ತೆರೆದ ಶಾಲೆಗಳ ಪಾಠ

ಕೊರೊನಾ ವೈರಸ್ಸನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ಹಲವು ದೇಶಗಳಲ್ಲಿ ಶಾಲೆಗಳನ್ನು ಆಗಲೇ ತೆರೆಯಲಾಗಿದೆ. ಆದರೆ ಬಹಳ ಮುನ್ನೆಚ್ಚರಿಕೆ, ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ಇವನ್ನು ನಡೆಸಲಾಗುತ್ತಿದೆ. ಈ ದೇಶಗಳ ಶಾಲೆಗಳ ಮಾದರಿ ನಮಗೆ ಒಂದು ಪಾಠ ಆಗಬಹುದು.

ಸಣ್ಣ ಮಕ್ಕಳಿಗೆ ಭೀತಿಯಿಲ್ಲ
ಈ ಸೋಂಕಿಗೆ ಸಂಬಂಧಿಸಿದ ಒಂದು ವಿಚಿತ್ರ ಸಗತಿಯೆಂದರೆ, ಮಕ್ಕಳು ಸಣ್ಣವರಾಗಿದ್ದಷ್ಟೂ ಈ ವೈರಸ್‌ ಬಾಧಿಸುವ ಸಾಧ್ಯತೆ ಕಡಿಮೆ. ಅಂದರೆ ಹೈಸ್ಕೂಲ್‌ ಮಕ್ಕಳನ್ನು ಬಾಧಿಸುವ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ವಯೋಮಾನದ ಮಕ್ಕಳನ್ನು ಈ ವೈರಸ್‌ ಸೋಂಕುವುದೇ ಇಲ್ಲ; ಅಥವಾ ಅಂಟಿದರೂ ಲಕ್ಷಣಗಳನ್ನು ತೋರಿಸುವುದಿಲ್ಲ. ಇದಕ್ಕೆ ಇಸ್ರೇಲ್‌ನ ಒಂದು ಉದಾಹರಣೆ ಗಮನಿಸಬಹುದು. ಇಲ್ಲಿ ಶಾಲೆ ತೆರೆದ ಹದಿನೈದು ದಿನಗಳಲ್ಲಿ 153 ಹೈಸ್ಕೂಲ್‌ ಮಕ್ಕಳಿಗೆ ಸೋಂಕು ಕಂಡುಬಂತು. 100 ಶಾಲೆಗಳನ್ನು ಶಟ್‌ಡೌನ್‌ ಮಾಡಲಾಯಿತು. ಆದರೆ ಒಂದೇ ಒಂದೇ ಪ್ರಾಥಮಿಕ ಶಾಲೆಯ ಮಗು ಕೂಡ ಸೋಂಕಿಗೊಳಗಾಗಿರಲಿಲ್ಲ.

ವಾರಕ್ಕೆ ಒಂದೇ ದಿನ
ಆಸ್ಪ್ರೇಲಯದಲ್ಲಿ ಶಾಲೆಗಳನ್ನು ಮೇ ಎರಡನೇ ವಾರದಿಂದ ವಾರಕ್ಕೆ ಒಂದೇ ದಿನ ಕ್ಲಾಸ್‌ ಎಂದು ಆರಂಭಿಸಲಾಗಿದೆ. ಆದರೆ ಶಾಲೆಗಳು ವಾರ ಪೂರ್ತಿ ಕಾರ್ಯಾಚರಿಸುತ್ತವೆ ಹಾಗೂ ಶಿಕ್ಷಕರು ಶಾಲೆಯಲ್ಲಿರುತ್ತಾರೆ. ವಾರದಲ್ಲಿ ನಾಲ್ಕು ದಿನ ಆನ್‌ಲೈನ್‌ ಮೂಲಕ ದೂರ ಕಲಿಕೆ ಇರುತ್ತದೆ. ಶಟ್‌ಡೌನ್‌ ಸಮಯದಲ್ಲಿ ಕೂಡ ಶಾಲೆಗಳು ಪೂರ್ತಿ ಮುಚ್ಚಿರಲಿಲ್ಲವಾದರೂ ಮಕ್ಕಳು ಬರುತ್ತಿರಲಿಲ್ಲ. ಈಗ ಶಾಲೆಗೆ ಮಕ್ಕಳು ಬರುವ ಹಾಗೂ ಹೋಗುವ ಸಮಯವನ್ನೂ ವಿಭಜಿಸಿ, ಗುಂಪು ಸೇರದ ಹಾಗೆ ಮಾಡಲಾಗಿದೆ. ಹಗಲು ಮತ್ತು ರಾತ್ರಿಯೂ ಸ್ವಚ್ಛತೆ ನಡೆಯುತ್ತದೆ. ಆಟದಂಗಳ ಹಾಗೂ ಉಪಕರಣವನ್ನು ಕೂಡ ಪ್ರತಿಯೊಂದು ಬಳಕೆಯ ನಂತರವೂ ಸ್ಯಾನಿಟೈಸ್‌ ಮಾಡಲಾಗುತ್ತದೆ. ಈಜುಕೊಳ, ಕಾರಂಜಿಗಳನ್ನು ಮುಚ್ಚಲಾಗಿದೆ.

ಡೆನ್ಮಾರ್ಕ್‌ನ ಸಣ್ಣ ಗುಂಪುಗಳು
ಡೆನ್ಮಾರ್ಕ್‌ನಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ತರಗತಿಗಳನ್ನು ಶುರು ಮಾಡಲಾಗಿದೆ. ಹತ್ತು ಮಕ್ಕಳಿಗೆ ಒಬ್ಬ ಶಿಕ್ಷಕಿಯಂತೆ ಕ್ಲಾಸ್‌ ನಡೆಸಲಾಗುತ್ತದೆ. ಪ್ರತಿ ಮಗುವೂ ಪರಸ್ಪರ ಕನಿಷ್ಠ ಆರು ಅಡಿ ಅಂತರದಲ್ಲಿರುತ್ತದೆ. ಮಕ್ಕಳನ್ನು ಏಕ ವಿಷಯ ಶಿಕ್ಷಕರಿಗೆ ವಹಿಸಲಾಗುತ್ತದೆ. ಅಂದರೆ ಒಂದು ದಿನದಲ್ಲಿ ಒಂದೇ ವಿಷಯವನ್ನು ಪಾಠ ಮಾಡಲಾಗುತ್ತದೆ ಹಾಗೂ ಮಕ್ಕಳು ಆ ಶಿಕ್ಷಕರ ಹೊಣೆಗಾರಿಕೆಯಲ್ಲಿರುತ್ತಾರೆ. ಇದರಿಂದ ಶಿಕ್ಷಕ- ಮಗು- ಶಿಕ್ಷಕ ಎಂಬ ವಿಧದಲ್ಲಿ ಸೋಂಕು ಹರಡುವ ಸಾಧ್ಯತೆಯಿಲ್ಲ. ಟಿಫಿನ್‌ ಅಥವಾ ಲಂಚ್‌ನ್ನು ಹಂಚಿಕೊಂಡ ತಿನ್ನಲು ಅವಕಾಶವಿಲ್ಲ. ಶಾಲಾ ಬಸ್ಸುಗಳಿಲ್ಲ. ಬದಲಾಗಿ ಮಕ್ಕಳು ಅವರದೇ ಸೈಕಲ್‌ ಅಥವಾ ಕಾರಿನಲ್ಲಿ ಬರುತ್ತಾರೆ. ಒಂದು ಗುಂಪಿನ ಮಗುವಿಗೆ ಇನ್ನೊಂದು ಗುಂಪಿನ ಮಗುವಿನ ಜೊತೆ ಬೆರೆಯಲು ಅವಕಾಶವಿಲ್ಲ.

ಮಾಸ್ಕ್‌‌ ಮೇಲೆ ನಂಬಿಕೆ
ತೈವಾನ್‌ನ ಶಾಲೆಗಳು ಸಂಪೂರ್ಣವಾಗಿ ಮಾಸ್ಕ್‌, ಗ್ಲೌಸ್‌ ಮುಂತಾದ ಸುರಕ್ಷತಾ ಕ್ರಮಗಳನ್ನು ಅವಲಂಬಿಸಿವೆ. ಎಲ್ಲ ಮಕ್ಕಳೂ ಶಾಲೆಗೆ ಬರುತ್ತಾರೆ. ಆದರೆ ಪ್ರತಿ ಮಗುವಿಗೂ ಪ್ರತಿದಿನವೂ ಪ್ರತ್ಯೇಕ ಮಾಸ್ಕ್‌, ಗ್ಲೌಸ್‌ ಧರಿಸುವುದು ಕಡ್ಡಾಯ. ದೇಹ ತಾಪಮಾನ ಪರೀಕ್ಷೆ ನಿರಂತರ. ಶಾಲೆಯೊಳಗೆ ಬರುವವರು ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಶುಚಿಗೊಳಿಸುವುದು ಕಡ್ಡಾಯ. ಎಲ್ಲರೂ ಐದು ಅಡಿ ಅಂತರವನ್ನು ಕಾಪಾಡಿಕೊಳ್ಳಲು ಸರಕರ ಸೂಚನೆ ನೀಡಿದೆ. ಕ್ಯಾಂಟೀನ್‌ ಜಾಗವನ್ನು ವಿಸ್ತರಿಸಲಾಗಿದ್ದು, ಅಲ್ಲಿಯೂ ಅಂತರ ಕಾಪಾಡುವುದು ಕಡ್ಡಾಯ. ತಿನ್ನುವ ಆಹಾರ ಕೂಡ ಮನುಷ್ಯ ಸಂಪರ್ಕವಿಲ್ಲದಂತೆ ತಯಾರಾಗಿ ಪ್ಯಾಕ್‌ ಮಾಡಿ ಕೊಡಲಾಗುತ್ತದೆ.

ಜಪಾನ್‌ನಲ್ಲಿ ಎಲ್ಲ ಮೊದಲಿನಂತೆ
ಜಪಾನ್‌ ದೇಶ ಶಾಲೆಗಳ ವಿಚಾರದಲ್ಲಿ ಬಹುತೇಕ ಹಳಿಗೆ ಮರಳಿದೆ. ಮೇ ತಿಂಗಳಲ್ಲಿ ತುರ್ತು ಸ್ಥಿತಿ ತೆರವಾದ ಕೂಡಲೇ ಶಾಲೆಗಳನ್ನು ಆರಂಭಿಸಲಾಯಿತು. ಮೊದಲು ಪರ್ಯಾಯ ದಿನಗಳಂದು ತರಗತಿಗಳನ್ನು ನಡೆಸಲಾಯಿತು. ಆದರೆ ಈಗ, ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧಾರಣೆ, ಪದೇ ಪದೆ ಕೈ ತೊಳೆದುಕೊಳ್ಳುವುದರತ್ತ ಹೆಚ್ಚಿನ ಒತ್ತು, ಆಗಾಗ ತಾಪಮಾನ ಪರಿಶೀಲನೆ- ಈ ಎಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಸೋಂಕಿನ ಪ್ರಮಾಣ ಹೆಚ್ಚು ಕಂಡುಬಂದಿರುವಲ್ಲಿ ಮಕ್ಕಳು ಫೇಸ್‌ ಶೀಲ್ಡ್‌ಗಳನ್ನು ಬಳಸುತ್ತಿದ್ದಾರೆ.

ಜರ್ಮನಿಯಲ್ಲಿ ಮಾನಸಿಕ ಒತ್ತಡ
ಜರ್ಮನಿಯಲ್ಲಿ ಆರಂಭದಲ್ಲಿ ಮಕ್ಕಳ ಮಧ್ಯ ಕನಿಷ್ಠ ಒಂದೂವರೆ ಮೀಟರ್‌ ಅಂತರವಿರಬೇಕು ಎಂಬ ನಿಯಮವನ್ನು ತರಲಾಗಿತ್ತು. ಆದರೆ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ಈ ನಿಯಮ ಪಾಲಿಸುವುದು ಕಷ್ಟವಾಯಿತು. ಈಗ ಅದನ್ನು ಒಂದು ಮೀಟರ್‌ಗೆ ಇಳಿಸಲಾಗಿದೆ. ಇಲ್ಲಿನ ಶಿಕ್ಷಣ ಹಾಗೂ ಮಾನಸಿಕ ತಜ್ಞರು- ಆನ್‌ಲೈನ್‌ ಶಿಕ್ಷಣದಿಂದ ಸಮಾಜದಲ್ಲಿ ಉಂಟಾಗುತ್ತಿರುವ ಡಿಜಿಟಲ್‌ ಕಂದಕದ ಬಗ್ಗೆ ಹೆಚ್ಚು ಟೀಕೆ ಮಾಡಿದರು. ಸ್ಕೂಲ್‌ ಮುಚ್ಚಿರುವುದರಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಮಾನಸಿಕ ಒತ್ತಡದ ಮೇಲೂ ಅಧ್ಯಯನಗಳು ನಡೆದವು. ಇವೆಲ್ಲವೂ ಪೂರ್ಣ ಪ್ರಮಾಣದ ತರಗತಿಗನ್ನೇ ಪ್ರತಿಪಾದಿಸಿದವು.

ಥಿಯೇಟರ್‌ಗಳಲ್ಲೂ ತರಗತಿ
ಇಟಲಿಯಲ್ಲಿ ಶಿಕ್ಷಣ ಸಚಿವೆ ಲೂಸಿಯಾ ಅಜೋಲಿನಾ ಅವರು ಕ್ಲಾಸ್‌ರೂಂಗಳನ್ನು ವಿಭಜಿಸಿ ಥಿಯೇಟರ್‌, ಸಿನೆಮಾ ಹಾಲ್‌, ಮ್ಯೂಸಿಯಂಗಳನ್ನು ನಡೆಸುವ ಐಡಿಯಾವನ್ನು ಜಾರಿ ಮಾಡಿದರು. ಕೆಲವು ಕಡೆ ಪಾರ್ಕ್‌ಗಳಲ್ಲೂ ಕ್ಲಾಸ್‌ ನಡೆಸಲಾಯಿತು. ಮಕ್ಕಳ ನಡುವೆ ಅಂತರ ಕಾಪಾಡಿಕೊಳ್ಳುವುದೇ ಇದರ ಮೂಲ ಗುರಿ. ಶಾಲೆಗಳ ಸುತ್ತಮುತ್ತಲಿನ ಕಟ್ಟಡಗಳನ್ನು ಇದಕ್ಕಾಗಿ ಬಳಸಲಾಯಿತು.

ಪ್ರಾಯೋಗಿಕತೆ
ಶಾಲೆ ಆರಂಭವಾಗಿರುವ ಪ್ರಮುಖ ದೇಶಗಳೆಂದರೆ ಜಪಾನ್‌, ಚೀನಾ, ಬೆಲ್ಜಿಯಂ, ಇಟಲಿ, ಫ್ರಾನ್ಸ್‌, ನಾರ್ವೆ, ಸ್ವೀಡನ್‌, ಇಸ್ರೇಲ್‌, ಆಸ್ಪ್ರೇಲಿಯ ಇತ್ಯಾದಿ. ಇಲ್ಲೆಲ್ಲ ಮೊದಲು ಕಡಿಮೆ ಮಕ್ಕಳು, ಪರ್ಯಾಯ ದಿನಗಳು, ವಾರಕ್ಕೊಂದೇ ದಿನ, ಗುಂಪು ಬೋಧನೆ- ಇತ್ಯಾದಿ ಪ್ರಯೋಗಗಳನ್ನು ಮಾಡಲಾಯಿತು. ಆದರೆ ಇದಕ್ಕೆ ಜಟಿಲವಾದ ಟೈಂ ಟೇಬಲ್‌ಗಳು, ಹೆಚ್ಚಿನ ಶಿಕ್ಷಕರು, ಶಿಕ್ಷಕರಿಗೆ ಬಹು ಶಿಫ್ಟ್‌ಗಳು, ಇತರ ಜಾಗಗಳನ್ನು ಪಡೆಯಬೇಕಾದ ಅಗತ್ಯ ಬಂತು. ಇವೆಲ್ಲವುಗಳಿಗಿಂತ ಎಲ್ಲ ಮಕ್ಕಳನ್ನೂ ಮೊದಲಿನಂತೆ ಶಾಲೆಗೆ ಬರಮಾಡಿಕೊಂಡು ಪಾಠ ಮಾಡುವುದೇ ಹೆಚ್ಚು ಪ್ರಾಯೋಗಿಕ ಹಾಗೂ ಅಗ್ಗ ಎಂಬುದು ಎಲ್ಲ ದೇಶಗಳಿಗೆ ಅರಿವಾಗುತ್ತಿದೆ.

ಪೊಸಿಟಿವ್‌ ಕಂಡುಬಂದರೆ?
ಇಸ್ರೇಲ್‌ನಲ್ಲಿ ಒಂದು ಮಗುವಿಗೆ ಕೊರೊನಾ ಪೊಸಿಟಿವ್‌ ಕಂಡುಬಂದರೆ ಇಡೀ ಶಾಲೆಯನ್ನು ಸೀಲ್‌ಡೌನ್‌ ಮಾಡಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಜರ್ಮನಿಯಲ್ಲಿ ಆಯಾ ಗುಂಪುಗಳನ್ನು ಮಾತ್ರ ಎರಡು ವಾರಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ; ಉಳಿದ ಶಾಲೆಯಿಡೀ ಹಾಗೇ ಕೆಲಸ ಮುಂದುವರಿಸುತ್ತದೆ. ಇದಕ್ಕೆ ಕಾರಣ ಜರ್ಮನಿ ಅಳವಡಿಸಿಕೊಂಡಿರುವ ‘ಗುಂಪು ಬೋಧನೆ’ ಪ್ರಯೋಗ. ಇದು ಶೈಕ್ಷಣಿಕ ವರ್ಷಕ್ಕೆ ಕಡಿಮೆ ಹಾನಿಕರ.

ಸ್ವಯಿಚ್ಛೆಯ ತರಗತಿ
ಫ್ರಾನ್ಸ್‌ನಲ್ಲಿ ಸ್ವ ಇಚ್ಛೆಯಿಂದ ಶಾಲೆಗೆ ಬರುವ ಮಕ್ಕಳನ್ನಷ್ಟೇ ಕರೆದುಕೊಂಡು ತರಗತಿ ನಡೆಸಲಾಗುತ್ತದೆ. ಉಳಿದವರಿಗೆ ಆನ್‌ಲೈನ್‌ ಕ್ಲಾಸ್‌ ನಡೆಯುತ್ತದೆ. ಕಳೆದ ತಿಂಗಳಲ್ಲಿ ಇಲ್ಲಿ ಪ್ರಾಥಮಿಕ ಶಾಲೆಯ 67 ಲಕ್ಷ ಮಕ್ಕಳಲ್ಲಿ 18 ಲಕ್ಷ ಮಕ್ಕಳು ಮಾತ್ರ ಸ್ವಯಿಚ್ಛೆಯಿಂದ ಶಾಲೆಗೆ ಬಂದಿದ್ದರು.

ಇಸ್ರೇಲ್‌ನ ತಪ್ಪು ಮಾದರಿ
ಇಸ್ರೇಲ್‌ನಲ್ಲಿ ಶಾಲೆಗಳನ್ನು ಆರಂಭಿಸಿದ ಕ್ರಮ ಮಾತ್ರ ತಿರುಗೇಟು ಹೊಡೆಯಿತು. ಮೇ 17ರಂದು ಸೋಂಕಿನ ಸಂಖ್ಯೆ ಕೇವಲ 10 ಇದ್ದಾಗ ಶಾಲೆಗಳನ್ನು ಭಾಗಶಃ ಆರಂಭಿಸಲಾಯಿತು. ಆದರೆ ಈಗ ಅಲ್ಲಿ ಸೋಂಕು ಏರುತ್ತಿದ್ದು, ಪ್ರತಿದಿನ 1500ರಂತೆ ವರದಿಯಾಗುತ್ತಿದೆ. 1335 ಮಕ್ಕಳಿಗೆ ಸೋಂಕು ಕಂಡುಬಂದಿದೆ. ಕಠಿಣವಾದ ಸುರಕ್ಷತಾ ಕ್ರಮಗಳಲ್ಲಿ ಪಾಲಿಸದಿದ್ದದ್ದು, ಸೋಂಕು ಪೂರ್ತಿ ಇಳಿಯುವ ಮುನ್ನ ಸಭೆ ಸಮಾರಂಭಗಳನ್ನು ಶುರು ಮಾಡಿದ್ದೇ ಇದಕ್ಕೆ ಕಾರಣ.

ಮರಳಿ ಮುಚ್ಚಿದ ಚೀನಾ
ಚೀನಾದಲ್ಲಿ ಒಂದು ಹಂತದಲ್ಲಿ ಒಂದೇ ಒಂದು ಕೋವಿಡ್‌ ಕೇಸು ಕೂಡ ವರದಿಯಾದ ದಿನ ಬಂದಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ಶಾಲೆಗಳನ್ನು ಮರಳಿ ಆರಂಭಿಸಲಾಯಿತು. ಆದರೆ ಬೀಜಿಂಗ್‌ನಲ್ಲಿ ಜೂನ್‌ ತಿಂಗಳಲ್ಲಿ ಕೋವಿಡ್‌ನ ಎರಡನೇ ಅಲೆ ಕಂಡುಬಂದಾಗ, ಶಾಲೆಗಳನ್ನು ಮತ್ತೆ ಮುಚ್ಚಲಾಗಿದೆ.

ತಜ್ಞರು ಏನನ್ನುತ್ತಾರೆ?
– ಬಿಗಿಯಾದ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಸಾಧ್ಯವಿದ್ದರೆ ಮಾತ್ರ ಶಾಲೆಗಳನ್ನು ಪುನಾರಂಭಿಸಬಹುದು.
– ಇತರ ಗುಂಪುಗಳೊಂದಿಗೆ ಸಂಪರ್ಕವಿಟ್ಟುಕೊಳ್ಳದ, ಗರಿಷ್ಠ ಹತ್ತು ಮಕ್ಕಳ ‘ಬಬಲ್‌’ ಮಾದರಿ ಶ್ರೇಷ್ಠ.
– ಮನೆಯೊಳಗೇ ಇರುವುದಕ್ಕಿಂತ ತರಗತಿಗಳು ಹಾಗೂ ಫ್ರೆಂಡ್ಸ್‌ ಸಂಪರ್ಕ ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top