿದ ಬಳಿಕ ಟ್ವೀಟ್)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top