ಅಖಿಲ ಭಾರತ ಸೇವೆಗೆ ಕನ್ನಡಿಗರು – ಕೆಪಿಎಸ್‌ಸಿಗೆ ಯುಪಿಎಸ್‌ಸಿ ಮಾದರಿ

ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್‌ಸಿ) ಐಎಎಸ್, ಐಪಿಎಸ್ ಮತ್ತು ಇತರ ಅಖಿಲ ಭಾರತ ಸೇವೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ನಡೆಸಿದ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ವಿಶೇಷವೆಂದರೆ ಕರ್ನಾಟಕದಿಂದ ಗಣನೀಯ ಪ್ರಮಾಣದ ಪ್ರತಿಭಾವಂತರು ಅಖಿಲ ಭಾರತ ಆಡಳಿತ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಸಣ್ಣ ಪುಟ್ಟ ಪಟ್ಟಣಗಳು, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಹೊಸ ಭರವಸೆ ಮೂಡಿಸಿದೆ. ಯುಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 927 ಅಭ್ಯರ್ಥಿಗಳ ಪೈಕಿ ಕರ್ನಾಟಕದ 40 ಪ್ರತಿಭಾನ್ವಿತರಿರುವುದು ವಿಶೇಷ. ಈ ಬೆಳವಣಿಗೆ ಸಾವಿರಾರು ಕನ್ನಡದ ಯುವಕ, ಯುವತಿಯರಲ್ಲಿ ಸ್ಫೂರ್ತಿ ತುಂಬಿರುವುದರಲ್ಲಿ ಅನುಮಾನವಿಲ್ಲ.
ಕೇಂದ್ರ ಲೋಕಸೇವಾ ಆಯೋಗ ಸಮಗ್ರ ಭಾರತವನ್ನು ಕಣ್ಣ ಮುಂದಿಟ್ಟುಕೊಂಡು ಅಖಿಲ ಭಾರತ ಸೇವೆಗಳಿಗೆ ನಿಯಮಿತವಾಗಿ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿ ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧನಾಗಿರಬೇಕಾಗುತ್ತದೆ. ಈ ಪರೀಕ್ಷೆ ಎದುರಿಸಲು ಭಾಷೆ, ಗಡಿ ಸೇರಿದಂತೆ ಯಾವುದೇ ತಾರತಮ್ಯ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಸಮರ್ಥರು ಮಾತ್ರ ಸೇವೆಗೆ ಆಯ್ಕೆಯಾಗುತ್ತದೆ ಎಂಬುದು ಹಲವು ವರ್ಷಗಳಿಂದ ನಿರೂಪಿತವಾಗುತ್ತ ಬಂದಿದೆ.
ಇಷ್ಟು ವರ್ಷಗಳ ಕಾಲ ಅಖಿಲ ಭಾರತ ಸೇವೆಯಲ್ಲಿ ಉತ್ತರ ಭಾರತದವರ ಪ್ರಾಬಲ್ಯವೇ ಹೆಚ್ಚು ಎಂಬ ಅಪವಾದದ ಮಾತಿತ್ತು. ಅದಕ್ಕೆ ಹಲವು ಕಾರಣಗಳಿವೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ಇರುವುದು ಒಂದು ಕಾರಣವಾದರೆ ದಿಲ್ಲಿ ಸೇರಿದಂತೆ ಉತ್ತರ ಭಾರತದ ವಿವಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇರುವ ಆದ್ಯತೆ, ವಿದ್ಯಾರ್ಥಿಗಳಲ್ಲಿರುವ ಅರಿವು ಅದಕ್ಕೆ ಮುಖ್ಯ ಕಾರಣ. ಪರಿಣಾಮ ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದದ ಅಧಿಕಾರಿಗಳೇ ಭಾರತದಾದ್ಯಂತ ಪ್ರಾಬಲ್ಯ ಹೊಂದಿದ್ದರು. ಬರಬರುತ್ತ ಚಿತ್ರಣ ಬದಲಾಗುತ್ತಿದೆ. ಇತ್ತೀಚಿನ ವರ್ಷಗಳ ಫಲಿತಾಂಶವನ್ನು ಅವಲೋಕಿಸಿದರೆ ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಅಭ್ಯರ್ಥಿಗಳು ಗಣನೀಯ ಪ್ರಮಾಣದಲ್ಲಿ ಆಯ್ಕೆಯಾಗುತ್ತಿರುವುದು ಕಾಣಿಸುತ್ತದೆ. ಅದಕ್ಕೆ ಕರ್ನಾಟಕವು ಸೇರಿ ದಕ್ಷಿಣ ಭಾರತದಲ್ಲಿ ಆಗುತ್ತಿರುವ ಜಾಗೃತಿ ಮತ್ತು ಹಿಂದಿಯೇತರ ಅಭ್ಯರ್ಥಿಗಳಿಗೂ ಅನುಕೂಲ ಆಗುವಂತೆ ಪರೀಕ್ಷಾ ವಿಧಾನದಲ್ಲಿ ಮಾಡಿರುವ ಕೆಲ ಮಾರ್ಪಾಡುಗಳೂ ಕಾರಣವಾಗಿವೆ. ಅದರ ಪರಿಣಾಮವನ್ನು ನಾವೀಗ ಫಲಿತಾಂಶದಲ್ಲಿ ಕಾಣುತ್ತಿದ್ದೇವೆ. ಕರ್ನಾಟಕದಿಂದ ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚಾಗುತ್ತಿದೆ. ಆದರೆ, ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾಗುತ್ತಿರುವ ಉತ್ತರ ಭಾರತದ ಅಭ್ಯರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಈಗ ನಮ್ಮವರು ಮಾಡುತ್ತಿರುವ ಸಾಧನೆ ನಗಣ್ಯ ಎನಿಸುತ್ತದೆ. ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾಗುವ ಕನ್ನಡಿಗರ ಸಂಖ್ಯೆ ಹೆಚ್ಚಬೇಕೆಂದರೆ ಕರ್ನಾಟಕದ ಸರಕಾರ, ಕರ್ನಾಟಕದ ವಿಶ್ವವಿದ್ಯಾಲಯಗಳು, ಖಾಸಗೀ ಶಿಕ್ಷಣ ಸಂಸ್ಥೆಗಳು ಆದ್ಯತೆಯ ಮೇಲೆ ಗಮನ ಕೊಡುವ ತುರ್ತು ಅಗತ್ಯವಿದೆ.
ಈ ವಿಷಯದಲ್ಲಿ ಸಾಂವಿಧಾನಿಕ ಸಂಸ್ಥೆಯಾದ ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್‌ಸಿ) ಕೂಡ ಹೊಣೆ ಅರಿತುಕೊಂಡು ಅಣಿಯಾಗುವ ಅವಶ್ಯಕತೆಯಿದೆ. ಮೊದಲನೆಯಾಗಿ ಕೇಂದ್ರ ಲೋಕಸೇವಾ ಆಯೋಗ ಮಾದರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ, ಆಯ್ಕೆ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ನಿಯಮಿತವಾಗಿ ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಭರವಸೆ ನೀಡಬೇಕು. ಆಗ ಅಖಿಲ ಭಾರತ ಸೇವೆ ಹಾಗೂ ರಾಜ್ಯ ಸೇವೆ ಎರಡಕ್ಕೂ ಅಭ್ಯರ್ಥಿಗಳು ಸಿದ್ಧತೆ ನಡೆಸಲು ಅನುಕೂಲವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾನ್ವಿತರು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಆಸಕ್ತಿ ತೋರಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಕರ್ನಾಟಕ ಸರಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡುವುದು ನಿರ್ಣಾಯಕವಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top