ಪಕ್ಷಗಳನ್ನು ಕಾಡುವ ಕಾಯಿಲೆಗೆ ಪರಿಹಾರ ಏನು ಎಂದರೆ…

ಈಗ ಬೇಕಿರುವುದು ಜಾತಿ, ಮತ, ಪಂಥವನ್ನು ಮೀರಿದ ಸ್ಮಾರ್ಟ್ ನಾಯಕತ್ವ ಮತ್ತು ‘ರೋಟಿ, ಕಪಡಾ ಔರ್ ಮಕಾನ್’ ಘೊಷಣೆಯನ್ನು ಯಥಾರ್ಥದಲ್ಲಿ ಜಾರಿಗೊಳಿಸುವ ಸಮಗ್ರ ವಿಕಾಸದ ರಾಜಕೀಯ ಸಿದ್ಧಾಂತ. ಸೆಕ್ಯುಲರ್ ಅಥವಾ ಕಮ್ಯೂನಲ್ವಾದದ ಚರ್ಚೆಗೆ ಈಗ ಎಲ್ಲಿಯ ಜಾಗ…

commenatary-11m17 ಕೆಲವೊಮ್ಮೆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿಬಿಡುತ್ತವೆ! ಈಗ ಸುಮಾರು ಹತ್ತು ಹನ್ನೆರಡು ದಿನಗಳ ಹಿಂದಿನ ಮಾತು. ಮಹಾರಾಷ್ಟ್ರದ ಹತ್ತು ಪಾಲಿಕೆಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬರಲು ಕ್ಷಣಗಣನೆ ಶುರುವಾಗಿತ್ತು. ಆ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮದವರೊಂದಿಗೆ ಮಾತನಾಡುತ್ತ, ‘ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಅಧಿಕಾರದ ಮದ ತಲೆಗೇರಿದೆ. ಮಹಾರಾಷ್ಟ್ರ ಅಂದ್ರೆ ಏನು, ಎಲ್ಲಿದೆ, ಮುಂಬೈ ಹೇಗಿದೆ ಎಂಬುದೇ ಗೊತ್ತಿಲ್ಲದ ವ್ಯಕ್ತಿ ಭ್ರಮೆಯನ್ನು ನೆತ್ತಿಗೇರಿಸಿಕೊಂಡಿದ್ದಾರೆ. ನೋಡುತ್ತಿರಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಏರಿದ ಮದ ಇಳಿಯುವ ಸಮಯ ಬಂದಿದೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ’ ಎಂದಿದ್ದರು. ಅವರು ಹಾಗೆ ಹೇಳಿದ ಮಾರನೇ ದಿನವೇ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಪವಾರ್ ನಿರೀಕ್ಷೆ ತಲೆಕೆಳಗಾಗಿತ್ತು. ಅವರು ಮತ್ತೆ ಆ ಬಗ್ಗೆ ಮಾತನಾಡಿದ್ದು ಗೊತ್ತಾಗಲಿಲ್ಲ.

ಚುನಾವಣೆ ನಡೆದ ಹತ್ತು ಪಾಲಿಕೆಗಳ ಪೈಕಿ ಎಂಟರಲ್ಲಿ ಬಿಜೆಪಿ ಏಕಾಂಗಿಯಾಗಿ ಗೆಲುವು ಪಡೆದಿತ್ತು. ಆ ಪಕ್ಷದ ಪಾಲಿಗೆ ಅದು ಐತಿಹಾಸಿಕ ಗೆಲುವು. ಮುಖ್ಯವಾಗಿ ಇಲ್ಲಿ ಹೇಳಬೇಕಾದ ವಿಷಯ ಎಂದರೆ ಇಪ್ಪತ್ತು ವರ್ಷಗಳ ಬಳಿಕ ಶಿವಸೇನೆ ಬಿಜೆಪಿ ಸ್ನೇಹವನ್ನು ತೊರೆದಿದ್ದರಿಂದ ಪಾಲಿಕೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸವಾಲನ್ನು ಫಡ್ನವೀಸ್ ತೆಗೆದುಕೊಂಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವೆರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿಗೆ ಭಾರಿ ನಷ್ಟ ಉಂಟಾಗುತ್ತದೆ ಎಂಬ ಲೆಕ್ಕಾಚಾರವನ್ನು ರಾಜಕೀಯ ಪಂಡಿತರು ಮುಂದಿಟ್ಟಿದ್ದರು. ಅದನ್ನೇ ನಂಬಿದ ಅನುಭವಿ ರಾಜಕಾರಣಿ ಶರದ್ ಪವಾರ್ ಫಡ್ನವೀಸ್ ವಿಷಯದಲ್ಲಿ ಭವಿಷ್ಯ ಹೇಳಿದ್ದರು.

ನಿಜ, ಒಂದು ಕಾಲಕ್ಕೆ ಮಹಾರಾಷ್ಟ್ರದಲ್ಲಿ ಪವಾರ್ ಹೇಳಿದಂತೆಯೇ ನಡೆಯುತ್ತಿತ್ತು. ಆದರೆ ಆ ಕಾಲ ಬದಲಾಗಿರುವುದನ್ನು ಗುರುತಿಸುವಲ್ಲಿ ಪವಾರ್ ಎಡವಿದ್ದರು. ಸ್ವಂತ ರಾಜಕೀಯ ಶಕ್ತಿ ಕಡಿಮೆ ಆಗುತ್ತಿದ್ದಂತೆ ರಾಜಕೀಯ ತಂತ್ರಗಾರಿಕೆ ನಿಪುಣರನ್ನು, ವಿಶ್ಲೇಷಕರ ವಾದಗಳನ್ನೇ ನಂಬುವ ಅನಿವಾರ್ಯತೆಗೆ ಜಾರಿದರು. ವೇಗವಾಗಿ ಬದಲಾಗುತ್ತಿರುವ ಜಾಣ ಮತದಾರರು ಮುಖ್ಯಮಂತ್ರಿ ಫಢ್ನವೀಸ್ರಲ್ಲಿ ಮಹಾರಾಷ್ಟ್ರದ ಭವಿಷ್ಯವನ್ನು ಹುಡುಕುತ್ತಿದ್ದ್ದು ಎಂದು ಕಾಣುತ್ತದೆ. ಅಹಂಕಾರದಿಂದ ಮೆರೆಯುತ್ತಿದ್ದ ಶಿವಸೇನೆ, ಎನ್ಸಿಪಿ ಮುಖ್ಯಸ್ಥರಿಗಿಂತ, ರಾಜಕೀಯ ವಿಶ್ಲೇಷಣೆ ಮಾಡುವ, ತೀರ್ಪು ನೀಡುವ ರಾಜಕೀಯ ಪಂಡಿತರಿಗಿಂತ ತಾವು ಹೆಚ್ಚು ವಿವೇಚನಾಶೀಲರು ಎಂಬುದನ್ನು ಜನರು ನಿರೂಪಿಸಿದ್ದರು. ಇದು ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆ ಎನ್ನಲೇಬೇಕು.

ಅದಕ್ಕಿಂತ ಮುಖ್ಯವಾದದ್ದು ಮತ್ತು ಎಲ್ಲರೂ ಗಮನಿಸಬೇಕಾದದ್ದು ಪಾಲಿಕೆ ಚುನಾವಣೆಯ ನಂತರ ಮುಖ್ಯಮಂತ್ರಿ ಫಡ್ನವೀಸ್ ನಡೆದುಕೊಂಡ ರೀತಿ, ತೆಗೆದುಕೊಂಡ ನಿರ್ಧಾರಗಳನ್ನು. ಎಂಟು ಪಾಲಿಕೆಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ ಮುಂಬೈ ಪಾಲಿಕೆಯಲ್ಲಿ ಕೂದಲೆಳೆ ಅಂತರದಲ್ಲಿ ಬಿಜೆಪಿ ಅಧಿಕಾರ ವಂಚಿತವಾಯಿತು. ಚುನಾವಣೆಪೂರ್ವದಲ್ಲಿ ಬಿಜೆಪಿ ಜೊತೆ ಶರಂಪರ ಜಗಳ ತೆಗೆದು ಏಕಾಂಗಿಯಾಗಿ ಸ್ಪರ್ಧಿಸಿದ್ದ ಶಿವಸೇನೆ ಹಿಂದಿನ ಸಲಕ್ಕಿಂತ 9 ಸ್ಥಾನಗಳನ್ನು ಕಳೆದುಕೊಂಡು 84 ಸ್ಥಾನಗಳಿಗೆ ಕುಸಿದಿತ್ತು. ಅದೇ ಬಿಜೆಪಿ ಈ ಹಿಂದೆ ಶಿವಸೇನೆ ದೋಸ್ತಿ ಮಾಡಿಕೊಂಡು ಗೆದ್ದ 31 ಸ್ಥಾನಗಳ ಬದಲು ಈ ಬಾರಿ ಏಕಾಂಗಿಯಾಗಿ 82 ಸ್ಥಾನಗಳಿಗೆ ಜಿಗಿದಿತ್ತು. ಶಿವಸೇನೆಗಿಂತ ಎರಡು ಸ್ಥಾನಗಳು ಮಾತ್ರ ಕಡಿಮೆ. ಥಾಣೆ ಪಾಲಿಕೆ ಹೊರತುಪಡಿಸಿದರೆ ಈ ಬಾರಿ ಶಿವಸೇನೆಗೆ ಬೇರೆಲ್ಲೂ ಅಧಿಕಾರ ಗಳಿಸಲು ಸಾಧ್ಯವಾಗಿಲ್ಲ್ಲ ಕಳೆದ ಸಲಕ್ಕೆ ಹೋಲಿಸಿದರೆ ಹಲವೆಡೆಗಳಲ್ಲಿ ಅರ್ಧಕ್ಕರ್ಧ ಸ್ಥಾನಗಳನ್ನು, ಕೆಲವೆಡೆ ಮುಕ್ಕಾಲು ಪಾಲು ಸ್ಥಾನಗಳನ್ನು ಕಳೆದುಕೊಂಡಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಶಿವಸೇನೆ ಮುಂಬೈ ಪಾಲಿಕೆ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆಗೆ ಅಧಿಕಾರ ಹಂಚಿಕೆ ಮಾತುಕತೆಗೆ ಮುಂದಾಯಿತು. ಇದನ್ನೆಲ್ಲ ಗಮನಿಸುತ್ತಿದ್ದ ಫಡ್ನವೀಸ್ ಮೇಯರ್ ಚುನಾವಣೆಗೆ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದು ಘೊಷಿಸಿ ಶಿವಸೇನೆಗೆ ಮೇಯರ್ ಪಟ್ಟ ಅನಾಯಾಸವಾಗಿ ದಕ್ಕುವಂತೆ ಮಾಡಿದರು. ಆ ಮೂಲಕ ಸದಾ ಕಾಲ ಬಿಜೆಪಿ ವಿರುದ್ಧ ಕತ್ತಿ ಮಸೆಯುವ, ಮನಬಂದಂತೆ ಮಾತನಾಡುವ ಶಿವಸೇನೆ ನಾಯಕರ ಕೈ ಮತ್ತು ಬಾಯನ್ನು ಕಟ್ಟಿ ಹಾಕಿದರು. ನಿಜಾರ್ಥದಲ್ಲಿ ಮುಂಬೈ ಪಾಲಿಕೆಯನ್ನು ಫಡ್ನವೀಸ್ ಸೋತು-ಗೆದ್ದುಕೊಂಡರು! ಇದಕ್ಕೆ ಅವರ ರಾಜಕೀಯ ಪ್ರಬುದ್ಧತೆಯ ಹೊರತು ಬೇರೆ ಕಾರಣ ಕಾಣುತ್ತಿಲ್ಲ.

ಮಹಾರಾಷ್ಟ್ರದಲ್ಲಿ ಹಾಗೇ ಮುಂಬೈನಲ್ಲಿ ಶಿವಸೇನೆಗೆ ಒಂದು ಇತಿಹಾಸವಿದೆ. ಈಗಲೂ ಮರಾಠಿಗರು ಶಿವಸೇನೆಯ ಕಡೆ ಒಂದು ಕಕ್ಕುಲಾತಿ, ಒಲವನ್ನು ಹೊಂದಿರುವುದಕ್ಕೆ ಹಿಂದಿನ ನಾಯಕತ್ವ ಕಾರಣವೇ ಹೊರತು ಈಗಿನದಲ್ಲ. ಮುಂಬೈ ಮತ್ತು ಮಹಾರಾಷ್ಟ್ರ ಭೂಗತ ಪಾತಕಿಗಳ ಕೈಗೆ ಹೋದಾಗ, ಪಾಕಿಸ್ತಾನದ ಹಸ್ತಕರ ಕೈಗೆ ಜಾರುವ ಅಪಾಯದಲ್ಲಿದ್ದಾಗ ‘ಮರಾಠಿ ಮಾನುಸ್’ ಹೆಸರಲ್ಲಿ ಮಹಾರಾಷ್ಟ್ರಿಗರಲ್ಲಿ ಸ್ವಾಭಿಮಾನ ಜಾಗೃತಿ ಮೂಡಿಸಿದ್ದು ಬಾಳಾಸಾಹೇಬ್ ಠಾಕ್ರೆ. ಹಿಂದು ರಾಷ್ಟ್ರೀಯತೆ ಹೆಸರಿನಲ್ಲಿ ಮರಾಠಿಗರನ್ನು ಒಂದುಗೂಡಿಸಿ ಶಕ್ತಿಪ್ರದರ್ಶನ ಮಾಡಿದರು. ಉದ್ಧವ್ ಠಾಕ್ರೆ ಆ ಅಂಶವನ್ನು ಮರೆತಂತಿದೆ. ಆದರೆ ಫಡ್ನವೀಸ್ ಇತಿಹಾಸವನ್ನು ಮರೆಯಲಿಲ್ಲ. ಭವಿಷ್ಯವನ್ನು ಅಲಕ್ಷಿಸಲಿಲ್ಲ. ಪರಿಣಾಮವಾಗಿ ತಾತ್ಕಾಲಿಕ ಸೋಲನ್ನು ಗೌರವಪೂರ್ವಕವಾಗಿ ಒಪ್ಪಿಕೊಳ್ಳಲು ಮನಸ್ಸು ಮಾಡಿದ್ದಿರಬಹುದು. ಅಧಿಕಾರ, ರಾಜಕೀಯದಲ್ಲಿರುವವರಿಗೆ ಇಂಥ ಜಾಣ್ಮೆ, ಪ್ರಬುದ್ಧತೆ, ಪ್ರಜ್ಞಾವಂತಿಕೆ ಇದ್ದರೇನೆ ಚೆನ್ನ.

ಎರಡನೇ ತಲೆಮಾರಿನ ನಾಯಕರು ಬೇಕು: ಇದು ಕಾಂಗ್ರೆಸ್ ಪಕ್ಷದ ಸಮಸ್ಯೆ ಮಾತ್ರ ಎಂದು ಭಾವಿಸಬೇಕಿಲ್ಲ. ಮುಂದೆ ಇದು ಬಹುವಾಗಿ ಕಾಡಿದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಬಿಜೆಪಿ ಸೇರಿ ಇತರ ಎಲ್ಲ ಪಕ್ಷಗಳಲ್ಲೂ ಈ ಸಮಸ್ಯೆ ಇದ್ದೇ ಇದೆ.

ತುಸು ಹಿಂದಕ್ಕೆ ಹೋಗಿ ನೋಡುವ. 2014ರ ಲೋಕಸಭಾ ಚುನಾವಣೆ ಫಲಿತಾಂಶ ಬೆನ್ನಲ್ಲೇ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಿತು. ಮೋದಿ ಮೇನಿಯಾದಲ್ಲೇ ತೇಲುತ್ತಿದ್ದ ಬಿಜೆಪಿ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುರುತಿಸದಾದಷ್ಟು ಕುರುಡಾಯಿತು. ದೆಹಲಿಯ ಮತದಾರರು ಬಿಜೆಪಿ ನಾಯಕರ ಕಣ್ತೆರೆಸಿದರು. ಗೆದ್ದ ಕೇಜ್ರಿವಾಲ್ ಜನತೆ ಇಟ್ಟ ಭರವಸೆಯನ್ನು ಉಳಿಸಿಕೊಳ್ಳುವ ಸೂಚನೆ ಕಾಣಿಸುತ್ತಿಲ್ಲವೆಂಬುದು ಬೇರೆ ವಿಚಾರ. ದೆಹಲಿ ಮಾತ್ರವಲ್ಲ, ಹರಿಯಾಣ ಹೊರತುಪಡಿಸಿದರೆ ಬೇರೆಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೇಳಿಕೊಳ್ಳುವ ಸಾಧನೆ ಮಾಡಲಾಗಲಿಲ್ಲ. ಮೋದಿ ಇಲ್ಲದ ಗುಜರಾತಲ್ಲೇ ಬಿಜೆಪಿ ಇಳಿಜಾರಲ್ಲಿ ಹೊರಟಿದೆ ಎಂದರೆ ಬೇರೆ ಹೆಚ್ಚು ಹೇಳುವ ಅಗತ್ಯವಿಲ್ಲ ಎಂದು ತೋರುತ್ತದೆ. ಮೋದಿಯಿರಲಿ ಅಥವಾ ಬೇರೆಯವರಿರಲಿ, ದೇಶವನ್ನಾಳುವ ನಾಯಕರ ಆಲೋಚನೆಯನ್ನು ಕಾರ್ಯಗತ ಮಾಡಬಲ್ಲ ಸ್ಥಳೀಯ ನಾಯಕರನ್ನು ಜನತೆ ಹುಡುಕುತ್ತಿರುತ್ತಾರೆ ಎಂಬುದನ್ನು ಇದು ಧ್ವನಿಸುತ್ತದೆಯಲ್ಲವೆ? ಇಂಥ ಹೊಸ ತಲೆಮಾರಿನ ಸ್ಮಾರ್ಟ್ ನಾಯಕತ್ವವನ್ನು ಫಡ್ನವೀಸ್ ಅವರಲ್ಲಿ ಮಹಾರಾಷ್ಟ್ರದ ಜನರು ಕಂಡಿದ್ದಿರಬಹುದು.

ರ್ತಾಕ ಭಿನ್ನತೆ ಇರಲಿ, ರಾಜಕೀಯ ಅಸ್ಪೃಶ್ಯತೆ ತೊಲಗಲಿ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿ ಸೇರುತ್ತಾರೆ ಎಂಬುದು ಸದ್ಯ ಚರ್ಚೆಯ ವಿಷಯ. ಅವರಲ್ಲದೆ ಇತರ ಹಲವು ನಾಯಕರನ್ನೂ ಏಕಕಾಲಕ್ಕೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೇ ಎಂಬುದು ಬಿಜೆಪಿ ನಾಯಕರು ತೀರ್ವನಿಸಬೇಕಾದ ವಿಚಾರ. ಎಲ್ಟಿಟಿಇ ತಮಿಳು ಉಗ್ರಗಾಮಿ ಸಂಘಟನೆ ವಿಷಯದಲ್ಲಿ ಸಹಾನುಭೂತಿ ಹೊಂದಿರುವ ಡಿಎಂಕೆ, ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಮಾತನಾಡುವ ಎಂಐಎಂ, ಮುಸ್ಲಿಂ ಲೀಗ್ ಆದಿಯಾಗಿ ಗೊತ್ತುಗುರಿ ಇಲ್ಲದ, ರಾಷ್ಟ್ರೀಯ ಏಕತೆಯನ್ನೇ ಪ್ರಶ್ನಿಸುವ ಪಕ್ಷಗಳೊಂದಿಗೂ ಹೊಂದಾಣಿಕೆ, ಅಧಿಕಾರ ಹಂಚಿಕೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷ ಯಾವ ಕಾರಣಕ್ಕಾಗಿ ಬಿಜೆಪಿಯನ್ನು ಅಸ್ಪೃಶ್ಯ ಧೋರಣೆಯಿಂದ ನೋಡುತ್ತದೆಯೋ ಗೊತ್ತಿಲ್ಲ. ಅಷ್ಟಕ್ಕೂ ಕಾಂಗ್ರೆಸ್ಸನ್ನು ಹೊರತುಪಡಿಸಿ ಬೇರೆಲ್ಲ ಪಕ್ಷಗಳ ಅನೇಕ ನಾಯಕರು ಒಂದಿಲ್ಲೊಂದು ಬಾರಿ ಬಿಜೆಪಿ ಸಖ್ಯವನ್ನು ಹೊಂದಿದ್ದಾರೆ. ಅಥವಾ ಮುಂದೆ ಸಖ್ಯ ಹೊಂದಲು ಮುಕ್ತ ಆಯ್ಕೆ ಇಟ್ಟುಕೊಂಡಿದ್ದಾರೆ. ಈಗ ಕಾಂಗ್ರೆಸ್ನಲ್ಲಿಯೂ ಅಂಥ ವಾತಾವರಣ ಕಂಡುಬಂದಿದೆ. ಈ ಮಾತನ್ನು ಏಕೆ ಹೇಳಬೇಕಾಗಿದೆಯೆಂದರೆ ರಾಜ್ಯ ಮತ್ತು ರಾಷ್ಟ್ರಹಿತ ಹಾಗೂ ಜಾತಿ, ಮತ, ಪಂಥವನ್ನು ಮೀರಿದ ಜನಹಿತವೇ ಪಕ್ಷಗಳ ಅಜೆಂಡಾ ಆದರೆ, ಫಡ್ನವೀಸ್ ಅವರಂತಹ ವಿದ್ಯಾವಂತ, ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಡುವ ನಾಯಕತ್ವ ಎಲ್ಲ ಪಕ್ಷಗಳಲ್ಲೂ ಜಾಗ ಪಡೆದರೆ ಪಕ್ಷಗಳ ನಡುವಿನ ರಾಜಕೀಯ ಅಸ್ಪ್ರಶ್ಯತೆಗೆ, ಆರೋಪಗಳ ಕೆಸರೆರಚಾಟಕ್ಕೆ ಎಲ್ಲಿರುತ್ತದೆ ಅವಕಾಶ? ನಿಜವಾದ ರಾಜಕೀಯ ಪರಿವರ್ತನೆ ಅಂದರೂ ಇದೇನೆ.

ಸೆಕ್ಯುಲರಿಸಂ/ಕೋಮುವಾದದ ಹಳಹಳಿಕೆಗೆ ಅರ್ಥವುಂಟೇ?: ಈ ಪ್ರಶ್ನೆ ಬಿಜೆಪಿಯ ಹಿಂದುತ್ವ ಅಜೆಂಡಾ, ಕೇಸರೀಕರಣ, ಕೋಮುವಾದದ ಚರ್ಚೆಗೆ ಆಲೋಚನೆಯನ್ನು ಕೊಂಡೊಯ್ಯುತ್ತದೆ. ತೊಂಭತ್ತರ ದಶಕದಲ್ಲಿ ಅಯೋಧ್ಯಾ ಆಂದೋಲನ ಶುರುವಾದಾಗ ಪ್ರಚಲಿತಕ್ಕೆ ಬಂದ ಪದವೇ ಈ ಸೆಕ್ಯುಲರಿಸಂ. ರಾಜಕೀಯವಾಗಿ ಅತಿಯಾಗಿ ಬಳಸಿ ಸವಕಳಿಯಾದ ಪದವೂ ಹೌದು. ಆದರೆ ಈ ಹಳಹಳಿಕೆ ಸೆಕ್ಯುಲರ್ ಪಕ್ಷಗಳು ವರ್ಷದಿಂದ ವರ್ಷಕ್ಕೆ ದುರ್ಬಲ ಆಗುವುದನ್ನು, ಕೋಮುವಾದಿ ಪಕ್ಷವೆಂದು ಕರೆಸಿಕೊಂಡ ಬಿಜೆಪಿಯ ಬೆಳವಣಿಗೆಯನ್ನು ತಡೆಯಲಾಗಲಿಲ್ಲ. ಅಂದಮೇಲೆ ಸೆಕ್ಯುಲರ್ವಾದವನ್ನು ಈ ದೇಶದ ಜನರು ತಿರಸ್ಕರಿಸಿದ್ದಾರೆ ಅಂತಲೇ ಅಲ್ಲವೇ?

ಈಗ ಬೇಕಿರುವುದೇನು?: ಎಡ-ಬಲಗಳನ್ನು ಪ್ರತಿಪಾದಿಸುವ ಸಿದ್ಧಾಂತವಾದಿಗಳು ಈಗ ಬೇಕಿಲ್ಲ. ಆ ಕಾಲ ಬದಲಾಗಿ ಎಷ್ಟೋ ದಿನಗಳಾದವು. ಇನ್ನೂ ಸಿದ್ಧಾಂತಗಳ ಹಿನ್ನೆಲೆಗೆ ಜೋತುಬಿದ್ದರೆ ಅದು ಕೇವಲ ಲೊಳಲೊಟ್ಟೆಯಾಗುತ್ತದೆ. ಬೇಕಿರುವುದು ರಾಷ್ಟ್ರೀಯತೆ, ಪಾರದರ್ಶಕತೆ, ಸ್ಪರ್ಧಾತ್ಮಕತೆ, ಜನರು ಉತ್ತಮ ಬದುಕಿಗೆ ತೆರೆದುಕೊಳ್ಳಲು ಅವಕಾಶ ಕಲ್ಪಿಸುವ ದಕ್ಷ ವ್ಯವಸ್ಥೆ. ಅದನ್ನು ಹೀಗೂ ಹೇಳಬಹುದು- ‘ರೋಟಿ-ಕಪಡಾ-ಔರ್ ಮಕಾನ್’. ರೋಟಿ ಅಂದರೆ ಸಬಲೀಕರಣ. ಭೌತಿಕ ಅವಶ್ಯಕತೆಗಳ ಪೂರೈಕೆ. ಅನ್ನ, ನೀರು, ಆಹಾರ, ಮೂಲಸೌಕರ್ಯ ಇತ್ಯಾದಿ ಇತ್ಯಾದಿ. ಕಪಡಾ ಅಂದರೆ ಬಟ್ಟೆಬರೆ ಅಂತ ಮಾತ್ರವಲ್ಲ. ಹಾಗಂದರೆ ನಾಗರಿಕತೆ, ಸಂಸ್ಕೃತಿ, ಆಚಾರ, ವಿಚಾರಗಳ ಸಂರಕ್ಷಣೆ ಅಂತ ವ್ಯಾಖ್ಯಾನಿಸೋಣ. ಮಕಾನ್ ಅಂದರೆ ಪ್ರಾಥಮಿಕ ಅರ್ಥದಲ್ಲಿ ಸೂರು. ವಿಶಾಲ ಅರ್ಥದಲ್ಲಿ ಸುರಕ್ಷೆಯ ಭಾವ, ರಕ್ಷಣೆಯ ಹೊದಿಕೆ, ಆಹ್ಲಾದಕರ ಅನುಭವ ಅಂತಲೂ ಆಗುತ್ತದೆಯಲ್ಲವೇ? (ಭಯೋತ್ಪಾದಕರಿಂದ ರಕ್ಷಣೆ, ರಕ್ತಪಿಪಾಸುಗಳಿಂದ ರಕ್ಷಣೆ, ಜಾತಿ, ಜನಾಂಗಗಳ ಹೆಸರಲ್ಲಿ ಬಡಿದಾಡುವವರಿಂದ ರಕ್ಷಣೆ ಅಂತಲೂ ಆಗುತ್ತದೆ)

ಕಾಂಗ್ರೆಸ್ಸಾದರೇನು, ಬಿಜೆಪಿ ಆದರೇನು, ಮತ್ತೊಂದಾದರೇನು… ರಾಜಕೀಯ ಪಕ್ಷಗಳಿಂದ ಜನರು ಅಂತಿಮವಾಗಿ ನಿರೀಕ್ಷಿಸುವುದು ಇದನ್ನೇ ತಾನೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top