ಎಲ್ಲರೂ ಬರಲಿ ಆನ್‌ಲೈನ್‌ಗೆ

– 8ರಿಂದ 10ನೇ ಕ್ಲಾಸ್‌ಗೆ ಅಂತರ್ಜಾಲ ಶಿಕ್ಷಣ ಓಕೆ ಎಂಬ ಅಭಿಮತ
– ಖಾಸಗಿಯಂತೆ ಸರಕಾರಿ ಶಾಲೆ ಮಕ್ಕಳಿಗೂ ಸಿಗಲಿ ಆನ್‌ಲೈನ್‌ ಶಿಕ್ಷಣ.

– ವಿಕ ಫೋಕಸ್‌.

ಜಯಂತ್‌ ಗಂಗವಾಡಿ, ಬೆಂಗಳೂರು.

ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನೀಡುವುದಕ್ಕೆ ಸರಕಾರ ನಿರ್ಬಂಧ ವಿಧಿಸಿರುವ ಬಗ್ಗೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿರುವ ನಡುವೆಯೇ, ಎಂಟರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಮಾದರಿಯಲ್ಲಿ ಶಿಕ್ಷಣ ನೀಡಲು ತಕ್ಷಣ ವ್ಯವಸ್ಥೆ ರೂಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಶಿಕ್ಷಣ ಕೇವಲ ಖಾಸಗಿ ಶಾಲೆಗಳಿಗೆ ಸೀಮಿತವಾಗದೆ ಸರಕಾರಿ ಶಾಲೆಗಳಲ್ಲೂ ಇದಕ್ಕೆ ಪೂರಕ ವಾತಾವರಣ ರೂಪಿಸಬೇಕು ಎನ್ನುವ ಅಭಿಪ್ರಾಯ ಪಾಲಕರದ್ದು.
ಮಕ್ಕಳ ಆರೋಗ್ಯ, ಮನೋಸ್ಥಿತಿ ಮತ್ತು ಹೆಚ್ಚು ಹೊತ್ತು ಸ್ಕ್ರೀನ್‌ ನೋಡಬಾರದು ಎಂಬ ಕಾರಣ ಮುಂದಿಟ್ಟು ಐದನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣಕ್ಕೆ ಸರಕಾರ ಕಡಿವಾಣ ಹಾಕಿದೆ. ಆರು ಮತ್ತು ಏಳನೇ ತರಗತಿಗೆ ಈ ಶಿಕ್ಷಣ ಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಮಿತಿ ರಚಿಸಲಾಗಿದೆ. ಆದರೆ, 8ನೇ ಕ್ಲಾಸಿನ ಬಳಿಕದ ವಿದ್ಯಾರ್ಥಿಗಳ ಬಗ್ಗೆ ಸದ್ಯಕ್ಕೆ ಯಾವುದೇ ತಕರಾರು ಇಲ್ಲ. ಹೀಗಾಗಿ, ಅವರಿಗಾದರೂ ಆನ್‌ಲೈನ್‌ನಲ್ಲಿಶಿಕ್ಷಣ ಒದಗಿಸಲಿ, ಅಷ್ಟರ ಮಟ್ಟಿಗಾದರೂ ಮಕ್ಕಳ ಸಮಯ ಸದುಪಯೋಗವಾಗಲಿ ಎನ್ನುವುದು ಪೋಷಕರ ಆಶಯವಾಗಿದೆ.
ಕೊರೊನಾದಿಂದಾಗಿ ಶಾಲೆಗಳ ಪುನರಾರಂಭ ಇನ್ನು ಕೆಲವು ತಿಂಗಳ ಕಾಲ ಕಷ್ಟ ಸಾಧ್ಯವಾಗಿರುವುದರಿಂದ ಶಿಕ್ಷಣಕ್ಕೆ ಪರ್ಯಾಯ ಕಂಡುಕೊಳ್ಳುವುದು ಅನಿವಾರ್ಯ. ಆನ್‌ಲೈನ್‌ ಶಿಕ್ಷಣವನ್ನು ರದ್ದುಗೊಳಿಸಿದಲ್ಲಿಗೆ ಸರಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಅದಕ್ಕೆ ಪರ್ಯಾಯವನ್ನು ಅದು ತೋರಿಸಿಕೊಡಬೇಕಾಗುತ್ತದೆ ಎನ್ನುವುದು ಹೆಚ್ಚಿನ ಪೋಷಕರ ಅಭಿಪ್ರಾಯ.

ಸರಕಾರಿ ಶಾಲೆ ಮಕ್ಕಳಿಗೆ ವಂಚನೆ ಆಗದಿರಲಿ
ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಆನ್‌ಲೈನ್‌ ಪಾಠ ನಡೆಸುತ್ತಿವೆ. ಆದರೆ, ಸರಕಾರಿ ಶಾಲೆ ಮಕ್ಕಳು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಈಗಾಗಲೇ ಖಾಸಗಿ-ಸರಕಾರಿ, ಇಂಗ್ಲಿಷ್‌-ಕನ್ನಡ ಎಂಬ ತಾರತಮ್ಯ ಅನುಭವಿಸಿದ ಮಕ್ಕಳು ಹೊಸ ರೀತಿ ನೋವು ಮತ್ತು ಕೀಳರಿಮೆಗೆ ಗುರಿಯಾಗಿದ್ದಾರೆ. ಸರಕಾರ ತನಗೆ ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲಎಂಬ ಹತಾಶೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುವ ಆನ್‌ಲೈನ್‌ ಶಿಕ್ಷಣ ಬ್ಯಾನ್‌ ಮಾಡಿದೆ ಎಂಬ ಆಪಾದನೆಯೂ ಇದೆ. ಇದನ್ನು ಸುಳ್ಳಾಗಿಸುವಂತೆ ಸರಕಾರಿ ಶಾಲೆಗಳಲ್ಲೂ ಆನ್‌ಲೈನ್‌ ಶಿಕ್ಷಣ ಒದಗಿಸಲು ಸರಕಾರ ಮುಂದಾಗಬೇಕಾಗಿದೆ.
ಬಹುತೇಕ ಖಾಸಗಿ ಶಾಲೆಗಳು ಈಗಾಗಲೇ ಪ್ರತಿ ವಿಷಯದಲ್ಲಿ ಆರೇಳು ಅಧ್ಯಾಯಗಳನ್ನು ಪೂರ್ಣಗೊಳಿಸಿವೆ. ಸರಕಾರಿ ಶಾಲೆಗಳಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಷ್ಟೊಂದು ದೊಡ್ಡ ವಿದ್ಯಾರ್ಥಿಗಳ ಸಮೂಹ ಕಳೆದ ಮೂರು ತಿಂಗಳಿಂದ ಯಾವುದೇ ಶೈಕ್ಷಣಿಕ ಚಟುವಟಿಕೆಗಳಿಲ್ಲದೇ ಕಾಲ ಕಳೆಯುತ್ತಿದೆ.

ಸರಕಾರಿ ಶಾಲೆಗಳಿಗೆ ಕಷ್ಟವೇನಲ್ಲ
– ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್‌ ಸಿಗಲ್ಲ ಎಂಬ ನೆಪ ಸರಿಯಲ್ಲ. ಗ್ರಾಮಾಂತರ ಭಾಗದ ಖಾಸಗಿ ಶಾಲೆಗಳೂ ಆನ್‌ಲೈನ್‌ ಕ್ಲಾಸ್‌ ಆರಂಭಿಸಿವೆ.
– ಈಗ ಎಲ್ಲರ ಮನೆಯಲ್ಲೂ ಮೊಬೈಲ್‌ ಇದ್ದೇ ಇದೆ. ಅಗತ್ಯಕ್ಕೆ ತಕ್ಕಂತೆ ಅಪ್‌ಗ್ರೇಡ್‌ ಆಗಬೇಕಾದದ್ದು ಅನಿವಾರ್ಯ.
– ಉಚಿತ ಸೈಕಲ್‌, ಬಿಸಿಯೂಟದಂತೆ ಬಡ ಮಕ್ಕಳಿಗೆ ಮೊಬೈಲ್‌ ಇತ್ಯಾದಿ ಮೂಲ ಸೌಕರ್ಯ ಕಲ್ಪಿಸುವುದು ಸರಕಾರಕ್ಕೆ ದೊಡ್ಡ ಹೊರೆ ಏನಲ್ಲ.
– ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಮತ್ತಿತರ ವ್ಯವಸ್ಥೆ ಇದೆ. ಅದರ ಸದುಪಯೋಗ ಮಾಡಬೇಕು.
– ಸಂಪರ್ಕ ಸಾಧ್ಯವೇ ಇಲ್ಲದ ಮಕ್ಕಳನ್ನು ವಾರಕ್ಕೊಮ್ಮೆ ಶಾಲೆಗೆ ಕರೆಸಿ ವಾರದ ಚಟುವಟಿಕೆ ನೀಡಬಹುದು.

ಆನ್‌ಲೈನ್‌ ಯಾಕೆ ಅನಿವಾರ್ಯ?
– ಕೊರೊನಾ ಸಮಸ್ಯೆ ಇನ್ನೆಷ್ಟು ಕಾಲ ಎನ್ನುವುದು ತಿಳಿದಿಲ್ಲ. ಮಕ್ಕಳನ್ನು ದೀರ್ಘ ಕಾಲ ನಿಷ್ಕ್ರಿಯರನ್ನಾಗಿ ಉಳಿಸುವುದು ಸರಿಯಲ್ಲ.
– ಆಟವೂ ಇಲ್ಲ, ಪಾಠವೂ ಇಲ್ಲದಿದ್ದರೆ ಮಕ್ಕಳಲ್ಲಿ ಜಾಡ್ಯತೆ ಆವರಿಸುವ ಅಪಾಯವಿದೆ.
– ಆನ್‌ಲೈನ್‌ ಪಾಠದಲ್ಲಿ ಮಕ್ಕಳನ್ನು ತೊಡಗಿಸಿದರೆ, ಬೇಗ ಶಾಲೆ ಆರಂಭಿಸಬೇಕೆಂಬ ಒತ್ತಡ ಇರುವುದಿಲ್ಲ
– ಮುಂದಿನ ದಿನಗಳಲ್ಲಿ ಆನ್‌ಲೈನ್‌ ಶಿಕ್ಷಣದ ಅವಿಭಾಜ್ಯ ಅಂಗವಾಗುವ ಸಾಧ್ಯತೆ ಇದೆ. ಅದಕ್ಕೆ ಸಿದ್ಧರಾಗಲು ಇದು ಸಕಾಲ.

ಪಾಠವೊಂದೇ ಅಲ್ಲ
– ಪಾಠದ ಜತೆಗೆ ಕ್ರಿಯಾತ್ಮಕ ಚಟುವಟಿಕೆಗಳನ್ನೂ ನಡೆಸಬಹುದು.
– ಮಕ್ಕಳಲ್ಲಿ ಆಸಕ್ತಿ, ಕುತೂಹಲ ಮೂಡಿಸುವ ಕೆಲಸಕ್ಕೆ ಒತ್ತು

ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ಆರಂಭ ಅಸಾಧ್ಯ. ತಂತ್ರಾಂಶ ಬಳಕೆ ಮಾಡಿಕೊಂಡು ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಲು ಕೆಲವು ಸಮಸ್ಯೆಗಳಿವೆ. ಹಾಗಾಗಿ, ಕೋವಿಡ್‌-19ನಂತಹ ತುರ್ತು ಸಂದರ್ಭಗಳಲ್ಲಿ ಮಕ್ಕಳು ಸ್ವತಂತ್ರವಾಗಿ ಕಲಿಯುವಂತಹ ವ್ಯವಸ್ಥೆಯನ್ನು ಜಾರಿಗೆ ಈಗಿಂದಲೇ ಚಿಂತನೆ ನಡೆಸಬೇಕು.
– ಪ್ರೊ. ಎಂ.ಕೆ. ಶ್ರೀಧರ್‌, ಶಿಕ್ಷಣ ತಜ್ಞ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top