– ಯಾವ ಜಿಲ್ಲೆಯೂ ನಂ.1 ಅಲ್ಲ, ಕೊನೆ ಸ್ಥಾನಿಯೂ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ.
ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆಗಳ ಸಾಧನೆಗೆ ಗ್ರೇಡಿಂಗ್ ಮಾನದಂಡವನ್ನು ರೂಪಿಸಿದ್ದರೂ ಕೆಲವರು ತಮ್ಮದೇ ಜಿಲ್ಲೆ ಟಾಪರ್ ಎಂದು ಘೋಷಿಸಿಕೊಳ್ಳುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಕೆಲವರಿಗೆ ತಮ್ಮ ಜಿಲ್ಲೆಯ ಸ್ಥಾನಮಾನ ಕುಸಿದಿರುವ ಬಗ್ಗೆ ಬೇಸರವೂ ಆಗಿದೆ. ಆದರೆ, ಶಿಕ್ಷಣ ಇಲಾಖೆಯ ಪ್ರಕಾರ, ಈ ಬಾರಿ ಯಾವುದೇ ಜಿಲ್ಲೆ ಟಾಪ್ ಅಲ್ಲ, ಯಾವ ಜಿಲ್ಲೆಯನ್ನೂ ಕೊನೆಯ ಸ್ಥಾನಿ ಎಂದು ಗುರುತಿಸಲಾಗಿಲ್ಲ. 10 ಜಿಲ್ಲೆಗಳಲ್ಲಿ ಎ ಗ್ರೇಡ್ ಎಂದೂ, 20 ಜಿಲ್ಲೆಗಳನ್ನು ಬಿ ಗ್ರೇಡ್ ಎಂದೂ, ನಾಲ್ಕು ಜಿಲ್ಲೆಗಳನ್ನು ಸಿ ಗ್ರೇಡ್ ಎಂದೂ ವಿಭಾಗಿಸಲಾಗಿದೆ.
‘ಗ್ರೇಡ್ ‘ಎ’ ಪಡೆದ ಎಲ್ಲಾ ಜಿಲ್ಲೆಗಳು ಸಮಾನ. ಈ ಜಿಲ್ಲೆಗಳ ನಡುವೆ ಯಾವುದೇ ತಾರತಮ್ಯವಿಲ್ಲ. ಹಾಗೂ ‘ಬಿ’ ಗ್ರೇಡ್ ಪಡೆದಿರುವ ಎಲ್ಲಾ ಜಿಲ್ಲೆಗಳೂ ಸಮಾನವಾಗಿದ್ದು, ಮೇಲು, ಕೀಳೆಂಬುದಿಲ್ಲ. ವೈಜ್ಞಾನಿಕವಾಗಿ ಜಿಲ್ಲೆಗಳಿಗೆ ಗ್ರೇಡ್ ನೀಡಲಾಗಿದೆ,’’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಗೊಂದಲಕ್ಕೆ ಕಾರಣವಾದ ಕ್ರಮ ಸಂಖ್ಯೆ: ಈ ನಡುವೆ, ಮಂಡಳಿ ನೀಡಿರುವ ಗ್ರೇಡ್ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು 1ನೇ ಕ್ರಮಾಂಕದಲ್ಲಿ ಗುರುತಿಸಲಾಗಿದ್ದರಿಂದ ಅದುವೇ ನಂಬರ್ ಒನ್ ಎಂಬ ಸಂದೇಶ ರವಾನೆಯಾಯಿತು. ಇತರ ಜಿಲ್ಲೆಗಳನ್ನು ಅವುಗಳದೇ ಕ್ರಮ ಸಂಖ್ಯೆ ಆಧಾರದಲ್ಲಿ ಕಳೆದ ವರ್ಷದ ಸಾಧನೆಗೆ ತಾಳೆ ಹಾಕಲಾಯಿತು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ‘‘ಚಿಕ್ಕಬಳ್ಳಾಪುರ ಜಿಲ್ಲೆ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ನನ್ನ ವಿಶೇಷ ಅಭಿನಂದನೆಗಳು,’’ ಎಂದು ಟ್ವೀಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದರು.
ಗ್ರೇಡಿಂಗ್ ಯಾಕೆ?
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲಾವಾರು ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಸಲುವಾಗಿ ಈ ಬಾರಿಯಿಂದ ಜಿಲ್ಲೆಗಳಿಗೆ ಗ್ರೇಡಿಂಗ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ದ.ಕನ್ನಡ ಬಿ ಗ್ರೇಡ್ನಲ್ಲಿ
ಸಾಮಾನ್ಯವಾಗಿ ಟಾಪ್ 10ರಲ್ಲಿ ಬರುವ ದಕ್ಷಿಣ ಕನ್ನಡ ಹೊಸ ಮಾದರಿಯಲ್ಲಿ ಬಿ ಗ್ರೇಡ್ಗೆ ಇಳಿದಿದೆ. ಆದರೆ, ಕಳೆದ ವರ್ಷ ಟಾಪರ್ ಆಗಿದ್ದ ಹಾಸನ, ರಾಮನಗರ, ಬೆಂ.ಗ್ರಾಮಾಂತರ, ಉತ್ತರ ಕನ್ನಡ, ಉಡುಪಿ ಎ ಗ್ರೇಡ್ನಲ್ಲಿವೆ. ಯಾದಗಿರಿ ಕಳೆದ ಬಾರಿಯಂತೆ ಈ ಬಾರಿಯೂ ಸಿ ಗ್ರೇಡ್ನಲ್ಲಿದೆ.
ಗ್ರೇಡಿಂಗ್ ಹೇಗೆ?
ಈ ಹಿಂದೆ, ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪ್ರಮಾಣದ ಆಧಾರದ ಮೇಲೆ ಜಿಲ್ಲೆಗಳಿಗೆ ಗ್ರೇಡಿಂಗ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಗುಣಾತ್ಮಕ ಸಾಧನೆ ಆಧರಿಸಿ ಗ್ರೇಡಿಂಗ್ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ಉತ್ತೀರ್ಣತಾ ಪ್ರಮಾಣ (ಶೇಕಡಾವಾರು ಪ್ರಾಮುಖ್ಯತೆ ಶೇ.40), ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕ (ಶೇ.40) ಹಾಗೂ ಪ್ರಥಮ ದರ್ಜೆ ಮತ್ತು ಅತ್ಯುನ್ನತ ದರ್ಜೆ ಉತ್ತೀರ್ಣತಾ ಪ್ರಮಾಣ (ಶೇ.20) ಆಧರಿಸಿ ಜಿಲ್ಲೆಗಳಿಗೆ ಶ್ರೇಣಿ ನೀಡಲಾಗಿದೆ. ಶೇ. 75 ಮತ್ತು ಅದಕ್ಕಿಂತ ಹೆಚ್ಚಿನ ಸಾಧನೆ ಮಾಡುವ ಜಿಲ್ಲೆಗಳಿಗೆ ‘ಎ’ ಶ್ರೇಣಿ, ಶೇ.60ರಿಂದ 75ರಷ್ಟು ಸಾಧನೆ ಮಾಡುವ ಜಿಲ್ಲೆಗಳಿಗೆ ‘ಬಿ’ ಹಾಗೂ ಶೇ.60ಕ್ಕಿಂತ ಕಡಿಮೆ ಸಾಧನೆ ತೋರುವ ಜಿಲ್ಲೆಗಳಿಗೆ ‘ಸಿ’ ಶ್ರೇಣಿ ನೀಡಲಾಗಿದೆ.