ನಂಜುಕಾರಿದ ಅಮೆರಿಕದ ಕುರಿತು ಮೋದಿ ಒಲವು-ನಿಲುವು

ಭಾರತದಲ್ಲಿ ಔದ್ಯೋಗಿಕ ಮುನ್ನುಡಿ ಬರೆಯಲು ಸಂಕಲ್ಪಿಸಿದ ಮುತ್ಸದ್ಧಿ ನಾಯಕನಿಗೆ ವಿನಾಕಾರಣ ವೀಸಾ ನಿರಾಕರಿಸಿ ನಂಜುಕಾರಿದ ಅಮೆರಿಕದ ಧೋರಣೆ ಒಂದು ವಿಷಯವೇ ಆಗಲಿಲ್ಲ ಎಂಬುದು ಈ ಹೊತ್ತಿಗೆ ನಾವು ಗಮನಿಸಬೇಕಾದ ಸಂಗತಿ. 

fU6NY-EI_400x400

ಒಂಭತ್ತು ವರ್ಷಗಳ ಹಿಂದಿನ, ಅಂದರೆ 2005ರಲ್ಲಿನ ಘಟನಾವಳಿಗಳನ್ನು ಮೆಲುಕು ಹಾಕದೆ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ಕುರಿತು ಬರೆಯೋದಾದರೂ ಹೇಗೆ? ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅಂದು ನ್ಯೂಯಾರ್ಕ್ನ ಮ್ಯಾಡಿಸನ್ ವೃತ್ತದಲ್ಲಿ ಅಮೆರಿಕದಲ್ಲಿ ನೆಲೆನಿಂತ ಉದ್ಯಮಿಗಳೂ ಸೇರಿ ದೊಡ್ಡ ಸಂಖ್ಯೆಯ ಭಾರತೀಯ ಅಮೆರಿಕನ್ನರನ್ನುದ್ದೇಶಿಸಿ ಭಾಷಣ ಮಾಡಬೇಕಿತ್ತು. ಮೋದಿ ಅಮೆರಿಕದಲ್ಲಿ ಉದ್ಯಮ ಸಮೂಹವನ್ನುದ್ದೇಶಿಸಿ ಮಾತನಾಡುತ್ತಾರೆಂಬುದು ಆಗ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದನ್ನು ತಡೆಯಲು ಮೋದಿ ವಿರೋಧಿಗಳು ಹುಡುಕಿದ ಅಸ್ತ್ರವೇ ಗೋಧ್ರೋತ್ತರ ಗಲಭೆ ಮತ್ತು ಅದಕ್ಕೆ ಮೋದಿ ಪ್ರೋತ್ಸಾಹವೇ ಕಾರಣ ಎಂಬ ಹುಯಿಲು. ಗೋಧ್ರೋತ್ತರ ಗಲಭೆಯ ಕಳಂಕವನ್ನು ಅವರ ತಲೆಗೆ ಕಟ್ಟಿ, ಅಮೆರಿಕ ಪ್ರವಾಸಕ್ಕೆ ತಡೆಹಾಕಲು ಕೆಲವರು ಹೂಡಿದ ಷಡ್ಯಂತ್ರಕ್ಕೆ ಅಮೆರಿಕ ಸರ್ಕಾರ ತಲೆ ಅಲ್ಲಾಡಿಸಿ, ಮೋದಿಗೆ ನೀಡಿದ್ದ ವೀಸಾವನ್ನು ಹಿಂದಕ್ಕೆ ಪಡೆಯಿತು. ಪರಿಣಾಮವಾಗಿ ಮೋದಿ ಅಮೆರಿಕ ಪ್ರವಾಸವನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು. ಅದರಿಂದ ಸಾವಿರಾರು ಮಂದಿ ಭಾರತೀಯ ಅಮೆರಿಕನ್ನರಿಗೆ ತೀವ್ರ ನಿರಾಸೆ ಆಯಿತು. ಹಟ ಬಿಡದ ಕಾರ್ಯಕ್ರಮ ಆಯೋಜಕರು ಟೆಲಿಕಾನ್ಫರೆನ್ಸ್ನಲ್ಲಿ ಮೋದಿ ಭಾಷಣ ಆಲಿಸಿ ಸಮಾಧಾನಪಟ್ಟರು. ಮೋದಿ ಟೆಲಿಕಾನ್ಫರೆನ್ಸ್ನಲ್ಲಿ ಭಾಷಣ ಮಾಡುವ ವೇಳೆ ಮ್ಯಾಡಿಸನ್ ವೃತ್ತದಲ್ಲಿ ನಿರ್ಮಿಸಿದ್ದ ವೇದಿಕೆ ಮೇಲೆ ಮೋದಿಗಾಗಿ ಒಂದು ಕುರ್ಚಿಯನ್ನು ಇಡಲಾಗಿತ್ತು. ಈಗ ಭಾರತದ ಪ್ರಧಾನಿಯಾಗಿರುವ ಮೋದಿ ಅದೇ ಮ್ಯಾಡಿಸನ್ ವೃತ್ತದಲ್ಲಿ ಅದೇ ವೇದಿಕೆಯಲ್ಲಿ, ಅದೇ ಕುರ್ಚಿಯಲ್ಲಿ ಕುಳಿತು ಭಾಷಣ ಮಾಡಲಿದ್ದಾರೆ. ಒಂಭತ್ತು ವರ್ಷದ ಹಿಂದೆ ಮೋದಿ ಭಾಷಣ ಆಲಿಸಲು ಅಬ್ಬಬ್ಬಾ ಅಂದರೆ ಐದು ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಇಂದು ಬರೋಬ್ಬರಿ ಹದಿನೆಂಟು ಸಾವಿರ ಜನರು ಮುಂಗಡವಾಗಿ ಪಾಸ್ ಪಡೆದುಕೊಂಡು ಮೋದಿ ಭಾಷಣ ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಹೇಗಿದೆ ನೋಡಿ ಬದಲಾದ ಸನ್ನಿವೇಶ.

ಅಂಥ ದೊಡ್ಡ ದೇಶವೆಂದು ಕರೆಸಿಕೊಳ್ಳುವ ಅಮೆರಿಕ ಮೋದಿ ವಿಷಯದಲ್ಲಿ ಇಂಥ ಸಣ್ಣತನ ತೋರಿದ್ದರಿಂದ ಒಂದು ಇತಿಹಾಸ ನಿರ್ಮಾಣವಾಯಿತು. ಅಪ್ಪಟ ಪ್ರಜಾತಂತ್ರ ವ್ಯವಸ್ಥೆಯಡಿ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ಸಾರ್ವತ್ರಿಕ ಚುನಾವಣೆಯ ಮೂಲಕ ಸ್ಪಷ್ಟ ಜನಮನ್ನಣೆ ಪಡೆದ ಒಬ್ಬ ನಾಯಕನನ್ನು ಅಂದು ಅಮೆರಿಕ ಸರ್ಕಾರ ಯಃಕಶ್ಚಿತ್ತಾಗಿ ನೋಡಿತು. ಯಾರೋ ಬೆರಳೆಣಿಕೆಯಷ್ಟು ಮಂದಿ ಹೂಡಿದ ಷಡ್ಯಂತ್ರಕ್ಕೆ ತಲೆದೂಗಿದ ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರೃ ರಕ್ಷಣೆ ಕಾಯ್ದೆಯನ್ನೇ ಗುರಾಣಿ ಮಾಡಿಕೊಂಡು ಮೋದಿಗೆ ನೀಡಿದ್ದ ವೀಸಾವನ್ನು ಹಿಂತೆಗೆದುಕೊಂಡಿತ್ತು. ಇದೆಲ್ಲದಕ್ಕೆ ಹೊರತಾಗಿಯೂ ಅದೇ ವ್ಯಕ್ತಿಗೆ ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಯ ಜನರು ಸಂಪೂರ್ಣ ಮನ್ನಣೆ ನೀಡಿದರು. ಅಮೆರಿಕಕ್ಕೆ ವಿಧಿಯಿರಲಿಲ್ಲ. ಒಂದು ದೇಶದ ಸಾಂವಿಧಾನಿಕ ಮುಖ್ಯಸ್ಥನಿಗೆ ಅಮೆರಿಕ ಪ್ರವಾಸ ಕೈಗೊಳ್ಳುವ ಎಲ್ಲ ಹಕ್ಕೂ ಇದೆಯೆಂಬ ನಾಜೂಕಿನ ಸಬೂಬು ನೀಡಿ ಅಲ್ಲಿನ ಸರ್ಕಾರ ಬೀಸುವ ದೊಣ್ಣೆಯಿಂದ ಪಾರಾಗುವ ಯತ್ನ ಮಾಡಿತು. ಆದರೆ ಅದು ಅಷ್ಟು ಸುಲಭದಲ್ಲಿ ಮರೆಯುವಂಥ ಘಟನೆಯೇ?

ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ವೀಸಾ ನಿರಾಕರಣೆ ರಾದ್ಧಾಂತ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಅಮೆರಿಕ ಪ್ರವಾಸದ ಕುರಿತು ಭಾರತದ ನೂರಿಪ್ಪತ್ತೈದು ಕೋಟಿ ಜನರಲ್ಲಿ ಸಹಜವಾಗಿ ರೋಮಾಂಚನ ಉಂಟಾಗಿದ್ದರೆ, ಭಾರತ ಮತ್ತು ಅಮೆರಿಕದ ಸಂಬಂಧದ ವಿಷಯದಲ್ಲಿ ತೀವ್ರ ಕುತೂಹಲದಿಂದ ನೋಡುತ್ತಿದ್ದ ಹೊರ ಜಗತ್ತಿನ ದೇಶಗಳು ಮೋದಿ ಈಗೇನು ನಿಲುವು ತಾಳುತ್ತಾರೆಂದು ಅಚ್ಚರಿಯಿಂದ ಕಣ್ಣರಳಿಸಿ ಎದುರು ನೋಡುತ್ತಿದ್ದವು.

ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ಅಮೆರಿಕವೂ ಸೇರಿದಂತೆ ಎಲ್ಲ ವಿರೋಧಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಮೋದಿ, ಕನಿಷ್ಠ ಇನ್ನೊಂದು ವರ್ಷ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳದೆ ಆಟ ಆಡಿಸುತ್ತಾರೆಂದೇ ಬಹಳಷ್ಟು ಜನರು ಅಂದುಕೊಂಡಿದ್ದರು. ಬೇರೆಯವರ ವಿಷಯ ಬಿಡಿ, ಈ ವಿಷಯದಲ್ಲಿ ಮೋದಿ ಸರ್ಕಾರದ ಅಧಿಕಾರಿಗಳು ಅನುಭವಿಸಿದ ಸಂದಿಗ್ಧ ಬಹಳ ಕುತೂಹಲಕರವಾಗಿದೆ. ಅದೇನೆಂದರೆ, ಅಮೆರಿಕ ಪ್ರವಾಸ ಕಾರ್ಯಕ್ರಮ ಕುರಿತು ಪ್ರಧಾನಿ ಎದುರು ಪ್ರಸ್ತಾವನೆ ಇಡಲು ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಗಳೇ ಹಿಂದೇಟು ಹಾಕಿದ್ದರಂತೆ. ಈಗ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕು ಎಂಬುದರ ಕುರಿತು ಪ್ರಧಾನಿ ಮುಂದೆ ಪ್ರಸ್ತಾವನೆ ಇಡುವುದು ಹೇಗೆ ಎಂದು ಅಧಿಕಾರಿಗಳು ತೊಳಲಾಟಕ್ಕೆ ಸಿಲುಕಿದ್ದರು ಅಂತ ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಸುಮಾರು ಹದಿನೈದು ದಿನಗಳ ಕಾಲ ಪರಸ್ಪರ ಚರ್ಚೆಯಲ್ಲಿ ಮುಳುಗಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವರು ಭಾಗವಹಿಸಿದರೆ ಸಾಕು ಎಂದು ಮೋದಿ ಹೇಳುತ್ತಾರೆನ್ನುವುದು ಅಧಿಕಾರಿಗಳು ಹಾಕಿಕೊಂಡ ಲೆಕ್ಕಾಚಾರ. ವಿಶ್ವಸಂಸ್ಥೆ ಸಭೆಯಲ್ಲಿ ಪಾಲ್ಗೊಳ್ಳುವ ವಿದೇಶಾಂಗ ಸಚಿವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗೆ ಭಾರತ ಸರ್ಕಾರದ ಪರ ಒಂದು ಹಲೋ ಹೇಳಿಬರಲು ಮೋದಿ ಸೂಚಿಸಬಹುದೆಂದೂ ಅಧಿಕಾರಿಗಳು ಅಂದುಕೊಂಡಿದ್ದರು. ಆದರೆ ಪ್ರಧಾನಿ ಮೋದಿಯ ಆಲೋಚನೆ ಬೇರೆಯೇ ಆಗಿತ್ತು. ಹಿಂದೆ ತನಗಾದ ಅಪಮಾನವೆಲ್ಲ ವೈಯಕ್ತಿಕ, ಈಗ ತಾನು ದೇಶದ ಪ್ರಧಾನಿಯಾಗಿ ಒಂದು ಬಲಾಢ್ಯ ದೇಶದೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ವಿವೇಚನೆಯಿಂದಲೇ ತೀರ್ಮಾನಿಸಿದ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಬೆನ್ನಲ್ಲೇ ಅಮೆರಿಕ ಸರ್ಕಾರದ ಜತೆ ಪ್ರಮುಖ ವಿಚಾರಗಳ ಕುರಿತು ಮಾತುಕತೆ ನಡೆಸಲು ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಲು ಹೇಳಿದಾಗ ಅದೇ ಅಧಿಕಾರಿಗಳು ಕೆಲ ಕಾಲ ಮೂಗಿನ ಮೇಲೆ ಬೆರಳಿಟ್ಟು ಅವಾಕ್ಕಾದರು ಎನ್ನುವುದು ಪ್ರಧಾನಿ ಸಮೀಪವರ್ತಿಗಳು ಹೇಳುವ ಮಾತು.

ಒಬ್ಬ ಮುತ್ಸದ್ದಿ ನಾಯಕ ತನ್ನ ವೈಯಕ್ತಿಕ ಮಾನ ಅಪಮಾನ, ಬೇಕುಬೇಡಗಳಿಗಿಂತಲೂ ಹೆಚ್ಚಾಗಿ ತನ್ನ ದೇಶದ ಹಿತವನ್ನು ಚಿಂತಿಸುತ್ತಾನೆಂಬ ಅನುಭವದ ಮಾತು ಮೋದಿ ನಿಲುವಿನಲ್ಲಿ ಅನಾವರಣ ಆಯಿತು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ?

ಹಾಗೆ ನೋಡಿದರೆ ಹೊಸ ಸರ್ಕಾರದ ಇಂಥ ಸಕಾರಾತ್ಮಕ ಚಿಂತನೆ ಇದೇ ಮೊದಲು ಅನ್ನುವ ಹಾಗಿಲ್ಲ. ನಂಬಿಕೆ, ವಿಶ್ವಾಸ ಯಾವುದಕ್ಕೂ ಅರ್ಹವಲ್ಲದ ಪಾಕಿಸ್ತಾನವನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಸತತ ಅರವತ್ತು ವರ್ಷ ಗಡಿಯಲ್ಲಿ ಅನುಭವಿಸಿದ ಕಿರುಕುಳವನ್ನು ಮರೆತು ಚೀನಾದ ಅಧ್ಯಕ್ಷ ಜಿನ್ಪಿಂಗ್ರನ್ನು ಆಲಂಗಿಸಿ ಸ್ವಾಗತಿಸಲು ತೀರ್ಮಾನಿಸಿದ್ದು ಇದಕ್ಕೆಲ್ಲ ಹೊಸ ಸರ್ಕಾರದ ವಿಭಿನ್ನ ನಿಲುವೇ ಕಾರಣ. ವೈಯಕ್ತಿಕವಾಗಿ ಆದ ಅಪಮಾನ ಮರೆತು ಈಗ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

ಯೋಚನೆ ಮಾಡಿದರೆ, ಭಾರತವು ಅಮೆರಿಕವನ್ನು ವಿಶ್ವಾಸದಿಂದ ನೋಡಲು ಕಾರಣಗಳೇ ಸಿಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಮಾತನಾಡುವ ಅಮೆರಿಕ ಪಾಕಿಸ್ತಾನಕ್ಕೆ ಸಕಲ ಸವಲತ್ತನ್ನೂ ಕೊಡುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಪ್ರಜಾತಂತ್ರ, ಮಾನವ ಹಕ್ಕುಗಳ ಪೋಷಕ ಎಂದು ಬೀಗುವ ಅಮೆರಿಕದ ನುಡಿ ಮತ್ತು ನಡೆಗೆ ಸಂಬಂಧವೇ ಇಲ್ಲ. ಅದಕ್ಕೊಂದು ತಾಜಾ ಉದಾಹರಣೆಯಿದೆ ನೋಡಿ. ಜಗತ್ತಿನ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಬಲಗೊಳಿಸುವ ಉದ್ದೇಶದಿಂದ ಹತ್ತು ವರ್ಷಗಳ ಕೆಳಗೆ ಭಾರತ ಮತ್ತು ಅಮೆರಿಕ ವಿಶ್ವಸಂಸ್ಥೆಯಲ್ಲಿ ಪ್ರಜಾಪ್ರಭುತ್ವ ನಿಧಿ ಸ್ಥಾಪಿಸಲು ತೀರ್ಮಾನಿಸಿದವು  (Creation Of United Nations Democracy Fund). 2014ರ ಮೇ ತಿಂಗಳವರೆಗೂ `ಪ್ರಜಾಪ್ರಭುತ್ವ ನಿಧಿ’ಗೆ ಭಾರತ ಎರಡನೇ ಅತಿದೊಡ್ಡ ದಾನಿ. ಇದರಡಿ, ಭಾರತವು ಪ್ರಪಂಚದ ಸುಮಾರು ನೂರಕ್ಕೂ ಹೆಚ್ಚು ದೇಶಗಳ ಐನೂರಕ್ಕೂ ಹೆಚ್ಚು ಪ್ರಜಾಪ್ರಭುತ್ವ ಪ್ರೋತ್ಸಾಹದ ಯೋಜನೆಗಳಿಗೆ ನಿಧಿ ಹಂಚಿಕೆ ಮಾಡಿದೆ. ಆದರೆ ಅಮೆರಿಕ ಮಾತ್ರ ಪ್ರಜಾತಂತ್ರದ ಗಂಧವೇ ಇಲ್ಲದ ಕಡುವಿರೋಧಿ ಚೀನಾಕ್ಕೆ , `ಭಯೋತ್ಪಾದಕರ ಸ್ವರ್ಗ’ವೆಂಬ ಕುಖ್ಯಾತಿ ಪಡೆದ ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವ ಪ್ರೋತ್ಸಾಹ ಕಾರ್ಯಕ್ರಮ ನಿಧಿಯನ್ನು ಧಾರಾಳವಾಗಿ ಹಂಚಿಕೆ ಮಾಡುತ್ತಿದೆ. ಅಷ್ಟೇ ಅಲ್ಲ, ಅಮೆರಿಕದ ರಾಷ್ಟ್ರೀಯ ಭದ್ರತಾ ವಿಭಾಗ ಸದಾ ಭಾರತದ ಮೇಲೆ ಗೂಢಚಾರಿಕೆ ನಡೆಸುತ್ತಲೇ ಇದೆ. ಭಾರತದ ಸರ್ಕಾರದ ವಿವಿಧ ಕಚೇರಿಗಳು, ದೂತಾವಾಸ, ಕೊನೆಗೆ ಇಲ್ಲಿನ ರಾಜಕೀಯ ಪಕ್ಷಗಳ ಕಚೇರಿಗಳಲ್ಲೂ ಅಮೆರಿಕ ಕಳ್ಳಗಿವಿ ಇಟ್ಟು ಕದ್ದಾಲಿಕೆ ಮಾಡುತ್ತಿದೆ. ಪ್ರಧಾನಿ ಮೋದಿಗೆ ಇವೆಲ್ಲ ಗೊತ್ತಿಲ್ಲ ಅಂತಲ್ಲ. ಎಲ್ಲವೂ ಗೊತ್ತಿದ್ದೂ ಅಮೆರಿಕದ ಸ್ನೇಹಾಲಿಂಗನಕ್ಕೆ ಅವರು ಮುಂದಾಗಿದ್ದಾರೆ. ಅದಕ್ಕೆ ಕಾರಣ ವೈಯಕ್ತಿಕ ಹಿತಾಸಕ್ತಿಗಿಂತಲೂ ದೇಶದ ಉದ್ಯಮ ವಲಯದ ಹಿತಾಸಕ್ತಿ ಕಾಯಬೇಕೆಂಬ ತುಡಿತವೇ ಕಾರಣ.

ಮೋದಿ ಅಮೆರಿಕ ಪ್ರವಾಸ ಕಾರ್ಯಕ್ರಮದ ಪಟ್ಟಿಯ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಈ ಅಂಶ ಯಾರಿಗಾದರೂ ಅರ್ಥವಾಗಬಹುದು. ಮೋದಿ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಅಧ್ಯಕ್ಷ ಒಬಾಮಾ ಜತೆಗಿನ ಮಾತುಕತೆ, ಔತಣಕ್ಕಿಂತಲೂ ಹೆಚ್ಚಾಗಿ ನ್ಯೂಯಾರ್ಕ್ನ ಸೆಂಟ್ರಲ್ ಪಾರ್ಕ್ನಲ್ಲಿ ಅಮೆರಿಕದ ಐನೂರಕ್ಕೂ ಹೆಚ್ಚು ಉದ್ಯಮಪತಿಗಳೊಂದಿಗೆ ನಡೆಸುವ ವ್ಯಾಪಾರಿ ಮಾತುಕತೆಗೇ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ.

ಇದಕ್ಕೊಂದು ನಿರ್ದಿಷ್ಟ ಕಾರಣವಿದೆ. ಭಾರತದ ಸದ್ಯದ ಗುರಿ ಇರುವುದು 15 ಟ್ರಿಲಿಯನ್ ಡಾಲರ್ ಗಾತ್ರದ ಅಮೆರಿಕದ ವ್ಯಾಪಾರ- ವಾಣಿಜ್ಯ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ಪಡೆದುಕೊಳ್ಳುವುದು. ಅದಕ್ಕಾಗಿ ಮೋದಿ ಐನೂರು ಕಂಪನಿಗಳ ಸಿಇಒಗಳನ್ನು ಒಂದೇ ಕಡೆ ಕಲೆಹಾಕಿ ಮಾತುಕತೆ ನಡೆಸುತ್ತಿದ್ದಾರೆ. ದಿಗ್ಗಜ ಕಂಪನಿಗಳಾದ ಗೂಗಲ್, ಬೋಯಿಂಗ್, ಐಬಿಎಂ, ಗೋಲ್ಡ್ಮನ್ ಸ್ಯಾಚ್, ಮಾಸ್ಟರ್ ಕಾರ್ಡ್, ಪೆಪ್ಸಿ ಕೋ., ಸಿಟಿ ಗ್ರೂಪ್, ಕಾರ್ಲೆ ಗ್ರೂಪ್, ಕಾರ್ಗಿಲ್ ಕಂಪನಿ , ಮೆರ್ಕ್, ಕ್ಯಾಟರ್ಪಿಲ್ಲರ್, ಜನರಲ್ ಎಲೆಕ್ಟ್ರಿಕಲ್, ಕೋಲ್ಬರ್ಗ್ ಕ್ರಾವಿಸ್ ರೊಬಟ್ರ್ಸ್ ಹೀಗೆ ನೂರಾರು ಕಂಪನಿಗಳ ಮುಖ್ಯಸ್ಥರ ಜತೆ ಮೋದಿ ಮುಖಾಮುಖಿ ಮಾತುಕತೆಗೇ ಬಹುಪಾಲು ಸಮಯ ಮೀಸಲಿಟ್ಟಿದ್ದಾರೆ. ಹಾಗೇ ಮಾಡದೇ ಹೋದರೆ ಮೋದಿ ಅಂದುಕೊಂಡ ಹಾಗೆ ದೇಶದೊಳಕ್ಕೆ ಬಂಡವಾಳ ಹರಿದು ಬರಲು ಸಾಧ್ಯವಿಲ್ಲ. ಆರ್ಥಿಕ ಬೆಳವಣಿಗೆಗೆ ಅಂದುಕೊಂಡಷ್ಟು ವೇಗ ಸಿಗಲು ಸಾಧ್ಯವಿಲ್ಲ. ಅಮೆರಿಕ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಲಾಭದ ಪಾಲು ನಮಗೆ ದಕ್ಕಲಿಕ್ಕಿಲ್ಲ. `ಮೇಕ್ ಇನ್ ಇಂಡಿಯಾ’ದಂತಹ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ಸಿನ ದಡ ಸೇರುವುದಿಲ್ಲ.

ಗುರಿ ತಲುಪುವುದು ಅಂದುಕೊಂಡಷ್ಟು ಸುಲಭವೇ? `ಮೇಕ್ ಇನ್ ಇಂಡಿಯಾ’ ಯೋಜನೆ ಯಶಸ್ಸಿಗೆ ಕಳೆದ ಹತ್ತು ವರ್ಷಗಳಿಂದ ತೆವಳುತ್ತಿರುವ ಶೇ.2ರ ಉತ್ಪಾದನಾ ಬೆಳವಣಿಗೆ ದರವನ್ನು ಶೇ.10ಕ್ಕೆ ಜಿಗಿಸಬೇಕಿದೆ. ಅದಾಗಬೇಕಾದರೆ ದೇಶದ ಜಿಡಿಪಿಯ ಸರಾಸರಿ ಶೇ.38ರಷ್ಟು ವಿದೇಶಿ ಬಂಡವಾಳವನ್ನು ಭಾರತದೊಳಕ್ಕೆ ಹರಿಸುವುದನ್ನು ಬಿಟ್ಟರೆ ಬೇರೆ ಉಪಾಯವೇ ಇಲ್ಲ. ಹಳೆಯದೆಲ್ಲವನ್ನೂ ಮರೆತು ಹೊಸ ಅಧ್ಯಾಯ ಬರೆಯಲು ಹೊರಟ ಮೋದಿ ಈ ಕಾರ್ಯವನ್ನು ಸಾಧಿಸಬಲ್ಲರು ಎಂದು ಆಶಿಸೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top