ಬೇಕು ಹೊಸ ಆನ್‌ಲೈನ್‌ ಪ್ಲ್ಯಾನ್‌ – ಶಾಲೆ ಇಲ್ಲ, ಆನ್‌ಲೈನ್‌ ಒಲ್ಲದಿದ್ದರೆ ಮತ್ತೇನು? ಹುಡುಕಿದರೆ ಹೊಸ ದಾರಿ ಸಿಗದೇನು?

ಕೊರೊನಾ ಹಿನ್ನೆಲೆಯಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ವ್ಯವಸ್ಥೆಗಳಲ್ಲಿ ಶಿಕ್ಷಣವೂ ಪ್ರಮುಖವಾಗಿದೆ. ಮಕ್ಕಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಸ್ವತಃ ಸರಕಾರವೂ ಶಿಕ್ಷಣದ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಲು ಹೆಣಗಾಡುತ್ತಿದೆ. ಏರುತ್ತಿರುವ ಸೋಂಕಿನಿಂದಾಗಿ ಶಾಲೆಗಳನ್ನು ಸದ್ಯೋಭವಿಷ್ಯದಲ್ಲಿ ತೆರೆಯುವ ಸ್ಥಿತಿ ಇಲ್ಲ. ಸರಕಾರವೇ ಶಾಲೆ ತೆರೆಯಲು ಮುಂದಾದರೂ ಪೋಷಕರು ಕಳುಹಿಸಿಕೊಡುವ ಮನೋಸ್ಥಿತಿಯಲ್ಲಿಲ್ಲ. ಈ ನಡುವೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಪಾಠದ ಮೂಲಕ ತಮ್ಮ ವ್ಯವಸ್ಥೆಯನ್ನು ಮುಂದುವರಿಸಲು ಪ್ರಯತ್ನಿಸಿದವು. ಆದರೆ, ಸರಕಾರ ಅದಕ್ಕೂ ಕಡಿವಾಣ ಹಾಕಿದೆ.
ಎಲ್‌ಕೆಜಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಬಾರದು ಎಂದು ಸರಕಾರ ಕಟ್ಟಾಜ್ಞೆ ವಿಧಿಸಿದೆ. ಆರು ಮತ್ತು ಏಳನೇ ತರಗತಿಗೆ ಆನ್‌ಲೈನ್‌ ಪಾಠ ಸೂಕ್ತವೇ ಎಂಬ ಬಗ್ಗೆ ನಿರ್ಧರಿಸುವ ಹೊಣೆಯನ್ನು ತಜ್ಞರಿಗೆ ವಹಿಸಲಾಗಿದೆ. ಆದರೆ, ಸರಕಾರ ಆನ್‌ಲೈನ್‌ ಶಿಕ್ಷಣವನ್ನು ನಿಷೇಧಿಸಿದಲ್ಲಿಗೆ ಅದರ ಹೊಣೆಗಾರಿಕೆ ಮುಗಿಯುವುದಿಲ್ಲ. ಬದಲಾಗಿ, ಸ್ಥಗಿತಗೊಂಡಿರುವ ಕಲಿಕಾ ವ್ಯವಸ್ಥೆಗೆ ಚಲನಶೀಲತೆ ನೀಡಲು ಪರಾರ‍ಯಯ ಮಾರ್ಗಗಳನ್ನು ಸೂಚಿಸಬೇಕಾಗಿದೆ.
ಕೊರೊನಾ ಯಾವಾಗ ಅಂತ್ಯಗೊಳ್ಳುತ್ತದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಅದರ ಅಂತ್ಯವನ್ನೇ ಕಾದುಕೊಂಡು ಮಕ್ಕಳನ್ನು ಮನೆಯೊಳಗೆ ಬಂದಿಯಾಗಿಡುವುದೂ ಸಾಧ್ಯವಿಲ್ಲ. ಬೆಳೆಯುವ ವಯಸ್ಸಿನಲ್ಲಿ ಆಟ, ಪಾಠಗಳು, ಸಂವಹನದ ಅಗತ್ಯವಿದೆ. ಮಕ್ಕಳನ್ನು ದೀರ್ಘ ಕಾಲ ಸಾಮೂಹಿಕ ವ್ಯವಸ್ಥೆಯಿಂದ ಹೊರಗಿಟ್ಟರೆ ಖಿನ್ನತೆ, ಅಗ್ರೆಷನ್‌ ಮತ್ತಿತರ ಮನೋ ಸಮಸ್ಯೆಗಳು ಕಾಡುತ್ತವೆ ಎಂದೂ ವೈದ್ಯಕೀಯ ವರದಿಗಳು ಹೇಳುತ್ತವೆ.
ಹಾಗಂತ, ಒಮ್ಮಿಂದೊಮ್ಮೆಗೆ ಆನ್‌ಲೈನ್‌ ಶಿಕ್ಷಣಕ್ಕೆ ಪೂರ್ಣಾವಕಾಶ ಕೊಡುವುದರಿಂದಲೂ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅದರ ವಿದ್ಯಾರ್ಥಿಗಳಿಗೆ ಇದು ಲಾಭದಾಯಕವಾಗಬಹುದು. ಆದರೆ, ಸರಕಾರಿ ಶಾಲೆಯಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಬಹುದು. ಹೀಗಾಗಿ ಸರಕಾರಿ ಶಾಲೆಗಳಲ್ಲೂ ಆನ್‌ಲೈನ್‌ ಶಿಕ್ಷಣದ ಆರಂಭಕ್ಕೆ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಾಗುತ್ತದೆ. ಐದನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ರದ್ದುಪಡಿಸಿರುವ ಸರಕಾರ ಮುಂದಿನ ತರಗತಿಗಳಿಗೆ ಅವಕಾಶ ನೀಡುವುದಾದರೆ ಸರಕಾರಿ ಶಾಲೆಗಳಲ್ಲೂ ಆನ್‌ಲೈನ್‌ ಶಿಕ್ಷಣ ಕೊಡಲೇಬೇಕಾಗುತ್ತದೆ.
ಈಗಾಗಲೇ ಸರ್ವ ವ್ಯವಸ್ಥೆಗಳು ಡಿಜಿಟಲೀಕರಣಗೊಳ್ಳುತ್ತಿರುವ ಹೊತ್ತಿನಲ್ಲಿ ಶಿಕ್ಷಣದ ವಿಚಾರದಲ್ಲಿಯೂ ದೃಢ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ. ಆನ್‌ಲೈನ್‌ ಮೂಲಕ ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ ಎಂದಾದರೆ ಅನ್ಯ ದಾರಿಗಳನ್ನು ಹುಡುಕಬೇಕು. ಇದು ರಾಜ್ಯ ಮಾತ್ರವಲ್ಲ ಕೇಂದ್ರ ಸರಕಾರದ ಮಟ್ಟದಲ್ಲೂ ಆಗಬೇಕಾದ ತುರ್ತು ಅನ್ವೇಷಣಾ ಕಾರ್ಯ.

ಮಕ್ಕಳಿಗೆ ತಕ್ಕಂತೆ ಸಮಯ ನಿಗದಿ ಮಾಡಿ
ಮಕ್ಕಳು ಹೆಚ್ಚು ಹೊತ್ತು ಸ್ಕ್ರೀನ್‌ ನೋಡಬಾರದು ಎಂಬ ಅಂಶ ನಿರ್ಬಂಧದಲ್ಲಿ ಪ್ರಧಾನವಾಗಿದೆ. ಹಾಗಿದ್ದರೆ ಎಷ್ಟು ಹೊತ್ತು ನೋಡಬಹುದು ಎಂಬುದನ್ನು ಸ್ಪಷ್ಟಪಡಿಸಿ, ಅಷ್ಟೇ ಹೊತ್ತಿನ ಕ್ಲಾಸಿಗಾದರೂ ಅವಕಾಶ ನೀಡಿ ಎನ್ನುವುದು ಪೋಷಕರ ವಾದ. ಮಹಾರಾಷ್ಟ್ರದಲ್ಲಿ 3-5ನೇ ಕ್ಲಾಸ್‌ಗೆ ಒಂದು ಗಂಟೆ, 6-8ನೇ ಕ್ಲಾಸ್‌ಗೆ 2 ಗಂಟೆ, 9-12ನೇ ಕ್ಲಾಸಿಗೆ 3 ಗಂಟೆ ಪಾಠ ನಿಗದಿ ಮಾಡಲಾಗಿದೆ. ಇದನ್ನು ಇಲ್ಲೂ ಜಾರಿಗೆ ತರಬಹುದು.
– ಆನ್‌ಲೈನ್‌ ಕ್ಲಾಸ್‌ ಇಲ್ಲದೆ ಹೋದರೂ ಮಕ್ಕಳು ದಿನದ ಬಹುಪಾಲು ಟೀವಿ ಇಲ್ಲವೇ ಮೊಬೈಲ್‌ನಲ್ಲೇ ಇರುತ್ತಾರೆ. ಇದಕ್ಕಿಂತ ಆನ್‌ಲೈನ್‌ ಕ್ಲಾಸೇ ಉತ್ತಮ.

ಸರಕಾರಿ ಶಾಲೆ ಸಮೀಕ್ಷೆ
ಶಿಕ್ಷಣ ಇಲಾಖೆಯು ಈಗಾಗಲೇ ರಾಜ್ಯದ ಎಲ್ಲಾ ಸರಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರ ಹೊಂದಿರುವ ಮೊಬೈಲ್‌ ಫೋನ್‌, ಟಿವಿ, ರೇಡಿಯೊ, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌ ವಸ್ತುಗಳ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಲಭ್ಯವಿರುವ ಮಾಧ್ಯಮಗಳ ಮೂಲಕ ಸರಕಾರಿ ಮತ್ತು ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು ನಿರಂತರ ಕಲಿಕೆಯಲ್ಲಿ ತೊಡಗಿಸುವಂತಹ ಮಾರ್ಗಸೂಚಿಗಳನ್ನು ರಚಿಸುವ ಅಗತ್ಯವಿದೆ. ಆ ಮೂಲಕ ಶಾಲಾ ಕಚೇರಿ ಕೆಲಸಗಳಿಗೆ ಹಾಜರಾಗುತ್ತಿರುವ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕಿದೆ.

ಆನ್‌ಲೈನ್‌ನಲ್ಲಿಡಲು ಹಲವು ದಾರಿ
ಮಕ್ಕಳ ಶಿಕ್ಷಣ ‘ಆನ್‌ಲೈನ್‌’ನಲ್ಲಿಡಲು ನೇರ ವಿಡಿಯೊ ಕ್ಲಾಸ್‌ಗಳೊಂದೇ ದಾರಿಯಲ್ಲ.
ಡಿಜಿಟಲ್‌ ತರಗತಿಗಳು
ಶಿಕ್ಷಣ ಇಲಾಖೆಯು ತಾಲೂಕು ಅಥವಾ ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಡಿಜಿಟಲ್‌ ಕ್ಲಾಸ್‌ ರೂಮ್‌ಗಳನ್ನು ತೆರೆದು ನುರಿತ ಶಿಕ್ಷಕರಿಂದ ತರಗತಿಗಳನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳ- ಪೋಷಕರ ಸ್ಮಾರ್ಟ್‌ಫೋನ್‌ ಮೂಲಕ ಲಿಂಕ್‌ ನೀಡಿ ಪಾಠಗಳನ್ನು ಕೇಳಿಸಬಹುದಾಗಿದೆ. ಅಲ್ಲದೆ, ಡಿಜಿಟಲ್‌ ಕ್ಲಾಸ್‌ ರೂಮ್‌ಗಳನ್ನು ಪಾಠಗಳ ಆಡಿಯೋ ಅಥವಾ ವಿಡಿಯೋ ರೆಕಾರ್ಡ್‌ ಮಾಡಿ ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ರವಾನಿಸಬಹುದು.
ಸಮೂಹ ಮಾಧ್ಯಮ
ಶಿಕ್ಷಣ ಇಲಾಖೆ ರೇಡಿಯೊ ಮತ್ತು ದೂರದರ್ಶನ ಚಂದನ ವಾಹಿನಿಯ ಮೂಲಕ ಪಠ್ಯ ಹಾಗೂ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಬಹುದು. ಪ್ರಾಜೆಕ್ಟ್‌ಗಳನ್ನು ನೀಡಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಪ್ರತಿ ತರಗತಿಗೆ ಒಂದರಂತೆ ದೂರದರ್ಶನದಲ್ಲಿ ಶೈಕ್ಷಣಿಕ ಚಾನಲ್‌ ಪ್ರಾರಂಭಕ್ಕೆ ಅನುಮತಿ ಕೋರಿದೆ.
ಗೂಗಲ್‌ ಡಾಕ್‌ ಬಳಕೆ
ಶಿಕ್ಷಕರು ಗೂಗಲ್‌ ಡಾಕ್‌ ಎಂಬ ವೆಬ್‌ ಅಪ್ಲಿಕೇಷನ್‌ನಲ್ಲಿ ‘ಸ್ಪ್ರೆಡ್‌ ಶೀಟ್‌’ ತಯಾರಿಸಿಕೊಂಡು ಇದರಲ್ಲಿ ಪ್ರತಿ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಕ್ರಿಯಾತ್ಮಕ ಚಟುವಟಿಕೆಗಳ ಮಾದರಿಗಳು, ಪ್ರಾಜೆಕ್ಟ್ ವರ್ಕ್‌ ಸೇರಿದಂತೆ ಇತರೆ ವಿಷಯಗಳ ಬಗ್ಗೆ ವಿವರಗಳನ್ನು ಬರೆದು ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ಕಳುಹಿಸಬಹುದಾಗಿದೆ. ಇವುಗಳನ್ನು ನೋಡಿಕೊಂಡು ವಿದ್ಯಾರ್ಥಿಗಳು ಉತ್ತರ ನೀಡುವುದು ಮತ್ತು ಚಟುವಟಿಕೆಗಳಲ್ಲಿ ತೊಡಗಬಹುದು. ಪೂರ್ಣಗೊಂಡ ನಂತರ ಉತ್ತರಗಳನ್ನು ಮತ್ತೆ ಮೊಬೈಲ್‌ ಮೂಲಕವೇ ಶಿಕ್ಷಕರಿಗೆ ಕಳಿಸಬಹುದು. ನಂತರ ಶಿಕ್ಷಕರು ಇದನ್ನು ಮೌಲ್ಯಮಾಪನ ಮಾಡಿ, ತಪ್ಪುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬಹುದು ಅಥವಾ ಬೇರೆ ಅಸೈನ್ಮೆಂಟ್‌ಗಳನ್ನು ನೀಡಬಹುದಾಗಿದೆ.
ಯೂ-ಟ್ಯೂಬ್‌ ಚಾನೆಲ್‌ ಬಳಕೆ
ಶಿಕ್ಷಕರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಆಡಿಯೋ ಹಾಗೂ ವಿಡಿಯೋ ಮುದ್ರಣ ಮಾಡಿ ಯೂ-ಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಈ ಮಾದರಿಗಳನ್ನು ನೋಡಿಕೊಂಡು ವಿದ್ಯಾರ್ಥಿಗಳು ತಾವೂ ವಿಜ್ಞಾನ ಸೇರಿದಂತೆ ಇತರೆ ಮಾದರಿಗಳನ್ನು ತಯಾರು ಮಾಡಬಹುದು.

ಆನ್‌ಲೈನ್‌ ತರಗತಿಗಳು ತಾತ್ಕಾಲಿಕವಾಗಿದ್ದು, ಪಠ್ಯ ಬೋಧನೆಗಿಂತ ಕ್ರಿಯಾತ್ಮಕ ಚಟುವಟಿಕೆಗಳಿಗೆ ಶಾಲೆಗಳು ಒತ್ತು ನೀಡಬೇಕು. ಮಕ್ಕಳು ನಿರಂತರವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಕ್ರೀನ್‌ ವೀಕ್ಷಿಸುವಂತಿಲ್ಲ. ಆದ್ದರಿಂದ ಸಮೂಹ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಸರಕಾರಿ ಶಾಲೆ, ಗ್ರಾಮೀಣ ಮಕ್ಕಳೂ ಸೇರಿದಂತೆ ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ, ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವಂತಹ ಮಾರ್ಗಸೂಚಿಗಳನ್ನು ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು.
– ಡಾ.ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಕೋವಿಡ್‌-19ನಿಂದಾಗಿ ಶಿಕ್ಷಣದ ತಾತ್ಕಾಲಿಕ ಪರ್ಯಾಯ ಕ್ರಮವಾಗಿ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಮೊರೆ ಹೋಗಿವೆ. ಆದರೆ, ಇಂಟರ್ನೆಟ್‌ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಂದಾಗಿ ಗ್ರಾಮೀಣ ಪ್ರದೇಶದ ಮತ್ತು ಸರಕಾರಿ ಶಾಲೆಗಳ ಮಕ್ಕಳಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ. ಆದರೆ, ಈ ಮಕ್ಕಳನ್ನು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಸರಕಾರ ಈಗಾಗಲೇ ದೂರದರ್ಶನ ಚಂದನ ವಾಹಿನಿ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಪುನರ್ಮನನ ತರಗತಿಗಳನ್ನು ನಡೆಸಿದೆ. ಇದೇ ಮಾದರಿಯಲ್ಲಿ ಸರಕಾರಿ ಶಾಲೆಯ ಮಕ್ಕಳಿಗೂ ಚಂದನ ವಾಹಿನಿಯ ಮೂಲಕ ಪಾಠ, ಪ್ರವಚನ ಮಾಡಲು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸಲಹೆ ನೀಡುತ್ತೇನೆ.
– ಪ್ರೊ. ಎಂ.ಆರ್‌.ದೊರೆಸ್ವಾಮಿ, ಸರಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರು

ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಮೂಲಕ ಬೋಧನೆ ಮಾಡುವುದು ಅಸಾಧ್ಯ. ಸಮುದಾಯದ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲೂ ಆಗುವುದಿಲ್ಲ. ಜತೆಗೆ, ತಂತ್ರಾಂಶ ಬಳಕೆ ಮಾಡಿಕೊಂಡು ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಲು ಕೆಲವು ಸಮಸ್ಯೆಗಳಿವೆ. ಹಾಗಾಗಿ, ಕೋವಿಡ್‌-19ನಂತಹ ತುರ್ತು ಸಂದರ್ಭಗಳಲ್ಲಿ ಮಕ್ಕಳು ಸ್ವತಂತ್ರವಾಗಿ ಕಲಿಯುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಈಗಿಂದಲೇ ಚಿಂತನೆ ನಡೆಸಬೇಕು.
– ಪ್ರೊ. ಎಂ.ಕೆ. ಶ್ರೀಧರ್‌, ಶಿಕ್ಷಣ ತಜ್ಞ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top