ಮನುಷ್ಯ ಸಾಹಸ, ದೈವಮಾಯೆ ಮತ್ತು ವಿಷಾದ

– ಅರವಿಂದ ಚೊಕ್ಕಾಡಿ.

ಭೀಮನ ಅಧೋಮುಖ ಅವರೋಹಣ, ಅರ್ಜುನನ ಊಧ್ರ್ವಮುಖ ಉಡ್ಡಯನ ಮನುಷ್ಯರೆಂಬವರ ಸಾಹಸದ ಮೂರು ಪಾತಳಿಗಳನ್ನು ಕಥಾಸೂತ್ರದಲ್ಲಿ ಒಪ್ಪಿಡಿಯಾಗಿ ಆವರಿಸಿದ್ದು ಈ ಎರಡು ಜಂಗಮಶೀಲತೆಗಳ ಸಾಂಕೇತಿಕ ಅತಿಕ್ರಮಗಳು ಎಂಬ ಎಚ್‌. ಎಸ್‌. ವೆಂಕಟೇಶಮೂರ್ತಿ ಅವರ ಮಾತುಗಳನ್ನು ಓದಿದಾಗ ತೆಲುಗಿನಲ್ಲಿ ‘ಬಾಲ ಭಾರತಂ’ ಸಿನಿಮಾದಲ್ಲಿ ಘಂಟಸಾಲ ಹಾಡಿದ ‘ಮಾನವುಡೇ ಮಹನೀಯುಡು’ ಗೀತೆ ನೆನಪಾಯಿತು. ಮಾನವ ಸಾಹಸಕ್ಕೆ ದೇವರು ಕೂಡ ಶರಣಾಗಿಬಿಡುತ್ತಾರೆ ಎಂಬ ಮಾತನ್ನು ಕಠೋಪನಿಷತ್ತಿನಲ್ಲಿ ನಚಿಕೇತನಿಗೆ ಯಮ ಹೇಳುತ್ತಾನೆ. ಹಾಗೆ ನೋಡಿದರೆ ಭಾರತದ ಉಪನಿಷತ್‌ ತತ್ವಜ್ಞಾನ ಪರಂಪರೆಯಲ್ಲೆ ಈ ಅಂಶವು ಹುದುಗಿದೆ. ಉಪನಿಷತ್ತುಗಳಿಂದ ಪ್ರಭಾವಿತವಾಗದ ಯಾವುದೇ ಜ್ಞಾನ ಶಾಖೆ ಭಾರತದಲ್ಲಿ ಇಲ್ಲ ಎನ್ನುವ ಬ್ಲೂಮ್‌ಫೀಲ್ಡ್‌ ಮಾತಿನಂತೆ ಮಾನವ ಸಾಹಸದ ಮಹತ್ತನ್ನು ಎಲ್ಲ ಜ್ಞಾನಶಾಖೆಗಳೂ ಕಾಲಕಾಲಕ್ಕೆ ಹೇಳುತ್ತಾ ಬಂದಿವೆ.
‘ಕುಮಾರವ್ಯಾಸ ಕಥಾಂತರ’ವನ್ನು ಏಳು ವರ್ಷಗಳಲ್ಲಿ, ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿರುವ ಎಚ್‌ಎಸ್‌ವಿ ಅವರು ಇದೀಗ ಕೊನೆಯ ಸಂಪುಟ ‘ಕರ್ಣಪರ್ವ, ಶಲ್ಯಪರ್ವ, ಗದಾಪರ್ವ’ವನ್ನು ಅಭಿನವ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ‘ಗಾಢ ವಿಷಾದವೇ ಗದುಗಿನ ಭಾರತದ ಮುಖ್ಯ ಜೀವದ್ರವ್ಯವಾಗಿದೆ’ ಎಂಬ ಎಚ್‌ಎಸ್‌ವಿ ಮಾತು ಕ್ಷಾತ್ರದ ಆರ್ಭಟದ ಉಚ್ಛ್ರಾಯವನ್ನು ಹೊಂದಿರುವ ಈ ಕೃತಿಯ ಅಂತಃ ಪ್ರವಾಹವಾಗಿ ಸಾಧಿಸುತ್ತಾ ಹೋಗುತ್ತದೆ. ಉಪ ಪಾಂಡವರನ್ನು ಕೊಂದ ಆಕ್ರೋಶದಲ್ಲಿ ಅಶ್ವತ್ಥಾಮನನ್ನು ಕೊಂದು ಕೃಪಿಯ ಮೂಲಕ ದುಃಖವನ್ನು ವಿಸ್ತರಿಸಲು ಹೊರಟ ಪಾಂಡವರಿಗೆ ದ್ರೌಪದಿಯೇ ಸವಾಲಾಗಿ ‘‘ನನ್ನಂತೆಯೇ ಕೃಪಿಯೂ ಪುತ್ರ ಶೋಕಕ್ಕೆ ತುತ್ತಾಗಬೇಕೆ?’’ ಎಂಬ ನಿರ್ಧಾರವನ್ನು ತಳೆಯುವಲ್ಲಿ ಕುಮಾರವ್ಯಾಸ ಕ್ಷಾತ್ರದ ಆರ್ಭಟದ ಒಳಗೇ ಕಡೆದು ನಿಲ್ಲುವ ವಿಷಾದವನ್ನು ಎತ್ತಿ ಹಿಡಿಯುತ್ತಾನೆ. ಹಾಗೆ ನೋಡಿದರೆ ವ್ಯಾಸ ಭಾರತವೂ ಮಹಾಪ್ರಸ್ಥಾನದಲ್ಲಿ ಸೃಷ್ಟಿಸುವ ನಾಯಿಯ ರೂಪಕದ ಮುಖಾಂತರ ವಿಷಾದವನ್ನೆ ಸೂಚಿಸುತ್ತದೆ. ಕೃಷ್ಣನೂ, ಪಾಂಡವರೂ ಕಾಡಿನಲ್ಲಿ ಅನಾಥ ಹೆಣವೇ ಆದರು. ‘‘ಧರ್ಮವು ನಿನ್ನನ್ನು ಹಿಂದಿನಿಂದ ಅನುಸರಿಸುತ್ತದೆ,’’ ಎಂದ ಯಕ್ಷ (ಯಮ)ನ ಮಾತಿಗೆ ಬದ್ಧನಾದ ಯುಧಿಷ್ಠಿರನೊಬ್ಬ ಗಮ್ಯವನ್ನು ತಲುಪಬೇಕಾದರೆ ಯಮಧರ್ಮರಾಜನೇ ಬರಬೇಕಾಯಿತು; ಅದೂ ನಾಯಿಯಾಗಿ! ಕ್ಷಾತ್ರವು ರಕ್ಷ ಣೆಗೆ ಬಳಕೆಯಾಗದೆ ಕೊಲ್ಲುವುದಕ್ಕೆ ಬಳಕೆಯಾದಾಗ ಚಕ್ರವರ್ತಿಗೆ ಸಮಾನರಾದ ಯಾರೂ ಚಕ್ರವರ್ತಿಯ ಮಾರ್ಗದರ್ಶಕರಾಗಲು ಉಳಿಯುವುದಿಲ್ಲ. ಧರ್ಮವು ಜೀವಿಗಳಲ್ಲೆ ನಿಷ್ಠಾವಂತವಾದ ನಾಯಿಯ ರೂಪದಲ್ಲಿ ಬಂದು ಮಾರ್ಗದರ್ಶನವನ್ನು ಮಾಡುತ್ತದೆ ಎಂಬುದನ್ನು ಮಹರ್ಷಿ ವ್ಯಾಸರೂ ಹೇಳಿದ್ದಾರೆ. ಕುರುಕ್ಷೇತ್ರ ಯುದ್ಧದಲ್ಲಿ ನಡೆದದ್ದು ಭೀಮ-ದುರ್ಯೋಧನರ ನಡುವೆ, ಕರ್ಣಾರ್ಜುನರ ನಡುವೆ ಮತ್ತು ಜ್ಞಾನಿ ಸಹದೇವನ ಶಕುನಿಯನ್ನು ಕೊಲ್ಲುವ ಭೀಷಣ ಪ್ರತಿಜ್ಞೆಗಳೇ ಎಂದು ಕುಮಾರವ್ಯಾಸ ಹೇಳಿರುವುದನ್ನು ಎಚ್‌ಎಸ್‌ವಿ ವ್ಯಾಖ್ಯಾನಿಸಿದ್ದಾರೆ. ಧರ್ಮದ ರಕ್ಷ ಣೆಗಾಗಿ ಯುದ್ಧಕ್ಕಿಳಿದವನು ಯುಧಿಷ್ಠಿರ. ಅವನಿಗೆ ಧರ್ಮವೇ ನಾಯಿಯಾಗಿ ಬಂದು ಮಾರ್ಗದರ್ಶನ ಮಾಡಿತು.
ಎಚ್‌ಎಸ್‌ವಿಯವರು ಕುಮಾರವ್ಯಾಸ ಭಾರತದಲ್ಲಿನ ವರ್ಣ ಸಂಘರ್ಷದ ಹಲವು ಮಜಲುಗಳನ್ನು ಗುರುತಿಸಿದ್ದಾರೆ. ನವ ಕ್ಷತ್ರಿಯರಾದ ಬ್ರಾಹ್ಮಣರು ಮತ್ತು ನವ ಕ್ಷತ್ರಿಯರಾದ ಶೂದ್ರರು ಕ್ಷತ್ರಿಯರೊಂದಿಗೆ ನಡೆಸಿದ ಸಂಘರ್ಷವು ಗದುಗಿನ ಭಾರತದಲ್ಲಿ ತೀವ್ರವಾಗಿ ಇದೆ ಎಂದು ವಿವರಿಸಿದ್ದಾರೆ. ಆದರೆ ಅವರೆಲ್ಲರಲ್ಲಿ ಸಾಮಾನ್ಯೀಕೃತ ಅಂಶವಾಗಿ ಕಾಣಿಸುವುದು ಭಾಗವತ ಧರ್ಮ. ‘‘ಕ್ಷತ್ರಿಯನಾದ ಭೀಷ್ಮ, ಬ್ರಾಹ್ಮಣನಾದ ದ್ರೋಣ, ಶೂದ್ರನಾದ ವಿದುರ ಎಲ್ಲರೂ ಭಾಗವತ ಶಿರೋಮಣಿಗಳೇ,’’ ಎನ್ನುವ ಮಾತಿನಲ್ಲಿ ಪಂಥದ ಸಾಮಾನ್ಯತೆಯನ್ನು ಮೀರಿ ಮಾನವ ಸ್ವಭಾವಗಳು ಸಂಘರ್ಷಕ್ಕಿಳಿಯುವುದನ್ನು ಕೃತಿಯಲ್ಲಿ ಕಾಣಿಸಿದ್ದಾರೆ.
ಕೃತಿಯು ಎರಡು ರೀತಿಯಲ್ಲಿ ಮಹತ್ವ ಪಡೆಯುತ್ತದೆ. ಮೊದಲನೆಯದು ಎಚ್‌ಎಸ್‌ವಿ ಅವರ ವಿವರಣೆಗಳು ಕುಮಾರವ್ಯಾಸನನ್ನು ಅರ್ಥ ಮಾಡಿಕೊಳ್ಳುವ ಒಂದು ಆಲೋಚನಾ ಕ್ರಮವನ್ನು ಬೆಳೆಯಿಸುತ್ತಾ ಹೋಗುತ್ತದೆ. ಎರಡನೆಯದು ಎಚ್‌ಎಸ್‌ವಿಯವರಿಗಿರುವ ವಿಸ್ತಾರವಾದ ಅಧ್ಯಯನದ ಹಿನ್ನೆಲೆಯಲ್ಲಿ ಈ ವಿವರಣೆಗಳು ಬಂದಿರುವುದು. ಎಚ್‌ಎಸ್‌ವಿ ಹಿಂದೆ ‘ಋುಗ್ವೇದ ಸ್ಫುರಣ’ವನ್ನು ಬರೆದಿದ್ದರು. ಅಂದರೆ ವೇದ, ಉಪನಿಷತ್ತುಗಳನ್ನೊಳಗೊಂಡ ಸನಾತನ ಸಂಸ್ಕೃತ ಸಾಹಿತ್ಯದ ಅಭ್ಯಾಸದ ಹಿನ್ನೆಲೆ ಅವರದು. ಹಿಂದೆ ಪಂಪನ ಸಾಹಿತ್ಯದ ಬಗ್ಗೆಯೂ ಬರೆದವರವರು. ಭಾಗವತ ಪಂಥದ ಒಳನೋಟಗಳಿರುವವರು. ಇವೆಲ್ಲವುಗಳಿಂದ ಬಂದ ಜ್ಞಾನಾನುಭವಗಳ ಮುಖಾಂತರ ಎಚ್‌ಎಸ್‌ವಿ ಕರ್ಣಾಟಕ ಭಾರತ ಕಥಾ ಮಂಜರಿಯನ್ನು ವಿವರಿಸಿದ್ದಾರೆ.
ಆದ್ದರಿಂದಲೇ, ‘‘ಸಾಲು ಸಾವಿರದ ದೀವಿಗೆಯ ಹರಿ/ದಾಳಿಗಳುಕದೆ ನೃಪರ ಮೋರೆಗ/ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಿ/ಹೇಳಲೇನದ ಬಹಳ ದುಗುಡದ/ ಪಾಳೆಯವೊ ನಿನ್ನಾತನೋಲಗ/ ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ’’ ಎಂಬುದನ್ನು ವಿವರಿಸುವಾಗ ಥಟ್ಟನೆ ಕಾಳಿದಾಸನ ರಘುವಂಶದ ಇಂದುಮತಿಯ ಸ್ವಯಂವರದಲ್ಲಿ ಇಂದುಮತಿ ವರಣಮಾಲೆಯನ್ನು ಹಿಡಿದು ರಾಜ ಸಭೆಯಲ್ಲಿ ನಡೆಯುವುದು ನೆನಪಿಗೆ ಬಂದು ಆ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ತುಲನಾತ್ಮಕವಾಗಿ ವಿವರಿಸುತ್ತಾರೆ. ಅಂತೆಯೇ ಕುಮಾರವ್ಯಾಸನಲ್ಲಿ ಧುರ್ಯೋಧನನಿಗೆ ತಿಳಿದೇ ಉಪ ಪಾಂಡವರ ಹತ್ಯೆ ನಡೆದುದಕ್ಕೆ ಅವನಿಗೆ ಪಶ್ಚತ್ತಾಪವಿಲ್ಲದಿರುವುದು ಮತ್ತು ರನ್ನನಲ್ಲಿ ದುರ್ಯೋಧನನಿಗೆ ತಿಳಿಯದೆ ನಡೆಯುವ ಉಪ ಪಾಂಡವರ ಹತ್ಯೆ ಮತ್ತು ಅದರಿಂದ ದುರ್ಯೋಧನನಿಗಾಗುವ ಪಶ್ಚಾತ್ತಾಪಗಳನ್ನು ತುಲನೆಗೊಳಪಡಿಸಿ ದುರ್ಯೋಧನನ ಸಹಜ ಸ್ವಭಾವವನ್ನು ನಿರೂಪಿಸುತ್ತಾರೆ. ಸಾಹಿತ್ಯ ಓದಿನ ರೂಢಿ ಇಲ್ಲದವರಿಗೆ, ಯುವ ಓದುಗರಿಗೆ ಈ ವಿಧಾನದಿಂದ ಭಾರತದ ಕಾವ್ಯ ಪರಂಪರೆಯ ಸಣ್ಣ ಪರಿಚಯವಾಗಿ ಕಾವ್ಯಾಭ್ಯಾಸಕ್ಕೆ ಪ್ರವೇಶ ದೊರೆಯುತ್ತದೆ. ಈ ಮೂಲಕ ಕುಮಾರವ್ಯಾಸ ಮಾತ್ರವಲ್ಲದೆ ಭಾರತೀಯ ಸಾಹಿತ್ಯವನ್ನು ಹೊಸ ತಲೆಮಾರಿಗೆ ಸಂಪರ್ಕ ಕಲ್ಪಿಸುವುದರಲ್ಲಿ ಎಚ್‌ಎಸ್‌ವಿ ಯಶಸ್ವಿಯಾಗುತ್ತಾರೆ.
ಈ ಉದ್ದೇಶವನ್ನು ಸಾಧಿಸಲು ಅವರ ಭಾಷೆ ಮತ್ತು ಆಧುನಿಕತೆಯ ಅನುಭವಗಳನ್ನು ಸ್ವೀಕರಿಸುವ ಅವರ ಮನೋಭಾವ ಸಹಾಯಕವಾಗಿದೆ. ಎಚ್‌ಎಸ್‌ವಿಯವರದು ಸರಳವಾದ ಭಾಷೆ. ‘‘ಸಂಜಯನು ವ್ಯಾಸರು ಕೊಟ್ಟ ದಿವ್ಯಚಕ್ಷುಗಳಿಂದ ಧೃತರಾಷ್ಟ್ರನಿಗೆ ವಿವರಿಸಿದ,’’ ಎಂದು ಅವರು ಹೇಳುವುದಿಲ್ಲ. ‘‘ಸಂಜಯ ದೂರದರ್ಶನದಲ್ಲಿ ನಾವು ಈಗ ನೋಡುವಂತೆ ಕುರುಕ್ಷೇತ್ರದಲ್ಲಿ ಸಂಭವಿಸುವುದನ್ನು…’’ ಎನ್ನುತ್ತಾರೆ. ದೂರದರ್ಶನ ಎನ್ನುವುದು ಆಧುನಿಕ ಅನುಭವವೂ ಹೌದು. ಕುರುಕ್ಷೇತ್ರದ ವಿವರಣೆಯ ಸಹಜ ಸ್ಥಿತಿಯೊಂದಿಗೆ ಸೇರುವ ಪದವೂ ಹೌದು.
ಕುಮಾರವ್ಯಾಸ ರಾಜಕಾರಣದ ಸೂಕ್ಷ ್ಮ ನಡೆಗಳನ್ನು ಎಷ್ಟು ಸಮರ್ಪಕವಾಗಿ ನಿರೂಪಿಸಿದ್ದ ಎಂಬುದನ್ನು ಎಚ್‌ಎಸ್‌ವಿ ಕರ್ಣನಿಗೆ ಸೇನಾಪತಿ ಪಟ್ಟವನ್ನು ಕಟ್ಟುವ ಪ್ರಸಂಗದಲ್ಲಿ ತೋರಿಸಿ ಕೊಟ್ಟಿದ್ದಾರೆ. ಆಧಾರ ಸ್ತಂಭ ಉರುಳಿ ಬಿದ್ದಾಗ ಉಂಟಾಗುವ ಕ್ಷೋಭೆಯನ್ನು ಕರ್ಣ ಮರಣಿಸಿದಾಗ ಹಸ್ತಿನಾವತಿಯ ಒಳಸೂರಿಗರು ದುರುಪಯೋಗಪಡಿಸಿಕೊಂಡದ್ದು ಮತ್ತು ಜನರು ಭಯಭೀತರಾದರು ಎಂಬ ವರ್ಣನೆಯಲ್ಲಿ ತೋರಿಸಿದ್ದಾರೆ. ಕುಮಾರವ್ಯಾಸ ಅರಸನ ಆಸ್ಥಾನಿಕನಲ್ಲ. ಆದರೂ ಅವನಿಗೆ ಈ ಒಳಸೂಕ್ಷ ್ಮಗಳು ತಿಳಿದಿದ್ದವು.
ಕುಮಾರವ್ಯಾಸನನ್ನು ಎಚ್‌ಎಸ್‌ವಿ, ವಿದುರ ಮತ್ತು ಪುರಂದರದಾಸರಲ್ಲಿ ಸಮನ್ವಯಿಸಿ ನೋಡುವುದು ಸೊಗಸಾಗಿದೆ. ಎಲ್ಲರೂ ಕ್ಷಾತ್ರ ಬಲದ ಅಪಾರ ಶಕ್ತಿಯನ್ನು ಬಲ್ಲವರು. ‘ದಿಕ್‌-ಕ್ಷ ತ್ರಿಯ ಬಲಂ’ ಎನ್ನುವವನು ಕುಮಾರವ್ಯಾಸ. ಆದರೆ ಅವನಿಗೆ ಕ್ಷ ತ್ರಿಯ ಬಲದ ಆಶ್ರಯವೂ ಇಲ್ಲ. ಹಂಗೂ ಇಲ್ಲ. ‘ದೈವ ಬಲದ ಮುಂದೆ ಕ್ಷ ತ್ರಿಯ ಬಲವು ಯಾತಕ್ಕೂ ಬಾರದು’ ಎನ್ನುವುದು ಅವನ ಧೋರಣೆ. ‘ರಾಯ ಮುನಿದರೆ ರಾಜ್ಯವನು ಬಿಡಬಹುದು’ ಎಂಬುದು ಪುರಂದರರ ನಿಲುವು. ಇಬ್ಬರೂ ಭಕ್ತರು. ದೈವವನ್ನು ನೆಚ್ಚಿಕೊಂಡವರು. ವಿದುರನೂ ಭಾಗವತೋತ್ತಮನೇ. ಆದರೆ ಅವನ ಬಳಿ ದೈವವನ್ನು ದಾಟಬಲ್ಲ ಜ್ಞಾನವಿದೆ. ದುರ್ಯೋಧನನನ್ನು ಖಂಡಿಸುವ ನೈತಿಕ ಛಾತಿ ಅವನಿಗಿದೆ. ಯಾವಾಗ ದುರ್ಯೋಧನನನ್ನು ಉಳಿಸಲೆಂದು ವಿದುರ ಇರಿಸಿಕೊಂಡ ಬಿಲ್ಲನ್ನು ಮುರಿದು ಬಿಸುಟು ಹೊರಡುವ ಸ್ಥಿತಿಯನ್ನು ದುರ್ಯೋಧನ ತಂದುಕೊಂಡನೊ ಅಲ್ಲಿಗೆ ಜ್ಞಾನದ ಬಲವನ್ನು ತಿರಸ್ಕರಿಸಿದ ಕ್ಷ ತ್ರಿಯ ಬಲವು ತನ್ನ ಸೋಲನ್ನೂ ನಿಶ್ಚಯಿಸಿಕೊಂಡಿತು.
ಜ್ಞಾನಕ್ಕೆ ತತ್ಸಮಾನವಾದ ಶಕ್ತಿ ಇರುವುದು ಭಕ್ತಿಗೆ. ಜ್ಞಾನ ಭಗವಂತನನ್ನೂ ಪ್ರಶ್ನಿಸಬಲ್ಲುದಾದರೆ, ಭಕ್ತಿ ತನ್ನ ನಿಷ್ಠೆಯಿಂದ ಭಗವಂತನನ್ನೂ ಮಣಿಸಬಲ್ಲುದು. ಜ್ಞಾನಮಾರ್ಗಿಯಾದ ಸನಾತನ ಧರ್ಮವನ್ನು ವಿದುರ ಪ್ರತಿನಿಧಿಸುತ್ತಾನೆ. ಭಕ್ತನಾಗಿಯೂ ಅವನು ಜ್ಞಾನಕ್ಕೆ ನಿಷ್ಠ. ಭಾಗವತ ಪಂಥದ ಭಕ್ತಿ ಮಾರ್ಗಕ್ಕೆ ಕೃಷ್ಣನೇ ಕೇಂದ್ರ ಎಂಬುದನ್ನು ಎಚ್‌ಎಸ್‌ವಿಯವರ ವಿವರಣೆಯಲ್ಲಿ ಕಾಣಬಹುದು. ಪಾಂಡವರು ಕೃಷ್ಣನನ್ನು ಅದೆಷ್ಟೇ ಆಕ್ಷೇಪಿಸಿದರೂ ಕೃಷ್ಣನ ಜ್ಞಾನದ ಬಲವನ್ನು ತಿರಸ್ಕರಿಸಲಿಲ್ಲ. ಕ್ಷ ತ್ರಿಯ ಬಲ ಗೆದ್ದಿತು. ಇದು ಲೋಕರೂಢಿಯ ಅರ್ಥ. ಈ ಲೋಕರೂಢಿಯ ಅರ್ಥದಲ್ಲಿ ಕುಮಾರವ್ಯಾಸ ಯುಧಿಷ್ಠಿರನು ಯುದ್ಧಾನಂತರ ದುರ್ಯೋಧನನ ಕೋಣೆಗೆ, ಭೀಮನು ದುಶ್ಯಾಸನನ ಕೋಣೆಗೆ, ಅರ್ಜುನನು ಕರ್ಣನ ಕೋಣೆಗೆ ಹೋಗುವುದು ಯಥಾಸ್ಥಿತಿವಾದವಲ್ಲ; ಯುಧಿಷ್ಠಿರನ ರಾಜ್ಯ ಧರ್ಮರಾಜ್ಯವಾಗಿತ್ತು ಎನ್ನುವುದೇ ಕುಮಾರವ್ಯಾಸನ ಆಶಯ ಎನ್ನುವುದನ್ನು ಎಚ್‌ಎಸ್‌ವಿ ಹೇಳಿದ್ದಾರೆ.
ಆದರೆ ಕುಮಾರವ್ಯಾಸ ಕುಮಾರ ವಾಲ್ಮೀಕಿಯಲ್ಲ. ಇಬ್ಬರೂ ಭಕ್ತ ಕವಿಗಳೇ. ಆದರೆ ಕುಮಾರ ವಾಲ್ಮೀಕಿ ಭಕ್ತನಾಗಿ ಬೆಳೆಯುತ್ತಾನೆ. ಕುಮಾರವ್ಯಾಸ ಕವಿಯಾಗಿ ಬೆಳೆಯುತ್ತಾನೆ. ಕವಿಯಲ್ಲಿ ಋುಷಿ ದೃಷ್ಟಿ ಇರುತ್ತದೆ. ಆ ದೃಷ್ಟಿಯಲ್ಲಿ ಕೃಷ್ಣನೂ ಗೆದ್ದವನಲ್ಲ. ‘ಜ್ಞಾನಿಯಾದ ಕೃಷ್ಣನನ್ನೂ ಮಾಯೆ ಮುಸುಕಿದ್ದರಿಂದ ಯುದ್ಧ ನಡೆಯಿತು’ ಎಂದು ಭಗವದ್ಗೀತೆಯ ವಿವರಣೆ ನೀಡುವಾಗ ಮಹಾತ್ಮಾ ಗಾಂಧಿ ಹೇಳುತ್ತಾರೆ. ಕೃಷ್ಣ ತೀರಾ ಅನಿವಾರ್ಯವಾದಾಗ ಜ್ಞಾನದ ಬದಲಿಗೆ ಅಂತಿಮವಾಗಿ ವೈಷ್ಣವ ಮಾಯೆಯನ್ನೆ ಪ್ರಯೋಗಿಸುತ್ತಿದ್ದುದನ್ನು ಎಚ್‌ಎಸ್‌ವಿಯವರೂ ಹೇಳಿದ್ದಾರೆ. ಕೃಷ್ಣನಿಗೆ ಯಾರೊಂದಿಗೂ ಜಿದ್ದಿಲ್ಲ. ಕೊಲ್ಲುವುದು ಅವನ ಆಸೆಯೂ ಅಲ್ಲ. ಶೂದ್ರ, ಬ್ರಾಹ್ಮಣ, ಕ್ಷ ತ್ರಿಯನೂ ಆಗಬಲ್ಲವನು ಕೃಷ್ಣ. ಅಂತಹ ಜ್ಞಾನಿಯನ್ನೂ ಮೋಹದ ಮಾಯೆ ಆವರಿಸಿದಾಗ ಅವನು ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗಬೇಕಾಗಿ ಬಂದದ್ದನ್ನು ಕೃತಿಯು ಎತ್ತಿ ತೋರಿಸಿದೆ. ಆದ್ದರಿಂದ ಆ ಟೀಕೆಗಳು ಕುಮಾರವ್ಯಾಸನದೂ ಹೌದು.
‘‘ಸಲಹಿದೊಡೆಯನ ಜೋಳವಾಳಿಗೆ ತಲೆಯ ಮಾರುವುದೊಂದು ಪುಣ್ಯದವೆಳಸು ಮರಣದ ವೇಳೆ ಕೃಷ್ಣನ ಕಾಂಬ ಸುಕೃತಫಲ ಇಳೆಯೊಳಿಂದೆನಗಲ್ಲದಾರಿಗೆ ಫಲಿಸುವುದು ನಾ ಧನ್ಯನೆನುತವೆ ಹಳಚದಸುರಾಂತಕನನೀಕ್ಷಿಸುತಿದ್ದನಾ ಕರ್ಣ’’ ಎನ್ನುವಲ್ಲಿ ‘ಪೇಳುವೆನು ಕೃಷ್ಣ ಕಥೆಯನು’ ಎಂದೇ ಪ್ರಾರಂಭಿಸುವ ಕುಮಾರವ್ಯಾಸ ತನ್ನ ಆರಾಧ್ಯ ದೈವವನ್ನು ಕುಬ್ಜಗೊಳಿಸಿ ಕರ್ಣನನ್ನು ಎತ್ತರಿಸುತ್ತಾನೆ. ಕರ್ಣನ ತಪ್ಪೇನು? ಏನೂ ಇಲ್ಲ. ತಪ್ಪು ಮಾಡದವನನ್ನು ದಂಡಿಸುವ ಅಧಿಕಾರ ದೈವಕ್ಕೂ ಇಲ್ಲ. ಕೊಲ್ಲುವುದಕ್ಕಾಗಿ ಮಾಡಿದ ಕುರುಕ್ಷೇತ್ರ ಯುದ್ಧದಲ್ಲಿ ಸ್ವತಃ ಧರ್ಮರಾಜನ ಮಗನಾದ ಯುಧಿಷ್ಠಿರನೂ ಸುಳ್ಳು ಹೇಳಬೇಕಾಯಿತು.
ಭಾರತದ ಮಣ್ಣಿನ ಕಣಕಣದ ಉಸಿರಾಗಿ ಬೆರೆತಿರುವುದು ರಾಮ ಕಥೆ ಮತ್ತು ಕೃಷ್ಣ ಕಥೆ. ಇವೆರಡು ಇಲ್ಲದೆ ಭಾರತದ ಪರಂಪರೆ ಇಲ್ಲ. ಈ ಮಹಾಯಾನದ ಕೊಂಡಿಯಾಗಿ ಸೇರಬಲ್ಲ ಆಧುನಿಕ ಭಾರತದ ಏಕೈಕ ವ್ಯಕ್ತಿ ಗಾಂಧೀಜಿ. ಈ ಕೃತಿಯಲ್ಲಿ ಎಚ್‌ಎಸ್‌ವಿಯವರು, ಕೃತಿಯ ಕೊನೆಯಲ್ಲಿ, ‘‘ಬಾಹ್ಯ ಪರಿವರ್ತನೆಯು ಆಂತರಂಗಿಕ ಪರಿವರ್ತನೆಗೂ ದಾರಿ ಮಾಡೀತೆಂದು ನಾವು ನಂಬದೆ ಹೋದರೆ ಸುಧಾರಣೆ ಮತ್ತು ಬದಲಾವಣೆಯ ಸಾಧ್ಯತೆಯನ್ನೇ, ಅದರ ಸಕಾರಾತ್ಮಕತೆಯನ್ನೆ ನಾವು ಸಂದೇಹಿಸಿದಂತಾಗುತ್ತದೆ. ಸತ್ಯ ಮತ್ತು ಧರ್ಮಾಚರಣೆ ಎಂಥವರನ್ನೂ ಬದಲಿಸಬಲ್ಲುದೆಂಬ ನಿಲುವೇ ಗಾಂಧಿಯ ತತ್ವವನ್ನು ರೂಪಿಸಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ,’’ ಎಂದು 1132 ಪುಟಗಳ ತಮ್ಮ ಗದ್ಯ ಕಾವ್ಯದ ಸುಮಾರು ಐದು ಸಾವಿರ ವರ್ಷಗಳ ಪರಂಪರೆಯ ಯಾನವನ್ನು ವರ್ತಮಾನದಲ್ಲಿ ಗಾಂಧೀಜಿಯೊಂದಿಗೆ ಸಂಪರ್ಕಿಸುತ್ತಾರ್ತೆರೆ. ಆ ಪರಂಪರೆ ಮುಂದುವರಿಯಲು ಸಾಧ್ಯವಿರುವುದು ಗಾಂಧೀಜಿಯ ತತ್ವಗಳೊಂದಿಗೇನೆ. ಆದರೆ ‘ನಮೋ ಅರ್ಭಕೇಭ್ಯಃ’ ಎಂದು ವೇದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದರೂ, ಮಾಂಡವ್ಯ ಮತ್ತು ಯಮನ ನಡುವಿನ ಸಂಸ್ಕೃತಿ ಮತ್ತು ನಾಗರಿಕತೆಗಳ ನಡುವಿನ ಸಂಘರ್ಷವು, ಗಾಂಧಿ ಎಂಬ ಸಂಸ್ಕೃತಿಯೊಂದಿಗೆ ಯಂತ್ರ ನಾಗರಿಕತೆಯು ನಡೆಸುವ ಸಂಘರ್ಷದೊಂದಿಗೆ ಈ ಯಾನ ಮುಂದುವರಿಯುತ್ತದೆ. ಕಾಳಿದಾಸನ ನಾಟಕವನ್ನು ನೋಡಿದಾಗ ಉಂಟಾಗುವ ಅನುಭವವನ್ನು ಕೊಡುವುದು ಈ ಕೃತಿಯ ಸಾಮರ್ಥ್ಯ‌.

(ಲೇಖಕರು ಶಿಕ್ಷಣತಜ್ಞ, ಶಿಕ್ಷಕ, ವಿಮರ್ಶಕ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top