ಸುರಕ್ಷಿತವಾಗಿರಲಿ ಮರುವಲಸೆ – ಸ್ಥಳೀಯರು ವೃತ್ತಿ ಕೌಶಲ ಮೆರೆಯಬೇಕು

ಲಕ್ಷಾಂತರ ವಲಸೆ ಕಾರ್ಮಿಕರಿಗೆ ನೆಲೆ ನೀಡಿದ್ದ ರಾಜಧಾನಿ ಬೆಂಗಳೂರಿನತ್ತ ಮತ್ತೆ ಮರು ವಲಸೆ ಪರ್ವ ಆರಂಭವಾಗಿದೆ. ಇವರೆಲ್ಲ ಲಾಕ್‌ಡೌನ್‌ ಸಂದರ್ಭದಲ್ಲಿ ಉಂಟಾದ ದುಡಿಮೆ ನಷ್ಟ, ಹಸಿವುಗಳಿಂದ ಕಂಗೆಟ್ಟು ತಂತಮ್ಮ ಗ್ರಾಮಗಳತ್ತ ತೆರಳಿದ್ದವರು. ಈಗಾಗಲೇ ಜೂನ್ 1ರಿಂದ ಹಲವು ಉದ್ಯಮಗಳನ್ನು ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ನಿರೀಕ್ಷೆಗೂ ಮೊದಲೇ ಉದ್ದಿಮೆಗಳು ಮತ್ತೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇವರು ಮರಳಿ ಬರಲು ಸಿದ್ಧರಾಗಿದ್ದಾರೆ. ಇವರ ಮರುವಲಸೆಯ ಸಂದರ್ಭದಲ್ಲಿ ಕೋಲಾಹಲ, ಗೊಂದಲ ಉಂಟಾಗಿತ್ತು. ಅಂಥದೊಂದು ಬಿಕ್ಕಟ್ಟು ಮತ್ತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರಕಾರ ಸೇರಿದಂತೆ ನಮ್ಮೆಲ್ಲರ ಹೊಣೆಯಾಗಿದೆ.
ಯಾವುದೇ ದೇಶ ಅಥವಾ ರಾಜ್ಯ ವಲಸೆ ಕಾರ್ಮಿಕರಿಲ್ಲದೆ ಇರಲು ಸಾಧ್ಯವಿಲ್ಲ. ನಮ್ಮ ರಾಜ್ಯದ, ದೇಶದ ಒಟ್ಟಾರೆ ವ್ಯವಹಾರ, ಆದಾಯ, ಜಿಡಿಪಿಯಲ್ಲಿ ವಲಸೆ ಕಾರ್ಮಿಕರ ಪಾಲು ಸಾಕಷ್ಟು ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಉದ್ಯೋಗಗಳು ಇಲ್ಲವಾದ್ದರಿಂದ ಇವರು ಪೇಟೆ ಸೇರಿಕೊಳ್ಳುತ್ತಾರೆ. ಉತ್ತರ ಭಾರತದವರು ಕರ್ನಾಟಕಕ್ಕೆ ಬಂದಂತೆ, ಉತ್ತರ ಕರ್ನಾಟಕದವರು ಬೆಂಗಳೂರಿಗೆ ಬರುತ್ತಾರೆ. ಮುಂಬಯಿ, ಗೋವಾಗೆ ತೆರಳುವ ಉತ್ತರ ಕರ್ನಾಟಕದ ವಲಸಿಗರೂ ಸಾಕಷ್ಟಿದ್ದಾರೆ. ಕೋವಿಡ್‌ನ  ಆತಂಕದಲ್ಲಿ ಊರು ಸೇರಲು ಹೊರಟ ಇವರ ನಿರ್ಧಾರ ಶುದ್ಧ ಭಾವುಕತೆಗೆ ಸಂಬಂಧಿಸಿದ್ದು. ಆದರೆ ಈಗ ಮರಳಿ ಕಾಯಕದ ತಾಣಕ್ಕೆ ಮರಳಲು ಮುಂದಾಗಿರುವುದು ಹೊಟ್ಟೆಪಾಡಿಗೆ ಸಂಬಂಧಿಸಿದ್ದು. ವಲಸೆ ಕಾರ್ಮಿಕರನ್ನು ನಂಬಿಕೊಂಡಿರುವ ಉದ್ಯಮಗಳು ಅನೇಕ ಇವೆ. ಕಟ್ಟಡ ನಿರ್ಮಾಣ, ಗಾರ್ಮೆಂಟ್, ಹೋಟೆಲ್ ವಲಯ ಇತ್ಯಾದಿ. ಇವೆಲ್ಲವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಾದರೆ ಇವರೆಲ್ಲ ಮರಳಲೇಬೇಕಿದೆ. ಹೀಗಾಗಿ ಪ್ರಸ್ತುತ ವಲಸೆ ಪ್ರಕ್ರಿಯೆ ಸುಗಮವಾಗಿ, ಸುರಕ್ಷಿತವಾಗಿ ನಡೆಯವಂತೆ ಸರಕಾರ ಆಸ್ಥೆ ವಹಿಸಬೇಕು. ಸುರಕ್ಷತಾ ಕ್ರಮಗಳನ್ನಂತೂ ತೆಗೆದುಕೊಳ್ಳಲೇಬೇಕು. ಸರಕಾರಿ ಸಾರಿಗೆ ಸಂಪರ್ಕ ಇನ್ನೂ ಸರಿಯಾಗಿ ಆರಂಭವಾಗಿಲ್ಲ. ಅದನ್ನು ಸಂಪೂರ್ಣ ಹಳಿಗೆ ತರಬೇಕು. ಇಲ್ಲವಾದರೆ ಅದು ಖಾಸಗಿಯವರ ಸುಲಿಗೆಗೆ ಕಾರಣವಾಗುತ್ತದೆ.
ಇದೇ ಸಂದರ್ಭದಲ್ಲಿ ನಮ್ಮ ಕಟ್ಟಡ ನಿರ್ಮಾಣ ಮುಂತಾದ ವಲಯಗಳಲ್ಲಿ ದುಡಿಯುತ್ತಿದ್ದ ದೊಡ್ಡ ಸಂಖ್ಯೆಯ ಬಿಹಾರ, ಉತ್ತರ ಪ್ರದೇಶದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಅವರು ದುಡಿಯುತ್ತಿದ್ದ ಕ್ಷೇತ್ರಗಳಲ್ಲಿ ಒಂದು ಬಗೆಯ ನಿರ್ವಾತ ತುಂಬಿದೆ. ನಾವು ಅವರನ್ನೇ ನಂಬಿಕೊಂಡಿರಬೇಕಾದ ಅನಿವಾರ್ಯತೆಯೇನೂ ಇಲ್ಲ. ಕನ್ನಡಿಗರೇನೂ ಅಕುಶಲಿಗಳಲ್ಲ. ಮುಂಬಯಿ ಹಾಗೂ ಗೋವಾಗಳಿಗೆ ತೆರಳಿ ತಮ್ಮ ಕೌಶಲ ತೋರುವ ಕನ್ನಡಿಗರು ಸಾಕಷ್ಟಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ, ಕುಶಲಿಗಳಾದ ಯುವಕರು ಸೂಕ್ತ ಉದ್ಯೋಗ ದೊರೆಯದೆ ಇದ್ದಾರೆ. ಅಂಥವರನ್ನು ಕರೆಸಿ ಈ ವಲಯಗಳಲ್ಲಿ ದುಡಿಮೆಗೆ ತೊಡಗಿಸಲು ಇದು ಸಕಾಲ. ಇದು, ಬಿಹಾರ ಮತ್ತು ಯುಪಿಗಳಿಂದ ನಮ್ಮಲ್ಲಿಗೆ ಮರುವಲಸೆ ಆರಂಭವಾಗುವ ಮುನ್ನವೇ ನಡೆಯಬೇಕು. ಈ ಕುರಿತು ಸರಕಾರ ಸರಿಯಾಗಿ ಚಿಂತಿಸಿ ಒಂದು ಯೋಜನೆ ರೂಪಿಸಬೇಕು. ಕನ್ನಡಿಗ ಕಾರ್ಮಿಕರಿಗೆ ಹೆಚ್ಚಾಗಿ ಉದ್ಯೋಗ ನೀಡುವ ಸಂಸ್ಥೆಗಳಿಗೆ ವಿಶೇಷ ಸೌಲಭ್ಯಗಳಂಥ ಆಕರ್ಷಕ ಪ್ಯಾಕೇಜ್‌ಗಳನ್ನು ಘೋಷಿಸಬಹುದು. ಇದರಿಂದ ನಮ್ಮ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿವಾರಿಸಬಹುದು. ನಮ್ಮ ರಾಜ್ಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಎಂದಿನಿಂದಲೂ ಇದ್ದದ್ದೇ. ಇದೊಂದು ಉನ್ನತ ಆಶಯ ಈಡೇರದೆ ಉಳಿದುಕೊಂಡಿದೆ. ಕೊರೊನಾ ಉಂಟುಮಾಡಿರುವ ಬಿಕ್ಕಟ್ಟನ್ನು ನಮಗೆ ವರವಾಗಿ ಪರಿವರ್ತಿಸಿಕೊಳ್ಳಲು ಇದು ಸಕಾಲ. ಕನ್ನಡಿಗರು ಕೂಡ ಈ ಸಂದರ್ಭವನ್ನು ತಮ್ಮ ಬೆಳವಣಿಗೆಗಾಗಿ ಬಳಸಿಕೊಳ್ಳುವುದು, ವೃತ್ತಿಪರವಾಗಿ ಮೇಲೆ ಬರುವುದು ಅಪೇಕ್ಷಣೀಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top