ಸ್ವರಾಜ್ಯ ಚಳವಳಿಯ ಪ್ರಾಣಶಕ್ತಿ ಲೋಕಮಾನ್ಯ ತಿಲಕ್‌

ಸ್ವದೇಶಿ ಕಲ್ಪನೆಯನ್ನು ಜನರೆದೆಯಲ್ಲಿ ಬಿತ್ತಿದ ಮಹಾಸ್ವಾಭಿಮಾನಿಗೆ ಶತಮಾನ.

– ಡಾ.ರೋಹಿಣಾಕ್ಷ ಶಿರ್ಲಾಲು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮೆಲುಕು ಹಾಕಿದರೆ ನಮ್ಮ ಕಣ್ಮುಂದೆ ಹಾದುಹೋಗುವ ವ್ಯಕ್ತಿತ್ವಗಳು ನೂರಾರು. ಒಬ್ಬೊಬ್ಬರೂ ಮಹಾನ್‌ ನಾಯಕರೇ. ಗುಲಾಮಿತನ ಎನ್ನುವುದು ರಕ್ತಗತವಾಗಿ, ದಾಸ್ಯಕ್ಕೆ ಒಡ್ಡಿಕೊಂಡು ವಿಸ್ಮೃತಿಗೊಳಗಾಗಿ ಕರಿಚರ್ಮದ ಬ್ರಿಟಿಷರಂತೆ ಬದುಕುತ್ತಿದ್ದ ಭಾರತೀಯರ ಎದೆಯೊಳಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚುವಂತೆ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ’ ಎಂದು ಸಿಂಹಘರ್ಜನೆ ಮಾಡಿದ ‘ಲೋಕಮಾನ್ಯ’ರ ಶತಮಾನದ ಸ್ಮೃತಿದಿನ ಇಂದು. 1920 ಆಗಸ್ಟ್‌ 1ರಂದು ನಿಧನರಾದ ಬಾಲಗಂಗಾಧರ ತಿಲಕರನ್ನು ಒಂದು ಶತಮಾನದ ಬಳಿಕ ನೆನಪಿಸಿಕೊಂಡಾಗಲೂ ಮೈರೋಮಾಂಚನಗೊಳ್ಳುತ್ತದೆ.
1857ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಭಾರತದ ನೆಲದಲ್ಲಿ ಬ್ರಿಟಿಷ್‌ ದಾಸ್ಯದ ವಿರುದ್ಧ ಸೆಟೆದು ನಿಂತ ಧೀಮಂತರಲ್ಲಿ ತಿಲಕರು ಅಗ್ರಗಣ್ಯರು. ಅನ್ವರ್ಥವಾಗಿ ಅವರನ್ನು ‘Father of Indian freedom struggle’ ಎಂದೇ ಕರೆಯಲಾಗಿದೆ. ತಿಲಕರದ್ದು ಸಂಪೂರ್ಣ ರಾಷ್ಟ್ರ ಸಮರ್ಪಿತ ಬದುಕು. ತನ್ನ ರಕ್ತ ಮಾಂಸವನ್ನು ದೇಶಕ್ಕಾಗಿಯೇ ಸವೆಸಿದರು. ಸ್ವಾತಂತ್ರ್ಯಪೂರ್ವ ಭಾರತದ ನಿರ್ಭೀತ ರಾಜಕೀಯ ನಾಯಕ. ಇನ್ನೂ ದೇಶದಲ್ಲಿ ಸ್ವರಾಜ್ಯದ ಬೇಡಿಕೆಗೆ ಸ್ಪಷ್ಟ ರೂಪ ಮೂಡುವ ಮೊದಲೇ ತಿಲಕರು ಸ್ವರಾಜ್ಯವನ್ನು ಜನ್ಮಸಿದ್ಧ ಹಕ್ಕಾಗಿ ಪ್ರತಿಪಾದಿಸಿದರು. ಸ್ವದೇಶಿ ಎನ್ನುವ ಕಲ್ಪನೆಯನ್ನು ಜನರೆದೆಯಲ್ಲಿ ಬಿತ್ತಿ ವಿದೇಶಿ ಬಹಿಷ್ಕಾರಕ್ಕೆ ಕರೆನೀಡಿದ, “”He was the first Indian who recognised that no imperialism is altruistic ”( Dhananjay keer) ಮನ್ನಣೆಗೆ ಒಳಗಾದ ನಾಯಕ. ಸಾಮ್ರಾಜ್ಯಶಾಹಿಯ ಸ್ತಂಭಗಳನ್ನು ಧರಾಶಾಯಿಯಾಗಿಸಲು ತಿಲಕರು ತನ್ನನ್ನು ಸಮರ್ಪಿಸಿಕೊಂಡಿದ್ದರು. ಅದಕ್ಕಾಗಿಯೇ ತಮ್ಮ ಲೇಖನಿ ಮತ್ತು ಪತ್ರಿಕೆಗಳನ್ನು ಸಾಧನವಾಗಿ ಬಳಸಿಕೊಂಡು ಯುವಜನರ ಚೈತನ್ಯವನ್ನು ಬಡಿದೆಬ್ಬಿಸಿದರು. ಇದೇ ಕಾರಣಕ್ಕೆ ‘ದೇಶದ್ರೋಹ’ದ ಆರೋಪದಡಿಯಲ್ಲಿ ದೇಶದ ಗಡಿಯಾಚೆಗೆ ಬರ್ಮಾದ ಮಾಂಡಲೆಯ ಜೈಲಿನೊಳಗೆ ಬದುಕಿನ ಬಹು ಅಮೂಲ್ಯ ವರ್ಷಗಳನ್ನು ಕಳೆಯಬೇಕಾಯಿತು. ಆದರೆ ಏಕಾಂತದಲ್ಲಿ ಜೀವಮಾನದ ಶ್ರೇಷ್ಠ ಕೃತಿ ‘ಗೀತಾ ರಹಸ್ಯ’ ರೂಪು ಪಡೆಯಿತು.
ಹತ್ತೊಂಬತ್ತನೇ ಶತಮಾನ ಎಂದರೆ ಭಾರತದ ಸಾಮಾಜಿಕ ಸುಧಾರಣೆಯ ಮಹಾಪರ್ವಕಾಲ. ಅದರಲ್ಲೂ ಮಹಾರಾಷ್ಟ್ರ ಸುಧಾರಕರ ತವರು ನೆಲ. ಅಗರ್ಕರ್‌, ರಾನಡೆ, ಚಿಪ್ಲೂಣ್‌ಕರ್‌, ಫುಲೆ, ಅಂಬೇಡ್ಕರ್‌, ಸಾವರ್ಕರ್‌ರಂಥ ಮಹಾನ್‌ ಸಾಧಕರಿಗೆ ಜನ್ಮ ನೀಡಿದ ನೆಲದಲ್ಲೆ ತಿಲಕರು ಹುಟ್ಟಿದರು. ಸಮಕಾಲೀನ ಸಮಾಜ ಸುಧಾರಕರಿಗೆ ಹೋಲಿಸಿದರೆ ತಿಲಕರದ್ದು ಸ್ವಲ್ಪ ಭಿನ್ನಮಾರ್ಗ. ಒಂದೇ ಕಾಲಘಟ್ಟದಲ್ಲಿ , ಪರಸ್ಪರ ಜತೆಗೆ ಬದುಕಿದ ಅಗರ್‌ಕರ್‌, ರಾನಡೆ ಮತ್ತು ತಿಲಕರ ನಡುವೆ ಸಾಮಾಜಿಕ ಸುಧಾರಣೆಯ ಮಾದರಿಯ ಕುರಿತಾಗಿ ನಡೆದ ಚರ್ಚೆ ಬಹುಶಃ ಆಧುನಿಕ ಭಾರತದ ಸಾಮಾಜಿಕ ವ್ಯವಸ್ಥೆಯ ಅಧ್ಯಯನಕಾರರಿಗೆ ಒಂದು ಅಪೂರ್ವ ದಾಖಲೆ. ಆಗತಾನೆ ಆಧುನಿಕ ಶಿಕ್ಷಣ ಪಡೆದುಕೊಂಡ ಹೊಸ ತಲೆಮಾರೊಂದು ವೈಚಾರಿಕ ಕ್ರಾಂತಿಯ ಆಶಯದಿಂದ ಸಮಾಜದಲ್ಲಿ ರೂಢಿಯಲ್ಲಿದ್ದ ಅನೇಕ ಆಚರಣೆಗಳು, ಪದ್ಧತಿಗಳು ಹೇಗೆ ಅಸಮಾನತೆಗೆ, ಜಾತಿ – ಲಿಂಗ ತಾರತಮ್ಯಕ್ಕೆ ಕಾರಣವಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತಲೇ ಸಮಾಜ ಅಂತಹ ಕುರೂಢಿಗಳಿಂದ ಮುಕ್ತವಾಗಬೇಕೆನ್ನುವ ಒತ್ತಾಯ ಕೇಳಿಬರುತ್ತಿದ್ದ ಸಂದರ್ಭದಲ್ಲಿ ತಿಲಕರು ಬೇರೊಂದು ದಾರಿಯನ್ನು ತುಳಿಯುತ್ತಾರೆ. ಅಂದಿನ ಸಂದರ್ಭದಲ್ಲಿ ಹಿಂದೂ ಸಮಾಜದಲ್ಲಿದ್ದ ಬಾಲ್ಯವಿವಾಹ, ವಿಧವಾ ಪುನರ್ವಿವಾಹ ತಡೆ, ಸತಿ ಸಹಗಮನ ಮೊದಲಾದ ಕಾಲಬಾಹಿರ ನಡವಳಿಕೆಗಳನ್ನು ಬ್ರಿಟಿಷ್‌ ಸರಕಾರವು ಸುಧಾರಕರ ಒತ್ತಾಯದಂತೆ ನಿಷೇಧಿಸುತ್ತಿದ್ದ ಸಂದರ್ಭದಲ್ಲಿ, ತಿಲಕರು ಸುಧಾರಣೆಯು ಹೊರಗಿನಿಂದ ಅಥವಾ ಕಾನೂನು ವಿಧಿಸಿದ ಒತ್ತಾಯದಿಂದ ನಡೆಯುವ ಬದಲು ಸಮುದಾಯ/ಸಮಾಜಗಳ ಒಳಗಿನಿಂದಲೆ ರೂಪು ಪಡೆಯುವಂತಾಗಬೇಕು ಎನ್ನುತ್ತಿದ್ದರು. ಹೀಗಾಗಿ ಕಾನೂನುಗಳ ಮೂಲಕ ನಿಷೇಧಿಸುವ ನಡವಳಿಕೆಗಳ ಹಿಂದೆ ಬ್ರಿಟಿಷ್‌ ಪ್ರೇರಿತ ಕ್ರೈಸ್ತೀಕರಣದ ದುರುದ್ದೇಶವನ್ನು ಗುರುತಿಸಿ, ಇದು ಪರಕೀಯ ಬ್ರಿಟಿಷ್‌ ಸರಕಾರಕ್ಕೆ ಭಾರತೀಯರ ಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ರಮದ ಮೇಲೆ ಮಧ್ಯೆ ಪ್ರವೇಶಿಸಲು ಅವಕಾಶ ನೀಡಿದಂತಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರಿ ಹಸ್ತಕ್ಷೇಪವನ್ನು ವಿರೋಧಿಸುತ್ತಾರೆ.
ತಿಲಕರ ಆದ್ಯತೆ ಮೊದಲು ರಾಜಕೀಯ ಸುಧಾರಣೆಯಾಗಬೇಕು. ಸ್ವರಾಜ್ಯದ ಬೆಳಕಿನಲ್ಲಿ ಭಾರತದ ಸಾಮಾಜಿಕ ಸುಧಾರಣೆ ನಡೆಯುವಂತಾಗಬೇಕು. ವಿದೇಶಿ ಸರಕಾರದಡಿಯಲ್ಲಿ ಸಾಮಾಜಿಕ ಸುಧಾರಣೆಗಾಗಿ ರಾಜಕೀಯ ಪರಕೀಯತೆಯನ್ನು ಒಪ್ಪಿಕೊಳ್ಳಲಾಗದು ಎನ್ನುವುದು ತಿಲಕರ ವಾದವಾಗಿತ್ತು. ಬ್ರಿಟಿಷ್‌ ಮಾದರಿಯ ಶಿಕ್ಷಣ, ಸಮಾಜ ಸುಧಾರಣೆ, ರಾಜಕೀಯ ಪರಿಭಾಷೆ ಭಾರತೀಯ ಸಮಾಜವನ್ನು ಬೌದ್ಧಿಕವಾಗಿ ಆವರಿಸಿಕೊಳ್ಳುತ್ತದೆ. ಜನ ಬ್ರಿಟಿಷ್‌ ಆಳ್ವಿಕೆಯನ್ನು ಆರಾಧನೆಯ ಭಾವದಿಂದ ನೋಡುವಂತಾಗುತ್ತದೆ ಎನ್ನುವ ಕಾರಣದಿಂದ ತಿರಸ್ಕರಿಸಿ, ರಾಜಕೀಯ ಪಾರತಂತ್ರ್ಯದಿಂದ ಪಡೆಯುವ ಬಿಡುಗಡೆಯೇ ಸಾಮಾಜಿಕ ಸುಧಾರಣೆಗಳ ಅಡಿಪಾಯವಾಗಬೇಕು. ಸುಧಾರಣೆಯನ್ನು ವಿದೇಶಿ ಸರಕಾರವೊಂದು ಮಾಡಬೇಕಾಗಿಲ್ಲ, ಸುಧಾರಣೆಯು ಕ್ರೈಸ್ತೀಕರಣದ ಸಾಧನವಾಗದಂತೆ ತಡೆಯಬೇಕು ಎನ್ನುವುದು ತಿಲಕರ ಚಿಂತನೆಯಾಗಿತ್ತು. “”He asserted that a foreign Government should not trusted with the power of making social changes. In his view social conditions could not be improved until political conditions were bettered”” (Dhananjay Keer) ಎಂದು ಗುರುತಿಸುತ್ತಾರೆ. ಜತೆಗೆ “”In short it was the confirmed belief of the opponents on India’s inferiority, they were trying to imitate English life, diet,and habits.They wished to westernise India . . . Instead of fighting for their political independence they were pining for social reforms !” ಎಂದು ಹೇಳುವ ಜೀವನಚರಿತ್ರೆಕಾರರ ಮಾತಿನಲ್ಲಿ ಸತ್ಯಾಂಶವಿದೆ.
ಗುಲಾಮಗಿರಿಯನ್ನು ಸಹಜಗೊಳಿಸುವ ಬ್ರಿಟಿಷ್‌ ಮಾದರಿಯ ಶಿಕ್ಷಣಕ್ಕಿಂತ ಭಿನ್ನವಾಗಿ ಶಿಕ್ಷಣಕ್ಕೆ ರಾಷ್ಟ್ರೀಯತೆಯ ಸ್ಪರ್ಶ ನೀಡುವ ಉದ್ದೇಶದಿಂದ ಡೆಕ್ಕನ್‌ ಎಜುಕೇಷನಲ್‌ ಸೊಸೈಟಿಯನ್ನು ಸ್ಥಾಪಿಸುತ್ತಾರೆ. ಗಣಿತ ಮತ್ತು ಸಂಸ್ಕೃತದಲ್ಲಿ ಶ್ರೇಷ್ಠ ಶಿಕ್ಷಕರೂ, ವಿದ್ವಾಂಸರೂ ಆಗಿದ್ದ ತಿಲಕರು ಮುಂದೆ ಪತ್ರಕರ್ತರಾಗುತ್ತಾರೆ. ‘ಕೇಸರಿ’ ಮತ್ತು ‘ಮರಾಠಾ’ ಎನ್ನುವ ಮರಾಠಿ ಮತ್ತು ಇಂಗ್ಲಿಷ್‌ ಭಾಷೆಯ ಪತ್ರಿಕೆಗಳನ್ನು ಸ್ಥಾಪಿಸಿ ಅದನ್ನು ಜನಜಾಗರಣದ ಮಾಧ್ಯಮವಾಗಿಸಿಕೊಳ್ಳುತ್ತಾರೆ. ಬ್ರಿಟಿಷ್‌ ಆಳ್ವಿಕೆಯ ಮೋಸ, ಕಪಟತನವನ್ನು ಜನರಿಗೆ ತಿಳಿಸುತ್ತಲೆ ಹೋರಾಟದ ಪ್ರೇರಣೆಯನ್ನೂ ನೀಡುತ್ತಾರೆ. ತಿಲಕರ ಹೆಸರು ಕೇಳುತ್ತಲೇ ಮನಸಿನಲ್ಲಿ ಮೂಡುವ ಚಿತ್ರಣವೆಂದರೆ ಅವರು ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳು. ತಿಲಕರಿಗೆ ದೇಶಾದ್ಯಂತ ಜನ ಮನ್ನಣೆಯನ್ನು ತಂದು ಕೊಟ್ಟ ಆಚರಣೆಗಳಿವು. ಭಾರತೀಯರ ಸಾಂಸ್ಕೃತಿಕ ನಾಡಿಮಿಡಿತವನ್ನು ಚೆನ್ನಾಗಿಯೇ ಅಥೈರ್‍ಸಿಕೊಂಡಿದ್ದ ತಿಲಕರಿಗೆ ಬ್ರಿಟಿಷ್‌ ವಿರುದ್ಧ ಭಾರತೀಯರಲ್ಲಿ ಜಾಗೃತಿಯನ್ನು ಮೂಡಿಸಲು ಧಾರ್ಮಿಕ ಸ್ವರೂಪದ ಉತ್ಸವಗಳೇ ಸಾಧನವಾಗಬಲ್ಲುದೆನ್ನುವ ಅರಿವಿತ್ತು. ಕೆಲವೇ ವರ್ಷಗಳಲ್ಲಿ ದೇಶಾದ್ಯಂತ ವಿಸ್ತರಿಸಿದ ಈ ಉತ್ಸವ ಜಾತಿ ಮತಗಳಾಚೆಗೆ ಭಾರತೀಯರನ್ನು ಬೆಸೆಯಿತು, ಬ್ರಿಟಿಷ್‌ ಆಳರಸರ ಕ್ರೌರ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸಿತು. ದೇಶದೆಲ್ಲೆಡೆ ವಸಾಹತುಶಾಹಿ ವಿರುದ್ಧ ಪ್ರಬಲವಾದ ಪ್ರತಿರೋಧದ ಭಾವನೆಯು ಮೂಡಲಾರಂಭಿಸಿತು. ಶಿವಾಜಿಯ ಸ್ಮರಣೆ ಮತ್ತೊಮ್ಮೆ ಕ್ಷಾತ್ರ ತೇಜಸ್ಸಿನ ಜಾಗೃತಿಗೆ ನಾಂದಿ ಹಾಡಿತು. ರಾಷ್ಟ್ರೀಯ ಐಕ್ಯತೆಯ ಬೆಸುಗೆಯ ಮಂತ್ರಗಳಾಯಿತು. ಭಾರತೀಯರನ್ನು ದೂರ ಮಾಡಿದ್ದ ಜಾತಿ- ಭಾಷೆಗಳ ಭಿನ್ನತೆಯನ್ನು ತೊಲಗಿಸಿ ಒಂದು ಸೂರಿನಡಿಯಲ್ಲಿ ಒಟ್ಟು ಸೇರಿಸಿತು. ಸ್ವರಾಜ್ಯದ ಬೇಡಿಕೆಯು ದೇಶದೆಲ್ಲೆಡೆ ಪಸರಿಸಿತು. ಆದರೆ ಗುಲಾಮಿ ಭಾರತದಲ್ಲಿ ಸ್ವರಾಜ್ಯದ ಬೇಡಿಕೆಯು ದೇಶದ್ರೋಹವಾಯಿತು!
ಅಸ್ಪೃಶ್ಯತೆ ಎನ್ನುವ ಮಹಾಮಾರಿ ಸಮಾಜವನ್ನು ಒಳಗಿನಿಂದಲೇ ನಾಶಮಾಡುತ್ತಿದೆ ಎನ್ನುವ ಕಾರಣಕ್ಕಾಗಿ ಅದರ ವಿರುದ್ಧ ಪ್ರಬಲವಾದ ಧ್ವನಿ ಸಮಾಜದಲ್ಲಿ ಮೂಡುತ್ತಿತ್ತು. ಅಸ್ಪೃಶ್ಯತೆ ಒಂದು ಮಹಾಪಾಪ ಎನ್ನುವ ಭಾವ ಜಾಗೃತಿಗೊಳ್ಳುತ್ತಿತ್ತು. 1918ರಲ್ಲಿ ಆಲ್‌ ಇಂಡಿಯಾ ಡಿಪ್ರೆಸ್ಡ್‌ ಕ್ಲಾಸಸ್‌ ಕಾನ್ಫರೆನ್ಸ್‌ನಲ್ಲಿ ಸ್ವತಃ ತಿಲಕರು ಭಾಗವಹಿಸುತ್ತಾರೆ. ಈ ಸಮ್ಮೇಳನ ತಿಲಕರ ಬಹುದೊಡ್ಡ ಘೋಷಣೆಗೆ ಸಾಕ್ಷಿಯಾಯಿತು. “”God is for all. Taint finds no room in the eyes of God, why should we then recongnise it? It is a sin against God to say that a person is untouchable, who is not so to God himself and if God were to tolerate untouchablity I would not recognise him as God at all. I do hold that the Untouchables must case to Untouchables. . . .It is a disease and it must be removed” ಎಂದಿದ್ದರು. ಆದರೆ ಅದೇ ಸಮ್ಮೇಳನದ ಕೊನೆಯಲ್ಲಿ ದೈನಂದಿನ ಬದುಕಿನಲ್ಲಿ ಯಾರೂ ಅಸ್ಪೃಶ್ಯತೆಯನ್ನು ಆಚರಿಸಬಾರದು ಎನ್ನುವ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಸಹಿಗಾಗಿ ನೀಡಿದಾಗ ತಿಲಕರು ತಮ್ಮ ಹಿಂಬಾಲಕರ ಒತ್ತಾಯಕ್ಕೆ ಮಣಿದು ಸಹಿ ಹಾಕದೆ ಹೋದುದು ಅವರ ಜೀವನದ ಒಂದು ಕಪ್ಪುಚುಕ್ಕೆಯಾಗಿ ಉಳಿಯಿತು.
ಗಾಂಧಿಯವರು ಇನ್ನೂ ಸ್ವಾತಂತ್ರ್ಯ ಹೋರಾಟದ ರಣಾಂಗಣಕ್ಕೆ ಪ್ರವೇಶ ಪಡೆಯುವ ಮೊದಲೇ ತಿಲಕ್‌ ಭಾರತೀಯರ ಹೃದಯ ಸಾಮ್ರಾಟರಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಇನ್ನೂ ಕಾಂಗ್ರೆಸ್‌ ಬ್ರಿಟಿಷರ ಮನವೊಲಿಸುವ ಮಾರ್ಗವನ್ನು ತುಳಿಯುತ್ತಿದ್ದಾಗ ತಿಲಕ್‌ ಕಾಂಗ್ರೆಸ್‌ನ ದಾರಿಯನ್ನು ತೀವ್ರವಾದ ವಿಮರ್ಶೆಗೆ ಒಳಪಡಿಸಿ ಕಾಂಗ್ರೆಸ್‌ನ ಒಳಗೆ ಕ್ರಿಯಾಶೀಲತೆಯನ್ನು ತರುವುದಕ್ಕೆ ಕಾರಣರಾಗುತ್ತಾರೆ. ಕಾಂಗ್ರೆಸ್‌ನ ಸಮ್ಮೆಳನಗಳ ಒಳಗೆ ತಿಲಕರು ಸಕ್ರಿಯರಾಗುತ್ತಾರೆ. ಅವರು ದೃಢವಾದ ಧ್ವನಿಯಾಗುತ್ತಾರೆ. ಪರಿಣಾಮವಾಗಿ ಮಂದಗತಿಯ ಸತ್ಯಾಗ್ರಹ ರೂಪದ ಹೋರಾಟಕ್ಕೆ ತೀವ್ರಗತಿಯ ಸ್ಪರ್ಶವನ್ನು ನೀಡಿದರು. ಹೋಮ್‌ ರೂಲ್‌ ಆಂದೋಲನವನ್ನು ಬೆಂಬಲಿಸಿ ಸ್ವರಾಜ್ಯ ಸಂಪಾದನೆಯ ಹೋರಾಟಕ್ಕೆ ಚೈತನ್ಯ ತುಂಬಿದರು. ಬಹುಶಃ ಭಾರತೀಯ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಳಗೆ ಕಾಣುವ ವ್ಯಕ್ತಿತ್ವಗಳೊಳಗೆ ತಿಲಕರದು ಬಹು ಆಕರ್ಷಕ ವ್ಯಕ್ತಿತ್ವ. ದೇಶದೆಲ್ಲೆಡೆ ತಿಲಕರಿಂದ ಪ್ರಭಾವಿತರಾದ ಸಾವಿರಾರು ಯುವಕರು ಹೋರಾಟದ ಕಣಕ್ಕಿಳಿದಿದ್ದರು. ಬೇರೆ ಬೇರೆ ಪ್ರಾದೇಶಿಕ ಭಾಷೆಗಳಲ್ಲಿ ‘ಕೇಸರಿ’ ‘ಮರಾಠಾ’ ಮಾದರಿಯ ಪತ್ರಿಕೆಗಳು ಹುಟ್ಟು ಪಡೆದು ಬ್ರಿಟಿಷ್‌ ಕ್ರೌರ್ಯವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಕ್ರಿಯಾಶೀಲವಾದವು. ಕ್ರಾಂತಿಯ ದಾರಿಗೆ ತಮ್ಮನ್ನು ಸಮರ್ಪಿಸಿಕೊಂಡ ಯುವಕರು ತಿಲಕರಿಂದ ಪ್ರಭಾವಿತರಾಗಿದ್ದರು.
ಗಾಂಧೀಜಿ ಮತ್ತು ತಿಲಕರ ಹೋರಾಟದ ಮಾರ್ಗದಲ್ಲಿ ವ್ಯತ್ಯಾಸಗಳಿತ್ತು. ಆದರೆ ತಿಲಕರು ನಿಧನರಾದಾಗ ಅವರು ನೀಡಿದ ಶ್ರದ್ಧಾಂಜಲಿಯ ಮಾತುಗಳು ತಿಲಕರ ವ್ಯಕ್ತಿತ್ವದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೇರಿಸಿತು. “”His patriotism was a passion with him. He was born a democrat. He had an iron will which he used for his country. His life was an open book. He had dedicated his wonderful talents to the country. He will go down to the generations yet unborn as a maker of modern India. They will revere his memory as of a man who lived for them and died for them” ಎಂದಿದ್ದರು ಗಾಂಧೀಜಿ. ಅವರು ಗತಿಸಿ ಒಂದು ಶತಮಾನದ ಬಳಿಕವೂ ಭಾರತ ಅವರನ್ನು ಸ್ಮರಿಸಿಕೊಳ್ಳುತ್ತಿದೆ. ಇದೇ ತಿಲಕರಂತಹ ಮಹಾತ್ಮರ ಮಹತ್ತು. ಯುವಜನತೆ ತಾವನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಇಂತಹ ನೂರಾರು ಮಹಾತ್ಮರ ತ್ಯಾಗ ಬಲಿದಾನಗಳು ಇದೆ ಎನ್ನುವುದನ್ನು ಮರೆಯಬಾರದು. ರಾಜಕೀಯ ಪಾರತಂತ್ರ್ಯದ ವಿರುದ್ಧ ಹೋರಾಡುವುದನ್ನೇ ಜೀವನದ ಗುರಿಯಾಗಿರಿಸಿಕೊಂಡು ಬದುಕಿದ ತಿಲಕರ ಬದುಕು ನಮಗೆ ಪ್ರೇರಣೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top