ಸಮಗ್ರ ಶಿಕ್ಷಣದ ಅಗತ್ಯ – ಆನ್‌ಲೈನ್‌-ಆಫ್‌ಲೈನ್‌ ಜೊತೆಗೂಡಿಸಬೇಕು

ಕೊರೊನಾ ಸೋಂಕಿನ ಆತಂಕದಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ರಂಗಕ್ಕೆ ಮರುಜೀವ ತುಂಬುದು ನಿಜಕ್ಕೂ ಒಂದು ಸವಾಲಿನ ಕೆಲಸ. ಈ ಬಗ್ಗೆ ‘ವಿಜಯ ಕರ್ನಾಟಕ’ ನಡೆಸಿದ ವೆಬಿನಾರ್‌ನಲ್ಲಿ ಮಹತ್ವದ ಅಭಿಪ್ರಾಯಗಳು ಹಾಗೂ ಭರವಸೆಯ ಆಶಾಕಿರಣಗಳು ಮೂಡಿಬಂದಿವೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಸೆದ ಸಂಯೋಜಿತ ಶಿಕ್ಷಣ ಭವಿಷ್ಯದ ದೃಷ್ಟಿಯಿಂದಲೂ ಅನಿವಾರ್ಯವಾಗಿರುವುದರಿಂದ ಎರಡಕ್ಕೂ ಒತ್ತು ನೀಡುವ ಹೊಸ ಸಂಯೋಜನೆಯನ್ನು ರೂಪಿಸಬೇಕು ಎಂಬುದು ಈ ಕಾರ್ಯಕ್ರಮದಲ್ಲಿ ಮೂಡಿಬಂದ ಮುನ್ನೋಟ. ಆನ್‌ಲೈನ್‌ ಶಿಕ್ಷಣ ಹಳ್ಳಿ ಹಳ್ಳಿಗೆ ತಲುಪಬೇಕೆಂದರೆ, ಇನ್ನಷ್ಟು ಇಂಟರ್ನೆಟ್‌ ಕ್ರಾಂತಿ ಆಗಬೇಕಾದುದು ಅಗತ್ಯ. ಅದಕ್ಕೆ ತಕ್ಕ ವ್ಯವಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಿದೆ. ಇದಕ್ಕೆ ಬೆಂಬಲ ನೀಡಲು ಶಿಕ್ಷಣ ತಜ್ಞರು, ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಮುಂದಾಗಿದ್ದಾರೆ.
ಆನ್‌ಲೈನ್‌ ಶಿಕ್ಷಣದ ಬಗ್ಗೆ ರಾಜ್ಯ ಮುಂದಿಟ್ಟಿರುವ ಹಲವು ಹೆಜ್ಜೆಗಳು ಗಮನಾರ್ಹ. ಜ್ಞಾನನಿಧಿ ಪೋರ್ಟಲ್‌ನಲ್ಲಿ 50,000 ಗಂಟೆಗಳಷ್ಟು ಪಾಠದ ಅಪ್‌ಲೋಡ್‌, ಕೆ-ಸೆಟ್‌ ಮತ್ತು ನೀಟ್‌ ಪರೀಕ್ಷೆಗೆ ಆನ್‌ಲೈನ್‌ ತರಬೇತಿ, 1,000 ಸ್ಮಾರ್ಟ್‌ ಕ್ಲಾಸ್‌ ರೂಂಗಳು, ಇನ್ನೂ 1000 ಕ್ಲಾಸ್‌ ತೆರೆಯಲು ಚಿಂತನೆ, ದೂರದರ್ಶನ ಮತ್ತು ಚಂದನ ಚಾನೆಲ್‌ಗಳನ್ನು ಬಳಸಿಕೊಂಡು ತರಗತಿಗಳು ಇತ್ಯಾದಿ ಅದರಲ್ಲಿ ಕೆಲವು. ಈ ಪಾಠಗಳು ಕಟ್ಟಕಡೆಯ ಹಳ್ಳಿಯ ಅತ್ಯಂತ ಬಡ ಮಕ್ಕಳಿಗೂ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸರಕಾರಕ್ಕೆ ಸಾಧ್ಯವಾಗಬೇಕು. ದೂರದರ್ಶನ ಇದರಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬುದನ್ನು ತಜ್ಞರೂ ಹೇಳಿದ್ದಾರೆ.
ತಂತ್ರಜ್ಞಾನದ ಕೊರತೆಯಿಂದಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮದು ಎಂಬ ಭರವಸೆಯ ಮಾತನ್ನು ಪ್ರಾಥಮಿಕ ಶಿಕ್ಷಣ ಸಚಿವರು ಪುನರುಚ್ಚರಿಸಿದ್ದಾರೆ. ಸರಕಾರಕ್ಕೂ ಶಿಕ್ಷಣ ತಜ್ಞರಿಗೂ ಮಾಧ್ಯಮಗಳಿಗೂ ಈ ಆಶಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಸಮಸ್ಯೆ ಇರುವುದು ಇದನ್ನು ಸಾಧ್ಯವಾಗಿಸುವುದು ಹೇಗೆ ಎಂಬುದರಲ್ಲಿ. ಈಗಿನ ಪರಿಸ್ಥಿತಿಯಲ್ಲಿ ಒಂದೊಮ್ಮೆ ಶಾಲೆ ತೆರೆದರೂ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಹೆಚ್ಚಿನ ಪೋಷಕರು ಹೇಳಿರುವುದು ಸರಕಾರ ನಡೆಸಿದ ಸಮೀಕ್ಷೆಯಲ್ಲಿ ದಾಖಲಾಗಿದೆ. ಶಿಕ್ಷಣವೇನೋ ಎಲ್ಲ ಮಕ್ಕಳಿಗೂ ಕಾನೂನು ಪ್ರಕಾರ ಕಡ್ಡಾಯವೇ ಆದರೂ, ಕೊರೊನಾ ಪರಿಸ್ಥಿತಿಯಲ್ಲಿ ಅವರನ್ನು ಶಾಲೆಗೆ ಬರುವಂತೆ ಒತ್ತಡ ಹಾಕಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಶಾಲೆಗಳನ್ನು ತೆರೆಯುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬಹುದು. ಪರ್ಯಾಯ ದಿನಗಳಂದು ಪಾಠ, ವಾರಕ್ಕೊಂದೇ ದಿನ ಪಾಠ, ಇತರರೊಂದಿಗೆ ಸಂಪರ್ಕವಿಲ್ಲದಂತೆ ಸಣ್ಣ ಗುಂಪುಗಳಲ್ಲಿ ತರಗತಿ, ಶಾಲಾ ಪರಿಸರವನ್ನು ವಿಸ್ತರಿಸಿ ಮಕ್ಕಳನ್ನು ವಿಶಾಲ ವ್ಯಾಪ್ತಿಯಲ್ಲಿ ಹರಡುವುದು, ಇತರ ಕಟ್ಟಡಗಳನ್ನು ಬಾಡಿಗೆ ಪಡೆಯುವುದು- ಮುಂತಾದ ಉಪಕ್ರಮಗಳು ಇತರ ದೇಶಗಳಲ್ಲಿ ನಡೆದಿದ್ದು, ಇವುಗಳ ಬಗ್ಗೆ ಸರಕಾರ ಚಿಂತಿಸಬಹುದು.
ಮೇಲ್ಮಧ್ಯಮ, ಮಧ್ಯಮ ಹಾಗೂ ಶ್ರೀಮಂತರ ಮಕ್ಕಳು ಆನ್‌ಲೈನ್‌ ಶಿಕ್ಷಣ ಪಡೆಯಬಹುದು. ಆದರೆ ಖಾಸಗಿ ಶಾಲೆಗೆ ಕಡಿಮೆ ಆದಾಯದವರೂ ಕೂಡ ಹೊಟ್ಟೆಬಟ್ಟೆ ಕಟ್ಟಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಇವರಲ್ಲೂಆನ್‌ಲೈನ್‌ ಸವಲತ್ತು ಪಡೆಯಲು ಎಷ್ಟು ಜನರಿಂದ ಸಾಧ್ಯವೆಂಬುದು ಗೊತ್ತಾಗಬೇಕು. ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ, ಸರಕಾರಿ ಶಾಲೆಯ ಶೇ.50 ಮಕ್ಕಳಲ್ಲಿ ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಇಲ್ಲ. ಈ ಸಮಸ್ಯೆಗೆ ಉತ್ತರ ಬೇಕು. ನಮ್ಮ ಶಿಕ್ಷಕರಿಗೂ ಆನ್‌ಲೈನ್‌ ಪಾಠ ನೀಡಲು ತರಬೇತಿ ಬೇಕು. ಇದಕ್ಕೆ ಬೇಕಾದ ತರಬೇತಿ, ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳನ್ನು ರೂಪಿಸಿಕೊಳ್ಳಬೇಕು. ಶಾಲೆಗಳಲ್ಲೂ ಆನ್‌ಲೈನ್‌ ಶಿಕ್ಷಣಕ್ಕೆ ಮೂಲ ಸೌಕರ್ಯವಿರಬೇಕು. ಈ ಮಧ್ಯೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಮಹತ್ವದ ಹೊಣೆಯಿದೆ. ಇವೆಲ್ಲದರಲ್ಲೂ ಅನುದಾನಿತ, ಅನುದಾನರಹಿತ- ಹೀಗೆ ಎಲ್ಲಬಗೆಯ ಶಿಕ್ಷಣ ಸಂಸ್ಥೆಗಳನ್ನೂ ಒಟ್ಟುಗೂಡಿಸಿಕೊಂಡು ಸಾಗಬೇಕಾದ ಮಹತ್ವದ ಹೊಣೆ ಸರಕಾರದ ಮುಂದಿದೆ. ಸವಾಲುಗಳಿವೆ. ಜಾಣ್ಮೆಯಿಂದ ನಿಭಾಯಿಸಿದರೆ ಅದು ಮಾದರಿಯೆನಿಸಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top