ಅತೃಪ್ತಿ, ಗೊಂದಲ ಸಲ್ಲ – ಅಸಮಾಧಾನಕ್ಕೆ ಕಾರಣವಾದ ನಿಗಮ/ಮಂಡಳಿ ನೇಮಕ

ವಿಚಿತ್ರ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಇದೀಗ ಒಂದು ಸಂವತ್ಸರವನ್ನು ಪೂರೈಸಿ, ಮುನ್ನಡೆಯುತ್ತಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದಡಿ ಇಡುತ್ತಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರ್ನಾಟಕದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಯಿತು. ಅನೇಕರು ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದರು. ರಾಜಕೀಯ ಕಾರಣಕ್ಕೆ ಸಂಪುಟ ವಿಸ್ತರಣೆಯಾಗುವುದು ವಿಳಂಬವಾದಾಗ ಸಿಎಂ ಏಕಾಂಗಿಯಾಗಿ ಪರಿಸ್ಥಿತಿ ನಿರ್ವಹಣೆ ಮಾಡಿದರು. ಪ್ರವಾಹ ಸಂಕಷ್ಟದ ಬಳಿಕ, ಶಾಸಕರ ಅರ್ಹತೆ, ಅನರ್ಹತೆಗೆ ಸಂಬಂಧಿಸಿ ಕಾನೂನು ಸಂಘರ್ಷ, ಹೊಯ್ದಾಟ ಹಲವು ತಿಂಗಳುಗಳವರೆಗೆ ನಡೆಯಿತು. ಕಾನೂನು ಸಂಘರ್ಷದ ತರುವಾಯ ಶಾಸಕರ ರಾಜೀನಾಮೆಯಿಂದ ತೆರವುಗೊಂಡ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಯಿತು; ಚುನಾವಣೆ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಸವಾಲು ಎದುರಾಯಿತು. ಎಲ್ಲವೂ ಮುಗಿದು ಇನ್ನೇನು ಆಡಳಿತ ಯಂತ್ರ ಸುಸೂತ್ರವಾಗಿ ಸಾಗಲಿದೆ ಎಂಬಷ್ಟರಲ್ಲೇ ಈ ಕೊರೊನಾ ಸಾಂಕ್ರಾಮಿಕ ರಾಜ್ಯಕ್ಕೂ ವ್ಯಾಪಿಸಿತು. ಒಟ್ಟಿನಲ್ಲಿ ಕಳೆದ ಐದಾರು ತಿಂಗಳಿನಿಂದ ರಾಜ್ಯದ ಜನ ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾ ಪೂರ್ವ ಸ್ಥಿತಿಗೆ ಮರಳುವುದು ಮರೀಚಿಕೆಯಂತೆ ಕಾಡತೊಡಗಿದೆ. ಮುಂದಿನ ಆರು ತಿಂಗಳವರೆಗೂ ಜನಜೀವನ ಸಹಜತೆಗೆ ಮರಳಲಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ರಾಜ್ಯ ಸರಕಾರ ತನ್ನ ಇತಿ ಮಿತಿಯಲ್ಲಿ ಸಾಂಕ್ರಾಮಿಕವನ್ನು ಎದುರಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ವಾಸ್ತವಿಕವಾಗಿ ಅದು ಸಾಕಾಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಇಂಥ ಹೊತ್ತಿನಲ್ಲೇ ನಿಗಮ/ಮಂಡಳಿಗಳಿಗೆ ನೇಮಕ, ಸಂಪುಟ ವಿಸ್ತರಣೆ ಊಹಾಪೋಹಗಳು ರಾಜ್ಯದಲ್ಲಿ ಹೊಸ ಗೊಂದಲವನ್ನು ಸೃಷ್ಟಿಸಿದೆ.
ರಾಜ್ಯದ ಜನರು ಕೊರೊನಾ ಭೀತಿಯಿಂದ ಪರದಾಡುತ್ತಿರುವಾಗ ನಿಗಮ/ಮಂಡಳಿ ನೇಮಕ ಸೃಷ್ಟಿಸಿರುವ ಅತೃಪ್ತಿಯ ಹೊಗೆಯು ಪ್ರಸಕ್ತ ಸ್ಥಿತಿಯನ್ನು ಅಣಕಿಸುವಂತಿದೆ. ಅದರರ್ಥ ರಾಜಕಾರಣಿಗಳಿಗೆ ಯಾವಾಗಲೂ ತಮ್ಮ ಅಧಿಕಾರದ ಚಿಂತೆಯೇ ಇರುತ್ತದೆ. ಯಾವುದೇ ಸಮಯ, ಸಂದರ್ಭವಾಗಿರಲಿ ಅವರಿಗೆ ಲೆಕ್ಕಕ್ಕೇ ಬರುವುದಿಲ್ಲ ಎಂಬ ಅಪವಾದದ ಮಾತುಗಳಿಗೆ ಇಂಬು ನೀಡುವಂತಿದೆ.
ವಾಸ್ತವದಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿಲ್ಲ ಎಂಬುದನ್ನು ಎಲ್ಲರಿಗೂ ಗೊತ್ತಿರುವ ಸಂಗತಿ. ವೆಚ್ಚ ಕಡಿತದಂಥ ಕ್ರಮಗಳಿಗೆ ಸರಕಾರ ಈಗಾಗಲೇ ಮುಂದಾಗಿದೆ. ಈ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ. ಹಾಗಿರುವಾಗ ನಿಗಮ/ಮಂಡಳಿಗಳಿಗೆ ನೇಮಕವೇ ವೆಚ್ಚ ಕಡಿತದ ಉದ್ದೇಶವನ್ನು ಪ್ರಶ್ನಿಸುವಂತಿದೆ! ರಾಜಕೀಯ ಕಾರಣಕ್ಕೆ ನೇಮಕಗಳನ್ನು ಮಾಡಲಾಗಿದೆಯೋ ಅಥವಾ ಸುಗಮ ಆಡಳಿತ ಕಾರಣಕ್ಕಾಗಿ ಮಾಡಲಾಗಿದೆಯೇ ಎಂಬ ಮಾರ್ಮಿಕ ಪ್ರಶ್ನೆಗಳು ಏಳುತ್ತಿವೆ. ಸರಕಾರಕ್ಕೆ ‘ಬಿಳಿಯಾನೆ’ಗಳಾಗಿರುವ ಈ ನಿಗಮ/ಮಂಡಳಿಗಳನ್ನು ನಿರ್ವಹಿಸುವುದೇ ಈಗಿನ ಸಂದರ್ಭದಲ್ಲಿ ಸವಾಲಾಗಿದೆ. ಹಾಗಿದ್ದೂ, ಅವುಗಳಿಗೆ ನೇಮಕವಾದವರೂ ಅಸಮಾಧಾನ, ಅತೃಪ್ತಿಯ ಮಾತುಗಳನ್ನಾಡಿ ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸುವುದು ವಿವೇಚನೆಯ ನಡೆ ಆಗಲಾರದು.
ರಾಜ್ಯ ಒಂದು ರೀತಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಇಂಥ ಸಂದರ್ಭದಲ್ಲಿ ರಾಜಕಾರಣವೇ ಪ್ರಧಾನ ಗುರಿಯಾದರೆ ಸಾಂವಿಧಾನಿಕ ಸಂಸ್ಥೆಗಳ ಗೌರವ ಹಾಳಾಗುತ್ತದೆ, ಜನರ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ಅರಿಯುವುದು ಒಳ್ಳೆಯದು. ಪ್ರಮುಖ ನಿಗಮ ಮಂಡಳಿಗಳಿಗೆ ಅಗತ್ಯಕ್ಕೆ ತಕ್ಕಂತೆ ನೇಮಕಗಳಾಗಲಿ, ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಆಗಲಿ. ಆದರೆ ಅದರಿಂದ ಆಡಳಿತ ವ್ಯವಸ್ಥೆ ಮತ್ತ ಹಳಿ ತಪ್ಪದಂತೆ ನೋಡಿಕೊಳ್ಳುವುದು ಅಗತ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top