ಕಾಂಗ್ರೆಸ್‌ಗೊಂದು ಕರ್ನಾಟಕ ಮಾದರಿ

ಡಿಕೆಶಿ ಪಟ್ಟಾಭಿಷೇಕದ ಹುರುಪು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ಪುನಶ್ಚೇತನದ ಮಿಂಚು.

– ಶಶಿಧರ ಹೆಗಡೆ.

‘ಕೃಷ್ಣ ಸಾರಥ್ಯ’ದೊಂದಿಗೆ 1999ರ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ವರಿಷ್ಠ ಮಂಡಳಿಯಲ್ಲಿ ಸಹಮತ ಮೂಡಿತ್ತು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರೂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್‌.ಎಂ.ಕೃಷ್ಣ) ಅವರಿಗೊಂದು ಅವಕಾಶ ನೀಡಲು ಒಲವು ತೋರಿದ್ದರು. ಆದರೆ, ಕೃಷ್ಣ ಹೆಸರು ಪ್ರಕಟವಾಗುವ ಹಂತದಲ್ಲಿ ಯಾರೋ ಪಿನ್‌ ಇಟ್ಟಿದ್ದರು. ಅಖಾಡದ ರಾಜಕಾರಣ ಕೃಷ್ಣ ಅವರಿಗೆ ಒಗ್ಗಿ ಬರುವುದಿಲ್ಲ. ಅವರದ್ದು ಹೈಫೈ ಶೈಲಿ. ಸದಾ ಟೆನ್ನಿಸ್‌ ಆಡುತ್ತ ಕಾಲ ಕಳೆಯುತ್ತಾರೆ. ಅಂಥವರನ್ನು ಪಕ್ಷ ದ ಅಧ್ಯಕ್ಷರನ್ನಾಗಿ ಮಾಡಿದರೆ ಕರ್ನಾಟಕ ಕಾಂಗ್ರೆಸ್‌ನ ಕಥೆ ಮುಗಿದಂತೆಯೇ ಎಂದು ಚಾಡಿ ಹೇಳಿದ್ದರು. ಹಾಗಾಗಿ ಸೋನಿಯಾ ಅವರೂ ಯೋಚನೆಯಲ್ಲಿದ್ದರು. ಆಗ ಕೃಷ್ಣ ಅವರೇ ಸೋನಿಯಾರನ್ನು ಭೇಟಿಯಾಗಿ ತಮ್ಮಲ್ಲಿ ವಿಶ್ವಾಸವಿರಿಸುವಂತೆ ಮನವಿ ಮಾಡಿಕೊಂಡಿದ್ದರಂತೆ. ಸೋನಿಯಾ ತಥಾಸ್ತು ಎಂದಿದ್ದರು. ಕೃಷ್ಣ ಪ್ರದೇಶ ಕಾಂಗ್ರೆಸ್‌ನ ಸಾರಥ್ಯ ವಹಿಸಿಕೊಂಡಿದ್ದರು. ಬಳಿಕ ಕೃಷ್ಣ ನೇತೃತ್ವದಲ್ಲಿ ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ನಡೆದದ್ದು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಬಹುಮತ ಬಂದದ್ದು ಇತಿಹಾಸ. ಅಂದು ಕೃಷ್ಣ ಸಂಪುಟದಲ್ಲಿ ಪ್ರಭಾವಿ ಖಾತೆಗಳನ್ನು ನಿರ್ವಹಿಸಿದ್ದ ದೊಡ್ಡಾಲದಹಳ್ಳಿ ಕೆಂಪೇಗೌಡ ಶಿವಕುಮಾರ (ಡಿ.ಕೆ.ಶಿವಕುಮಾರ) ಪ್ರಸ್ತುತ ಕೆಪಿಸಿಸಿಯ ಸಾರಥಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಚರಿತ್ರೆಯಲ್ಲಿ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ನಡೆದ ಡಿ.ಕೆ.ಶಿವಕುಮಾರ ಪದಗ್ರಹಣ ದೇಶದ ಗಮನ ಸೆಳೆದಿದೆ. ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿರುವ ಈ ಸಮಾರಂಭ ಜಡಭರತ ಸ್ಥಿತಿಯಲ್ಲಿದ್ದ ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ಸಾಹ ಚಿಮ್ಮಿಸಿದೆ. ಶಿವಕುಮಾರ ಕೂಡ ಕೃಷ್ಣರಂತೆಯೇ ಒಕ್ಕಲಿಗ ಸಮುದಾಯದವರು. ಜತೆಗೆ ರಾಜಕೀಯ ವಲಯದಲ್ಲಿ ಛಾಪು ಮೂಡಿಸಿದವರಾಗಿದ್ದಾರೆ. ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಶಿವಕುಮಾರ ಅವರೇ ಹೇಳಿಕೊಂಡಂತೆ ವ್ಯಕ್ತಿ ಪೂಜೆಗಿಂತ ಪಕ್ಷದ ಪೂಜೆಯಲ್ಲಿ ಕಾಂಗ್ರೆಸ್‌ನ ಹಿತ ಅಡಗಿದೆ. ಈ ನಡುವೆಯೂ ಶಿವಕುಮಾರ ಕೇಂದ್ರಿತವಾಗಿ ರಾಜ್ಯ ಕಾಂಗ್ರೆಸ್‌ ರಾಜಕಾರಣ ಮುನ್ನೆಲೆಗೆ ಬರುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ.
ಸಂದರ್ಭ ಬೇರೆ
ಎಸ್‌.ಎಂ.ಕೃಷ್ಣ ಹಾಗೂ ಡಿ.ಕೆ.ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭವನ್ನು ಭಿನ್ನ ಭಿನ್ನವಾಗಿಯೇ ನೋಡಬೇಕು. 1999ರಲ್ಲಿ ಕೃಷ್ಣ ಮುಂದಿದ್ದ ಸವಾಲುಗಳೇ ಬೇರೆ. ಕಳೆದೆರಡು ದಶಕದಲ್ಲಿ ರಾಜಕೀಯ ಅಖಾಡದ ಚಿತ್ರಣವೂ ಬದಲಾಗಿದೆ. ವಿಚ್ಛೇದನದ ಬಳಿಕ ಪುನರ್‌ ವಿವಾಹ ಮಾಡಿಕೊಂಡಿದ್ದ ಜನತಾ ಪರಿವಾರದ ನಾಯಕರು 1994ರಲ್ಲಿ ಒಂದೇ ವೇದಿಕೆಗೆ ಬಂದಿದ್ದರು. ಹಾಗಾಗಿ ಅಂದಿನ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಜನತಾ ದಳ 115 ಸ್ಥಾನ ಗಳಿಸಿತು. ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾದರೆ ಜೆ.ಎಚ್‌.ಪಟೇಲರು ಉಪ ಮುಖ್ಯಮಂತ್ರಿಯಾದರು. 1996ರ ಲೋಕಸಭೆ ಚುನಾವಣೆಯಲ್ಲಿ ಜನತಾ ದಳದಿಂದ 16 ಎಂಪಿಗಳು ಆಯ್ಕೆಯಾದರು. ಇದರಿಂದ ದೊರೆತ ಸದವಕಾಶವನ್ನು ಬರಸೆಳೆದು ಅಪ್ಪಿಕೊಂಡ ದೇವೇಗೌಡ ಪ್ರಧಾನಿ ಹುದ್ದೆಗೇರಿದರು. ಬೆನ್ನಿಗೇ ರಾಮಕೃಷ್ಣ ಹೆಗಡೆ ಅವರನ್ನು ಜನತಾ ದಳದಿಂದ ಹೊರಹಾಕಲಾಯಿತು. ಅಲ್ಲಿಗೆ ಜನತಾ ಪರಿವಾರದ ಮತ್ತೊಂದು ಸುತ್ತಿನ ವಿಭಜನೆಗೆ ನಾಂದಿಯಾಯಿತು. ದಳದ ಈ ಕಚ್ಚಾಟವನ್ನು ಜನರ ಮುಂದಿಟ್ಟ ಕೃಷ್ಣ ಚುನಾವಣೆಗೆ ರೆಡಿಯಾದರು. ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ 1999ರಲ್ಲಿ ಚುನಾವಣೆ ನಡೆಯುವಾಗ ಜೆಡಿಯು ಮತ್ತು ಬಿಜೆಪಿ ಮಧ್ಯೆ ಮೈತ್ರಿಯಾಗಿತ್ತು. ಮೇಲ್ನೋಟಕ್ಕೆ ಸೀಟು ಹೊಂದಾಣಿಕೆಯಿದ್ದರೂ ಜೆಡಿಯು ಹಾಗೂ ಬಿಜೆಪಿ ನಾಯಕರು ಆಂತರಂಗಿಕವಾಗಿ ಒಂದುಗೂಡಿರಲಿಲ್ಲ. ಇದರ ಫಲವೂ ಕೃಷ್ಣ ಅವರಿಗೆ ದಕ್ಕುವಂತಾಗಿತ್ತು. ಚುನಾವಣೆಯಲ್ಲಿ ಟ್ರ್ಯಾಕ್ಟರ್‌ ಗುರುತಿನ ದೇವೇಗೌಡರ ಜೆಡಿಎಸ್‌ ನೆಲಕಚ್ಚಿತ್ತು. ಎಂಪಿ ಚುನಾವಣೆಯಲ್ಲಿ ಸ್ವತಃ ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಎಚ್‌.ಡಿ.ರೇವಣ್ಣ ಪರಾಭವಗೊಂಡಿದ್ದರು. ಫಲಿತಾಂಶ ಬಂದಾಗ ಕನ್ನಡದ ಜನಪ್ರಿಯ ನಿಯತಕಾಲಿಕವೊಂದು ‘ಟ್ರ್ಯಾಕ್ಟರ್‌ ಮಗುಚಿ ಅಪ್ಪ ಮಕ್ಕಳು ಅಪ್ಪಚ್ಚಿ’ ಎಂಬ ಹೆಡ್‌ಲೈನ್‌ ಕೊಟ್ಟಿತ್ತು. ಕೃಷ್ಣ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುಳಿವರಿತ ಹಳೆ ಮೈಸೂರು ಭಾಗದ ಒಕ್ಕಲಿಗರು ಹಾಗೂ ಇತರ ಮತದಾರರು ಕಾಂಗ್ರೆಸ್‌ ಬೆನ್ನಿಗೆ ನಿಂತಿದ್ದರು. ದೇವೇಗೌಡರ ಪಕ್ಷ ದ ಅಪಮಾನಕರ ಸೋಲಿಗೆ ಈ ಅಂಶವೂ ಕಾರಣವಾಗಿತ್ತು.
ವಿಭಿನ್ನ ಸನ್ನಿವೇಶ
ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ನಿಯುಕ್ತರಾಗುವ ಹಂತದಲ್ಲೂ ‘ಚಾಡಿಕೋರರ ಸಂತಾನ’ ಜಾಗೃತವಾಗಿತ್ತು. ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಸರ್ವೇಸಾಮಾನ್ಯವಾದರೂ ಶಿವಕುಮಾರ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ನ ಘಟಾನುಘಟಿಗಳಲ್ಲೇ ವಿಭಿನ್ನ ಅಭಿಪ್ರಾಯವಿದೆ. ಕೃಷ್ಣ ಅವರ ಗರಡಿಯಲ್ಲಿ ಪಳಗಿದವರಾದರೂ ಅವರಂತೆ ನಾಜೂಕಿನ ಮನುಷ್ಯ ಅಲ್ಲ. ಎಲ್ಲರನ್ನೂ ಮೀರಿಸಿ ಮುನ್ನುಗ್ಗುವ ಸ್ವಭಾವದವರು, ನಾಯಕತ್ವಕ್ಕೆ ಸರಿಹೊಂದುವುದಿಲ್ಲ ಎನ್ನುವುದು ಶಿವಕುಮಾರ ಬಗೆಗೆ ಕೆಲವರ ಆಕ್ಷೇಪ. ಈ ಸಂಬಂಧವಾಗಿ ಹೈಕಮಾಂಡ್‌ಗೆ ತಿದಿಯೊತ್ತುವ ಪ್ರಯತ್ನವೂ ಸಾಂಗೋಪಾಂಗವಾಗಿ ನಡೆದಿತ್ತು. ಆದರೆ, ವರಿಷ್ಠರು ತಲೆಕೆಡಿಸಿಕೊಂಡಿಲ್ಲ. ವಿಶೇಷವಾಗಿ ಸೋನಿಯಾ ಗಾಂಧಿಯವರು ಶಿವಕುಮಾರ ಅವರಲ್ಲಿನ ಆಕ್ರಮಣಶೀಲ ವ್ಯಕ್ತಿತ್ವವನ್ನು ನೆಚ್ಚಿಕೊಂಡೇ ಈ ಹೊಣೆಗಾರಿಕೆ ವಹಿಸಿದಂತಿದೆ. ರಾಜ್ಯ ಕಾಂಗ್ರೆಸ್‌ನ ಹಳೆಯ ತಲೆಮಾರಿನ ನಾಯಕರು ವಾನಪ್ರಸ್ಥಕ್ಕೆ ಹೊರಡುವ ಪರಿಸ್ಥಿತಿಯಲ್ಲಿ ಇರುವಾಗ ಶಿವಕುಮಾರ ಅವರಲ್ಲಿ ಹೈಕಮಾಂಡ್‌ ಭರವಸೆ ತಾಳಿರುವುದು ಅಚ್ಚರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಲಿಷ್ಠ ನಾಯಕತ್ವದಲ್ಲಿ ಸರಕಾರ ಮುಂದೆ ಸಾಗುತ್ತಿದೆ. ಬಿಜೆಪಿಯಲ್ಲಿ ಸಣ್ಣಪುಟ್ಟ ಕೊಸರಾಟ ಇರಬಹುದು. ಆದರೆ, 1999ರ ಚುನಾವಣೆಗೆ ಮೊದಲು ಅಂದಿನ ಆಡಳಿತಾರೂಢ ಜನತಾದಳದಲ್ಲಿ ಇದ್ದಷ್ಟು ಕದನ ಕೋಲಾಹಲವಿಲ್ಲ. ಆಗಿನ ದಳಪತಿಗಳು ಭಸ್ಮಾಸುರನಂತೆ ತಮ್ಮ ತಲೆಯ ಮೇಲೇ ಕೈಯಿಟ್ಟುಕೊಂಡು ರಾಜಕೀಯವಾಗಿ ಪತನ ಕಂಡಿದ್ದರು. ಈಗಿನ ಬಿಜೆಪಿಯಲ್ಲಿ ಜನತಾದಳದಷ್ಟು ಸಂಘರ್ಷದ ನಿರೀಕ್ಷೆ ಇರಿಸಿಕೊಳ್ಳಲಾಗದು. ಹಾಗೊಂದು ವೇಳೆ ಅಂತಹ ವಿದ್ಯಮಾನ ನಡೆದರೂ ಅಂಕುಶ ಹಾಕಲು ಸಮರ್ಥ ಹೈಕಮಾಂಡ್‌ ಇದೆ. ಇದು ಕೃಷ್ಣ ಮತ್ತು ಡಿ.ಕೆ.ಶಿವಕುಮಾರ ಕೆಪಿಸಿಸಿ ನೇತೃತ್ವ ವಹಿಸಿಕೊಂಡ ಸಂದರ್ಭದ ವ್ಯತ್ಯಾಸ. ಈ ಸನ್ನಿವೇಶವನ್ನು ನಿಭಾಯಿಸುವುದೇ ಶಿವಕುಮಾರರ ನಿಜವಾದ ಚಾಲೆಂಜ್‌.
ಸಂಜೀವಿನಿ ದೊರೆತಂತಾಯ್ತು!
ಡಿ.ಕೆ.ಶಿವಕುಮಾರ ಅವರ ಪ್ರತಿಜ್ಞಾ ಸಮಾರಂಭವೇ ವಿಶಿಷ್ಟವಾಗಿ ದಾಖಲಾಗಿದೆ. ಪಾಂಚಜನ್ಯ ಎನ್ನುವುದು ಕೃಷ್ಣ ಪರಮಾತ್ಮನ ಶಂಖ. ಇದರ ಹಿನ್ನೆಲೆಯನ್ನು ಕ್ವಚಿತ್ತಾಗಿ ಹೇಳುವುದಿದ್ದರೆ ಪಂಚಜನ ಎನ್ನುವ ರಾಕ್ಷಸನ ಸಂಹಾರ ಮಾಡಿದ ಕೃಷ್ಣ ಆತನ ಅಸ್ಥಿಯಿಂದ ಪಾಂಚಜನ್ಯವನ್ನು ತಯಾರಿಸಿದ್ದ. ವೈರಿಗಳ ಎದೆ ಒಡೆಯುವಂತೆ ಭಯಂಕರ ಸದ್ದು ಮಾಡುವುದು ಪಾಂಚಜನ್ಯದ ವೈಶಿಷ್ಟ್ಯ. ಕೃಷ್ಣ ಪಕ್ಷದವರ ಪಾಲಿಗೆ ಮಾತ್ರ ಈ ಪಾಂಚಜನ್ಯದ ಶಬ್ದ ಕರ್ಣಾನಂದಕರವಾಗಿರುತ್ತಿತ್ತು. ಇದೇ ಆಶಯದಿಂದ ಎಸ್‌.ಎಂ.ಕೃಷ್ಣ ಕೆಪಿಸಿಸಿ ಸಾರಥ್ಯದಲ್ಲಿದ್ದಾಗ ಪಾಂಚಜನ್ಯ ಯಾತ್ರೆ ಕೈಗೊಂಡಿದ್ದಿರಬಹುದು. ಇದೀಗ ಡಿ.ಕೆ.ಶಿವಕುಮಾರ ಅವರು ಡಿಜಿಟಲ್‌ ಯುಗಕ್ಕೆ ತಕ್ಕಂತೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಟ್ಟಾಭಿಷಿಕ್ತರಾಗಿದ್ದಾರೆ. ಕೋವಿಡ್‌ ಇರುವುದರಿಂದ ಬೃಹತ್‌ ರ್ಯಾಲಿ  ಆಯೋಜಿಸುವಂತಿಲ್ಲ. ಹಾಗಾಗಿ ವರ್ಚುವಲ್‌ ರ್ಯಾಲಿ  ನಡೆಸಿ ಕಟ್ಟ ಕಡೆಯ ಕಾರ್ಯಕರ್ತನನ್ನೂ ತಲುಪಿದ್ದಾರೆ. ಡಿಕೆಶಿ ಹಿಡಿದ ಈ ‘ಡಿಜಿಟಲ್‌ ಅಸ್ತ್ರ’ದಿಂದ ಅವರು ಜನರಿಗೆ ರೀಚ್‌ ಆದರು ಎನ್ನುವುದಕ್ಕಿಂತ ಪಕ್ಷ ಒಮ್ಮೆ ಮೈಕೊಡವಿ ಎದ್ದಿತು ಎನ್ನುವುದು ಸರಿ. ದೋಸ್ತಿ ಸರಕಾರದ ಜಂಜಾಟ, ಲೋಕಸಭೆ ಚುನಾವಣೆಯ ಚಿಂತಾಜನಕ ಸೋಲಿನಿಂದ ಕಳಾಹೀನವಾಗಿದ್ದ ಕಾಂಗ್ರೆಸ್‌ಗೆ ಇದರಿಂದ ಸಂಜೀವಿನಿ ಸಿಕ್ಕಂತಾಗಿದೆ. ಮುಖ್ಯವಾಗಿ ಈ ಸಮಾರಂಭದ ದೆಸೆಯಿಂದ ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್‌ಗೆ ಒಂದು ಹದದ ವಜನ್‌ ಬಂದಂತಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷ ದ ನಸೀಬು ಬದಲಾಗಬಹುದು ಎಂಬ ವಿಶ್ವಾಸ ಮೂಡಲಾರಂಭಿಸಿದೆ. ನಾನಾ ರಾಜ್ಯ ಕಾಂಗ್ರೆಸ್‌ ಸಮಿತಿಯಲ್ಲಿ ಸಮರ್ಥ ನಾಯಕ ಮತ್ತು ಅಂಥವರ ಕ್ರಿಯಾಶೀಲ ತಂಡವಿದ್ದರೆ ಪಕ್ಷದ ಪುನರುತ್ಥಾನಕ್ಕೆ ಹೊಸ ಭಾಷ್ಯ ಬರೆಯಬಹುದು ಎಂದು ಹೈಕಮಾಂಡ್‌ ಮಂಥನ ಮಾಡುವುದಕ್ಕೂ ಇದು ಸಕಾಲವಾಗಿದೆ.
ಸ್ವೀಕಾರಾರ್ಹ ಕೆಪಿಸಿಸಿ ಮಾದರಿ 
ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ರಾಜ್ಯದಲ್ಲೂ ಯಾವತ್ತೂ ಕಾಂಗ್ರೆಸ್‌ನ ವೋಟ್‌ ಶೇರಿಂಗ್‌ ಕುಂಠಿತವಾಗಿಲ್ಲ. ನಾಯಕರ ನಡುವಿನ ಪ್ರತಿಷ್ಠೆಯಿಂದ ಕಾಲಕಾಲಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಮುಗ್ಗರಿಸಿದೆ. ಮತ್ತೆ ಎದ್ದು ನಿಂತಿದೆ ಕೂಡ. ಈ ದೃಷ್ಟಿಯಿಂದ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್‌ ಪುನಶ್ಚೇತನಗೊಳ್ಳುವುದರಲ್ಲಿ ಬೇರೆ ಆಯಾಮವೂ ಇದೆ. ಕೆಪಿಸಿಸಿಯ ಈ ಸಂಘಟನಾ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಇತರ ರಾಜ್ಯಗಳಿಗೆ ಹೈಕಮಾಂಡ್‌ ಆದೇಶಿಸುವ ಸಾಧ್ಯತೆಯಿದೆ. ‘ಲೀಡರ್‌ ಬೇಸ್‌ನಿಂದ ಕೇಡರ್‌ ಬೇಸ್‌ ಪಾರ್ಟಿಯಾಗಬೇಕು’ ಎನ್ನುವ ಕರ್ನಾಟಕ ಕಾಂಗ್ರೆಸ್‌ನ ಘೋಷಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಮೌಲ್ಯ ಸಿಗಲಿದೆ. ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ಗೆ ಬೇರು ಮಟ್ಟದ ಕಾರ್ಯಕರ್ತರಿದ್ದಾರೆ. ಅವರನ್ನು ಬಡಿದೆಬ್ಬಿಸಲು ಕರ್ನಾಟಕ ಮಾದರಿ ಸಹಾಯಕವಾಗಬಲ್ಲದು. ಸದ್ಯ ರಾಜಸ್ಥಾನ, ಪಂಜಾಬ್‌ನಂತಹ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಮಹಾರಾಷ್ಟ್ರದಲ್ಲಿ ಮೈತ್ರಿಕೂಟ ಸರಕಾರದ ಭಾಗವಾಗಿದೆ. ಮಧ್ಯ ಪ್ರದೇಶದ ಕಾಂಗ್ರೆಸ್‌ ಸರಕಾರವನ್ನು ಬಿಜೆಪಿ ಕೆಡವಿರಬಹುದು. ಆದರೆ, ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸುವಂತೆ ಕಾಂಗ್ರೆಸ್‌ ಜನಾದೇಶ ಪಡೆದಿದ್ದನ್ನು ಮರೆಯುವಂತಿಲ್ಲ. ಗುಜರಾತ್‌ನಲ್ಲೂ ಕಳೆದ ಚುನಾವಣೆಯಲ್ಲಿ ಭಾಜಪ ಏದುಸಿರು ಬಿಟ್ಟಿದ್ದನ್ನು ಹೇಗೆ ಮರೆಯಲು ಸಾಧ್ಯ? ಉತ್ತರ ಪ್ರದೇಶದಂತಹ ರಾಜ್ಯದಲ್ಲೂ ಪ್ರಿಯಾಂಕಾ ವಾದ್ರಾ ಅವರಂತಹ ಗಾಂಧಿ ಫ್ಯಾಮಿಲಿ ಸದಸ್ಯರು ಗಂಭೀರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಪಕ್ಷ ಕ್ಕೆ ಚೈತನ್ಯ ಬರಬಹುದು. ಅದಕ್ಕೆ ಕರ್ನಾಟಕ ಮಾದರಿಯ ಸ್ಪರ್ಶ ಖಂಡಿತವಾಗಿ ಬೇಕಾಗುತ್ತದೆ.
ಕಾಲಗರ್ಭದಲ್ಲಿ ಅಡಗಿರುವ ಫಲಾಫಲ
ಟೆಸ್ಟ್‌ ಮ್ಯಾಚ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ ಆಡುವುದು ಬ್ಯಾಟಿಂಗ್‌ ತಂಡಕ್ಕೆ ಕಠಿಣ ಸವಾಲು. ಯಾಕೆಂದರೆ ಸಹಕರಿಸುವ ಸ್ಥಿತಿಯಲ್ಲಿ ಪಿಚ್‌ ಇರುವುದಿಲ್ಲ. ಹಾಗಾಗಿ ಎದುರಾಳಿ ತಂಡದ ಬೌಲರ್‌ಗಳೇ ಮೇಲುಗೈ ಸಾಧಿಸುತ್ತಾರೆ. ಸದ್ಯಕ್ಕೆ ಕೊರೊನಾದಿಂದ ವಿಷಮ ಸ್ಥಿತಿ ಬಂದದ್ದರಿಂದ ರಾಜ್ಯದ ಬಿಜೆಪಿ ಸರಕಾರವೂ ಅಧಿಕಾರ ಅವಧಿಯ ಮೊದಲ ವರ್ಷದಲ್ಲೇ ಕ್ಲಿಷ್ಟ ಸವಾಲಿಗೆ ಮುಖ ಮಾಡಿದೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷ ಗಳಿಗೆ ಪುಟಿದೇಳಲು ಹೆಚ್ಚಿನ ಅವಕಾಶವಿರುತ್ತದೆ. ಪ್ರತಿಪಕ್ಷ ಕಾಂಗ್ರೆಸ್‌ಗೆ ಜನಪರ ಹೋರಾಟಕ್ಕಿಳಿಯಲು ದಂಡಿಯಾಗಿ ಸರಕುಗಳು ಎಡತಾಕುತ್ತಿವೆ. ಇಷ್ಟರ ಮೇಲೂ ಕಾಲಗರ್ಭದಲ್ಲಿ ಏನಡಗಿದೆಯೋ ತಿಳಿದವರಾರು?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top