ತವರಿಗೆ ಮರಳಿದ ಟೆಕ್ಕಿಗಳಿಗೆ ನೆಟ್‌ವರ್ಕ್ ಸಮಸ್ಯೆ.
ಗುರುದತ್ತ ಭಟ್ ಕಾರವಾರ.
ಐಟಿ ಉದ್ಯೋಗಿಗಳು ಬೃಹತ್ ನಗರಗಳ ಐಶಾರಾಮಿ ಕಚೇರಿಗಳಲ್ಲೇ ಕೆಲಸ ಮಾಡಬೇಕು ಎಂಬ ಅಲಿಖಿತ ನಿಯಮವನ್ನು ಕೊರೊನಾ ಮುರಿದು ಹಾಕಿದೆ. ವರ್ಕ್ ಫ್ರಂ ಹೋಮ್ ವ್ಯವಸ್ಥೆಯಡಿ ಹಳ್ಳಿ ಮನೆಯ ಕೊಟ್ಟಿಗೆಗಳೂ ಕೂಡ ಐಟಿ ಉದ್ಯೋಗಿಗಳಿಗೆ ಕಚೇರಿಯಾಗಿವೆ.
ಕೊರೊನಾ ಸೋಂಕು ವ್ಯಾಪಕವಾದ ಬಳಿಕ ಬೆಂಗಳೂರು, ಮುಂಬಯಿ, ಪೂನಾ ಸೇರಿದಂತೆ ಹಲವು ಬೃಹತ್ ನಗರಗಳಲ್ಲಿನ ಐಟಿ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಧಿಯಿಂದ ಕೆಲಸ ಮಾಡಲು ಅವಕಾಶ ನೀಡಿವೆ. ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡದ ಸಾವಿರಾರು ಉದ್ಯೋಗಿಗಳು ತಮ್ಮ ಊರಿಗೆ ಬಂದು ಇಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಇಂಟರ್‌ನೆಟ್ ವ್ಯವಸ್ಥೆ ಅಗತ್ಯವಿರುವುದರಿಂದ ಕೆಲವರು ಮನೆಯ ಶೆಡ್, ದನದ ಕೊಟ್ಟಿಗೆ ಹೀಗೆ ನೆಟ್‌ವರ್ಕ್ ಸಮರ್ಪಕವಾಗಿ ಸಿಗುವಲ್ಲೇ ಲ್ಯಾಪ್‌ಟಾಪ್ ಇಟ್ಟುಕೊಂಡು ಕಾಯಕ ನಡೆಸುತ್ತಿದ್ದಾರೆ.
ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಸಿಕ್ಕರೆ ಮತ್ತೆ ಬೃಹತ್ ನಗರದ ಜಂಜಾಟ ಇರಲ್ಲ ಎನ್ನುತ್ತಾರೆ ಸಾಫ್ಟ್‌ವೇರ್ ಇಂಜಿನಿಯರ್, ಯಲ್ಲಾಪುರ ತಾಲೂಕಿನ ಕೋಟೆಮನೆಯ ವಿವೇಕ ವೆಂಕಟ್ರಮಣ ಭಟ್.
ಹಳ್ಳಿಯಲ್ಲೇ ಉದ್ಯೋಗ
ಕೋಟೆಮನೆ ಕೇವಲ 14 ಮನೆಗಳಿರುವ ಪುಟ್ಟ ಊರು. ಪೂನಾ ಮತ್ತು ಬೆಂಗಳೂರಿನ ವಿವಿಧ ಸಾಪ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಈ ಗ್ರಾಮದ ಐದಕ್ಕೂ ಹೆಚ್ಚು ಎಂಜಿನಿಯರ್‌ಗಳು ಊರಿಗೆ ಮರಳಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.
ಈ ಸನ್ನಿವೇಶ ಉತ್ತರಕನ್ನಡದ ಬಹುತೇಕ ಹಳ್ಳಿಗಳಲ್ಲಿಕಂಡುಬರುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಹೆಚ್ಚಿರುವುದರಿಂದ ಇಲ್ಲಿಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದು ಕಷ್ಟ, ಈ ಹಿನ್ನೆಲೆಯಲ್ಲಿಪರಿಸರಕ್ಕೆ ಹಾನಿಕಾರಕವಲ್ಲದ ಐಟಿ ಉದ್ಯಮ ಸ್ಥಾಪನೆ ಬಗ್ಗೆ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವೃದ್ಧಾಶ್ರಮವಾಗುವುದು ತಪ್ಪುತ್ತದೆ
ಮಕ್ಕಳು ಇಂಜಿನಿಯರ್‌ಗಳಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ ಎಂಬ ಆರೋಪವಿದೆ. ಗ್ರಾಮೀಣ ಭಾಗದಲ್ಲೇ ಉದ್ಯೋಗ ಸೃಷ್ಟಿಯಾದರೆ ಈ ಗಂಭೀರ ಸಾಮಾಜಿಕ ಸಮಸ್ಯೆಗೂ ಪರಿಹಾರ ಸಿಗಲು ಸಾಧ್ಯವಿದೆ ಎನ್ನುತ್ತಾರೆ ಶಿರಸಿ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಪ್ರದೀಪ ನಾಯ್ಕ.
++++++++++++++++
ಮಾರ್ಚ್‌ನಿಂದ ಹಳ್ಳಿಯ ನನ್ನ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ಹಳ್ಳಿಯೇ ಹೆಚ್ಚು ನೆಮ್ಮದಿ ನೀಡುವುದರಿಂದ ಅವಕಾಶ ಸಿಕ್ಕರೆ ಮುಂದೆಯೂ ಇಲ್ಲಿಂದಲೇ ಕೆಲಸ ಮಾಡಲು ಸಿದ್ಧ.
– ವಿವೇಕ ಭಟ್ ಸಾಫ್ಟ್‌ವೇರ್ ಇಂಜಿನಿಯರ್