ಪುಟಾಣಿಗಳಿಗೆ ಬೇಡ ಆನ್‌ಲೈನ್‌ ಪಾಠ

6 ವರ್ಷದವರೆಗಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಸಮಯ ಸ್ಕ್ರೀನ್‌ ನೋಡಬಾರದು.
ಶಿಶುಗಳ ಮೇಲೆ ಆನ್‌ಲೈನ್‌ ಶಿಕ್ಷಣ ಪ್ರಯೋಗ ಬೇಡವೇ ಬೇಡ.
ಮಕ್ಕಳ ದೃಷ್ಟಿಗೆ ಭಾರಿ ತೊಂದರೆಯಾಗುವ ಅಪಾಯ.
ದೈಹಿಕ, ಮಾನಸಿಕವಾಗಿಯೂ ತೊಂದರೆ ಒಡ್ಡುವ ಡಿಜಿಟಲ್‌ ಸ್ಕ್ರೀನ್‌.
——
ಸರಕಾರವನ್ನು ಎಚ್ಚರಿಸಿದ ನಿಮ್ಹಾನ್ಸ್‌ ವರದಿ | ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಎಂದ ಸಂಸ್ಥೆ. 
ಜಯಂತ್‌ ಗಂಗವಾಡಿ ಬೆಂಗಳೂರು. 

‘ಯಾವುದೇ ಕಾರಣಕ್ಕೂ ಶಿಶುಗಳಿಗೆ ‘ಆನ್‌ಲೈನ್‌ ತರಗತಿ’ಗಳನ್ನು ನಡೆಸುವುದು ಬೇಡವೇ ಬೇಡ,’ ಎಂದು ನಿಮ್ಹಾನ್ಸ್‌ ಸರಕಾರಕ್ಕೆ ಸಲಹೆ ನೀಡಿದೆ.
ಲಾಕ್‌ಡೌನ್‌ ಹಂತದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಎಲ್ಲಾ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ಲೈನಲ್ಲಿ ಪಾಠ ಪ್ರವಚನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ನಿಮ್ಹಾನ್ಸ್‌ನ ಸಲಹೆ ಭಾರಿ ಮಹತ್ವ ಪಡೆದಿದೆ.
‘‘ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ 6 ವರ್ಷದ ಒಳಗಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಸಮಯ ಡಿಜಿಟಲ್‌ ‘ಸ್ಕ್ರೀನ್‌’ಗಳನ್ನು ನೋಡುತ್ತಾ ಕೂರಬಾರದು. ಇದು ಮಕ್ಕಳ ಕಣ್ಣುಗಳ ಮೇಲೆ ಪರಿಣಾಮ ಬೀರುವುದರ ಜತೆಗೆ, ಅವರ ದೈಹಿಕ ಮತ್ತು ಮಾನಸಿಕವಾಗಿಯೂ ತೊಂದರೆ ಒಡ್ಡುತ್ತದೆ. ಆದ್ದರಿಂದ 6 ವರ್ಷದವರೆಗಿನ ಮಕ್ಕಳನ್ನು ‘ಆನ್‌ಲೈನ್‌ ಅಥವಾ ಸ್ಕ್ರೀನ್‌ ಆಧಾರಿತ ಶಿಕ್ಷಣ ಅಥವಾ ತರಬೇತಿಯಿಂದ ಎಷ್ಟು ದೂರ ಇಡುತ್ತೇವೆಯೋ ಅಷ್ಟು ಒಳ್ಳೆಯದು,’’ ಎಂದು ಪ್ರತಿಪಾದಿಸಿದೆ.
‘‘ನಮ್ಮಲ್ಲಿ ಆನ್‌ಲೈನ್‌ ಶಿಕ್ಷಣ ನೀಡುವ ಪದ್ಧತಿ ಇತ್ತೀಚೆಗೆ ಚಾಲ್ತಿಗೆ ಬಂದಿದೆ. ಎಲ್‌ಕೆಜಿ, ಯುಕೆಜಿ ಸೇರಿದಂತೆ 6 ವರ್ಷ ವರ್ಷದೊಳಗಿನ ಶಿಶುಗಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ಹೇಳಿಕೊಡುವ ತರಬೇತಿಯನ್ನು ನಮ್ಮ ಶಿಕ್ಷಕರು ಪಡೆದಿಲ್ಲ. ಮತ್ತು ಅಂತಹ ಕಲೆ ಅವರಿಗೆ ಒಲಿದಿಲ್ಲ. ನಮ್ಮ ಶಿಕ್ಷಕರಿಗೆ ಇದುವರೆಗೆ ಆನ್‌ಲೈನ್‌ನಲ್ಲಿ ಪಾಠ ಮಾಡಿದ ಅನುಭವವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶಿಶುಗಳನ್ನು ಪ್ರಯೋಗಕ್ಕೆ ಒಳಪಡಿಸುವುದು ಕ್ರಿಮಿನಲ್‌ ಅಪರಾಧವಾಗಲಿದೆ,’’ ಎಂದು ನಿಮ್ಹಾನ್ಸ್‌ ಎಚ್ಚರಿಸಿದೆ.
ಎಚ್ಚರಿಕೆಯನ್ನೂ ಧಿಕ್ಕರಿಸಿ ಪಾಠ
ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಲವು ಎಚ್ಚರಿಕೆಗಳ ನಡುವೆಯೂ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೂ ‘ಆನ್‌ಲೈನ್‌’ ತರಗತಿಗಳನ್ನು ನಡೆಸುತ್ತಿವೆ. ಆನ್‌ಲೈನ್‌ ತರಗತಿಗಾಗಿ ಪ್ರತ್ಯೇಕ ಶುಲ್ಕ ವಿಧಿಸುವುದರ ಜತೆಗೆ, ಆನ್‌ಲೈನ್‌ ತರಗತಿಗೆ ಗೈರಾಗುವ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾದಾಗ ಪುನರ್ಮನನ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ. ಈ ಹಿಂದೆ ಈ ಬಗ್ಗೆ ‘ವಿಜಯ ಕರ್ನಾಟಕ’ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಸಂಬಂಧ ಹಲವು ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ‘ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿ’ಗಳಿಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವ ಶಾಲೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌, ‘‘ಇದು ಹಣದ ದುರಾಸೆಯಷ್ಟೆ. ಅವರಿಗೆಲ್ಲಾ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ,’’ ಎಂದು ಟ್ವೀಟ್‌ ಮಾಡಿದ್ದರು.
ಸರಕಾರ ಮನವಿಯಂತೆ ನಿಮ್ಹಾನ್ಸ್‌ ವರದಿ
ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ನಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದ ಸಂಸ್ಥೆಯು ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ.

ಪೋಷಕರೇ ಶಿಕ್ಷಕರಾಗಲಿ
ನಾಲ್ಕನೇ ತರಗತಿವರೆಗೆ ಪೋಷಕರೇ ಮಕ್ಕಳಿಗೆ ಮನೆಗಳಲ್ಲಿ ಪಾಠ, ಪ್ರವಚನಗಳನ್ನು ಹೇಳಿಕೊಡಬಹುದಾಗಿದೆ. ಶಿಕ್ಷಣ ಎಂದರೆ ಕೇವಲ ಬೋಧನೆಯಷ್ಟೇ ಅಲ್ಲ. ಮಕ್ಕಳಿಗೆ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಗಂಟೆಗಳ ಕಾಲ ಆಟ, ಜನರೊಂದಿಗೆ ಬೆರೆಯುವಂತಹ ಪ್ರವೃತ್ತಿಗಳನ್ನು ಕಲಿಸಬೇಕು. ಹಾಗಾಗಿ, ಈ ಎಲ್ಲಾ ಕಲಿಕೆಗಳಿಗೆ ಶಾಲೆಯೇ ಆಗಬೇಕು ಎಂದೇನಿಲ್ಲ. ಇಂದು ಬಹುತೇಕ ಪೋಷಕರು ಅಕ್ಷರಸ್ಥರಾಗಿದ್ದು, ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಿಕೊಡುವಷ್ಟು ಸಶಕ್ತರಾಗಿದ್ದಾರೆ. ಆದರೆ, ಮಕ್ಕಳಿಗೆ ಪಾಠವನ್ನು ಹೇಗೆ ಹೇಳಿಕೊಡಬೇಕು ಎಂಬುದನ್ನು ಶಿಕ್ಷಣ ಇಲಾಖೆ ಪೋಷಕರಿಗೆ ತಿಳಿಸಿದರೆ ಸಾಕು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆನ್‌ಲೈನ್‌ ಶಿಕ್ಷಣದಿಂದ ಶಿಶುಗಳ ಮೇಲೆ ಆಗುವ ಪರಿಣಾಮಗಳ ಕುರಿತು ವರದಿ ನೀಡುವಂತೆ ಶಿಕ್ಷಣ ಸಚಿವರು ಮನವಿ ಮಾಡಿದ ಹಿನ್ನೆಲೆಯಲ್ಲಿ, ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದೇವೆ. ಶಿಶುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಆನ್‌ಲೈನ್‌ ತರಗತಿಗಳು ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ. ಸರಕಾರ ವರದಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿ.
– ಡಾ.ಬಿ.ಎನ್‌.ಗಂಗಾಧರ್‌, ನಿರ್ದೇಶಕರು, ನಿಮ್ಹಾನ್ಸ್‌
—–
ಆನ್‌ಲೈನ್‌ ತರಗತಿಗಳಿಂದಾಗಿ ಎಲ್‌ಕೆಜಿ, ಯುಕೆಜಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ನಿಮ್ಹಾನ್ಸ್‌ ವರದಿ ನೀಡಿದೆ. ಮಂಗಳವಾರ ಈ ವರದಿಯನ್ನು ಪರಿಶೀಲಿಸಿ, ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿ ವರ್ತಿಸುವ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು
-ಎಸ್‌.ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top