ಉತ್ತರ ಭಾರತದ ನಾನಾ ಮೆಟ್ರೋ ನಗರಗಳಿಂದ ಹಳ್ಳಿಗಳ ಕಡೆಗೆ ದೊಡ್ಡ ಪ್ರಮಾಣದ ಮರು ವಲಸೆ ಆರಂಭವಾಗಿದೆ. ದಿನದ ಕೂಳು ಸಂಪಾದಿಸಲೆಂದು ನಗರಗಳಿಗೆ ಬಂದು ಕೂಲಿ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವರು, ನಾನಾ ಬಗೆಯಲ್ಲಿ ದಿನದ ಸಂಪಾದನೆಯನ್ನೇ ನೆಚ್ಚಿಕೊಂಡು ಇದ್ದವರು ಈಗ ಲಾಕ್‌ಡೌನ್ ಪರಿಣಾಮ ಸಂಪಾದನೆಗೆ ದಾರಿ ಕಾಣದೆ, ತಮ್ಮ ಹಳ್ಳಿಗಳ ದಾರಿ ಹಿಡಿದಿದ್ದಾರೆ. ರೈಲ್ವೆ ಸೇರಿದಂತೆ ಸಾರಿಗೆ ಸಂಪರ್ಕಗಳನ್ನು ರದ್ದುಪಡಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಇಂಥದೊಂದು ಅಡ್ಡ ಪರಿಣಾಮವನ್ನು ಊಹಿಸಿರದ ಸರಕಾರ ಥಟ್ಟನೆ ಎಚ್ಚೆತ್ತುಕೊಂಡು ರಾಜ್ಯ- ರಾಜ್ಯಗಳ ನಡುವಿನ ಗಡಿಯನ್ನು ಕೂಡ ಮುಚ್ಚುವುದಕ್ಕೆ ಮುಂದಾಗಿದೆ. ಇದು ಕೂಡ ಮತ್ತೊಂದು ವಿವೇಚನೆಯಿಲ್ಲದ ಕ್ರಮ. ಇರಲೊಂದು ಸರಿಯಾದ ಸೂರಿಲ್ಲದ, ಬಾಡಿಗೆ ನೀಡಲು ಆದಾಯವಿಲ್ಲದ, ತುತ್ತಿಗೆ ಕೂಡ ಗತಿಯಿಲ್ಲದ ಇಂಥ ಲಕ್ಷಾಂತರ ಮಂದಿಯ ಸ್ಥಿತಿಗತಿ ಏನಾದೀತು ಎಂಬುದನ್ನು ಲಾಕ್‌ಡೌನ್ ಘೋಷಿಸುವ ಮುನ್ನವೇ ಸರಕಾರ ಮುಂದಾಲೋಚಿಸಬೇಕಿತ್ತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಿಯಾದ ಒಂದು ಕ್ರಿಯಾಯೋಜನೆ ಇಲ್ಲದ ಪರಿಣಾಮ ಇವೆಲ್ಲ ನಡೆಯುತ್ತಿದೆ. ಬಂದ್ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂಬ ಸರಿಯಾದ ಮಾರ್ಗಸೂಚಿ ಪೊಲೀಸರಿಗೂ ಇರಲಿಲ್ಲ. ಆದ್ದರಿಂದ ಅವರೂ ಒರಟುತನದಿಂದ ನಡೆದುಕೊಂಡರು. ನಂತರ ಪೊಲೀಸರಿಗೆ ವಿನಯದ ಪಾಠ ಮಾಡಲಾಯಿತು. ಜನತೆ ಅಗತ್ಯ ವಸ್ತುಗಳು ನಾಳೆಯಿಂದ ಸಿಗಲಾರವು ಎಂದು ಗಾಬರಿಬಿದ್ದು ಅಂಗಡಿಗಳನ್ನು ಲೂಟಿ ಮಾಡುವವರಂತೆ ಖರೀದಿ ಮಾಡಿದರು. ಆಗ ಅಗತ್ಯ ವಸ್ತುಗಳಿಗೆ ಕೊರತೆಯಿಲ್ಲ ಎಂಬ ಸ್ಪಷ್ಟನೆ ನೀಡಲಾಯಿತು. ಆದಾಯ ಖಾತರಿಯಿಲ್ಲದ ಬಾಡಿಗೆದಾರರನ್ನು ಕೆಲವೆಡೆ ಮನೆ ಬಿಡಿಸಲು ಮುಂದಾದಾಗ, ಹಾಗೆ ಮಾಡುವಂತಿಲ್ಲ ಎಂಬ ನಿರ್ದೇಶನ ನೀಡಲಾಯಿತು. ಲಕ್ಷಾಂತರ ಸಂಖ್ಯೆಯಲ್ಲಿರುವ ದಿನಗೂಲಿ ಕಾರ್ಮಿಕರ ಬಗ್ಗೆ ಯಾವ ಯೋಚನೆಯನ್ನೂ ಲಾಕ್‌ಡೌನ್ ಸಂದರ್ಭದಲ್ಲಿ ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಸಮಸ್ಯೆ ಉಲ್ಬಣಿಸಿದಾಗಲಷ್ಟೇ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದೆ. ಇದು ದೂರದೃಷ್ಟಿಯ ಕೊರತೆ, ಪೂರ್ವಯೋಜನೆಯ ವೈಫಲ್ಯ. ಏಕಾಏಕಿ ಲಾಕ್‌ಡೌನ್ ಘೋಷಿಸುವ ಮುನ್ನ, ತಜ್ಞರ ಜೊತೆ ಚರ್ಚಿಸಿ ಸಮಗ್ರವಾದ ಮಾರ್ಗಸೂಚಿ ಸಿದ್ಧಪಡಿಸುವ ಅಗತ್ಯವಿತ್ತು.
ಇದು ಸರಕಾರದ ವೈಫಲ್ಯವಾಗಿದ್ದರೆ, ಅನಗತ್ಯ ಆತಂಕಕ್ಕೊಳಗಾಗುವ ಜನತೆಯ ಪಾಲೂ ಈ ಬಿಕ್ಕಟ್ಟಿನಲ್ಲಿದೆ. ಹಳ್ಳಿಗಳಲ್ಲಿ ಸಂಪಾದನೆಯ ದಾರಿ ಇಲ್ಲವೆಂದು ನಗರಗಳಿಗೆ ಹೋಗಿದ್ದವರು, ಈಗ ಏನೇ ಬರಲಿ ಹಳ್ಳಿಯಲ್ಲೇ ಇರೋಣ ಎಂದು ನಿರ್ಧರಿಸಿದ್ದು ವಿಸ್ಮಯಕಾರಿ. ಇಡೀ ದೇಶವೇ ಬಂದ್ ಆಗಿರುವುದರಿಂದ ಹಳ್ಳಿಗಳಲ್ಲೂ ದುಡಿಮೆಯ ಸಾಧ್ಯತೆ ಈಗ ಇಲ್ಲ. ಆದರೆ ಇಂಥ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಬಂಧುಗಳ ಜೊತೆಗೆ ಇರಬೇಕು ಎಂದು ಜನತೆ ಬಯಸುವುದು ಸಹಜ. ಆದರೆ ಇದೇ ವಲಸೆಯೇ ಮುಂದೆ ಹಳ್ಳಿಗಳಿಗೆ ಕೊರೊನಾ ಸೋಂಕು ಹಬ್ಬಲು ಕಾರಣವಾದೀತು ಎಂಬ ಜ್ಞಾನವಾಗಲೀ, ಮುನ್ನೆಚ್ಚರಿಕೆಯಾಗಲೀ ಇವರಲ್ಲಿ ಕಾಣೆಯಾಗಿದೆ. ಇಂಥ ಸನ್ನಿವೇಶಕ್ಕೆ ಇವರನ್ನು ದೂರುವುದೋ, ಇವರನ್ನು ಅಜ್ಞಾನದ ಕತ್ತಲಿನಲ್ಲಿ ಇಟ್ಟ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ದೂರುವುದೋ ತಿಳಿಯದು. ಈಗ ಬಂದಿರುವ ಸಂಕಷ್ಟ ಒಬ್ಬಿಬ್ಬರಿಗಲ್ಲ, ಇಡೀ ದೇಶಕ್ಕೆ. ಹೀಗಾಗಿ ಹಬ್ಬದೂಟವನ್ನು ಹಂಚಿಕೊಂಡಂತೆ ಹಸಿವನ್ನೂ ನಾವು ಹಂಚಿಕೊಳ್ಳಬೇಕು, ಅದು ಭಾರತೀಯ ಮನಸ್ಸಿನಲ್ಲಿ ಸ್ಥಾಯಿಯಾಗಿಯೇ ಇದೆ. ನಗರಗಳಲ್ಲಿ ಅನೇಕ ಕೊಡುಗೈ ದಾನಿಗಳು, ಸಂಸ್ಥೆಗಳು ಇಂಥವರ ದಿನದ ತುತ್ತಿಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಕೂಲಿ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಸದ್ಯಕ್ಕೆ ತಾವಿದ್ದಲ್ಲೇ ಇದ್ದು, ದುರ್ಭರ ದಿನಗಳು ಸದ್ಯದಲ್ಲೇ ಕಣ್ಮರೆಯಾಗಬಹುದು ಎಂದು ಆಶಿಸುವುದು ಅವರ ಮುಂದಿರುವ ಆಯ್ಕೆ. ಮಾನವೀಯ ನೆಲೆಯಲ್ಲಿಇವರನ್ನು ಕಂಡು ಈ ಬಿಕ್ಕಟ್ಟನ್ನು ನಿರ್ವಹಿಸುವುದು ಎಲ್ಲಸರಕಾರಿ, ಹಾಗೂ ಇದುವರೆಗೆ ಇವರ ಪ್ರಯೋಜನ ಪಡೆದುಕೊಂಡ ಎಲ್ಲದೊಡ್ಡ ಸಂಸ್ಥೆಗಳ ಹೊಣೆ.